| ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು
ಇತ್ತೀಚೆಗಷ್ಟೇ ಮುಗಿದ ಈಶಾನ್ಯ ಭಾರತದ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಲಾಭವನ್ನು ಪಡೆದುಕೊಂಡಿದೆ. ಬಿಜೆಪಿಯ ಈ ಸಾಧನೆಯ ಹಿಂದಿನ ರೂವಾರಿ ಪ್ರಧಾನಿ ನರೇಂದ್ರ ಮೋದಿಯೂ ಅಲ್ಲ, ‘ಚಾಣಕ್ಯ’ ಅಮಿತ್ ಶಾ ಕೂಡ ಅಲ್ಲ. ಈಶಾನ್ಯ ಭಾರತದಲ್ಲಿ ಬಿಜೆಪಿಯ ಕೋಟೆಯನ್ನು ಕಾಯುತ್ತಿರುವ ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ(Himanta Biswa Sarma) ಅವರು! ಭಾರತೀಯ ಜನತಾ ಪಾರ್ಟಿಯಲ್ಲಿ ‘ಮಿಸ್ಟರ್ ಡಿಪೆಂಡೇಬಲ್’ ಎಂದೇ ಕರೆಯಿಸಿಕೊಳ್ಳುವ ಶರ್ಮಾ, ಚತುರ ಸಂಘಟಕರೂ ಹೌದು. ಚುನಾವಣಾ ಪೂರ್ವ ಮತ್ತು ಚುನಾವಣೋತ್ತರದಲ್ಲಿ ಈ ಮೂರು ರಾಜ್ಯಗಳಲ್ಲಿ ಬಿಜೆಪಿಯು ತನ್ನ ಸಹಮನಸ್ಕ ಪಾರ್ಟಿಗಳ ಜತೆ ಮೈತ್ರಿಯನ್ನು ಸಾಧಿಸುವಲ್ಲಿ ಶರ್ಮಾ ಅವರು ಮಹತ್ವದ ಕಾಣಿಕೆಯನ್ನು ನೀಡಿದ್ದಾರೆ. ಒಂದೂ ಸೀಟು ಇಲ್ಲದ ಈಶಾನ್ಯ ಭಾರತದ ಏಳೂ ರಾಜ್ಯಗಳಲ್ಲಿ ಇಂದು ಬಿಜೆಪಿ ಅಸ್ತಿತ್ವವನ್ನು ಕಂಡು ಕೊಂಡಿದೆ, ಅಧಿಕಾರದಲ್ಲಿ ಇದೆ ಎಂದರೆ, ಮೋದಿ ಜನಪ್ರಿಯತೆಯ ಜತೆಗೆ ಹಿಮಂತ್ ಬಿಸ್ವಾ ಶರ್ಮಾ ಅವರ ಕಾಣಿಕೆಯೂ ಅಗಾಧವಾಗಿದೆ.
ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಎಂಟ್ರಿ
ಭಾರತೀಯ ಜನತಾ ಪಾರ್ಟಿಯ ಮೂಲಕ ಬೆಳಗುತ್ತಿರುವ ಹಿಮಂತ್ ಬಿಸ್ವಾ ಶರ್ಮಾ ಅವರು ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದು, ಕಾಂಗ್ರೆಸ್ ಪಕ್ಷದಿಂದಲೇ. 2001ರಲ್ಲಿ ಮೊದಲ ಬಾರಿಗೆ ಅಸ್ಸಾಮ್‌ನ ಜಲುಕ್ಬರಿ ಕ್ಷೇತ್ರದಿಂದ ಸ್ಪರ್ಧಿಸಿ, ಅಸ್ಸಾಮ್ ಗಣಪರಿಷತ್‌ನ ನಾಯಕ ಭಿರ್ಗು ಕುಮಾರ್ ಫುಕನ್ ಅವರನ್ನು ಸೋಲಿಸಿ, ವಿಧಾನಸಭೆಗೆ ಪ್ರವೇಶಿಸಿದರು. 2006ರ ಚುನಾವಣೆಯಲ್ಲಿ ಮತ್ತೆ ಮರು ಆಯ್ಕೆಯಾದರು. 2011ರಲ್ಲೂ ಅವರು 78,000 ಮತಗಳಿಂದ ಗೆಲ್ಲುವ ಮೂಲಕ ದಾಖಲೆ ಬರೆದರು. ಶರ್ಮಾ ಅವರು ಎರಡನೇ ಬಾರಿಗೆ ಆಯ್ಕೆಯಾಗಿ ಬಂದಾಗಲೇ ಮಂತ್ರಿ ಪದವಿ ಒಲಿದು ಬಂತು. ಅಂದಿನ ಮುಖ್ಯಮಂತ್ರಿ ತರುಣ್ ಗೋಗೊಯ್ ಅವರು ಶರ್ಮಾ ಅವರನ್ನು ರಾಜ್ಯ ಸಚಿವರನ್ನಾಗಿ ನೇಮಕ ಮಾಡಿದರು. ಎರಡನೇ ಅವಧಿಯಲ್ಲೂ ಅವರು ಸಚಿವರಾದರು ಮತ್ತು ಕ್ಯಾಬಿನೆಟ್ ಸ್ಥಾನದ ಬಡ್ತಿ ನೀಡಲಾಯಿತು. ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ತನಕವೂ ಅವರು ಸಚಿವರಾಗಿಯೇ ಕೆಲಸ ಮಾಡಿದ್ದಾರೆ.
ಅಸ್ಸಾಮ್‌ನಲ್ಲಿ ರಾಜ್ಯ ಸಚಿವರಾಗಿ, ಸಂಪುಟ ಸಚಿವರಾಗಿ ಅನೇಕ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದಾರೆ. ಕೃಷಿ, ಯೋಜನೆ ಮತ್ತು ಅಭಿವೃದ್ಧಿ, ಹಣಕಾಸು, ಆರೋಗ್ಯ, ಶಿಕ್ಷಣ, ಅಸ್ಸಾಮ್ ಒಪ್ಪಂದ ಜಾರಿಯಂಥ ಹೊಣೆಗಳನ್ನು 2002ರಿಂದ 2014ರವರೆಗೂ ನಿರ್ವಹಿಸಿದ್ದಾರೆ. 2006ರಲ್ಲಿ ಅವರನ್ನು ಆರೋಗ್ಯ ಸಚಿವರನ್ನಾಗಿ ಮಾಡಲಾಯಿತು. 2011ರಲ್ಲಿ ಹೆಚ್ಚುವರಿಯಾಗಿ ಶಿಕ್ಷಣ ಖಾತೆಯನ್ನು ನೀಡಲಾಯಿತು.
ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದರು
ಅಸ್ಸಾಮ್‌ನ ಆರೋಗ್ಯ ಸಚಿವರಾಗಿದ್ದಾಗ ಶರ್ಮಾ ಅವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಈ ಪೈಕಿ ಹೆಚ್ಚು ಜನಪ್ರಿಯವಾಗಿರುವುದು ವೈದ್ಯಕೀಯ ಕಾಲೇಜುಗಳ ನಿರ್ಮಾಣ. ಅಸ್ಸಾಮ್‌ನ ಜೋರ್ಹತ್, ಬಾರ್ಪೇಟಾ ಮತ್ತು ತೇಜ್‌ಪುರದಲ್ಲಿ ಮೆಡಿಕಲ್ ಕಾಲೇಜ್ ಆರಂಭಿಸಿದರು. ಇದಾದ ಬಳಿಕ, ದೀಪು, ನಾಗಾಂವ್, ಧುಬ್ರಿ, ಉತ್ತರ ಲಖಿಂಪುರ ಮತ್ತು ಕೊಕ್ರಜಾರ್‌ಗಳಲ್ಲಿ ಇನ್ನೂ ಐದು ವೈದ್ಯಕೀಯ ಕಾಲೇಜುಗಳಿಗೆ ಕೆಲಸವನ್ನು ಆರಂಭಿಸಲಾಗಿದೆ. ವಿವಿಧ ಹಂತಗಳಲ್ಲಿ ಇರುವ ಈ ವೈದ್ಯಕೀಯ ಕಾಲೇಜುಗಳು ಶೀಘ್ರವೇ ಕಾರ್ಯಾಚರಂಭ ಮಾಡುವ ಹಂತದಲ್ಲಿವೆ.
ಬಿಜೆಪಿಯಲ್ಲಿ ಪ್ರವರ್ಧಮಾನಕ್ಕೆ ಬಂದ ಹಿಮಂತ್
ಚತುರ ಸಂಘಟಕ ಹಿಮಂತ್ ಬಿಸ್ವಾ ಶರ್ಮಾ ಹಾಗೂ ಅಂದಿನ ಮುಖ್ಯಮಂತ್ರಿ ತರುಣ್ ಗೊಗೊಯ್ ನಡುವೆ ಭಿನ್ನಾಭಿಪ್ರಾಯಗಳು ಶುರುವಾದವು. ಜತೆಗೆ, ಕಾಂಗ್ರೆಸ್ ಪಕ್ಷವನ್ನು ರಾಹುಲ್ ಗಾಂಧಿ ಅವರು ಮುನ್ನಡೆಸುತ್ತಿದ್ದ ರೀತಿಯೂ ಶರ್ಮಾ ಅವರಿಗೆ ಸೂಕ್ತ ಎನಿಸಲಿಲ್ಲ. ಹಾಗಾಗಿ, ಉನ್ನತ ನಾಯಕತ್ವದ ಜತೆಗಿನ ಭಿನ್ನಾಭಿಪ್ರಾಯದಿಂದ ಅವರು, ಕಾಂಗ್ರೆಸ್‌ನಲ್ಲಿದ್ದ ಎಲ್ಲ ರಾಜಕೀಯ ಹುದ್ದೆಗಳಿಗೆ ರಾಜೀನಾಮೆ ನೀಡಿದರು. 2015ರಲ್ಲಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ, ಅದೇ ವರ್ಷ ಭಾರತೀಯ ಜನತಾ ಪಾರ್ಟಿಯನ್ನು ಸೇರಿದರು. ಈಶಾನ್ಯ ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಹೊರಟ್ಟಿದ್ದ ಬಿಜೆಪಿ ಒಬ್ಬ ನಂಬಿಗಸ್ಥ ನಾಯಕ ಬೇಕಿತ್ತು. ಆ ನಾಯಕ ಬಿಜೆಪಿಗೆ ಹಿಮಂತ್ ಬಿಸ್ವಾ ಶರ್ಮಾ ರೂಪದಲ್ಲಿ ಸಿಕ್ಕರು. ಆ ನಂತರದಲ್ಲಿ ನಡೆದಿದ್ದೆಲ್ಲ ಇತಿಹಾಸ.
ಇದನ್ನೂ ಓದಿ: ವಾರದ ವ್ಯಕ್ತಿಚಿತ್ರ: ಮದ್ರಾಸ್ ಹೈಕೋರ್ಟ್ ಜಡ್ಜ್ ಗೌರಿ; ಹೋರಾಟವೇ ಇವರ ಹಾದಿ
2016ರಲ್ಲಿ ಮತ್ತೆ ಶರ್ಮಾ ಅವರು ಜಲುಕ್ಬರಿ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಗೆದ್ದರು. ಈಶಾನ್ಯ ಭಾರತದ ಮೊದಲ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾದರು. ಸೋನೋವಾಲ್ ಸರ್ಕಾರದಲ್ಲೂ ಅವರಿಗೆ ನಾನಾ ಜವಾಬ್ದಾರಿಗಳನ್ನು ನೀಡಲಾಯಿತು. ಹಣಕಾಸು, ಆರೋಗ್ಯ, ಕುಟುಂಬ ಕಲ್ಯಾಣ, ಶಿಕ್ಷಣ, ಪ್ರವಾಸೋದ್ಯಮ, ಪಿಂಚಣಿ ಮತ್ತು ಸಾರ್ವಜನಿಕ ಕುಂದುಕೊರತೆಗಳನ್ನು ಖಾತೆಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡರು. ಪಕ್ಷದ ನಾಯಕರಾಗಿ ಮತ್ತು ಸಚಿವರಾಗಿ ಬಿಜೆಪಿ ಸರ್ಕಾರದಲ್ಲಿ ಹಿಮಂತ್ ಬಿಸ್ವಾ ಶರ್ಮಾ ಅವರು ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡರು. ಅವರ ಸಂಘಟನಾ ಚಾಣಾಕ್ಷತನವನ್ನು ಕಂಡ ಬಿಜೆಪಿ ನಾಯಕತ್ವವು ಅವರನ್ನು ನಾರ್ಥ್ ಈಸ್ಟ್ ಡೆಮಾಕ್ರಟಿಕ್ ಅಲೈನ್ಸ್ ಸಂಚಾಲಕರನ್ನಾಗಿ ನೇಮಕ ಮಾಡಿ, ಜವಾಬ್ದಾರಿಯನ್ನು ವಹಿಸಿತು.
ಒಲಿದು ಬಂತು ಮುಖ್ಯಮಂತ್ರಿ ಪದವಿ
ಪಕ್ಷದೊಳಗೇ ಭಾರೀ ಬಿಗಿ ಹಿಡಿತ ಸಾಧಿಸಿದ್ದ ಹಿಮಂತ್ ಬಿಸ್ವಾ ಶರ್ಮಾ ಅವರಿಗೆ ಮುಖ್ಯಮಂತ್ರಿಯ ಪದವಿಯೂ 2021ರಲ್ಲಿ ಒಲಿದು ಬಂತು. ಶರ್ಮಾ ಬಹಳ ಮಹತ್ವಾಕಾಂಕ್ಷಿ ವ್ಯಕ್ತಿ. ಹಾಗಾಗಿ, ತಮ್ಮ ಗುರಿಯನ್ನು ಈಡೇರಿಸಿಕೊಳ್ಳಲು ಏನೆಲ್ಲ ಮಾಡಬೇಕೋ ಅದನ್ನು ಮಾಡಿಯೇ ತೀರುತ್ತಾರೆ. ಹಿಡಿದ ಕೆಲಸವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಸೋನೋವಾಲ್ ಸಿಎಂ ಆಗಿದ್ದಾಗಲೇ ಪಕ್ಷದೊಳಗೇ ಬಿಗಿ ಹಿಡಿತ ಸಾಧಿಸಿದ್ದ ಶರ್ಮಾ, ಟಿಕೆಟ್ ಹಂಚಿಕೆಯಲ್ಲೂ ಪ್ರಾಬಲ್ಯ ಮೆರೆದಿದ್ದರು. ಚುನಾವಣೆಯ ಬಳಿಕ ಸಹಜವಾಗಿಯೇ ಶರ್ಮಾ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಾಗಿದ್ದರು. ಜತೆಗೆ, ಸೋನೋವಾಲ್ ಸರ್ಕಾರದಲ್ಲಿ ವಿವಿಧ ಇಲಾಖೆಗಳಲ್ಲಿ ಪ್ರದರ್ಶನವು ಅವರನ್ನು ಸಿಎಂ ಹುದ್ದೆಗೆ ಕರೆ ತಂದಿತು. ಬಿಜೆಪಿ ನಾಯಕತ್ವವು ಅಂತಿಮವಾಗಿ ಸೋನೋವಾಲ್ ಅವರನ್ನು ಕೈ ಬಿಟ್ಟು, ಶರ್ಮಾ ಅವರಿಗೆ ಸಿಎಂ ಪಟ್ಟ ಕಟ್ಟಿತು. ಆ ಬಳಿಕ, ಈಶಾನ್ಯ ಭಾರತದಲ್ಲಿ ಬಿಜೆಪಿಯನ್ನು ವಿಸ್ತರಿಸುವ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಅದರ ಪರಿಣಾಮವನ್ನು ಮೊನ್ನೆಯಷ್ಟೇ ಮುಗಿದ ಮೂರು ರಾಜ್ಯಗಳ ಚುನಾವಣೆಯಲ್ಲಿ ಕಾಣಬಹುದಾಗಿದೆ.
ವಿವಾದಗಳು ಭಾರೀ ಇಷ್ಟ!
ಹಿಮಂತ್ ಬಿಸ್ವಾ ಶರ್ಮಾ ಭಾರೀ ಮಹತ್ವಾಕಾಂಕ್ಷಿ. ಹಾಗೆಯೇ, ಅವರ ನಾಲಿಗೆಯ ಮೇಲೆ ಹಿಡಿತವೂ ಇಲ್ಲ. ತಮ್ಮ ಮಾತುಗಳಿಂದಲೇ ಸಾಕಷ್ಟು ಬಾರಿ ವಿವಾದಕ್ಕೆ ಕಾರಣವಾಗಿದ್ದಾರೆ. ಒಂದು ಕಾಲದಲ್ಲಿ ರಾಹುಲ್ ಗಾಂಧಿ ತಮ್ಮ ನಾಯಕನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಶರ್ಮಾ ಇಂದು ಅದೇ ರಾಹುಲ್ ಗಾಂಧಿಯ ಕಡು ಟೀಕಾಕಾರಲ್ಲಿ ಒಬ್ಬರಾಗಿದ್ದಾರೆ. ಇದೇ ಕಾರಣಕ್ಕಾಗಿ 2022ರಲ್ಲಿ ಉತ್ತರಾಖಂಡ ಚುನಾವಣಾ ಪ್ರಚಾರ ವೇಳೆ ಮಾತನಾಡಿ, ”ರಾಹುಲ್ ಗಾಂಧಿ ಅವರು ರಾಜೀವ್ ಗಾಂಧಿ ಅವರ ಮಗನೇ ಎಂಬುದಕ್ಕೆ ನಾವೇನಾದಾರೂ ಪ್ರೂಫ್ ಕೇಳಿದ್ದಿವೆಯೇ” ಎಂದು ಹೇಳುವ ಮೂಲಕ ವಿವಾದವನ್ನು ಸೃಷ್ಟಿಸಿದ್ದರು.
ಅದೇ ರೀತಿ ಎಐಯುಡಿಎಫ್ ಮುಖ್ಯಸ್ಥರೂ ಆಗಿರುವ ಸಂಸದ ಬದ್ರುದ್ದೀನ್ ಅಜ್ಮಲ್ ಅವರನ್ನು ಪಾಕ್ ಬೆಂಬಲಿಗ ಎಂದು ಕರೆದಿದ್ದರು. ಈ ಕುರಿತು ಸೋಷಿಯಲ್ ಮೀಡಿಯಾದ ಪೋಸ್ಟ್ ಮಾಡಿದ್ದರು. ಆ ಬಳಿಕ, ಇದೊಂದು ತಪ್ಪು ಮಾಹಿತಿ ಎಂದು ಫೇಸ್‌ಬುಕ್ ಫ್ಲ್ಯಾಗ್ ಮಾಡಿತ್ತು. ಕೋವಿಡ್ ಕಾಲದಲ್ಲಿ ಮಾಸ್ಕ್ ಧರಿಸುವುದು ಅಗತ್ಯವಿಲ್ಲ ಎಂದಿದ್ದರು. ಇತ್ತೀಚೆಗಷ್ಟೇ ಶಾರುಖ್ ಖಾನ್ ಯಾರೆಂದು ಗೊತ್ತಿಲ್ಲ ಎಂದು ಹೇಳಿಕೊಂಡಿದ್ದರು. ಹೀಗೆ ನಾನಾ ರೀತಿಯಲ್ಲಿ ಅವರು ವಿವಾದಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ.
ಇದನ್ನೂ ಓದಿ: ವಾರದ ವ್ಯಕ್ತಿಚಿತ್ರ : ಪಠಾಣ್ ಸಿನಿಮಾ ಮೂಲಕ ಗತವೈಭವ ಸೃಷ್ಟಿಸಲಿದ್ದಾರಾ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್?
ಅಭಿಮಾನಿಗಳಿಗೆ ಪ್ರೀತಿಯ ಮಾಮಾ
ಆರೆಸ್ಸೆಸ್ ಹಿನ್ನೆಲೆ ಇಲ್ಲದಿದ್ದರೂ ಬಿಜೆಪಿ ನಾಯಕತ್ವದ ವಿಶ್ವಾಸಗಳಿಸಿಕೊಂಡಿರುವ ಹಿಮಂತ್ ಬಿಸ್ವಾ ಶರ್ಮಾ ಅವರು ಈಗ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಕೈ ಹಾಕಿದ ಎಲ್ಲ ಕೆಲಸಗಳೂ ಸಕ್ಸೆಸ್ ಕಾಣುತ್ತಿವೆ. ಅದೇ ಕಾರಣಕ್ಕೆ, ಬಿಜೆಪಿಯೊಳಗೇ ಅವರಿಗೆ ವಿಶಿಷ್ಟವಾದ ಇಮೇಜ್ ಕೂಡ ಬೆಳೆಯುತ್ತಿದೆ. ಭಾರತದ ಯಾವುದೇ ರಾಜ್ಯಗಳಲ್ಲಿ ಚುನಾವಣೆ ನಡೆದರೂ ಅಲ್ಲಿ ಅವರನ್ನು ನಿಯೋಜಿಸಲಾಗುತ್ತದೆ. ಗೋವಾ, ತೆಲಂಗಾಣ, ಉತ್ತರಾಖಂಡ ಇತ್ಯಾದಿ ರಾಜ್ಯಗಳ ಚುನಾವಣೆಗಳಲ್ಲಿ ಅವರು ಬಿಜೆಪಿಯ ಪರವಾಗಿ ಕೆಲಸ ಮಾಡಿದ್ದಾರೆ. ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರನ್ನು ಅವರು ಅಭಿಮಾನಿಗಳು ಮಾಮಾ ಎಂದು ಕರೆಯುತ್ತಾರೆ.