Site icon Vistara News

ಗೋ ಸಂಪತ್ತು : ದೇಶಿ ಗೋವಿನ ಸಗಣಿಯ ಮಹತ್ವ ನಿಮಗೆಷ್ಟು ಗೊತ್ತು?

desi cow dung

ದೇಸಿ ಗೋ ತಳಿ

ರಾಸಾಯನಿಕ ಗೊಬ್ಬರ ಮತ್ತು ಕೃತಕಗೊಬ್ಬರ ದೇಶಿ ಗೋವಿನ ಸಗಣಿ ಗೊಬ್ಬರದಷ್ಟು ಫಲಕಾರಿಯಲ್ಲ. ಏಕೆಂದರೆ ದೇಶಿ ಗೋವಿನ ಸಗಣಿ ಕೊಳೆತಾಗ ಅದರಲ್ಲಿ ʻಹ್ಯೂಮಸ್’ ಎಂಬ ಜೀವಾಣುಗಳು ಉತ್ಪತ್ತಿಯಾಗುತ್ತವೆ. ಇವು ಸಸ್ಯಗಳ ಬೆಳವಣಿಗೆಗೆ ಅತಿ ಅವಶ್ಯಕವಾದದ್ದು ಎಂಬುದಾಗಿ ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಸಗಣಿಯಲ್ಲಿ ʻಫೇಜಸ್’ ಎಂಬ ಜಂತುಗಳಿರುವುದು ಸಹ ಪತ್ತೆಯಾಗಿದೆ.

ಇವು ರೋಗಗಳನ್ನು ಪ್ರತಿರೋಧಿಸುವ ಶಕ್ತಿಯುಳ್ಳದ್ದಾಗಿರುವುದನ್ನು ಆಧುನಿಕ ವಿಜ್ಞಾನ ಒಪ್ಪಿದೆ. ಹಾಗೆಯೇ ಇದರಲ್ಲಿ ಬೆಳೆಗಳಿಗೆ ಪೋಷಕಾಂಶಗಳನ್ನು ಸರಬರಾಜು ಮಾಡಲು ನೆರವಾಗುವ ʻಪಿ.ಎಸ್.ಬಿ’, ʻಬ್ಯಾಸಿಲಿಸ್’, ʻದಿಯೋ ಆಕ್ಸಿಡೆಂಟ್ಸ್’ ಮತ್ತು ʻಮೈಕೋ ರೈಜಾ’ ಸೇರಿದಂತೆ ಇನ್ನಿತರ ಅಸಂಖ್ಯಾತ ಜೀವಾಣುಗಳಿರುವುದು ಪತ್ತೆಯಾಗಿದೆ. ಹೀಗೆ ಪತ್ತೆಯಾದ ಜೀವಾಣುಗಳಲ್ಲಿ ʻಪಿ.ಎಸ್.ಬಿ’ ಎಂಬ ಜೀವಾಣು ದೇಶಿ ಆಕಳ ಕರುಳಲ್ಲಿ ಹುಟ್ಟಿ ಸಗಣಿಯ ಮೂಲಕ ಹೊರಬರುತ್ತದೆ. ಒಂದು ಅಧ್ಯಯನದಂತೆ ಸುಮಾರು 10 ಕೆ.ಜಿ. ಸಗಣಿಯಲ್ಲಿ 30 ಲಕ್ಷದಷ್ಟು ʻಪಿ.ಎಸ್.ಬಿ’ ಜೀವಾಣುಗಳಿರುವುದು ಪತ್ತೆಯಾಗಿದೆ.

ಭಾರತೀಯ ಆಕಳ ಸಗಣಿಯಲ್ಲಿ `ಪೆನ್ಸಿಲಿನ್’ನಂತಹ ವೈರಾಣು ನಿರೋಧಕ ರಸಾಯನವೊಂದು ಇರುವುದನ್ನು ಜರ್ಮನಿಯ ವಿಜ್ಞಾನಿಗಳು ಹಲವು ವರ್ಷಗಳ ಹಿಂದೆ ತಮ್ಮ ಸಂಶೋಧನೆಯಿಂದ ಕಂಡು ಹಿಡಿದಿದ್ದಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ, ದಕ್ಷಿಣ ಅಮೆರಿಕ ಹಾಗೂ ಆಫ್ರಿಕಾ ಖಂಡದ ಕೆಲವು ದೇಶಗಳಲ್ಲಿರುವ ಭಾರತೀಯ ಗೋವುಗಳ ಸಗಣಿಯಲ್ಲಿ ಈ ಔಷಧೀಯ ಗುಣ ವಿಶೇಷವಿರುವುದನ್ನು ಗುರುತಿಸಿದ್ದಾರೆ. ಮತ್ತೊಂದೆಡೆ ಅಮೇರಿಕದ ಖ್ಯಾತ ವಿಜ್ಞಾನಿಯಾದ ಡಾ. ಮೆಕಫರ್ನಲ್ರವರು “ಸಗಣಿ ಗೊಬ್ಬರದಷ್ಟು ಕೀಟನಾಶಕ ದ್ರವ್ಯ ಬೇರೊಂದಿಲ್ಲ” ಎಂಬುದಾಗಿ ಹೇಳಿರುವುದು ಗೋಮಯದ ಗರಿಮೆಯನ್ನು ಮತ್ತಷ್ಟು ಹಿಗ್ಗಿಸಿದೆ.

ರಾಸಾಯನಿಕ ಗೊಬ್ಬರವನ್ನು ಒಮ್ಮೆ ಬಳಸಿದಲ್ಲಿ ಭೂಮಿಯ ಶಕ್ತಿ ಒಂದೇ ವರ್ಷದಲ್ಲಿ ಹಾಳಾಗುತ್ತದೆ. ಆದರೆ ಸಗಣಿಯ ಒಮ್ಮೆಯ ಬಳಕೆಯಿಂದ ಭೂಮಿಯ ಫಲವತ್ತತೆ ಹೆಚ್ಚುವುದಷ್ಟೇ ಅಲ್ಲದೆ ಅದರ ಸತ್ವವು ಸುಮಾರು ಹತ್ತು ವರ್ಷಗಳವರೆಗೆ ಭೂಮಿಯನ್ನು ಫಲವತ್ತಾಗಿರಿಸುತ್ತದೆ. ರಾಸಾಯನಿಕ ಗೊಬ್ಬರದಂತೆ ಪ್ರತಿ ಬೆಳೆಗೆ ಪುನಃ ಪುನಃ ಹಾಕುವಂತಿರುವುದಿಲ್ಲ. ಹಾಗೆಯೇ ಭೂಮಿಗೆ ಈ ಗೊಬ್ಬರವನ್ನು ಹಾಕುವುದರಿಂದ ಭೂಮಿಯ ನೀರು ಹೀರಿಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ ಮತ್ತು ತೇವಾಂಶ ದೀರ್ಘಕಾಲ ಉಳಿಯುತ್ತದೆಂದು ವಿಜ್ಞಾನಿಗಳು ಹೇಳಿದ್ದಾರೆ.

ಇಂತಹ ಭೂಮಿಗೆ ಕಡಿಮೆ ನೀರಿನ ಖರ್ಚು ಸಾಕಾಗುತ್ತದೆ. ಇದಕ್ಕೆ ಪುಷ್ಟಿ ನೀಡುವಂತೆ 1995-96ರಲ್ಲಿ “ಭಾರತೀಯ ಕೃಷಿ ಅನುಸಂಧಾನ ಪರಿಷತ್” ತನ್ನ ವರದಿಯೊಂದರಲ್ಲಿ, ʻದೇಶಿಯ ಗೊಬ್ಬರಗಳನ್ನು ವೈಜ್ಞಾನಿಕವಾಗಿ ಬಳಸಿದರೆ, ಮಳೆಯನ್ನು ಆಕರ್ಷಿಸುವುದಷ್ಟೇ ಅಲ್ಲದೆ ರಾಸಾಯನಿಕ ರಸಗೊಬ್ಬರಗಳ ತುಲನೆಯಲ್ಲಿ ಅತಿ ಕಡಿಮೆ ನೀರಿನ ಖರ್ಚನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದೆ.

ಒಂದು ಸಮೀಕ್ಷೆಯ ಪ್ರಕಾರ ಸಗಣಿ ಗೊಬ್ಬರದ ಬಳಕೆಯಿಂದಾಗಿ ಉತ್ಪಾದನೆ ಶೇಕಡಾ 178.5 ರಷ್ಟು ಹೆಚ್ಚಾಗಲಿದ್ದು. ಹುಲ್ಲಿನ ಉತ್ಪಾದನೆ ಶೇಕಡಾ 54.5 ರಷ್ಟು ಹೆಚ್ಚಾಗಲಿದೆ. ಹಾಗೆಯೇ ಸಗಣಿಯ ಪುಡಿಯನ್ನು ಬೀಜಗಳ ಜೊತೆಗೆ ಮಿಶ್ರಣ ಮಾಡುವುದರಿಂದ ಬೀಜಗಳ ಸಂರಕ್ಷಣೆ ಸಾಧ್ಯವಾಗುತ್ತದೆ. ಸಗಣಿಯನ್ನು ಸುಟ್ಟು ಉಳಿದ ಶೇಷದ ಭಸ್ಮವನ್ನು ತರಕಾರಿಗಳಿಗೆ ಮತ್ತು ಹೂವಿನ ಗಿಡಗಳಿಗೆ ಕೀಟನಿಯಂತ್ರಕ ಮತ್ತು ಗೊಬ್ಬರವಾಗಿ ಬಳಸುವುದು ನಮ್ಮ ಪಾರಂಪರಿಕ ಕೃಷಿಯ ಒಂದು ಭಾಗವಾಗಿದೆ.

ಇಂತಹ ಸಗಣಿ ಬೂದಿಯ ಇನ್ನೊಂದು ಚಮತ್ಕಾರಿ ಗುಣ ಕಂಡುಬರುವುದು ಆಹಾರ ಸಂರಕ್ಷಣೆಯ ವಿಷಯದಲ್ಲಿ. ಆಹಾರ ಧಾನ್ಯಗಳಾದ ಭತ್ತ, ರಾಗಿ, ಜೋಳ, ಇತ್ಯಾದಿಗಳ ಸಂರಕ್ಷಣೆಗೆಂದೇ ತಯಾರಿಸಲಾದ ವಿಶೇಷ ಸಂಗ್ರಾಹಕಗಳಲ್ಲಿ ಈ ಬೂದಿಯನ್ನು ಬೆರೆಸಿ ಎರಡರಿಂದ ಮೂರು ವರ್ಷಗಳ ಕಾಲ ಕೆಡದಂತೆ ಸುರಕ್ಷಿತವಾಗಿರಿ ಸಬಹುದು. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಧಾನ್ಯಗಳನ್ನು ಸುಮಾರು 12 ವರ್ಷಗಳ ಕಾಲ ಈ ರೀತಿಯಾಗಿಯೇ ಸುರಕ್ಷಿತವಾಗಿ ಇರಿಸುತ್ತಿದ್ದುದರ ಸಾಕಷ್ಟು ದಾಖಲೆಗಳು ನಮಗೆ ಕಂಡುಬರುತ್ತವೆ.

ಸಗಣಿ ಆಧಾರಿತ ʻಜೀವಾಮೃತ’ವು ಸಹ ಭೂಮಿಗೆ ಚೈತನ್ಯವನ್ನು ನೀಡುವುದಷ್ಟೇ ಅಲ್ಲದೆ ಅತ್ಯಂತ ಕಡಿಮೆ ವೆಚ್ಚದ ವಿಧಾನವೆಂಬುದು ಈಗಾಗಲೇ ಸಾಬೀತಾಗಿದೆ. ಇಂತಹ ಜೀವಾಮೃತದಲ್ಲಿ ಮುಖ್ಯವಾಗಿ ಬಳಸುವುದೇ ಸಗಣಿ, ಗೋಮೂತ್ರ, ಕಪ್ಪು ಬೆಲ್ಲ, ದ್ವಿದಳ ಧಾನ್ಯದ ಪುಡಿ, ನೀರು ಮತ್ತು ಆಯಾ ಜಮೀನಿನ ಒಂದು ಮುಷ್ಟಿ ಮಣ್ಣು. ಇವುಗಳಿಂದ ಸಿದ್ಧಪಡಿಸಿದ ಈ ಜೀವಾಮೃತದಲ್ಲಿ ಮಣ್ಣು ಮತ್ತು ಸಗಣಿಯಲ್ಲಿರುವ ಸೂಕ್ಷ್ಮಜೀವಿಗಳು ಪ್ರತಿ ಇಪ್ಪತ್ತು ನಿಮಿಷಕ್ಕೆ ದ್ವಿಗುಣಗೊಳುತ್ತಾ ಬೆಳೆಯುತ್ತವೆ. ಹೀಗಾಗಿ ಇದರಲ್ಲಿ ವಾರದೊಳಗೆ ಸೂಕ್ಷ್ಮಜೀವಿಗಳು ದೊಡ್ಡ ಪ್ರಮಾಣದಲ್ಲಿ ನಿರ್ಮಾಣವಾಗುತ್ತವೆ.

ಹೀಗೆ ಸೂಕ್ಷ್ಮಜೀವಿಗಳ ಆಗರವಾಗಿರುವ ಈ ಜೀವಾಮೃತವನ್ನು ಗೊಬ್ಬರವಾಗಿ ಬಳಸಿದಾಗ ಸೂಕ್ಷ್ಮಜೀವಿಗಳ ಸಾಗರವೇ ಭೂಮಿಯ ಆಳಕ್ಕಿಳಿದು ಭೂಮಿ ಫಲವತ್ತಾಗುತ್ತದೆ. ಈ ಕಾರಣಕ್ಕಾಗಿಯೇ ಇರಬೇಕು ಹಿಂದೊಮ್ಮೆ ಪ್ರಧಾನ ಮಂತ್ರಿಯಾಗಿದ್ದ ದಿವಂಗತ ಇಂದಿರಾಗಾಂಧಿಯವರು ಮರದ ಎಲೆಗಳು, ಗೋಮೂತ್ರ ಹಾಗೂ ಸಗಣಿಯಿಂದ ತಯಾರಿಸಿದ ಗೊಬ್ಬರವನ್ನು ಹೆಚ್ಚಾಗಿ ಉಪಯೋಗಿಸಲು ರೈತರಿಗೆ ಕರೆ ನೀಡಿದ್ದುದು.

ಕೊಂಬಿನ ಗೊಬ್ಬರದ ತಯಾರಿಕೆಯಲ್ಲೂ ಸಗಣಿ ತನ್ನ ಕರಾಮತ್ತನ್ನು ತೋರುತ್ತದೆ. ಸಹಜವಾಗಿ ಸತ್ತ ಗೋವಿನ ಕೊಂಬಿನ ಪೊಳ್ಳು ಭಾಗದಲ್ಲಿ ಹಾಲು ಕರೆಯುವ ಗೋವಿನ ತಾಜಾ ಸಗಣಿಯನ್ನು ತುಂಬಿ ತಗ್ಗುಮಾಡಿ ಹಲವಾರು ಕೊಂಬುಗಳನ್ನು ಜೊತೆ ಜೋಡಿಸಿ ಹುಗಿಯಲಾಗುತ್ತದೆ. ಹೀಗೆ ಹುಗಿದ ಅವುಗಳನ್ನು ಆರು ತಿಂಗಳುಗಳ ನಂತರ ಹೊರಕ್ಕೆ ತೆಗೆಯಲಾಗುತ್ತದೆ. ಆಗ ಅದರಲ್ಲಿ ತುಂಬಿದ್ದ ಸಗಣಿ ಕಂದು ಬಣ್ಣದ ಗೊಬ್ಬರವಾಗಿರುವುದು ಕಂಡುಬರುತ್ತದೆ. ಇಂತಹ ಅತ್ಯಮೂಲ್ಯ ಗೊಬ್ಬರವನ್ನು ಡಬ್ಬಗಳಲ್ಲಿ ಸಂಗ್ರಹಿಸಿಟ್ಟು ಬೇಕಾದಂತೆಲ್ಲಾ ನಿರ್ದಿಷ್ಟ ಅನುಪಾತದಲ್ಲಿ ಉಪಯೋಗಿಸಬಹುದಾಗಿದೆ.

ನ್ಯೂಜಿಲ್ಯಾಂಡ್‌ನಿಂದ ಭಾರತಕ್ಕೆ ಅಭ್ಯಾಸ ಮಾಡಲು ಬಂದ ವಿಜ್ಞಾನಿ ಪ್ರೊ. ಪೀಟರ್ ಪ್ರೊಕ್ಟರ್ ಸುಮಾರು 35 ಗ್ರಾಂ ಈ ಗೊಬ್ಬರವನ್ನು ನೀರಿನಲ್ಲಿ ಬೆರೆಸಿ ಒಂದು ಎಕರೆ ಭೂಮಿಗೆ ಸಿಂಪಡಣೆ ಮಾಡಬಹುದು. ಹೀಗೆ ಮಾಡುವುದರಿಂದ ಅಧಿಕ ಇಳುವರಿಯನ್ನು ಪಡೆಯಬಹುದಾಗಿದೆ ಎಂಬುದನ್ನು ತಮ್ಮ ಸಂಶೋಧನೆಯಿಂದ ದೃಢಪಡಿಸಿದ್ದಾರೆ.

ಇಂದು ಜಪಾನ್, ಜರ್ಮನಿ ಮುಂತಾದ ದೇಶಗಳಲ್ಲಿ ಸಗಣಿ ಗೊಬ್ಬರದಿಂದ ಬೆಳೆದ ಪದಾರ್ಥಗಳಿಗೆ ಜನ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಯೂರೋಪ್ ಮತ್ತು ಪಾಶ್ಚಾತ್ಯ ರಾಷ್ಟಗಳಲ್ಲಂತೂ ಸಗಣಿ ಗೊಬ್ಬರದಿಂದ ಬೆಳೆದ ಬೆಳೆಗಳಿಗೆ, ರಾಸಾಯನಿಕ ಗೊಬ್ಬರದಿಂದ ಬೆಳೆದ ಬೆಳೆಗಳಿಗಿಂತ ʻನಾಲ್ಕು’ ಪಟ್ಟು ಅಧಿಕ ಬೆಲೆ ಸಿಗುತ್ತಿದೆ. ಅಷ್ಟೇ ಅಲ್ಲದೆ ಅಲ್ಲಿನ ಸರ್ಕಾರಗಳು ಈ ರೀತಿಯ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸುವ ಮೂಲಕ ಅಲ್ಲಿಯ ಕೃಷಿಕರನ್ನು ಉತ್ತೇಜಿಸುವ ಕಾರ್ಯವನ್ನು ಮಾಡುತ್ತಿವೆ.

ಇತ್ತೀಚಿನ ಕೆಲ ವರ್ಷದ ಹಿಂದಿನವರೆಗೂ ಸತ್ತ ವ್ಯಕ್ತಿಗಳ ಅಗ್ನಿ ಸಂಸ್ಕಾರಕ್ಕೂ ಸಗಣಿಯ ಉಪ ಉತ್ಪನ್ನವಾದ ಬೆರಣಿಯನ್ನು ಉಪಯೋಗಿಸಲಾಗುತ್ತಿತ್ತು. ಆದರೆ ಇಂದು ನಿರಂತರ ಗೋಹತ್ಯೆಯಿಂದ ಗೋಮಯ ಸಿಗದೆ ಶವಸಂಸ್ಕಾರಕ್ಕೆಂದೇ ಬೆಲೆ ಕಟ್ಟಲಾಗದ ಸಾವಿರಾರು ಮರಗಳನ್ನು ಕಡಿಯಲಾಗುತ್ತಿದೆ. ಹಾಗೆಯೇ ಕೊಳೆತು ದುರ್ವಾಸನೆ ಬರುವ ಸ್ಥಳದಲ್ಲಿ ಗೋಮಯದ ರಾಡಿಯನ್ನು ಎರಚಿದಾಗ ಅಲ್ಲಿಯ ದುರ್ವಾಸನೆ ಶಮನವಾಗುವುದು ಸಾಬೀತಾಗಿದೆ. ನಂತರದ ದಿನಗಳಲ್ಲಿ ಅದೊಂದು ಉತ್ತಮ ಗೊಬ್ಬರವಾಗಿ ಪರಿವರ್ತಿತವಾಗುವುದು ಕಂಡುಬಂದಿದೆ.

ಇಂದು ನಮ್ಮ ದೇಶದಲ್ಲಿ 60 ಕೋಟಿ ಎಕರೆ ಭೂಮಿ ಕೃಷಿಗೆ ಯೋಗ್ಯವಾಗಿದೆ. ಇದಕ್ಕಾಗಿ 240 ಕೋಟಿ ಟನ್ ಸಗಣಿ ಗೊಬ್ಬರದ ಅವಶ್ಯಕತೆ ಇದೆ. ಹೀಗಿರುವಾಗ ದೇಶದಲ್ಲಿ ಉತ್ಪತ್ತಿಯಾಗುವ 90 ಕೋಟಿ ಟನ್ ಸಗಣಿಗೊಬ್ಬರದಲ್ಲಿ 50 ಕೋಟಿ ಟನ್ ಗೊಬ್ಬರ ಹೊರ ದೇಶಕ್ಕೆ ರಫ್ತಾಗುತ್ತಿದೆ. ಉಳಿದ 40 ಕೋಟಿ ಟನ್ ಗೊಬ್ಬರ ಮಾತ್ರ ಇಲ್ಲಿ ಲಭ್ಯವಿದೆ. ಇದರಲ್ಲಿ 12 ಕೋಟಿ ಟನ್ ಇಂಧನಕ್ಕಾಗಿ ಉಪಯೋಗಿಸಲಾಗುತ್ತಿದೆ.

ಮತ್ತೊಂದೆಡೆ ನಮ್ಮಲ್ಲಿ ಲಭ್ಯವಾಗುವ ಸಗಣಿಯ ಸುಮಾರು ಮೂರನೇ ಒಂದು ಭಾಗದಷ್ಟು ಸಹ ಸಂಗ್ರಹಿಸಲಾಗುತ್ತಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ನಮ್ಮ ದೇಶದಲ್ಲಿ ಸಗಣಿ ಗೊಬ್ಬರದ ಕೊರತೆ ಹೆಚ್ಚುತ್ತಿರುವುದಷ್ಟೇ ಅಲ್ಲದೆ ಅತ್ಯಧಿಕ ಆರ್ಥಿಕ ಹೊಡೆತವು ಬೀಳುತ್ತಿದೆ. ಈ ಕಾರಣದಿಂದಲೇ 1960-69 ರಲ್ಲಿ 13 ಕೋಟಿ ರೂಪಾಯಿಯಷ್ಟಿದ್ದ ರಸ ಗೊಬ್ಬರದ ಆಮದು 1992-93 ಸುಮಾರು 4,500 ಕೋಟಿ ರೂಪಾಯಿಯಷ್ಟಾಗಿ ಬೆಳೆದಿತ್ತು.

ಒಟ್ಟಿನಲ್ಲಿ ಸಗಣಿ ಒಂದು ʻಕೀಟನಾಶಕ’, ʻಆಂಟಿಸೆಪ್ಟಿಕ್’ ಮತ್ತು ʻಆಂಟಿ ಬಯೋಟಿಕ್’ ಪದಾರ್ಥವೆಂಬುದನ್ನು ಈಗಾಗಲೇ ಆಧುನಿಕ ಜಗತ್ತು ಒಪ್ಪಿದೆ. ಹಾಗೆಯೇ ಮನುಷ್ಯನಿಗೆ ಅವಶ್ಯಕವಾಗಿ ಬೇಕಾದ ಭೋಜನದ ಅವಶ್ಯ ತತ್ವವಾದ ವಿಟಮಿನ್ ಬಿ-12 ಸಗಣಿ ಗೊಬ್ಬರದಲ್ಲಿ ಅಧಿಕ ಪ್ರಮಾಣದಲ್ಲಿದೆ. ಈ ಕಾರಣದಿಂದಲೇ ಇರಬೇಕು ನಮ್ಮ ಪ್ರಾಚೀನ ಋಷಿ ಮುನಿಗಳು ವಿಟಮಿನ್ ಬಿ-12ನ್ನು ಯಥೇಚ್ಛವಾಗಿ ದೊರೆಯುತ್ತಿದ್ದ ಸಗಣಿ ಗೊಬ್ಬರದಿಂದ ಪಡೆದು ದೀರ್ಘಾಯುಷಿ ಮತ್ತು ಸ್ವಸ್ಥರಾಗಿದ್ದುದು.

ಇದನ್ನೂ ಓದಿ : ಗೋ ಸಂಪತ್ತು : ವೈಜ್ಞಾನಿಕವಾಗಿಯೂ ಸಾಬೀತಾಗಿದೆ ಗೋಮೂತ್ರದಲ್ಲಿನ ಔಷಧೀಯ ಗುಣ

Exit mobile version