ಬೆಂಗಳೂರು: ಭಾರತದಲ್ಲಿ ಮುಂಗಾರು ಮಳೆ ಆರಂಭವಾದರೆ ರೈತ ಕವಿಯಾಗುತ್ತಾನೆ ಎಂಬ ಮಾತಿದೆ. ಮಳೆ ಆರಂಭವಾಗುವ ಮುನ್ನ ಜಮೀನು ಹದಗೊಳಿಸಿ, ಮುಂಗಾರು ಆರಂಭವಾದ ಕೂಡಲೇ ಬಿತ್ತನೆ, ನಾಟಿ ಮಾಡುವ ಪ್ರಕ್ರಿಯೆಯಲ್ಲಿ ರೈತರು ಖುಷಿ ಕಾಣುತ್ತಾರೆ, ಲವಲವಿಕೆಯಿಂದ ಕೃಷಿ ಕಾರ್ಯದಲ್ಲಿ ತೊಡಗುತ್ತಾರೆ ಎಂಬ ದೃಷ್ಟಿಯಲ್ಲಿ ಈ ಮಾತು ಹೇಳಿದ್ದು, ಸಮಂಜಸವಾದ ಹೋಲಿಕೆಯಾಗಿದೆ. ಅಷ್ಟಕ್ಕೂ, ದೇಶದಲ್ಲಿ ಯಾವ ಗಣ್ಯರು ಎಷ್ಟೇ ಸರಳವಾದ ಜೀವನ ಸಾಗಿಸಲಿ, ‘ಡೌನ್ ಟು ಅರ್ಥ್’ ಎಂದು ಯಾರಾದರೂ ಇದ್ದರೆ ಅದು ರೈತರು ಮಾತ್ರ. ದೇಶಕ್ಕೆ ಅನ್ನ ನೀಡುವ ರೈತರ ಬದುಕು ಮುಂಗಾರು ಮಳೆಯೊಂದಿಗೆ ಬೆಸೆದುಕೊಂಡಿದೆ. ದೇಶದ ಕೃಷಿಯನ್ನು ನಿರ್ಧರಿಸುವುದೇ ಮುಂಗಾರು ಮಳೆಯಾಗಿದ್ದು, ಮುಂಗಾರು ಹಾಗೂ ದೇಶದ ಕೃಷಿ ಚಟುವಟಿಕೆಗಳ (Monsoon And Agriculture) ಮೇಲೊಂದು ಸಣ್ಣ ಇಣುಕು ನೋಟ ಬೀರುವ ಪ್ರಯತ್ನ ಇಲ್ಲಿದೆ.
ಮುಂಗಾರು ಮತ್ತು ಕೃಷಿ ನಂಟು
ದೇಶದ ಭವಿಷ್ಯವನ್ನು ನಿರ್ಧರಿಸುವುದೇ ಮುಂಗಾರು. ದೇಶಾದ್ಯಂತ ವರ್ಷದಲ್ಲಿ ಬೀಳುವ ಮಳೆಯಲ್ಲಿ ಮುಂಗಾರು ಪ್ರಮಾಣ ಶೇ.70ರಷ್ಟಿದೆ. ಶೇ.60ರಷ್ಟು ಕೃಷಿ ಭೂಮಿಗೆ ಮುಂಗಾರು ಮಳೆಯೇ ನೀರುಣಿಸುತ್ತದೆ. ಅದರಲ್ಲೂ, ದೇಶದ ಶೇ.65ರಷ್ಟು ಜನ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದು, ಶೇ.47ರಷ್ಟು ಮಂದಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಮುಂಗಾರು ಮಳೆ ವಾಡಿಕೆಯಷ್ಟು ಬಂದರೆ ಸಾಕು, ಆ ವರ್ಷ ದೇಶದ ಜನ ನೆಮ್ಮದಿಯಿಂದ ಇರುತ್ತಾರೆ ಎಂದು ಹೇಳುವಷ್ಟರಮಟ್ಟಿಗೆ ಮುಂಗಾರು ಮಳೆ ಹಾಗೂ ಕೃಷಿ ಚಟುವಟಿಕೆಗಳು ಒಂದಕ್ಕೊಂದು ಬೆಸೆದುಕೊಂಡಿವೆ.
ಮುಂಗಾರು ಅವಧಿಯ ಬೆಳೆಗಳು
ಮುಂಗಾರು ಅವಧಿಯಲ್ಲಿ ದೇಶಾದ್ಯಂತ ಸುಮಾರು 151 ದಶಲಕ್ಷ ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಲಾಗುತ್ತದೆ. ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಶೇ.75ರಷ್ಟು ಮಳೆ ಸುರಿದರೂ ಸಾಕು ಭತ್ತ, ತೊಗರಿ, ಹತ್ತಿ, ಮೆಕ್ಕೆಜೋಳ, ಹತ್ತಿ, ರಾಗಿ ಸೇರಿ ಪ್ರಮುಖ ಬೆಳೆಗಳು ಸಮೃದ್ಧವಾಗಿರುತ್ತವೆ. ಇಷ್ಟು ಮಳೆಯಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಶೇ.50ರಷ್ಟು ಭೂಮಿಗೆ ನೀರಾವರಿ ಸೌಲಭ್ಯ ಸಿಗುತ್ತದೆ. ಬೇಸಿಗೆಯ ಬೆಳೆಗೂ ಇದು ನೆರವಾಗುತ್ತದೆ. ಹಾಗಾಗಿ, ಮುಂಗಾರು ಬಂದರೆ ರೈತರು ಹಾಗೂ ದೇಶ ಪಾರಾದಂತೆಯೇ ಲೆಕ್ಕ.
ಈ ಬಾರಿ ವಿಳಂಬ, ಹೆಚ್ಚಿದ ಆತಂಕ
ಪ್ರತಿ ಬಾರಿ ಜೂನ್ 1ರಂದು ಕೇರಳದ ಮೂಲಕ ಮುಂಗಾರು ಮಳೆಯು ದೇಶವನ್ನು ಪ್ರವೇಶಿಸುತ್ತದೆ. ನೈಋತ್ಯ ಮುಂಗಾರು ಕೆಲವೇ ದಿನಗಳಲ್ಲಿ ದೇಶದೆಲ್ಲೆಡೆ ಪಸರಿಸಿ, ಜೂನ್ 15ರೊಳಗೆ ದೇಶದ ಜನ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಆದರೆ, ಈ ಬಾರಿ ಒಂದು ವಾರ ತಡವಾಗಿ ಮುಂಗಾರು ಆಗಮನವಾಗಿದೆ. ಅಷ್ಟೇ ಅಲ್ಲ, ಇನ್ನೂ ಮುಂಗಾರು ಚುರುಕಾಗಿಲ್ಲ. ಇದರಿಂದಾಗಿ ಶೇ.50ರಷ್ಟು ಬಿತ್ತನೆ ಕುಸಿದಿದೆ. ಕರ್ನಾಟಕದಲ್ಲಿಯೇ ಇದುವರೆಗೆ 119 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 84 ಮಿ.ಮೀ ಮಳೆಯಾದ ಕಾರಣ ರಾಜ್ಯದಲ್ಲಿ ಅರ್ಧದಷ್ಟೂ ಬಿತ್ತನೆ ಮಾಡಿಲ್ಲ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಯಾದಗಿರಿ, ಕೋಲಾರ, ಚಿಕ್ಕಬಳ್ಳಾಪುರ ಸೇರಿ ಹಲವೆಡೆ ಬಿತ್ತನೆಯೇ ಆರಂಭವಾಗಿಲ್ಲ. ಇದರಿಂದಾಗಿ ದೇಶದ ರೈತರು ಆಗಸದ ಕಡೆ ಮುಖ ಮಾಡುವಂತಾಗಿದೆ. ಇನ್ನೂ ಕೆಲವು ವಾರ ಹೀಗೆಯೇ ಆದರೆ, ರೈತರು ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: Monsoon Food: ನಾಲಿಗೆಯ ಚುಟುಚುಟು ನಿವಾರಿಸುವ ಉತ್ತರ ಕರ್ನಾಟಕದ ಮಳೆಗಾಲದ ಖಾದ್ಯಗಳು!
ಮುಂಗಾರು ಮಳೆ ಆಗದಿದ್ದರೆ ಏನು ಪರಿಣಾಮ?
ಮುಂಗಾರು ಮಳೆಯು ದೇಶದ ಭವಿಷ್ಯ ನಿರ್ಧರಿಸುವಷ್ಟು ಮಹತ್ವ ಪಡೆದಿದೆ. ದೇಶದ ಅರ್ಧದಷ್ಟು ಜನ ಕೃಷಿಯನ್ನೇ ನಂಬಿರುವ ಕಾರಣ ಮುಂಗಾರು ಮಳೆ ಉತ್ತಮವಾಗಿ ಆಗದಿದ್ದರೆ ರೈತರ ಮೇಲೆ ನೇರ ಪರಿಣಾಮ ಬೀರಲಿದೆ. ಅಷ್ಟೇ ಏಕೆ, ದೇಶಾದ್ಯಂತ ಆಹಾರದ ಕೊರತೆಯಾಗಲಿದೆ. ಹಣದುಬ್ಬರ ಏರಿಕೆಯಾಗಿ ಅಗತ್ಯ ವಸ್ತುಗಳ ಬೆಲೆಯು ಗಗನಕ್ಕೇರಲಿದೆ. ಇನ್ನು, ವಿದ್ಯುತ್ ಉತ್ಪಾದನೆಯಾಗದೆ ಜನ ಕತ್ತಲಲ್ಲೇ ಕಾಲ ಕಳೆಯುವಂತಾಗುತ್ತದೆ. ದೇಶದ ಜಿಡಿಪಿಯು ನೆಲಕಚ್ಚುತ್ತದೆ. ನಿರುದ್ಯೋಗ ಪ್ರಮಾಣ ಏರಿಕೆಯಾಗಿ ಅರಾಜಕತೆ ಸೃಷ್ಟಿಯಾಗುತ್ತದೆ. ಯಾವ ಸರ್ಕಾರವೂ ಸ್ಥಿರ ಆಡಳಿತ ನೀಡಲು ಆಗುವುದಿಲ್ಲ. ಜಾಗತಿಕವಾಗಿ ಹವಾಮಾನ ಬದಲಾವಣೆ, ಜಾಗತಿಕ ತಾಪಮಾನದ ಏರಿಕೆಯ ಪರಿಣಾಮವು ದೇಶದ ಮುಂಗಾರಿನ ಮೇಲೆಯೂ ಉಂಟಾಗುತ್ತಿದೆ. ಸದ್ಯ, ಜಾಗತಿಕ ಹವಾಮಾನ ಬದಲಾವಣೆಯ ಪರಿಣಾಮ ನೇರವಾಗಿ ಬೀರದಿದ್ದರೂ, ಮುಂದೊಂದು ದಿನ ಬಾಧಿಸುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ, ದೇಶದ ಅಳಿವು-ಉಳಿವಿನ ಪ್ರಶ್ನೆಗೆ ಮುಂಗಾರು ಮಳೆ ಉತ್ತರವಾಗಿದೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ