ಒಂದು ಸಮೀಕ್ಷೆಯ ಪ್ರಕಾರ ಸ್ವಾತಂತ್ರ್ಯ ಬಂದಾಗ ಇಲ್ಲಿ ಹಾಲು ಕೊಡುವ ಪಶುಗಳ ಸಂಖ್ಯೆ 155.25ಮಿಲಿಯನ್ ಇತ್ತು. ಅದು 1992ರಲ್ಲಿ 204.6 ಮಿಲಿಯನಷ್ಟು ಬೆಳೆಯಿತು. ಆದರೆ 1997 ರಲ್ಲಿ ಹಾಲು ಕೊಡುವ ಪಶುಗಳ ಸಂಖ್ಯೆ 198 ಮಿಲಿಯನ್‌ಗೆ ಇಳಿಯಿತು.
ಮತ್ತೊಂದೆಡೆ ಉತ್ಪಾದನೆಯಾಗುತ್ತಿರುವ ಒಟ್ಟು ಹಾಲಿನಲ್ಲಿ ಶೇಕಡಾ 50ರಷ್ಟು ಗ್ರಾಮೀಣ ಭಾಗದಲ್ಲೆ ಬಳಕೆಯಾಗುತ್ತಿದ್ದರೆ, ಇನ್ನುಳಿದ ಶೇಕಡಾ ಮಾತ್ರ 50 ಮಾರುಕಟ್ಟೆಗೆ ಬರುತ್ತಿದೆ. ಇಷ್ಟಾದರೂ ಸಹ ನಮ್ಮ ದೇಶದಲ್ಲಿ ಶೇಕಡಾ 76ರಷ್ಟು ಹಾಲು ಉತ್ಪಾದಿಸುವವರು ಇಂದಿಗೂ ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ.
“ಭಾರತದ ವೈದ್ಯಕೀಯ ಅನುಸಂಧಾನ ಸಂಸ್ಥೆ” ಮಾನವನಿಗೆ ದಿನವೊಂದಕ್ಕೆ ಸುಮಾರು 320 ಮಿಲಿ ಪೌಷ್ಟಿಕ ಹಾಲು ದೊರಕಬೇಕು ಎಂದು ಪ್ರತಿಪಾದಿಸಿದೆ. ಹಾಗೆಯೇ ಪ್ರತಿಯೊಬ್ಬರ ಆರೋಗ್ಯಕ್ಕೆ ದಿನಕ್ಕೆ ಸುಮಾರು 16 ಔನ್ಸ್ ನಷ್ಟು ಹಾಲು ಅವಶ್ಯಕವೆಂದು ಹಲವು ಆಹಾರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಪ್ರಸಕ್ತ ಸುಮಾರು ಇದರ ಅರ್ಧದಷ್ಟು ಅಂದರೆ 160 ಮಿಲಿ ಮಾತ್ರ ಸಿಗುತ್ತಿದೆ. ಆಸ್ಟ್ರೇಲಿಯಾದಲ್ಲಿ 10 ಔನ್ಸ್, ಅಮೇರಿಕದಲ್ಲಿ 17 ಔನ್ಸ್ ಮತ್ತು ಕೆನಡಾದಲ್ಲಿ 22ಔನ್ಸ್ ನಷ್ಟು ಹಾಲು ಪ್ರತಿಯೊಬ್ಬರ ಪಾಲಿಗೆ ನಿತ್ಯವೂ ಸಿಗುತ್ತಿದ್ದರೆ ನಮ್ಮಲ್ಲಿ 3 ಔನ್ಸ್ ನಷ್ಟು ಹಾಲು ಮಾತ್ರ ಸಿಗುತ್ತಿದೆ. ಇದರಿಂದ ನಮ್ಮಲ್ಲಿ ಹಾಲಿನ ಕೊರತೆ ಎಷ್ಟು ಉಗ್ರ ಸ್ವರೂಪಿಯದ್ದಾಗಿದೆ ಎಂಬುದರ ಅರಿವಾಗುತ್ತದೆ.
ಭಾರತದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನಲ್ಲಿ ಪ್ರತಿನಿತ್ಯ ಸುಮಾರು 7 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಆದರೆ ಇಲ್ಲಿನ ಬೇಡಿಕೆ ಸುಮಾರು 9 ಲಕ್ಷ ಲೀಟರ್‌ಗೂ ಹೆಚ್ಚಿದೆ. ಅಂದರೆ 2 ಲಕ್ಷ ಲೀಟರ್‌ಗೂ ಮೀರಿದ ಹಾಲಿನ ಕೊರತೆಯಿದೆ ಎಂದಾಯಿತಲ್ಲವೆ. ಆ ಕೊರತೆಯನ್ನು ನೀಗಿಸಲು ಇಲ್ಲಿ ಸಾಕಷ್ಟು ನಕಲಿ ಹಾಲಿನ ದಂದೆಗಳು ನಾಯಿಕೊಡೆಯಂತೆ ತಲೆ ಎತ್ತಿವೆ, ಎತ್ತುತ್ತಿವೆ.
“ನ್ಯಾಷನಲ್ ಡೈರಿ ಡೆವಲಪ್‌ಮೆಂಟ್ ಬೋರ್ಡ್”ನ ಚೇರ್ಮನ್ ಆಗಿದ್ದ ಅಮೀನ ಪಟೇಲ್ ರವರು “ಭಾರತ ಪ್ರಪಂಚದಲ್ಲಿ ಹಾಲು ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲಿದ್ದರೂ ಮುಂದಿನ ದಿನಗಳಲ್ಲಿ ಬೇಕಾಗುವಷ್ಟು ಹಾಲನ್ನು ಪೂರೈಸಲು ಸಾಧ್ಯವೇ ಇಲ್ಲ. ಹಾಲಿನ ಬೇಡಿಕೆ ಅದರ ಉತ್ಪಾದನೆಯ ಮಟ್ಟಕ್ಕಿಂತ ಹೆಚ್ಚಿದ್ದು ಅದು ದೇಶದಲ್ಲಿ ಶೀಘ್ರವಾಗಿ ಬೆಳೆಯುತ್ತಿದೆ. ದೇಶದಲ್ಲಿ ಹಾಲಿನ ಉತ್ಪಾದನೆಯು ಕಳೆದ ದಶಮಾನಕ್ಕೆ ಹೋಲಿಸಿದರೆ ಶೇಕಡಾ 4 ರಷ್ಟು ಹೆಚ್ಚಿದೆ. ಆದರೆ ಅದರ ಬೇಡಿಕೆ ಇದರ ಎರಡರಷ್ಟಾಗಿದೆ.
ಹಾಗೆಯೇ ಅಂತರಾಷ್ಟ್ರೀಯ ಹಾಲು ಉತ್ಪಾದಕರು ಈಗಾಗಲೇ ಭಾರತದ ಬೇಡಿಕೆಯನ್ನು ಮನಗಂಡು ತಮ್ಮ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಕಾರಣ ಭಾರತ ಹಾಲನ್ನು ಮುಂದೊಂದು ದಿನ ಆಮದು ಮಾಡಿಕೊಳ್ಳುತ್ತದೆ ಎಂಬ ಭರವಸೆಯಲ್ಲಿ. ಆದರೆ ಹೊರ ದೇಶಗಳಿಂದಲೂ ಹಾಲನ್ನು ಆಮದು ಮಾಡಿಕೊಂಡರೂ ಸಹ ಅದು ಇಲ್ಲಿನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಭಾರತವು ಸ್ಥಳಿಯವಾಗಿಯೇ ಅದರ ಉತ್ಪಾದನೆಯ ಕಡೆ ಗಮನ ಹರಿಸ ಬೇಕಿದೆ” ಎಂಬುದಾಗಿ ಬೆಂಗಳೂರಿನಲ್ಲಿ ನಡೆದ 38ನೇ “ಡೈರಿ ಇಂಡಸ್ಟ್ರೀಸ್ ಕಾನ್‌ಫೆರೆನ್ಸ್ʼʼನಲ್ಲಿ ತಿಳಿಸಿದ್ದಾರೆ.
ಹಾಗೆಯೇ ಕೃಷಿ ತಜ್ಞ ದಿ. ಎಲ್. ನಾರಾಯಣ ರೆಡ್ಡಿಯವರು, “ನಮ್ಮ ದೇಶದ ಜನರಿಗೆ ಒಂದೆರಡು ಲೋಟ ಕಾಫಿ, ಟೀ, ಊಟಕ್ಕೆ ಮಜ್ಜಿಗೆ, ತುಪ್ಪ ಬಳಸುವುದಾಗಿದ್ದರೆ ನಮ್ಮ ದೇಶದಲ್ಲಿ ಉತ್ಪಾದನೆ ಯಾಗುತ್ತಿರುವ ಹಾಲಿನಲ್ಲಿ ಶೇಕಡಾ 20ರಷ್ಟು ಹಾಲು ಸಾಕಾಗುತ್ತಿತ್ತು. ಆದರೆ ಪಾಶ್ಚಿಮಾತ್ಯರ ಪೋಷಕಾಂಶಗಳ ಪಟ್ಟಿಯಂತೆ ಚಾಕಲೇಟ್, ಬರ್ಫಿ, ಕೆನೆ, ಕೋವ, ಪನ್ನೀರು, ಮೊಸರು, ಬೆಣ್ಣೆ ಸೇರಿದಂತೆ ಇನ್ನಿಲದ ಬೇಡದ ಬೇಡಿ ಕೆಗಳನ್ನು ಪೂರೈಸಲು ಹೆಚ್ಚಿನ ಹಾಲು ಉತ್ಪಾದನೆ ಮಾಡಲು ವಿದೇಶಿ ಮೂಲದ ಆಕಳನ್ನು ತರಿಸಿ ಮಿಶ್ರ ತಳಿ ಹಸುಗಳನ್ನು ಹೆಚ್ಚಿಸಲಾಯಿತು” ಎಂದಿದ್ದಾರೆ.
ಇದೆಲ್ಲವೂ ಇಲ್ಲಿ ಬೇಡಿಕೆ ಇರುವ ಶುದ್ಧ ಅಮೃತ ಸಮಾನ ಹಾಲಿನ ಮತ್ತು ಹಾಲೆಂಬ ಬಿಳಿ ದ್ರಾವಣದ ಕುರಿತಾದ ಚರ್ಚೆಯಾದರೆ, ವಿದೇಶದಲ್ಲಿ ಭಾರತೀಯ ತಳಿಗಳ ಹಾಲಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗುತ್ತಿದೆ. ಇದರೊಂದಿಗೆ ಎ1 ಮತ್ತು ಎ2 ಹಾಲಿನ ಸತ್ಯಾಸತ್ಯತೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ವಿದೇಶಿಗರು ಅಲ್ಲಿರುವ ವಿದೇಶಿ ದನಗಳ ಹಾಲಿನ ದುಷ್ಪರಿಣಾಮವನ್ನು ಮನಗಂಡು ಭಾರತೀಯ ಗೋತಳಿಗಳನ್ನು ಸಂವರ್ಧಿಸಿಕೊಳ್ಳುವ ಮೂಲಕ ಹಾಲಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.
ಪ್ರಪಂಚದಲ್ಲಿ ಅತೀ ಹೆಚ್ಚು ಹಾಲನ್ನು ಫಿನ್‌ಲ್ಯಾಂಡ್‌ನ ಜನ ಬಳಸುತ್ತಾರೆ. ಆದರೆ ಈಗ ಅಲ್ಲಿ ಡಯಾಬೀಟೀಸ್‌ನ ಸಮಸ್ಯೆ ಅಲ್ಲಿನ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಅದೂ 40 ವರ್ಷ ದಾಟಿದವರ ಮೇಲಲ್ಲ, ಹಾಲು ಗಲ್ಲದ ಹಸುಳೆಗಳಲ್ಲಿ. ಅದಕ್ಕೆ ಅವರು ಕಂಡುಕೊಂಡ ಕಾರಣ ಅವರು ಬಳಸುತ್ತಿದ್ದ ಹಾಲಿನಲ್ಲಿರುವ ಒಂದು ಪ್ರೋಟೀನ್, ಇನ್ಸುಲಿನ್‌ನ ರಕ್ತದಲ್ಲಿ ಸಕ್ಕರೆ ನಿಯಂತ್ರಿಸುವ ಹಾರ್ಮೋನ್ ರಚನೆಯ ಸ್ವಾಮ್ಯವನ್ನು ಹೊಂದಿದ್ದು, ಇನ್ಸುಲಿನ್‌ನನ್ನು ನಾಶಪಡಿಸುತ್ತಿದೆ ಎಂಬುದಾಗಿದೆ. ಇದರ ಪರಿಣಾಮ ಪ್ರತಿನಿತ್ಯ ಹಾಲನ್ನು ಸೇವಿಸುವ ಹಸುಳೆಗಳು ಅದರ ಜೀವನದುದ್ದಕ್ಕೂ ನಿರಂತರ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದು ಕೊಳ್ಳಬೇಕಾಗಿದೆ. ಹಾಗಾದರೆ ಅವರು ಕುಡಿಯುತ್ತಿದ್ದ ಹಾಲಾದರೂ ಯಾವುದು?
ವಿಶ್ವದಾದ್ಯಂತ ಭಾರತೀಯ ತಳಿಗಳು ನೀಡುವ ಹಾಲನ್ನು ಎ2 ಎಂಬುದಾಗಿಯೂ ವಿದೇಶಿ ತಳಿಗಳಿಂದ ದೊರೆಯುವ ಹಾಲನ್ನು ಎ1 ಎಂಬುದಾಗಿಯೂ ವಿಂಗಡಿಸಲಾಗಿದೆ. ವಿದೇಶಿ ತಳಿಯ ಹಾಲಾದ ಎ1 ಹಾಲಿನಲ್ಲಿ 7 ರೀತಿಯ ಅಮೈನೋ ಆಮ್ಲಗಳಿದ್ದು, ಅದರಲ್ಲಿನ ಬಿ.ಸಿ.ಎಂ.-7(ಬೀಟಾ ಕ್ಯಾನೋ ಮಾರ್ಫಿನ್) ಎಂಬ ರಾಸಾಯನಿಕವು ಮನುಷ್ಯನ ಜೀರ್ಣಕ್ರಿಯೆಯ ಮೇಲೆ ಮತ್ತು ಮೆದುಳಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗೆಯೇ ಇದು ಟೈಪ್ ಒನ್ ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆಗಳು, ಆಟಿಸಮ್ ಮತ್ತು ಇತರ ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ ಮಕ್ಕಳಲ್ಲಿ ಇಷ್ಟೇ ಅಲ್ಲದೆ ಇನ್ನಿತರ ಜೀರ್ಣ ಸಂಬಂಧಿ ಕಾಯಿಲೆಗಳನ್ನು ಹುಟ್ಟುಹಾಕುತ್ತದೆ. ಹಾಗೆಯೇ ಕಿವಿಗೆ ಸಂಬಂಧಿಸಿದ ಸೋಂಕು ರೋಗಗಳು ಮತ್ತು ಗಂಟಲಿನಲ್ಲಿ ಉರಿಯೂತದಿಂದ ಗ್ರಂಥಿಗಳಲ್ಲಿ ಉಂಟಾಗುವ ಗಡ್ಡೆಗಳಿಗೆ ಹಾಗೂ ಶೀತ ಸಂಬಂಧಿ ಕಾಯಿಲೆಗಳಿಗೆ ಎ1 ಹಾಲಿನ ಸೇವನೆಯೇ ಪ್ರಮುಖ ಕಾರಣ ಎಂಬುದಾಗಿ ಈ ವಿಷಯದ ಕುರಿತು ಹಲವು ವರ್ಷಗಳಿಂದ ಸಂಶೋಧನೆ ಮಾಡಿರುವ ನ್ಯೂಜಿಲ್ಯಾಂಡ್‌ನ ಪಶು ವಿಜ್ಞಾನಿ ಫ್ರೊಫೆಸರ್ ಕೆಥ್‌ವುಡ್ ಫೋರ್ಡ್ ಸಾಬೀತು ಪಡಿಸಿದ್ದಾರೆ.
ಕೆಥ್‌ವುಡ್ ಫೋರ್ಡ್ ತಮ್ಮ ವಾದವನ್ನು ಮುಂದುವರೆಸುತ್ತಾ, ಡುಬ್ಬವಿರುವ ಭಾರತೀಯ ಗೋವಿನ ಎ2 ಹಾಲು ಆರೋಗ್ಯಕ್ಕೆ ಅತ್ಯುತ್ತಮವಾಗಿದ್ದು ಇದು ಬಿ.ಸಿ.ಎಂ.-7 ಎಂಬ ರಾಸಾಯನಿಕದಿಂದ ಮುಕ್ತವಾದುದು ಎಂಬುದಾಗಿ ತಿಳಿಸಿದ್ದಾರೆ. ಹಾಗೆಯೇ ಇದರಲ್ಲಿ ಸೂಕ್ಷ್ಮಾಣು ಜೀವಿಗಳು ಅಧಿಕವಾಗಿದ್ದು ಖನಿಜಾಂಶಗಳಿಂದ ಕೂಡಿದ್ದು, ಅತಿ ಹೆಚ್ಚು ಮ್ಯಾಗ್ನಿಶಿಯಂನಿಂದ ಕೂಡಿದೆ. ಅಷ್ಟೇ ಅಲ್ಲದೆ ಮೂಳೆಯಲ್ಲಿನ ಕ್ಯಾಲ್ಸಿಯಂನ ಕೊರತೆಯನ್ನು ನೀಗಿಸುತ್ತಾ, ಹೃದಯದ ಚಲನೆಯನ್ನು ಸರಾಗವಾಗಿಸುತ್ತದೆ ಎಂಬುದಾಗಿ ತಾವು ಬರೆದ “ಡೆವಿಲ್ ಇನ್ ದ ಮಿಲ್ಕ್ʼʼ ಎಂಬ ಪುಸ್ತಕದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ.
ನಿಮಗಿದು ತಿಳಿದಿರಲಿ, ನ್ಯೂಜಿಲ್ಯಾಂಡ್ ವಿಶ್ವದಲ್ಲೇ ಅತಿ ಹೆಚ್ಚು ಹಾಲನ್ನು ಉತ್ಪಾದಿಸುವ ರಾಷ್ಟ್ರ. ನ್ಯೂಜಿಲ್ಯಾಂಡ್‌ನ ಶೇಕಡಾ 40ರಷ್ಟು ವಿದೇಶೀ ವ್ಯಾಪಾರ ಹಾಲಿನ ರಫ್ತಿನ ಮೇಲೆ ಅವಲಂಬಿತವಾಗಿದೆ. ಇತ್ತೀಚೆಗೆ ವಿಜ್ಞಾನಿಗಳು ಕೈಗೊಂಡ ಹಾಲಿನ ಮೇಲಿನ ಈ ಅವಿಷ್ಕಾರದಿಂದ ಅಲ್ಲೀಗ ಹಾಲಿನ ರಫ್ತು ಕುಂಠಿತವಾಗಿದೆ. ವೈದ್ಯರು ಈ ಹಾಲನ್ನು ಉಪಯೋಗಿಸದಂತೆ ಜನರಿಗೆ ಸಲಹೆ ನೀಡುತ್ತಿದ್ದಾರೆ. ‘ಫಾಂಟರ‍್ರಾ’ ಎಂಬ ಸಂಸ್ಥೆ ನ್ಯೂಜಿಲ್ಯಾಂಡಿನಲ್ಲಿ ಇದರ ಸಂಶೋಧನೆಯನ್ನು ಪ್ರಾರಂಭಿಸಿದ್ದು, ಇದು ಸಹಾ ಡೈರಿ ಹಾಲಿನ ಬಗ್ಗೆ ಆತಂಕವ್ಯಕ್ತಪಡಿಸಿದೆ.
ಅಷ್ಟೇ ಅಲ್ಲದೆ ಬಿ.ಸಿ.ಎಂ.-7 ಅಂಶವಿರುವ ಹಾಲು ಯೂರೋಪಿನ ತಳಿಗಳು ಮತ್ತು ಅವುಗಳ ಕ್ರಾಸ್‌ಬ್ರೀಡ್‌ನಲ್ಲಿ ಕಂಡುಬರುತ್ತದೆ ಎಂಬುದಾಗಿ ದೃಢಪಡಿಸಿದೆ. ಇದನ್ನೆಲ್ಲಾ ಮನಗಂಡ ಅಲ್ಲಿಯ ಸರ್ಕಾರ ಯಾವುದೇ ರಾಸಾಯನಿಕ ಗಳಿಲ್ಲದ ಭಾರತೀಯ ತಳಿಯ ಹಾಲಾದ ಎ-2 ಹಾಲಿನ ಉತ್ಪಾದನೆಗೆ ಆಸಕ್ತಿ ತೋರುತ್ತಿರುವುದಷ್ಟೇ ಅಲ್ಲದೆ, ಜನರಿಗೆ ಆ ಹಾಲನ್ನೇ ಬಳಸಲು ಸೂಚಿಸಿದೆ. ಈ ಬೆಳವಣಿಗೆಯ ನಂತರ ಇಂದು ವಿಶ್ವದಾದ್ಯಂತ ಭಾರತೀಯ ಗೋತಳಿಗಳ ಹಾಲಿನ ಮಹತ್ವವನ್ನು ಜಗತ್ತು ಅರಿಯುವಂತಾಗಿದೆ. ದುರಾದೃಷ್ಟವಶಾತ್ ಭಾರತ ಇಂದಿಗೂ ವಿದೇಶಿ ತಳಿಗಳನ್ನೇ ನೆಚ್ಚಿಕೊಂಡು ಕುಳಿತಿರುವುದು ಮಾತ್ರ ವಿಪರ್ಯಾಸ!
ಇದನ್ನೂ ಓದಿ : ಗೋ ಸಂಪತ್ತು | ವಿದೇಶಿ ಗೋವಿನ ತಳಿಗಳ ಹಾಲು-ಹಾಲಾಹಲ!