Site icon Vistara News

ಲೈಫ್‌ ಸರ್ಕಲ್‌ ಅಂಕಣ | ಉಪಾಸನಾ ಲೋಕದಲ್ಲೊಂದು ಪಯಣ

spiritual powers

ಆಧ್ಯಾತ್ಮಿಕ ಸಾಧನೆಯನ್ನು ಉಪಾಸನೆ ಎಂದು ಕರೆದಿದೆ. ಇದು ಮೂಲತಃ ಭಾವ ಪ್ರಧಾನವಾಗಿದೆ. ಉಪಾಸನೆಯಲ್ಲಿ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ಅಭ್ಯಾಸವೇ ಮುಖ್ಯ. ಮನಸ್ಸಿನಲ್ಲಿ ಉದ್ಭವಿಸುವ ಬಯಕೆಗಳನ್ನು, ಇಂದ್ರಿಯಗಳ ವ್ಯವಹಾರವನ್ನು ಆತ್ಮದ ಕಡೆಗೆ ತಿರುಗಿಸಲು ಪ್ರಯತ್ನಿಸಲಾಗುತ್ತದೆ. ಬಾಹ್ಯ ಪ್ರಪಂಚದ ಚಟುವಟಿಕೆಗಳಿಗೆ ಸ್ವಲ್ಪ ಸಮಯದವರೆಗೆ ವಿರಾಮ ಉಂಟಾಗುತ್ತದೆ. ಆತ್ಮವು ಈ ಮನಸ್ಸನ್ನು ತನ್ನೊಂದಿಗೆ ಕೊಂಡೊಯ್ದು ಈಶ್ವರ ಸಾನ್ನಿಧ್ಯವನ್ನು ಪಡೆಯುವ ಮೂಲಕ ಶಾಂತಿಯನ್ನು ಅನುಭವಿಸುತ್ತದೆ. ಮನಸ್ಸು ಸ್ವತಃ ಆತ್ಮದಲ್ಲಿ ಲೀನವಾದಾಗ, ಅದು ಆನಂದ-ವಿಜ್ಞಾನಕ್ಕೆ ಸಂಬಂಧಿಸಿದ ಅವ್ಯಯ-ಮನ ಆಗುತ್ತದೆ. ಅದೇ ನಿಷ್ಕಾಮ ಬ್ರಹ್ಮ-ರೂಪ.

ಸಾಧನೆಯು ಉಪಾಸನೆಗೆ ಪ್ರವೇಶಿಸುವ ಬಾಗಿಲು ತೆರೆಯುತ್ತದೆ. ಉಪಾಸನೆಯು ಮನಸ್ಸಿನ ಕ್ಷೇತ್ರವಾಗಿದೆ. ಲಕ್ಷ್ಯ ಅಥವಾ ಇಷ್ಟದ ಬಳಿ ಕುಳಿತುಕೊಳ್ಳುವುದು ಉಪಾಸನೆ. ಅದರೊಂದಿಗೆ ಒಂದಾಗುವುದು. ಅದರಲ್ಲಿ ತನ್ನ ಅಸ್ತಿತ್ವವನ್ನು ಕಾಣುವುದೇ ಉಪಾಸನೆ. ದೇಹ ಮತ್ತು ಬುದ್ಧಿ ಎರಡೂ ಗೌಣವಾಗುತ್ತದೆ. ಸಾಧಕ ಮತ್ತು ಸಾಧ್ಯದ ನಡುವಿನ ವ್ಯತ್ಯಾಸವು ಸ್ಪಷ್ಟವಾಗಿ ಉಳಿದಿರುತ್ತದೆ. ಉಪಾಸನೆಯು ರೂಪಾಂತರದ ಮಾರ್ಗವಾಗಿದೆ. ಸಾಧನೆಯು ಭೌತಿಕ ಸಿದ್ಧಿ, ನಿಪುಣತೆ, ವಿಶಿಷ್ಟತೆಯನ್ನು ಪಡೆಯುವ ಮಾರ್ಗವಾಗಿದೆ. ಅಭ್ಯಾಸ ಮಾಡಲು ಒಂದು ಮಾರ್ಗವಿದು. ಉಪಾಸನೆಗೂ ದೇಹಕ್ಕೂ ಸಂಬಂಧವಿಲ್ಲ. ಮನಸ್ಸನ್ನು ಮಂದಿರವನ್ನಾಗಿಸಿ, ಇಷ್ಟವನ್ನು ಪ್ರತಿಷ್ಠಾಪಿಸುವ ಮಾರ್ಗವಾಗಿದೆ. ಯಾವುದನ್ನಾದರೂ ಸೇರಲು ಇರುವ ಒಂದು ಮಾರ್ಗವಿದು. ಮನಸ್ಸಿನ ಅಧಿಪತಿ ಚಂದ್ರ. ಸೋಮ ಕ್ಷೇತ್ರವೇ ಕೃಷ್ಣ ಕ್ಷೇತ್ರ. ವರುಣ ಲೋಕದ ಋಷಿಗಳು ರಾತ್ರಿಯ ಸಮಯವನ್ನು ಮೂಲತಃ ಉಪಾಸನೆಗೆ ಬಳಸುತ್ತಾರೆ. ಅಂದಹಾಗೆ, ರಾತ್ರಿಯಲ್ಲಿ ಆಸುರೀ ಶಕ್ತಿಗಳ ಪರಿಣಾಮವೂ ಹೆಚ್ಚಾಗುತ್ತದೆ. ಸಾಮಾನ್ಯ ಜನರು ಸೂರ್ಯಾಸ್ತದ ನಂತರ ತಮ್ಮ ಉಪಾಸನೆ ಮತ್ತಿತರೆ ಚಟುವಟಿಕೆಗಳನ್ನು ನಿಲ್ಲಿಸುತ್ತಾರೆ. ಆದರೆ ಯೋಗಿಗಳಿಗೆ ರಾತ್ರಿಯೇ ದಿವವು.

ಈ ದಿವಾ-ರಾತ್ರಿಗಳ ವ್ಯತ್ಯಾಸದಿಂದಾಗಿ ಸಾಧನೆಯು ಅಹಂಕಾರವನ್ನು ಹೆಚ್ಚಿಸುವ ಮಾಧ್ಯಮವಾಗುತ್ತದೆ. ಉಪಾಸನೆಯು ಪ್ರೇಮಮಯವೇ ಆಗಿರುತ್ತದೆ. ಸಮರ್ಪಣೆ ಮತ್ತು ಅಹಂಕಾರ ಒಟ್ಟಿಗೆ ಇರುವುದಿಲ್ಲ. ಸಾಧನೆಯಿಂದ ವ್ಯಕ್ತಿಯು ಅನೇಕ ರೀತಿಯ ಸಿದ್ಧಿಗಳನ್ನು ಸಹ ಪಡೆಯುತ್ತಾನೆ. ಪವಾಡಗಳನ್ನು ತೋರಿಸಲು ಪ್ರಾರಂಭಿಸುತ್ತಾನೆ. ಇದು ಅಹಂಕಾರದ ಸಂಕೇತವೂ ಹೌದು. ಸಿದ್ಧಿಗಳು ಸಾಧನೆಯ ಪರಿಣಾಮವಾಗಿವೆ. ವೈರಾಗ್ಯದಿಂದ ಐಶ್ವರ್ಯದ ಪ್ರಾಪ್ತಿಯಾಗುತ್ತದೆ. ಐಶ್ವರ್ಯ ಮತ್ತು ಸಿದ್ಧಿಗಳಲ್ಲಿ ವ್ಯಕ್ತಿಯು ಮತ್ತೆ ಆಸಕ್ತನಾಗುತ್ತಾನೆ. ಮುನ್ನಡೆಯುವ ದಾರಿಯು ಮುಚ್ಚಿ ಹೋಗುತ್ತದೆ. ಸಂಪತ್ತು ಮತ್ತು ಅಧಿಕಾರದಿಂದಲೂ ಸಿದ್ಧಿಗಳ ಅಹಂಕಾರವು ದೊಡ್ಡದು. ಯಂತ್ರ-ಮಂತ್ರ-ತಂತ್ರ ನಮ್ಮ ದೇಶದಲ್ಲಿ ಬಹಳವಾಗಿ ಪ್ರಚಲಿತದಲ್ಲಿದೆ. ಶ್ರೀಮಂತರು ಇಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಉಪಲಬ್ಧಿಗಳ ಉಪಯೋಗವನ್ನು ವ್ಯಕ್ತಿಯು ತನ್ನ ಸ್ವಂತ ವಿಕಾಸಕ್ಕಾಗಿ ಮಾಡುತ್ತಾನೆ; ಆದರೆ ಅಹಂಕಾರದ ಪರಿಣಾಮವೇ ಇತರರ ಅನನುಕೂಲಕ್ಕೆ ಬಳಸಿಕೊಳ್ಳುತ್ತಾನೆ. ಅಹಿತವು ಯಾವುದೇ ಸಾಧನೆಯ ಭಾಗವಾಗಲು ಸಾಧ್ಯವಿಲ್ಲ. ಹಾನಿಯ ಪರಿಣಾಮವು ತನಗೂ ಹಾನಿಯೇ ಆಗಿರುತ್ತದೆ. ತಂತ್ರದ ಪರಿಣಾಮವು ಎದುರಿಗಿರುವ ವ್ಯಕ್ತಿಯ ಮೇಲೆ ಆಗದಿದ್ದಾಗ, ಅದು ಮಾಡಿದ ವ್ಯಕ್ತಿಗೇ ಹಿಂತಿರುಗುತ್ತದೆ. ದುರಹಂಕಾರದಿಂದ ಇದಕ್ಕಿಂತ ಕೆಟ್ಟ ಫಲಿತಾಂಶ ಬೇರೇನಿದೆ?

ಉಪಾಸನೆಯೇ ಪ್ರೇಮ (ಪರಾ ಯಾಯಾಮಿತಿ ಪ್ರೇಮ). ಮೀರಾ ಅವರಂತಹವರು ಇದರಲ್ಲಿ ಹುಚ್ಚರಂತೆ ಕಾಣಿಸಿಕೊಳ್ಳುತ್ತಾರೆ. ವ್ಯಕ್ತಿಯು ಸಾಧ್ಯದೊಂದಿಗೆ ಒಂದಾಗಲು ಪ್ರಾರಂಭಿಸುತ್ತಾನೆ. ಸಹಾನುಭೂತಿ, ಕ್ಷಮೆ, ಯಾಚನೆ, ಶ್ರದ್ಧೆ, ಸಮರ್ಪಣೆಯಂತಹ ಭಾವನೆಗಳು ಅವನ ಮನಸ್ಸಿನಲ್ಲಿ ಏಕಕಾಲದಲ್ಲಿ ಕಾಣಿಸಿಕೊಳ್ಳುತ್ತವೆ. ಕಣ್ಣೀರಿನ ಹರಿವು ಸಹ ಗೋಚರಿಸುತ್ತದೆ. ತನ್ನನ್ನು ಶುದ್ಧಿಗೊಳಿಸುವಂತೆ ಕಾಣುತ್ತದೆ. ಇದರಲ್ಲಿ ಆತ್ಮದ ಪರಿಷ್ಕರಣೆ ವೇಗವಾಗಿ ನಡೆಯುತ್ತದೆ. ಸಂಶಯ ಅಥವಾ ಸಂದೇಹಕ್ಕೆ ಸ್ಥಾನವಿಲ್ಲ. ಇದು ಸಂಭವಿಸುವುದು ಸುಲಭವಲ್ಲ. ಇದನ್ನು ಸ್ವತಂತ್ರವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಗುರುಗಳ ಸಹವಾಸದಲ್ಲಿರಲು ಅವಕಾಶವಿದ್ದಾಗ ಗುರುವು ಒಬ್ಬನೇ ಶಿಷ್ಯನ ಮೇಲೆ ತನ್ನೆಲ್ಲ ಪ್ರೇಮವನ್ನು ಧಾರೆಯೆರೆದು, ತನ್ನ ಉಪಾಸನೆಯನ್ನು ಮತ್ತು ಈಶ್ವರಪ್ರದತ್ತ ಜ್ಞಾನವನ್ನು ಶಿಷ್ಯನಿಗೆ ಧಾರೆ ಎರೆದಾಗ, ಆ ಶಿಷ್ಯನು ಈ ಅಂಶಗಳನ್ನು ಅಳವಡಿಸಿಕೊಳ್ಳಬಹುದು.‌

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ಜೀವನದಲ್ಲಿ ಧ್ಯಾನ ಧಾರಣೆಗಳ ಉಪಯೋಗ ಹೇಗೆ?

ಇದರಲ್ಲಿ ವ್ಯಕ್ತಿಯ ಶ್ರದ್ಧೆಯ ಜೊತೆಗೆ ಗುರುವಿನ ತಪಸ್ಸು ಹಾಗೂ ಕೊಡುವ ಭಾವ ಬಹಳ ಮುಖ್ಯ. ತಾನು ಸಾಧಿಸಿದ್ದನ್ನು ತನ್ನಲ್ಲೇ ಉಳಿಸಿಕೊಂಡು ಸತ್ತರೆ ಬ್ರಹ್ಮರಾಕ್ಷಸನಾಗುತ್ತೇನೆಂಬ ಅಪರಾಧೀ ಪ್ರಜ್ಞೆಯು ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಶಿಷ್ಯನಲ್ಲಿ ಪ್ರಾಣ-ಪ್ರತಿಷ್ಠಾಪನೆ ಮಾಡಬೇಕಿದೆ. ಆದರೆ ಪಡೆಯುವವನಲ್ಲಿಯೂ ಅರ್ಹತೆ ಪಾತ್ರತೆ ಬಹಳ ಮುಖ್ಯ. ಸಿದ್ಧಿಯನ್ನು ಸಮಾಜದ ಒಳಿತಿಗಾಗಿ ಬಳಸುವನೆಂದು, ಸ್ವಾರ್ಥಕ್ಕಾಗಿ ದುರುಪಯೋಗ ಮಾಡಿಕೊಳ್ಳುವುದಿಲ್ಲ ಎಂದು ದೃಢವಾಗಿ ಮನದಟ್ಟಾಗುವ ತನಕ ಗುರುವು ಏನನ್ನೂ ಕೊಡುವುದಿಲ್ಲ. ಒಮ್ಮೆ ಖಾತ್ರಿಯಾದರೆ, ಜೊತೆಗೆ ಧೈವಾದೇಶವೂ ಒದಗಿದರೆ ಗುರುವೂ ತನ್ನನ್ನು ಮರೆತು ಶಿಷ್ಯನಲ್ಲಿ ತನ್ನ ಸ್ವರೂಪವನ್ನು ಸ್ಥಾಪಿಸುತ್ತಾನೆ. ಗುರುವು ನಡೆಸುವ ಉಪಾಸನೆಯಿಂದ ಮಾತ್ರ ತಾವಾಗಿಯೇ ಉಪಾಸನೆ ಮಾಡುವ ಸಾಮರ್ಥ್ಯವಿರುವ ಶಿಷ್ಯರು ತಯಾರಾಗುತ್ತಾರೆ. ಅವರ ರೋಮ-ರೋಮದಲ್ಲಿ ಗುರುವಿನ ಕಂಪನಗಳನ್ನು ಅನುಭವಿಸುತ್ತಲೇ ಇರುತ್ತಾರೆ. ಗುರು ಇರುವವರೆಗೆ ಇಬ್ಬರೂ ಒಂದೇ, ಬೇರ್ಪಡಿಸಲಾಗದು. ಗುರುವಿನ ಬಳಿ ಏನಿದೆಯೋ ಅದನ್ನು ಶಿಷ್ಯ ಪಡೆಯುತ್ತಾನೆ. ಶಿಷ್ಯನು ಮುಂದೆ ಹೊಸ ಹಾದಿ ತುಳಿಯಬೇಕಿದೆ. ಅಂತಹ ಶಿಷ್ಯನೊಳಗೆ ಗುರುವು ದೇವ ಸ್ವರೂಪದಲ್ಲಿ ಸಮಾಹಿತನಾಗಿರುತ್ತಾನೆ. ಆದುದರಿಂದ ಗುರುವಿನ ನಂತರ ಮತ್ತೆ ಸ್ಪಂದನೆಗಳೆಲ್ಲವೂ ಉಪಾಸನೆಯ ಮಾಧ್ಯಮದಿಂದ ಪುನಃ ಗುರುವಿನ ಕಡೆಗೆ ಮುಖ ಮಾಡುತ್ತವೆ. ಇದು ಭಕ್ತಿಯ ರೂಪ. ಇದರಲ್ಲಿ ಎಲ್ಲಾ ಪ್ರಾಣಗಳ ದಿಕ್ಕು ಮೇಲ್ಮುಖವಾಗುತ್ತದೆ. ದೇಹ ಮತ್ತು ಬುದ್ಧಿಯನ್ನು ನೈಸರ್ಗಿಕ ಚಟುವಟಿಕೆಗಳಿಗೆ ಮಾತ್ರ ಬಳಸಲಾಗುತ್ತದೆ. ಮನಸ್ಸಿನ ಎಲ್ಲಾ ಆಸೆಗಳು ಒಂದೇ ರೂಪದಲ್ಲಿ ಕೇಂದ್ರೀಕೃತವಾಗುತ್ತವೆ. ಸಾಧಕ ಮತ್ತು ಸಾಧ್ಯ ಹತ್ತಿರ-ಹತ್ತಿರವಾಗುತ್ತಾ ಒಂದಾಗುತ್ತಾರೆ.

“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ”.

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ಭಕ್ತಿಯಲ್ಲಿದೆ ಜೀವನದ ಭೋಗ, ಸಾಧನೆಯ ಯೋಗ, ಮುಕ್ತಿಯ ಮಾರ್ಗ

Exit mobile version