Site icon Vistara News

ಗೋ ಸಂಪತ್ತು : ಎಚ್ಚರ! ನಕಲಿ ಹಾಲೂ ಮಾರುಕಟ್ಟೆಯಲ್ಲಿದೆ!

Milk Adulteration ಗೋ ಸಂಪತ್ತು

Milk Adulteration

ಕೆಲವು ವರ್ಷಗಳ ಹಿಂದೆ ಚೀನಾದಲ್ಲಿ “ಸನ್ಲುʼʼ ಎಂಬ ಖಾಸಗಿ ಡೈರಿ ಕಂಪನಿಯೊಂದು ಸೃಷ್ಟಿಸಿದ ಅವಾಂತರಗಳ ಬಗ್ಗೆ ಸಾಕಷ್ಟು ಜನರಿಗೆ ನೆನಪಿರಬಹುದು. ಆ ಕಂಪನಿ ತನ್ನ ವ್ಯಾಪಾರದ ಲಾಭಕ್ಕಾಗಿ ಕಂಡು ಕೊಂಡ ದಾರಿ, ಹೆಚ್ಚು ಕಡಿಮೆ ಲಕ್ಷಾಂತರ ಹಾಲುಗಲ್ಲದ ಹಸುಳೆಗಳ ಕಿಡ್ನಿ, ಲಿವರ್ ಮತ್ತು ಮೆದುಳನ್ನು ಪೂರ್ತಿಯಾಗಿ ಕೊಂದು ಹಾಕಿತ್ತು.

ಮುಂದೆ ಚೀನಾ ಸರ್ಕಾರ ಆ ಕಂಪನಿ ನಡೆಸಿದ ಹೀನ ಕೃತ್ಯದ ಬಗ್ಗೆ ತಜ್ಞರ ಸಮಿತಿಯೊಂದನ್ನು ರಚಿಸಿ ತನಿಖೆಗೆ ಆದೇಶಿಸಿದಾಗ ಈ ಕಂಪನಿಯೊಂದಿಗೆ ಇತರ 21 ಕಂಪನಿಗಳು ಈ ಪ್ರಕ್ರಿಯೆಯಲ್ಲಿ ತೊಡಗಿದ್ದುದು ಕಂಡು ಬಂದಿತ್ತು. ಆನಂತರ ಇಡೀ “ಸನ್ಲು ಕಂಪನಿ’ ಡೇರಿ ಉದ್ಯಮವನ್ನೇ ಚೀನಾ ಸರ್ಕಾರ ನಿರ್ಬಂಧಿಸಿತು.

ಇದಕ್ಕೆಲ್ಲಾ ಕಾರಣ ಕಳೆದೊಂದು ದಶಕದಲ್ಲಿ ಚೀನಾದಲ್ಲಿ ಹಾಲಿನ ಉತ್ಪಾದನೆ ಬಹಳಷ್ಟು ಕುಸಿದಿತ್ತು. ಒಂದು ಕಡೆ ಕ್ಷೀಣಿಸುತ್ತಿರುವ ಹಸು ಮತ್ತು ಇತರ ಹೈನುಗಳ ಸಂತತಿಯಾದರೆ, ಮತ್ತೊಂದೆಡೆ ಸರಿಯಾದ ಹಾಲು ಶೇಖರಣಾ ತಂತ್ರಜ್ಞಾನದ ಕೊರತೆಯಾಗಿತ್ತು. ಇದೆಲ್ಲದರ ಪರಿಣಾಮ ಅಲ್ಲಿ ಹಾಲು ದುಬಾರಿ ಪದಾರ್ಥವಾದದ್ದಲ್ಲದೆ ಶ್ರೀಮಂತರು ಮಾತ್ರ ಕುಡಿಯಬಲ್ಲ ಪೇಯವಾಗಿತ್ತು. ಹೀಗಾಗಿ ಅಲ್ಲಿ ಹಾಲಿನ ಹಾಹಾಕಾರ ಶುರುವಾಗತೊಡಗಿತ್ತು. ಅದನ್ನೇ ಬಂಡವಾಳವನ್ನಾಗಿಸಿಕೊಂಡ ಹತ್ತಾರು ಡೇರಿ ಕಂಪನಿಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡವು. ಅವುಗಳಲ್ಲಿ ಮೇಲೆ ತಿಳಿಸಿದ “ಸನ್ಲುʼʼ ಬ್ರಾಂಡ್ ಹಾಲು ಕೂಡ ಒಂದು.

ಸನ್ಲು ಕಂಪನಿಯ ಕೃಪೆಯಿಂದ ಚೀನಾ ದೇಶದ ಜನರಿಗೆ ಅಗ್ಗದ ದರದಲ್ಲಿ ಹಾಲು ಸಿಗುವಂತಾಗಿತ್ತು. ಹೀಗಾಗಿ ಕೆಲವೇ ದಿನಗಳಲ್ಲಿ “ಸನ್ಲುʼʼ ಎಂಬ ಹಾಲಿನ ಬ್ರಾಂಡ್ ಚೀನಾದ ಅರ್ಧಭಾಗದಲ್ಲಿ ಜನಪ್ರಿಯವಾಗಿ ಹೋಯಿತು. ಎಷ್ಟೆಂದರೆ “ಸನ್ಲು ಕಂಪನಿʼʼ ಬಡವರ ಪಾಲಿನ “ಕಾಮಧೇನುʼʼ ಎಂಬುದಾಗಿ ಬಹಳಷ್ಟು ಮಂದಿ ಭಾವಿಸಿಬಿಟ್ಟರು. ಆದರೆ ಅವರ ಆ ಸಂತೋಷ ಅವರ ಬಾಳಲ್ಲಿ ಬಹಳ ದಿನ ಉಳಿಯಲಿಲ್ಲ. ಆ ಹಾಲು ಹಾಲಾಗಿ ಉಳಿಯದೆ “ಟೆಸ್ಟ್ ಟ್ಯೂಬ್ ಮಿಲ್ಕಾಗಿತ್ತುʼʼ, “ಸಿಂಥಿಟಿಕ್ʼʼ ಹಾಲಾಗಿತ್ತು. ಕುಡಿದವರ ಪಾಲಿನ ಹಾಲಹಲವಾಗಿತ್ತು. ವಿಕೃತ ಮನೋಭಾವದ ಡೇರಿ ಕಂಪನಿಯೊಂದು ಕೇವಲ ಹಣಕ್ಕಾಗಿಯೇ ತಯಾರಿಸಿದ ಪಕ್ಕಾ ವಿಷವಾಗಿತ್ತು.

“ಮೆಲಮಿನ್’ʼ ಎನ್ನುವುದು ಸಿಂಥಿಟಿಕ್ ರಾಸಾಯನಿಕದ ಹೆಸರು. “ಸನ್ಲು ಕಂಪನಿʼʼ ತಯಾರಿಸಿದ ಹಾಲಹಲದಲ್ಲಿದ್ದ ಪ್ರಮುಖ ವಿಷ ಪದಾರ್ಥವೇ ಇದಾಗಿತ್ತು. ಅದರ ಜೊತೆಗೆ “ಫೆವಿಕಾಲ್’, “ಡಿಟೆರ್ಜೆಂಟ್ ಪೌಡರ್ʼʼ, “ಸೋಡಿಯಂ ಹೈಡ್ರಾಕ್ಸೈಡ್ʼʼ, “ಹೈಡ್ರೋಜನ್ ಪೆರಾಕ್ಸೈಡ್ʼʼ, ಫಿಲ್ಟರ್ ಮಾಡಿದ “ವೆಜಿಟೇಬಲ್ ಆಯಿಲ್ʼʼ, “ಯೂರಿಯಾʼʼ, “ಕಾಸ್ಟಿಕ್ ಸೋಡಾʼʼ, “ಮಿಲ್ಕ್ ಪ್ಲೇವರ್ʼʼ ಮತ್ತು ಒಂದಿಷ್ಟು “ಉಪ್ಪುʼʼ ಹೀಗೆ ಹತ್ತಾರು ತರಹದ ವಿಷ ಸೇರಿಸಿದಾಗ ತಯಾರಾಗುವ ಜಿಗುಟು ಪೇಸ್ಟ್‌ಗೆ ನೀರು ಬೆರೆಸುತ್ತಾ ಹೋದರೆ “ಸಿಂಥಟಿಕ್ ಮಿಲ್ಕ್ʼʼ ಎಂಬ ಹಾಲಹಾಲ ತಯಾರಾಗುತ್ತದೆ. ಇದೇ ಸನ್ಲು ಕಂಪನಿಯ ಹಾಲಾಗಿತ್ತು.

ಇದರ ನಿರಂತರ ಸೇವನೆಯಿಂದ 2008 ರಷ್ಟೋತ್ತಿಗೆ ಚೀನಾದಾದ್ಯಂತ ಸುಮಾರು 3 ಲಕ್ಷಕ್ಕೂ ಹೆಚ್ಚು ಜನ ಇದರಿಂದ ತೊಂದರೆಗೆ ಒಳಪಟ್ಟಿದ್ದರು. ಇದರಲ್ಲಿ ಸಾಕಷ್ಟು ಮಂದಿ ನಾನಾ ಸಮಸ್ಯೆಗಳಿಂದ ಸಾವನ್ನಪ್ಪಿದ್ದರೆ, 860 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಘಟನೆಯಿಂದ ಚೀನಾದ ಆಹಾರ ಉತ್ಪಾದನೆಯ ರಪ್ತಿನ ಮೇಲೆ ನೇರ ಪರಿಣಾಮ ಉಂಟಾಗಿತ್ತು. ಇದರಿಂದ ಗಾಬರಿಗೊಂಡ ಪ್ರಪಂಚದ ಸುಮಾರು 11 ರಾಷ್ಟಗಳು ಚೀನಾದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದನ್ನೇ ನಿಲ್ಲಿಸಿಬಿಟ್ಟಿದ್ದವು. ವಿಶ್ವ ಆರೋಗ್ಯ ಸಂಸ್ಥೆ ಈ ಫಟನೆಯನ್ನು ವಿಷಾದಕರ ಎಂಬುದಾಗಿ ಘೋಷಿಸಿತು.

ಸೆಪ್ಟೆಂಬರ್ 17, 2008ರಂದು ಚೀನಾದ ಆರೋಗ್ಯ ಮಂತ್ರಿಯೇ ಈ ದುಷ್ಕೃತ್ಯಕ್ಕೆ ಒಳಪಟ್ಟವರಲ್ಲಿ 6,200 ಮಕ್ಕಳು ಮತ್ತು 1,300 ಇತರರು ತೊಂದರೆಗೆ ಒಳಪಟ್ಟಿದ್ದರು ಎಂಬುದಾಗಿ ತಿಳಿಸಿದರು. ಆದರೆ ಸೆಪ್ಟೆಂಬರ್ 23 ರಂದು 54,000 ಮಕ್ಕಳು ಅಸ್ವಸ್ಥರಾದ ವರದಿ ಬಂದರೆ, ಸೆಪ್ಟೆಂಬರ್ 26 ರಂದು ಇನ್ನು 10,000 ಮಂದಿ ಆಸ್ಪತ್ರೆಗೆ ಸೇರ್ಪಡೆ ಗೊಂಡಿದ್ದರು. ಇದರಲ್ಲಿ ನಾಲ್ಕಕ್ಕೂ ಹೆಚ್ಚು ಮಕ್ಕಳು ಧಾರುಣ ಸಾವನ್ನು ಕಂಡಿದ್ದವು. ಇವರೆಲ್ಲರೂ ಎರಡು ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದರು ಎಂಬುದನ್ನು ಸ್ಪಷ್ಟಪಡಿಸಿದ್ದ ವಿಶ್ವ ಆರೋಗ್ಯ ಸಂಸ್ಥೆ, ಶೇಕಡಾ 82ರಷ್ಟು ಮಕ್ಕಳು ಇದರ ಪ್ರಭಾವಕ್ಕೆ ಒಳಗಾಗಿದ್ದುದಾಗಿ ತಿಳಿಸಿತು. ಹಾಗೆಯೇ ಹಾಂಗ್‌ಕಾಂಗ್‌ನ “ಸೆಂಟರ್ ಫಾರ್ ಫಂಡ್ ಸೇಪ್ಟ್ʼʼ ಸಂಸ್ಥೆಯ ಸಮೀಕ್ಷೆಯ ಪ್ರಕಾರ ಈ ದುಷ್ಕೃತ್ಯದ ಪರಿಣಾಮಕ್ಕೆ ಒಳಗಾದವರಲ್ಲಿ ಶೇಕಡಾ 99 ರಷ್ಟು 3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಸುಳೆಗಳಾಗಿದ್ದವು.

Milk Adulteration

ಸೆಪ್ಟೆಂಬರ್ ಕೊನೆಯಲ್ಲಿ ಇದರ ಸಂಖ್ಯೆ 94,000ಕ್ಕೆ ಮುಟ್ಟಿತ್ತು. ಇದರಿಂದ ಗಲಿಬಿಲಿಗೊಂಡ ಚೀನಾ ಸರ್ಕಾರ ಅಕ್ಟೋಬರ್‌ನಲ್ಲಿ ಬೀಜಿಂಗ್‌ನಲ್ಲಿರುವ ಸುಮಾರು 3 ಲಕ್ಷ ಕುಟುಂಬಗಳನ್ನು ಪರೀಕ್ಷೆಗೆ ಒಳಪಡಿಸಿತು. ಅದರಲ್ಲಿ ಸುಮಾರು 74,000 ಕುಟುಂಬಗಳಲ್ಲಿ ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸೇರಿದಂತೆ ಎಲ್ಲರೂ ಹಾಲೆಂಬ ಹಾಲಾಹಲದ ಮೂಲಕ “ಮಿಲಮಿನ್ʼʼ ಎಂಬ ವಿಷವನ್ನು ಸೇವಿಸಿಬಿಟ್ಟಿದ್ದರು. ಆನಂತರ ಡಿಸೆಂಬರ್ ಒಂದರಂದು ಸುಮಾರು 2,90,000 ಮಂದಿ ಇದರಿಂದ ತೊಂದರೆಗೆ ಒಳಪಟ್ಟಿದ್ದು ಕಂಡುಬಂತು. ಇವರಲ್ಲಿ 51,900 ಜನ ಆಸ್ಪತ್ರೆಗೆ ದಾಖಲಾಗುವಂತಾಯಿತು.

“ಸನ್ಲು” ಕಂಪನಿ ಮಾಡಿದ ಈ ಅನಾಹುತ ಕೇವಲ ಚೀನಾದಲ್ಲಿ ಮಾತ್ರವಲ್ಲ ಅದರ ಪರಿಣಾಮ ನಾನಾ ರಾಷ್ಟಗಳ ಮೇಲೂ ಬೀರಿತ್ತು. ಅದರಲ್ಲಿ ಭಾರತವು ಸಹ ಒಂದಾಗಿತ್ತು. ದೆಹಲಿ ಸರ್ಕಾರ ಈ ಕಂಪನಿಯ “ಸ್ಕಿಮ್ಡ್ ಮಿಲ್ಕ್ ಪೌಡರ್ನ್ನು” ಸ್ವಲ್ಪ ಪ್ರಮಾಣದಲ್ಲಿ ಪ್ರಾಯೋಗಿಕವಾಗಿ ಆಮದು ಮಾಡಿಕೊಂಡು ದೆಹಲಿಯಲ್ಲಿ ಮಾತ್ರ ವಿತರಣೆ ಮಾಡಿತ್ತು. ಅಷ್ಟರಲ್ಲಿಯೇ ಈ ಕಂಪನಿ ಸೃಷ್ಟಿಸಿದ ಕರ್ಮಕಾಂಡ ಬೆಳಕಿಗೆ ಬಂದು ಭೀತಿಯ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದರಿಂದಾಗಿ “ಸನ್ಲು ಹಾಲುʼʼ ಮತ್ತು ಹಾಲಿನ ಪುಡಿಗೆ ದೆಹಲಿಯಲ್ಲಿ ನಿಷೇಧ ಬೀಳುವಂತಾಯಿತು. ಅದರೊಳಗೆ ಯಾರೋ ಕೆಲವರು ಆ ಹಾಲಿನ ಪುಡಿ ಸೇವನೆ ಮಾಡಿದ್ದು ಕಂಡುಬಂದು, ನಂತರ ಅವರು ಆಸ್ಪತ್ರೆಗೆ ದಾಖಲಾಗಿ ಹೊರಬಂದರು.

ಇದಿಷ್ಟು ಚೀನಾ ದೇಶದ “ಸನ್ಲು ಕಂಪನಿʼʼಯ ಕಥೆಯಾದರೆ, ಭಾರತದಲ್ಲಿ ಬೇರೆ ಬೇರೆ ಸ್ವರೂಪದಲ್ಲಿ ಯಥೇಚ್ಚ ಪ್ರಮಾಣದಲ್ಲಿ ಇದೇ ರೀತಿಯ ನಕಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ದಂಧೆ ನಡೆಯುತ್ತಿದೆ. ಉತ್ತರ ಮತ್ತು ದಕ್ಷಿಣ ಭಾರತದ ಬಹುತೇಕ ಕಡೆಗಳಲ್ಲಿ ಈ ದಂಧೆ ಹಾಡುಹಗಲೇ ರಾಜರೋಷವಾಗಿ ನಡೆಯುತ್ತಿದೆ. ಉತ್ತರ ರಾಜಸ್ತಾನ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಈ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದರೆ, ದಕ್ಷಿಣದ ಕರ್ನಾಟಕದ ಸೇರಿದಂತೆ ಆಂಧ್ರಪ್ರದೇಶದ ಹಲವಡೆ ಮತ್ತು ತಮಿಳುನಾಡಿನ ಕೆಲವು ಕಡೆಗಳಲ್ಲಿ ಪ್ರಮುಖವಾಗಿ ನಡೆಯುತ್ತಿದೆೆ. ಕೆಲವು ಅಧಿಕಾರಿಗಳು ಈ ಹಾಲೆಂಬ ವಿಷವನ್ನು ಮುಖ್ಯವಾಗಿ “ಡಿಟರ್ಜೆಂಟ್ʼʼ ಮತ್ತು “ರಿಫೈಂಡ್ ಆಯಿಲ್”ನ ಜೊತೆಗೆ ಮಿಶ್ರಮಾಡಿ ತಯಾರಿಸಿಲಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಹಾಗೆಯೇ ನಿಜವಾದ ಹಾಲು ಮತ್ತು ಇಂತಹ ಹಾಲಿನ ವ್ಯತ್ಯಾಸ ತಿಳಿಯುವುದು ಕಷ್ಟಕರವಾಗಿದೆಯಂತೆ. ಲ್ಯಾಬೋರೇಟರಿ ಪರೀಕ್ಷೆಯ ನಂತರವೇ ಇದರ ವ್ಯತ್ಯಾಸವನ್ನು ತಿಳಿಯಬಹುದಾಗಿದೆ.

ಸಮೀಕ್ಷೆಗಳ ಪ್ರಕಾರ ನಮ್ಮ ದೇಶದಲ್ಲಿ ಹಾಲಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಆದರೆ ನಿರೀಕ್ಷೆಗೆ ತಕ್ಕಷ್ಟು ಉತ್ಪಾದನೆಯಲ್ಲಿ ಹೆಚ್ಚಳವಾಗುತ್ತಿಲ್ಲ. ಹಾಗಾಗಿ ಇದು ಹೀಗೆ ಮುಂದುವರೆದರೆ ಚೀನಾದಲ್ಲಿ ನಡೆದಂತೆ ಮುಂದಿನ 5 ರಿಂದ 10 ವರ್ಷಗಳಲ್ಲಿ ಭಾರತದಲ್ಲೂ ಹಾಲಿನ ಹಾಹಾಕಾರ ಏಳುವುದರಲ್ಲಿ ಯಾವುದೇ ಸಂಶಯವಿಲ್ಲ. ಇದನ್ನು ಸ್ವತಃ “ಇಂಡಿಯನ್ ಡೈರಿ ಡೆವಲಂಪ್‌ ಮೆಂಟ್ ಬೋರ್ಡ್ʼʼ ಕೂಡಾ ಎಚ್ಚರಿಸಿದೆ. ಇದರೊಂದಿಗೆ “ಭಾರತದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ”ವು ಭಾರತದಲ್ಲಿರುವ ಶೇಕಡಾ 68.7 ರಷ್ಟು ಹಾಲು ನಕಲಿ ಎಂಬುದಾಗಿ ತಿಳಿಸಿದೆ. ಇದು ಮತ್ತಷ್ಟು ಗಾಯದ ಮೇಲೆ ಬರೆ ಎಳೆದಂತಿದೆ. ಹಾಗಾಗಿ ಹಾಲೆಂಬುದು ಭಾರತೀಯ ಗೋತಳಿಗಳಿಂದ ಮಾತ್ರವಲ್ಲದೆ, ಇನ್ಯಾವುದೋ ವಿದೇಶಿ ಹಸು, ಮೆಷಿನ್ ಅಥವಾ ರಾಸಾಯನಿಕಗಳ ಮಿಶ್ರಣದಿಂದಲ್ಲ ಎಂಬುದನ್ನು ನಾವು ಅರಿತು ಬಾಳಬೇಕಾಗಿದೆ.

ಇದನ್ನೂ ಓದಿ : ಗೋ ಸಂಪತ್ತು | ವಿದೇಶಿ ಗೋವಿನ ತಳಿಗಳ ಹಾಲು-ಹಾಲಾಹಲ!

Exit mobile version