Site icon Vistara News

Left- Right | ಯಾವುದು ಎಡ? ಯಾವುದು ಬಲ? ಯಾವುದು ಸತ್ಯ?

— ಪ್ರಮೋದ ಹೆಗಡೆ

ಎಡಪಂಥೀಯರ ವಿರುದ್ಧ ಬಲಪಂಥೀಯರ ವಾಗ್ದಾಳಿ, ಅದಕ್ಕೆ ಎಡಪಂಥೀಯರ ತಿರುಗೇಟು. ಇವೆಲ್ಲವೂ ಬಹು ಹಿಂದಿನಿಂದಲೇ ದೇಶದಲ್ಲಿ ನಡೆದುಕೊಂಡು ಬಂದಿದೆ. ಇವೆರಡೂ ತದ್ವಿರುದ್ಧ ಸಿದ್ಧಾಂತಗಳೆಂದು ಪ್ರಚಲಿತವಾಗಿದ್ದು ರಾಜಕೀಯ ಒಲವಿನ ವ್ಯಕ್ತಿಗಳು ತಮ್ಮನ್ನು ಯಾವುದಾದರೂ ಒಂದು ಸಿದ್ಧಾಂತಕ್ಕೆ ಬದ್ಧರೆಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಹಾಗೆ ಯಾವುದಾದರೊಂದು ಪಂಥದಲ್ಲಿ ತೋರಿಸಿಕೊಳ್ಳಲೇಬೇಕಾದ ಸನ್ನಿವೇಶವೂ ಸೃಷ್ಟಿಯಾಗಿದೆ. ಆದರೆ, ಈ ಎರಡು ವಿಚಾರಗಳ ಬಗ್ಗೆ ಸರಿಯಾಗಿ ತಿಳಿಯದೇ ಅದನ್ನು ಅನುಸರಿಸುವುದು ಎಷ್ಟು ಸರಿ? ಯಾವುದೇ ರೂಢಿಯ ಬಗ್ಗೆ ತಿಳಿಯದೇ ಆಚರಿಸಿದರೆ ಅದು ಬೆಕ್ಕನ್ನು ಕಂಬಕ್ಕೆ ಕಟ್ಟಿ ಶ್ರಾದ್ಧ ಮಾಡುವ ಕಥೆಯಾಗುತ್ತದೆ ಹೊರತು ಉಪಯೋಗವಿಲ್ಲ. ಎಡಪಂಥಿ, ಬಲಪಂಥಿ ಎಂಬ ಶಬ್ದಗಳು ಬಂದಿದ್ದು ಎಲ್ಲಿಂದ? ನಮ್ಮ ದೇಶದಲ್ಲಿ ಇವುಗಳ ಸ್ಥಾನಮಾನವೇನು? ರಾಜಕೀಯವಾಗಿ, ಸಾಮಾಜಿಕವಾಗಿ ಈ ಎರಡೂ ಪಂಥಗಳ ನಿಲುವೇನು?

ಈ ಎರಡೂ ಸಿದ್ಧಾಂತಗಳು ಜನಿಸಿದ್ದು ಫ್ರಾನ್ಸ್‌ ದೇಶದಲ್ಲಿ!

ಅದು 18ನೇ ಶತಮಾನ. ಫ್ರಾನ್ಸ್‌ ದೇಶದಲ್ಲಿ ಕ್ರಾಂತಿ ನಡೆಯುತ್ತಿದ್ದ ಕಾಲಘಟ್ಟ. ಫ್ರಾನ್ಸ್‌ನಲ್ಲಿ ಆಗ ರಾಜಪ್ರಭುತ್ವ ಜಾರಿಯಲ್ಲಿತ್ತು. ಆಧುನಿಕತೆ ಬರತೊಡಗಿದಂತೆ ಕೆಲವರು ಈ ರಾಜಪ್ರಭುತ್ವದ ಆಳ್ವಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಕೆಲವರು ಈ ಪದ್ಧತಿಯ ಪರವಾಗಿದ್ದರು. ರಾಷ್ಟ್ರದ ಜನತೆ ಎರಡು ಗುಂಪಾಗಿ ವಿಭಾಗವಾಯಿತು. ಆ ಸಂದರ್ಭದಲ್ಲಿ ರಾಜ ಸಭೆ ನಡೆಸುವಾಗ ಸಹಜವಾಗಿ ರಾಜನ ಬಲಗಡೆ ಕೆಲವರು ಹಾಗೂ ಎಡಗಡೆ ಕೆಲವರು ಆಸೀನರಾಗಬೇಕಿತ್ತು. ರಾಜಪ್ರಭುತ್ವಕ್ಕೆ ಸಹಮತ ಸೂಚಿಸಿ, ರಾಜನನ್ನು ಬೆಂಬಲಿಸುವವರು ರಾಜನ ಬಲಗಡೆ ಕುಳಿತರು. ರಾಜಪ್ರಭುತ್ವವನ್ನು ವಿರೋಧಿಸಿ, ಪ್ರಜಾಪ್ರಭುತ್ವವನ್ನು ಒತ್ತಾಯಿಸಿದವರು ರಾಜನ ಎಡಗಡೆ ಪಂಕ್ತಿಯಲ್ಲಿ ಆಸೀನರಾದರು. ಅವರಿಗೆ ಆಗ ಇದ್ದ ರಾಜರ ಆಳ್ವಿಕೆಯಿಂದ ಮುಕ್ತಿ ಬೇಕಿತ್ತು ಹಾಗೂ ವ್ಯವಸ್ಥೆಯಲ್ಲಿ ಬದಲಾವಣೆ ಬೇಕಿತ್ತು. ಅಲ್ಲಿಂದ ಈ ಎಡ ಹಾಗೂ ಬಲ ಎಂಬ ಎರಡು ಸಿದ್ಧಾಂತಗಳ ಜನನವಾಯಿತು.

  1. ಎಡ– ಪ್ರಸ್ತುತ ಇದ್ದ ವ್ಯವಸ್ಥೆಯನ್ನು ನಿರಾಕರಿಸಿ ಹೊಸ ವ್ಯವಸ್ಥೆಯನ್ನು ಒತ್ತಾಯಿಸಿದ ಕಾರಣ ಇವರನ್ನು ಸುಧಾರಣಾವಾದಿ ಅಥವಾ ಕ್ರಾಂತಿಕಾರಿ ಎಂದು ಕರೆಯಲಾಯಿತು.
  2. ಬಲ– ಈ ಪಂಥದವರು ವ್ಯವಸ್ಥೆಯಲ್ಲಿ ಬದಲಾವಣೆಯನ್ನು ಅಪೇಕ್ಷಿಸದೆ ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯನ್ನು ಅನುಸರಿಸುವವರು. ಹೀಗಾಗಿ ಅವರನ್ನು ಸಂಪ್ರದಾಯವಾದಿ ಎಂದು ಕರೆಯಲಾಯಿತು.

ಎಡ ಮತ್ತು ಬಲ ಪಂಥಗಳ ಸಿದ್ಧಾಂತಗಳೇನು?

ಒಂದು ಕಾಲಘಟ್ಟದವರೆಗೆ ಈ ಎರಡೂ ಪಂಥಗಳು ರಾಜಕೀಯ ಪಕ್ಷಗಳಿಗೆ ಮಾತ್ರ ಸೀಮಿತವಾಗಿತ್ತು. ಎರಡೂ ಪಂಥಗಳು ಕೆಲವು ಧೋರಣೆಗಳನ್ನು ಅನುಸರಿರುತ್ತಿದ್ದವು.

ಎಡಪಂಥೀಯ ಧೋರಣೆ:

  1. ಸರ್ಕಾರ ಮತ್ತು ಧರ್ಮ ಪ್ರತ್ಯೇಕವಾಗಿರಬೇಕು
  2. ಸಲಿಂಗ ವಿವಾಹಕ್ಕೆ ಬೆಂಬಲ
  3. ಮರಣದಂಡನೆಗೆ ವಿರೋಧ
  4. ಹೊರದೇಶದ ವಲಸಿಗರಿಗೆ ಮಾರ್ಗ ತೆರವು
  5. ಶ್ರೀಮಂತರಿಗೆ ಹೆಚ್ಚು ತೆರಿಗೆ ನೀಡಲು ಒತ್ತಾಯ
  6. ಜಾಗತೀಕರಣಕ್ಕೆ ಬೆಂಬಲ
  7. ಸಮಾಜದಲ್ಲಿ ಸಮಾನತೆ
  8. ಕೇಂದ್ರ ಯೋಜನೆಗೆ ಬೆಂಬಲ
  9. ಆರ್ಥಿಕತೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇರಬೇಕು
  10. ಸಮಾಜಕಲ್ಯಾಣದ ವ್ಯವಸ್ಥೆ
  11. ಮುಕ್ತ/ಉಚಿತ ವ್ಯಾಪಾರಕ್ಕೆ ವಿರೋಧ

ಬಲಪಂಥೀಯ ಧೋರಣೆ:

  1. ಧರ್ಮ ಮತ್ತು ಸರ್ಕಾರಕ್ಕೆ ಹೊಂದಾಣಿಕೆ ಇರಬೇಕು
  2. ಭ್ರೂಣ ಹತ್ಯೆ ಮಾಡಬಾರದು
  3. ಕನಿಷ್ಠ ತೆರಿಗೆ ಇರಬೇಕು. ಇದರಿಂದ ಹೊಸ ಉದ್ಯಮಿಗಳಿಗೆ ಸಹಾಯವಾಗಬೇಕು.
  4. ಬಂಡವಾಳಶಾಹಿಯನ್ನು ಬೆಂಬಲಿಸಲಾಗುತ್ತದೆ
  5. ರಾಷ್ಟ್ರದ ಸಂಸ್ಕೃತಿಯನ್ನು ಉಳಿಸಲು ಹೊರದೇಶದ ವಲಸಿಗರಿಗೆ ತಡೆ
  6. ಜನರ ಜೀವನ ಮತ್ತು ಆರ್ಥಿಕತೆಯಲ್ಲಿ ಸರ್ಕಾರ ಸೀಮಿತ ಪಾತ್ರ ವಹಿಸಬೇಕು
  7. ರಾಷ್ಟ್ರೀಯತೆಯನ್ನು ಬೆಂಬಲಿಸುವವರು
  8. ಜನರಿಗೆ ವೈಯಕ್ತಿಕ ಸ್ವಾತಂತ್ರ್ಯ ಇರಬೇಕು
  9. ಧರ್ಮ ಮತ್ತು ಸಂಪ್ರದಾಯದ ಸುರಕ್ಷತೆಗೆ ಪ್ರಾಮುಖ್ಯತೆ
  10. ಅಲ್ಪಸಂಖ್ಯಾತರಿಗೆ ವಿಶೇಷ ಮನ್ನಣೆಯಿಲ್ಲ, ಎಲ್ಲರಿಗೂ ಸಮಾನ ಗೌರವ
  11. ಮರಣದಂಡನೆಗೆ ಬೆಂಬಲ
  12. ಅಭಿವೃದ್ಧಿಗಾಗಿ ಖಾಸಗಿ ಉದ್ಯೋಗಕ್ಕೆ ಪ್ರಾಮುಖ್ಯತೆ

ಮೇಲ್ನೋಟಕ್ಕೆ ಇವಿಷ್ಟು ವಿಷಯಗಳಲ್ಲಿ ಎರಡೂ ಪಂಥಗಳೂ ವಿರುದ್ಧ ದಿಕ್ಕಿಗೆ ಮುಖಮಾಡಿರುವಂತೆ ಕಂಡರೂ ಕೆಲವು ಸಂಗತಿಗಳನ್ನು ಎರಡೂ ಪಂಥಗಳು ಪಾಲಿಸುತ್ತವೆ. ಕೆಲವು ಬಲಪಂಥದ ಚಿಂತನೆಗಳನ್ನು ಎಡಪಂಥ ಸ್ವೀಕರಿಸುತ್ತದೆ ಹಾಗೂ ಎಡಪಂಥದ ಚಿತನೆಯನ್ನು ಬಲಪಂಥ ಅನುಸರಿಸುತ್ತದೆ. ಹೀಗಾಗಿ ಇನ್ನೆರಡು ಹೊಸ ಪಕ್ಷಗಳು ಜನಿಸಿಕೊಂಡವು.

  1. ಲೆಫ್ಟ್‌ ಲೀನಿಂಗ್‌ (ಹೆಚ್ಚು ಎಡಕ್ಕೆ ವಾಲಿರುವುದು) : ಈ ಪಕ್ಷಗಳು ಹೆಚ್ಚಾಗಿ ಎಡಪಂಥೀಯ ಧೋರಣೆಗಳನ್ನು ಒಳಗೊಂಡಿರುತ್ತವೆ ಹಾಗು ಕೆಲವು ಬಲ ಪಂಥದ ಧೋರಣೆಗಳಿರುತ್ತವೆ.
  2. ರೈಟ್‌ ಲೀನಿಂಗ್(ಹೆಚ್ಚು ಬಲಕ್ಕೆ ವಾಲಿರುವುದು) : ಈ ಪಕ್ಷಗಳು ಬಲಪಂಥೀಯ ಧೋರಣೆಗಳನ್ನು ಹೆಚ್ಚಾಗಿ ಪಾಲಿಸುತ್ತವೆ ಆದರೆ ಕೆಲವು ಎಡ ಪಂಥದ ಚಿಂತೆನಗಳು ಇರುತ್ತವೆ.

ಇನ್ನೂ ಯಾವ ರೀತಿ ವಿಂಗಡಿಸಬಹುದು?

ಸಾಮಾಜಿಕ ಹಾಗೂ ಆರ್ಥಿಕ ವಿಭಾಗದಲ್ಲಿಯೂ ಈ ಎರಡು ಸಿದ್ಧಾಂತಗಳಿವೆ. ಒಂದು ಪಕ್ಷ ಸಾಮಾಜಿಕ ಹಾಗೂ ಆರ್ಥಿಕವಾಗಿ ಹೇಗೆ ನಡೆದುಕೊಳ್ಳುತ್ತದೆ ಎಂಬುದರ ಮೇಲೆ ಈ ಎರಡು ಪಂಥಗಳನ್ನಾಗಿ ವಿಭಾಗಿಸಬಹುದು.

ಆರ್ಥಿಕ ಬಲ- ಆರ್ಥಿಕತೆಯಲ್ಲಿ ಸರ್ಕಾರದ ಹೆಚ್ಚಿನ ಹಸ್ತಕ್ಷೇಪ ಇಲ್ಲದಿದ್ದರೆ ಅದು ಆರ್ಥಿಕವಾಗಿ ಬಲಪಂಥೀಯ
ಆರ್ಥಿಕ ಎಡ- ಆರ್ಥಿಕತೆಯಲ್ಲಿ ಸರ್ಕಾರದ ಹೆಚ್ಚಿನ ಹಸ್ತಕ್ಷೇಪ ಇದ್ದರೆ ಅದು ಆರ್ಥಿಕವಾಗಿ ಎಡಪಂಥೀಯ.

ಸಾಮಾಜಿಕ ಬಲ: ಧರ್ಮ, ಸಂಸ್ಕೃತಿಯನ್ನು ರಕ್ಷಿಸುವ ಹಾಗೂ ಭ್ರೂಣ ಹತ್ಯೆ, ಸಲಿಂಗ ವಿವಾಹವನ್ನು ವಿರೋಧಿಸುವವರು.
ಸಾಮಾಜಿಕ ಎಡ: ಪ್ರಸ್ತುತ ವ್ಯವಸ್ಥೆಯಿಂದ ಕ್ರಾಂತಿಕಾರಿ ಬದಲಾವಣೆಯನ್ನು ಬಯಸುವವರು.

ಈಗ ಗಮನಿಸಿದರೆ ಈ ಎರಡೂ ಚಿಂತನೆಗಳು ಬದಲಾವಣೆಗೊಂಡ ರೀತಿ ಅಚ್ಚರಿ ಮೂಡಿಸುತ್ತದೆ. ಹಾಗೆ ನೋಡಿದರೆ ಅಮೆರಿಕದಲ್ಲಿ ಇವುಗಳನ್ನು ಒಂದು ಮಟ್ಟಕ್ಕೆ ಸರಿಯಾಗಿ ಆಚರಿಸಲಾಗುತ್ತಿದೆ ಎನ್ನಬಹುದು. ರಿಪಬ್ಲಿಕನ್ಸ್‌ ಹಾಗೂ ಡೆಮೊಕ್ರೆಟ್ಸ್‌ ಎಂಬ ಎರಡು ಪಕ್ಷಗಳು ಅಮೆರಿಕದಲ್ಲಿರುವ ಪ್ರಮುಖ ಪಕ್ಷಗಳಾಗಿವೆ. ಡೆಮಾಕ್ರೆಟ್ಸ್‌ ಎಡಪಂಥೀಯ ಸಿದ್ಧಾಂತವನ್ನ ಒಳಗೊಂಡಿದ್ದರೆ, ರಿಪಬ್ಲಿಕನ್ಸ್‌ ಪಕ್ಷವು ಬಲಪಂಥೀಯ.

ಈ ಎಡ ಮತ್ತು ಬಲ ಎಂಬ ಸಿದ್ಧಾಂತಗಳು ರಾಜಕಾರಣಕ್ಕೆ ಸೀಮಿತವಾಗಿದ್ದವೇ ಹೊರತು ಕಲೆ ಅಥವಾ ಸಾಹಿತ್ಯದೊಳಗೆ ಪ್ರವೇಶಿಸಿರುವುದಕ್ಕೆ ಯಾವುದೇ ಆಧಾರಗಳಿಲ್ಲ. ಈ ಪಂಥಗಳು ಹುಟ್ಟುಕೊಂಡಿದ್ದು ರಾಜಪ್ರಭುತ್ವ ಅಥವಾ ಪ್ರಜಾಪ್ರಭುತ್ವದ ಬೆಂಬಲಿಗರ ನಡುವೆ. ದೇವರ ಮೇಲಿನ ನಂಬಿಕೆಗಾಗಿ ಅಥವಾ ಒಂದು ಸಮುದಾಯದ ಬೆಂಬಲಕ್ಕಾಗಿ ಮಾಡಿದ ಪಂಥಗಳಲ್ಲ. ಹಾಗೆ ನೋಡಿದರೆ ಕೆಲವೊಮ್ಮೆ ಹಿಂದು ಹಾಗೂ ಮುಸ್ಲಿಂ ಎರಡು ಸಮುದಾಯದ ಜನರೂ ಒಂದೇ ಪಂಥಕ್ಕೆ ಸೇರಬಹುದು. ಬಲ ಪಂಥ ಹಾಗೂ ಎಡ ಪಂಥಗಳು ಹುಟ್ಟುಕೊಂಡಿದ್ದೇ ಪಾಶ್ಚಾತ್ಯ ದೇಶದಲ್ಲಿ. ಆರಂಭದಲ್ಲಿ ಇದಕ್ಕೂ ಮತಗಳಿಗೂ ಸಂಬಂಧವಿರಲಿಲ್ಲ.

ಭಾರತದಲ್ಲಿ ಎಡವೂ ಇಲ್ಲ, ಬಲವೂ ಇಲ್ಲ!

ಈ ಎಲ್ಲ ಧೋರಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಭಾರತ ದೇಶದಲ್ಲಿ ಯಾವ ಪಕ್ಷವೂ ಸಂಪೂರ್ಣ ಎಡಪಂಥೀಯ ಅಲ್ಲ, ಯಾವ ಪಕ್ಷವೂ ಬಲಪಂಥೀಯ ಅಲ್ಲ. ಈ ಎರಡು ಧೋರಣೆಗಳೊಳಗೆ ಭಾರತೀಯ ರಾಜಕೀಯ ಪಕ್ಷಗಳನ್ನು ಕೂರಿಸುವುದು ಕಷ್ಟವಾಗುತ್ತದೆ. ಈ ಎರಡೂ ಶಬ್ದಗಳು ಭಾರತದ ರಾಜಕೀಯಕ್ಕೆ ಹೊಂದುವುದಿಲ್ಲ ಅನಿಸುತ್ತದೆ. ನಾನು ಎಡ, ನಾನು ಬಲ ಎಂದು ಗಲಭೆ ಸೃಷ್ಟಿಸುವುದರಿಂದ ಯಾವುದೇ ಉಪಯೋಗವಿಲ್ಲ. ಪಕ್ಷಗಳೇ ಒಂದು ಪಂಥಕ್ಕೆ ಸೀಮಿತವಾಗಿರದ ಮೇಲೆ ಆ ಪಕ್ಷದ ಅನುಯಾಯಿಗಳು ಒಂದು ಪಂಥದಲ್ಲಿ ಗುರುತಿಸಿಕೊಂಡು ಹೊಡೆದಾಡಿಕೊಳ್ಳುವುದು ಅದೇಕೋ!

ಸಾಮಾಜಿಕವಾಗಿ: ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಮೂರು ಪ್ರಮುಖ ಪಕ್ಷಗಳು ಬಲ ಪಂಥದಲ್ಲಿ ಗುರತಿಸಿಕೊಳ್ಳುತ್ತವೆ. ಭಾರತೀಯ ಜನತಾ ಪಾರ್ಟಿ, ಶಿವ ಸೇನಾ ಹಾಗೂ ಆಲ್‌ ಇಂಡಿಯಾ ಮಜೀಸ್-ಎ-ಇತ್ತೆಹಾದುಲ್‌ ಮುಸ್ಲಿಮೀನ್‌(AIMIM).

ಕಾಂಗ್ರೆಸ್‌, ಜನತಾ ದಳ-ಯುನೈಟೆಡ್‌, ಆಲ್‌ ಇಂಡಿಯಾ ತೃಣಮೂಲ ಕಾಂಗ್ರೆಸ್‌, ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ- ಮಾಕ್ಸಿಸ್ಟ್‌ ಪಕ್ಷಗಳು ಸಾಮಾಜಿಕ ಧೋರಣೆಗಳಲ್ಲಿ ಎಡಪಂಥೀಯ.

ಆರ್ಥಿಕವಾಗಿ: ದೇಶದ ಆರ್ಥಿಕ ಚಿಂತನೆಯಲ್ಲಿ ಎಲ್ಲ ಪಕ್ಷಗಳೂ ಎಡ ಪಂಥಕ್ಕೆ ಸೇರಿದ್ದು. ಎಲ್ಲ ಪಕ್ಷಗಳೂ ತೆರಿಗೆ ಹೆಚ್ಚಿಸಬೇಕು, ಸಬ್ಸಿಡಿ ನೀಡಬೇಕು ಎಂಬ ಉದ್ದೇಶವನ್ನಿಟ್ಟುಕೊಂಡಿರುವುದು ಕಾಣುತ್ತದೆ. ಹೀಗಿರುವಾಗ ಆರ್ಥಿಕ ದೃಷ್ಟಿಕೋನದಲ್ಲಿ ಎಲ್ಲ ಪಕ್ಷಗಳೂ ಎಡ ಪಂಥದ ಚಿಂತನೆ ಹೊಂದಿರುವುದು ಕಾಣುತ್ತದೆ.

ಇದನ್ನೂ ಓದಿ | ಸವಿಸ್ತಾರ ಅಂಕಣ | ಗಡಿಗಳ ಎಲ್ಲೆ ಮೀರಿ ಮನ್ನಣೆ ಗಳಿಸಿದ್ದ ಸಾವರ್ಕರ್! ಅವರ ಪರ ಹೋರಾಡಿದ್ದ ಮಾರ್ಕ್ಸ್ ಮೊಮ್ಮಗ!

ಸೂಕ್ಷ್ಮವಾಗಿ ನೋಡಿದರೆ ಬಿಜೆಪಿ ಎಂದ ಮಾತ್ರಕ್ಕೆ ಅದು ಬಲ ಪಂಥವಾಗುವುದಿಲ್ಲ. ಅದೇ ರೀತಿ, ಕಾಂಗ್ರೆಸ್‌ ಎಂದ ಮಾತ್ರಕ್ಕೆ ಅದು ಎಡ ಪಂಥವಾಗುವುದಿಲ್ಲ. ವಿಚಾರಗಳಿಗೆ ತಕ್ಕಂತೆ ಪಂಥಗಳು ಉಂಟಾಗುತ್ತವೆ.

ಯಾವುದು ಉತ್ತಮ? ಎಡವೋ? ಬಲವೋ?

ಸೈದ್ಧಾಂತಿಕವಾಗಿ ನೋಡಿದರೆ ಎರಡೂ ಪಂಥಗಳು ಹುಟ್ಟಿಕೊಂಡಿದ್ದು ಜನರ ಒಳಿತಿನ, ದೇಶದ ಅಭಿವೃದ್ಧಿಯ ಚಿಂತನೆಯಿಂದ. ಆದರೆ, ಕಾಲಕ್ರಮೇಣ ಜನತೆಯ ಚಿಂತನೆಗಳಲ್ಲಿ ಆದ ಬದಲಾವಣೆಗಳಿಂದ ಸಂಕರಗೊಂಡಿದೆ ಎನ್ನಬಹುದು. ಎರಡೂ ಸಿದ್ಧಾಂತಗಳಲ್ಲಿರುವ ಒಳ್ಳೆಯದನ್ನು ಮಾತ್ರ ಸ್ವೀಕರಿಸಿದರೆ ʼನಡುʼವಲ್ಲಿ ಸುರಕ್ಷಿತವಾಗಿ ದೇಶವನ್ನು ಸಾಗಿಸಬಹುದು. ಒಂದು ಬ್ಯಾಟರಿ ಸರಿಯಾಗಿ ಕೆಲಸ ಮಾಡಬೇಕಿದ್ದರೆ ಅದಕ್ಕೆ ಪಾಸಿಟಿವ್‌ ಹಾಗೂ ನೆಗಟಿವ್‌ ಎರಡೂ ಬೇಕಾಗುತ್ತದೆ.

ಕೇವಲ ಎಡಪಂಥೀಯ ಧೋರಣೆ ಇಟ್ಟುಕೊಂಡು ಹೊರಟ ಚೀನಾ, ರಷ್ಯಾ ರಾಷ್ಟ್ರಗಳಲ್ಲಿ ಸಾಮೂಹಿಕ ಹತ್ಯೆಗಳು ನಡೆದಿದ್ದು ತಿಳಿದಿದೆ. ಅದು ಸರಿ ಎಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಮಧ್ಯಮ-ಪೂರ್ವ ಭಾಗದ ರಾಷ್ಟ್ರಗಳಲ್ಲಿ ಕೇವಲ ಬಲಪಂಥೀಯ ಧೋರಣೆಗಳಿದ್ದರೂ ಜನರು ಹಿಂಸೆಗೆ ಒಳಗಾದ ಸಾಕ್ಷಿಗಳಿವೆ. ಈ ಎರಡೂ ಘಟನೆಗಳಲ್ಲಿ ಮಾನವೀಯತೆಗೆ ಧಕ್ಕೆ ಉಂಟಾಗಿದ್ದು ಕಂಡುಬರುತ್ತದೆ.

ಆರ್ಥಿಕತೆ ವಿಷಯದಲ್ಲಿ ಬಲ ಪಂಥದ ಧೋರಣೆ ಅನುಕೂಲ. ಇದರಿಂದ ಮಾರುಕಟ್ಟೆ ತೆರೆದಿರುತ್ತದೆ, ದೇಶ ಅಭಿವೃದ್ಧಿಯತ್ತ ಬೆಳೆಯುತ್ತದೆ. ತೆರಿಗೆಯ ವಿಷಯದಲ್ಲಿ ಕೆಲವೊಮ್ಮೆ ಎಡ ಪಂಥದ ಧೋರಣೆ ಅನುಕೂಲವಾಗುತ್ತದೆ. ವಲಸಿಗರನ್ನು ದೇಶದೊಳಗೆ ಬಿಟ್ಟುಕೊಳ್ಳುವುದರಲ್ಲಿ ಬಲ ಪಂಥದ ವಿಚಾರ ಸರಿ ಎಂಬ ಅಭಿಪ್ರಾಯ ಇದೆ. ಹೀಗೆ ಎಡ, ಬಲಗಳಲ್ಲಿ ಪೂರಕ ಮತ್ತು ಮಾರಕ ಎರಡೂ ಅಂಶಗಳಿವೆ. ಹಾಗಾಗಿ ಈ ಪಂಥವೇ ಸರಿ, ಈ ಪಂಥ ತಪ್ಪು ಎಂದು ಗೆರೆ ಎಳೆಯಲಾಗದು!

ಇದನ್ನೂ ಓದಿ: ಕೇರಂ ಬೋರ್ಡ್‌ ಅಂಕಣ | ಅಂಡರ್‌ಪಾಸ್‌ಗಳಲ್ಲಿ ಪಿಸುಗುಡುವ ಕಡಲು

Exit mobile version