Site icon Vistara News

Kisan Diwas 2023 | ರೈತರ ಪರ ಅಪಾರ ಕಾಳಜಿ ಹೊಂದಿದ್ದ 5ನೇ ಪ್ರಧಾನಿ ಚೌಧರಿ ಚರಣ್ ಸಿಂಗ್

Choudhary Charan Singh @ Kisan Diwas 2023

ಪ್ರತಿ ವರ್ಷದ ಡಿಸೆಂಬರ್‌ ೨೩ನೇ ದಿನ ರಾಷ್ಟ್ರೀಯ ಕೃಷಿಕರ ದಿನ (Kisan Diwas 2023) ಅಥವಾ ಕಿಸಾನ್‌ ದಿವಸ್‌ ಆಚರಿಸಲಾಗುತ್ತದೆ. ಇದು ನಮ್ಮ ದೇಶದ ಐದನೇ ಪ್ರಧಾನಿಯಾಗಿದ್ದ ಚೌಧರಿ ಚರಣ್‌ ಸಿಂಗ್‌ (Chaudhary Charan singh) ಅವರ ಜನ್ಮ ದಿನವೂ ಹೌದು. ರೈತ ಪರ ಅಪಾರ ಕಾಳಜಿ ಹೊಂದಿದ್ದ ಅವರ ಜನ್ಮದಿನವನ್ನೇ ರೈತ ದಿನ ಎಂದು ಆಚರಿಸಲಾಗುತ್ತದೆ. ದೇಶದ ಜನರ ಹೊಟ್ಟೆ ತುಂಬಿಸುವ ರೈತರಿಗಾಗಿ ಮೀಸಲಿಟ್ಟಿರುವ ಈ ದಿನಕ್ಕೂ ಮಾಜಿ ಪ್ರಧಾನಿ ಚರಣ್‌ ಸಿಂಗ್‌ ಅವರಿಗೂ ನಂಟಿದೆ.

ಉತ್ತರ ಪ್ರದೇಶದ ನೂರ್‌ಪುರ್‌ ಎಂಬ ಹಳ್ಳಿಯ ಬಡ ರೈತ ಕುಟುಂಬವೊಂದರಲ್ಲಿ ೧೯೦೨ರಲ್ಲಿ ಜನಿಸಿದವರು ಚರಣ್‌ ಸಿಂಗ್.‌ ಬಲಾಢ್ಯ ಜಮೀನುದಾರರು ಹೇಗೆ ಬಡರೈತರನ್ನು ಶೋಷಣೆ ಮಾಡುತ್ತಿದ್ದರು ಎಂಬುದನ್ನು ಬಾಲ್ಯದಲ್ಲೇ ಕಂಡಿದ್ದರು.‌ ೧೯೨೩ರಲ್ಲಿ ವಿಜ್ಞಾನ ವಿಷಯದಲ್ಲಿ ಅವರು ಪದವಿ ಪೂರ್ಣಗೊಳಿಸಿ, ಮುಂದಿನ ಎರಡು ವರ್ಷಗಳಲ್ಲಿ ಆಗ್ರಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. ೧೯೩೭ರಲ್ಲಿ ಉತ್ತರ ಪ್ರದೇಶದ ವಿಧಾನಸಭೆಗೆ ಆಯ್ಕೆಯಾದಾಗ, ಕೃಷಿಕರ ಬದುಕಿನ ಬವಣೆಗಳನ್ನು ದೂರ ಮಾಡುವ ಸಂಕಲ್ಪ ಇರಿಸಿಕೊಂಡಿದ್ದರು. ದೇಶದ ರೈತರ ಹಿತದ ಬಗ್ಗೆ ನಿಜವಾದ ಕಾಳಜಿ ಅವರದಾಗಿತ್ತು. ೧೯೩೯ರಲ್ಲಿ ಉತ್ತರ ಪ್ರದೇಶದಲ್ಲಿ ಸಾಲ ಮನ್ನಾ ಕಾಯ್ದೆ ಜಾರಿಗೆ ವಿಶೇಷ ಕಾಳಜಿ ವಹಿಸಿದ್ದರು. ನಂತರ, ೧೯೫೦ರಲ್ಲಿ ಜಮೀನುದಾರಿ ಪದ್ಧತಿಯ ನಿಷೇಧಕ್ಕೆ ಕಾನೂನು ಜಾರಿಗೊಳಿಸಿದರು.

೧೯೫೦ರ ದಶಕದಲ್ಲಿ ಸಂಸದೀಯ ಕಾರ್ಯದರ್ಶಿ ಮತ್ತು ಕಂದಾಯ ಸಚಿವರಾಗಿದ್ದ ಅವಧಿಯಲ್ಲಿ ಭೂ ಸುಧಾರಣಾ ಕಾಯ್ದೆಗಳ ಕರಡು ಸಿದ್ಧಪಡಿಸಿದ್ದರು. ೧೯೫೪ರಲ್ಲಿ ಭೂ ಸಂರಕ್ಷಣಾ ಕಾಯ್ದೆಯನ್ನು ಸಹ ಜಾರಿಗೊಳಿಸಿದ್ದರು. ಮಾತ್ರವಲ್ಲ, ಅಂದಿನ ಪ್ರಧಾನಿ ಜನಹರಲಾಲ್‌ ನೆಹರು ಅವರ ಕೃಷಿ ಕಾಯ್ದೆಗಳನ್ನು ನೇರವಾಗಿ ಟೀಕಿಸಿದ್ದರು. ನಾಗಪುರದಲ್ಲಿ ೧೯೫೯ರಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದಲ್ಲಿ, ನೆಹರು ಅವರ ಸಮಾಜವಾದಿ ಮಾದರಿಯ ಸಹಕಾರಿ ಕೃಷಿ ನೀತಿಯ ವಿರುದ್ಧ ಸೊಲ್ಲೆತ್ತಿದ್ದರು. ಇದರಿಂದ ದೇಶದಲ್ಲಿ ಆಹಾರ ಉತ್ಪಾದನೆ ಮತ್ತು ರೈತರ ಹಿತಕ್ಕೆ ಧಕ್ಕೆ ಉಂಟಾಗುತ್ತದೆ ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಸರಕಾರಿ ಪ್ರಾಯೋಜಿತ ಉದ್ಯಮ ಮಾದರಿಯ ಕೃಷಿಗಿಂತಲೂ ರೈತ ಸಮುದಾಯಕ್ಕೆ ಪ್ರಯೋಜನವಾಗುವಂಥ ಕೃಷಿ ನೀತಿಗಳು ನಮ್ಮ ದೇಶಕ್ಕೆ ಅಗತ್ಯವಿದೆ ಎಂದು ಸದಾ ಪ್ರತಿಪಾದಿಸಿದ್ದರು. ಮುಂದೆ ನೆಹರು ಅವರು ಈ ವಿಧೇಯಕಕ್ಕೆ ಅಂಗೀಕಾರ ದೊರೆತಾಗ, ಅದನ್ನು ವಿರೋಧಿಸಿ ಕೃಷಿ ಮತ್ತು ಕಂದಾಯ ಸಚಿವರ ಸ್ಥಾನಕ್ಕೆ ಚರಣ್‌ ಸಿಂಗ್ ರಾಜೀನಾಮೆ ನೀಡಿದ್ದರು.

೧೯೭೯ರ ಜುಲೈನಲ್ಲಿ, ಮೊರಾರ್ಜಿ ದೇಸಾಯಿ ಅವರ ನಂತರ ದೇಶದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದ ಸಿಂಗ್, ‌೧೯೮೦ರ ಜನವರಿಯವರೆಗೆ ಅಧಿಕಾರದಲ್ಲಿದ್ದರು. ರೈತರ ಹಿತಕ್ಕಾಗಿ ಹಲವು ರೀತಿಯ ಭೂಸುಧಾರಣೆ ಕಾಯ್ದೆಗಳನ್ನು ವಿನ್ಯಾಸಗೊಳಿಸುವಲ್ಲಿ ಸಿಂಗ್‌ ಪಾತ್ರ ಹಿರಿದಾಗಿತ್ತು. ಉತ್ತಮ ಸಂಸದರಾಗಿದ್ದ ಅವರು, ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇರಿಸಿದವರು. ಸರಳ ಜೀವಿಯಾಗಿದ್ದ ಅವರು, ತಮ್ಮ ವಿರಾಮದ ಸಮಯದಲ್ಲಿ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ಜಮೀನ್ದಾರಿ ಪದ್ಧತಿಯ ನಿರ್ನಾಮ, ಭಾರತದ ಬಡತನ ಮತ್ತು ಅದರ ಪರಿಹಾರ, ಜಾಯಿಂಟ್‌ ಫಾರ್ಮಿಂಗ್‌ ಎಕ್ಸ್‌-ರೇಯ್ಡ್‌- ಮುಂತಾದ ಪುಸ್ತಕಗಳನ್ನವರು ಬರೆದಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ, ರೈತಪರ ಕಾಳಜಿಯನ್ನು ಇನ್ನಷ್ಟು ವ್ಯಾಪಕವಾಗಿಸಬೇಕೆಂಬ ಉದ್ದೇಶದಿಂದ ಚೌಧರಿ ಚರಣ್‌ ಸಿಂಗ್‌ ಅವರ ಜನ್ಮ ದಿನವನ್ನು ಕಿಸಾನ್ ದಿವಸ್‌ ಎಂದು ಆಚರಿಲಾಗುತ್ತದೆ.

ಕಿಸಾನ್ ದಿನದಂದ ದೇಶಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳು ಹಮ್ಮಿಕೊಳ್ಳತ್ತವೆ. ರೈತರು ಎದುರಿಸುತ್ತಿರುವ ನಾನಾ ಸಮಸ್ಯೆಗಳು ಅವುಗಳ ಪರಿಹಾರದ ಬಗ್ಗೆ ಚರ್ಚಿಸಲಾಗುತ್ತಿದೆ. ಆಧುನಿಕ ಯುಗದಲ್ಲಿ ಕೃಷಿಯನ್ನು ಹೇಗೆ ಲಾಭದಾಯಕ ಮಾಡುವುದು, ಕೃಷಿಯಲ್ಲಿ ತಂತ್ರಜ್ಞಾನ ಹೇಗೆ ಬಳಸಿಕೊಳ್ಳುವುದು ಇತ್ಯಾದಿ ವಿಷಯಗಳ ಕುರಿತು ಚಿಂತನ ಮಂಥನ ನಡೆಯುತ್ತದೆ.

ಇದನ್ನೂ ಓದಿ | Motivational story | ಆ ರೈತ ಸೂಪರ್‌ ಸ್ಟಾರ್‌ ಆಗಿ ಮಿಂಚಿದ್ದರ ಹಿಂದಿನ ನಿಜವಾದ ರಹಸ್ಯ ಪಕ್ಕದ ಹೊಲದ ಫಸಲು!

Exit mobile version