ವ್ಯಾಪಾರದ ನೆವದಲ್ಲಿ ಭಾರತಕ್ಕೆ (Independence Day 2023) ಕಾಲಿಟ್ಟ ವಿದೇಶೀಯರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮೊದಲನೆಯದ್ದೇನಲ್ಲ. ವ್ಯಾಪಾರದ ನೆವದಲ್ಲಿ ಅಧಿಕಾರ ಪಡೆಯುವ ಹಂಚಿಕೆಗೆ ಇವರಿಗಿಂತ ಮೊದಲೇ ಪೋರ್ಚುಗೀಸರು ನಾಂದಿ ಹಾಡಿದ್ದರು. ಬ್ರಿಟಿಷರ ಬೆನ್ನಿಗೆ ಫ್ರೆಂಚರು ಮತ್ತು ಡಚ್ಚರು ಸಹ ವ್ಯಾಪಾರದ ಸಂಚಿ ಹಿಡಿದು ಬಂದವರೇ. ಆದರೆ ಬ್ರಿಟಿಷರಂತೆ, ಸಂಪದ್ಭರಿತವಾದ ದೇಶವೊಂದನ್ನು ಇಡಿಯಾಗಿ ತಮ್ಮ ವಸಾಹತು ಮಾಡಿಕೊಳ್ಳುವಷ್ಟು (Indian Independence Movement) ಕುಟಿಲತೆ ಉಳಿದವರಿಗೆ ಇರಲಿಲ್ಲ. ಭಾರತಕ್ಕೆ ಕಾಲಿರಿಸಿದ ಆರಂಭದಲ್ಲಿ, ಮೊಗಲ್ ಚಕ್ರಾಧಿಪತ್ಯದಿಂದ ಪರವಾನಗಿ ಪಡೆದು, ಮೊದಲು ಸೂರತ್‌ನಲ್ಲಿ ನಂತರ ಕೊಲ್ಕತ್ತದಲ್ಲಿ ತಮ್ಮ ಕೋಠಿಗಳನ್ನು ಕಂಪನಿ(indian freedom struggle history) ಕಟ್ಟಿಸಿಕೊಂಡಿತು. ಹಾಗೆಯೇ ಮದರಾಸು ಮತ್ತು ಬೊಂಬಾಯಿ ಪ್ರಾಂತ್ಯಗಳಲ್ಲೂ ಒಂದೊಂದು ಕೋಠಿಗಳು ತಲೆ ಎತ್ತಿದವು.
ನಿರ್ಮಾಣವಾಗಿದ್ದು ಕೋಠಿಗಳು ಮಾತ್ರವಲ್ಲ, ಕೋಟೆಗಳೂ ಸಹ! ಅದರೊಳಗೆ ವ್ಯಾಪಾರಿ ಸರಕುಗಳಷ್ಟೇ ಅಲ್ಲ, ಶಸ್ತ್ರಾಸ್ತ್ರಗಳೂ ಸಂಗ್ರಹವಾದವು. ಇಷ್ಟಾದ ಮೇಲೆ ಸಿಪಾಯಿಗಳ ದಂಡಿಲ್ಲದಿದ್ದರೆ ಹೇಗೆ? ಮೊದಲಿಗೆ ಏನೂ ಇಲ್ಲದ ಸನ್ಯಾಸಿಗಳಂತೆ ಬಂದವರ ಸಂಸಾರ ಉದ್ದವಾಗತೊಡಗಿತ್ತು. ಬ್ರಿಟಿಷರ ಆಳ-ಅಗಲಗಳನ್ನು ಅರ್ಥ ಮಾಡಿಕೊಳ್ಳದ ದೇಶೀಯ ರಾಜರು ಮತ್ತು ನವಾಬರು, ಇವೆಲ್ಲದಕ್ಕೂ ಅವರಿಗೆ ಅನುಮತಿ ನೀಡಿದ್ದರು. ಮಾತ್ರವಲ್ಲ, ತಂತಮ್ಮ ಅನುಕೂಲಕ್ಕಾಗಿ ಬ್ರಿಟಿಷರ ಸೇನೆಗೆ ತಮ್ಮ ರಾಜ್ಯಗಳಲ್ಲೂ ನೆಲೆ ನೀಡಿದ್ದರು. ಅಗತ್ಯ ಬಿದ್ದಾಗ ತಮ್ಮ ಜೊತೆ ಹೋರಾಟಕ್ಕಾದೀತು ಎಂಬ ಉದ್ದೇಶವಿದ್ದರೂ, ತಮ್ಮದೇ ಖರ್ಚಿನಲ್ಲಿ ಬ್ರಿಟಿಷರ ಸೇನೆಯನ್ನು ಸಾಕುತ್ತಿದ್ದೇವೆ ಎಂಬುದು ದೇಶಿ ಅರಸೊತ್ತಿಗೆಗಳಿಗೆ ಅರಿವಾಗಲಿಲ್ಲ. ಇದೇ ಮುಂದುವರಿದು, ತಮಗರಿವಿಲ್ಲದಂತೆ ತಮ್ಮ ವೆಚ್ಚದಲ್ಲೇ ತಮ್ಮನ್ನು ಆಳುವುದಕ್ಕೆ ಬ್ರಿಟಿಷರಿಗೆ ದೇಶಿ ರಾಜರುಗಳು ಅವಕಾಶ ಮಾಡಿಕೊಟ್ಟಿದ್ದರು.
ಮುಂದಿನ ನೂರೈವತ್ತು ವರ್ಷಗಳಲ್ಲಿ ಬ್ರಿಟಿಷರು ದೇಶದ ಹಲವೆಡೆಗಳಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿದ್ದರು. 1757ರಲ್ಲಿ, ಬಂಗಾಳದ ನವಾಬನಾಗಿದ್ದ ಸಿರಾಜುದ್ದೌಲ ಕೊಲ್ಕತ್ತದ ಕೋಟೆಯ ಮೇಲೆ ದಾಳಿ ಮಾಡಿ, ಬ್ರಿಟಿಷರ ಕೈಯಿಂದ ಅದನ್ನು ವಶಪಡಿಸಿಕೊಂಡ. ಆದರೆ ಮದರಾಸಿನಿಂದ ದೊಡ್ಡ ಸೇನೆ ತರಿಸಿಕೊಂಡ ಬ್ರಿಟಿಷರು, ಬಂಗಾಳದ ರಾಜಧಾನಿಯಾಗಿದ್ದ ಮುರ್ಷಿದಾಬಾದ್ ಮೇಲೆ ದಾಳಿ ಮಾಡಿದರು. ಪ್ಲಾಸಿ ಎಂಬಲ್ಲಿ ನಡೆದ ಕದನದಲ್ಲಿ ಸಿರಾಜುದ್ದೌಲನಿಗೆ ಸೋಲಾಯಿತು. ಇದರಿಂದ ಬಂಗಾಳ, ಒರಿಸ್ಸಾ, ಬಿಹಾರ ಮತ್ತು ಅಸ್ಸಾಂ ಒಳಗೊಂಡ ವಿಶಾಲವಾದ ರಾಜ್ಯ ಬ್ರಿಟಿಷರ ಕೈವಶವಾಯಿತು. ಆನಂತರ, ತಮಗೆ ಎದುರಿಲ್ಲ ಎನ್ನುವಷ್ಟು ಪ್ರಬಲರಾದರು. ನಂತರ ಸಿಂಧ್, ಪಂಜಾಬ್ ಮತ್ತಿತರ ಪ್ರಾಂತ್ಯಗಳು ಇವರ ವಶವಾದವು. ಔರಂಗಜೇಬನ ನಂತರ ಮೊಘಲ್ ಸಾಮ್ರಾಜ್ಯ ಕುಸಿಯಿತು. ಮರಾಠಾ ಸಾಮ್ರಾಜ್ಯ ಮುರಿದು ಬಿತ್ತು. ಅಳಿದುಳಿದ ರಾಜರು, ನಿಜಾಮರು ಬ್ರಿಟಿಷರ ಮುಂದೆ ಮಂಡಿಯೂರಿದರು. ಆದಾಗ್ಯೂ ಕೆಲವೊಂದು ರಾಜರುಗಳು ತಮ್ಮ ಸಾಮ್ರಾಜ್ಯ ಉಳಿಸಿಕೊಳ್ಳಲು ಬ್ರಿಟಿಷರೆದುರು ಹೋರಾಡಿದರೂ, ಹೆಚ್ಚಿನ ಫಲ ಕಾಣಲಿಲ್ಲ. ಎದುರಾಳಿಗಳ ಬಲದಲ್ಲಿದ್ದ ಸ್ವಾರ್ಥಿ ಮತ್ತು ಮತ್ಸರಿಗಳನ್ನು ನಿಖರವಾಗಿ ಗುರುತಿಸಿ, ಅವರನ್ನು ತಮ್ಮ ಕೈವಶ ಮಾಡಿಕೊಳ್ಳುತ್ತಿದ್ದ ಬ್ರಿಟಿಷರು, ಅವರ ವಂಚನೆಯ ನೆರವಿನಿಂದ ಶತ್ರುಗಳನ್ನು ಬಗ್ಗುಬಡಿದ ಉದಾಹರಣೆಗಳನ್ನು ಲೆಕ್ಕವಿಲ್ಲದಷ್ಟಿವೆ.
ಲೂಟಿಯ ಪರ್ವ
ಪ್ಲಾಸಿ ಕದನದ ನಂತರ ನೂರು ವರ್ಷಗಳಲ್ಲಿ ಬ್ರಿಟಿಷರು ನಡೆಸಿದ ಸುಲಿಗೆ, ದಬ್ಬಾಳಿಕೆ ವಿವರಣೆಗೆ ಮೀರಿದ್ದು. ಅರಣ್ಯಗಳನ್ನು ಲೂಟಿ ಮಾಡಿದರು. ಬ್ರಿಟನ್‌ನಲ್ಲಿ ಹೆಚ್ಚುತ್ತಿದ್ದ ಕೈಗಾರಿಕೆಗಳಿಗೆ ಅಗತ್ಯವಾಗಿದ್ದ ಎಲ್ಲಾ ಕಚ್ಚಾವಸ್ತುಗಳನ್ನು ಭಾರತದಿಂದ ಕೊಳ್ಳೆ ಹೊಡೆದರು. ದೇಶೀಯ ರಾಜರು ಬ್ರಿಟಿಷರ ಕೈಗೊಂಬೆಗಳಾಗಿದ್ದರು; ಗುಡಿ ಕೈಗಾರಿಕೆಗಳು ಅತಂತ್ರವಾದವು; ಕಂದಾಯ ಹೆಚ್ಚಿಸಿದ್ದರಿಂದ ಜನರ ಬವಣೆಯೂ ಹೆಚ್ಚಿತು; ರೈತರು ತಮ್ಮದೇ ಭೂಮಿಯಲ್ಲಿ ಕೂಲಿ ಮಾಡುವಂತಾಯಿತು; ಫಲವತ್ತಾದ ನೆಲದಲ್ಲಿ ಪ್ಲಾಂಟೇಶನ್ ಸೃಷ್ಟಿಯಾಯಿತು; ದೀರ್ಘ ಕಾಲದ ಬರ ಮತ್ತು ರೋಗಗಳಿಂದಾಗಿ ಜನ ನರಕದರ್ಶನ ಮಾಡುವಂತಾಯ್ತು. ಇವೆಲ್ಲದರ ಫಲವಾಗಿ ಜನತೆಯ ಆಕ್ರೋಶ ಸ್ಫೋಟಿಸಿದ್ದು 1857ರಲ್ಲಿ, ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ.
ಇದನ್ನೂ ಓದಿ : Independence Day 2023: ಈ ದೇಶ ನಮ್ಮದು! ಹೆಮ್ಮೆಯ ಅಲೆ ತುಳುಕಾಡಿಸುವ ಈ ಚಿತ್ರಗಳನ್ನು ಇಂದೇ ನೋಡಿ!
ಮೀರತ್‌ನಲ್ಲಿ ಬ್ರಿಟಿಷ್ ಸೇನೆಯಲ್ಲಿದ್ದ ಭಾರತೀಯ ಸಿಪಾಯಿಗಳ ದಂಗೆ ಎಂಬಂತೆ ಪ್ರಾರಂಭವಾದರೂ, ಇದರ ಉರಿ ದೇಶದೆಲ್ಲೆಡೆ ನಾನಾ ರೂಪಗಳಲ್ಲಿ ಪ್ರಜ್ವಲಿಸಿತು. ರಾಜರು, ನವಾಬರೆನ್ನದೆ ಎಲ್ಲರೂ ಇದನ್ನು ಬೆಂಬಲಿಸಿದರು. ಝಾನ್ಸಿಯ ರಾಣಿ ಲಕ್ಷ್ಮೀಬಾಯಿ, ಅವಧ್‌ನ ಬೇಗಂ ಹಜ್ರತ್ ಮಹಲ್‌ನಂಥ ಅರಸಿಯರೂ ಇದಕ್ಕೆ ಪ್ರಬಲ ಪ್ರತಿರೋಧವನ್ನು ತೋರಿದರು. ಝಾನ್ಸಿಯ ರಾಣಿಯಂಥವರು ಹೋರಾಡುತ್ತಲೇ ವೀರಮರಣವನ್ನಪ್ಪಿದವರು. ಸುಮಾರು ಎರಡು ವರ್ಷಗಳ ಕಾಲ ನಡೆದ ಈ ಬಂಡಾಯ ಸಫಲವಾಗಲಿಲ್ಲ. ಆದರೆ ಬ್ರಿಟಿಷರ ದೌರ್ಬಲ್ಯವೇನು ಮತ್ತು ಭಾರತೀಯರ ಶಕ್ತಿಯೇನು ಎಂಬುದು ಲೋಕವಿಧಿತವಾಯಿತು. ಭಾರತದಲ್ಲಿ ಅಧಿಕಾರ ಉಳಿಸಿಕೊಳ್ಳಲು ಇನ್ನೂ ಏನೇನು ಮಾಡಬಹುದು ಎಂಬ ಬ್ರಿಟಿಷ್ ಆಲೋಚನೆಯ ಬೆನ್ನಿಗೆ ಕೆಲವು ತೋರಿಕೆಯ ಸುಧಾರಣೆಗಳೂ ಜಾರಿಗೆ ಬಂದವು. ಸಂಪರ್ಕ ವ್ಯವಸ್ಥೆಗಳು, ಬಂದರು, ಸೀಮಿತ ಕೈಗಾರಿಕೆಗಳ ಸ್ಥಾಪನೆ, ಸುಧಾರಿತ ವಿದ್ಯಾಭ್ಯಾಸ- ಇವೆಲ್ಲಾ ಬ್ರಿಟಿಷರ ಅದೇ ಆಲೋಚನೆಗಳ ಫಲವಾಗಿಯೇ ಬಂದಂಥವು.
ಸುಧಾರಣೆಗಳ ಕಾಲ
ಆದರೆ ತಮ್ಮ ಸ್ವಾರ್ಥಕ್ಕಾಗಿ ಬ್ರಿಟಿಷರು ತಂದ ಸುಧಾರಣೆಗಳ ಫಲ ಭಾರತದಲ್ಲಿ ಬೇರೆಯೇ ರೀತಿಯಲ್ಲಿ ಗೋಚರಿಸಿತು. ದೇಶದಲ್ಲಿ ಈವರೆಗೆ ಕಾಣದಂಥ ರಾಷ್ಟ್ರ ಪ್ರಜ್ಞೆ, ಸುಧಾರಣಾ ಮನಸ್ಥಿತಿಗಳು, ಹೋರಾಟದ ಕೆಚ್ಚು, ವೈಜ್ಞಾನಿಕ ಮನೋಭಾವಗಳು ತಲೆ ಎತ್ತಿದವು. ರಾಜಾರಾಮ್ ಮೋಹನ್ ರಾಯ್, ದಯಾನಂದ ಸರಸ್ವತಿ, ಈಶ್ವರಚಂದ್ರ ವಿದ್ಯಾಸಾಗರ, ಸ್ವಾಮಿ ವಿವೇಕಾನಂದ ಮುಂತಾದವರು ಜನತೆಯಲ್ಲಿ ಮೂಡಿಸಿದ ಜಾಗೃತಿ ಇಂದಿಗೂ ಅನನ್ಯ. ಭಾರತೀಯರನ್ನು ಒಡೆದು ಆಳಿದರೇ ಸೂಕ್ತ ಎಂಬ ಬ್ರಿಟಿಷರ ತಂತ್ರವೂ ತಿರುಗುಬಾಣವಾಗಿ, ಹಿಂದೂ-ಮುಸ್ಲಿಂ ಸಮನ್ವಯ ಭಾವಗಳು ಭಾರತೀಯರಲ್ಲಿ ಒಡಮೂಡಿದವು. 1885ರಲ್ಲಿ ಅಲೆನ್ ಆಕ್ಟೇವಿಯನ್ ಹ್ಯೂಂ (ಎ.ಒ. ಹ್ಯೂಂ) ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹುಟ್ಟುಹಾಕಿದರು. ಮೊದಲಿಗೆ ಇದರ ಸ್ಥಾಪನೆಯ ಉದ್ದೇಶ ಏನೇ ಇದ್ದರೂ, ವಿದ್ಯಾವಂತ ಭಾರತೀಯರ ಸ್ವಾತಂತ್ರ್ಯದ ಹಂಬಲವನ್ನು ಪ್ರಕಟಿಸುವತ್ತ ಈ ಸಂಸ್ಥೆ ವಾಲಿತು. ದಾದಾಭಾಯಿ ನವರೋಜಿ, ಸುರೇಂದ್ರನಾಥ ಬ್ಯಾನರ್ಜಿ, ಆನಂದಾಚಾರ್ಲು, ಗೋಪಾಲಕೃಷ್ಣ ಗೋಖಲೆ ಮುಂತಾದವರು ಬ್ರಿಟಿಷ್ ದಬ್ಬಾಳಿಕೆಯ ವಿರುದ್ಧ ಮೂಡಿಸುತ್ತಿದ್ದ ಜಾಗೃತಿಯ ಪ್ರಭಾವದಿಂದ ಕಾಂಗ್ರೆಸ್ ಸಹ ಹೊರತಾಗಲಿಲ್ಲ.
ರಾಷ್ಟ್ರೀಯ ಕಾಂಗ್ರೆಸ್ ಸೌಮ್ಯವಾದಿ ಮಾರ್ಗಗಳ ಮೂಲಕ ಸ್ವಾತಂತ್ರ್ಯ ಪಡೆಯಲು ಪ್ರಯತ್ನಿಸುತ್ತಿದ್ದರೆ, ತೀವ್ರವಾದಿ ನಾಯಕರು ನೇರ ಹೋರಾಟದತ್ತ ಗಮನ ಹರಿಸಿದ್ದರು. ಬಾಲಗಂಗಾಧರ ತಿಲಕರು ಪ್ರಖರ ಪತ್ರಿಕಾ ಜಾಗೃತಿ, ಗಣೇಶೋತ್ಸವ ಮತ್ತು ಶಿವಾಜಿ ಉತ್ಸವಗಳ ಮೂಲಕ ಜನರನ್ನು ನೇರವಾಗಿ ಒಗ್ಗೂಡಿಸುತ್ತಿದ್ದರೆ, ಲಾಲಾ ಲಜಪತ್‌ರಾಯ್ ಅವರು ಕಾರ್ಮಿಕ ಚಳುವಳಿಗಳ ಮೂಲಕ, ಬಿಪಿನ್ ಚಂದ್ರಪಾಲರು ರೈತ ಚಳುವಳಿಗಳ ಮೂಲಕ ಜನತೆಯನ್ನು ಹುರಿದುಂಬಿಸುತ್ತಿದ್ದರು. ಇಂಥ ಎಲ್ಲವುಗಳನ್ನು ಹತ್ತಿಕ್ಕಲು ಬ್ರಿಟಿಷ್ ಆಡಳಿತ ಸಾಲು ಸಾಲು ಕಾನೂನುಗಳನ್ನು ಜಾರಿಗೆ ತರುತ್ತಿತ್ತು. ಪತ್ರಿಕಾ ಸ್ವಾತಂತ್ರ್ಯವನ್ನು ತುಂಡರಿಸಲು ಮಾಡಿದ ಯತ್ನಗಳು, ಒಂದೆಡೆ ಅದುಮಿದ ಚಿಲುಮೆ ಇನ್ನೊಂದೆಡೆ ಬುಗ್ಗೆಯಾದಂತೆ ಕಂಡುಬಂತು.
ಮೊದಲ ಮಹಾಯುದ್ಧ 1919ರಲ್ಲಿ ಕೊನೆಗೊಂಡಾಗ, ದೇಶದ ಉದ್ದಗಲಕ್ಕೆ ಚಳುವಳಿ ತೀವ್ರಗೊಂಡಿತು. ಜಲಿಯನ್‌ವಾಲಾ ಭಾಗ್‌ನಂಥ ಹತ್ಯಾಕಾಂಡದಿಂದ ಲಕ್ಷಾಂತರ ಭಾರತೀಯರ ಮನಸ್ಸು ಉದ್ವಿಗ್ನಗೊಂಡಿತ್ತು. ಭಗತ್‌ಸಿಂಗ್, ಚಂದ್ರಶೇಖರ್ ಆಜಾದ್‌ನಂತಹ ಸಾವಿರಾರು ತರುಣರು ಕ್ರಾಂತಿಯ ಹಾದಿಯನ್ನು ಹಿಡಿದರು. 1920ರ ಅಸಹಕಾರ ಚಳುವಳಿ ದೇಶದೆಲ್ಲೆಡೆ ಹರಡಿತು. ರಾಷ್ಟ್ರೀಯ ಕಾಂಗ್ರೆಸ್ ಮತ್ತದರ ನಾಯಕರು ತಮ್ಮ ಮೃದು ಧೋರಣೆಯನ್ನು ಬಿಟ್ಟು ಹೋರಾಟದ ಹಾದಿಯನ್ನು ಹಿಡಿದರೂ, ಅಹಿಂಸೆ ಮತ್ತು ಸತ್ಯಾಗ್ರಹದ ಸಿದ್ಧಾಂತ ಅವರಿಗಿತ್ತು. ಮಹಾತ್ಮ ಗಾಂಧಿ ಅವರಂಥ ನೇತಾರರ ನಾಯಕತ್ವ ದೇಶಕ್ಕೆ ಲಭಿಸಿತ್ತು. ಸಿ. ರಾಜಗೋಪಾಲಾಚಾರಿ, ವಲ್ಲಭಭಾಯ್ ಪಟೇಲ್, ಜವಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ ಮುಂತಾದ ನಾಯಕರು ಮುಂಚೂಣಿಗೆ ಬಂದರು.
ಚಳವಳಿ ಮತ್ತು ಸತ್ಯಾಗ್ರಹಗಳು
1905ರ ವಂಗ ಭಂಗ ಕಾಯಿದೆಗೆ ಪ್ರತಿಯಾಗಿ ಹುಟ್ಟಿದ ಸ್ವದೇಶಿ ಚಳವಳಿ, 1916ರಲ್ಲಿ ಹೋಂ ರೂಲ್ ಚಳುವಳಿ, ರೌಲತ್ ಕಾಯ್ದೆಗೆ ಪ್ರತಿಯಾಗಿ 1917ರಲ್ಲಿ ಬಿಹಾರದ ಚಂಪಾರಣ್‌ನಲ್ಲಿ ನಡೆದ ಸತ್ಯಾಗ್ರಹ, 1919ರ ಖಿಲಾಫತ್ ಚಳುವಳಿ, 1920ರ ಅಸಹಕಾರ ಚಳವಳಿ, ವಿದೇಶಿ ವಸ್ತುಗಳ ಬಹಿಷ್ಕಾರ, 1930ರಲ್ಲಿನ ನಾಗರಿಕ ಅಸಹಕಾರ ಚಳವಳಿಯ ಹಿನ್ನೆಲೆಯಲ್ಲಿನ ದಂಡಿ ಸತ್ಯಾಗ್ರಹ, ಕರ ನಿರಾಕರಣೆ, ಅರಣ್ಯ ಸತ್ಯಾಗ್ರಹ, ನೇತಾಜಿಯವರ ಆಜಾದ್ ಹಿಂದ್ ಚಳುವಳಿ, 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ- ಇಂತಹ ಕೆಲವು ಚಳುವಳಿಗಳನ್ನು ಪ್ರಮುಖವಾಗಿ ಹೆಸರಿಸಬಹುದು. ಆದರೆ ಹಲವಾರು ದಶಕಗಳ ಕಾಲ ವಿಸ್ತಾರವಾದ ದೇಶದೆಲ್ಲೆಡೆಯಲ್ಲಿ ಒಂದಿಲ್ಲೊಂದು ಚಳುವಳಿ, ಪ್ರತಿಭಟನೆ ನಡೆಯುತ್ತಲೇ ಇರುವಷ್ಟು ಕಾವು ಸ್ವಾತಂತ್ರ್ಯ ಹೋರಾಟಕ್ಕಿತ್ತು, ಕೆಚ್ಚು ಜನರಲ್ಲಿತ್ತು. ದಿನಂಪ್ರತಿ ಸಾವಿರಾರು ಜನರ ಬಂಧನ, ಸೆರೆವಾಸ ನಡೆಯುತ್ತಿತ್ತು. ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳೆನ್ನದೆ, ಊರು-ಕೇರಿ-ಮನೆ ಎಂಬುದಿಲ್ಲದೆ ಪ್ರತಿಯೊಬ್ಬರೂ ಹೋರಾಟದಲ್ಲಿ ಪಾಲ್ಗೊಂಡರು. ಕೋಟಿಗಟ್ಟಲೆ ಭಾರತೀಯರು ಹರಿಸಿದ ರಕ್ತಕ್ಕೆ ಪ್ರತಿಯಾಗಿ, 1947ರ ಆಗಸ್ಟ್ 14ರ ನಡುರಾತ್ರಿ ದೇಶ ಸ್ವತಂತ್ರವಾಯಿತು.