ಮಲೆನಾಡು ಗಿಡ್ಡ ತಳಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಈ ಕಾರಣಕ್ಕೆ ಇವುಗಳಿಗಾಗುವ ಸಣ್ಣ ಪುಟ್ಟ ಗಾಯಗಳಿಗೆ ಚಿಕಿತ್ಸೆ ಎಂಬುದೇ ಸಾಮಾನ್ಯವಾಗಿ ಇರುವುದಿಲ್ಲ. ಇವುಗಳು ಬೇಲಿಯನ್ನು ಹಾರುವಾಗ, ಕಾಡಿನಲ್ಲಿ ಮುಳ್ಳು ಗಿಡಗಳಿಂದ ಇಲ್ಲವೇ ಇನ್ಯಾವುದೋ ಕಾರಣಕ್ಕೆ ಮಾಡಿಕೊಳ್ಳುವ ಗಾಯಗಳು ಗಮನಕ್ಕೆ ಬರುವ ಮುನ್ನವೇ ವಾಸಿಯಾಗಿರುವುದು ಕಂಡುಬರುತ್ತದೆ.
ಹಾಗೆಯೇ ಇವುಗಳು ಕಾಡು ಗುಡ್ಡಗಳಲ್ಲಿ ಮೇಯುವಾಗ ಕೆಲವೊಂದು ವಿಷಕಾರಿ ಸಸ್ಯಗಳನ್ನು ಸಹ ಜೊತೆಯಲ್ಲಿ ತಿಂದಿರುತ್ತವೆ. ಇನ್ನು ಕೆಲವೊಮ್ಮೆ ವಿಷ ಸರ್ಪಗಳು ಸಹ ಇವುಗಳನ್ನು ಕಚ್ಚಿರುತ್ತವೆ. ಇಂತಹ ಸಂದರ್ಭಗಳಲ್ಲೂ ಸಹ ಇವುಗಳಲ್ಲಿ ಸಾವಿನ ಪ್ರಮಾಣ ಬಹಳ ಕಡಿಮೆ ಇರುತ್ತದೆ. ಒಂದರ್ಥದಲ್ಲಿ ಇಲ್ಲವೇ ಇಲ್ಲ ಎಂದೇ ಹೇಳಲಾಗಿದೆ. ಇದಕ್ಕೆ ಪ್ರಮುಖ ಕಾರಣ ಇವುಗಳಲ್ಲಿನ ಅತ್ಯದ್ಭುತ ರೋಗ ನಿರೋಧಕ ಶಕ್ತಿ.
ಇವುಗಳಿಗೆ ಸಾಮಾನ್ಯವಾಗಿ ಯಾವುದೇ ಕಾಯಿಲೆ ಬರುವುದಿಲ್ಲ. ಬಂದರೂ ಅದನ್ನು ಸಹಜವಾಗಿ ಗುಣಪಡಿಸಿಕೊಳ್ಳುವಂತಹ ವಿಶೇಷ ಶಕ್ತಿ ಇವುಗಳಿಗಿದೆ. ಇಷ್ಟಾದ ಮೇಲೂ ಕಾಣಿಸಿಕೊಳ್ಳುವ ಕೆಲವೊಂದು ಕಾಯಿಲೆಗಳಿಗೆ ಸ್ಥಳೀಯವಾಗಿಯೇ ದೊರೆಯುವ ಕೆಲ ಔಷಧಿ ಸಸ್ಯಗಳಿಂದ ಚಿಕಿತ್ಸೆಯನ್ನು ನೀಡಲಾಗುತ್ತದೆ. ಒಂದು ಸಮೀಕ್ಷೆಯ ಪ್ರಕಾರ ಸುಮಾರು 42 ಔಷಧೀಯ ಸಸ್ಯಗಳಿಂದ ಇವುಗಳಲ್ಲಿ ಕಾಣಿಸಿಕೊಳ್ಳುವ ಸಣ್ಣ ಪುಟ್ಟ ಕಾಯಿಲೆಗಳಿಂದ ಹಿಡಿದು ದೊಡ್ಡ ಕಾಯಿಲೆಗಳಿಗೂ ಚಿಕಿತ್ಸೆಯನ್ನು ಸ್ಥಳೀಯ ನಾಟಿ ಪಶು ವೈದ್ಯರೇ ಇಂದಿಗೂ ನೀಡುತ್ತಿದ್ದಾರೆ. ವಿಶೇಷವೆಂದರೆ ಇವರ‍್ಯಾರು ಔಷಧಿಯನ್ನು ಸಿದ್ಧಪಡಿಸಿಟ್ಟುಕೊಂಡಿರುವುದಿಲ್ಲ. ಬೇಕಾದಾಗ ಮಾತ್ರ ತಾಜಾ ಸಸ್ಯಗಳಿಂದಲೇ ಔಷಧಿಯನ್ನು ತಯಾರಿಸಿ ಇವುಗಳನ್ನು ಉಪಚರಿಸುವ ಪರಿಪಾಠ ಇವರಲ್ಲಿದೆ. ಕೆಲವೊಮ್ಮೆ ನಿರ್ದಿಷ್ಟ ಔಷಧಿಯ ಸಸ್ಯವು ನಿರ್ದಿಷ್ಟ ಕಾಯಿಲೆಗೆ ಮಾತ್ರ ಚಿಕಿತ್ಸೆಯಾದರೆ, ಕೆಲವೊಮ್ಮೆ ಹಲವು ಔಷಧಿ ಸಸ್ಯಗಳನ್ನು ಒಟ್ಟಿಗೆ ಸೇರಿಸಿ ಕೆಲವೊಂದು ಕಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ.
ನಾಟಿ ವೈದ್ಯ ಪದ್ಧತಿಗೆ ಆಧ್ಯತೆ
ಇಂದಿಗೂ ಮಲೆನಾಡಿನ ಬಹುತೇಕ ಭಾಗಗಳಲ್ಲಿ ಈ ತಳಿಗಳ ಚಿಕಿತ್ಸೆಗೆ ನಾಟಿ ವೈದ್ಯ ಪದ್ಧತಿಗೆ ಮೊದಲ ಸ್ಥಾನ. ಇದಕ್ಕೆ ಸಾಕಷ್ಟು ಕಾರಣಗಳಿದ್ದು, ಅದರಲ್ಲಿ ಪ್ರಮುಖವಾದುದು ಇವುಗಳನ್ನು ಪೋಷಿಸುವ ರೈತಾಪಿ ವರ್ಗಗಳು ಬಡವರು, ಇಲ್ಲವೇ ಮಧ್ಯಮ ವರ್ಗದವರಾಗಿರುವುದು ಒಂದಾದರೆ, ಮತ್ತೊಂದು ಪ್ರಮುಖ ಕಾರಣ ಸಮಯಕ್ಕೆ ಬೇಕಾದ ಪಶು ವೈದ್ಯರುಗಳ ಅಲಭ್ಯತೆ ಎಂದೇ ಹೇಳಲಾಗಿದೆ. ಈ ಭಾಗದಲ್ಲಷ್ಟೇ ಅಲ್ಲದೆ ಬಹುತೇಕ ಜಿಲ್ಲೆಗಳಲ್ಲಿ ಇಂದಿಗೂ ನುರಿತ ಪಶು ವೈದ್ಯರ ಕೊರತೆ ಬಹಳ ಹಿಂದಿನಿಂದಲೂ ಕಾಡುತ್ತಲೇ ಇದೆ. ಈ ಎಲ್ಲಾ ಕಾರಣಗಳಿಂದ ಇಲ್ಲಿಯ ಪಶುಪಾಲಕರಿಗೆ ಮೊದಲು ಕಾಣುವುದೇ ಸ್ಥಳೀಯ ನಾಟಿ ವೈದ್ಯರು ಮತ್ತು ಅವರ ಚಿಕಿತ್ಸಾ ಪದ್ಧತಿ.
ಮಲೆನಾಡು ಪ್ರದೇಶದಲ್ಲಿ ವರ್ಷಕ್ಕೆ ಏನಿಲ್ಲವೆಂದರೂ ಸರಾಸರಿ 1,000 ದಿಂದ 3,800 ಮಿಲಿ ಮೀಟರ್ ಮಳೆಯಾಗುವುದು ದಾಖಲಾಗಿದೆ. ಹೀಗಾಗಿ ಹಸಿ ಹುಲ್ಲಿಗೆ ಬೇರೆ ಜಿಲ್ಲೆಗಳಲ್ಲಿರುವಷ್ಟು ಸಮಸ್ಯೆ ಇಲ್ಲಿಲ್ಲ ಎಂದೇ ಹೇಳಲಾಗುತ್ತದೆ. ಈ ತಳಿಗಳು ಕೆಲವೊಂದು ಜಾತಿಯ ಹಸಿರನ್ನು ಹೊರತುಪಡಿಸಿ ಉಳಿದೆಲ್ಲಾ ಜಾತಿಯ ಹಸಿರನ್ನು ತಿನ್ನುತ್ತವೆ. ಒಂದು ಸಮೀಕ್ಷೆಯ ಪ್ರಕಾರ ಈ ತಳಿಗಳು ಈ ಭಾಗದಲ್ಲಿ ಸಾಮಾನ್ಯವಾಗಿ ಸಿಗುವ ಸುಮಾರು ಆರು ರೀತಿಯ ಹಸಿ ಹುಲ್ಲನ್ನು, ಮೂರು ರೀತಿಯ ಮಿಶ್ರಿತ ಹಸಿ ಹುಲ್ಲನ್ನು ಮತ್ತು ಎರಡು ರೀತಿಯ ಒಣ ಹುಲ್ಲನ್ನು ತಿನ್ನುತ್ತವೆ. ಇದರೊಂದಿಗೆ ಸುಮಾರು 17 ವಿವಿಧ ಮಾದರಿಯ ಔಷಧೀಯ ಸಸ್ಯಗಳನ್ನು ಹುಲ್ಲಿನೊಂದಿಗೆ ಸೇವಿಸಿರುವುದು ಪತ್ತೆಯಾಗಿದೆ.
ಹೀಗೆ ಪತ್ತೆಯಾದ ಎಲ್ಲಾ ಹಸಿರು ಸಸ್ಯಗಳು ಮಾನವನ ದೇಹಕ್ಕೆ ಅತಿ ಅವಶ್ಯಕವಾದುದೆಂಬುದಾಗಿ ಹೇಳಲಾಗಿದೆ. ಇದನ್ನೆಲ್ಲಾ ಸ್ವಾಭಾವಿಕವಾಗಿ ಮೇಯುವ ಇವುಗಳ ಹಾಲಿನಲ್ಲೂ ಆ ಎಲ್ಲಾ ಔಷಧೀಯ ಸಸ್ಯಗಳ ಅಂಶಗಳು ಕಂಡುಬಂದಿವೆ. ಹೀಗಾಗಿ ಇಂದಿನ ದಿನಗಳಲ್ಲಿ ಇದರ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಠಿಯಾಗುತ್ತಿದೆ. ಇದಕ್ಕೆ ಕಾರಣ ಇವುಗಳು ಸ್ವಾಭಾವಿಕವಾಗಿ ಸಿಕ್ಕ ಎಲ್ಲಾ ರೀತಿಯ ಗಿಡಗಂಟೆಗಳನ್ನು ಎಲ್ಲೆಂದರಲ್ಲಿ ತಿನ್ನುತ್ತಾ, ಬಿಸಿಲು, ಮಳೆ, ಗಾಳಿಗೆ ಅಂಜದೆ ಮೇಯುವುದೇ ಆಗಿದೆ. ಪ್ರಮುಖವಾಗಿ ಇವುಗಳ ಹಾಲು, ತುಪ್ಪ, ಮೊಸರು, ಗೋಮೂತ್ರ ಹಾಗೂ ಗೋಮಯದಿಂದ ತಯಾರಾಗುವ ಪಂಚಗವ್ಯಕ್ಕಂತೂ ಎಲ್ಲಿಲ್ಲದ ಬೇಡಿಕೆ ಇದೆ. ಇದರೊಂದಿಗೆ ಇದರ ಹಾಲಿಗೂ ನಗರಗಳಲ್ಲಿ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಈ ತಳಿಗಳು ಸರಿಯಾದ ಆಹಾರ ಸಿಗದೆ ಇದ್ದಾಗ ಸ್ವಲ್ಪ ಮಟ್ಟಿಗೆ ಸೊರಗಿ ಹೋಗುವುದು ಸಹಜ. ಹಾಗೆಯೇ ಒಳ್ಳೆಯ ಆಹಾರ ಸಿಕ್ಕ ಕೂಡಲೆ ಪುನಃ ದಷ್ಟಪುಷ್ಟವಾಗಿ ಬೆಳೆಯುವುದು ಇವುಗಳ ವಿಶೇಷತೆಗಳಲ್ಲೊಂದು. ಈ ಭಾಗದ ಶೇಕಡಾ 85 ರಷ್ಟು ರೈತರು ಇವುಗಳನ್ನು ರಾತ್ರಿಯ ಸಮಯದಲ್ಲಿ ಮಾತ್ರ ಕೊಟ್ಟಿಗೆಯೊಳಗೆ ಬಿಟ್ಟು ಸಾಕುತ್ತಾರೆ. ಇನ್ನು ಶೇಕಡಾ 15 ರಷ್ಟು ರೈತರು ಹಗಲಿನಲ್ಲೂ ಇವುಗಳನ್ನು ಕೊಟ್ಟಿಗೆಯಲ್ಲಿಯೇ ಕಟ್ಟಿ ಇಲ್ಲವೇ ಕೂಡಿ ಹಾಕಿ ಸಾಕುವುದು ಕಂಡುಬಂದಿದೆ. ಗಾತ್ರದಲ್ಲಿ ಹೆಸರಿಗೆ ತಕ್ಕಂತೆ ಗಿಡ್ಡವಾಗಿರುವ ಈ ತಳಿಗಳು ಒಂದು ಸಾಧಾರಣ ಹೆಚ್.ಎಫ್. ತಳಿಯ ಐದನೇ ಒಂದು ಭಾಗದಷ್ಟಿರುವುದು ಕಂಡುಬರುತ್ತದೆ. ಹೀಗಾಗಿ ಇವುಗಳಿಗೆ ಹುಟ್ಟುವ ಕರುಗಳು ಸಹ ಗಾತ್ರದಲ್ಲಿ ಚಿಕ್ಕದಾಗಿದ್ದು, 5 ರಿಂದ 10 ಕೆ.ಜಿ.ಯಷ್ಟು ತೂಕವನ್ನು ಮಾತ್ರ ಹೊಂದಿರುತ್ತವೆ.
ಕಪಿಲೆ, ಹಂದ ದನಗಳ ಹೆಸರು!
ಇವುಗಳನ್ನು ಹಲವು ಹೆಸರುಗಳಿಂದ ಈ ಭಾಗದಲ್ಲಿ ಜನ ಕರೆಯುವುದು ವಾಡಿಕೆ. ತಿಳಿ ಕಂದು ಬಣ್ಣದ ಮತ್ತು ಹಣೆಯ ಮಧ್ಯೆ, ಬಾಲದ ತುದಿಯಲ್ಲಿ ಇಲ್ಲವೇ ನಾಲ್ಕು ಕಾಲುಗಳ ಮಧ್ಯೆ ಬಿಳಿಯ ಮಜ್ಜೆಯನ್ನು ಹೊಂದಿದ್ದರೆ ಅಂತಹವುಗಳನ್ನು ಕಪಿಲೆ ಅಥವಾ ಕಪಿಲಾ ಎಂದು ಕರೆಯಲಾಗುತ್ತದೆ. ಚರ್ಮದ ಮೇಲೆ ಕಪ್ಪು ಮತ್ತು ಬಿಳಿಯ ಮಚ್ಚೆಯಾಕಾರದ ತೇಪೆಗಳಿದ್ದರೆ ಅದನ್ನು ಹಂದ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಹಳದಿ ಬಣ್ಣದ ರಾಸುಗಳನ್ನು ಕವಲೆ ದನಗಳೆಂದು ಕರೆಯಲಾಗುತ್ತದೆ.
ಈ ಬಣ್ಣದ ದನಗಳು ಸ್ವಭಾವದಲ್ಲಿ ಸಾಧುವಾಗಿದ್ದು, ಎರಡರಿಂದ ಐದು ಲೀಟರ್‌ವರೆಗೂ ಹಾಲನ್ನು ನೀಡುತ್ತವೆ. ಇದರಂತೆ ಅಲುಗಾಡುವ ಕೊಂಬನ್ನು ಹೊಂದಿರುವ ಹಾಲುದನ ಎಂದು ಕರೆಯಲ್ಪಡುವ ಈ ತಳಿಯ ದನಗಳು ಸಹ ಹೆಚ್ಚಿನ ಹಾಲನ್ನು ನೀಡುವುದು ಕಂಡುಬಂದಿದೆ. ದೇಹದ ಬಣ್ಣ ಕಂದು ಬಣ್ಣದಾಗಿದ್ದು, ಅಲ್ಲಲ್ಲಿ ಬಿಳಿಯ ಬಣ್ಣ ಕಂಡುಬಂದರೆ ಅವುಗಳನ್ನು ಮಂಗಲತಿ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಕಂದು ಬಣ್ಣದ ಈ ಜಾತಿಯ ಗೋವುಗಳನ್ನು ಕಬ್ಬೇತಿ ಎಂದು ಕರೆಯಲಾಗುತ್ತದೆ. ಈ ಬಣ್ಣದ ದನಗಳೊಂದಿಗೆ ಒಂದಷ್ಟು ಬಾಂಧವ್ಯ ಹಾಗೂ ನಂಬಿಕೆಗಳು ಇಂದಿಗೂ ಮಲೆನಾಡಿಗರಲ್ಲಿರುವುದು ಕಂಡುಬರುತ್ತದೆ.
ಕೃಷಿಗೆ ಸಂಬಂಧಿಸಿದ ಲೇಖನ, ವರದಿಗಳನ್ನು ಓದಲು ಇಲ್ಲಿ (Click Here) ಕ್ಲಿಕ್ ಮಾಡಿ.
ಬೆಂಗಳೂರಿನಲ್ಲಿ ದನ ಸಾಕುವುದೇಕೆ?
ಇಂದು ಇಲ್ಲಿಯ ಕೆಲ ಮಲೆನಾಡಿಗರು ಅನಿವಾರ್ಯ ಕಾರಣಗಳಿಂದ ಮಲೆನಾಡನ್ನು ಬಿಟ್ಟರೂ ಸಹ ಮಲೆನಾಡಿನ ಮೇಲಿರುವ ಅವರ ಪ್ರೀತಿ ಕಡಿಮೆಯಾಗಿಲ್ಲ. ಬೆಂಗಳೂರಿನಂತಹ ನಗರದಲ್ಲಿದ್ದರೂ ಸಹ ಮಲೆನಾಡು ಗಿಡ್ಡ ತಳಿಯನ್ನು ಸಾಕುವ ಚಿಂತನೆ ದೂರವಾಗಿಲ್ಲ. ಹೀಗಾಗಿ ಮನೆಗೆ ಅವಶ್ಯಕವಾದ ಹಾಲಿಗಾಗಿ ಮತ್ತು ಮಲೆನಾಡಿನ ನೆನಪಿಗಾಗಿ ಅಲ್ಲಲ್ಲಿ ಒಂದಷ್ಟು ಗಿಡ್ಡ ತಳಿಗಳನ್ನು ಸಾಕುತ್ತಿರುವುದು ಕಂಡುಬರುತ್ತದೆ. ಆದರೆ ಈ ರೀತಿ ಈ ತಳಿಯನ್ನು ಇಲ್ಲಿ ಕಟ್ಟಿ ಸಾಕುವುದು ಸರಿಯಲ್ಲ ಎನ್ನುವುದು ಕೆಲವರ ವಾದವಾಗಿದೆ.
ಬೆಂಗಳೂರಿನಲ್ಲಿ ಮೊದಲೇ ಜಾಗಗಳಿಗೆ ಚಿನ್ನದ ಬೆಲೆ. ಹೀಗಿರುವಾಗ ಇವುಗಳನ್ನು ಸಾಕುವುದಾದರೂ ಹೇಗೆ. ಮಲೆನಾಡಿನ ಕಾಡು ಮೇಡಿನಲ್ಲಿ ದಿನವಿಡೀ ಮೇಯ್ದು ಹೊಟ್ಟೆ ತುಂಬಿಸಿಕೊಂಡು ಸಂಜೆಗೋ ಇಲ್ಲವೇ ಒಂದೆರಡು ದಿನಗಳ ನಂತರ ಹಿಂತಿರುಗುತ್ತಿದ್ದ ಈ ತಳಿಗಳನ್ನು ಒಂದು ಕಡೆ ಕಟ್ಟಿ ಹಾಕಿ ಸಾಕುವುದು ಎಷ್ಟು ಮಾತ್ರ ಸರಿ. ಮಲೆನಾಡಿನಲ್ಲಿ ಸುತ್ತಾಡಿಕೊಂಡಿರುತ್ತಿದ್ದ ಇವುಗಳಿಗೆ ವ್ಯಾಯಾಮದ ಅವಶ್ಯಕತೆ ಇರಲಿಲ್ಲ. ಆದರೆ ಇಂದು ಇವುಗಳನ್ನು ಕಟ್ಟಿದ್ದಲ್ಲೇ ತಿಂಗಳಾನುಗಟ್ಟಲೇ ಕಟ್ಟಿಹಾಕಿದರೆ ಇವುಗಳಿಗೆ ವ್ಯಾಯಾಮವಾಗುವುದಾದರೂ ಹೇಗೆ?
ಇದರೊಂದಿಗೆ ಇವುಗಳ ಮೇಲಿನ ಪ್ರೀತಿಯಿಂದ ಹೆಚ್ಚಿನ ಪ್ರಮಾಣದ ಹಿಂಡಿ ಹುಲ್ಲನ್ನು ಹಾಕುವುದರಿಂದ ಇವುಗಳ ದೇಹದಲ್ಲಿ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಸಹಕಾರಿಯಾಗುತ್ತಿದೆ. ಹೀಗೆ ಬೆಳೆದ ಕೊಬ್ಬು ದೇಹದಲ್ಲೆಲ್ಲಾ ಶೇಖರಣೆಯಾಗಿ ಇವುಗಳ ಗರ್ಭಕೋಶ ಮತ್ತು ಅಂಡಾಶಯ, ಹೊಟ್ಟೆಯ ಕೊಬ್ಬಿನ ಪದರದೊಳಗೆ ಹುದುಗಿ ಹೋಗಿ ಇವುಗಳು ಶಾಶ್ವತವಾಗಿ ಬಂಜೆತನವೆಂಬ ಪಟ್ಟವನ್ನು ಕಟ್ಟಿಕೊಳ್ಳುತ್ತಿವೆ.
ಇದನ್ನೂ ಓದಿ : ಗೋ ಸಂಪತ್ತು: ಅಳಿವಿನಂಚಿನಲ್ಲಿರುವ ಅಮೂಲ್ಯ ಗೋತಳಿ ಮಲೆನಾಡು ಗಿಡ್ಡ
ಇನ್ನು ಹೋರಿಗಳು ಸಹ ಮೈ ತುಂಬಾ ಕೊಬ್ಬನ್ನು ತುಂಬಿಸಿಕೊಂಡು ಸಂಕರಣ ಕ್ರಿಯೆಯಲ್ಲಿ ಸಹಕರಿಸುವುದನ್ನೇ ಮರೆತು, ತನ್ನ ಸಹಜ ಸುಖದಿಂದ ದೂರವಾಗುತ್ತಿವೆ. ಮಲೆನಾಡಿನ ಕಾಡಿನಲ್ಲಿ ಅಲೆಯುತ್ತಾ, ಎಲ್ಲೆಂದರಲ್ಲಿ ಮೇಯುತ್ತಾ ಸ್ವಾಭಾವಿಕ ಬದುಕನ್ನು ಕಾಣುತ್ತಿದ್ದ ಇವುಗಳನ್ನು ಬೆಂಗಳೂರಿನಂತಹ ಕಾಂಕ್ರಿಟ್ ಕಾಡಿಗೆ ತಂದು ಒಂದೆಡೆ ಕಟ್ಟಿ ಸಾಕುವ ಪ್ರಯತ್ನ ನಿಜಕ್ಕೂ ಅರ್ಥಹೀನವಾದುದು.