Site icon Vistara News

ಲೈಫ್‌ ಸರ್ಕಲ್‌ ಅಂಕಣ | ಭಕ್ತಿಯಲ್ಲಿದೆ ಜೀವನದ ಭೋಗ, ಸಾಧನೆಯ ಯೋಗ, ಮುಕ್ತಿಯ ಮಾರ್ಗ

dhyana

‘ಪ್ರೀತಿಯಿಂದ ವಸ್ತುವನ್ನು ಅಡೆತಡೆಯಿಲ್ಲದೆ ಸ್ಮರಿಸುವುದು ಭಕ್ತಿ’ ಎಂಬುದು ಲಿಂಗ ಪುರಾಣೋಕ್ತಿ. ಭಕ್ತಿಯ ಕುರಿತಾದ ಚಿಂತನೆಗಳು ಶತಶತಮಾನಗಳಿಂದ ನಡೆದುಕೊಂಡು ಬಂದಿವೆ. ಅನನ್ಯ ಭಕ್ತಿಯ ಮುಂದೆ ಎಲ್ಲವೂ ಅರ್ಥಹೀನ ಎಂಬ ಗೀತೋಕ್ತಿ ಇದೆ. ನಮ್ಮ ದೇಶದಲ್ಲಿ ಭಕ್ತಿ ಪಂಥಗಳ ಸಾಲು ಸಾಲೇ ಕಂಡುಬರುತ್ತದೆ. ಇತಿಹಾಸದಲ್ಲಿ ಭಕ್ತಿಕಾಲ ಎಂಬುದೇ ಆಗಿಹೋಗಿದೆ. ಕನಕದಾಸರು, ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ತುಳಸೀದಾಸರು, ವಲ್ಲಭಾಚಾರ್ಯ, ಕಬೀರ್, ರೈದಾಸ್, ಚೈತನ್ಯ, ಗುರು ನಾನಕ್, ಮೀರಾ, ರಸ್ಖಾನ್, ಆಂಡಾಳ್, ಆಳ್ವಾರರು, ಶಂಕರದೇವ್, ಇನ್ನೂ ಲೆಕ್ಕವಿಲ್ಲದಷ್ಟು ಮಂದಿ ಭಕ್ತಿ ಪಂಥಗಳ ಸ್ಥಾಪಕರಾಗಿ ಹೋಗಿದ್ದಾರೆ. ಪ್ರತಿಯೊಬ್ಬರಿಗೂ ಅವರದೇ ಆದ ಭಕ್ತಿಯ ಪರಿಕಲ್ಪನೆ ಇತ್ತು. ಭಕ್ತಿಯ ಪರಿಕಲ್ಪನೆಯೂ ಪಂಥದ ರೂಪದಲ್ಲಿ ಔಪಚಾರಿಕ ರೂಪವನ್ನು ಪಡೆದಿದೆ ಎಂಬುದಂತೂ ಸತ್ಯ. ಎಲ್ಲೋ ಒಂದು ಸಂಪ್ರದಾಯವಾಗಿ, ಎಲ್ಲೋ ಒಂದು ಪದ್ಧತಿಯಾಗಿಬಿಟ್ಟಿದೆ. ಆದರೆ ಪ್ರತಿಯೊಂದು ರೂಪದಲ್ಲೂ ಅದು ಸಂಕೀರ್ಣವಾಗುತ್ತಲೇ ಸಾಗಿತ್ತು.

ಭಕ್ತಿ ಪಂಥಗಳ ಹೊರತಾಗಿ ಬೇರೆಡೆ ಭಕ್ತಿಯ ಬಗ್ಗೆ ಚರ್ಚೆಯಾಗಲಿಲ್ಲವೆಂದಲ್ಲ. ಕಳೆದ 125 ವರ್ಷಗಳಲ್ಲಿಯೂ ಭಕ್ತಿಯ ಮೇಲೆ ಹೊಸ ಕೆಲಸ ನಡೆದಿದೆ. ಹೊಸ ಸ್ವರೂಪದಲ್ಲಿ, ವಿಕಾಸದ ರೂಪದಲ್ಲಿ, ವಿಜ್ಞಾನದ ಉತ್ಸಾಹದಲ್ಲಿ ಮತ್ತು ಆಧುನಿಕ ಜೀವನಶೈಲಿಯಲ್ಲಿಯೂ ಭಕ್ತಿಯ ಪುಸ್ತಕಗಳನ್ನು ಬರೆಯಲಾಗಿದೆ. ಮೋಕ್ಷದ ಬಯಕೆಯ ಸ್ವರೂಪವು ವೇದಗಳು ಮತ್ತು ಉಪನಿಷತ್ತುಗಳಲ್ಲಿದ್ದಂತೆಯೇ ಉಳಿದಿಲ್ಲ. ಮಹರ್ಷಿ ಅರವಿಂದರು ಭಕ್ತಿ ಮತ್ತು ಭವಿಷ್ಯದ ಜೀವನವನ್ನು ಆಂಗ್ಲ ಮೂಲದಲ್ಲಿ ವಿವರಿಸಿದರು.

ಭಕ್ತಿಯ ಅಗತ್ಯವೇನು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಭಕ್ತಿ ಎಂದರೆ ಅಂಶ. ಎಲ್ಲಾ ನಾಟಕವು ಅಂಶ ಮತ್ತು ಅಂಶಿಯದ್ದಾಗಿದೆ. ಯಾರು ಯಾವುದರ ಅಂಶವೋ, ಅದರೊಂದಿಗೆ ಸೇರಿಕೊಳ್ಳಲು ಬಯಸುತ್ತಾರೆ. ಸೂರ್ಯನನ್ನು ಭೇಟಿಯಾಗಲು ಬೆಂಕಿ ಯಾವಾಗಲೂ ಮೇಲಕ್ಕೇರುತ್ತದೆ. ನೀರು ಯಾವಾಗಲೂ ಸಮುದ್ರದ ಕಡೆಗೆ ಹರಿಯುತ್ತದೆ. ನೀವು ಭೂಮಿಯಿಂದ ಮೇಲಕ್ಕೆ ನಿರ್ಧಿಷ್ಟ ಎತ್ತರದವರೆಗೆ ಏನನ್ನಾದರೂ ಎಸೆದರೆ, ಅದು ತನ್ನ ಸಾಂದ್ರತೆಯನ್ನು ಆಧರಿಸಿ ಭೂಮಿಯ ಮೇಲೆಯೇ ಬೀಳುತ್ತದೆ. ಹಾಗೆಯೇ ಬ್ರಹ್ಮದ ಅಂಶವಾಗಿರುವ ಜೀವರು ಸದಾ ಬ್ರಹ್ಮವನ್ನು ಪಡೆಯಲು ಹಾತೊರೆಯುತ್ತಿರುತ್ತಾರೆ. ಬ್ರಹ್ಮ ಮತ್ತು ಮಾಯೆಯು ಪುರುಷ ಮತ್ತು ಪ್ರಕೃತಿಯಾಗುತ್ತಾರೆ. ಅವುಗಳನ್ನು ಚಿತ್ (ಜೀವ) ಮತ್ತು ಅಚಿತ್ (ಪ್ರಕೃತಿ) ಎಂದು ಕರೆಯಲಾಗುತ್ತದೆ. ಪುರುಷ ಮತ್ತು ಪ್ರಕೃತಿ ಯಾವಾಗಲೂ ಒಟ್ಟಿಗೆ ವಾಸಿಸುತ್ತವೆ, ಬೇರ್ಪಡಿಸಲಾಗದವು. ಬ್ರಹ್ಮ ಮತ್ತು ಮಾಯೆಯು ಪ್ರಳಯಕಾಲದಲ್ಲಿ ಸೂಕ್ಷ್ಮ ರೂಪದಲ್ಲಿ ವಾಸಿಸುತ್ತಾರೆ. ಸೃಷ್ಟಿ ಕಾಲದಲ್ಲಿ ಸ್ಥೂಲ ರೂಪದಲ್ಲಿ ಪ್ರಕೃತಿ ಮತ್ತು ಪುರುಷ ಎಂದು ಕರೆಯಲ್ಪಡುತ್ತಾರೆ.

ಮಹರ್ಷಿ ಅರವಿಂದರು ಜೀವನವನ್ನು ಅಭಿವೃದ್ಧಿಯ ಪಯಣವೆಂದು ಪರಿಗಣಿಸಿದ್ದಾರೆ. ಉದಾಹರಣೆಗೆ, ಡಾರ್ವಿನ್ ಕೂಡ ಒಂದು ವಿಶೇಷ ಜಾತಿಯ ಮಂಗಗಳಿಂದ ಮನುಷ್ಯರ ಬೆಳವಣಿಗೆಯನ್ನು ಹೇಳುತ್ತಿದ್ದರು. ಆದರೆ ಅದು ಭಾರತೀಯರಿಗೆ ಅನ್ವಯವಾಗುವುದಿಲ್ಲ ಎಂದು ವೇದವಿಜ್ಞಾನಿಗಳ ಅಭಿಪ್ರಾಯ. ಅರವಿಂದರು ಹೇಳುವಂತೆ ಆರಂಭದಲ್ಲಿ ಕೇವಲ ಪದಾರ್ಥ (ಮ್ಯಾಟರ್) ಇತ್ತು. ಪದಾರ್ಥದಿಂದಲೇ ಪ್ರಾಣವು ಉತ್ಪನ್ನವಾಗಿದೆ. ಪ್ರಾಣದಿಂದ ಮನಸ್ಸು ಬೆಳೆಯಿತು. ಮನಸ್ಸು ದ್ವಂದ್ವಾತ್ಮಕವಾಗಿದೆ ಮತ್ತು ವಿಕಸದ ಕೊನೆಯ ಗಡಿಯೂ ಅಲ್ಲ. ಭವಿಷ್ಯದ ಮಾನವನು ದ್ವಂದ್ವಾತೀತನಾಗಿರುತ್ತಾನೆ. ದೇಹ ಮತ್ತು ಆತ್ಮದ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಇದೀಗ ಅಮರತ್ವದ ಬಯಕೆ ಆತ್ಮದಲ್ಲಿ ಉಳಿದಿದೆ. ’ಮೃತ್ಯೋರ್ಮಾ ಅಮೃತಂಗಮಯ’. ಈಗ ದೇಹದ ಗುಣಗಳು, ಹೆತ್ತವರ ಗುಣಗಳು ಆತ್ಮದಲ್ಲಿ ಉಳಿದಿಲ್ಲ. ಇಂದ್ರಿಯಗಳು ವಸ್ತುಗಳ ಹಿಂದೆ ಓಡುತ್ತವೆ. ಕರ್ಮ ಮತ್ತು ಕರ್ಮಫಲಗಳು ಜೀವನದ ಚಟುವಟಿಕೆಗಳ ಮುಖ್ಯ ಆಧಾರವಾಗಿದೆ. ಎಲ್ಲಾ ಸಾಧ್ಯ ವಿಷಯಗಳು ಸಿದ್ಧವಾಗುತ್ತವೆ ಎಂದು ಅರವಿಂದರು ಅಭಿಪ್ರಾಯಪಟ್ಟಿದ್ದಾರೆ. ಪ್ರಕೃತಿಯಲ್ಲಿ ಸ್ಥಿತಪ್ರಜ್ಞೆಯು ಸಹಜವಾಗುತ್ತದೆ. ಎಲ್ಲಾ ಮಾನವರು ಅತಿಮಾನುಷರಾಗುತ್ತಾರೆ. ಅಂದರೆ, ಅವರು ವಿಜ್ಞಾನಮಯ ಕೋಶದಲ್ಲಿ ಸ್ಥಾಪಿಸಲ್ಪಡುತ್ತಾರೆ. ಇಡೀ ಮಾನವ ಜಾತಿಯು ಮೋಕ್ಷದ ರೂಪದಲ್ಲಿ ಜೀವನವನ್ನು ನಡೆಸುತ್ತದೆ. ಭೂಮಿಯ ಮೇಲಿನ ಸೃಷ್ಟಿ-ಸಾಕ್ಷಿ ವ್ಯವಹಾರವು ಕೊನೆಗೊಳ್ಳುತ್ತದೆ. ಹಾಗಾದರೆ ಯಾರ ಭಕ್ತಿ? ಯಾರ ಮುಂದೆ ಶರಣು? ಭಕ್ತಿ ಯೋಗ, ಕರ್ಮ ಯೋಗ, ಜ್ಞಾನ ಯೋಗ ಯಾರಿಗೆ ಬೇಕು?

ನಮ್ಮ ದೇಹವು ಪಂಚಕೋಶದಿಂದ ಮಾಡಲ್ಪಟ್ಟಿದೆ ಎಂಬುದು ಇಲ್ಲಿ ಸ್ಪಷ್ಟವಾಗಿರಬೇಕು. ಹೊರಗಿನದು ಅನ್ನಮಯ ಕೋಶ ಅಥವಾ ಸ್ಥೂಲ ದೇಹ. ಅದರೊಳಗೆ ಪ್ರಾಣಮಯಕೋಶವಿದೆ. ಇದನ್ನೇ ವಸ್ತು ರೂಪದ ಉದಾಹರಣೆ ಎಂದು ಪರಿಗಣಿಸಿ ಅರವಿಂದರು ತಮ್ಮ ಅಂತರಂಗದ ಪಯಣ ಆರಂಭಿಸುತ್ತಿರುವಂತಿದೆ. ಪದಾರ್ಥ ಭಾವದೊಳಗೆ ಪ್ರಾಣಮಯವಿದೆ ಮತ್ತು ಅದರೊಳಗೆ ಮನೋಮಯ ಕೋಶವಿದೆ. ಅವ್ಯಯ ಪುರುಷದ ಈ ಕೊನೆಯ ಮೂರು ಕಲೆಗಳು – ಮನ, ಪ್ರಾಣ, ವಾಕ್ ಎಂಬವು ಸೃಷ್ಟಿ-ಸಾಕ್ಷಿ ಪ್ರಾಣ ಎಂದು ಕರೆಯಲ್ಪಟ್ಟಿವೆ. ಎಲ್ಲಿಯವರೆಗೆ ಮನಸ್ಸು ಪ್ರಾಣ-ವಾಕ್ಕಿನೊಂದಿಗೆ ಸೇರಿಕೊಂಡಿರುತ್ತದೆಯೋ ಅಲ್ಲಿಯವರೆಗೆ ಸೃಷ್ಟಿಯ ಕಾರ್ಯವು ಮುಂದುವರಿಯುತ್ತದೆ. ಮನೋಮಯ ಕೋಶದ ಮುಂದೆ ವಿಜ್ಞಾನಮಯ ಕೋಶ ಮತ್ತು ಆನಂದಮಯ ಕೋಶಗಳಿವೆ. ಯಾವಾಗ ಮನಸ್ಸು ವಿಜ್ಞಾನ ಮತ್ತು ಆನಂದದೊಂದಿಗೆ ಬೆರೆಯುತ್ತದೆಯೋ ಅದನ್ನು ಮುಕ್ತಿ-ಸಾಕ್ಷಿ ಎನ್ನುತ್ತಾರೆ. ಜಡ ಜಗತ್ತು ಮತ್ತು ಇಂದ್ರಿಯಗಳ ವಿಷಯಗಳಿಂದ ದೂರ ಹೋಗುತ್ತಿರುತ್ತದೆ. ನಿವೃತ್ತಿ ಮಾರ್ಗ ಮಾತ್ರ ಪರಿಣಾಮಕಾರಿಯಾಗಿ ಉಳಿದಿರುತ್ತದೆ. ಈ ಪರಿಸ್ಥಿತಿಯಲ್ಲಿ ಸ್ವಾಭಾವಿಕವಾಗಿ ಬದುಕುವುದು ಭಕ್ತಿ ಮಾರ್ಗವಾಗುತ್ತದೆ ಎನ್ನುತ್ತಾರೆ ಅರವಿಂದರು. ಏನು ನಡೆಯುತ್ತಿದೆಯೋ, ಅದರಲ್ಲಿ ನಾನು ಅಡ್ಡಿಯಾಗಬಾರದು. ವ್ಯಕ್ತಿಯ ಬದಲಿಗೆ ದೇವರ ಇಚ್ಛೆಯು ಕೆಲಸ ಮಾಡುತ್ತದೆ.‌

ಅರವಿಂದರ ತತ್ವಾದರ್ಶವನ್ನು ದೇಶದ ಬಹುತೇಕ ಪಂಗಡಗಳು ಒಪ್ಪಿಕೊಂಡಿಲ್ಲ ಎಂಬುದಂತೂ ಸತ್ಯ. ಅನೇಕ ಪ್ರಶ್ನೆಗಳನ್ನು ಎತ್ತಲಾಯಿತು, ಆದರೆ ಅವುಗಳನ್ನು ಪರಿಹರಿಸಲಾಗಿಲ್ಲ. ಸಮಯ ಬಂದಾಗ ಉತ್ತರ ನೀಡಲಾಗುವುದು ಎಂದು ಹೇಳಲಾಯಿತು. ಜ್ಞಾನ (ವಿತ್ತಿ) ಮತ್ತು ಉಪಾಸನೆ ಸಮಾನಾರ್ಥಕವಾಗಲು ಸಾಧ್ಯವಿಲ್ಲ ಎಂದು ಕೆಲವರು ಹೇಳಿದ್ದಾರೆ. ನಿರ್ಗುಣ ವಿಧ್ಯೆ (ವಿವಿಧಾ ಧ್ಯಾಯತೇತಿ ವಿಧ್ಯಾ) ಎಂದು ಕರೆಯಲ್ಪಡುವ ಆತ್ಮದ ಸತ್ವಾದಿ ತ್ರಿಗುಣಗಳ ಸಾರದಿಂದ ಸ್ಪರ್ಶಿಸದ ನಿರ್ಗುಣ ಭಾವದ ಜ್ಞಾನವು ’ವಿತ್ತಿ’. ಆತ್ಮದ ಸಗುಣ ಸಾಕಾರ ರೂಪದಲ್ಲಿ ಜ್ಞಾನ, ಪರಿಚರ್ಯೆಯಲ್ಲಿ ಸೇವಾ ರೂಪೀ ಕ್ರಿಯೆಯೇ ’ಸಗುಣ ವಿಧ್ಯಾ ಉಪಾಸನೆ’ ಆಗಿದೆ. ಉಪಾಸನೆಯ ಮೂಲಕ ಗುರಿಯಾಗಿಸಿಕೊಂಡ ತತ್ವ ರೂಪೀ ವಸ್ತುವೇ ಧ್ಯೇಯ, ಜ್ಞಾತವ್ಯ ಅಥವಾ ಉಪಾಸ್ಯ ಎಂದಾಗುತ್ತದೆ.

ಉಪಾಸನೆಯ ಕುರಿತು ಶಂಕರಾಚಾರ್ಯರ ಹೇಳಿಕೆ ಏನೆಂದರೆ, ಮೊದಲನೆಯದಾಗಿ, ಮೂಲ ತತ್ವವನ್ನು ಮನಸ್ಸಿನಲ್ಲಿ ಧಾರಣೆ ಮಾಡಿಕೊಳ್ಳುವುದು. ನಂತರ ವಿಷಯದ ಮೇಲೆ ನಿತ್ಯವೂ ಸಮಾನ ರೂಪದಿಂದ ವಿಶ್ವಾಸ ರೂಪೀ ಪ್ರವಾಹದ ಸತತ ಪ್ರವೃತ್ತಿಯನ್ನು ಉಪಾಸನೆ ಎಂದು ಕರೆಯಲಾಗುತ್ತದೆ.

  1. ಪ್ರಾಮಾಣಿಕ ವಿಶ್ವಾಸದ ಅನುಸಾರ ತದನುಕೂಲ ಬುದ್ಧಿಯನ್ನು ವಿಜ್ಞಾನ ಎಂದು ಕರೆಯಲಾಗುತ್ತದೆ.
  2. ಭ್ರಮೆ ಮತ್ತು ಅಜ್ಞಾನವನ್ನು ಸಹ ಸ್ಪರ್ಶಿಸದೆ, ಇನ್ನೊಂದರಲ್ಲಿ ಮತ್ತೊಂದರ ಭಾವನಾ ರೂಪೀ ಬುದ್ಧಿಯೇ ಉಪಾಸನೆ.
  3. ಶ್ರದ್ಧಾ ಸೂತ್ರದ ಸಹಾಯದಿಂದ ಮನಸ್ಸು ಮತ್ತು ಬುದ್ಧಿಯನ್ನು ಪರ ತತ್ವಕ್ಕೆ ಶರಣಾಗಿಸುವುದು ಉಪಾಸನೆ.
  4. ಸಾಧಕರು ತಮ್ಮ ಆತ್ಮದ ಅಂಶಭೂತವನ್ನು (ಮನಸ್ಸು-ಬುದ್ಧಿ) ಮೂಲ ಆತ್ಮಕ್ಕೆ ಭಕ್ತಿಯ ರೂಪದಲ್ಲಿ ಅರ್ಪಿಸಿ ದೇವರ ಭಕ್ತರಾಗುತ್ತಾರೆ.
  5. ದೇವರ ಅಂಶವಾಗಲು ಜ್ಞಾನದಿಂದ ಮಾಡುವ ಯಾವುದೇ ಕಾರ್ಯಗಳನ್ನು ಭಕ್ತಿ ಎಂದು ಕರೆಯಲಾಗುತ್ತದೆ. ಭಕ್ತಿ ಎಂದರೆ ಉಪಾಸನೆಯೇ ಆಗಿದೆ.

ಒಟ್ಟಿನಲ್ಲಿ ಭಕ್ತಿಯೇ ಸಾಧ್ಯವನ್ನು ತಲುಪುವ ದಾರಿ. ತನ್ನಲ್ಲಿ ತಾನು ಸ್ಥಾಪಿತವಾಗಲು, ಶಾಂತಿಯಲ್ಲಿ ಸ್ಥಿರವಾಗಿರಲು ಇರುವ ಒಂದು ಮಾರ್ಗವಾಗಿದೆ. ಮಾರ್ಗಗಳು ಬದಲಾಗಬಹುದು. ಎಲ್ಲಿ ದೇವರ ವಿಶಿಷ್ಟತೆಯನ್ನು ಪ್ರಧಾನವಾಗಿಟ್ಟುಕೊಂಡು ಲೋಕಸಂಗ್ರಹದ ವ್ಯಕ್ತ ಕಾರ್ಮಗಳನ್ನು ಮಾಡಲಾಗುತ್ತದೆಯೋ ಅದು ಭಕ್ತ್ಯಾತ್ಮಕ ಕರ್ಮಯೋಗ. ಇಲ್ಲಿಯೂ ಸಹ ಭಕ್ತ್ಯಾತ್ಮಕ ಕರ್ಮಯೋಗವು ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟಿದೆ, ಏಕೆಂದರೆ ಜ್ಞಾನ ಮತ್ತು ಕರ್ಮದೊಂದಿಗೆ ದೇವರ ಅನನ್ಯತೆಯ ವಿಕಾಸವೂ ಇದೆ.

ಜ್ಞಾನಾತ್ಮಕ ಭಕ್ತಿಯೋಗದಲ್ಲಿ, ಜ್ಞಾನ ಮತ್ತು ಕರ್ಮಗಳೆರಡೂ ದೇವರ ಅನನ್ಯತೆಯ ಅನುರೂಪವಾಗಿ ಉಳಿಯುತ್ತವೆ, ಆದರೆ ಲೋಕಸಂಗ್ರಹದಲ್ಲಿ ಜ್ಞಾನದ ದೃಷ್ಟಿ ಇರುತ್ತದೆಯೇ ವಿನಃ ಲೋಕಸಂಗ್ರಹದ ದೃಷ್ಟಿಯಲ್ಲ. ಇದೇ ವಟು, ಸಾಧು, ಸಂತರ ಭಿಕ್ಷಾಟನೆಯ ರಹಸ್ಯ. ಎಲ್ಲಿ ಜ್ಞಾನದ ಚರ್ಚೆಯು ಅವ್ಯಕ್ತವನ್ನು ಆಧರಿಸಿದೆ ಮತ್ತು ಲೋಕಸಂಗ್ರಹವು ವ್ಯಕ್ತ ಕರ್ಮಗಳ ಮೇಲೆ ಆಧರಿಸಿದೆಯೋ, ಅದು ಕರ್ಮಪ್ರಧಾನ ಭಕ್ತಿಯೋಗವಾಗಿದೆ. ಎಲ್ಲಿ ಅವ್ಯಕ್ತವಾದ ಜ್ಞಾನ ಮತ್ತು ಕ್ಷರದ ಕರ್ಮದ ಮೇಲೆ (ಲೋಕಸಂಗ್ರಹ) ಸಮಾನ ದೃಷ್ಟಿ ಇದೆಯೋ, ಅದು ಭಕ್ತಿಪ್ರಧಾನ ಭಕ್ತಿಯೋಗ. ಅದರಲ್ಲಿ ಸಮಾನತೆಯ ಅಭಿವೃದ್ಧಿ ಮತ್ತು ಲೋಕಸಂಗ್ರಹದ ಸಂಪೂರ್ಣ ರಕ್ಷಣೆಯೂ ಇದೆ.

(ಅ) ಜ್ಞಾನಾತ್ಮಕ ಭಕ್ತಿಯೋಗ

ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿಮಾಶ್ರಿತಾಃ |
ಭಜನ್ತ್ಯನನ್ಯ ಮನಸೋ ಜ್ಞಾತ್ವಾ ಭೂತಾದಿಮವ್ಯಯಮ್ || ಭಗವದ್ಗೀತೆ 9.13

ಓ ಕುಂತಿಯ ಪುತ್ರನೇ! ಮಹಾತ್ಮರು ದೈವಿಕ ಸ್ವಭಾವದ ಮೇಲೆ ಅವಲಂಬಿತರಾಗಿದ್ದಾರೆ, ನನ್ನನ್ನು ಎಲ್ಲಾ ಜೀವಿಗಳ ಶಾಶ್ವತ ಕಾರಣ ಮತ್ತು ನಾಶವಾಗದ ಅಕ್ಷರಶಃ ರೂಪವೆಂದು ತಿಳಿದುಕೊಳ್ಳುತ್ತಾರೆ. ಮನಸ್ಸನ್ನು ಹೊಂದಿಸಿ, ನಿರಂತರವಾಗಿ ಭಜಿಸುತ್ತಾರೆ.

(ಬ) ಭಕ್ತ್ಯಾತ್ಮಕ ಭಕ್ತಿಯೋಗ

ಸಮೋಽಹಂ ಸರ್ವಭೂತೇಷು ನ ಮೇ ದ್ವೇಷ್ಯೋಽಸ್ತಿ ನ ಪ್ರಿಯಃ |
ಯೇ ಭಜನ್ತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ || ಭಗವದ್ಗೀತೆ 9.29

ನಾನು ಎಲ್ಲಾ ಜೀವಿಗಳಲ್ಲಿ ಸಮಾನವಾಗಿ ಹರಡಿಕೊಂಡಿದ್ದೇನೆ, ಯಾವುದೂ ನನಗೆ ಅಪ್ರಿಯವೂ ಅಲ್ಲ ಪ್ರಿಯವೂ ಅಲ್ಲ, ಆದರೆ ನನ್ನನ್ನು ಪ್ರೀತಿಯಿಂದ ಪೂಜಿಸುವ ಭಕ್ತರು ನನ್ನಲ್ಲಿದ್ದಾರೆ ಮತ್ತು ನಾನು ಅವರಲ್ಲಿಯೂ ಪ್ರಕಟವಾಗಿದ್ದೇನೆ.

(ಕ) ಕರ್ಮಾತ್ಮಕ ಭಕ್ತಿಯೋಗ

ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ |
ಯತ್ತಪಸ್ಯಸಿ ಕೌನ್ತೇಯ ತತ್ಕುರುಷ್ವ ಮದರ್ಪಣಮ್ || ಭಗವದ್ಗೀತೆ 9.27

ಹೇ ಅರ್ಜುನ! ನೀನು ಏನು ಕರ್ಮ ಮಾಡುತ್ತೀಯೋ, ಏನು ತಿನ್ನುತ್ತೀಯೋ, ಯಾವ ಹೋಮ ಮಾಡುತ್ತೀಯೋ, ಏನೇನು ದಾನ ಮಾಡುತ್ತೀಯೋ, ಯಾವ್ಯಾವ ತಪಸ್ಸು ಮಾಡುತ್ತೀಯೋ, ಅದೆಲ್ಲವೂ ನನಗೇ ಅರ್ಪಣೆ ಎಂಬ ಭಾವದಲ್ಲಿ ಕೈಗೊಳ್ಳು.

ಪ್ರಾಯೋಗಿಕವಾಗಿ ಹೇಳುವುದಾದರೆ, ಭಕ್ತಿಯು ಇಡೀ ಜೀವನದ ಅರ್ಥಪೂರ್ಣತೆಯಾಗಿದೆ. ಭಕ್ತಿಯಲ್ಲಿ ಪ್ರೇಮವಿದೆ, ರಸವಿದೆ ಆನಂದವಿದೆ, ಮೋಕ್ಷಕ್ಕೆ ಕಾರಣವಾಗುವ ಪರಿಕಲ್ಪನೆ ಇದೆ. ನರನಿಂದ ನಾರಾಯಣನಾಗಲು ಇದು ಸುಲಭವಾದ ಮಾರ್ಗವಾಗಿದೆ. ನಾವು ಶರೀರಜೀವಿಯೋ, ಬುದ್ಧಿಜೀವಿಯೋ, ಮನಸ್ವಿಯೋ ಆಗಿರಬಹುದು. ಆದರೆ ಭಕ್ತಿಯ ಅನುಪಸ್ಥಿತಿಯಲ್ಲಿ ಜೀವನವು ಅಭಾವಗ್ರಸ್ತವೇ ಆಗಿರುತ್ತದೆ. ಏಕೆಂದರೆ ದೇಹ, ಮನಸ್ಸು ಮತ್ತು ಬುದ್ಧಿ ಈ ಮೂರೂ ಬದುಕುವ ಸಾಧನಗಳು. ನಾನು ಸಾಧನವಲ್ಲ. ನಾನು ಆತ್ಮರೂಪಿ – ಅಹಂ ಬ್ರಹ್ಮಾಸ್ಮಿ.’ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ’. ಆದ್ದರಿಂದ ಈ ಸಾಧನಗಳು ನನಗಾಗಿ ಕೆಲಸ ಮಾಡಬೇಕು, ನನ್ನೊಂದಿಗೆ ಐಕ್ಯವಾಗಿರಬೇಕು. ನನ್ನ ಅಂಗವಾಗುವುದರ ಮೂಲಕ, ಭಕ್ತನಾಗುವ ಮೂಲಕ, ನೀವು ಜ್ಞಾನಯುಕ್ತ ಕರ್ಮವನ್ನು ಮಾಡಬೇಕಾಗುತ್ತದೆ. ಆತ್ಮವೇ ಸ್ವಯಂ ಆತ್ಮಜ್ಯೋತಿಯು. ಇಡೀ ಜೀವನವು ಕರ್ಮ ರೂಪೀ ಯಾಗ. ವಿನಿಮಯವನ್ನು ಹೊರತುಪಡಿಸಿ ಬೇರೇನೂ ಇಲ್ಲ. ಯಾರ ನಡುವೆ ವಿನಿಮಯ ನಡೆಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಾನು ಮಾತನಾಡುತ್ತಿದ್ದೇನೆ, ನೀವು ಕೇಳುತ್ತಿದ್ದೀರಿ. ಇದು ಆದಾನ-ವಿಸರ್ಗ ಎಂಬ ವಿನಿಮಯ ಮಾತ್ರ. ನಿಮ್ಮ ಜ್ಞಾನಾಗ್ನಿಯಲ್ಲಿ ನನ್ನ ವಾಕ್ ಆಹುತಿಯಾಗುತ್ತಿದೆ. ಇಲ್ಲಿ ‘ನಾನು’ ಯಾರು? ‘ನೀವು’ ಯಾರು? ಎಂಬ ಪ್ರಶ್ನೆ ಉದ್ಭವಿಸಬಹುದು. ನೀವು ಮತ್ತು ನಾನು ಇಬ್ಬರೂ ಸಾಧನವಲ್ಲ. ನನ್ನ ಆತ್ಮವು ನಿಮ್ಮ ಆತ್ಮವನ್ನು, ಈಶ್ವರ ತತ್ವವನ್ನು, ಸಂಬೋಧಿಸಬೇಕು, ಇದೇ ಭಕ್ತಿ. ಇದೇ ದೇವರ ಪೂಜೆ. ಭಕ್ತಿಯು ಒಂದು ಯೋಗ.

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ಒಳಹೊರಗಿರುವ ಎಲ್ಲರೊಂದಿಗೆ ಮಾತನಾಡುವ ಕಲೆ

ಇದಕ್ಕೆ ವ್ಯತಿರಿಕ್ತವಾಗಿ, ನಾನು ನನ್ನ ಮಾತುಗಳನ್ನು ದೇಹ, ಮನಸ್ಸು ಅಥವಾ ಬುದ್ಧಿಯ ಮೂಲಕ ಹೇಳಿದರೆ, ಲೋಕಸಂಗ್ರಹದ ಭಾವನೆಯು ಕಡಿಮೆಯಾಗುತ್ತಾ ಹೋಗುತ್ತದೆ. ಆತ್ಮದವರೆಗೆ ತಲುಪುವುದಿಲ್ಲ. ಶ್ರದ್ಧೆ, ಸ್ನೇಹ, ವಾತ್ಸಲ್ಯದ ಕೊರತೆಯೂ ಇರುತ್ತದೆ. ಬುದ್ಧಿಯ ಸಂಪ್ರೇಷಣವು ಬುದ್ಧಿಗೆ ತಲುಪುತ್ತದೆ. ಮನಸ್ಸಿನ ಸಂವಹನವು ಮನಸ್ಸನ್ನು ತಲುಪುತ್ತದೆ. ಆತ್ಮದೊಂದಿಗೆ ಯಾವುದೂ ಸಂಪರ್ಕ ಹೊಂದಿಲ್ಲ. ಹಾಗಾದರೆ ನನ್ನ ಪ್ರಾರ್ಥನೆಯು ದೇವರಿಗೆ ಹೇಗೆ ತಲುಪುತ್ತದೆ? ನನ್ನ ಆತ್ಮವೇ ನನ್ನ ದೇವರು. ಅಂದರೆ ಏನು ಹೇಳುತ್ತೇವೆಯೋ ಅದರ ಪರಿಣಾಮವು ಎಲ್ಲಿಯೂ ಆಗುವುದಿಲ್ಲ. ಅಂದರೆ, ಸಂವಹನವನ್ನು ಗುರಿಯಾಗಿಸಿಕೊಂಡ ಉದ್ದೇಶವನ್ನು ಸಾಧಿಸಲಾಗುವುದಿಲ್ಲ. ಪರಿವರ್ತನೆಯ ಕೆಲಸವು ಆತ್ಮದ ಮಟ್ಟದಲ್ಲಿ ಮಾತ್ರ ಸಂಭವಿಸಬಹುದು. ಜಗತ್ತಿನಲ್ಲಿ ಪ್ರತಿ ವರ್ಷ ಸಾವಿರಾರು ಶಾಂತಿ ಸಮ್ಮೇಳನಗಳು ನಡೆಯುತ್ತವೆ, ಜೊತೆಗೆ ಅಶಾಂತಿ ಹೆಚ್ಚುತ್ತಿದೆ. ನಮ್ಮ ಸ್ವಾರ್ಥ, ನಮ್ಮ ಅಹಂಕಾರ, ನಮ್ಮನ್ನು ಯಾರಿಗೂ ಶರಣಾಗಲು ಬಿಡುವುದಿಲ್ಲ. ನನ್ನ ಎದುರಿಗಿರುವ ವ್ಯಕ್ತಿಯನ್ನು ನಾನು ದೇವರೆಂದು ಶ್ರದ್ಧೆಯಿಂದ ಸಂಬೋಧಿಸದಿದ್ದರೆ, ನಾನು ದೇವರ ಆಶೀರ್ವಾದವನ್ನು ಹೇಗೆ ಪಡೆಯುತ್ತೇನೆ? “ನೀನೂ ನಾನಾಗಿರುವೆ, ನಾನೂ ನೀನಾಗಿರುವೆ” – ಇದೇ ಭಕ್ತಿ ಮಾರ್ಗ.

ಭಕ್ತಿಯ ಎರಡನೆಯ ಅತ್ಯುತ್ತಮ ಉದಾಹರಣೆಯೆಂದರೆ ಸೇವೆ. ತನು-ಮನ-ಧನದಿಂದ ಸೇವೆಯಾಗುತ್ತದೆ. ಸೇವೆಯ ಮೊದಲ ಸ್ಥಿತಿಯೆಂದರೆ ಮನಸ್ಸಿನ ದ್ರವಿಸುವಿಕೆ, ಸಹಾನುಭೂತಿಯ ಭಾವನೆ. ಇದರಿಂದ ದುಃಖಿತರ ಅಥವಾ ರೋಗಿಯ ನೋವು ನಿಮ್ಮ ಅನುಭವಕ್ಕೆ ಬರುತ್ತದೆ. ನಮ್ಮ ಅಸ್ತಿತ್ವವನ್ನು ಮರೆಯೋಣ. ನಮ್ಮ ಆತ್ಮವು ಸೇವೆಯಲ್ಲಿ ತೊಡಗಲಿ. ನಾವು ರೋಗಿಯ ದೇಹ ಮತ್ತು ಮನಸ್ಸನ್ನು ಸಹ ನೆನಪಿಸಿಕೊಳ್ಳಬಾರದು. ನಾವು ರೋಗಿಯ ಆತ್ಮವನ್ನು ಗುರಿಯಾಗಿರಿಸಿಕೊಳ್ಳುತ್ತೇವೆ. ಸೇವೆಯು ರೋಗಿಯನ್ನು ಸಂತೋಷಪಡಿಸುತ್ತದೆ. ಅವನ ದೇಹ ಮತ್ತು ಮನಸ್ಸು ಸಂತೋಷವಾಗಿರಬಹುದೇ? ಇವು ನಮಗೆ ಮತ್ತು ರೋಗಿಗೆ ಸಾಧನಗಳಾಗಿವೆ. ಆನಂದವು ಆತ್ಮದ ಗುಣವಾಗಿದೆ. ಆತ್ಮವು ಆನಂದಮಯವಾಗಿರುವಾಗ, ಆ ಆನಂದವು ಮಾತ್ರ ನಿಮ್ಮ ಆತ್ಮವನ್ನು ಸ್ಪರ್ಶಿಸಲು ಸಾಧ್ಯವಾಗುತ್ತದೆ. ಬುದ್ಧಿಯು ಬುದ್ಧಿಯನ್ನು ಮುಟ್ಟುತ್ತದೆ, ಮನಸ್ಸು ಮನಸ್ಸನ್ನು ಮುಟ್ಟುತ್ತದೆ. ಅವುಗಳ ಮೂಲಕ ಪರಿವರ್ತನೆ ಸಾಧ್ಯವಿಲ್ಲ. ರೋಗಿಯ ಆತ್ಮವು ಆನಂದಭರಿತವಾಗಿದ್ದಾಗ, ಅವನ ಆತ್ಮವು ನಮ್ಮ ಆತ್ಮವನ್ನು ಸ್ಪರ್ಶಿಸಲು ಸಾಧ್ಯವಾಗುತ್ತದೆ. ನಂತರ ನೀವು ರೋಗಿಯಲ್ಲಿ ನಿಮ್ಮ ಚಿತ್ರವನ್ನು ನೋಡುತ್ತೀರಿ. ಇಬ್ಬರೂ ಒಂದಾಗುತ್ತಾರೆ. ಕೃಷ್ಣನು ಗೀತೆಯಲ್ಲಿ ‘ಮಮೈವಾಂಶೋ ಜೀವಲೋಕೇ’ ಎಂದು ಹೇಳಿದ್ದಾನೆ; ಎರಡೂ ಕಡೆ ಅವನೊಬ್ಬನೇ ಇದ್ದಾನೆ. ನಾವು ನರ ರೂಪದಲ್ಲಿ ನಾರಾಯಣನ ಸೇವೆ ಮಾಡಿದ್ದೇವೆ. ಆತ್ಮವು ಆತ್ಮದ ಸೇವೆ ಮಾಡಿದೆ. ಕೃಷ್ಣನು ಕೃಷ್ಣನ ಸೇವೆ ಮಾಡಿದನು. ನನ್ನ ಕೃಷ್ಣ ಸ್ವರೂಪದ ಜ್ಞಾನ ನನಗೆ ಇರಲಿಲ್ಲ, ಸೇವೆಯು ಆ ಜ್ಞಾನವನ್ನು ಉದಯಿಸಿತು. ಪರಹಿತಕೆ ಸರಿಸಮ ಧರ್ಮವಿಲ್ಲವೋ ಅಣ್ಣ. ನಾವು ಇತರರ ಕಲ್ಯಾಣಕ್ಕಾಗಿ ಯಾವುದೇ ಕೆಲಸವನ್ನು ಪೂರ್ಣ ಉದ್ದೇಶದಿಂದ ಮಾಡಿದಾಗ, ನಾವು ನಮ್ಮ ಕಲ್ಯಾಣವನ್ನೇ ಮಾಡುತ್ತೇವೆ ಎಂದು ಸಹ ಹೇಳಲಾಗಿದೆ. ಇದು ಭಕ್ತಿಯ ಫಲ. ಇದು ‘ವಸುಧೈವ ಕುಟುಂಬಕಂ’ ಮಾರ್ಗ.‌

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ಧ್ಯಾನದ ಮೂಲಕ ಜ್ಞಾನದ ಬೆಳಕು

ಪ್ರತಿಯೊಂದು ಜೀವಿಯೂ ತನ್ನದೇ ಆದ ಗುರಿಯೊಂದಿಗೆ ಭೂಮಿಗೆ ಇಳಿಯುತ್ತದೆ. ಆತ್ಮದ ಕ್ರಿಯೆಗಳಿಗೆ ಸಾಕ್ಷಿಯಾಗುವ ದೇವರು ಕೂಡ ಅವನೊಂದಿಗೆ ಇರುತ್ತಾನೆ. ಇವೆರಡರ ನಡುವೆ ಮಾಯೆ ಅಥವಾ ಪ್ರಕೃತಿಯ ಮುಸುಕು ಇದೆ. ಇದನ್ನು ಜೀವಿಗಳ ಹೊದಿಕೆ ಎಂದು ಕರೆಯಲಾಗುತ್ತದೆ. ಪಂಚಕೋಶದ ಮಧ್ಯಭಾಗದಲ್ಲಿ ಜೀವ ಮತ್ತು ಈಶ್ವರ ಇಬ್ಬರೂ ನೆಲೆಸಿದ್ದಾರೆ. ಮನೋಮಯ ಕೋಶವು ಈಶ್ವರೀಯ ಇಚ್ಛೆಗಳ ಕೇಂದ್ರವಾಗಿದೆ. ಈ ಇಚ್ಛೆಗಳಲ್ಲಿ ಪ್ರಾರಬ್ಧವಿದೆ, ತಪಸ್ಸಿನ ಮೂಲಕ ಮಾತ್ರ ಅದನ್ನು ಬದಲಾಯಿಸಬಹುದು. ಆನಂದ, ವಿಜ್ಞಾನದೊಂದಿಗೆ ಇದು ಹೃದಯದೊಳಗೆ ಸ್ಥಾಪಿತವಾದ ಮನಸ್ಸು. ಹೃದಯವು ಸೂಕ್ಷ್ಮ ದೇಹದ ಮನಸ್ಸು. ಇದು ಬ್ರಹ್ಮ-ವಿಷ್ಣು-ಶಿವ/ಇಂದ್ರರ ಸಂಯೋಜಿತ ರೂಪವಾಗಿದೆ. ಇದರ ಹೊರತಾಗಿ, ಸ್ಥೂಲ ಶರೀರದ ಒಂದು ಭಾಗವಾದ ಇಂದ್ರಿಯ ಮನಸ್ಸು ಇದೆ. ಇದರಲ್ಲಿ ಹುಟ್ಟಿದ ಬಯಕೆಗಳು ಪ್ರಪಂಚದ ವಿಷಯಗಳೊಂದಿಗೆ ಯೋಗವನ್ನು ಹೊಂದಿವೆ. ಯಾವಾಗ ಮನಸ್ಸಿನ ಬಗ್ಗೆ ಚರ್ಚೆಯಾಗುತ್ತದೋ ಆಗ ಮೂರೂ ಮನಸ್ಸುಗಳನ್ನು ನೋಡಬೇಕಾಗುತ್ತದೆ. ಮೂರೂ ಮನಸ್ಸುಗಳು ಸೌಮ್ಯ ಹಾಗೂ ಚಂಚಲ. ಇವುಗಳಲ್ಲಿ ಮೊದಲನೆಯದು ಜೀವರದ್ದು – ಇಂದ್ರಿಯ ಮನ ಅಥವಾ ಬಾಹ್ಯ ಮನಸ್ಸು ಎಂದು ಕರೆಯಲ್ಪಟ್ಟಿದೆ. ಅಂತರ್ಮನವು ಪ್ರಾಣಗಳ ಕ್ಷೇತ್ರ. ಅದು ದಿವ್ಯ ಮನ ಎನ್ನಲ್ಪಟ್ಟಿದೆ. ಸೂಕ್ಷ್ಮ ಮನಸ್ಸು ಅಥವಾ ಅಂತರತಮ ಮನವು ಕೃಷ್ಣನ (ದೇವರ) ಮನಸ್ಸು. ಇದನ್ನು ಅವ್ಯಯ ಮನ ಎಂದು ಕರೆಯಲಾಗುತ್ತದೆ. ಧ್ಯಾನದ ಅಭ್ಯಾಸವೆಂದರೆ ಸ್ಥೂಲದಿಂದ ಸೂಕ್ಷ್ಮವನ್ನು ದಾಟುತ್ತಾ ಅವ್ಯಯ ಮನದೊಂದಿಗೆ ಸಾಕ್ಷಾತ್ ಆಗುವುದು. ಇದೇ ಮೋಕ್ಷದ ಹೇತು.

Exit mobile version