ಡಿಸೆಂಬರ್ 16ರಂದು ಆಚರಿಸುವ ವಿಜಯ್ ದಿವಸ್ (Vijay Diwas) ಭಾರತೀಯರ ಹೃದಯಗಳಿಗೆ ಹತ್ತಿರವಾದದ್ದು. ಇದು 1971ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಗೆಲುವು ಮತ್ತು ನೂತನ ರಾಷ್ಟ್ರವಾಗಿ ಬಾಂಗ್ಲಾದೇಶದ ಸ್ಥಾಪನೆಯನ್ನು ನೆನಪಿಸುತ್ತದೆ. ಈ ದಿನದಂದು ಪಶ್ಚಿಮ ಪಾಕಿಸ್ತಾನದ ದುರಾಡಳಿತದಲ್ಲಿ ನರಳುತ್ತಿದ್ದ ಪೂರ್ವ ಪಾಕಿಸ್ತಾನವನ್ನು ವಿಮೋಚನೆಗೊಳಿಸಲು ಹೋರಾಡಿ ಮಡಿದ ವೀರ ಯೋಧರನ್ನು ಸ್ಮರಿಸುವ ದಿನವೂ ಹೌದು. ಬೆಂಗಾಲಿ ಜನರ ಮೇಲಿನ ದೌರ್ಜನ್ಯದ ಪ್ರತಿಭಟನೆಯಾಗಿ ಆರಂಭಗೊಂಡ ಈ ಯುದ್ಧ 13 ದಿನಗಳ ಕಾಲ ನಡೆಯಿತು. ಯುದ್ಧದ ಕೊನೆಯಲ್ಲಿ 90,000ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಭಾರತದ ಸೈನ್ಯದ ಎದುರು ಶರಣಾಗತಿ ಹೊಂದಿದರು. ಇದು ಎರಡನೇ ಮಹಾಯುದ್ಧದ ಬಳಿಕ ಅತಿಹೆಚ್ಚು ಸೈನಿಕರು ಶರಣಾಗತಿ ಹೊಂದಿದ ಪ್ರಸಂಗವಾಗಿತ್ತು. ಪಾಕಿಸ್ತಾನ ಭಾರಿ ಮುಖಭಂಗ ಅನುಭವಿಸಬೇಕಾಯಿತು.
ಭಾರತದ ಮಧ್ಯಪ್ರವೇಶ ಏಕೆ?:
ಭಾರತದ ಮಧ್ಯಪ್ರವೇಶ ಕೇವಲ ಒಂದು ರಾಷ್ಟ್ರೀಯ ಪ್ರಯತ್ನ ಮಾತ್ರವೇ ಆಗಿರದೆ, ಮಾನವೀಯ ಬಿಕ್ಕಟ್ಟುಗಳಿಗೆ ನೀಡಿದ ಪ್ರತಿಕ್ರಿಯೆಯೂ ಆಗಿತ್ತು. ರಾಜತಾಂತ್ರಿಕ ಮತ್ತು ಮಿಲಿಟರಿ ಬೆಂಬಲ ಒದಗಿಸುವ ಮೂಲಕ, ಸೋವಿಯತ್ ಒಕ್ಕೂಟವೂ ಈ ಯುದ್ಧದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಈ ಯುದ್ಧಕ್ಕೆ ತಕ್ಷಣವೇ ಕದನ ವಿರಾಮ ಘೋಷಿಸಬೇಕೆಂಬ ವಿಚಾರ ಬಂದಾಗ ರಷ್ಯಾ ತನ್ನ ವಿಟೋ ಅಧಿಕಾರ ಬಳಸಿ ಅದನ್ನು ತಡೆದಿತ್ತು. ಇನ್ನು ಮಿಲಿಟರಿ ವಿಚಾರದಲ್ಲಿ ಸೋವಿಯತ್ ಒಕ್ಕೂಟ ಭಾರತಕ್ಕೆ ಯುದ್ಧ ವಿಮಾನಗಳು, ಟ್ಯಾಂಕ್‌ಗಳು ಸೇರಿದಂತೆ ಪ್ರಮುಖ ಆಯುಧ ವ್ಯವಸ್ಥೆಗಳನ್ನು ಒದಗಿಸಿ, ತನ್ನ ನೌಕಾಪಡೆಯನ್ನು ಹಿಂದೂ ಮಹಾಸಾಗರದಲ್ಲಿ ನಿಯೋಜಿಸಿತು.
ಬಾಂಗ್ಲಾದಲ್ಲಿ ಬಿಜೊಯ್ ದಿಬೊಸ್
ವಿಜಯ ದಿವಸ ಭಾರತದಾದ್ಯಂತ, ಅದರಲ್ಲೂ ವಿಶೇಷವಾಗಿ ಸೇನಾ ಸ್ಮಾರಕಗಳಲ್ಲಿ ವಿವಿಧ ಸಮಾರಂಭಗಳು, ಸಂಭ್ರಮಾಚರಣೆಗಳು ನಡೆಯುವ ದಿನವಾಗಿದೆ. ನಾಯಕರು ಪುಷ್ಪ ನಮನ ಸಲ್ಲಿಸಿ, ಮಡಿದ ಯೋಧರಿಗೆ ಗೌರವ ಸಮರ್ಪಿಸುತ್ತಾರೆ. ಬಾಂಗ್ಲಾದೇಶದಲ್ಲಿ ಈ ದಿನವನ್ನು ಬಿಜೊಯ್ ದಿಬೊಸ್ ಎಂದು ಆಚರಿಸಿ, ಭಾರತ ಮತ್ತು ಸೋವಿಯತ್ ಒಕ್ಕೂಟಗಳ ಬೆಂಬಲಕ್ಕೆ ಗೌರವ ಸಲ್ಲಿಸಲಾಗುತ್ತದೆ.
ಸೋವಿಯತ್ ಒಕ್ಕೂಟದ ಬೆಂಬಲ; ಒಂದು ಮಹತ್ವದ ಅಧ್ಯಾಯ
1971ರ ಯುದ್ಧ ಕೇವಲ ಭಾರತ – ಪಾಕಿಸ್ತಾನಗಳ ನಡುವಿನ ಯುದ್ಧವಷ್ಟೇ ಆಗಿರಲಿಲ್ಲ. ಅದು ಒಂದು ಶೀತಲ ಸಮರದ ರಣರಂಗವೂ ಆಗಿತ್ತು. ಅಮೆರಿಕಾ, ಚೀನಾ ಮತ್ತು ಕೆಲವು ಇಸ್ಲಾಮಿಕ್ ರಾಷ್ಟ್ರಗಳು ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದರೆ, ರಷ್ಯಾ ಭಾರತದ ಬೆನ್ನಿಗೆ ನಿಂತಿತ್ತು. 1971ರಲ್ಲಿ ಭಾರತ ಮತ್ತು ಸೋವಿಯತ್ ಒಕ್ಕೂಟಗಳ ನಡುವೆ ಒಪ್ಪಂದವೊಂದಕ್ಕೆ ಸಹಿ ಹಾಕಲಾಯಿತು. ಅದರ ಪ್ರಕಾರ, ಭಾರತದ ವಿರುದ್ಧ ಆಕ್ರಮಣ ನಡೆದರೆ ರಷ್ಯಾ ನೆರವು ನೀಡುವ, ಆಯುಧ ಮತ್ತು ಗುಪ್ತಚರ ಪೂರೈಕೆ ನಡೆಸುವ ನಿರ್ಣಯ ಕೈಗೊಳ್ಳಲಾಯಿತು.
ಇದನ್ನೂ ಓದಿ : Raja Marga Column : ಕ್ಯಾ. ಪ್ರಾಂಜಲ್ ಮಾತ್ರವಲ್ಲ ಅವರ ಹೆತ್ತವರು, ಪತ್ನಿ ಕೂಡಾ ವೀರ ಯೋಧರೆ!
ರಾಜತಾಂತ್ರಿಕವಾಗಿ ಸೋವಿಯತ್ ಒಕ್ಕೂಟ ತನ್ನ ಪ್ರಭಾವ ಬಳಸಿ ಎಲ್ಲ ಪ್ರಮುಖ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಬೆಂಬಲಿಸಿ, ಪಾಕಿಸ್ತಾನದ ಪರ ಯಾವುದೇ ನಿರ್ಣಯ ಬರದಂತೆ ತಡೆದಿತ್ತು. ಸೋವಿಯತ್ ಒಕ್ಕೂಟ ಚೀನಾಗೆ ಈ ಯುದ್ಧದಿಂದ ಹೊರಗಿರುವಂತೆ ಎಚ್ಚರಿಕೆ ನೀಡಿತು. ಅದರೊಡನೆ, ಮಿಲಿಟರಿ ವಿಭಾಗದಲ್ಲಿ ಸೋವಿಯತ್ ಒಕ್ಕೂಟ ಭಾರತಕ್ಕೆ ವಾಯು ರಕ್ಷಣೆ ಮತ್ತು ನೌಕಾ ಬೆಂಬಲ ಒದಗಿಸಿದ್ದು ಯುದ್ಧದ ಗೆಲುವು ಭಾರತದ ಪರ ವಾಲುವಂತೆ ಮಾಡಿತು. ಈ ನೆರವು ಭಾರತ ಯುದ್ಧದಲ್ಲಿ ಗೆಲುವು ಸಾಧಿಸುವಂತೆ ಮಾಡಿ, ಇಂಡೊ – ಸೋವಿಯತ್ ಸ್ನೇಹವನ್ನು ಇನ್ನಷ್ಟು ಬಲಪಡಿಸಿ, ಜಾಗತಿಕ ರಾಜಕಾರಣದ ಮೇಲೆ ಪರಿಣಾಮ ಬೀರುವಂತೆ ಮಾಡಿತು.
ಐಎನ್ಎಸ್ ಘಾಜಿಯ ಅಂತ್ಯ; ಒಂದು ನೌಕಾ ನಾಟಕ
ಭಾರತದ ವಿಮಾನ ವಾಹಕ ನೌಕೆಯಾದ ಐಎನ್ಎಸ್ ವಿಕ್ರಾಂತ್ ಅನ್ನು ಮುಳುಗಿಸುವ ಉದ್ದೇಶದಿಂದ ಬಂದ ಪಾಕಿಸ್ತಾನದ ಐಎನ್ಎಸ್ ಘಾಜಿ಼ ಜಲಾಂತರ್ಗಾಮಿ ಮುಳುಗಿ ನಾಶಗೊಂಡಿದ್ದು ಈ ಯುದ್ಧದಲ್ಲಿ ಪ್ರಮುಖ ವಿದ್ಯಮಾನವಾಗಿ ರೂಪುಗೊಂಡಿತ್ತು. ಪಾಕಿಸ್ತಾನದ ಈ ನಡೆಯನ್ನು ಮೊದಲೇ ನಿರೀಕ್ಷಿಸಿದ್ದ ಭಾರತೀಯ ನೌಕಾಪಡೆ ಐಎನ್ಎಸ್ ರಾಜ್‌ಪುತ್ ನೌಕೆಯನ್ನು ಬಳಸಿ, ಪಾಕಿಸ್ತಾನಕ್ಕೆ ಗಾಳ ಸಿದ್ಧಪಡಿಸಿತ್ತು.
ಡಿಸೆಂಬರ್ 3, 1971ರ ರಾತ್ರಿ ನಡೆದ ನಿಗೂಢ ಬೆಳವಣಿಗೆಗಳಲ್ಲಿ, ಐಎನ್ಎಸ್ ಘಾಜಿ಼ ತಾನು ಐಎನ್ಎಸ್ ವಿಕ್ರಾಂತ್ ಅನ್ನು ಪತ್ತೆ ಹಚ್ಚಿರುವುದಾಗಿ ಭ್ರಮಿಸಿ, ಐಎನ್ಎಸ್ ರಾಜ್‌ಪುತ್ ಕಡೆ ತೆರಳಿತ್ತು. ಆ ಸಂದರ್ಭದಲ್ಲಿ ಐಎನ್ಎಸ್ ರಾಜ್‌ಪುತ್ ನೌಕೆಯ ಡೆಪ್ತ್ ಚಾರ್ಜರ್‌ಗಳಿಂದ ಸ್ಫೋಟಿಸಿರಬಹುದು, ಅಥವಾ ಪಾಕಿಸ್ತಾನ ಹೇಳುವಂತೆ, ಘಾಜಿ಼ಯದೇ ಮೈನ್ ಸ್ಫೋಟಗೊಂಡು ಅದು ಮುಳುಗಿರಬಹುದು. ಐಎನ್ಎಸ್ ಘಾಜಿ಼ ಜಲಾಂತರ್ಗಾಮಿಯನ್ನು ಮುಳುಗಿಸಿದ್ದು ಭಾರತೀಯ ನೌಕಾಪಡೆಗೆ ಮಹತ್ವದ ಸಾಧನೆಯಾಗಿದ್ದು, ಆ ಮೂಲಕ ಐಎನ್ಎಸ್ ವಿಕ್ರಾಂತ್ ಸುರಕ್ಷಿತವಾಗಿ ಕಾರ್ಯಾಚರಣೆ ನಡೆಸಿ, ಅಂತಿಮವಾಗಿ ಪೂರ್ವದಲ್ಲಿ ಪಾಕಿಸ್ತಾನಿ ಸೇನೆ ಶರಣಾಗುವಂತೆ ಮಾಡಿತು.
ಐಎನ್ಎಸ್ ಘಾಜಿ಼ ಪತನ ಒಂದು ಸ್ಮರಣೀಯ ಸಾಧನೆಯಾಗಿದ್ದು, ಭಾರತೀಯ ನಾವಿಕರ ಕೌಶಲ, ಧೈರ್ಯಗಳನ್ನು ಪ್ರದರ್ಶಿಸಿ, ಭಾರತ ಮತ್ತು ಪಾಕಿಸ್ತಾನಗಳ ನೌಕಾಪಡೆಗಳ ಇತಿಹಾಸದಲ್ಲೇ ಮಹತ್ವದ ಬೆಳವಣಿಗೆ ಎನಿಸಿತು.
ರಾಷ್ಟ್ರದ ತ್ಯಾಗ, ನಾಯಕತ್ವದ ಹಿರಿಮೆ
ವಿಜಯ ದಿವಸದ ಸಂದರ್ಭದಲ್ಲಿ ನಾವು ಕೇವಲ ನಮ್ಮ ಗೆಲುವನ್ನು ಮಾತ್ರ ಸಂಭ್ರಮಿಸುವುದಿಲ್ಲ. ಬದಲಿಗೆ, ಭಾರತೀಯ ಸೈನಿಕರ ತ್ಯಾಗ, ಬಲಿದಾನಗಳನ್ನೂ ಸ್ಮರಿಸುತ್ತೇವೆ. ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ, ಅಡ್ಮಿರಲ್ ಎಸ್ ಎಂ ನಂದಾ, ಹಾಗೂ ಏರ್ ಚೀಫ್ ಮಾರ್ಷಲ್ ಪಿ ಸಿ ಲಾಲ್ ಅವರ ದೂರದೃಷ್ಟಿಯ ನಾಯಕತ್ವ ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಅವರ ಕಾರ್ಯತಂತ್ರದ ನಿಖರತೆ, ಮಣಿಯದ ಸಂಕಲ್ಪ 1971ರಲ್ಲಿ ಭಾರತವನ್ನು ಜಯಶಾಲಿಯನ್ನಾಗಿಸಿದವು. ಗೆಲುವಿನ ಸಂಭ್ರಮದ ಜೊತೆಗೆ, ನಮ್ಮ ಸೇನೆ ಅನುಭವಿಸಿದ ಭಾರೀ ಸಾವುನೋವುಗಳನ್ನೂ ನಾವು ಈ ದಿನ ಗಮನಿಸಬೇಕು. ಬಾಂಗ್ಲಾದೇಶದ ವಿಮೋಚನೆಗಾಗಿ ಸಾವಿರಾರು ವೀರ ಯೋಧರು ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ಅವರ ತ್ಯಾಗಗಳು ಭಾರತದ ನೆನಪಿನಲ್ಲಿ ಸದಾ ಇರುತ್ತವೆ.
ರಾಜಕೀಯ ನಾಯಕತ್ವ
ಈ ಐತಿಹಾಸಿಕ ಯುದ್ಧ ಗೆಲುವಿನ ಸಾಧನೆಯ ಹಿಂದೆ ರಾಜಕೀಯ ನಾಯಕತ್ವವೂ ಸಮಾನವಾಗಿಯೇ ಮಹತ್ತರ ಪಾತ್ರ ವಹಿಸಿದೆ. ಪ್ರಧಾನಿ ಇಂದಿರಾ ಗಾಂಧಿಯವರ ದೃಢ ನಿರ್ಧಾರಗಳು ದೇಶದ ಗೆಲುವಿಗೆ ಪೂರಕವಾಗಿದ್ದವು. ವಿಜಯ ದಿವಸ್ ಕೇವಲ ಗೆಲುವಿನ ಸ್ಮರಣೆ ಮಾತ್ರವಲ್ಲದೆ, ಭಾರತೀಯ ಸೈನಿಕರ ತ್ಯಾಗ, ನಿಖರ ನಾಯಕತ್ವ ಮತ್ತು ದೃಢ ನಿಶ್ಚಯಗಳ ಮೂಲಕ ಭಾರತ ಮತ್ತು ಭಾರತದ ನೆರೆಯ ರಾಷ್ಟ್ರಗಳಿಗೆ ಹೊಸ ಹಾದಿಯನ್ನು ನಿರ್ಮಿಸಿಕೊಟ್ಟ ದಿನದ ಸ್ಮರಣೆಯೂ ಹೌದು.
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು)