ʻಹಿತ್ತಲ ಗಿಡ ಮದ್ದಲ್ಲ’ ಎಂಬ ಗಾದೆ ಭಾರತೀಯರಿಗೆ ಹೇಳಿ ಮಾಡಿಸಿದ್ದು. ಇಲ್ಲದಿದ್ದರೆ ನಾವುಗಳಿಂದು ಸರ್ವ ರೀತಿಯಲ್ಲೂ ಶ್ರೇಷ್ಠವಾದ ಇಲ್ಲಿಯ ದೇಶಿ ಗೋತಳಿಗಳನ್ನು ಬಿಟ್ಟು ವಿದೇಶಿ ತಳಿಗಳ ದಾಸರಾಗುತ್ತಿರಲಿಲ್ಲ. ಹೀಗಾಗಿಯೇ ಇಂದು ಭಾರತೀಯ ಗೋತಳಿಗಳು ಭಾರತಕ್ಕಿಂತ ವಿದೇಶಗಳಲ್ಲೇ ಅತಿ ಹೆಚ್ಚಾಗಿ ಕಂಡುಬರುವಂತಾಗಿದೆ. ಇಲ್ಲಿಯ ಬಹುತೇಕ ಶ್ರೇಷ್ಠ ತಳಿಗಳಿಂದು ವಿದೇಶಿಯರ ಪಾಲಾಗಿರುವುದಷ್ಟೇ ಅಲ್ಲದೆ ಹೈನೋದ್ಯಮ ಹಾಗೂ ಮಾಂಸೋದ್ಯಮಗಳೆರಡರಲ್ಲೂ ತಮ್ಮ ಪಾರುಪತ್ಯವನ್ನು ಸ್ಥಾಪಿಸಿ ಅಲ್ಲಿರುವ ಎಲ್ಲಾ ತಳಿಗಳನ್ನು ಮೂಲೆ ಗುಂಪಾಗಿಸಿವೆ.
ಒಂದಾನೊಂದು ಕಾಲದಲ್ಲಿ ಭಾರತ ಪ್ರಪಂಚದ ನಾನಾ ಭಾಗಗಳಿಗೆ ಗೋವುಗಳನ್ನು ಪೂರೈಸುವ ಪ್ರಮುಖ ಕೇಂದ್ರವಾಗಿತ್ತು. ಗೋವುಗಳಿಲ್ಲದ ಭರತ ಭೂಮಿಯ ಕಲ್ಪನೆಯೇ ಯಾರೊಬ್ಬರಿಗೂ ಇರಲಿಲ್ಲ. ಇಲ್ಲಿಂದಲೇ ಪ್ರಪಂಚದ ಮೂಲೆ ಮೂಲೆಗೂ ಶ್ರೇಷ್ಠ ತಳಿಗಳನ್ನು ಪೂರೈಸಲಾಗುತ್ತಿತ್ತು. ನಮ್ಮ ಪೂರ್ವಜರು ವಿದೇಶಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ಗೋವಿನ ವ್ಯಾಪಾರವನ್ನು ಮಾಡುತ್ತ ಲಕ್ಷಾಂತರ ರೂಪಾಯಿಯನ್ನು ಗಳಿಸುತ್ತಿದ್ದರು.
ಹೀಗಾಗಿಯೇ ಹಲವು ದಶಮಾನಗಳ ಹಿಂದೆಯೇ ಇಲ್ಲಿಯ ಗೋಸಂಪತ್ತು ಅಮೆರಿಕ, ಬರ್ಮಾ, ಆಸ್ಟ್ರೇಲಿಯಾ, ಕಾಂಬೋಡಿಯಾ, ಕೀನ್ಯಾ, ಥೈಲ್ಯಾಂಡ್ ಸೇರಿದಂತೆ ಬಹುತೇಕ ದೇಶಗಳಲ್ಲಿನ ಜನರ ಪ್ರೀತಿ ಪಾತ್ರವಾಗಿತ್ತು. ಕ್ರಿ.ಶ. 1860 ರಲ್ಲಿಯೇ ಈಜಿಪ್ತ್‌ನ ರಾಜನಾದ ಪಾಷಾ ಎಂಬುವವರು ಏಕಕಾಲಕ್ಕೆ ಭಾರತದಿಂದ ಸಾವಿರಾರು ರಾಸುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು ಎಂಬುದು ನಮಗೆ ಇತಿಹಾಸದಿಂದ ತಿಳಿದುಬರುತ್ತದೆ. ಹೀಗೆ ಆಮದು ಮಾಡಿಕೊಂಡ ತಳಿಗಳನ್ನು ಆರಂಭದಲ್ಲಿ ಅಲ್ಲಿಯ ಮಿಲಿಟರಿಗೆ ಬಳಸಿಕೊಳ್ಳಲಾಗುತ್ತಿತ್ತು. ಅನಂತರ ಅವುಗಳ ದುಡಿಯುವ ಸಾಮರ್ಥ್ಯವನ್ನರಿತು ಅವುಗಳನ್ನೇ ಬಳಸಿ ಇನ್ನಷ್ಟು ಹೊಸ ಹೊಸ ಶ್ರೇಷ್ಠ ತಳಿಗಳನ್ನು ಆವಿಷ್ಕರಿಸುವ ಉದ್ದೇಶದಿಂದ ಜಾನುವಾರು ತಳಿ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.
ಹೀಗೆ ಇಲ್ಲಿಂದ ಹೆಚ್ಚಿನ ಪ್ರಮಾಣದಲ್ಲಿ ಸಾಗಿಸಲ್ಪಟ್ಟ ಪ್ರಮುಖ ಗೋತಳಿಗಳಲ್ಲಿ ಓಂಗೋಲ್ ಸಹ ಒಂದು. ಹಲವು ದಶಮಾನಗಳ ಹಿಂದೆಯೇ ಈ ತಳಿಗಳನ್ನು ಇಲ್ಲಿಂದ ದೂರ ದೇಶಗಳಾದ ಬ್ರೆಜಿಲ್ ಮತ್ತು ಫಿಲಿಪೈನ್ಸ್ ದ್ವೀಪಗಳಿಗೆ ತಳಿ ಸಂವರ್ಧನೆಯ ಉದ್ದೇಶಕ್ಕಾಗಿ ಕಳುಹಿಸಲ್ಪಡಲಾಗಿತ್ತು. ಒಂದು ದಾಖಲೆಯ ಪ್ರಕಾರ ಹತ್ತೊಂಬತ್ತನೇ ಶತಮಾನದಲ್ಲಿಯೇ ಈ ತಳಿಯ ದನಗಳು ಅಮೆರಿಕ, ಬ್ರೆಜಿಲ್, ಫಿಜಿ, ಜಮೈಕಾ, ಆಸ್ಟ್ರೇಲಿಯಾ, ಮಲೇಷಿಯಾ, ಶ್ರೀಲಂಕಾ ಮುಂತಾದ ದೇಶಗಳಿಗೆ ಇಲ್ಲಿಂದ ರಫ್ತಾಗಿದ್ದುದು ತಿಳಿದುಬರುತ್ತದೆ. ಓಂಗೋಲ್ ತಳಿಯೊಂದಿಗೆ ಕಂಗಾಯಮ್ ತಳಿಗಳು ಸಹ ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಆನಂತರದ ಹತ್ತು ವರ್ಷಗಳಲ್ಲಿ ನಿರಂತರವಾಗಿ ಇಂಗ್ಲೆಂಡ್ ಸೇರಿದಂತೆ ಬಹುತೇಕ ಪಾಶ್ಚಿಮಾತ್ಯ ದೇಶದ ತಳಿ ಸಂವರ್ಧಕರು ಇಲ್ಲಿಂದ ಕೊಂಡೊಯ್ದ ಸಾಕಷ್ಟು ಉದಾಹರಣೆಗಳು ಕಂಡುಬರುತ್ತವೆ.
ಓಂಗೋಲ್ ತಳಿಗಳ ಸೃಷ್ಟಿ
ಇತ್ತೀಚೆಗೆ ಅಂದರೆ 1981ರಲ್ಲಿ ಬ್ರೆಜಿಲ್ ದೇಶದ ಕೆಲ ತಳಿ ಸಂವರ್ಧಕರು ಸುಮಾರು ಎರಡೂವರೆ ಲಕ್ಷ ರೂಪಾಯಿ ನೀಡಿ ಇಲ್ಲಿಂದ ಕೊಂಡು ಹೋದ ಓಂಗೋಲ್ ತಳಿಯ ಜೋಡಿಯೊಂದರಿಂದ ಸರಿ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ರಾಸುಗಳನ್ನು ಅಭಿವೃದ್ಧಿ ಪಡಿಸಿಕೊಂಡಿದ್ದನ್ನು ನಾವು ಕಳೆದೆರಡು ದಶಮಾನಗಳ ಹಿಂದೆಯೇ ನೋಡುವಂತಾಯಿತು. ಅಷ್ಟೇ ಅಲ್ಲದೆ ಅಲ್ಲಿಯ ತಳಿ ಸಂವರ್ಧಕರು ಈ ತಳಿಯನ್ನು ಅತಿ ಶ್ರೇಷ್ಠ ರೀತಿಯಲ್ಲಿ ಅಭಿವೃದ್ಧಿ ಪಡಿಸಿದ ಕಾರಣ ಅದು ನಂತರ ಪ್ರಪಂಚದ ಚಾಂಪಿಯನ್ ಪಟ್ಟವನ್ನು ಸಹ ಪಡೆಯುವಂತಾಯಿತು. ಇಂದು ಈ ತಳಿ ಬ್ರೆಜಿಲ್‌ನಲ್ಲಿ ಹೆಚ್ಚು ಹೆಸರುವಾಸಿಯಾದ ಮಾಂಸ ಮತ್ತು ಹೈನು ಉತ್ಪಾದನೆಯ ತಳಿ. ಅಲ್ಲಿರುವ ಒಟ್ಟು ಗೋ ಸಂಪತ್ತಿನಲ್ಲಿ ಶೇಕಡಾ 98ರಷ್ಟು ಪಾಲನ್ನು ಈ ಓಂಗೋಲ್ ತಳಿಗಳೇ ಆಕ್ರಮಿಸಿಕೊಂಡಿವೆ ಎಂದರೆ ಇದರ ಪ್ರಸಿದ್ಧತೆಯನ್ನು ಅಂದಾಜಿಸಬಹುದು.
ಇಂದಿಗೂ ಬ್ರೆಜಿಲ್‌ನಲ್ಲಿ ಓಂಗೋಲ್ ತಳಿಯ ಶ್ರೇಷ್ಠ ದನಗಳು ದೊಡ್ಡ ದೊಡ್ಡ ಹಿಂಡುಗಳಲ್ಲಿ ಕಾಣಸಿಗುತ್ತವೆ. ಹೀಗೆ ಹಿಂದೊಮ್ಮೆ ನಮ್ಮ ದೇಶದಿಂದ ಎರಡು ಗೂಳಿಗಳನ್ನು ಕೊಂಡು ಹೋದ ಬ್ರೆಜಿಲ್ ಇಂದು ಅದೇ ಓಂಗೋಲ್ ತಳಿಯ ವೃದ್ಧಿಯಲ್ಲಿ ನಾವು ಊಹೆ ಮಾಡದ ರೀತಿಯಲ್ಲಿ ನಮಗಿಂತಲೂ ಬಹು ಮುಂದಿದ್ದಾರೆ.
ಹಾಗೆಯೇ ವಿದೇಶಿಯರು ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಂಡ ಬಹು ಮುಖ್ಯ ತಳಿಗಳಲ್ಲಿ ಸಾಹಿವಾಲ್ ಹಾಗೂ ಗೀರ್ ತಳಿ ಪ್ರಮುಖವಾದುದು. ಇವೆರಡರೊಂದಿಗೆ ಇಲ್ಲಿಯ ಬಹುತೇಕ ಪ್ರಮುಖ ತಳಿಗಳನ್ನು ಆಸ್ಟ್ರೇಲಿಯಾದ ‘ಜೀಬು’ ತಳಿಗಳೊಂದಿಗೆ ಸಂಕರಣ ಮಾಡಿ ಹೊಸದಾದ ‘ಬ್ರಾಹ್ಮನ್’ ತಳಿಯನ್ನು ಸೃಷ್ಟಿಸಿ ಕೊಂಡಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಹೀಗೆ ಸೃಷ್ಠಿಯಾದ ಈ ಬ್ರಾಹ್ಮನ್ ತಳಿಗಳನ್ನು ಸ್ಥಳೀಯ ದನಗಳೊಂದಿಗೆ ಸಂಕರಣ ಮಾಡಿಸಿ ಉತ್ತಮ ರೋಗ ನಿರೋಧಕ ತಳಿಗಳನ್ನು ಆಯಾ ದೇಶಗಳು ರೂಪಿಸಿಕೊಂಡಿವೆ. ಉದಾಹರಣೆಗೆ, ಬ್ರಾಹ್ಮನ್ ದನವು ಅಮೆರಿಕದ ಆಂಗಸ್ ದನದೊಂದಿಗೆ ಸಂಕರಣಗೊಂಡು ಹೊಸದಾದ ಬ್ರಾಂಗಸ್ ತಳಿ ಸೃಷ್ಠಿಯಾಗಿದೆ ಎಂಬುದಾಗಿ ಒಂದು ಕಡೆ ಹೇಳಲಾಗುತ್ತಿದ್ದರೆ, ಮತ್ತೊಂದು ಕಡೆ ದಕ್ಷಿಣ ಅಮೆರಿಕದ ‘ಸ್ಯಾಂಟಾ ಜಟ್ರೋಂಡಿಸ್’ ಮತ್ತು ಆಸ್ಟ್ರೇಲಿಯಾದ ‘ಬ್ರಾಂಗಸ್’ ತಳಿಗಳನ್ನು ನಮ್ಮ ಭಾರತೀಯ ತಳಿಯಾದ ‘ಓಂಗೋಲ್’ ತಳಿಯನ್ನೇ ಉಪಯೋಗಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆ ಎಂಬುದಾಗಿಯೂ ಹೇಳಲಾಗುತ್ತಿದೆ.
ಹಾಗೆಯೇ ಬ್ರಾಹ್ಮನ್ ತಳಿಯನ್ನು ಜಮೈಕಾದ ಸ್ಥಳೀಯ ತಳಿಯೊಂದಿಗೆ ಸಂಕರಣಗೊಳಿಸಿ ಅದಕ್ಕೆ ಜಮೈಕಾ ಹೋಪ್ ಬ್ರೀಡ್ ಎಂಬ ಹೆಸರನ್ನಿಡಲಾಗಿದೆ. ಅಷ್ಟೇ ಅಲ್ಲದೆ ಬ್ರೆಜಿಲ್, ಚಿಕಾಗೊ, ಆಸ್ಟ್ರೇಲಿಯಾದಲ್ಲಿ ಭಾರತೀಯ ಗೋ ತಳಿಗಳನ್ನು, ಅದರಲ್ಲಿಯೂ ಬ್ರಾಹ್ಮನ್ ತಳಿಗಳನ್ನು ಅಲ್ಲಿಯ ದನಗಳೊಂದಿಗೆ ಸಂಕರಣ ಮಾಡಿಸಲಾಗುತ್ತಿದೆ. ಹೀಗೆ ಸಂಕರಣಗೊಂಡ ತಳಿಗಳಿಂದ ಹುಟ್ಟಿದ ತಳಿಗಳನ್ನು ಪ್ರತ್ಯೇಕವಾಗಿ ಸಂವರ್ಧನೆ ಮಾಡಲಾಗುತ್ತಿದೆ. ಇದಕ್ಕೆ ʻಬ್ರಾಹ್ಮನ್ ಬ್ರೀರ‍್ಸ್ ಅಸೋಸಿಯೇಷನ್ʼ ಎಂಬೆಲ್ಲಾ ಹೆಸರನ್ನಿಟ್ಟು ತಳಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕಾರ್ಯ ಅತ್ಯಂತ ವೇಗವಾಗಿ ನಡೆಯುತ್ತಿದೆ. ಇದರೊಂದಿಗೆ ಜಗತ್ತಿನ ಹಾಲು ಉತ್ಪಾದನೆಯಲ್ಲಿ ಮುಂದುವರೆದ ರಾಷ್ಟ್ರಗಳಾದ ಬ್ರೆಜಿಲ್, ಡೆನ್ಮಾರ್ಕ್, ಆಸ್ಟ್ರೇಲಿಯಾ, ಕೆನಡಾ ಮುಂತಾದ ದೇಶಗಳಲ್ಲಿ ಭಾರತೀಯ ಮೂಲದ ಗೋವುಗಳನ್ನು ಅಲ್ಲಿಯ ದನಗಳಿಗೆ ಸಂಕರಣ ಮಾಡಿಸುವ ಕೆಲಸಕ್ಕೆ ಅಲ್ಲಿರುವ ತಳಿ ಸಂವರ್ಧಕರು ಕೈ ಹಾಕಿದ್ದಾರೆ. ಹಾಗೆಯೇ ಬಹಳ ಹಿಂದಿನಿಂದಲೂ ಯೂರೋಪಿಯನ್ನರು ಬ್ರಾಹ್ಮನ್ ರಾಸುಗಳ ಉತ್ಪಾದನೆಗೆ ಮತ್ತು ಆಸ್ಟ್ರೇಲಿಯನ್ನರು ಆಸ್ಟ್ರೇಲಿಯನ್ ಜೀಬು ಉತ್ಪಾದನೆಗೆ ನಮ್ಮ ಭಾರತೀಯ ತಳಿಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಈ ಕಾರ್ಯ ಇಂದಿಗೂ ಶರವೇಗದಲ್ಲಿ ನಡೆಯುತ್ತಲೇ ಇದೆ.
ಕೃಷಿಗೆ ಸಂಬಂಧಿಸಿದ ಲೇಖನ, ವರದಿಗಳನ್ನು ಓದಲು ಇಲ್ಲಿ (Click Here) ಕ್ಲಿಕ್ ಮಾಡಿ.
ಗುಜರಾತ್‌ನ ʻಗೀರ್’ ತಳಿಯು ಅತ್ಯುತ್ತಮ ಹಾಲಿನ ತಳಿಯಾಗಿರುವುದಷ್ಟೇ ಅಲ್ಲದೆ ಉತ್ತಮ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ವಿದೇಶಗಳಿಗೆ ಹೆಚ್ಚಾಗಿ ರಫ್ತಾದ ತಳಿಯಾಗಿದೆ. ಅಮೆರಿಕ ಮತ್ತು ಬ್ರೆಜಿಲ್ ಈ ತಳಿಯನ್ನು ಅತಿ ಹೆಚ್ಚು ಆಮದು ಮಾಡಿಕೊಂಡಿರುವುದನ್ನು ಇತಿಹಾಸದ ಪುಟಗಳು ದೃಢಪಡಿಸುತ್ತವೆ. ಬ್ರೆಜಿಲ್ ಈ ತಳಿಯ ದನಗಳನ್ನು ನಮ್ಮ ದೇಶದ ಇನ್ನೊಂದು ತಳಿಯಾದ ʻಕಾಂಕ್ರೇಜ್ʼನೊಂದಿಗೆ ಸಂಕರಣಗೊಳಿಸಿ ʻಇಂಡೋ ಬ್ರೆಜಿಲ್’ ಎಂಬ ಹೊಸದೊಂದು ತಳಿಯನ್ನು ಸೃಷ್ಟಿಸಿಕೊಂಡಿದೆ. ಇನ್ನು ಆಸ್ಟ್ರೇಲಿಯಾದ ʻಬ್ರೌನ್ ಸ್ವಿಸ್ʼ ಮತ್ತು ಜಮೈಕಾದ ಮತ್ತೊಂದು ತಳಿಯಾದ ʻಮೌಂಟ್ ಹೋಪ್ʼ ಎನ್ನುವ ಹಾಲಿನ ತಳಿಗಳನ್ನು ನಮ್ಮ ದೇಶದ ʻಕೆಂಪು ಸಿಂಧಿʼ ಹಸುಗಳನ್ನು ಆಧರಿಸಿಯೇ ಅಭಿವೃದ್ಧಿಪಡಿಸಲಾಗಿದೆ.
ಅಮೆರಿಕ-ಬ್ರೆಜಿಲ್‌ಗೆ ಕೃಷ್ಣಾವ್ಯಾಲಿ ತಳಿ
ಮತ್ತೊಂದೆಡೆ ಅಮೆರಿಕ ಮತ್ತು ಬ್ರೆಜಿಲ್ ದೇಶಗಳಿಗೆ ಇಲ್ಲಿಯ ಕೃಷ್ಣಾವ್ಯಾಲಿ ತಳಿ ರಫ್ತಾಗಿದೆ. ಹಾಗೆಯೇ ಮತ್ತೊಂದು ಪ್ರಮುಖ ತಳಿಯಾದ ಕಾಂಕ್ರೇಜ್‌ನ್ನು ಇವೆರಡು ದೇಶಗಳು ಹೆಚ್ಚಿನ ಸಂಖ್ಯೆಯಲ್ಲಿ ಆಮದು ಮಾಡಿಕೊಂಡು ಸ್ಥಳೀಯ ದನಗಳೊಂದಿಗೆ ಇವುಗಳನ್ನು ಸಂಕರಣಗೊಳಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಿವೆ. ಖಿಲಾರಿ ಮತ್ತು ಕಂಗಾಯಮ್ ತಳಿಯನ್ನು ಶ್ರೀಲಂಕ ತನ್ನಲ್ಲಿನ ಜಾನುವಾರು ತಳಿಗಳ ಅಭಿವೃದ್ಧಿಗಾಗಿ ಆಮದು ಮಾಡಿಕೊಂಡಿದೆ. ಹಾಗೆಯೇ ಥಾರ್ ಪಾರ್ಕರ್ ಎಂಬ ತಳಿಯನ್ನು ಇರಾಕ್, ಶ್ರೀಲಂಕಾ, ಝೈರೆ ಹಾಗೂ ಫಿಲಿಪೈನ್ಸ್‌ನಂತಹ ರಾಷ್ಟ್ರಗಳು ಆಮದು ಮಾಡಿಕೊಂಡು ತಮ್ಮಲ್ಲಿನ ಹೈನೋದ್ಯಮವನ್ನು ಉತ್ತಮ ಪಡಿಸಿಕೊಂಡಿವೆ.
ಇಷ್ಟೇ ಅಲ್ಲದೆ ಇಲ್ಲಿಯ ಅತ್ಯಂತ ಪ್ರಮುಖ ತಳಿಗಳಾದ ಅಮೃತ್ ಮಹಲ್, ಪುಂಗನೂರು ಮತ್ತು ದೇವಣಿ ತಳಿಗಳ ದೈಹಿಕ ಸಾಮರ್ಥ್ಯ ಹಾಗೂ ಶ್ರಮ ಶಕ್ತಿಯನ್ನು ಗುರುತಿಸಿರುವ ವಿದೇಶಿಯರು ಇವುಗಳನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಇಲ್ಲಿಂದ ತೆಗೆದುಕೊಂಡು ಹೋಗಿದ್ದಾರೆ. ಇಲ್ಲಿಯ ತಳಿಗಳು ಎಂತಹ ಕೆಲಸಗಳನ್ನಾದರೂ ಸಹ ಮಾಡಬಲ್ಲವು ಮತ್ತು ಅತ್ಯಂತ ಪೌಷ್ಟಿಕವಾದ ಹಾಲನ್ನು ನೀಡಬಲ್ಲವು ಎಂಬುದನ್ನು ಅರಿತಿರುವ ಅಮೆರಿಕ, ಬ್ರೆಜಿಲ್, ಇಂಗ್ಲೆಂಡ್, ಈಜಿಪ್ಟ್ ಮುಂತಾದ ದೇಶಗಳು 1956ಕ್ಕಿಂತ ಮುಂಚೆಯೇ ಇವುಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಹಾಗೆಯೇ ಅಲ್ಲಿಯ ಜಾನುವಾರು ತಳಿ ಅಭಿವೃದ್ಧಿ ಪರಿಣಿತರು ಭಾರತೀಯ ತಳಿಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸುವುದರ ಮೂಲಕ ಹೈನೋದ್ಯಮ ಮತ್ತು ಮಾಂಸೋದ್ಯಮದಲ್ಲಿ ಅತ್ಯಂತ ಪ್ರಗತಿಯನ್ನು ಸಾಧಿಸಲು ನೆರವಾಗಿದ್ದಾರೆ. ಇಷ್ಟು ಸಾಕಲ್ಲವೇ ನಮ್ಮ ತಳಿಗಳ ಹೆಗ್ಗಳಿಕೆಯ ಬಗ್ಗೆ.
ಇದನ್ನೂ ಓದಿ : ಗೋ ಸಂಪತ್ತು: ಹುಚ್ಚು ರೋಗಕ್ಕೆ ರಾಮಬಾಣ ಹಳ್ಳಿಕಾರ್ ತಳಿಯ ಜೀನ್!