Site icon Vistara News

ಲೈಫ್‌ ಸರ್ಕಲ್‌ ಅಂಕಣ | ಕರ್ಮ ಮತ್ತು ಪುನರ್ಜನ್ಮದ ಸಂಬಂಧವೇನು?

reincarnation

ಜೀವಿ ಹುಟ್ಟುತ್ತದೆ, ಸಾಯುತ್ತದೆ. ಅದು ಅನೇಕ ರೀತಿಯ ಜನ್ಮಗಳನ್ನು ಪಡೆದುಕೊಳ್ಳುತ್ತದೆ. ಕೆಲವೊಮ್ಮೆ ಮಾನವ, ಕೆಲವೊಮ್ಮೆ ಪ್ರಾಣಿ, ಕೆಲವೊಮ್ಮೆ ಪಕ್ಷಿ ಅಥವಾ ಕೀಟ-ಪತಂಗ. ಜೀವ ಪಡೆದ ನಂತರವೂ ಸಾಯುತ್ತದೆ. ಈ ಸೃಷ್ಟಿ ಕ್ರಮವು ಹೀಗೆ ಮುಂದುವರಿಯುತ್ತದೆ. ಕೆಲವು ವಿದ್ವಾಂಸರು ದೇವರಿಲ್ಲ ಎಂದು ನಂಬುತ್ತಾರೆ, ಆದರೆ ಕೆಲವು ವಿದ್ವಾಂಸರು ಪುನರ್ಜನ್ಮವನ್ನು ನಿರಾಕರಿಸುತ್ತಾರೆ. ಈ ನಂಬಿಕೆಗಳ ಪರಂಪರೆಯು ಶತಶತಮಾನಗಳಿಂದ ನಡೆದುಕೊಂಡು ಬಂದಿದೆ.

ಈ ಅನುಕ್ರಮದಲ್ಲಿ, ಭಾರತದ ವೈದಿಕ ಸಿದ್ಧಾಂತ ಮತ್ತು ಜೈನ ತತ್ತ್ವಶಾಸ್ತ್ರವು ಪುನರ್ಜನ್ಮದ ತತ್ವವನ್ನು ದೃಢವಾಗಿ ನಂಬುತ್ತದೆ ಮತ್ತು ಈ ವಿಷಯಗಳನ್ನು ಅನೇಕ ರೀತಿಯಲ್ಲಿ ನಿರೂಪಿಸುತ್ತದೆ. ಒಬ್ಬ ವ್ಯಕ್ತಿಯು ತನ್ನ ಹಿಂದಿನ ಜನ್ಮದ ಸಂಸ್ಕಾರವನ್ನು ತನ್ನೊಂದಿಗೆ ತರುತ್ತಾನೆ ಎಂಬ ನಂಬಿಕೆಯನ್ನು ಇಂದು ವಿಶ್ವದ ಆಸ್ತಿಕ ವಿಜ್ಞಾನಿಗಳು ಸಹ ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಜನನದ ಜೊತೆಗೆ, ಜೀವಿಯ ಜೀವನ ಕಾಲ ಮತ್ತು ಅದರ ಆಯುಷ್ಯದ ಗಣನೆಯ ಸೂತ್ರವನ್ನೂ ಸಹ ಹೊತ್ತು ತಂದಿರುತ್ತದೆ. ಭಾರತೀಯ ತತ್ವಶಾಸ್ತ್ರವು ಕರ್ಮ-ಆಧಾರಿತವಾಗಿದೆ. ಕರ್ಮವನ್ನು ಜೀವನ, ಅಭಿವೃದ್ಧಿ ಮತ್ತು ವಿಮೋಚನೆಯ ಆಧಾರವೆಂದು ಪರಿಗಣಿಸಲಾಗುತ್ತದೆ. ಕರ್ಮ ಹೀನತೆಯನ್ನು ಮೃತ್ಯು ಎಂದು ಕರೆಯಲಾಗುತ್ತದೆ. ಪುನರ್ಜನ್ಮದ ಆಧಾರವನ್ನು ರೂಪಿಸುವ, ಒಬ್ಬರ ಜೀವನ ಚಕ್ರದ ಮೇಲೆ ಪರಿಣಾಮ ಬೀರುವ ಕರ್ಮದಲ್ಲಿ ಅಂತಹದ್ದೇನಿದೆ? ಶ್ರೀಮದ್ಭಗವದ್ಗೀತೆಯ ಆಧಾರವೂ ಕರ್ಮವೇ- “ಕರ್ಮಣ್ಯೇವಾಧಿಕಾರಸ್ತೇ…”

ಕರ್ಮವನ್ನು ಗುರುತಿಸುವುದು ಹೇಗೆ? ನಮ್ಮ ಚಟುವಟಿಕೆಗಳು ಕೇವಲ ʼಕರ್ಮ’ ವರ್ಗದ ಅಡಿಯಲ್ಲಿ ಬರುತ್ತವೆಯೇ? ಒಂದೆಡೆ, ಒಳ್ಳೆಯ ಕೆಲಸಗಳನ್ನು ಮಾಡಲು ನಮಗೆ ಉಪದೇಶ ನೀಡಿದರೆ, ಇನ್ನೊಂದೆಡೆ, ಕೆಟ್ಟ ಕೆಲಸಗಳಂತೆ ಬಂಧನಕ್ಕೆ ಒಳ್ಳೆಯ ʼಕರ್ಮಗಳೂ’ ದೊಡ್ಡ ಕಾರಣವೆಂದು ಪರಿಗಣಿಸಲಾಗಿದೆ. ಈ ಕರ್ಮದ ಜಾಲದಿಂದ ಮುಕ್ತನಾಗಬೇಕು, ಹಿಂದಿನ ಕರ್ಮಗಳು ವಿಪಾಕವಾಗಬೇಕು ಮತ್ತು ಹೊಸ ಕರ್ಮಗಳನ್ನು ಸೇರಿಸಬಾರದು ಎಂಬುದೇ ಮಾನವ ಜೀವನದ ಏಕೈಕ ಮೂಲ ಗುರಿ ಎಂದು ಪರಿಗಣಿಸಲಾಗಿದೆ. ಇದು ವಿಕಟ ಸ್ಥಿತಿಯಾಗಿದೆ. ಕರ್ಮವನ್ನೂ ಮಾಡಿ ಮತ್ತು ಬಂಧನಕ್ಕೂ ಸಿಲುಕಬೇಡಿ. ನಮ್ಮ ಆಸೆಗಳೂ ಈಡೇರಲಿ. ನಮ್ಮ ಅಭಿವೃದ್ಧಿಯೂ ಮುಂದುವರಿಯಲಿ ಮತ್ತು ನಮ್ಮ ರಾಗ-ದ್ವೇಷ, ಆಕರ್ಷಣೆ-ವಿಕರ್ಷಣೆಯೂ ಮುಂದುವರಿಯಲಿ. ಅದೆಲ್ಲಾ ಸರಿ, ಇದನ್ನು ಎಲ್ಲಿಂದ ಹೇಗೆ ಅರ್ಥಮಾಡಿಕೊಳ್ಳಬೇಕು?

ಮನುಷ್ಯನ ಪ್ರತಿಯೊಂದು ಕಾರ್ಯವು ಬಂಧನ ಕಾರಕವಾಗುವುದಿಲ್ಲ. ದಿನವೂ ಹಲವು ರೀತಿಯ ನಿತ್ಯದ ಕೆಲಸಗಳನ್ನು ಮಾಡುತ್ತಿರಬೇಕು. ಒಬ್ಬ ವ್ಯಕ್ತಿಯು ತನ್ನ ಅಹಂ ಭಾವವನ್ನು ಯಾವುದೇ ಕಾರ್ಯದೊಂದಿಗೆ ಸಂಯೋಜಿಸಿದಾಗ, ಕರ್ಮವು ಆತನಿಗೆ ಅಂಟಿಕೊಳ್ಳುತ್ತದೆ. ಕರ್ಮವನ್ನು ತನ್ನದೆಂದು ಘೋಷಿಸಬೇಕು- ನಾನು ಈ ಕೆಲಸವನ್ನು ಮಾಡಬೇಕು, ಈ ಕಾರಣಕ್ಕಾಗಿ ನಾನು ಇದನ್ನು ಮಾಡಬೇಕು, ಈ ಫಲಿತಾಂಶಕ್ಕಾಗಿ ನಾನು ಅದನ್ನು ಮಾಡಬೇಕು. ಇದನ್ನು ಅವನ ಕರ್ಮ ಎಂದು ಕರೆಯಲಾಗುವುದು.

ನೀವು ನಡೆಯುತ್ತಿದ್ದೀರಿ, ದಾರಿಯಲ್ಲಿ ಯಾವುದೋ ಜೀವಿ, ಇರುವೆ ನಿಮ್ಮ ಕಾಲುಗಳ ಕೆಳಗೆ ಬಂದು ಸತ್ತಿತು; ಆದರೆ ನಿಮಗೆ ಕೊಲ್ಲುವ ಉದ್ದೇಶವಿರಲಿಲ್ಲ. ಇರುವೆ ಹಾಗೆ ಸಾಯಬೇಕಿತ್ತು. ದೃಢಸಂಕಲ್ಪದಿಂದ ಅದನ್ನೇ ಮಾಡಿದರೆ, ಅಂದರೆ ಇರುವೆ ಕಚ್ಚಿತು, ಅದಕ್ಕೆ ಸಿಟ್ಟಿನಿಂದ ತುಳಿದುಬಿಟ್ಟೆ. ಆಗ ಆ ಕೊಲೆಯಲ್ಲಿ ನೀವೂ ಭಾಗಿಯಾದಿರಿ. ಇರುವೆ ಹೀಗೆ ಸಾಯಬೇಕಿತ್ತು, ನಿಮ್ಮ ಕೈಯಿಂದ. ಜೀವನ ಸಾಗುವುದು ಹೀಗೆ ಋಣಾನುಬಂಧದ ಆಧಾರದಲ್ಲಿ. ನೀವು ಯಾರ ಋಣವನ್ನು ತೀರಿಸಬೇಕು, ಅದು ನಿಮ್ಮ ಕರ್ಮದ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಈ ಋಣವನ್ನು ಮರುಪಾವತಿಸಲು ನೀವು ಮತ್ತೆ ಮತ್ತೆ ಹೊಸ ಜನ್ಮವನ್ನು ತೆಗೆದುಕೊಳ್ಳಬೇಕಾಗುತ್ತದೆ.‌

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ತಪಸ್ಸಿನ ಆಚರಣೆ ಹೇಗೆ?

ದೈಹಿಕ ಕರ್ಮಕ್ಕೆ ಪ್ರಾಮುಖ್ಯತೆ ಇಲ್ಲ. ಬೌದ್ಧಿಕ ನೆಲೆಯೂ ಉಪಯೋಗಕ್ಕೆ ಬರುವುದಿಲ್ಲ. ಕರ್ಮವು ಅಹಂಕಾರದೊಂದಿಗೆ ಸಂಪರ್ಕಗೊಂಡಾಗ- ʼನಾನು ಮಾಡುತ್ತಿದ್ದೇನೆ’ ಎಂಬ ಆಲೋಚನೆಯೊಂದಿಗೆ ಮಾಡಲಾಗುತ್ತದೆ. ಆಗ ಅದು ನಿಮ್ಮ ಸಂಸ್ಕಾರದ ಭಾಗವಾಗುತ್ತದೆ. ನಿಮ್ಮ ಹಣವನ್ನು ಯಾರೂ ಹಿಂತಿರುಗಿಸಲು ಸಾಧ್ಯವಾಗದಿದ್ದರೆ, ಅದು ನಿಮ್ಮ ಹಿಂದಿನ ಋಣ ಎಂದು ಭಾವಿಸಿರಿ. ಅವನು ಹಿಂತಿರುಗಿಸಲು ಬಯಸದಿದ್ದರೆ, ಅವನಿಗದು ಹೊಸ ಕರ್ಮ! ಋಣಾನುಬಂಧದ ಈ ಅನುಕ್ರಮವು ನಮ್ಮ ಜೀವನ ನಡವಳಿಕೆಯ ಒಂದು ಭಾಗವಾಗಿದೆ. ಒಂದು ಎತ್ತು, ಹುಂಜ ಅಥವಾ ನಾಯಿಯನ್ನು ನೋಡಿ, ಅದು ತನ್ನ ಜೀವಿತಾವಧಿಯಲ್ಲಿ ಎಷ್ಟು ಹೆಣ್ಣು ಸಂಗಾತಿಗಳನ್ನು ಸಂಪರ್ಕಿಸುತ್ತದೆ. ಕಾರಣಗಳು ಮತ್ತು ಸಂದರ್ಭಗಳು ಬದಲಾಗಬಹುದು. ಇವೆರಡೂ ಮುಂದಿನ ಜನ್ಮದಲ್ಲಿ ಭೇಟಿಯಾದಾಗ, ಅವರ ಜನ್ಮಾಂತರ ಆಕರ್ಷಣೆಯು ತನ್ನ ಕೆಲಸವನ್ನು ಮಾಡುತ್ತದೆ. ಹೊಸ ಜನ್ಮದಲ್ಲಿ ಯಾರು ಗಂಡಾಗುತ್ತಾರೆ ಅಥವಾ ಹೆಣ್ಣಾಗುತ್ತಾರೆ ಎಂಬುದು ಬೇರೆ ವಿಷಯ; ಆದರೆ ಅವರಲ್ಲಿ ಯಾರೇ ಒಬ್ಬರನ್ನೊಬ್ಬರು ನೋಡಿದರೂ ಆಕರ್ಷಣೆಯ ಭಾವ ಖಂಡಿತ ಜಾಗೃತವಾಗುತ್ತದೆ. ಋಣಾನುಬಂಧದ ಒಪ್ಪಂದವು ಮುಗಿದ ತಕ್ಷಣ ಆಕರ್ಷಣೆಯು ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ.

ಕರ್ಮ ಮತ್ತು ಋಣಾನುಬಂಧದ ತತ್ವಗಳು ನಿಕಟವಾಗಿ ಕೆಲಸ ಮಾಡುತ್ತವೆ. ಇದರೊಂದಿಗೆ, ಅವರು ಯಾವ ರೀತಿಯ ಭವಿಷ್ಯದ ಜೀವನವನ್ನು ಬಯಸುತ್ತಾರೆ ಎಂಬ ಬಯಕೆಯು ಸೇರಿಕೊಳ್ಳುತ್ತದೆ. ಇದು ಭವಿಷ್ಯದ ಕರ್ಮ ಚಕ್ರವನ್ನು ನಿರ್ಧರಿಸುತ್ತದೆ. ಈ ಸಂಪೂರ್ಣ ಅನುಕ್ರಮವು ಅಹಂಕಾರಕ್ಕೆ ಸಂಬಂಧಿಸಿದ ಕರ್ಮಗಳಾಗಿದ್ದು, ಇದರಲ್ಲಿ ಕಾಮನೆಯ ರೂಪದ ಸಂಕಲ್ಪಗಳು ಸೇರಿಕೊಂಡಿರುತ್ತವೆ. ಗೀತೆಯಲ್ಲಿ, ಶ್ರೀ ಕೃಷ್ಣನು ಈ ಒಂದು ವಿಶೇಷವಾದ ಮಾರ್ಗವನ್ನು ಹೇಳಿದ್ದಾನೆ, ಕರ್ಮವನ್ನು ತ್ಯಜಿಸದೆ, ವಾಸನಾಯುಕ್ತ ಕರ್ಮ ಮಾಡದೆ, ಸರಿಯಾದ ಕರ್ಮ ಮಾಡುವುದೇ ಕರ್ತವ್ಯ. ಈ ವಿವೇಕದೊಂದಿಗೆ ಕರ್ಮ ಮಾಡುತ್ತಿರುವುದರಿಂದ ಯಾವುದೇ ಬಂಧನದ ಭಾವನೆ ಇರುವುದಿಲ್ಲ. ಅದರ ಹೆಸರೇ ಬುದ್ಧಿ ಯೋಗ.

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ಉಪಾಸನಾ ಲೋಕದಲ್ಲೊಂದು ಪಯಣ

ಸಾಂದರ್ಭಿಕವಾಗಿ ಕನ್ನಡದ ವೇದವಾದ ಸಿರಿಭೂವಲಯದಲ್ಲಿ ಕರ್ಮಕ್ಕೆ ಸಂಬಂಧಿಸಿದ ಆಯ್ದ ಪದ್ಯದ ತುಣುಕುಗಳು ಈ ಕೆಳಗಿವೆ:

..ಕೌಂತೇಯ ಕೇಳಯ್ಯ ರಜೋಗುಣ ರೂಹುಗಳವು
ಬಯಕೆಯದ ರೂಹೆಯಿಮ್ ಬಂದು
ಹುಟ್ಟಿಗೆ ದೇಹಿಗೆ ಕರ್ಮ ರೂಹಿನಿಮ್ ಕಟ್ಟಿದೆ ಬಿಗಿತ..

ಕೌಸಲ್ಯಾ ಸುಪ್ರಜಾ ರಾಮ ಪೂರ್ವ ಸಂಧ್ಯಾ ಪ್ರವರ್ತತೇ |
ಉತ್ತಿಷ್ಟ ಕರ್ಮ ಸಂಹಾರಾ ಕರ್ತವ್ಯಂ ದೈವಮಾಹ್ನಿಕಂ ||

ಮನದರ್ಥಿಯಿಂದ ಶರೀರವ ತಪಿಸಿದ |
ಜಿನರೂಪಿನಾಶೆಯ ಜನರು |
ಘನ ಕರ್ಮಾಟಕವೆಂಟನು ಗೆಲೆ ಮೋಕ್ಷ |
-ದನುಭವ ಮಂಗಲ ಕಾವ್ಯ ||

ಕರ್ಮದ ಅರಿಕೆಯ ಗಣಿತ ||
ಕರ್ಮದ ಸಂಖ್ಯಾತ ಗಣಿತ ||
ಕರ್ಮದ ಅಸಂಖ್ಯಾತ ಗುಣಿತ ||
ಕರ್ಮದನಂತಾಂಕ ಗುಣಿತ ||
ಕರ್ಮದುತ್ಕೃಷ್ಟದನಂತ ||
ಕರ್ಮ ಸಿದ್ಧಾಂತದ ಗಣಿತ ||

..ದೋಷವ ಕೆಡಿಸಲಾಗದ ಜೀವನುದರದ ಅಜ್ಞಾನ ಪಸರಾವದ ನಾನು ಕೆಡಿಸಲಾಗದ ಕಾರಣದಿಂದ ವಧೆಯಾಗಬೇಕವನಂತತ್ತಾದು |
ಆ ಕ್ಷಣವು ಹತ್ತಿರವಿದೆ ದಿನಗಳ ಕಾದು ವಿಚ್ಛಾದ್ವೇಷ ಸರಭ್ನಾದ ಪಾಹುಡದಿ ಪೇಳಿರುವ ದಯಾಧರ್ಮದಾದಿ ಸವಿಜಯ ಕಾದಿರುವಾರಾಂಕೆ |
ಪ್ರಪಞ್ಚದೊಳಿಷ್ಟಾನಿಷ್ಟದಿಂ ತಾನ್ ಹುಟ್ಟಿದದು ಪ್ರಿಯಾಪ್ರಿಯದ ಋನ್ಗಳ ಭ್ರಾನ್ತಿಯಿಂದೆಲ್ಲ ಜೀವರುಗಳು ಕಣ್ ಭ್ರಾನ್ತಿಯಿಂದಿಹವರಿ ನಿಮಯೇ |
ಯದು ಜನ್ಮದ ಆದಿಯಿಂ ಬಂದಿದೆ ಜಯವನು ಕರ್ಮದ ಆಳಕೇ ನಿಯತವಾಗಿದೆ ಆ ಗಣಿತದೊಳ್ ಎಣಿಸುತ ಜಯಾಖ್ಯಾನದೊಳ್ಗದರಂ ಚಣ್ರೆ |
ಗುಣವರೆಯ ದುರ್ಗುಣಗಳನಿಂತರಿ ನರಜನ್ಮದೊಳಗಿಂತರಿಯೈ ಅರಿತ ಮೇಲಾ ಕರ್ಮದಾಟವ ತಡೆಗಟ್ಟಿ ಸರಿಸದನ್ ಓಡಿಸೆ ಜಯವು || 1.34

ಸರೆಯಬಾರದು ಅಹಂಕಾರದೊಳ್ ಗೆಲುವಿಗೆ ಮರೆತು ಮೆಯ್ಯುಬ್ಬು ಸ್ತಂಬದಿರುಕಿನೊಳ್ ಸಿಲುಕಿದ ಪಶುವು ಹಸುರು ಮೆಲ್ಲುವ ಯಪ್ಪುದರಜನ ಬದುಕು |
ವಿವಶನಾಗದೆ ಕೇಳುವನ್ನುಪದೇಶವ ಕವಿಜ್ಞಾನವ ನೋಡಿಪುದ ಲಾಭ ಬವಣೆಯಳಿದು ನಿನ್ನ ಮೋಕ್ಷ ಮಾರ್ಗದೊಳೊಯ್ದುದಖಿಲ ಪಾಪದಶ |
ರಯ ರಾಶಿಕರ್ಮ ವರ್ಗಣೆಗಳ ಪೇಳುವ ಜಯಾಖ್ಯಾನದಾಯ ಋಕ್ಕ ನಯೆಗಳ ಪೂರ್ವೆಯ ಹದಿನಾಲ್ಕು ವಿದ್ಯೇ ಜಯಧಲವಾದ್ಯ ಐದುದಶರ |
ಸರೆವರೆ ಕರ್ಮಸಿದ್ಧಾಂಕ ಪ್ರಮಾಣದ ಗುರುಪರಂಪರೆಯ ವಾಗ್ಯಾಜಿಕರಣ ಸೂತ್ರದ ವಾಕ್ಯನ ಹೃದ್ಗತ ವರ್ಣ ಗುರುವ್ಯಾಸರತಿಶಯ ಯಶಸಂನೆ |
ಕರ್ಮವು ಕರ್ಮಾಷ್ಟಕವೆನುವಾಗ ದ್ರವ್ಯ ಭಾವಯುತಾ ಮನವು ಕರ್ಮಾಟಕ ಋಷಿಗಳನಾದಿಯೆಂದೆನೆ ವರ್ಧಮಾನ ಹಿಂದರಿಗಟಪಯಜಪಜ್ಞಾ ಕಾಲದ ಕುರುಕ್ಷೇತ್ರದ |
ಜಯವೆ ಕರ್ಮಾರ್ಜನ ಸ್ತಂಭ ನಿಯಮದೊಳ್‍ರು ಸಾವಿರದಾರ್ನೂರಾರಂಕದಯತ ಚತುಸ್ಥಾನ ವಿಜಯ ||

(ಸೂ: ಸಿರಿಭೂವಲಯದ ಲಭ್ಯ ಮೂಲ ಸಾಹಿತ್ಯದ ಕರಡು ಪ್ರತಿಯಲ್ಲಿ ಕೆಲ ಅಸ್ಪಷ್ಟತೆಗಳು, ಅಕ್ಷರದೋಷಗಳಿವೆ. ಇದರ ಸ್ಪಷ್ಟ ಪಾಠಗಳಿಲ್ಲವಾದ್ದರಿಂದ ಅದನ್ನೇ ಉಲ್ಲೇಖಿಸಲಾಗಿದೆ.)

Exit mobile version