Site icon Vistara News

ಗೋ ಸಂಪತ್ತು : ವೈಜ್ಞಾನಿಕವಾಗಿಯೂ ಸಾಬೀತಾಗಿದೆ ಗೋಮೂತ್ರದಲ್ಲಿನ ಔಷಧೀಯ ಗುಣ

Cow urine is not safe for human consumption, IVRI report
#image_title

ಮಾನವನ ಇತಿಹಾಸದುದ್ದಕ್ಕೂ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಅನೇಕ ಪ್ರಕಾರಗಳ ಚಿಕಿತ್ಸೆಗಳೂ, ಉಪಚಾರಗಳೂ ಮತ್ತು ಔಷಧೀಯ ಪದ್ಧತಿಗಳು ಜಾರಿಯಲ್ಲಿದ್ದವು. ಅವೆಲ್ಲವುಗಳಲ್ಲಿ ಗೋವು ಮತ್ತು ಗೋವಂಶದೊಂದಿಗೆ ಸಂಬಂಧವುಳ್ಳ ಔಷಧೀಯ ಪದ್ಧತಿಯೇ ಅತಿ ಶ್ರೇಷ್ಠ ಮತ್ತು ಹಾನಿರಹಿತವಾದುದ್ದಾಗಿತ್ತು. ಎಂತಹವರಿಗೂ ದೊರೆಯಬಹುದಾದಂತಹ ಚಿಕಿತ್ಸಾ ಪದ್ಧತಿ ಇದಾಗಿತ್ತು. ಇಂತಹ ಪುರಾತನ ಹಾನಿ ರಹಿತ ಚಿಕಿತ್ಸೆಯನ್ನೇ ಗೋಚಿಕಿತ್ಸೆ ಎಂದು ಹೇಳಲಾಗಿರುವುದು. ಇಂದಿಗೂ ಸಹ ಇದೊಂದು ಪರ್ಯಾಯ ಔಷಧ ಪದ್ಧತಿಯಾಗಿದ್ದು, ತನ್ನದೇ ಆದ ಇತಿಹಾಸವನ್ನು ಹೊಂದಿದೆ.

ಹೀಗಾಗಿಯೇ ಇಂದಿನ ವೈಜ್ಞಾನಿಕ ಯುಗದಲ್ಲೂ ಗೋಚಿಕಿತ್ಸೆ ಎಂಬುದು, ಆರೋಗ್ಯ ಮತ್ತು ಪರಿಸರದ ಇಂದಿನ ಸಾಕಷ್ಟು ಸಮಸ್ಯೆಗಳಿಗೆ ಸಂತುಲಿತ ಪರಿಹಾರವಾಗಿ ಕಂಡಿದೆ. ಹಾಗಾಗಿ ಇಂದಿನ ವೈದ್ಯಕೀಯ ವಿಜ್ಞಾನ ಗೋವಿನ ಉತ್ಪನ್ನಗಳಲ್ಲಿರುವ ಔಷಧೀಯ ಗುಣವನ್ನು ಒಪ್ಪಿದೆ ಮತ್ತು ಇದರಲ್ಲಿನ ರೋಗ ನಿರೋಧಕ ಶಕ್ತಿಯನ್ನು ದೃಢೀಕರಿಸಿದೆ. ಇದರಿಂದ ತಿಳಿಯುವುದೇನೆಂದರೆ ಕಲಿಯುಗದಲ್ಲಿ ಎಲ್ಲರೂ ಎಲ್ಲವೂ ಕೆಟ್ಟರೂ ಗೋವು ಮಾತ್ರ ತನ್ನ ಔಷಧೀಯ ಗುಣಗಳನ್ನು ಇಂದಿಗೂ ಉಳಿಸಿಕೊಂಡು ಬಂದಿದೆ ಎಂಬುದು. ಆದರೆ ಮಾನವನೇ ಅದನ್ನು ಕುಲಗೆಡಿಸುತ್ತಿದ್ದಾನೆ ಎಂಬುದಂತು ಸತ್ಯ.

ಆಧುನಿಕತೆಯ ಸೋಗಿಗೆ ಮರುಳಾಗಿ ಹಿತ್ತಲ ಗಿಡ ಮದ್ದಲ್ಲ ಎನ್ನುವ ಇಂದಿನ ದೇಶವಾಸಿಗಳಿಗೆ ಕೇವಲ ಎರಡು ನೂರು ವರ್ಷಗಳ ಹಿಂದೆ ಜನ್ಮ ತಾಳಿದಂತಹ ‘ಅಲೋಪಥಿಕ್ ಚಿಕಿತ್ಸೆ’ ಅನಿಶ್ಚಿತವಷ್ಟೇ ಅಲ್ಲದೆ ಹಾನಿಕಾರಕ ಮತ್ತು ಕಷ್ಟಪ್ರದವಾಗಿಯೂ ಇತ್ತೀಚೆಗೆ ಕಂಡುಬರುತ್ತಿದೆ. ಹಾಗಾಗಿ ಬಡವರಿಗೆ ಕೈಗೆಟುಕದಂತಹ ಈ ಪಾಶ್ಚಾತ್ಯ ಚಿಕಿತ್ಸಾ ಪದ್ಧತಿಗೆ ಪರ್ಯಾಯ ಚಿಕಿತ್ಸಾ ಪದ್ಧತಿಯ ಹುಡುಕಾಟದಲ್ಲಿ ಬಹಳಷ್ಟು ಮಂದಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದರೆ ದೇಶವಾಸಿಗಳು ಇಂದು ಪಾಶ್ಚಾತ್ಯರ ಈ ಚಿಕಿತ್ಸಾ ಪದ್ಧತಿಗೆ ತಿಲಾಂಜಲಿಯನ್ನಿಟ್ಟು ದೇಶಿ ಚಿಕಿತ್ಸಾ ಪದ್ಧತಿಯಾದ ಗೋ ಚಿಕಿತ್ಸೆಗಳಿಗೆ ಮಹತ್ವವನ್ನು ನೀಡಬೇಕಾದ ಅವಶ್ಯಕತೆ ಎದ್ದು ಕಾಣುತ್ತಿದೆ.

ಇಂದಿನ ವೈದ್ಯಕೀಯ ವಿಜ್ಞಾನವು ಸಹ ಗೋವಿನ ಉತ್ಪನ್ನಗಳಲ್ಲಿರುವ ಔಷಧೀಯ ಗುಣವನ್ನು ಒಪ್ಪಿದೆ ಮತ್ತು ಇದರ ರೋಗ ನಿರೋಧಕ ಶಕ್ತಿಯನ್ನು ದೃಢೀಕರಿಸಿದೆ. ಆದ್ದರಿಂದ ಪ್ರತಿಯೊಂದು ಹಳ್ಳಿಯಲ್ಲೂ ಸರಳವಾಗಿ ಮತ್ತು ಖರ್ಚಿಲ್ಲದೆ ದೊರೆಯುತ್ತಿರುವ ಪ್ರಕೃತಿದತ್ತವಾದ ಇಂತಹ ಗೋವಿನ ಉತ್ಪನ್ನಗಳ ಮೂಲಕ ಚಿಕಿತ್ಸೆ ನಡೆಯಬೇಕಿದೆ ಮತ್ತು ಇದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ರೋಗಗಳ ಗೂಡಾಗಿರುವ ಜನರ ದೇಹವನ್ನು ರೋಗ ವಿಮುಕ್ತ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಹಳ್ಳಿಗಳನ್ನು ಆರೋಗ್ಯ ಪೂರ್ಣವಾಗಿ ಮಾಡುವುದರಿಂದ ದೇಶವೂ ಆರೋಗ್ಯದಿಂದಿರುತ್ತದೆ.

ಇಂತಹ ಸಂದರ್ಭದಲ್ಲಿ ದೇಶಿ ಗೋತಳಿಗಳು ಮಾನವನ ಕಲ್ಯಾಣಕ್ಕಾಗಿಯೇ ಈ ಭೂಮಿಯಲ್ಲಿ ಅವತರಿಸಿವೆಯೇನೋ ಎಂಬಂತೆ ನಮಗಿಂದು ಕಾಣುತ್ತಿವೆ. ಅದರಲ್ಲೂ ಅವುಗಳ ಉತ್ಪನ್ನಗಳಾದ ಹಾಲು, ಗೋಮಯ, ಗೋಮೂತ್ರ ಮತ್ತು ಗೋರೋಚನವಿಂದು ಸಂಜೀವಿನಿಯಂತೆ ಕಂಡುಬಂದಿದೆ. ಅದರಲ್ಲೆಲ್ಲಾ ಗೋಮೂತ್ರವಂತೂ ಎಲ್ಲಾ ಭೀಕರ ರೋಗಗಳಿಗೆ ರಾಮಬಾಣವಾಗಿ ಪರಿಣಮಿಸಿದೆ. ಇಂತಹ ಗೋಮೂತ್ರ ಕೇವಲ ಮನುಷ್ಯ ಮತ್ತು ಪ್ರಾಣಿಗಳಿಗೆ ಮಾತ್ರವಲ್ಲದೆ, ಬೆಳೆಗಳಿಗೂ ಮತ್ತು ವನಗಳಿಗೂ ಬರುವ ಸಮಸ್ತ ಕಾಯಿಲೆಗಳನ್ನು ವಾಸಿ ಮಾಡುವುದು ಸಾಬೀತಾಗಿದೆ. ಅಷ್ಟೇ ಅಲ್ಲದೆ ಮತ್ತೆಂದೂ ಆ ರೋಗಗಳು ಬಾಧಿಸದಂತೆ ಮಾಡುವ ಪರಮಾತ್ಮನ ಪರಮೋನ್ನತ ಔಷಧಿಯಾಗಿಯೂ ಕಂಡುಬಂದಿದೆ.

ಇದಕ್ಕೆ ಪುಷ್ಟಿ ನೀಡುವಂತೆ ನಮ್ಮ ರಾಷ್ಟ್ರದ ‘ಕೇಂದ್ರೀಯ ಪಶು ವೈದ್ಯಕೀಯ ಅನುಸಂಧಾನ ಸಂಸ್ಥೆ’ (IVRI)ಯ ಸಹ ನಿರ್ದೇಶಕರಾದ ಡಾ. ರಾಮ್‌ ನರೇಶ್ ಚೌಹಾಣ್ರವರು ʻಭಾರತೀಯ ಗೋವುಗಳಲ್ಲಿಯ ಬಿಳಿ ರಕ್ತ ಕಣಗಳಲ್ಲಿ ಒಂದು ವಿಧವಾದ ರೋಗಾಣುಗಳನ್ನು ಭಕ್ಷಿಸುವ ಜೀವಕೋಶಗಳು ಹೆಚ್ಚಿನ ಪ್ರಮಾಣದ ʻನೈಟ್ರೇಸ್ ಆಕ್ಸೈಡ್‌ʼ ಎಂಬ ಅನಿಲವನ್ನು ಉತ್ಪಾದಿಸುತ್ತವೆ. ಇದು ರೋಗಾಣುಗಳನ್ನು ನಾಶಪಡಿಸುವ ಅನಿಲವಾಗಿದೆ’ ಎಂಬುದಾಗಿ ಹೇಳಿದ್ದಾರೆ.

ಇತ್ತೀಚಿನ ಮತ್ತೊಂದು ವೈದ್ಯಕೀಯ ವರದಿಯ ಪ್ರಕಾರ ದನದ ಮಾಂಸ ಸೇವನೆಯಿಂದ ಮಾರಕ ರೋಗಗಳು ಉಂಟಾಗುವುದರೊಂದಿಗೆ ಜಂತು ಹುಳುಗಳು ವೃದ್ಧಿಯಾಗುವುದು ರುಜುವಾತಾಗಿದೆ. ಹಾಗೆಯೇ ಹೃದಯದ ತೊಂದರೆ, ಮಧುಮೇಹ, ಸ್ಥೂಲದಂತಹ ಕಾಯಿಲೆಗಳ ಜೊತೆಗೆ ಸೋರಿಯಾಸಿಸ್‌ನಂತಹ ಚರ್ಮದ ಕಾಯಿಲೆಗಳು ಸಹಾ ಬರುವ ಸಾಧ್ಯತೆ ಬಹಳ ಹೆಚ್ಚು ಎಂಬುದು ದೃಢಪಟ್ಟಿದೆ. ಹಾಗಾಗಿ ಇಂದು ಗೋಮೂತ್ರ ಇವೆಲ್ಲಕ್ಕೂ ಏಕೈಕ ಪರ್ಯಾಯ ಔಷಧಿಯಾಗಿ ಕಂಡು ಬಂದಿದೆ.

ನಮ್ಮಲ್ಲಿ ಪ್ರಾಚೀನ ಕಾಲದಿಂದಲೂ ಗೋಮೂತ್ರವನ್ನು ಔಷಧಿಯಾಗಿ ಸೇವನೆ ಮಾಡುವುದು ರೂಢಿಯಲ್ಲಿತ್ತು. ಆದರೆ ಈ ಬಗ್ಗೆ ಪ್ರಯೋಗಾಲಯದಲ್ಲಿ ವೈಜ್ಞಾನಿಕವಾಗಿ ಸಂಶೋಧನೆ 1999ರಲ್ಲಷ್ಟೇ ಪ್ರಾರಂಭವಾಯಿತು. ಗೋಮೂತ್ರದ ರಾಸಾಯನಿಕ ಗುಣಗಳ ಬಗ್ಗೆ ಮೊದಲು ಸಂಶೋಧನೆ ನಡೆಸಿದ ಹೆಗ್ಗಳಿಕೆ ಸಿ.ಎಸ್.ಐ.ಆರ್.ನದ್ದು. ಲಕ್ನೋದಲ್ಲಿರುವ ಈ ಸಿ.ಎಸ್.ಐ.ಆರ್.(CSIR)ನ ಅಂಗಸಂಸ್ಥೆ ‘ಸೆಂಟ್ರಲ್ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಸಿನಲ್ ಅಂಡ್ ಆರೋಮೆಟಿಕ್ ಪ್ಲಾಂಟ್’ (CIMAP)ನಲ್ಲಿ ಮೂರು ವರ್ಷಗಳ ಕಾಲ ಹತ್ತು ಲಕ್ಷದಷ್ಟು ವೆಚ್ಚದಲ್ಲಿ ಈ ಸಂಶೋಧನೆ ನಡೆಸಿದ ನಂತರ ಗೋಮೂತ್ರದಲ್ಲಿ ಒಂದು ವಿಶೇಷಕರವಾದ ಸಂಯುಕ್ತ ವಸ್ತು ಇರುವುದನ್ನು ಗುರುತಿಸಲಾಯಿತು.

ಅಷ್ಟೇ ಅಲ್ಲದೆ ಗೋಮೂತ್ರದ ಇನ್ನೂ ಹೆಚ್ಚಿನ ಚಿಕಿತ್ಸಕೀಯ ಗುಣಗಳ ಬಗ್ಗೆ ಈಗ ಸಂಶೋಧನೆ ಮುಂದುವರೆದಿದೆ. ಆದರೆ ಅದನ್ನು ಜನಸಾಮಾನ್ಯರು ಔಷಧಿಯಾಗಿ ಬಳಸುವಂತಾಗಲು ಇನ್ನು ಹತ್ತಾರು ವರ್ಷಗಳು ತಗುಲಬಹುದು ಎಂದು ಅಭಿಪ್ರಾಯ ಪಡಲಾಗಿದೆ.

ಮತ್ತೊಂದೆಡೆ ದೇಶಿ ತಳಿಯ ಗೋಮೂತ್ರದಲ್ಲಿ112 ಔಷಧೀಯ ದ್ರವ್ಯಗಳು ಇವೆಯೆಂದು ವೈಜ್ಞಾನಿಕವಾಗಿ ಸಿದ್ಧವಾಗಿದೆ. ಒಂದೊಂದು ದ್ರವ್ಯ ಕೂಡಾ ಕನಿಷ್ಠ ಪಕ್ಷ ಒಂದು ರೋಗಕ್ಕೆ ಗುಣಕಾರಿಯಾಗಿದೆ. ಹಾಗೆಯೇ ನಮ್ಮ ದೇಶದ ಗೋವಿನಲ್ಲಿ ಮಾತ್ರ ಶೇಕಡಾ 3 ರಿಂದ 4ರಷ್ಟು ರೋಗ ನಿರೋಧಕ ಶಕ್ತಿ ಇದ್ದು, ಇದು ಶರೀರದಲ್ಲಿರುವಂತಹ ರೋಗ ನಿರೋಧಕ ಜೀವಾಣುಗಳ ಸಂಖ್ಯೆಯನ್ನು ಇಮ್ಮಡಿ ಮಾಡುವುದು ದೃಢಪಟ್ಟಿದೆ. ಇದರೊಂದಿಗೆ ನಾಗಪುರದಲ್ಲಿರುವ ‘ಗೋವಿಜ್ಞಾನ ಅನುಸಂಧಾನ ಕೇಂದ್ರ’ದಲ್ಲಿ ಶುದ್ಧೀಕರಿಸಿದ ಗೋಮೂತ್ರದಿಂದ ಸಿದ್ಧಪಡಿಸಿದ ಗೋಮೂತ್ರ ಅರ್ಕದ ಮೇಲೆ ಸಂಶೋಧನೆ ನಡೆಸಿದಾಗ ಇದು ಕ್ಯಾನ್ಸರ್ ವಿರೋಧಿ ಎಂದು ನಿರ್ಣಯಿಸಲ್ಪಟ್ಟಿದೆ.

ಸಾಮಾನ್ಯವಾಗಿ ಕಾಡುವ ಮಧುಮೇಹ ಮತ್ತು ಟೈಫಾಯ್ಡ್‌ ಗೋಮೂತ್ರದಿಂದ ಗುಣಪಡಿಸಬಹುದು ಎಂದು ಪ್ರಾಥಮಿಕ ಅಧ್ಯಯನದಿಂದ ತಿಳಿದುಬಂದಿದೆ. ಅಕ್ಟೋಬರ್ 2008ರಂದು ಬೆಂಗಳೂರಿನಲ್ಲಿರುವ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನಲ್ಲಿ ಬಿಳಿ ಇಲಿಗಳನ್ನು ಮಧುಮೇಹಕ್ಕೆ ತುತ್ತಾಗುವಂತೆ ಮಾಡಿ ಅವುಗಳ ಮೇಲೆ ಗೋಮೂತ್ರವನ್ನು ಪ್ರಯೋಗಿಸಿದಾಗ ಅವುಗಳ ರಕ್ತದಲ್ಲಿನ ಸಕ್ಕರೆ ಅಂಶದ ಮಟ್ಟ ಗಣನೀಯವಾಗಿ ಕಡಿಮೆಯಾಗಿರುವುದು ಕಂಡುಬಂದಿದೆ.

ಹಾಗೆಯೇ ಗೋಮೂತ್ರದಲ್ಲಿ ʻಹೆಚ್-1 ಎನ್-1 ʼವೈರಾಣುಗಳನ್ನು ಕೊಲ್ಲುವ ಶಕ್ತಿ ಇದೆ ಎಂಬುದನ್ನು ಸುಪ್ರಸಿದ್ಧ ವಿಜ್ಞಾನಿ ಡಾ ವಿಜಯ್ ಭಟ್ ಸಾಬೀತು ಮಾಡಿದ್ದಾರೆ. ಈ ವಿಜ್ಞಾನಿ ʻಹೆಚ್-1 ಎನ್-1ʼ ವೈರಾಣುಗಳನ್ನು ತೆಗೆದು ʻಗೋ ಅರ್ಕ’ದಲ್ಲಿ ಹಾಕಿ ಸಂಶೋಧನೆ ಮಾಡಿದಾಗ ಕೆಲವೇ ನಿಮಿಷಗಳಲ್ಲಿ ಅದು ಸತ್ತಿರುವುದು ದೃಢಪಟ್ಟಿದೆ. ಈ ಮೂಲಕ ಗೋಮೂತ್ರದಿಂದ ʻಹೆಚ್-1 ಎನ್-1ʼ ಸೋಂಕಿನ ವೈರಾಣುಗಳನ್ನು ನಾಶಪಡಿಸಲು ಸಾಧ್ಯ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

ಹಾಗೆಯೇ ಉತ್ತರ ಪ್ರದೇಶದ ಪಂತ ನಗರದಲ್ಲಿರುವ ಡಾ. ರಾಮ್ ಸ್ವರೂಪ್ ಚೌಹಾಣ್ ಅವರು ಸುಮಾರು 25 ವರ್ಷಗಳಿಂದ ಗೋಮೂತ್ರದ ಮೇಲೆ ಸಂಶೋಧನೆ ನಡಸುತ್ತಿದ್ದಾರೆ. ಅವರ ಪ್ರಕಾರ ಗೋಮೂತ್ರದಿಂದ ದೇಹದ ರೋಗ ನಿರೋಧಕ ಶಕ್ತಿಯ ಕ್ಷಮತೆ ಶೇಕಡ19ರಷ್ಟು ಹೆಚ್ಚಾಗುತ್ತದೆಯಂತೆ. ಆದರೆ ವಿದೇಶಿ ತಳಿಗಳಾದ ಜರ್ಸಿ ಮತ್ತು ಹೋಲೆಸ್ಟಿನ್‌ಗಳ ಮೂತ್ರದಲ್ಲಿ ಈ ಅಂಶಗಳು ಇಲ್ಲದೆ ಇರುವುದರಿಂದ ಇವುಗಳ ಸೇವನೆಯಿಂದ ದೇಹದಲ್ಲಿ ಇನ್ನಿತರೆ ತೊಂದರೆಗಳಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಮುಖ್ಯವಾಗಿ ಗೋಮೂತ್ರವು ದೇಹದ ಮೇಲಾಗುವ ಯಾವುದೇ ರೀತಿಯ ಗಾಯಗಳನ್ನು ಸಹಾ ಶೀಘ್ರ ಗುಣಪಡಿಸುವುದು ಸಾಕಷ್ಟು ಪ್ರಯೋಗಗಳಿಂದ ಸಾಬೀತಾಗಿದೆ. ಇದರೊಂದಿಗೆ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸುವ ಮುಟ್ಟಿನ ಎಲ್ಲಾ ರೀತಿಯ ಸಮಸ್ಯೆಗಳಿಗೆ ಗೋಮೂತ್ರ ಚಿಕಿತ್ಸೆಯಲ್ಲಿ ಪರಿಹಾರವಿರುವುದನ್ನು ಸಾಕಷ್ಟು ಸಂಶೋಧನೆಗಳ ಮೂಲಕ ವೈಜ್ಞಾನಿಕರು ಜಗತ್ತಿನ ಮುಂದಿಟ್ಟಿದ್ದಾರೆ. ಈ ಎಲ್ಲಾ ಕಾರಣಕ್ಕಾಗಿಯೇ ಇರಬೇಕು ಹಿಂದೊಮ್ಮೆ ಅಮೆರಿಕ ಸಹಾ ಭಾರತೀಯ ಗೋವುಗಳ ಗೋಮೂತ್ರದ ಔಷಧೀಯ ಉಪಯೋಗಕ್ಕೆ ‘ಪೇಟೆಂಟ್’ ಪಡೆಯಲು ಯತ್ನಿಸಿದ್ದು.

ವಿಶ್ವ ಆರೋಗ್ಯ ಸಂಸ್ಥೆ(WHO), 2020ರ ವೇಳೆಗಾಗಲೇ ಪ್ರಪಂಚದಲ್ಲಿರುವ ಎಲ್ಲಾ ‘ಆ್ಯಂಟಿ ಬಯೋಟಿಕ್’ಗಳು ನಿರುಪಯೋಗಿ ಆಗಿ ಬಿಡುತ್ತವೆ. ಆಗ ಗೋಮೂತ್ರದ ಅವಶ್ಯಕತೆ ಎದ್ದು ಕಾಣುತ್ತದೆ. ಈಗ ಬಳಸುವ ಆ್ಯಂಟಿ ಬಯೋಟಿಕ್‌ಗಳೊಡನೆ ಭಾರತೀಯ ಗೋವುಗಳ ಗೋಮೂತ್ರ ಬಳಸುವುದರಿಂದ ದೇಹದಲ್ಲಿರುವ ಸೂಕ್ಷ್ಮಾಣುಗಳಲ್ಲಿ ಪ್ರತಿರೋಧಾತ್ಮಕ ಶಕ್ತಿ ಹೆಚ್ಚುವುದೆಂಬುದು ಇತ್ತೀಚಿನ ಪ್ರಯೋಗಗಳಿಂದ ಸಾಬೀತಾಗಿದೆ” ಎಂಬುದಾಗಿ ತಿಳಿಸಿದೆ. ಇಷ್ಟು ಸಾಕಲ್ಲವೇ ಭಾರತೀಯ ಗೋವುಗಳ ಉತ್ಪನ್ನಗಳಲ್ಲಿನ ಔಷಧೀಯ ಮೌಲ್ಯಗಳನ್ನು ಜಗತ್ತಿಗೆ ಸಾರಲು!!

ಇದನ್ನೂ ಓದಿ : ಗೋ ಸಂಪತ್ತು : ಗೋಮೂತ್ರದ ಮಹಿಮೆ ನಿಮಗೆಷ್ಟು ಗೊತ್ತು?

Exit mobile version