| ಶ್ರೀ ಶ್ರೀ ರವಿಶಂಕರ್, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರು
Independence Day 2023 : ಇಂದು, ಒಂದು ಅತಿ ಮುಖ್ಯವಾದ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಳ್ಳಿ. ನೀವು ನಿಜಕ್ಕೂ ಸ್ವತಂತ್ರರೆ? ಉತ್ತರವು ಹೌದು ಮತ್ತು ಇಲ್ಲ ಎರಡೂ ಆಗಿದೆ. ಸ್ವತಂತ್ರರಲ್ಲ, ಏಕೆಂದರೆ ಈ ಜಗತ್ತಿನಲ್ಲಿ ಯಾರೂ ಸ್ವತಂತ್ರರಲ್ಲ. ಗಾಳಿ, ನೀರು, ಮರ ಗಿಡಗಳು ಮತ್ತು ಆಮ್ಲಜನಕ – ಹೀಗೆ ಹಲವು ಕಾರಣಕ್ಕಾಗಿ ನಾವು ಈ ಭೂಮಿಯನ್ನು ಅವಲಂಬಿಸಿದ್ದೇವೆ. ಶಿಶುವಾಗಿದ್ದಾಗ ಪೋಷಣೆಗಾಗಿ ನಾವು ಬೇರೆಯವರ ಮೇಲೆ ಅವಲಂಬಿತರಾಗಿದ್ದೆವು. ವೃದ್ಧಾಪ್ಯದಲ್ಲಿಯೂ ಸಹ ನಮ್ಮನ್ನು ನೋಡಿಕೊಳ್ಳಲು ಬೇರೆಯವರನ್ನು ಅವಲಂಬಿಸಬೇಕಾಗುತ್ತದೆ. ಆಹಾರ, ಬಟ್ಟೆಬರೆಗಳು ಮತ್ತು ಇತರ ವಸ್ತುಗಳಿಗಾಗಿ ನಾವು ಇತರರನ್ನು ಅವಲಂಬಿಸಿದ್ದೇವೆ. ಆದ್ದರಿಂದ ಸ್ವತಂತ್ರರಾಗುವ ಪ್ರಶ್ನೆ ಎಲ್ಲಿಯದು?
ಈ ರೀತಿಯ ಸ್ವಾತಂತ್ರ್ಯವನ್ನು ಬಯಸುವುದು ನಮ್ಮ ಮನಸ್ಸು, ಬುದ್ಧಿ ಮತ್ತು ಅಹಂಕಾರ. ಈ ಸ್ಥರದಿಂದ ನಾವು ಸ್ವಾತಂತ್ರ್ಯವನ್ನು ಅರಸಲು ಹೊರಟಾಗ, ಅಹಂಕಾರದಲ್ಲಿ ಸಿಲುಕಿಕೊಂಡು ದುಃಖಿಗಳಾಗಿಬಿಡುತ್ತೇವೆ. ಒಂದು ಸಣ್ಣ ಉದಾಹರಣೆಯನ್ನು ತೆಗೆದುಕೊಳ್ಳೋಣ. ಸಾಮಾನ್ಯವಾಗಿ, ನಮ್ಮ ಬಳಿ ಹಣವಿದ್ದಾಗ, “ನಾವು ಸ್ವತಂತ್ರರು” ಎಂದು ಭಾವಿಸಿಕೊಳ್ಳುತ್ತೇವೆ. ಆದರೆ ಸ್ವಲ್ಪ ಹೀಗೂ ಊಹಿಸಿ. ಒಂದು ದಿನ ಈ ಜಗತ್ತಿನಲ್ಲಿರುವ ಹಣವೆಲ್ಲವೂ ಗೌಣ ಮತ್ತು ಬೆಲೆಯಿಲ್ಲದ ವಸ್ತುವಾಗಿಬಿಟ್ಟರೆ, ಪರಿಸ್ಥಿತಿ ಏನಾಗಬಹುದು? ನಿಮ್ಮ ಹಣಕ್ಕೆ ಆಗ ಯಾವ ಮೌಲ್ಯವೂ ಇರುವುದಿಲ್ಲ. ಒಂದು ಲಕ್ಷ ರೂಪಾಯಿಯನ್ನು ನೀಡಿದರೂ, ಯಾರಿಂದಲೂ ನಿಮಗೆ ಒಂದು ಕಪ್ಪು ಚಹ ಕೂಡ ಸಿಗುವುದಿಲ್ಲ ಎಂದಾದಾಗ ನೀವೇನು ಮಾಡುವಿರಿ? ನೀವೆಷ್ಟೇ ಹಣ ಪಾವತಿಸಿದರೂ, ನಿಮ್ಮ ಮನೆಗೆಲಸಕ್ಕೆ ಯಾರೂ ಬರುವುದಿಲ್ಲ. ಆಗೇನು ಮಾಡುತ್ತೀರಿ? ಸ್ವಾತಂತ್ರ್ಯದ ಬಗ್ಗೆ ಹೊಂದಿದ್ದ ಪರಿಕಲ್ಪನೆಯೆಲ್ಲವೂ ತಪ್ಪು ಎಂದು ನೀವಾಗ ಅರಿಯುತ್ತೀರಿ.
ನೀವು ನಿಜವಾಗಿಯೂ ಸ್ವತಂತ್ರರೆ ಎಂಬ ಪ್ರಶ್ನೆಗೆ, “ಹೌದು” ಎನ್ನುವುದೂ ಉತ್ತರವಾಗಿದೆ. ಏಕೆಂದರೆ ಆಂತರ್ಯದಲ್ಲಿ ನಾವು ಸ್ವತಂತ್ರರಾದಾಗ, ಬಾಹ್ಯದಲ್ಲಿಯೂ ನಿಜವಾದ ಸ್ವಾತಂತ್ರ್ಯವನ್ನು ಅನುಭವಿಸುತ್ತೇವೆ. ಅಂತರಾಳದಲ್ಲಿ ಸಂತೋಷ ಮತ್ತು ತೃಪ್ತಿಯನ್ನು ಹೊಂದಿದ್ದಾಗ, ಆಂತರಿಕ ಸ್ವಾತಂತ್ರ್ಯವನ್ನು (Internal Freedom) ಪಡೆಯುತ್ತೇವೆ. ಆತ್ಮಸ್ಥೈರ್ಯವನ್ನು ಹೊಂದಿದ್ದು, ನಕಾರಾತ್ಮಕ ಆಲೋಚನೆಗಳಿಂದ (Negative thinking) ಮುಕ್ತರಾದಾಗ ಮತ್ತು ನಮ್ಮ ಸಣ್ಣ ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸಿದಾಗ ನಾವು ನಿಜವಾದ ಸ್ವಾತಂತ್ರ್ಯವನ್ನು ಅನುಭವಿಸುತ್ತೇವೆ.
ಆಂತರಿಕ ಸ್ವಾತಂತ್ರ್ಯವನ್ನು ಬೆಳೆಸಿಕೊಳ್ಳುವುದು ಹೇಗೆ?
ರಾಗ, ದ್ವೇಷಗಳಿಂದ ಮನಸ್ಸು ಮುಕ್ತವಾದಾಗ, ಬಾಹ್ಯ ಮತ್ತು ಆಂತರಿಕ ಕಲ್ಮಶಗಳನ್ನು ಕಳೆದುಕೊಂಡು ಅಜ್ಞಾನದ ಮೇಲೆ ಸ್ವಾತಂತ್ರ್ಯವನ್ನು ಸಾಧಿಸಿ, ಆಧ್ಯಾತ್ಮಿಕ ಪಥದಲ್ಲಿ ಸಾಗುವ ಮೂಲಕ ನಾವು ಆಂತರಿಕ ಸ್ವಾತಂತ್ರ್ಯವನ್ನು ಪಡೆಯಬಹುದು.
ಆಧ್ಯಾತ್ಮಿಕತೆಯೆಂದರೆ ಸುಮ್ಮನೆ ಕುಳಿತು ಒಂದು ಅಭ್ಯಾಸವನ್ನು ಮಾಡುವುದಲ್ಲ. ಅದು ಗಂಭೀರವಾದ ವಿಷಯವೂ ಅಲ್ಲ. ಇದು ಜೀವನವನ್ನು ಸಂಭ್ರಮಿಸುವ ಒಂದು ಬಗೆ; ಜೀವನದ ಒಂದು ವಿಧಾನ. ಇದು ನಮ್ಮನ್ನು ಔನ್ಯತ್ಯಕ್ಕೇರಿಸುತ್ತದೆ. ಆಧ್ಯಾತ್ಮಿಕ ಅಭ್ಯಾಸಗಳು ನಮ್ಮ ಜೀವನದಲ್ಲಿ, ಹೆಚ್ಚಿನ ಸಂತೋಷ, ಆನಂದ, ಸೃಜನಶೀಲತೆ, ಕರುಣೆ ಮತ್ತು ಉತ್ಸಾಹವನ್ನು ತರುತ್ತವೆ. ಇಷ್ಟವಾದ ಮತ್ತು ಇಷ್ಟವಾಗದ ವಿಷಯಗಳಿಂದ, ನಮ್ಮನ್ನು ಮುಕ್ತರನ್ನಾಗಿಸುತ್ತದೆ ಹಾಗೂ ನಮ್ಮ ದೃಷ್ಟಿ ಮತ್ತು ಅರಿವನ್ನು ವಿಶಾಲಗೊಳಿಸುತ್ತದೆ. “ನನಗೆ ಏನು ಸಿಗಬಹುದು?” ಎಂಬ ಮನೋಭಾವದ ಕಡೆಯಿಂದ “ನಾನೇನು ನೀಡಬಲ್ಲೆ?” ಎಂಬ ಮನೋಭಾವದ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ.
ನಮ್ಮ ಮೂಲದೊಂದಿಗೆ ಆಧ್ಯಾತ್ಮಿಕತೆಯನ್ನು ಜೋಡಿಸುವುದು
ಭಾರತವು ಆಧ್ಯಾತ್ಮಿಕತೆಯ (Spirituality in India) ದಾರಿದೀಪವಾಗಿದೆ. ನಾವು ಮತ್ತು ಇಂದಿನ ಯುವಪೀಳಿಗೆಯು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳ ಬಗ್ಗೆ ತಿಳಿದು, ಕಲಿತು ಮತ್ತು ಅವುಗಳನ್ನು ಗೌರವಿಸುವುದರ ಮೂಲಕ ಆಂತರಿಕ ಸ್ವಾತಂತ್ರ್ಯದ ಪಥವನ್ನು ಕಂಡುಕೊಳ್ಳಬೇಕಾಗಿದೆ.
ಭಾರತವು ಭೂವೈಶ್ಯಾಲ್ಯತೆಯಲ್ಲಿ ಅಮೆರಿಕ ದೇಶದ ಮೂರನೆಯ ಒಂದರಷ್ಟು ಭಾಗವಾಗಿದ್ದರು ಸಹ ವಿವಿಧ ಸಂಸ್ಕೃತಿಗಳಿಗೆ, ಭಾಷೆಗಳಿಗೆ, ಅಡುಗೆಯ ವೈಖರಿಗಳಿಗೆ, ಅಭ್ಯಾಸ ಮತ್ತು ನಂಬಿಕೆಗಳಿಗೆ ತವರೂರಾಗಿದೆ. ಇದೊಂದು ಅಚ್ಚರಿಯೇ ಸರಿ. ಪ್ರತಿ ನೂರು ಕಿಲೊಮೀಟರ್‌ಗಳ ಅಂತರದಲ್ಲಿ ವ್ಯಾಪಕವಾದ ಬದಲಾವಣೆಗಳು ಕಂಡರೂ, ಭಾರತವು ಸಮೃದ್ಧವಾಗಿ ಮುನ್ನಡೆದಿದೆ. ವೇದಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನಗಳೊಂದಿಗೆ ನಿರಾಯಾಸವಾಗಿ ಸಂಯೋಜನೆಗೊಳಿಸುವಲ್ಲಿ ಭಾರತವು ಯಶಸ್ವಿಯಾಗಿದೆ. ಭಾರತೀಯರು ಅನಾದಿಕಾಲದಿಂದಲೂ ಪ್ರತಿಯೊಂದು ಸಂಪ್ರದಾಯ ಮತ್ತು ವಿವಿಧ ಹಿನ್ನೆಲೆಗಳಿಂದ ಬಂದಿರುವ ಸಂತರು, ಜನರು ಮತ್ತು ಜ್ಞಾನವನ್ನು ಗೌರವಿಸುತ್ತಾ ಬಂದಿದ್ದಾರೆ.
ಧರ್ಮದ ಸಾರವು ಆಧ್ಯಾತ್ಮಿಕತೆ ಎಂದು ಭಾರತವು ವಿಶ್ವಕ್ಕೇ ತೋರಿಸಿದೆ. ಕರುಣೆ, ಆದರ ಮತ್ತು ಸ್ವೀಕಾರ – ಇವು ಆಧ್ಯಾತ್ಮಿಕ ಮೌಲ್ಯಗಳೆಂದು ಜಗತ್ತಿಗೆ ಸಾರಿದೆ. ನಾವು ನಮ್ಮ ಆಧ್ಯಾತ್ಮಿಕ ಸಾರದ ಸೌಂದರ್ಯವನ್ನು ಅರಿತಾಗ, ನಮ್ಮ ಸೈದ್ಧಾಂತಿಕ ಬಿಗಿತನವೆಲ್ಲವೂ ಕರಗಿ ಹೋಗಿ, ಮಾನವೀಯ ಪ್ರಜ್ಞೆಯ ನಿಜವಾದ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಭಾರತವು ಜಗತ್ತಿಗೆ ಸದಾ ತೋರಿಸುತ್ತಾ ಬಂದಿದೆ.
ಆದ್ದರಿಂದ ಆಧ್ಯಾತ್ಮಿಕತೆಯ ಮೂಲಕ ನಾವು ನಮ್ಮ ದೃಷ್ಟಿಯನ್ನು ವಿಶಾಲಗೊಳಿಸಿಕೊಳ್ಳಬೇಕು ಮತ್ತು ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಸರಿಯಾಗಿ ಅರ್ಥೈಸಿಕೊಂಡು ನಮ್ಮ ಸನಾತನ ಮೂಲದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುವ ಸಮಯವೀಗ ಒದಗಿ ಬಂದಿದೆ. ಅತ್ಯುತ್ತಮವಾದ, ಶಾಂತಿಯುತವಾದ, ಹಿಂಸಾರಹಿತವಾದ ಮತ್ತು ಒತ್ತಡರಹಿತವಾದ ನಾಳೆಗಾಗಿ, ನಾವು ಈ ಆಂತರ್ಯದ ಸ್ವಾತಂತ್ರ್ಯದ ಪಥದಲ್ಲಿ ದೃಢವಾದ ಹೆಜ್ಜೆಗಳನ್ನು ಇರಿಸೋಣ.