Site icon Vistara News

ಪ್ರಣಾಮ್ ಭಾರತ್ ಅಂಕಣ: ಸ್ಟೆತಾಸ್ಕೋಪಿನ ಆತ್ಮಕಥೆ

doctor

ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ದೇಶ ಕಂಡ ಶ್ರೇಷ್ಠ ವೈದ್ಯರಾದ ಭಾರತರತ್ನ ಡಾ ಬಿ ಸಿ ರಾಯ್ ಅವರು ಹುಟ್ಟಿದ ಮತ್ತು ಮೃತಪಟ್ಟ ದಿನ ಜುಲೈ ಒಂದನೇ ತಾರೀಕಾಗಿರುವ ಕಾರಣ ನಾವು ಆ ಸಮಾಜಮುಖಿ ಮಹಾಚೇತನದ ಗೌರವಾರ್ಥ ರಾಷ್ಟ್ರೀಯ ವೈದ್ಯರ ದಿನವನ್ನು ಅಂದು ಆಚರಿಸಿದೆವು. ಭಾರತೀಯ ವೈದ್ಯರು ಸಮಕಾಲೀನ ಪರಿಸ್ಥಿತಿಯಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮತ್ತು ವೈದ್ಯಕೀಯ ಕ್ಷೇತ್ರ ಹಾಗು ವೈದ್ಯರ ಬಗ್ಗೆ ಸಮಾಜಕ್ಕಿರುವ ಅನೇಕ ತಪ್ಪು ಕಲ್ಪನೆಗಳ ಬಗ್ಗೆ ಸ್ಪಷ್ಟತೆ ಮೂಡಿಸಲು‌ ಜುಲೈ ತಿಂಗಳಲ್ಲಿ ಒಂದಷ್ಟು ಸಂವಾದ ಮತ್ತೆ ಚರ್ಚೆಗಳು ನಮ್ಮ ದೇಶದಲ್ಲಿ ನಡೆಯಬೇಕಿತ್ತು. ದುರದೃಷ್ಟವಶಾತ್ ಹೆಚ್ಚಿನ ಕಡೆಗಳಲ್ಲಿ “ವೈದ್ಯೋ ನಾರಾಯಣೋ ಹರಿ” ಎಂಬ ಘೋಷಣೆಯೊಂದಿಗೆ ಒಂದು ದಿನದ ಮಟ್ಟಿಗಿನ ವೈದ್ಯರ ಕುರಿತಾದ ಭಜನೆ ನಡೆದದ್ದು ಬಿಟ್ಟರೆ ಭಾರತದ ವೈದ್ಯಕೀಯ ಕ್ಷೇತ್ರ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಯಾರೂ ಚರ್ಚಿಸಿಲ್ಲ.

ವೈದ್ಯಕೀಯ ಕ್ಷೇತ್ರದ ಸವಾಲುಗಳ ಅರಿವು ಮತ್ತು ಅದನ್ನು ಸಮರ್ಥವಾಗಿ ನಿಭಾಯಿಸುವ ಗುಣಗಳು ತನ್ನಲ್ಲಿರುವ ಬಗ್ಗೆ ಸ್ಪಷ್ಟತೆಯಿಲ್ಲದ ಹದಿಹರೆಯದ ವಯಸ್ಸಿನಲ್ಲಿ ಇಂತಹ ಗಂಭೀರವಾದ ಆಯ್ಕೆಗಳನ್ನು ನಮ್ಮ ದೇಶದ ವಿದ್ಯಾರ್ಥಿಗಳು ಮಾಡುತ್ತಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಜ್ಞಾನ, ತಾಳ್ಮೆ, ತುರ್ತು ನಿರ್ಧಾರಗಳನ್ನು ತಗೆದುಕೊಳ್ಳುವ ಕ್ಷಮತೆಯ ಜೊತೆಗೆ ಕರುಣೆ ಮತ್ತು ಅಂತಃಕರಣವೂ ಬೇಕು. ನಮ್ಮ ವೈದ್ಯಕೀಯ ಪ್ರವೇಶ ಪರೀಕ್ಷೆಯ ರ಼್ಯಾಂಕುಗಳು ವಿದ್ಯಾರ್ಥಿಗಳ ಜ್ಞಾನವನ್ನು ಪರೀಕ್ಷೆ ಮಾಡುತ್ತವೆಯೆ ಹೊರತು ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯವಿರುವ ಮಾನವೀಯ ಮೌಲ್ಯಗಳ ಮಾಪನ ಮಾಡುವುದಿಲ್ಲ. ಆದರೆ ರ಼್ಯಾಂಕುಗಳನ್ನು ಗಣನೆಗೆ ತೆಗೆದುಕೊಳ್ಳದೆ ಕೇವಲ ಕರುಣಾಮಯಿಗಳನ್ನು ಮಾತ್ರ ಈ ಕ್ಷೇತ್ರಕ್ಕೆ ಸೆಳೆದರೆ ಇಲ್ಲಿ ಅಪಾರವಾದ ಮಾಹಿತಿಯನ್ನು ಮೆದುಳಿನಲ್ಲಿಟ್ಟುಕೊಂಡು ಅದನ್ನು ಸರಳಗೊಳಿಸಿ ಜನಸಾಮಾನ್ಯರಿಗೆ ಉಪದೇಶಿಸುವ ವಿದ್ವತ್ತು ಮತ್ತು ರೋಗವನ್ನು ಗುಣಪಡಿಸಬಲ್ಲ ಕೈಚಳಕವೂ ಬೇಕಲ್ಲವೆ?! ಹಾಗಾಗಿ ಇಂತಹ ಸಂಕೀರ್ಣ ಮತ್ತು ಬಹುಮುಖ ಸಾಮರ್ಥ್ಯದ ಅಗತ್ಯವಿರುವ ಕ್ಷೇತ್ರಕ್ಕೆ ನಾವು ಪ್ರತಿ ಪೀಳಿಗೆಯ ಪ್ರತಿಭಾವಂತರನ್ನು ಸೆಳೆಯಬೇಕಾಗುತ್ತದೆ.

ಆದರೆ ದುರದೃಷ್ಟವಶಾತ್ ಕೆಲವು ವರ್ಷಗಳಿಂದ ನಮ್ಮ ದೇಶದ ವಾತಾವರಣ ಆ ರೀತಿಯಲ್ಲಿಲ್ಲದ ಕಾರಣದಿಂದಾಗಿ ಅನೇಕ ಖ್ಯಾತ ವೈದ್ಯರೂ ಕೂಡ ತಮ್ಮ ಮಕ್ಕಳು ವೈದ್ಯರಾಗಬೇಕೆಂದು ಬಯಸುತ್ತಿಲ್ಲ. ಅಕಸ್ಮಾತ್ ವೈದ್ಯಕೀಯ ಕ್ಷೇತ್ರದಲ್ಲಿ ಕಾಲಿಟ್ಟರೂ ಜೀವನ್ಮರಣ ನಿರ್ಧಾರಗಳನ್ನು ತಗೆದುಕೊಳ್ಳುವ ಮತ್ತು ಹಗಲು ರಾತ್ರಿ ರೋಗಿಯ ಬಳಿ ಎಚ್ಚರವಿದ್ದು ಸೇವೆ ಸಲ್ಲಿಸಬೇಕಾಗಿ ಬರುವ ವೈದ್ಯಕೀಯ ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಾರೆ. ಯಾವುದೇ ಎಮರ್ಜೆನ್ಸಿ ಕರೆಗಳು ಬಾರದ, ಸಾವು ನೋವಿನ ಪ್ರಕರಣಕ್ಕೆ ನೇರವಾಗಿ ಸಂಬಂಧಪಡದ ಮತ್ತು ಮೆಡಿಕೋಲೀಗಲ್ ಸಮಸ್ಯೆಗಳ ಸುಳಿಯಲ್ಲಿ ಸಿಲುಕದಂತಹ ವಿಭಾಗಗಳನ್ನು ಆಯ್ದುಕೊಳ್ಳುವವರೂ ಇದ್ದಾರೆ. ಇಡೀ ವಿಶ್ವಕ್ಕೆ ವರ್ಕ್ ಲೈಫ್ ಬ್ಯಾಲೆನ್ಸ್ ಬಗ್ಗೆ ಜಾಗೃತಿ ಮೂಡಿಸುವ ವೈದ್ಯರಿಗೆ ತಮ್ಮ ಜೀವನದಲ್ಲಿಯೂ ಇದರ ಅಗತ್ಯತೆಯ ಅರಿವಾಗುತ್ತಿದೆ. ನಮ್ಮ ಸರಕಾರಿ ಶಿಕ್ಷಣ ವ್ಯವಸ್ಥೆಯ ಮೂಲಕ ವೈದ್ಯರಾದ ಗ್ರಾಮೀಣ ಪ್ರತಿಭಾವಂತರೂ ತಮ್ಮ ವೈದ್ಯಕೀಯ ಪದವಿಯ ಬಳಿಕ ಅಮೇರಿಕಾ ಮತ್ತು ಯುರೋಪಿನತ್ತ ಪ್ರಯಾಣ ಬೆಳೆಸಲು ಕೇವಲ ಹಣ ಮಾತ್ರ ಕಾರಣವಲ್ಲ. ಸಣ್ಣ ಜನಸಂಖ್ಯೆಯಿರುವ ಯುರೋಪಿನ ರಾಷ್ಟ್ರಗಳಲ್ಲಿರುವ ತಜ್ಞ ವೈದ್ಯರು ಒಂದು ತಿಂಗಳಲ್ಲಿ ನೋಡುವ ರೋಗಿಗಳನ್ನು ನಮ್ಮ ಸರಕಾರಿ ಆಸ್ಪತ್ರೆಗಳ ತಜ್ಞ ವೈದ್ಯರು ನಿತ್ಯ ನೋಡುತ್ತಾರೆ. ವೈದ್ಯಕೀಯ ಕ್ಷೇತ್ರದ ಪ್ರತಿಭಾ ಪಲಾಯನ ವಿದೇಶಗಳತ್ತ ಮಾತ್ರವಲ್ಲದೆ, ಅನೇಕ ಬಹುಮುಖ ಪ್ರತಿಭೆಯ ವೈದ್ಯರು ವೈದ್ಯಕೀಯ ರಂಗದ ಸವಾಲುಗಳನ್ನು ಗ್ರಹಿಸಿ ಸಿವಿಲ್ ಸರ್ವಿಸಸ್ ಕಡೆಗೆ ವಾಲುತ್ತಿದ್ದಾರೆ.

ವೈಯಕ್ತಿಕ ಅನುಭವಗಳ ಬುತ್ತಿಯನ್ನು ಬಿಚ್ಚಿ ಮಾತನಾಡಲು ಹೊರಟರೆ, ವೈದ್ಯಕೀಯ ಕ್ಷೇತ್ರದಲ್ಲಿ ಸಿಗುವ ಆತ್ಮತೃಪ್ತಿ ಮತ್ತು ಜೀವನಾನುಭವಗಳು ಇತರ ಯಾವುದೇ ಕ್ಷೇತ್ರದಲ್ಲಿಯೂ ಸಿಗುವುದಿಲ್ಲ. ವಿದ್ಯಾರ್ಥಿಗಳು ಐದುವರೆ ವರ್ಷಗಳ ಪದವಿಯ ಜೊತೆಗೆ ತಮ್ಮ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಶಿಕ್ಷಣಕ್ಕಾಗಿ ಒಟ್ಟು ಹನ್ನೆರಡರಿಂದ ಹದಿನೈದು ವರ್ಷಗಳನ್ನು ವ್ಯಯಿಸಿದರೂ ಇಂದು ಭಾರತೀಯ ವೈದ್ಯರಿಗೆ ನಗರದಲ್ಲಿ ಸೂಕ್ತ ಆರ್ಥಿಕ ಭದ್ರತೆ ನೀಡುವ ಉದ್ಯೋಗವಕಾಶಗಳ ಲಭ್ಯತೆಯಿಲ್ಲ. ಸರಕಾರವು ತಜ್ಞರನ್ನು ಕಡ್ಡಾಯ ಗ್ರಾಮೀಣ ಸೇವೆಗೆ ನೇಮಿಸಿದ ಅನೇಕ ತಾಲೂಕು ಕೇಂದ್ರಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಬಲ್ಲ ಮೂತಭೂತ ಸೌಲಭ್ಯಗಳಿರುವುದಿಲ್ಲ.

ಸರಕಾರಿ ಅಥವಾ ಗ್ರಾಮೀಣ ಪ್ರದೇಶಗಳಲ್ಲಿರುವ ತಜ್ಞ ವೈದ್ಯರ ಕೊರತೆಯನ್ನು ತುಂಬಲು ವೈದ್ಯರು ಪ್ರತಿ ಹಂತದಲ್ಲಿ ಮಾಡಬೇಕಾಗಿ ಬರುವ ಕಡ್ಡಾಯವಾದ ಗ್ರಾಮೀಣ ಸೇವೆ ವೈದ್ಯರ ಕಲಿಕೆಯ ಅವಧಿಯನ್ನು ವಿಸ್ತರಿಸುತ್ತಾ ಬಂದಿದೆ. ಖಾಸಗಿ ಸಂಸ್ಥೆಗಳಲ್ಲಿರುವ ದುಬಾರಿ ಶಿಕ್ಷಣ ಶುಲ್ಕದಿಂದ ಸಂತ್ರಸ್ತರಾಗಿರುವ ವೈದ್ಯರನ್ನು ಮತ್ತು ಸರಕಾರಿ ಸಂಸ್ಥೆಗಳಲ್ಲಿ ಸ್ಪೆಶಾಲಿಟಿ ಮತ್ತು ಸೂಪರ್ ಸ್ಪೆಶಾಲಿಟಿ ಮಾಡುವಾಗ ಬರುವ ಸಣ್ಣ ಸ್ಟೈಫಂಡಿನಲ್ಲಿ ಸಂಸಾರ ನಿಭಾಯಿಸಲು ಒದ್ದಾಡುವ ವೈದ್ಯರನ್ನು ನೀವು ನಮ್ಮ ದೇಶದಲ್ಲಿ ಕಾಣಬಹುದು. ಇತರ ತಾಂತ್ರಿಕ ಶಿಕ್ಷಣದ ಕ್ಷೇತ್ರಗಳಂತೆ ನಾಲ್ಕೈದು ವರ್ಷ ಓದಿ, ವಿದೇಶಕ್ಕೆ ಹಾರಿ ಶೀಘ್ರವಾಗಿ ಕಾಸು ಮಾಡುವುದು ವೈದ್ಯಕೀಯ ಕ್ಷೇತ್ರದಲ್ಲಿ ಸಾಧ್ಯವಿಲ್ಲದ ಕಾರಣ ಜಾಗೃತ ವಿದ್ಯಾರ್ಥಿಗಳ ಹೆತ್ತವರು ತಮ್ಮ ಮಕ್ಕಳ ಹೆಗಲಿಗೆ ಸ್ಟೆತೋಸ್ಕೋಪ್‌ ಹೇರಿ ಅಭಿಮನ್ಯುವಿನಂತೆ ಚಕ್ರವ್ಯೂಹಕ್ಕೆ ನೂಕುವ ಮುನ್ನ ಎರಡೆರಡು ಬಾರಿ ಯೋಚಿಸುತ್ತಾರೆ. ಅತ್ಯಂತ ದೀರ್ಘವಾದ “ಲರ್ನಿಂಗ್ ಕರ್ವ್” ಇರುವ ವೈದ್ಯಕೀಯ ಕ್ಷೇತ್ರದಲ್ಲಿ ಖಾಲಿ ಕಿಸೆಯ ಜೊತೆಗೆ ಸ್ಟೆತೊಸ್ಕೋಪಿನ ಭಾರವನ್ನು ದಶಕಗಳ ಕಾಲ ಹೊರುವುದು ಸುಲಭದ ಮಾತಲ್ಲ. ಪಿಯುಸಿಯಿಂದ ವೈದ್ಯಕೀಯ ಪದವಿಗೆ ಪ್ರವೇಶಾತಿ ಪಡೆಯುವಾಗ ಮತ್ತು ವೈದ್ಯಕೀಯ ಕ್ಷೇತ್ರದ ಸ್ನಾತಕೋತ್ತರ ಕೋರ್ಸುಗಳಿಗೆ ಪ್ರವೇಶಾತಿ ಪಡೆಯುವಾಗ ನಡೆಯುವ ಅಗ್ನಿಪರೀಕ್ಷೆಗಳಲ್ಲಿ ಪ್ರತಿ ಬಾರಿಯೂ ಅಗ್ನಿವೀರರಂತೆ ಮುನ್ನುಗ್ಗುವುದು ಸವಾಲಿನ ಸಂಗತಿಯಾಗಿದೆ.

ಈ ಅಂಕಣವನ್ನೂ ಓದಿ: ಸೈನ್ಸ್‌ ಸೆನ್ಸ್‌ ಅಂಕಣ: ʼಲಿಡಾರ್‌ʼ ಶೋಧ ಬೆಳಕಿಗೆ ತಂದ ಕಾಡಾದ ನಾಡಿನ ಕಥೆ

ಸರಕಾರದ ಇತರ ಆಡಳಿತ ವ್ಯವಸ್ಥೆಯ ಮೇಲಿರುವ ಸಿಟ್ಟನ್ನು ಅನೇಕ ಬಾರಿ ಜನರು ನಮ್ಮ ದೇಶದ ಸರಕಾರಿ ಆಸ್ಪತ್ರೆಯಲ್ಲಿ ತೀರಿಸುವುದನ್ನು ನಾವು ನೋಡಿದ್ದೇವೆ. ಮಲೇರಿಯಾ ಮತ್ತು ಡೆಂಗ್ಯೂವಿನಂತಹ ರೋಗಗಳಿಂದ ರೋಗಿ ಮೃತಪಟ್ಟಲ್ಲಿ, ನಗರದಲ್ಲಿನ ಒಳಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣಕ್ಕೆ ಸೊಳ್ಳೆಗಳು ಹೆಚ್ಚಿ ಸೋಂಕು ಹರಡಿತೆಂದು ಜನರು ಕಾರ್ಪರೇಟರ್‌ಗಳ ಕಾಲರ್ ಹಿಡಿಯುವುದಿಲ್ಲ. ಹುಟ್ಟು ಮತ್ತು ಸಾವು ಆಸ್ಪತ್ರೆಯಲ್ಲಿ ನಡೆಯಬಲ್ಲ ಸಹಜ ಘಟನೆಗಳೆಂಬ ಅರಿವಿರುವ ಜನರು, ವೈದ್ಯರ ಸಂಪೂರ್ಣ ಪ್ರಯತ್ನ ಹೊರತಾಗಿಯೂ ರೋಗಿ ಮರಣಹೊಂದುವ ಸಾಧ್ಯತೆಗಳಿವೆಯೆಂಬ ಕಹಿಸತ್ಯವನ್ನು ಜೀರ್ಣಿಸಿಕೊಳ್ಳುವುದಿಲ್ಲ. ರೋಗಿಗಳ ಕಡೆಯವರ ಆಕ್ರೋಶ ಕೆಲವೊಮ್ಮ ಆಸ್ಪತ್ರೆಯ ವಿರುದ್ಧ ಹಿಂಸೆಯಲ್ಲಿ ಕೊನೆಯಾಗುವ ಘಟನೆಗಳು ಹೆಚ್ಚಾದಂತೆ ಅನೇಕ ಜಿಲ್ಲಾ ಕೇಂದ್ರಗಳಲ್ಲಿ ವೈದ್ಯರ ಕೈಯಲ್ಲಿ ಆಡಳಿತವಿರುವ ಖಾಸಗಿ ನರ್ಸಿಂಗ್ ಹೋಮಿನ ಮೇಲೂ ದಾಳಿಗಳು ನಡೆದ ತರುವಾಯ, ವೈದ್ಯರು ತಮಗೆ ಆಸ್ಪತ್ರೆ ನಡೆಸುವ ವಹಿವಾಟು ಬೇಡವೆಂದು ಹಿನ್ನಲೆಗೆ ಸರಿದಿದ್ದಾರೆ. ನಂತರದ ದಿನಗಳಲ್ಲಿ ರೋಗಿ ಸ್ವಲ್ಪ ಗಂಭೀರ ಸ್ಥಿತಿಯಲ್ಲಿದ್ದರೂ ಸಣ್ಣ ಪುಟ್ಟ ನರ್ಸಿಂಗ್ ಹೋಮುಗಳ ವೈದ್ಯರು ರಿಸ್ಕ್ ತಗೆದುಕೊಳ್ಳಲು ಹಿಂದೇಟು ಹಾಕುತ್ತಾ ಕಾರ್ಪೊರೇಟ್ ಆಸ್ಪತ್ರೆಯ ಕಡೆಗೆ ಕೈತೋರಿಸುತ್ತಾರೆ. ನಿಮ್ಮ ಊರಿನ ಡಾಕ್ಟರ್ ತಮ್ಮ ನರ್ಸಿಂಗ್ ಹೋಮಿನಲ್ಲಿ ಕೆಲವು ಸಾವಿರದಲ್ಲಿ ಮಾಡಿ ಮುಗಿಸುತ್ತಿದ್ದ ಸರ್ಜರಿಯನ್ನು ಈಗ ಮೆಟ್ರೋದ ಫೈವ್‌ಸ್ಟಾರ್ ಮಾದರಿಯ ಆಸ್ಪತ್ರೆಯಲ್ಲಿ ಮಾಡಿಸಿಕೊಳ್ಳಲು ಲಕ್ಷಾಂತರ ರುಪಾಯಿ ಬೇಕಾಗುತ್ತದೆ. ಹಳೇ ತಲೆಮಾರಿನಲ್ಲಿ ನರ್ಸಿಂಗ್ ಹೋಮು ನಡೆಸುತ್ತಿದ್ದ ವೈದ್ಯರ ಈಗಿನ ಪೀಳಿಗೆಗಳು ಅಂತಹ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಸಂಬಳಕ್ಕಾಗಿ ದುಡಿಯುತ್ತಿದ್ದಾರೆ. ಜನಸಾಮಾನ್ಯರಿಗೆ ಫೈವ್‌ಸ್ಟಾರ್ ಖಾಸಗಿ ಆಸ್ಪತ್ರೆಯ ಮೇಲೆ ಸಿಟ್ಟು ಮತ್ತು ಆಕ್ರೋಶ ತೋರಿಸುವಷ್ಟು ಶೌರ್ಯವಿಲ್ಲವಾದ ಕಾರಣ, ಅವರ ಕಲ್ಲು ಅಬ್ಬಬ್ಬಾ ಎಂದರೆ ಸರಕಾರಿ ಮತ್ತು ಖಾಸಗಿ ನರ್ಸಿಂಗ್ ಹೋಮುಗಳ ಕಿಟಕಿಗಳ ಎತ್ತರವನ್ನಷ್ಟೆ ತಲುಪಬಲ್ಲದು. ದಶಕಗಳ ಹಿಂದೆ ಅನೇಕ ಜಿಲ್ಲಾ ಕೇಂದ್ರಗಳಲ್ಲಿ ವೈದ್ಯರು ಸ್ವಂತ ನರ್ಸಿಂಗ್ ಹೋಮು ನಡೆಸಿಕೊಂಡು ಜನಾನುರಾಗಿಗಳಾಗಿದ್ದರು ಮತ್ತು ವೈದ್ಯರ ಕೈಯಲ್ಲಿ ಆಸ್ಪತ್ರೆಯ ಆಡಳಿತ ವ್ಯವಸ್ಥೆಯಿದ್ದಾಗ ಅಲ್ಲಿ ಮಾನವೀಯ ಮೌಲ್ಯಗಳಿಗೆ ಜಾಗವಿರುತ್ತಿತ್ತು. ಅನೇಕ ಪ್ರತಿಷ್ಠಿತ ಕಾರ್ಪೊರೇಟ್ ಕಂಪೆನಿಗಳು ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆರಂಭಿಸಿದ ನಂತರ ಭಾರತದ ಆರೋಗ್ಯ ಕ್ಷೇತ್ರವಿಂದು ಮ್ಯಾನೇಜ್ಮೆಂಟ್ ಕೋರ್ಸುಗಳನ್ನು ಮಾಡಿದವರು ನಡೆಸುವ, ಲಾಭ ನಷ್ಟಗಳ ಲೆಕ್ಕಾಚಾರ ಹಾಕುವ ಮತ್ತು ಮಾರ್ಕೆಟ್ ವಿಸ್ತರಿಸಿಕೊಂಡು ಹೋಗುವ ಉದ್ಯಮವಾಗಿದೆ.‌

ಪಾಂಚಾಲಿಗಿದ್ದ ಪಂಚ ಪತಿಗಳಂತೆ ಆರೋಗ್ಯ ಕ್ಷೇತ್ರದಲ್ಲೂ ಇರುವ ವಿವಿಧ ಪತಿಗಳಾದ ಎಲೋಪಥಿ, ಹೋಮಿಯೋಪಥಿ, ನ್ಯಾಚುರೋಪಥಿಯಡಿಯಲ್ಲಿ ಪ್ರತಿಯೊಂದು ಕಾಯಿಲೆಗೂ ವಿವಿಧ ಮಾದರಿಯ ಚಿಕಿತ್ಸೆಗಳಿವೆ. ಅಸಲಿಗೆ ಎಲೋಪಥಿ ವೈದ್ಯಕೀಯ ಕ್ರಮ ದುಬಾರಿಯೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಎಲೋಪಥಿ ವೈದ್ಯಕೀಯ ಪುರಾವೆಗಳನ್ನು ಆಧರಿಸಿಕೊಂಡು ಚಿಕಿತ್ಸೆ ನೀಡುವ ಕ್ರಮವಾದುದರಿಂದ ಪ್ರತಿಯೊಂದು ರೋಗದ ಚಿಕಿತ್ಸೆಯನ್ನೂ ಪ್ರೋಟೋಕಾಲ್ ಪ್ರಕಾರ ಮಾಡದಿದ್ದಲ್ಲಿ ಕಾನೂನಿನ‌ ಪ್ರಕಾರ ಅಪರಾಧವಾಗುತ್ತದೆ. ಪಾರ್ಶ್ವವಾಯು ಲಕ್ಷಣಗಳು ಕಾಣಿಸಿಕೊಂಡರೆ ರೋಗಿಗೆ ಐದಾರು ಸಾವಿರ ವೆಚ್ಚವಾಗುವ ಮೆದುಳಿನ ಎಮ್ಮಾರೈ ಸ್ಕ್ಯಾನಿಂಗ್ ಮಾಡದೆ ಮುಂದುವರಿಯುವಂತಿಲ್ಲ. ಅಸ್ತಮಾ ಕಾಯಿಲೆಗೆ ಮೀನು ಮರಿ ತಿನ್ನಿಸಿ ಕೆಲವೇ ರುಪಾಯಿಗಳಲ್ಲಿ ಶಾಶ್ವತವಾಗಿ ನಿವಾರಿಸಬಲ್ಲ ಜಾದೂಗಾರರು ನಮ್ಮ ದೇಶದಲ್ಲಿದ್ದಾರೆ. ತಿಂಗಳಿಗೆ ನೂರಾರು ರುಪಾಯಿ ಖರ್ಚು ಮಾಡಿಸುವ ಇನ್ಹೇಲರ್ ಬಳಸಿದರೆ ಆಸ್ತಮಾವನ್ನು ಹತೋಟಿಗೆ ತರಬಹುದೆಂದು ವೈದ್ಯರು ಸೂಚಿಸಿದರೂ ಅನೇಕ ಅನಕ್ಷರಸ್ಥರೂ ಮತ್ತು ಆರ್ಥಿಕವಾಗಿ ಹಿಂದುಳಿದವರು ಮೀನು ಮರಿ ತಿಂದು ಒಂದೇ ಸಲಕ್ಕೆ ಗುಣ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ಬರಲು ಅಜ್ಞಾನದ ಜೊತೆಗೆ ಬಡತನವೂ ಕಾರಣವಾಗಿರುತ್ತದೆ. ನಾವು ಗಮನಿಸಬೇಕಾದ ಅಂಶವೆಂದರೆ ಸಮರ್ಪಕವಾದ ಎಲೋಪಥಿ ಚಿಕಿತ್ಸೆ ದುಬಾರಿ ಹಾಗು ಹೆಚ್ಚಿನ ಭಾರತೀಯರ ಕೈಗೆಟುಕುವಂತಿಲ್ಲದ ಮಾತ್ರಕ್ಕೆ ಅದರ ಅಗತ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಕೋಟ್ಯಂತರ ಭಾರತೀಯರು ಕ್ಯಾನ್ಸರ್ ಅಥವಾ ಏಡ್ಸ್ ಕಾಯಿಲೆಗಳಿಗೆ ನಾಟಿ ಔಷಧಿಯ ಕಡೆಗೆ ಅಥವಾ ಬಾಬಾಗಳ ಬಳಿ ಹೋಗಲು ಎಲೋಪಥಿ ವ್ಯವಸ್ಥೆ ದುಬಾರಿಯಾಗಿ ಕೈಗೆಟುಕದಿರುವುದು ಕೂಡ ಮುಖ್ಯ ಕಾರಣ. ಭಾರತೀಯ ರೋಗಿಗಳ ಜೀವವನ್ನು ಕಾಯಿಲೆಗಳು ಮಾತ್ರ ಬಲಿ ತಗೆದುಕೊಳ್ಳುವುದಿಲ್ಲ. ಬಡತನ, ಅಜ್ಞಾನ ಮತ್ತು ಮೂಢನಂಬಿಕೆಗಳೂ ಅನೇಕರ ಸಾವಿಗೆ ಕಾರಣವಾಗುತ್ತದೆ. ಹಾಗಾಗಿ ಭಾರತೀಯ ವೈದ್ಯನಿಗೆ ನಮ್ಮ ದೇಶದ ಸಾಮಾಜಿಕ ಪರಿಸ್ಥಿತಿಗಳ ಅರಿವಿರದಿದ್ದರೆ ಭ್ರಮನಿರಸನವಾಗಬಹುದು.

ಭಾರತೀಯ ವೈದ್ಯರು ಸಾಮಾಜಿಕ ಸೂಕ್ಷ್ಮತೆ ಮತ್ತು ಮನುಷ್ಯ ಸಂಬಂಧಗಳನ್ನು ಅರ್ಥಮಾಡಿಕೊಳ್ಳಬಲ್ಲ ಅಂತಃಕರಣವು ಹೆಚ್ಚಿರುವ ಕಾರಣದಿಂದಾಗಿ ವಿದೇಶಗಳಲ್ಲಿಯೂ ಭಾರತೀಯ ಮೂಲದ ವೈದ್ಯರು ಇತರರಿಗಿಂತ ಹೆಚ್ಚು ಯಶಸ್ವಿಯಾಗಿದ್ದಾರೆ. ಕಾಯಿಲೆ ಗುಣವಾಗಲು ಔಷಧಿಯ ಜೊತೆಗೆ ರೋಗಿಯ ಮನೋಬಲವೂ ಕೆಲಸ ಮಾಡುವ ಕಾರಣದಿಂದಾಗಿ ರೋಗಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಬಲ್ಲ ವ್ಯಕ್ತಿತ್ವವಿರುವ ವೈದ್ಯರ “ಕೈಗುಣ” ಚೆನ್ನಾಗಿರುವ ಕಾರಣಕ್ಕೆ ತಮ್ಮ ರೋಗ ವಾಸಿಯಾಯಿತೆಂದು ನಂಬುವ ಭಾರತೀಯರೂ ಸಾಕಷ್ಟಿದ್ದಾರೆ. ಒಬ್ಬ ವ್ಯಕ್ತಿಯ ಸಾವಿನ ಸುದ್ದಿಯನ್ನು ಅವನ ಬಳಗದವರಿಗೆ ತಿಳಿಸುವ ಪ್ರಪಂಚದ ಅತ್ಯಂತ ಕಠಿಣವಾದ ಕೆಲಸವನ್ನೂ ಮಾಡುವ ಜವಾಬ್ದಾರಿಯ ಸ್ಥಾನದಲ್ಲಿ ವೈದ್ಯರಿದ್ದಾರೆ. ಹಾಗಾಗಿ ವೈದ್ಯರ ಮಾತುಗಳ ಜೊತೆಗೆ ಅವರ ನಡವಳಿಕೆಗಳು ವಿವಾದಾಸ್ಪದವಾಗದಂತಿರಬೇಕು.

ಕೊರೊನಾ ಸಂದರ್ಭದಲ್ಲಿ ಭಾರತದ ಸರಕಾರಿ ವೈದ್ಯಕೀಯ ವ್ಯವಸ್ಥೆಯು ತನ್ನ ಇತಿಮಿತಿಗಳ ನಡುವೆಯೂ ಶ್ಲಾಘನೀಯ ಕೆಲಸವನ್ನು ಮಾಡಿದನ್ನು ದೇಶ ಗಮನಿಸಿದೆ. ಸರಕಾರವು ದೇಶದಲ್ಲಿನ ವೈದ್ಯರ ಸಂಖ್ಯೆ ಹೆಚ್ಚಿಸಲು ಅನೇಕ ಹೊಸಾ ವೈದ್ಯಕೀಯ ಸಂಸ್ಥೆಗಳನ್ನು ಘೋಷಿಸಿದೆ. ಖಾಸಗಿಯವರಿಗೂ ಹೊಸಾ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಿದೆ. ಭಾರತದ ಅನೇಕ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳು ಕಠಿಣ ತರಬೇತಿಯ ಕಾರಣದಿಂದ ಉತ್ತಮ ವೈದ್ಯರನ್ನು ತಯಾರು ಮಾಡುವುದರಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತದಲ್ಲಿ ತಯಾರಾಗುವ ವೈದ್ಯರ ಬಗ್ಗೆ ವಿಶ್ವಾಸಾರ್ಹತೆಯಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಲು ಸಕಲ ವ್ಯವಸ್ಥೆಗಳ ಜೊತೆಗೆ ರೋಗಿಗಳ ಪ್ರಮಾಣವೂ ಗಣನೀಯವಾಗಿರಬೇಕು. ಕೆಲವು ದಶಕ ಹಿಂದೆ ನಾಯಿಕೊಡೆಗಳಂತೆ ಎದ್ದ ಇಂಜಿನಿಯರಿಂಗ್ ಕಾಲೇಜುಗಳು ಈಗ ವಿದ್ಯಾರ್ಥಿಗಳಿಲ್ಲದೆ ಬಣಗುಟ್ಟುತ್ತಿವೆ. ವೈದ್ಯಕೀಯ ಕ್ಷೇತ್ರದಲ್ಲಿಯೂ ವೈದ್ಯರ ಕ್ವಾಂಟಿಟಿ ಹೆಚ್ಚಾದಂತೆ ಕ್ವಾಲಿಟಿ ಕಡಿಮೆಯಾಗದಂತೆ ಎಚ್ಚರ ವಹಿಸದಿದ್ದರೆ ಭಾರತೀಯ ವೈದ್ಯಕೀಯ ಕ್ಷೇತವೂ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ.

ಅಂಕಣಕಾರರ ಪರಿಚಯ: ಮೇಜರ್‌ ಡಾ.ಕುಶ್ವಂತ್‌ ಕೋಳಿಬೈಲು ಅವರು ಕೊಡಗಿನ ಕಲಿ ಮತ್ತು ಕತೆಗಾರ. ಸೇನೆಯಿಂದ ನಿವೃತ್ತರು, ವೈದ್ಯಕೀಯದಲ್ಲಿ ಪ್ರವೃತ್ತರು. ಕೊಡಗಿನ ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳ ತಜ್ಞ, ಕಾಫಿ ಕೃಷಿಕ. ʻಕಾವೇರಿ ತೀರದಿಂದʼ ಮತ್ತು ʻಕೂರ್ಗ್‌ ರೆಜಿಮೆಂಟ್ʼ ಕತಾಸಂಕಲನಗಳು ಇವರು ತಮ್ಮ ಸುತ್ತಮುತ್ತಲಿನ ಬದುಕಿಗೆ ಸ್ಪಂದಿಸಿದ್ದಕ್ಕೆ ಸಾಕ್ಷಿಗಳಾಗಿವೆ. ಮುತ್ತಿನ ಹಾರ ಹನಿಕವಿತೆಗಳ ಸಂಕಲನ. ವೈದ್ಯಕೀಯ ಹಾಗೂ ಸೇನೆಗೆ ಸಂಬಂಧಿಸಿದ ಅಂಕಣಗಳನ್ನು ಬರೆದಿದ್ದಾರೆ. ಕೊಡಗಿನ ಹಾಗೂ ದೇಶದ ಆಗುಹೋಗುಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ಕುಶ್ವಂತ್‌ ಅವರ ಜೀವನಪ್ರೀತಿಯ ಬರಹಗಳು ಇಲ್ಲಿ ಕಾಣಿಸಿಕೊಳ್ಳಲಿವೆ.

ಇದನ್ನೂ ಓದಿ: ಹೊಸ ಪುಸ್ತಕ: ಭಾರತದ ಆರ್ಯರು ಇರಾನಿನಿಂದ ಬಂದವರೇ?

Exit mobile version