Site icon Vistara News

ಗೋ ಸಂಪತ್ತು | ವಿದೇಶಿ ಗೋವಿನ ತಳಿಗಳ ಹಾಲು-ಹಾಲಾಹಲ!

foreign cow breeds milk ಗೋ ಸಂಪತ್ತು

ಗೋವು ಹಾಲು ಉತ್ಪಾದನೆ ಮಾಡುವುದು ಅದರ ಕರುವಿಗಾಗಿ, ಉಳಿದದ್ದು ದೇವರಿಗೆ, ಅದರಲ್ಲಿ ಒಂದು ಪಾಲು ಮನುಷ್ಯರಿಗೆ, ಇದು ಪ್ರಾಚೀನ ಭಾರತದ ಪರಿಕಲ್ಪನೆ. ಆದರೆ ಇಂದು ನಡೆಯುತ್ತಿರುವುದೇ ಬೇರೆ. ಉತ್ಪಾದನೆಯಾಗುವ ಬಹುಪಾಲು ಮನುಷ್ಯನಿಗಾದರೆ, ಸ್ವಲ್ಪ ಮಾತ್ರ ಅದರ ಕರುವಿಗೆ ಮೀಸಲು. ಇನ್ನು ದೇವರಿಗೆ ದೇವರೆ ಬಲ್ಲ. ಭಾರತ ಅನಾದಿ ಕಾಲದಿಂದಲೂ ಹೈನುಗಾರಿಕೆಗೆ ಹೆಸರುವಾಸಿಯಾಗಿತ್ತು. ಹಾಗಾಗಿ ಇಲ್ಲಿ ಬಹಳ ಹಿಂದಿನವರೆಗೂ ಹಾಲೆಂಬುದು ಒಂದು ಮಾರಾಟದ ವಸ್ತುವಾಗಿರಲಿಲ್ಲ.

ಸುಮಾರು ಅರವತ್ತರ ದಶಕಗಳಲ್ಲಿಯೂ ಸಹ ಹಾಲು ಮಾರುವುದು ಸಾಮಾಜಿಕವಾಗಿ ಬಹಳ ಕಡೆಗಣಿಸಲ್ಪಟ್ಟಿದ್ದ ಮತ್ತು ಅಗೌರವದ ಕಾರ್ಯವಾಗಿತ್ತು. ಕಾರಣ ಇಲ್ಲಿಯ ರೈತರು ಗೋವುಗಳನ್ನು ವ್ಯವಸಾಯಕ್ಕೆ, ಸಾಗಾಣಿಕೆಗೆ ಮತ್ತು ಹೈನುಗಾರಿಕೆಗೆ ಮಾತ್ರ ಉಪಯೋಗಿಸುತ್ತಿದ್ದರು. ಹಾಗೆಯೇ ಸ್ವಾತಂತ್ರ್ಯ ಸಿಗುವ ಮೊದಲಿನಿಂದಲೂ ಇಲ್ಲಿಯ ಪಶುಪಾಲನೆಯ ಆರ್ಥಿಕ ಮೂಲ ಗೋಮಯ, ಗೋಮೂತ್ರವಾಗಿತ್ತೇ ಹೊರತು ಹಾಲು ಎಂದಿಗೂ ಆಗಿರಲಿಲ್ಲ. ಸ್ವಾತಂತ್ರ್ಯದ ನಂತರ ಭಾರತ ಸರ್ಕಾರವು ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ವಿದೇಶಿ ತಳಿಗಳನ್ನು ಪರಿಚಯಿಸುವ ತಪ್ಪು ನಿರ್ಣಯ ಕೈ ಗೊಂಡಿತು. ಈ ಹಾದಿಯಲ್ಲಿ ಹಾಲೆಂಬ ಬಿಳಿ ದ್ರಾವಣದ ಉತ್ಪಾದನೆಯೇನೋ ಹೆಚ್ಚಾಯಿತು, ಆದರೆ ಅಮೃತ ಸಮಾನವಾಗಿದ್ದ ಹಾಲಿನ ಗುಣಮಟ್ಟ ಕಳಪೆಯಾಗುತ್ತಾ ಹೋಯಿತು.

ಇದರೊಂದಿಗೆ ಬಿಳಿ ಕ್ಷೀರ ಕ್ರಾಂತಿಯಿಂದಾಗಿ ಹಾಲಿನ ಮಾರಾಟ ನಮ್ಮ ದೇಶದಲ್ಲಿ ಯಥೇಚ್ಚಾವಾಗಿ ಪ್ರಾರಂಭವಾಯಿತು. ಆನಂತರ ಸರ್ಕಾರ ಪರಿಚಯಿಸಿದ್ದ ವಿದೇಶಿ ತಳಿಗಳ ಆಕ್ರಮಣದೊಂದಿಗೆ ರಾಷ್ಟ್ರವ್ಯಾಪಿ ಇದೊಂದು ದಂಧೆಯಾಗಿ ಪರಿವರ್ತಿತವಾಯಿತು. ಹೀಗಾಗಿ ಈಗಲೂ ಮಾರುಕಟ್ಟೆಯಲ್ಲಿರುವ ಹಾಲೆಂಬ, ಹಾಲೆಂದು ಕರೆಯಲ್ಪಡುವ ಬಿಳಿದ್ರವ ನಿಜವಾದ ಅರ್ಥದಲ್ಲಿ ಹಾಲಾಗಿ ಉಳಿದಿಲ್ಲ.

ಒಂದರ್ಥದಲ್ಲಿ ಹೇಳಬೇಕೆಂದರೆ ಈ ವಿದೇಶಿ ದನಗಳು ರೋಗಗಳ ಗುಡಾಣವಾಗಿರುತ್ತವೆ. ಇವುಗಳು ಕಣ್ಣಿಗೆ ಕಾಣದಂತಹ ಅನೇಕ ಗುಪ್ತ ರೋಗಗಳನ್ನು ಹೊಂದಿರುತ್ತವೆ. ಉದಾಹರಣೆಗೆ ಕ್ಷಯ, ಸಾಂಸರ್ಗಿಕ ಗರ್ಭಪಾತ, ಇತ್ಯಾದಿ. ಇಂತಹ ದನಗಳಿಂದ ಕರೆಯಲ್ಪಟ್ಟ ಹಾಲಿನಲ್ಲೂ ಆ ಎಲ್ಲಾ ರೋಗಾಣುಗಳ ಗುಣಲಕ್ಷಣಗಳು ಕಂಡು ಬರುತ್ತವೆ. ಮತ್ತೊಂದೆಡೆ ಹೆಚ್ಚಿನ ವಿದೇಶಿ ದನಗಳಲ್ಲಿ ಅಪೌಷ್ಟಿಕತೆಯ ಲಕ್ಷಣಗಳು ಎದ್ದು ಕಾಣುತ್ತವೆ. ಹೀಗಾಗಿ ಅದರಿಂದ ಉತ್ಪಾದನೆಯಾಗುವ ಹಾಲಿನ ಗುಣಮಟ್ಟ ಹೆಚ್ಚಿಸಲು, ಕೆಡದಂತೆ ಇಡಲು ಮತ್ತು ದೂರದ ಊರಿಗೆ ಸಾಗಿಸಲು ಅವುಗಳ ದೇಹಕ್ಕೆ ಹಾನಿಕಾರಕವಾದ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಉದಾಹರಣೆಗೆ, ಯೂರಿಯಾ, ಫಾರ್ಮಾಲಿನ್, ಇತ್ಯಾದಿ ವಿವಿಧ ಔಷಧಗಳು ಹಾಗೂ ಹಾರ್ಮೋನುಗಳ ಉಪಯೋಗದಿಂದಾಗಿ ಮೊದಲೇ ಕುಲಗೆಟ್ಟ ಹಾಲು ತನ್ನ ಕುಲವನ್ನು ಮತ್ತಷ್ಟು ಕೆಡಿಸಿಕೊಳ್ಳುತ್ತದೆ.

ಇತ್ತೀಚಿನ ದಿನಗಳಲ್ಲಿ ಹಾಲಿನ ಅತಿಯಾದ ಬಳಕೆ ಹಾಗೂ ಅದನ್ನು ಪಡೆಯಲು ವಿದೇಶಿ ತಳಿಗಳಿಗೆ ನೀಡುವ ಪ್ರಾಣಿಜನ್ಯ ಆಹಾರ ಮತ್ತು ಹಾರ್ಮೋನ್‌ಗಳು ಭೀಕರ ಪರಿಣಾಮವನ್ನು ಉಂಟುಮಾಡುತ್ತಿವೆ. ಹೆಚ್ಚಾಗಿ ಹಸುವಿನ ಕೆಚ್ಚಲಿನಲ್ಲಿ ಅಧಿಕ ಹಾಲು ಉತ್ಪಾದನೆಯಾಗಲು ಬಳಸುವ ಪಶು ಆಹಾರದಲ್ಲಿ ಕೃತಕ ವಿಟಮೀನ್ ಮತ್ತು ಪ್ರೋಟೀನಾಗಿ “ಮಿಲಮೀನ್”ನ್ನು ಅಕ್ರಮವಾಗಿ ಬಳಸಲಾಗುತ್ತಿದೆ. ಇದು ಪರೋಕ್ಷವಾಗಿ ನಮ್ಮ ದೇಹವನ್ನು ಸೇರುತ್ತಿರುವ ವಿಷವಾಗಿದೆ. ಇದಷ್ಟೇ ಅಲ್ಲದೆ ಕರೆದ ಹಾಲು ಒಂದೆರಡು ದಿನಗಳ ನಂತರವೂ ಉಪಯೋಗವಾ ಗುವಂತಾಗಲೂ ಅದರಲ್ಲಿನ ಉಪಯುಕ್ತ ಅಂಶಗಳನ್ನೆಲ್ಲ ತೆಗೆದು ಅದಕ್ಕೆ ಹಲವು ರಾಸಾಯನಿಕಗಳನ್ನು ಸೇರಿಸಿ ಆನಂತರ ಅದನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ತುಂಬಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಇಂತಹ ಹಾಲು ಮಾನವನ ಸೇವನೆಗೆ ಯೋಗ್ಯವಾದುದಾಗಿದೆ ಎಂದು ನಂಬಲು ಸಾಧ್ಯವೇ..?

ಹಾಲನ್ನು ಹೆಚ್ಚಿಗೆ ಪಡೆಯುವ ಉದ್ದೇಶದಿಂದ ಅವುಗಳಿಗೆ ನೀಡುವ ಹಾರ್ಮೋನ್ ಇಂಜೆಕ್ಷನ್‌ನಿಂದ ಹಾಲಿನಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿ ಮನುಷ್ಯರಲ್ಲಿ ಹೃದಯಾಘಾತದ ಸಮಸ್ಯೆ ಹೆಚ್ಚಾಗುತ್ತಿರುವುದನ್ನು ಹಲವು ವೈದ್ಯಕೀಯ ವರದಿಗಳು ಬಹಿರಂಗಪಡಿಸಿವೆ. ಹೀಗಾಗಿ ಇತ್ತೀಚೆಗೆ ಭಾರತ ಸೇರಿದಂತೆ ವಿದೇಶಗಳಲ್ಲಿ ವೈದ್ಯರು ಹಾಲನ್ನು ಸೇವಿಸದಂತೆ ಸೂಚಿಸುತ್ತಿದ್ದಾರೆ. ಇದರೆಲ್ಲದರ ಪರಿಣಾಮವಾಗಿ ಇಂದು ವಿದೇಶದಲ್ಲಿ ಹಾಲಿನ ಉದ್ಯಮ ಕುಸಿದು ಬೀಳುತ್ತ್ತಿದ್ದು, ತಂಬಾಕು ಈಗ ಅವರಿಗೆ ಹಾಲಿಗಿಂತ ಹೆಚ್ಚಿನ ಲಾಭವನ್ನು ತರುವ ಉದ್ಯಮವಾಗಿ ಪರಿಣಮಿಸುತ್ತಿದೆ.

ದಿನಕ್ಕೆ 25 ರಂದ 30 ಲೀಟರ್ ಹಾಲು ಕೊಡುವ ದನವೊಂದಕ್ಕೆ ನೀಡುವ ಔಷಧಿಗಳು ಮತ್ತು ರಾಸಾಯನಿಕಗಳು ನಾವು ಕುಡಿಯುವ ಹಾಲಿನಲ್ಲಿಯೂ ಬರುತ್ತದೆ. ಒಮ್ಮೆ ವಿದೇಶಿ ದನಗಳಿಗೆ ಕೆಚ್ಚಲು ಬಾವು ಬಂದರೆ 4 ರಿಂದ 5 ದಿನ “ಜೆಂಟಾಮೈಸಿನ್”, “ಟೆಟ್ರಾಸೈಕ್ಲಿನ್”, “ಸಲ್ಫಾ” ಮುಂತಾದ ಲಸಿಕೆಗಳನ್ನು ಹಾಕುವುದಷ್ಟೇ ಅಲ್ಲದೆ ಅದೆಲ್ಲಕ್ಕಿಂತ ಹೆಚ್ಚಿನ ಶಕ್ತಿಶಾಲಿಯಾದ ಅತ್ಯಾಧುನಿಕ ರಸಾಯನಿಕಗಳ ಪ್ರಯೋಗಗಳನ್ನು ಮಾಡಲಾಗುತ್ತದೆೆ. ಕಾನೂನು ಪ್ರಕಾರ ಈ ಔಷದಿಗಳ ಪ್ರಯೋಗಕ್ಕೊಳಗಾದ ದನದ ಹಾಲನ್ನು ಇಂತಿಷ್ಟು ದಿನ ಮನುಷ್ಯ ಉಪಯೋಗಿಸಕೂಡದು ಎಂಬುದಾಗಿ ಇದೆ. ಆದರೆ ಇದನ್ನು ಯಾರು ಪಾಲಿಸುವುದಿಲ್ಲ. ಅಂದಿನ ಸಂಪೂರ್ಣ ಹಾಲನ್ನು ಹಾಲು ಸಂಗ್ರಹ ಘಟಕಕ್ಕೋ ಅಥವಾ ಮಾರುವುದನ್ನೋ ಪ್ರತಿಯೊಬ್ಬ ಪಶುಪಾಲಕರು ಮಾಡುತ್ತಾರೆ.

ಇದರಿಂದ ಹಾಲು ಅಮೃತವಾಗದೇ ವಿಷವಾಗುತ್ತದೆ. 10 ರಿಂದ 15 ವಿದೇಶಿ ದನಗಳನ್ನು ಸಾಕುವವರ ಬಳಿ ಒಬ್ಬ ಪಶುವೈದ್ಯನಲ್ಲಿರುವ ಔಷಧಿಗಳಿಗಿಂತಲೂ ಹೆಚ್ಚಿನ ಔಷಧಿಗಳ ಸಂಗ್ರಹ ಇರುವುದೇ ಇದಕ್ಕೆ ಸಾಕ್ಷಿಯಾಗಿದೆ. ಹೀಗೆ ಪ್ರತಿನಿತ್ಯ ವಿವಿಧ ರಾಸಾಯನಿಕಗಳನ್ನು ಮತ್ತು ಆಂಟಿ ಬಯೋಟಿಕ್‌ಗಳನ್ನು ತಿನ್ನುವ ದನದ ಹಾಲು ಖಂಡಿತವಾಗಿಯೂ ಹಾನಿಯುಂಟು ಮಾಡುವುದಿಲ್ಲವೇ..?

ಹಾಗೆಯೇ ವಿದೇಶಿ ತಳಿಗಳಿಂದ ಹೆಚ್ಚಿನ ಹಾಲನ್ನು ಪಡೆಯುವ ಉದ್ದೇಶದಿಂದ ನಿರ್ಬಂಧಿಸಲ್ಪಟ್ಟಂತಹ “ಆಕ್ಸಿಟೋಸಿನ್” ಮತ್ತು “ಪಿಟೋಸಿನ್” ಎಂಬ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ಇದರ ಪ್ರಭಾವ ಹಾಲಿನಲ್ಲಿ 24 ಘಂಟೆಯವರೆಗೂ ಇರುತ್ತದೆ. ಹೀಗಾಗಿ ನಿರಂತರ ಈ ಹಾಲನ್ನು ಸೇವಿಸುವುದರಿಂದ ಇದರಲ್ಲಿರುವ ಹಾನಿಕಾರಕ ಹಾರ್ಮೋನ್ ಮನುಷ್ಯನ ಶರೀರದಲ್ಲಿ ಸೇರುತ್ತದೆ. ಇದರಿಂದ ಪುರುಷರಲ್ಲಿ ಸ್ತ್ರೀಯ ಗುಣಗಳು, ಮಹಿಳೆಯರಲ್ಲಿ ಬಂಜೆತನದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರ ದುಷ್ಟರಿಣಾಮದ ಅರಿವಿದ್ದರೂ ಇಂದಿಗೂ ಹಲವು ಪಶುಪಾಲಕರು ಈ ಲಸಿಕೆಗಳನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಇಂತಹ ಹಾಲು ಹಾಲು ಮಾನವ ಜನಾಂಗಕ್ಕೆ ಅಪಾಯಕಾರಿಯಾದುದಾಗಿದೆ. ಹೀಗೆ ಜೀವಕ್ಕೆ ಅಮೃತವಾಗಬೇಕಾಗಿದ್ದ ಒಂದು ಅಪರೂಪದ ಪೇಯ ಜೀವಕ್ಕೆ ಮಾರಕವಾಗುತ್ತಿದೆ.

ಈ ಕುರಿತಂತೆ ಪ್ರಸಿದ್ಧ ಗೋ ಚಿಕಿತ್ಸರಾದ “ಡಾ.ಕೆ.ಪಿ.ತೋಮರ್”ರವರು “ಈ ಇಂಜೆಕ್ಷನ್ ಪಶುಗಳಿಗೆ ಮಾರಕವಾಗಿದ್ದು, ಇದರಲ್ಲಿ ಕೆಲ ಹಾರ್ಮೋನ್‌ಗಳಿದ್ದು ಅವು ಪಶುಗಳನ್ನು ಬೇಗನೆ ವೃದ್ದಾಪ್ಯಕ್ಕೆ ದೂಡುತ್ತವೆ ಮತ್ತು ಇಂಜೆಕ್ಷನ್‌ನ ಪ್ರಮಾಣ ಹೆಚ್ಚಾದರೆ ಪಶುಗಳು ಸಾಯಲು ಬಹುದು” ಎಂಬುದಾಗಿ ತಿಳಿಸಿದ್ದಾರೆ. ಹಾಗೆಯೇ ಇನ್ನೊಬ್ಬ ಪ್ರಸಿದ್ದ ಗೋ ಚಿಕಿತ್ಸಕರಾದ “ಡಾ.ಗೋಪಿ”ಯವರು ಈ ಇಂಜೆಕ್ಷನ್‌ಗಳನ್ನು ಯಾವಾಗ ಹಸುಗಳಿಗೆ ಪ್ರಸವ ಸರಿಯಾಗಿ ಆಗುವುದಿಲ್ಲವೋ ಆಗ ಮಾತ್ರ ಬಳಸಬೇಕೆಂದಿದ್ದಾರೆ. ಹಾಗಾದರೆ ದಿನನಿತ್ಯ ಇಂತಹ ಹಾಲನ್ನು ಸೇವಿಸುವ ಮನುಷ್ಯನ ಗತಿಯೇನು..?

ಶುದ್ಧವಾದ ಹಾಲು ಹೇಗೆ ನಮಗೆ ಅಮೃತ ಪ್ರಾಯವಾಗಿರುವುದೋ ಹಾಗೆಯೇ ಅಶುದ್ಧವಾದ ಹಾಲು ಸಹ ವಿಷಕಾರಿಯಾಗಿ ಪರಿಣಮಿಸುತ್ತದೆ. ಹಾಲಿನಲ್ಲಿ ಅನೇಕ ರೋಗಗಳಿಗೆ ಕಾರಣವಾದ ಸೂಕ್ಷ್ಮ ಜೀವಿಗಳು ಸೇರಿ, ವೃದ್ಧಿಹೊಂದಿ ಆ ಹಾಲನ್ನು ಅಯೋಗ್ಯ ಮತ್ತು ಅಪಾಯಕಾರಿಯಾದ ವಸ್ತುವನ್ನಾಗಿ ಮಾಡುತ್ತವೆ. ಹಾಲು ಕೊಡುವ ಹಸುವು ರೋಗದಿಂದ ನರಳುತ್ತಿರುವಾಗ, ಅದರ ಕೆಚ್ಚಲು, ಮೊಲೆಗಳು ಹುಣ್ಣಾಗಿ ಕೀವಿನಿಂದ ಕೂಡಿದ್ದಾಗ, ಹಾಲು ಕರೆಯುವಾಗ ಹಾಲಿನ ಪಾತ್ರೆ ತೊಳೆಯದೆ ಅಶುದ್ಧವಿದ್ದಾಗ, ಹಾಲನ್ನು ಮಾರಾಟಕ್ಕೆ ಸಾಗಿಸುವಾಗ ಹಾಗೂ ಹಾಲು ಕರೆಯುವ ಸ್ಥಳ ಕಲ್ಮಶವಾಗಿದ್ದಲ್ಲಿ ಹಾಲು ತನ್ನ ಪರಿಶುದ್ಧತೆಯನ್ನು ಕಳೆದು ಕೊಳ್ಳುತ್ತದೆ. ಇಂತಹ ಅಶುದ್ಧವಾದ ಹಾಲಿನ ಸೇವನೆಯಿಂದ ಸೇವಿಸುವವರಲ್ಲಿ ವಿಷಮಶೀತ ಜ್ವರ, ಆಮಶಂಕೆ, ಗಂಟಲು ರೋಗ, ಭೇದಿ, ದಿಫ್ತೀರಿಯಾ, ಕರುಳು ಮತ್ತು ಜಠರ ಸಂಬಂಧಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾದುದಾಗಿದೆ.

ವಿದೇಶಿ ತಳಿಗಳ ಹಾಲಿನ ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ ಎಂಬುದಾಗಿ ಸ್ವತಃ “ಅಮೇರಿಕಾದ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್”ನ ವಿಜ್ಞಾನಿಗಳು ತಮ್ಮ ಸಂಶೋಧನೆಯಿಂದ ಸಾಬೀತುಪಡಿಸಿ ತೋರಿಸಿದ್ದಾರೆ. ಹಾಗೆಯೇ ವಿದೇಶಿ ದನವಾದ `ಜರ್ಸಿ’ ಹಸುವಿನ ಹಾಲಿನಿಂದ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿರುವುದನ್ನು ದೃಢಪಡಿಸಿದ್ದಾರೆ. ಅಷ್ಟೇ ಅಲ್ಲದೆ ಶಿಶು ತಾಯಿಯ ಗರ್ಭದಲ್ಲಿರುವಾಗಲೇ ಜರ್ಸಿ ಹಸುಗಳ ಹಾಲು ಪರಿಣಾಮ ಬೀರಿ ಹುಟ್ಟುವ ಮಗುವಿಗೆ ಕ್ಯಾನ್ಸರ್ ಬರಿಸುವ ಸಾಧ್ಯತೆ ಇರುವುದನ್ನು ಬಹಿರಂಗಪಡಿಸಿದ್ದಾರೆ. ಡಾ|| ಕೆ.ಪಿ. ವೆಟರಿನರಿ ಕಾಲೇಜಿನ ವಿಜ್ಞಾನಿಯೊಬ್ಬರು ಹೇಳುವ ಪ್ರಕಾರ “ಪ್ರಾಸ್ಟೇಟ್ ಕ್ಯಾನ್ಸರ್‌ನ ಸಂಭವನೆ ಪ್ರತಿವರ್ಷ 3.3% ರಷ್ಟು ಈ ವಿದೇಶಿ ತಳಿಗಳಿಂದ ಮತ್ತು ಅವುಗಳ ಹಾಲಿನಿಂದ ಹೆಚ್ಚುತ್ತಿದೆ”ಯಂತೆ. ಹಾಗಾದರೆ ಇಂತಹ ಪಶುಗಳ ಹಾಲನ್ನು ಪ್ರತಿನಿತ್ಯ ಸೇವಿಸುವ ನಾವುಗಳು ಇನ್ನೆಷ್ಟು ಸುರಕ್ಷಿತರು…?? ಒಮ್ಮೆ ಯೋಚಿಸಿ…??

ಇದನ್ನೂ ಓದಿ | ಗೋ ಸಂಪತ್ತು | ಅಮೃತಂ ಕ್ಷೀರ ಭೋಜನಂ..!!

Exit mobile version