: ಮೋಹನದಾಸ ಕಿಣಿ
ಸರ್ಕಾರಿ ಗುತ್ತಿಗೆ ಪಡೆದು ಬಿಲ್ಲಿನ ಹಣ ಪಡೆದರೂ ನೌಕರರಿಗೆ ಕೂಲಿ ಹಣ ಪಾವತಿಸದೆ ವಂಚಿಸಿದ xxx ಪಕ್ಷದ ಕಾರ್ಯಕರ್ತ! ಹೀಗೊಂದು ಸುದ್ದಿ ಕೆಲವು ಮಾಧ್ಯಮಗಳಲ್ಲಿ, ಕೆಲವು ಪತ್ರಿಕೆಗಳಲ್ಲಿ ದೊಡ್ಡದಾಗಿ ಬರುತ್ತದೆ. ಇಲ್ಲಿ ಗುತ್ತಿಗೆ ಪಡೆದವನು ಸರ್ಕಾರದಿಂದ ಹಣ ಪಡೆದರೂ ಕೆಲಸ ಮಾಡಿದವರಿಗೆ ಕೂಲಿಯ ಹಣ ಪಾವತಿಸದಿರುವುದಷ್ಟೇ ಮುಖ್ಯ ವಿಷಯ. ಗುತ್ತಿಗೆ, ಸರಕಾರದ್ದಾಗಲೀ ಖಾಸಗಿಯಾಗಲಿ ಕೆಲಸ ಮಾಡಿದ ಬಗ್ಗೆ ಕೂಲಿ ಬಾಕಿ ಇರಿಸಿಕೊಂಡ ವಿಷಯಕ್ಕೆ ಹೊರತಾಗಿ, ಸರ್ಕಾರದಿಂದ ಹಣ ಪಡೆದಿರಲಿ ಅಥವಾ ಬಾಕಿ ಇದ್ದಿರಲಿ ಇದ್ಯಾವುದೂ ಮುಖ್ಯವಾಗುವುದಿಲ್ಲ. ಅದಕ್ಕೂ ಮಿಗಿಲಾಗಿ, ಗುತ್ತಿಗೆದಾರ ಒಂದು ಪಕ್ಷದ ಕಾರ್ಯಕರ್ತ ಎಂಬುದಕ್ಕೆ ಅಷ್ಟೇಕೆ ಪ್ರಾಮುಖ್ಯತೆ ನೀಡಬೇಕು?
ಕೆಲವೊಂದು ಉದಾಹರಣೆಗಳನ್ನು ನೋಡುವುದಾದರೆ, ಕರ್ನಾಟಕದ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಥವಾ ಮಾಜಿ ಸಚಿವ ಜನಾರ್ದನ ರೆಡ್ಡಿ ನಡೆಸಿದ್ದೆನ್ನಲಾದ ಆರ್ಥಿಕ ಅಪರಾಧಗಳ ತನಿಖೆಯಿರಲಿ, ಮಾಜಿ ಸಚಿವರಾಗಿರುವ ಈಶ್ವರಪ್ಪ, ರಮೇಶ್ ಜಾರಕಿಹೊಳಿ ಮುಂತಾದವರ ಕಾನೂನು ಬಾಹಿರ ಎನ್ನಲಾಗುವ ಚಟುವಟಿಕೆಗಳ ತನಿಖೆಯಿರಲಿ ಇನ್ಯಾವುದೇ ಅಪರಾಧಗಳ ತನಿಖೆಗಳೇನಿದ್ದರೂ ಅವರು ಓರ್ವ ವ್ಯಕ್ತಿಯಾಗಿ ಮಾಡಿದ್ದೇ ಹೊರತು ಪದನಿಮಿತ್ತ ಅಲ್ಲ. ಆದ್ದರಿಂದ ಸಂಬಂಧಿಸಿದ ವರದಿಯೊಂದಿಗೆ ಅವರು ಯಾವ ರಾಜಕೀಯ ಪಕ್ಷದಲ್ಲಿ ಯಾವ ಪದವಿಯನ್ನು ಹೊಂದಿದ್ದರೋ ಅದನ್ನು ಉಲ್ಲೇಖಿಸುವ ಅಗತ್ಯವಿದೆಯೇ? ಅಪರಾಧ ರಾಜಕೀಯ ವ್ಯಕ್ತಿಗಳು ಮಾಡಿದರೆ ಒಂದು ರೀತಿಯ ಶಿಕ್ಷೆ, ಬೇರೆಯವರು ಮಾಡಿದರೆ ಇನ್ನೊಂದು ಶಿಕ್ಷೆ ಎಂಬ ವರ್ಗೀಕರಣವೇನಾದರೂ ಇದೆಯೇ?
ಅಪರಾಧಿಗಳನ್ನು ಅವರ ರಾಜಕೀಯ ಸ್ಥಾನಮಾನಕ್ಕೆ ಜೋಡಿಸುವುದರಿಂದ ಆಗಬಹುದಾದ ತಪ್ಪುಗಳ ಕುರಿತು ಒಂದಿಷ್ಟು: ಸಾಮಾನ್ಯವಾಗಿ ನ್ಯಾಯಾಲಯಕ್ಕೆ ಸಲ್ಲಿಸುವ ದೋಷಾರೋಪಣಾ ಪಟ್ಟಿಯಲ್ಲಿ ಆರೋಪಿಯ ಹೆಸರು, ತಂದೆಯ ಹೆಸರು, ವಯಸ್ಸು, ಉದ್ಯೋಗ ಬರೆಯುವುದು ವಾಡಿಕೆ. ರಾಜಕೀಯ ವ್ಯಕ್ತಿಗಳ ಮೇಲಿನ ಆರೋಪ ಪಟ್ಟಿ ತಯಾರಿಸುವಾಗ ಅವರ ನಿಜವಾದ ಉದ್ಯೋಗವನ್ನು ಬರೆಯುವ ಬದಲು ಪದವಿಯನ್ನು ಏಕೆ ಬರೆಯಬೇಕು? ರಾಜಕೀಯ ಸೇವಾ ಕ್ಷೇತ್ರ ತಾನೇ? ಉದ್ಯೋಗ ಅಲ್ಲವಲ್ಲ? ಇದನ್ನು ಹೇಳುವುದರ ಉದ್ದೇಶವಿಷ್ಟೇ: ಬಹಳಷ್ಟು ಪ್ರಕರಣಗಳಲ್ಲಿ ನ್ಯಾಯಾಧೀಶರು ಏನೋ ಒಂದು ಕಾರಣಕ್ಕೆ ವಿಚಾರಣೆಯಿಂದ ಹಿಂದಕ್ಕೆ ಸರಿದಿದ್ದ ಉದಾಹರಣೆಗಳಿವೆ. ಆದರೆ ರಾಜಕಾರಣಿಗಳಿಗೆ ಸಂಬಂಧಿಸಿದ ವಿಚಾರಣೆಗಳಲ್ಲಿ ಇಂತಹ ಉದಾಹರಣೆಗಳು ಇದ್ದಂತಿಲ್ಲ. ಗಣಿ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿದ್ದ ಸಿಬಿಐ ನ್ಯಾಯಾಧೀಶರಿಗೇ ಲಂಚ ಕೊಟ್ಟು ಸಿಕ್ಕಿಬಿದ್ದಿದ್ದು, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ವರ್ಷಗಳ ಕಾಲ ತನಿಖೆ ನಡೆಸಿ, ಅಪರಾಧ ಸಾಬೀತಾಗಿರುವ ಬಗ್ಗೆ ಸ್ಪಷ್ಟ ದಾಖಲೆಗಳನ್ನು ಪರಿಶೀಲಿಸಿ ಶಿಕ್ಷೆ ವಿಧಿಸಿದ್ದರೂ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಜಯಲಲಿತಾರವರ ಒಟ್ಟು ಆಸ್ತಿ ಮೌಲ್ಯ ಲೆಕ್ಕ ಹಾಕುವಾಗ ತಪ್ಪು ಮಾಡಿ, ಆರೋಪದಿಂದ ಮುಕ್ತರನ್ನಾಗಿಸಿದ್ದು, ಅಂತಿಮವಾಗಿ ಅವರಿಗೆ ಶಿಕ್ಷೆ ವಿಧಿಸುವ ತೀರ್ಪು ಬರುವಾಗ ಜಯಲಲಿತಾ ಇಹಲೋಕವನ್ನೇ ತ್ಯಜಿಸಿದ್ದು, ಇವೆಲ್ಲವೂ ರಾಜಕಾರಣಿಗಳಿಗೆ ಸಂಬಂಧಿಸಿದ ಮೊಕದ್ದಮೆಗಳ ಅಧ್ವಾನಗಳು. ರಾಜಕಾರಣಿಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣದಲ್ಲಿ ಮತ್ತು ಇತರ ಸಾಮಾನ್ಯ ವರ್ಗದ ವಿಚಾರಣಾ ಪ್ರಕ್ರಿಯೆಯಲ್ಲಿ ಇಂತಹ ವ್ಯತ್ಯಾಸಗಳೇಕೆ?
ಸಾಲದೆಂಬಂತೆ, ರಾಜಕಾರಣಿಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ, ದುರ್ಬಲ ಸೆಕ್ಷನ್ ಅಡಿಯಲ್ಲಿ, ದೋಷಪೂರಿತ, ಅಥವಾ ವಿಳಂಬಿಸಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸುವ ಪೋಲೀಸರು, ವಿಚಾರಣೆಯನ್ನು ಕನಿಷ್ಟ ಅವಧಿಯಲ್ಲಿ ಮುಗಿಸುವ, ಚಿಕ್ಕದೊಂದು ತಾಂತ್ರಿಕ ಕಾರಣ ಸಿಕ್ಕಿದರೂ ದೋಷಮುಕ್ತರಾಗಿಸುವ, ಅಥವಾ ಶಿಕ್ಷೆಯಾದರೂ ಪದೇಪದೇ ಜಾಮೀನು ಅಥವಾ ಪೆರೋಲ್ ಮೇಲೆ ಕಾರಾಗೃಹದಿಂದ ಹೊರಗೆ ಇರಲು ಅವಕಾಶ ನೀಡುವ ನ್ಯಾಯಾಲಯ, ಸಾಮಾನ್ಯ ಜನರಿಗೆ ಆರೋಪ ಪಟ್ಟಿ ಸಲ್ಲಿಸುವಲ್ಲಿಂದ ಆರಂಭಿಸಿ ಪದೇಪದೇ ವಿಚಾರಣೆ ಮುಂದೂಡಿಕೆಯ ಕಾರಣಕ್ಕೆ ದೀರ್ಘಕಾಲ ವಿಚಾರಣಾಧೀನ ಖೈದಿಯಾಗಿ ಜೈಲಿನಲ್ಲಿರುವಂತೆ ಮಾಡಲಾಗುತ್ತದೆ. ಇದನ್ನೇ, ಇತ್ತೀಚೆಗೆ ನಿವೃತ್ತರಾದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಉಡುಪಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಬೆಟ್ಟು ಮಾಡಿದ್ದರು.
ಇದನ್ನೂ ಓದಿ: ಅನಿಸಿಕೆ: Indian Democracy: ಪರಮಾಧಿಕಾರ ಮತ್ತು ಸಮಾನತೆ ಎಂಬ ಸವಕಲು ನಾಣ್ಯಗಳು
ಅನಾರೋಗ್ಯದ ಕಾರಣ ತೋರಿಸಿ ಜಾಮೀನು ಪಡೆದು ಹೊರಗೆ ಬರುವ ರಾಜಕಾರಣಿಗಳು ಹಾಗೆ ಬಂದ ತಕ್ಷಣ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸುವುದು, ನಂತರ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಸಾಮಾನ್ಯವಾಗಿದೆ. ಹಾಗಾದರೆ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಪ್ರಮಾಣೀಕರಿಸಿದ ವೈದ್ಯರಿಗೆ ಮತ್ತು ಅದನ್ನು ಅಂಗೀಕರಿಸಿ ಜಾಮೀನು ನೀಡಿದ ನ್ಯಾಯಾಧೀಶರಿಗೆ, ಹೊರಗೆ ಬಂದ ನಂತರದ ಚಟುವಟಿಕೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲವೇ? ಹೀಗೆ ಸುಳ್ಳು ಮಾಹಿತಿ ನೀಡಿ ಜಾಮೀನು ಪಡೆಯುವುದು ನ್ಯಾಯಾಂಗ ನಿಂದನೆ ಎನಿಸಬೇಡವೇ?
ಇನ್ನು ಆರ್ಥಿಕ ಅಪರಾಧಗಳ ತನಿಖೆಯೋ ದೇವರಿಗೇ ಪ್ರೀತಿ! ವಿಪಕ್ಷ ನಾಯಕರ ಮೇಲೆ ಸಿಬಿಐ, ಆದಾಯ ತೆರಿಗೆ ಅಥವಾ ಜಾರಿ ನಿರ್ದೇಶನಾಲಯದ ದಾಳಿ ಏನಾದರೂ ನಡೆದರೆ, ಅದು ರಾಜಕೀಯ ಪ್ರೇರಿತ ಎಂದು ಗದ್ದಲವೆಬ್ಬಿಸುವುದು, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ನಷ್ಟವುಂಟು ಮಾಡುವುದು ಮುಂತಾದ ಅತಿರೇಕದ ಕ್ರಮಗಳು ಕಾನೂನು ಹಳಿತಪ್ಪುತ್ತಿರುವುದರ ದ್ಯೋತಕವಲ್ಲದೆ ಇನ್ನೇನು? ಇಲ್ಲಿ ವಿಪಕ್ಷಗಳಷ್ಟೇ ತಪ್ಪು ಆಡಳಿತ ಪಕ್ಷದ್ದೂ ಇದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬಿಜೆಪಿ ಸೇರಿದಾಗ ತಮ್ಮ ಅಳಿಯನ ಆರ್ಥಿಕ ಅಪರಾಧಗಳ ರಕ್ಷಣೆಗೆ ಪಕ್ಷಾಂತರ ಮಾಡಿದರೆಂದು ವಿಪಕ್ಷಗಳು ಹೇಳಿದರೆ, ಅದಾಗಿ ಕೆಲವೇ ಸಮಯದಲ್ಲಿ ಸಿದ್ಧಾರ್ಥ್ ಉದ್ಯಮಗಳ ಮೇಲೆ ಆದಾಯ ತೆರಿಗೆ ದಾಳಿ ನಡೆದದ್ದನ್ನು, ಬಿಜೆಪಿ ಸಚಿವರಾಗಿದ್ದ ಜನಾರ್ದನ ರೆಡ್ಡಿ ಮೇಲೆ ಕೈಗೊಂಡ ಕ್ರಮಗಳ ಬಗ್ಗೆ, ಶ್ರೀರಾಮುಲು ಆಪ್ತರ ಮೇಲಿನ ದಾಳಿ ಇತ್ಯಾದಿಗಳನ್ನು ತನಿಖೆಯಲ್ಲಿ ಸರಕಾರ ತಾರತಮ್ಯ ಮಾಡುವುದಿಲ್ಲ ಎಂದು ಸಾಬೀತುಪಡಿಸಲು ಆಡಳಿತ ಪಕ್ಷದ ವಕ್ತಾರರು ಸೂಕ್ತವಾಗಿ ಬಳಸಿಕೊಳ್ಳಲೇ ಇಲ್ಲ.
ಇದನ್ನೂ ಓದಿ: ಲೋಕಾಯುಕ್ತ | ಕಾವಲು ವ್ಯವಸ್ಥೆ ಮತ್ತು ಬಿಲದೊಳಗಿನ ಹೆಗ್ಗಣಗಳು
ಅಪರಾಧಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಗುರುತು ಸಿಗದಂತೆ ಮುಸುಕು ಹಾಕುವ ಪದ್ಧತಿ ಇದೆ. ಅದೇ ರೀತಿ ನೇರವಾಗಿ ಮುಸುಕು ಹಾಕದಿದ್ದರೂ, ಕನಿಷ್ಠ ರಾಜಕಾರಣಿಗಳ ಮೇಲಿನ ಆರೋಪಗಳ ನಿರ್ವಹಣೆಯಲ್ಲಿ ಪೊಲೀಸರಾಗಲೀ, ನ್ಯಾಯಾಧೀಶರಾಗಲೀ ಯಾವುದೇ ತಾರತಮ್ಯ ಇಲ್ಲದೆ, ನ್ಯಾಯದೇವತೆ ಮುಸುಕುಧಾರಿಯಾಗಿರುವಂತೆ ಕರ್ತವ್ಯ ನಿರ್ವಹಿಸಬೇಕಿದೆ. ಈಗಿನ ಜಡ್ಡುಗಟ್ಟಿದ ವ್ಯವಸ್ಥೆಯಲ್ಲಿ ಬಹುಶಃ ಇದು ಕನಸಾಗಿಯೇ ಉಳಿಯುವುದೇನೋ!
(ಲೇಖಕರು ಆರೋಗ್ಯ ಇಲಾಖೆಯ ನಿವೃತ್ತ ಕಚೇರಿ ಅಧೀಕ್ಷಕರು)