ಹರಿಯಾಣ ರಾಜ್ಯದ ಕರ್ನಾಲ್‌ನಲ್ಲಿರುವ ಎನ್.ಬಿ.ಎ.ಜಿ.ಆರ್ (ICAR-National Bureau of Animal Genetic Resources) ಎಂಬ ಸಂಸ್ಥೆ ದೇಶದಲ್ಲಿ ಜಾನುವಾರು ತಳಿ ನಿರ್ಧರಿಸುವ ಏಕೈಕ ಪ್ರಾಧಿಕಾರ. ಈ ಸಂಸ್ಥೆ ಜಾನುವಾರು ತಳಿ ನಿರ್ಧರಿಸಲು ಕೆಲವೊಂದು ಮಾನದಂಡಗಳನ್ನು ಬಳಸುತ್ತದೆ. ಅದರಲ್ಲಿ ಪ್ರಮುಖವಾಗಿ ಪ್ರಕೃತಿ ನಿಯಮದಲ್ಲಿ ಯಾವುದೇ ಒಂದು ಜೀವರಾಶಿಯನ್ನು ನಿರ್ದಿಷ್ಟ ತಳಿ ಎಂದು ಗುರುತಿಸಲು ಅದಕ್ಕೆ ಒಂದು ರೀತಿಯ ಬಾಹ್ಯ ಗುಣಲಕ್ಷಣಗಳು ಮತ್ತು ಅನುವಂಶಿಕ ಗುಣಗಳಿರಬೇಕು ಹಾಗೂ ಅದೇ ಪ್ರದೇಶದಲ್ಲಿ ಅನನ್ಯತೆ ಹಾಗೂ ಇತರೆ ತಳಿಗಳಿಗಿಂತ ಆ ತಳಿ ವಿಭಿನ್ನತೆ ಹೊಂದಿರಬೇಕು. ಹಾಗೆಯೇ ಸಾಕಷ್ಟು ಸಂಖ್ಯೆ ಹಾಗೂ ಸಹಜ ವಾತಾವರಣ ಕೂಡ ಅವಶ್ಯಕವಾದುದಾಗಿರುತ್ತದೆ. ಇದರೊಂದಿಗೆ ಆ ತಳಿ ನಿರ್ದಿಷ್ಟ ಉತ್ಪಾದನಾ ಸಾಮರ್ಥ್ಯ ಮತ್ತು ಆ ಭಾಗದ ಸಾಕಣೆದಾರರಿಂದ ಮೆಚ್ಚುಗೆಯನ್ನು ಸಹ ಗಳಿಸಿರಬೇಕು ಎಂಬೆಲ್ಲಾ ಅಂಶಗಳು ಅತಿ ಅವಶ್ಯಕವಾದುದಾಗಿರುತ್ತವೆ.
ಮೇಲಿನ ಈ ಎಲ್ಲಾ ಅಂಶಗಳನ್ನು ದಾಖಲಿಸುವ ಕಾರ್ಯವನ್ನು ಸರ್ಕಾರ, ವಿಶ್ವವಿದ್ಯಾಲಯ ಅಥವಾ ಸರ್ಕಾರೇತರ ಸಂಘ ಸಂಸ್ಥೆಗಳು ಸಹ ಮಾಡಬಹುದು. ಆನಂತರ ಹೀಗೆ ದಾಖಲಿಸಿದ ಈ ಎಲ್ಲಾ ಅಂಶಗಳನ್ನು ʻರಾಷ್ಟ್ರೀಯ ಪಶು ಅನುವಂಶೀಯ ಮತ್ತು ತಳಿ ವಿಜ್ಞಾನ ಸಂಸ್ಥೆ’ಯ ತಳಿ ಮಾನ್ಯತೆ ಸಮಿತಿಗೆ ಸಲ್ಲಿಸಬಹುದು. ಆಗ ಮೇಲೆ ತಿಳಿಸಿರುವ ಸಂಸ್ಥೆ ತಳಿ ವರ್ಗೀಕರಣಕ್ಕೆ ಕೋರಿ ಸಲ್ಲಿಸಿದ ವರದಿಯನ್ನು ಪರಿಶೀಲಿಸಿ ಸಮೀಕ್ಷೆಯನ್ನು ಕೈಗೊಳ್ಳುತ್ತದೆ.
ಜಾನುವಾರು ಸಂಖ್ಯೆ, ಭೌಗೋಳಿಕ ಪರಿಸರ ಮತ್ತು ತಳಿ ನಿರ್ವಹಣಾ ಕ್ರಮ, ವಯಸ್ಸು ಹಾಗೂ ಲಿಂಗ ಆಧರಿಸಿದ ಎಣಿಕೆ ಇತ್ಯಾದಿ ವಿವರ ಹೊಂದಿದ ಬೇರೆ ಬೇರೆ ಭಾಗದ ಸುಮಾರು 3000ಕ್ಕೂ ಹೆಚ್ಚು ಜಾನುವಾರುಗಳ ಮಾಹಿತಿ ಈಗಾಗಲೇ ಈ ಸಮೀಕ್ಷೆಯಲ್ಲಿವೆ. ನಂತರ ವರದಿಯಲ್ಲಿರುವ ತಳಿಯ ಭೌತಿಕ ಹಾಗೂ ಅನುವಂಶೀಯ ಗುಣಗಳನ್ನು ಬೇರೆ ಬೇರೆ ತಳಿಗಳೊಂದಿಗೆ ಹೋಲಿಸಿ ಒರೆಗೆ ಹಚ್ಚಿದಾಗ ಡಿ.ಎನ್.ಎ. ಹಾಗೂ ವಂಶವಾಹಿಗಳು ಭಿನ್ನವಾಗಿದ್ದರೆ ಮಾತ್ರ ನಿರ್ದಿಷ್ಟ ತಳಿ ಎಂದು ಘೋಷಣೆ ಮಾಡಲಾಗುತ್ತದೆ. ಹೀಗೆ ಸಾಕಷ್ಟು ಕಸರತ್ತುಗಳ ನಂತರ ನಿರ್ದಿಷ್ಟ ಜಾನುವಾರುವಿಗೆ ಅಧಿಕೃತವಾಗಿ ತಳಿ ಮಾನ್ಯತೆ ದೊರೆಯುತ್ತದೆ.
ಇಲ್ಲಿಯವರೆಗೂ 36 ಭಾರತೀಯ ಗೋತಳಿಗಳಿಗೆ ಮಾತ್ರ ತಳಿ ಮಾನ್ಯತೆಯನ್ನು ನೀಡಿದ್ದ ಈ ಸಂಸ್ಥೆ ಇತ್ತೀಚೆಗೆ 37ನೇ ತಳಿಯಾಗಿ ಕರ್ನಾಟಕದ ʻಮಲೆನಾಡು ಗಿಡ್ಡ'(ಭಾರತೀಯ ಜಾನುವಾರು 0800 ಮಲೆನಾಡು ಗಿಡ್ಡ 03037)ಕ್ಕೆ ಮಾನ್ಯತೆಯನ್ನು ನೀಡಿದೆ. ಭೌತಿಕ ಹಾಗೂ ಅನುವಂಶೀಯ ಗುಣಗಳನ್ನು ಬೇರೆ ತಳಿಗಳೊಂದಿಗೆ ಹೋಲಿಸಿ ಒರೆಗೆ ಹಚ್ಚಿದಾಗ ಡಿಎನ್‌ಎ ಹಾಗೂ ವಂಶವಾಹಿಗಳು ಭಿನ್ನವಾಗಿರುವುದು ದೃಢಪಟ್ಟಿದೆ. ಹೀಗಾಗಿಯೇ ಇದನ್ನು ವಿಶಿಷ್ಟವಾಗಿ ಕಾಣುವುದರೊಂದಿಗೆ ನಿರ್ದಿಷ್ಟ ತಳಿ ಎಂದು ಘೋಷಿಸಲಾಗಿದೆ.
ಹೀಗೆ ಮಲೆನಾಡು ಗಿಡ್ಡ ತಳಿಗೆ ತಳಿ ಮಾನ್ಯತೆ ಕೊಡಿಸುವಲ್ಲಿ ʻರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ’ಯ ಪಾತ್ರ ಮಹತ್ವದ್ದಾಗಿದೆ. ಈ ತಳಿಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಏಳಿಗೆಗೆ ಪಣತೊಟ್ಟ ಎನ್.ಡಿ.ಆರ್.ಐ.ನ ವಿಜ್ಞಾನಿಗಳು ಇದಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ವಿಪರ್ಯಾಸವೆಂದರೆ ಇಷ್ಟೆಲ್ಲಾ ಪರಿಶ್ರಮದ ಫಲದ ಹೊರತಾಗಿಯೂ ಇಂದು ಮಲೆನಾಡಿಗರಿಗೆ ಈ ತಳಿ ಬೇಡವಾಗಿ ಕ್ರಮೇಣ ಅಳಿವಿನಂಚಿಗೆ ಬಂದು ನಿಂತಿದೆ.
ಆರೋಗ್ಯಕ್ಕೆ ಅಮೃತ ನೀಡುವ ತಳಿ
ಮಲೆನಾಡು ಗಿಡ್ಡ ತಳಿಯ ಎತ್ತುಗಳು ಸಾಗಾಣಿಕೆ ಮತ್ತು ಗದ್ದೆಯ ಕೆಲಸಗಳಿಗೆ ಸಹಕಾರಿಯಾಗಿ ಕೆಲಸ ನಿರ್ವಹಿಸಿದರೆ, ಆಕಳು ಉತ್ತಮ ಗುಣಮಟ್ಟದ ಹಾಲನ್ನು ನೀಡುತ್ತವೆ. ಇದರ ಹಾಲು ಜನರ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇವು ನೀಡುವ ಹಾಲಿನ ಪ್ರಮಾಣ ಕಡಿಮೆಯಾದರೂ ಇದರ ಹಾಲು ಹಾಗೂ ಉತ್ಪನ್ನಗಳು, ಅದರಲ್ಲೂ ಮುಖ್ಯವಾಗಿ ತುಪ್ಪ ಅನೇಕ ಔಷಧೀಯ ಗುಣಗಳಿಂದ ಕೂಡಿರುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಹೀಗಾಗಿ ಇದರ ಉತ್ಪನ್ನಗಳಿಗೆ ಬೇಡಿಕೆ ಅಧಿಕವಾಗಿದೆ.
ಅಷ್ಟೇ ಅಲ್ಲದೆ ಈ ತಳಿಯ ಹಾಲಿನಲ್ಲಿ ಇತರೆ ದೇಶಿಯ ತಳಿಗಳಲ್ಲಿರುವಂತೆ ಎ-3 ಕೆಸಿನ್ ಎಂಬ ಪ್ರೊಟೀನ್ ಅಂಶ ಅಧಿಕವಾಗಿದ್ದು, ಜಗತ್ತಿನಲ್ಲೇ ಅತಿ ಕಡಿಮೆ ಕೊಲೆಸ್ಟ್ರಾಲ್ ಅಂಶ ಹೊಂದಿದ ಹಾಲು ಎಂಬ ಖ್ಯಾತಿಯನ್ನು ಹೊಂದಿದೆ. ಹಾಗೆಯೇ ಇವುಗಳು ಕಾಡು ಮೇಡಿನಲ್ಲಿ ಔಷಧಿ ಸಸ್ಯಗಳನ್ನು ತಿಂದು ಬರುವುದರಿಂದ ಇದರ ಹಾಲಿನಲ್ಲೂ ಆ ಎಲ್ಲಾ ಔಷಧೀಯ ಗುಣಗಳು ಮಿಳಿತವಾಗಿರುತ್ತವೆ.
ಹೀಗಾಗಿ ಇಂದು ಬೆಂಗಳೂರಿನಂತಹ ನಗರದಲ್ಲೂ ಈ ತಳಿಯನ್ನು ಸಾಕುವ ಯೋಜನೆಯನ್ನು ಬಹುತೇಕರು ಹಾಕಿಕೊಂಡು ಅಲ್ಲಲ್ಲಿ ಈ ತಳಿಯನ್ನು ಹಾಲಿಗಾಗಿ ಸಾಕುತ್ತಿರುವುದು ಕಂಡುಬರುತ್ತದೆ. ಮಾನವ ಆರೋಗ್ಯದ ಬಗ್ಗೆ ಅರಿವು ಮೂಡುತ್ತಿರುವ ಇಂದಿನ ದಿನಗಳಲ್ಲಿ ಮಲೆನಾಡು ಗಿಡ್ಡ ಹಾಲಿಗೆ ಅತೀವ ಬೇಡಿಕೆ ನಿರೀಕ್ಷಿಸಲಾಗಿದೆ. ಈ ಭಾಗದ ಜನರ ಆರ್ಥಿಕ ಸ್ಥಿತಿ ಸುಧಾರಣೆಯಲ್ಲಿ ಮಲೆನಾಡು ಗಿಡ್ಡ ದನಗಳ ಪಾತ್ರವಿದೆ. ಹಾಗಾಗಿ ಮಲೆನಾಡು ಗಿಡ್ಡ ಮಲೆನಾಡಿಗರ ಜನಜೀವನದಲ್ಲಿ ಹಾಸು ಹೊಕ್ಕಾಗಿದೆ.
ಕಾಟುದನಗಳಿಗೆ ಹಲವಾರು ಹೆಸರು!
ಮಲೆನಾಡು ಪ್ರದೇಶವೇ ಇದರ ಮೂಲಸ್ಥಾನ. ಗುಡ್ಡಗಾಡು ಹಾಗೂ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಕಂಡುಬರುವ ಚಿಕ್ಕ ತಳಿಯಾದ್ದರಿಂದ ಇದಕ್ಕೆ ಈ ಹೆಸರು ಬಂದಿದೆ. ಸ್ಥಳೀಯರು ಇದನ್ನು ʻಊರ್ದನ’, ‘ಕಾಟುದನ’ ಎಂದು ಸಹ ಕರೆಯುತ್ತಾರೆ. ಹಾಗೆಯೇ ಕಪ್ಪು, ಕಂದು, ಬೂದು, ಕೆಂಪು ಬಣ್ಣಗಳಿರುವ ಈ ದನಗಳಿಗೆ ʻಕಬೆಟ್ಟಿ’ ಎಂತಲೂ ಕರೆಯುತ್ತಾರೆ. ಹಳದಿ ಬಣ್ಣವಿರುವ ದನಗಳಿಗೆ ʻಕೌಲು’ ಎನ್ನುತ್ತಾರೆ. ಕಪ್ಪು ಹಂಡ ಅಥವಾ ಬೂದು ಹಂಡ ಇರುವ ದನಗಳಿಗೆ ʻಮಂಗತ್ತಿ’ ಎನ್ನುತ್ತಾರೆ. ಅಲುಗಾಡುವ ಕೊಂಬು ಹೊಂದಿದ ದನಗಳಿಗೆ ʻಹಾಲುಕೋಡಿನ ದನ’ ಎನ್ನುತ್ತಾರೆ. ಹಾಗೆಯೇ 8 ರಿಂದ 9 ತಿಂಗಳವರೆಗೆ ಹಾಲು ಕೊಡುವ ಗುಣವಿರುವ ದನಗಳಿಗೆ ʻವರ್ಷಗಂಧಿ’ ಎಂದು ಕರೆಯುತ್ತಾರೆ. ಇವುಗಳಲ್ಲಿ ಬಿಳಿ ಬಣ್ಣ ಅಪರೂಪವಾಗಿರುತ್ತದೆ. ಕಪಿಲ ಬಣ್ಣದ ದನಗಳು ಅತಿ ವಿರಳವಾದರೂ ಅತ್ಯಂತ ಆಕರ್ಷಣೀಯವಾಗಿರುತ್ತವೆ. ಈ ಬಣ್ಣದ ದನಗಳು ಸಾಧು ಸ್ವಭಾವ ಹೊಂದಿದ್ದು, ಧಾರ್ಮಿಕ ಕಾರ್ಯಗಳಿಗೆ ಅತಿ ಪೂಜನೀಯವಾದವುಗಳಾಗಿವೆ.
ವಿಪರೀತ ಮಳೆ, ಚಳಿ, ಗಾಳಿಯಂತಹ ಪ್ರತಿಕೂಲ ಹವಾಮಾನಕ್ಕೆ ಸ್ವಾಭಾವಿಕವಾಗಿ ಇವುಗಳು ಹೊಂದಿಕೊಳ್ಳುವ ಗುಣವನ್ನು ಹೊಂದಿವೆ. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಸದೃಢ ಶರೀರದಿಂದ ಕೂಡಿರುತ್ತವೆ. ದೇಹದ ತೂಕ ಸುಮಾರು 80 ರಿಂದ 180 ಕೆ.ಜಿ.ಯಾಗಿರುತ್ತದೆ. ಕೊಂಬುಗಳು ಚಿಕ್ಕದಾಗಿರುತ್ತವೆ. ಹೋರಿಗಳು ಸುಮಾರು 90 ಸೆಂಟಿ ಮೀಟರ್‌ನಷ್ಟು ಎತ್ತರವಿರುತ್ತವೆ. ಬೆನ್ನಿನ ಡುಬ್ಬ ಅಥವಾ ಇಣಿಯು ಸಣ್ಣದಾಗಿರುತ್ತದೆ. ಬಾಲವು ಉದ್ದವಿದ್ದು ನೆಲಕ್ಕೆ ತಾಗುವಂತಿರುತ್ತದೆ. ಕೆಚ್ಚಲು ಚಿಕ್ಕದಾಗಿದ್ದು ಮೊಲೆಯ ತೊಟ್ಟು ಕಿರಿದಾಗಿರುತ್ತದೆ.
ಕೃಷಿಗೆ ಸಂಬಂಧಿಸಿದ ಲೇಖನ, ವರದಿಗಳನ್ನು ಓದಲು ಇಲ್ಲಿ (Click Here) ಕ್ಲಿಕ್ ಮಾಡಿ.
ಇವುಗಳಲ್ಲಿರುವ ಒಂದು ಅತ್ಯಮೋಘ ಗುಣವೆಂದರೆ, ಇವುಗಳಲ್ಲಿರುವ ಅಸಾಧಾರಣ ರೋಗನಿರೋಧಕ ಶಕ್ತಿ. ರೋಗ ರುಜಿನಗಳು ಇವುಗಳಲ್ಲಿ ತೀರಾ ಕಡಿಮೆ. ಕಾಲು ಬಾಯಿ ಜ್ವರ ಈ ತಳಿಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಿಲ್ಲ, ಕಾಣಿಸಿಕೊಂಡರೂ ತೀವ್ರತೆ ಬಹಳ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಇವುಗಳನ್ನು ಕಾಡಿಗೆ ಬಿಟ್ಟು ಮೇಯಿಸುವುದು ವಾಡಿಕೆ. ಇವುಗಳು ಬೆಳಿಗ್ಗೆ ಮೇಯಲು ಬಿಟ್ಟರೆ ಮತ್ತೇ ಮನೆ ಸೇರುವುದು ಸಂಜೆಯೇ. ಓಡುವುದು, ಹಾರುವುದು, ಅಪರಿಚಿತರು ಹಿಂದೆ ಬಂದರೆ ಅಥವಾ ಕೆಚ್ಚಲಿಗೆ ಕೈಹಾಕಿದರೆ ಒದೆಯುವುದು ಇದರ ಸಾಮಾನ್ಯ ಗುಣ.
ಮೂರಡಿ ಎತ್ತರವಿದ್ದರೂ ಆರಡಿ ಬೇಲಿಯನ್ನು ಸಲೀಸಾಗಿ ಹಾರಬಲ್ಲ ಶಕ್ತಿ ಇವುಗಳಿಗಿದೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಇವು ಹೆಚ್ಚಾಗಿ ಕಂಡು ಬರುತ್ತವೆ. ಈ ದನಗಳು ಮೂರು ವರ್ಷಕ್ಕೆ ಮೊದಲ ಕರು ಹಾಕುತ್ತವೆ. ಕರು ಹಾಕಿದ ಸುಮಾರು 8 ರಿಂದ 9 ತಿಂಗಳು ಹಾಲು ನೀಡುತ್ತವೆ. ಸುಮಾರು ಅರ್ಧ ಲೀಟರ್‌ನಿಂದ ಹಿಡಿದು ನಾಲ್ಕು ಲೀಟರ್‌ವರೆಗೂ ಹಾಲನ್ನು ನೀಡುತ್ತವೆ. ವರ್ಷದಲ್ಲಿ ಸುಮಾರು 250 ದಿನ ಹಾಲನ್ನು ನೀಡುವ ಸಾಮರ್ಥ್ಯವನ್ನು ಇವುಗಳು ಹೊಂದಿವೆ. ಸಾಮಾನ್ಯವಾಗಿ ಮಲೆನಾಡಿನ ಎಲ್ಲ ರೈತರ ಮನೆಗಳಲ್ಲಿಯೂ ಈ ತಳಿ ಕಾಣಸಿಗುತ್ತದೆ. ಇದನ್ನು ಹೆಚ್ಚಾಗಿ ಹಾಲಿಗಿಂತ ಗೊಬ್ಬರಕ್ಕೋಸ್ಕರವೇ ಸಾಕಲಾಗುತ್ತದೆ.
ಇದನ್ನೂ ಓದಿ : ಗೋ ಸಂಪತ್ತು: ವಿದೇಶಗಳಲ್ಲಿ ಮಿಂಚುತ್ತಿವೆ ಭಾರತೀಯ ಗೋ ತಳಿಗಳು!
ಇವುಗಳು ಕಾಡು ಮೇಡುಗಳಲ್ಲಿ ಮೆಂದು ಬರುವುದರಿಂದ ಆಹಾರಕ್ಕಾಗಿ ತಗಲುವ ಖರ್ಚು ಅತ್ಯಲ್ಪ. ರಾತ್ರಿ ವೇಳೆ ಭತ್ತದ ಒಣಹುಲ್ಲು, ಕಾಡು, ಗದ್ದೆ ಅಥವಾ ತೋಟಗಳಿಂದ ತಂದ ಹಸಿ ಮೇವೇ ಇದರ ಆಹಾರ. ಕಡಿಮೆ ಅಹಾರ ಸೇವಿಸಿ ಹೆಚ್ಚು ಕೆಲಸ ನಿರ್ವಹಿಸುವ ಗುಣ ಇವುಗಳಿಗಿದೆ. ಹಾಲು, ಗೊಬ್ಬರ ಹಾಗೂ ವ್ಯವಸಾಯದ ಕೆಲಸಗಳಿಗೆ ಇವುಗಳನ್ನು ಬಳಸಲಾಗುತ್ತದೆ. ಇವುಗಳನ್ನು ಸಾಂಪ್ರದಾಯಿಕವಾಗಿ ಕೊಟ್ಟಿಗೆಯಲ್ಲಿ ಕಟ್ಟುವುದಕ್ಕಿಂತ ಕೂಡಿ ಹಾಕುವುದೇ ಹೆಚ್ಚು. ಹೋರಿ ಮತ್ತು ಎತ್ತುಗಳು ಸಾಗಾಣಿಕೆ ಮತ್ತು ಗದ್ದೆಯ ಕೆಲಸಗಳಿಗೆ ಸಹಕಾರಿಯಾಗಿ ಕೆಲಸ ನಿರ್ವಹಿಸುತ್ತವೆ.