ಈ ಸೃಷ್ಟಿಯು ಜೋಡಿ ತತ್ವದಿಂದಾಗುತ್ತಿದೆ. ಅವು ಅಗ್ನಿ-ಸೋಮ ರೂಪದಲ್ಲಿವೆ. ಇವುಗಳ ಕೂಡುವಿಕೆಯೇ ಸೃಷ್ಟಿಗೆ ನಾಂದಿ. ಅಗ್ನಿಯಲ್ಲಿ ಸೋಮವು ಆಹುತವಾಗಬೇಕು. ಎಲ್ಲಿ ಸೋಮವು ತಪಿಸುತ್ತಾ ಉರಿದು ಹೋಗುತ್ತದೆಯೋ, ಅಲ್ಲಿ ಅಗ್ನಿಯೂ ತಪಿಸುತ್ತದೆ. ಸೃಷ್ಟಿಯು ಕೇವಲ ಶ್ರಮದಿಂದಲಾಗುವುದಿಲ್ಲ, ತಪದಿಂದಾಗುತ್ತದೆ. ತಪವು ಯಜ್ಞದಲ್ಲಿಯೂ ನಡೆಯುತ್ತದೆ. ಬೇರೆ-ಬೇರೆ ರೀತಿಯ ಯಜ್ಞಗಳಿಂದ ಭಿನ್ನ-ಭಿನ್ನ ಪದಾರ್ಥಗಳ ಪ್ರಾಪ್ತಿಯೇ ಸೃಷ್ಟಿಯ ವಿಸ್ತಾರ. ಇದು ಸ್ಥೂಲ ತಪಸ್ಸು. ಇದರ ಪ್ರಭಾವವು ಲೋಕ-ವ್ಯವಹಾರದಲ್ಲಿ ಕಾಣಸಿಗುತ್ತದೆ. ನಾವು ವಿಭಿನ್ನ ಮಂತ್ರ ಯೋಗದಿಂದ ಧನ, ಸಂತಾನ, ಪದವಿ ಇತ್ಯಾದಿ ಸಾಂಸಾರಿಕ ಪ್ರಾಪ್ತಿಗಳನ್ನು ಅರ್ಜಿಸಿಕೊಳ್ಳುತ್ತೇವೆ. ಕೆಲವರು ಕೇವಲ ಸುಖ-ಶಾಂತಿಗಾಗಿ ಯಜ್ಞ ಮಾಡುತ್ತಾರೆ.
ದೊಡ್ಡ ಯಜ್ಞವು ಪ್ರಾಣಗಳದ್ದಾಗಿದೆ. ತಪದಲ್ಲಿಯೂ ಪ್ರಾಣಗಳದ್ದೇ ಮೇಲುಗೈ. ಸತ್ಯವೇನೆಂದರೆ ಪ್ರತಿಯೊಂದು ಸನ್ನಿವೇಶದಲ್ಲೂ ತಪವು ಪ್ರಾಣಗಳದ್ದೇ! ವಿಚಾರಗಳ ಮಂಥನವು ಪ್ರಾಣಗಳ ತಪಸ್ಸಾಗಿದೆ. ಅದು ವಿಚಾರ-ವಿಮರ್ಶೆಯಾಗಲಿ, ವಾದ-ವಿವಾದವಾಗಲಿ. ದೈಹಿಕ ಶ್ರಮದಿಂದ ಹೆಚ್ಚಿನ ಶಕ್ತಿಯನ್ನು ಸಹ ವ್ಯಯಿಸುತ್ತೇವೆ. ಭಾವನಾತ್ಮಕ ಆವೇಶ ಅಥವಾ ಆವೇಗ ಇದಕ್ಕೆ ಸೇರಿಸಿದಾಗ ಈ ತಪವು ತಾಪಕ್ಕೆ ಸಿಕ್ಕಂತೆ ಇನ್ನೂ ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಒಂದು ಪ್ರವಾಹದಂತೆ ತೋರುತ್ತದೆ. ಅಂತಹ ಸಮಯದಲ್ಲಿ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಜಾಗರೂಕತೆ ಉಳಿದು, ಪ್ರಜ್ಞೆಯು ಜೊತೆ ಬಿಡದೆ, ಒಳಗೆ ಪ್ರಜ್ಞಾತ್ಮವು ಸ್ಥಿರವಾಗಿರಲು, ತಪಸ್ಸಿನ ಸಕಾರಾತ್ಮಕ ಪರಿಣಾಮ ಕಾಣಬಹುದು. ಈ ಸಂಪೂರ್ಣ ಅನುಕ್ರಮವು ವ್ಯಕ್ತಿಯದೇ ಆಗಿರಬಹುದು. ಇದು ಯಾವುದೇ ಇತರ ವ್ಯಕ್ತಿ ಅಥವಾ ವಸ್ತು ಅಥವಾ ಸನ್ನಿವೇಶಕ್ಕೂ ಸಂಬಂಧಿಸಿರಬಹುದು.
ಹೇಗೆ ಅಗ್ನಿಯಲ್ಲಿ ಸೋಮದ ಆಹುತಿಯು ಯಜ್ಞವಾಗುತ್ತದೆಯೋ ಅದೇ ರೀತಿಯಲ್ಲಿ ಅಗ್ನಿಯ ಆಹುತಿಯೂ ರೌದ್ರ-ಸೃಷ್ಟಿಯ ಕಾರಕವಾಗುತ್ತದೆ. ಅಂತರಿಕ್ಷದಲ್ಲಿರುವ ಹನ್ನೊಂದು ರುದ್ರರೇ ಇದಕ್ಕೆ ಪ್ರಮಾಣ. ಅಂದರೆ, ಅಹಂಕಾರವು ಭಾವನೆಗಳ ಮೇಲೇರಿದಾಗ, ಅಜ್ಞಾನದ ಸಾಮ್ರಾಜ್ಯವಿರುತ್ತದೆ, ರಾಗ-ದ್ವೇಷದ ಜಿಗುಟುತನವಿರುತ್ತದೆ, ಆಗ ಉಗ್ರ ರೂಪವು ಸಹಜವಾಗಿ ಪ್ರಕಟವಾಗುತ್ತದೆ. ಅಹಂಕಾರವೇ ದೊಡ್ಡ ಅಂಟು. ಇದು ಮಾಯೆಯ ಆಸುರೀ ರೂಪ. ಅಸುರರು ದೇವತೆಗಳಿಗಿಂತ ಬಲಶಾಲಿಗಳು. ದೀರ್ಘಕಾಲ ತಪಸ್ಸನ್ನಾಚರಿಸಬಲ್ಲರು. ಇಂದಿನ ಭಾಷೆಯಲ್ಲಿ ಇದೊಂದು ಮಾಫಿಯಾ ಎನ್ನಬಹುದು, ನಕ್ಸಲಿಸಮ್ ಎನ್ನಬಹುದು, ಭ್ರಷ್ಟಾಚಾರ ಎನ್ನಬಹುದು. ಅಸುರರೂ ಕೂಡ ತಪಿಸುತ್ತಾರೆ ಮತ್ತು ಸಜ್ಜನರಿಗಿಂತ ಹೆಚ್ಚು ಶಕ್ತಿಶಾಲಿಯಾಗಿರುತ್ತಾರೆ. ದೇಹ-ಮನಸ್ಸು-ಬುದ್ಧಿಗಳ ತಪವು ಇವುಗಳನ್ನು ದ್ರವ ಮತ್ತು ಅನಿಲ ರೂಪವಾಗಿ ಮಾರ್ಪಡಿಸುವ ಕೆಲಸ ಮಾಡುತ್ತದೆ. ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ. ಲಘುತ್ವ ಮಾತ್ರ ಸಮಾಜದಲ್ಲಿ ವ್ಯಕ್ತಿಯನ್ನು ಮೇಲಕ್ಕೇರಿಸುತ್ತದೆ.
ಈ ಶ್ರುತಿ-ಸಂದೇಶವು ತಪಿಸುವ ಪರಿಭಾಷೆಯನ್ನು ರವಾನಿಸುತ್ತಿದೆ. ಇದರಲ್ಲಿ ಋಕ್ – ಕೇಂದ್ರ ಅಥವಾ ಮನವೂ ತಪಿಸುತ್ತದೆ, ಸಾಮ ಅಂದರೆ ಶರೀರವೂ ತಪಿಸುತ್ತದೆ ಹಾಗೂ ಯಜು ಎಂದರೆ ಪ್ರಾಣವೂ ತಪಿಸುತ್ತದೆ. ಮನ-ಪ್ರಾಣ-ವಾಕ್ ಮೂರೂ ಸಮ್ಮಿಲಿತ ರೂಪದಿಂದ ತಪಿಸುತ್ತವೆ. ಕೆಲ ದರ್ಶನಗಳು ಮನ-ವಚನ-ಕಾಯಾ ಎಂದೂ ಹೇಳಿವೆ. ಆದರೆ ಅಲ್ಲಿ ಕೇವಲ ಶಾಬ್ದಿಕ ವಾಕ್ಕಿಗೆ ಸಂಬಂಧಿಸಿದ ಪ್ರಾಣವು ಇಂಗಿತವಾಗಿರುತ್ತದೆಯೇ ಹೊರತು ಅರ್ಥವಾಕ್ಕಿನ (ಸೃಷ್ಟಿ) ಪ್ರಾಣಗಳ ಸಮಾವೇಶವಿಲ್ಲ. ಪ್ರತಿಯೊಂದು ಶರೀರ ಒಂದು ಪುರ. ಇದರಲ್ಲಿ ಗತಿಯುಕ್ತ ಯಜುಃ ಪ್ರಾಣಗಳ ಲೋಕವಿದೆ. ಮೂಲ ಕೇಂದ್ರವಾದ ಆತ್ಮವೇ ತ್ರಿಗುಣಗಳ ಕಾರಣದಿಂದ ನಮಗೆ ಮನಸ್ಸಿನ ರೂಪದಲ್ಲಿ ಭಾಸಿತವಾಗುತ್ತದೆ. ತಪದ ಭೋಕ್ತೃವಾದ ಇದೇ ಆತ್ಮವು ಬಂಧನಮುಕ್ತವಾಗಲು ಬಯಸುತ್ತದೆ. ಜಗತ್ತಿನಲ್ಲಿ ಇದಕ್ಕಿಂತ ದೊಡ್ಡ ತಪಸ್ಸು ಇನ್ನೊಂದಿಲ್ಲ. ಇದು ಸಂಘರ್ಷಮಯ ತಪಸ್ಸು. ವ್ಯಕ್ತಿಯು ತನ್ನಲ್ಲಿಯೇ ತಾನು ಹೋರಾಡುತ್ತಾನೆ. ಬೇರೆಯವರೊಂದಿಗೆ ಜಗಳವಾಡುವ ಅಗತ್ಯವಿಲ್ಲ. ತನ್ನನ್ನು ತಾನು ಸೋಲಿಸಿ ಸ್ವತಂತ್ರನಾಗಲು ಬಯಸುತ್ತಾನೆ. ಆದ್ದರಿಂದಲೇ ಅಂತಹ ಬುದ್ಧಿವಂತ, ತಾಳ್ಮೆಯ ಮನುಷ್ಯನನ್ನು “ಮಹಾವೀರ” ಎಂದು ವೇದವು ಭೂಪ್ರಕೃತಿಯ ಸೃಷ್ಟಿಯ ಪೂರ್ವದಲ್ಲೇ ಹೆಸರಿಸಿದೆ.
ಒಬ್ಬ ವ್ಯಕ್ತಿಯು ದೇಹದೊಂದಿಗೆ ಲಕ್ಷಾಂತರ ಬಂಧನಗಳನ್ನು ಹೊಂದಿರುತ್ತಾನೆ. ಪ್ರಕೃತಿ ಒಂದೇ ಒಂದು ಬಂಧವನ್ನು ನೀಡಿದೆ, ನರ-ನಾರೀ ಸ್ವರೂಪದ್ದು. ಉಳಿದ ಪ್ರಾರಬ್ಧದ ಬಂಧಗಳನ್ನು ಜೀವಿಯೇ ನಿರ್ಮಿಸಿಕೊಂಡಿರುತ್ತದೆ. ಪ್ರಕೃತಿಯು ಕರ್ಮ-ಫಲವನ್ನು ಭೋಗಿಸುವ ನಿಮಿತ್ತ ಅಥವಾ ಸಂಯೋಗವಾಗಿ ಇರುತ್ತದೆ. ವ್ಯಕ್ತಿಯ ಮನಸ್ಸಿನ ‘ಏಕೋಹಂ ಬಹುಸ್ಯಾಮ್ ಪ್ರಜಾಯೇಯ’ ಎಂಬುದು ಈ ದೇಹವನ್ನು ಜೀವಮಾನವಿಡೀ ಭ್ರಮಿಸಿಟ್ಟಿರುತ್ತದೆ. ಮಾಯೆಯು ಈ ದೌರ್ಬಲ್ಯವನ್ನು ಚೆನ್ನಾಗಿ ತಿಳಿದಿರುತ್ತಾಳೆ, ಏಕೆಂದರೆ ಅವಳೇ ಇದಕ್ಕೆ ಕೈಭಿಕ್ಷೆ ನೀಡುವವಳು. ಒಬ್ಬ ವ್ಯಕ್ತಿಯ ಇಡೀ ಜೀವನವು ಈ ಒಂದು ಪರಿಕಲ್ಪನೆಯ ಸುತ್ತ ಸೃಷ್ಟಿಯಾದ ಮಾಯೆಯ ಪ್ರಪಂಚವಾಗಿದೆ. ಇದಕ್ಕೂ ದೇವರು ದೇಹದ ವಯಸ್ಸಿನ ಮಿತಿಯನ್ನು ನಿಗದಿಪಡಿಸಿದ್ದಾನೆ.
ಋಷಿಮುನಿಗಳು ಆಶ್ರಮ ಪದ್ಧತಿಯ ಮೂಲಕ ಸಮಾಜದಲ್ಲಿ ಪ್ರಕೃತಿಯ ನಿಯಮವನ್ನು ಜಾರಿಗೆ ತರಲು ಪ್ರಯತ್ನಿಸಿದರು. ಇಂದಿನ ಜೀವನಶೈಲಿ ಅವುಗಳನ್ನೆಲ್ಲ ಬಿಟ್ಟು ಹೋಗುತ್ತಿದೆ. ಆಶ್ರಮದ ಗಡಿಯಾಗಲೀ, ವಯಸ್ಸಿನ ಮಿತಿಯಾಗಲೀ ಉಳಿಯಲಿಲ್ಲ. ಸ್ವಾತಂತ್ರ್ಯದ ಅತೀವ ಬಯಕೆಯಿಂದಲೇ ಜೀವನದ ಸ್ವಾತಂತ್ರ್ಯವು ಭಂಗವಾಯಿತು. ವ್ಯಕ್ತಿಯು ಸ್ವಚ್ಛಂದನಾದನು. ಈಗ ಅವನು ಮಾನವೀಯ ಮರ್ಯಾದೆಯಲ್ಲಿ ಬದುಕಲು ಬಯಸುವುದು ಕಡಿಮೆ. ‘ಏಕೋಹಂ ಬಹುಸ್ಯಾಮ್’ ಎಂಬ ಭೂತವು ಆತನನ್ನು ಅನಾಚಾರದ ಬಾವಿಗೆ ಬೀಳುವಂತೆ ಮಾಡಿತು. ಈ ಒಂದು ಸೂತ್ರವೇ ಜೀವನದ ಆಧಾರವಾಗಿರುವ ಆ ದೇಹಗಳಲ್ಲಿ ಅವನು ಮತ್ತೆ ಆಕರ್ಷಣೆಯನ್ನು ಅನುಭವಿಸುತ್ತಾನೆ. ಇದು ಜೀವನವನ್ನೇ ಬಿಟ್ಟು ಓಡಿ ಹೋಗುವ ಕ್ರಮ. ಸುಪ್ತ ಪ್ರಜ್ಞೆಯಿಂದಾಗಿ, ಒಬ್ಬ ವ್ಯಕ್ತಿಯು ಬಹುತೇಕ ಸತ್ತಂತೆ ಬದುಕುತ್ತಾನೆ. ಶೂನ್ಯ ಜೀವನ! ಈ ಕರ್ಮಗಳನ್ನು ಜ್ಞಾನಾಗ್ನಿಯಿಂದ ಸುಡುವುದೂ ತಪಸ್ಸು ಎನ್ನಿಸಿಕೊಳ್ಳುತ್ತದೆ. ಆದರೆ ಈ ಕಾರ್ಯಗಳು ಕೇವಲ ಮಾತನಾಡುವ ಮೂಲಕ ನಡೆಯುವುದಿಲ್ಲ. ತಪಸ್ಸು ತಪಿಸುವುದರಿಂದ ಮಾತ್ರ ಪೂರ್ಣಗೊಳ್ಳುತ್ತದೆ. ನಾವು ದೇಹಕ್ಕೆ ಕಷ್ಟ ಕೊಡಲು ಬಯಸುವುದಿಲ್ಲ, ಹಾಗಾದರೆ ಪ್ರಾಣಗಳ ಮತ್ತು ಮನಸ್ಸಿನ ತಪವು ಚಿಂತನೆಗೆ ಹೇಗೆ ಸಿಗುತ್ತದೆ?
ಇದನ್ನೂ ಓದಿ | ಲೈಫ್ ಸರ್ಕಲ್ ಅಂಕಣ | ಉಪಾಸನಾ ಲೋಕದಲ್ಲೊಂದು ಪಯಣ
ದೇಹದ ತಪಸ್ಸಿಗೆ ಒಂದೊಂದು ಇಂದ್ರಿಯದ ವಿಷಯಗಳನ್ನು ಗಮನಿಸುತ್ತಾ ಹೋಗಬೇಕು. ಇವುಗಳ ವಿಷಯಗಳಲ್ಲಿ ಯಾವುದು ಅಗತ್ಯ, ಯಾವುದು ಅನಗತ್ಯ, ಯಾವುದು ಸಾತ್ವಿಕ, ಯಾವುದು ತಾಮಸಿಕ ಭಾವ ಮತ್ತು ಸ್ವರೂಪವಿದೆ? ಮನಸ್ಸು ಎಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ, ಅಂಟಿಕೊಂಡಿರುತ್ತದೆ ಅಥವಾ ಪುನರಾವರ್ತನೆಯನ್ನು ಬಯಸುತ್ತದೆ? ಈ ದೌರ್ಬಲ್ಯಗಳಿಂದ ನಮ್ಮನ್ನು ನಾವು ಮುಕ್ತಗೊಳಿಸಿಕೊಳ್ಳಬೇಕು. ಆಹಾರದ ಆಯ್ಕೆಗಳ ನಿಯಂತ್ರಣ ಅಥವಾ ಪ್ರತಿಬಂಧವು ಆರಾಮದಾಯಕವೇ? ಮನಸ್ಸಿನ ಇಚ್ಛೆಗೆ ವಿರುದ್ಧವಾಗಿ ಬದುಕುವುದು ಸಹಜವೇ? ಮನಸ್ಸು ಕಾಣುವ ಕನಸುಗಳನ್ನು ಒತ್ತಿಕ್ಕುವುದು ಸಹಜ. ಅಂತೆಯೇ, ಇಷ್ಟದ ವಿಯೋಗ ಮತ್ತು ಅನಿಷ್ಟದ ಯೋಗವು ಕಷ್ಟಕಾರಕವೆಂದು ಪರಿಗಣಿಸಲಾಗಿದೆ. ಇಷ್ಟಾನಿಷ್ಟಗಳ ಪರಿಕಲ್ಪನೆಯನ್ನು ಕೈಬಿಡಬಹುದೇ? ಸಾಧ್ಯವಿದೆ, ಒಂದುವೇಳೆ ನಮ್ಮ ಮನಸ್ಸನ್ನು ಮಿತ್ರನನ್ನಾಗಿಸಿ ಅದರೊಂದಿಗೆ ಮಾತನಾಡಿ, ಸಂಸ್ಕರಿಸಿ, ಸಂಕಲ್ಪವಂತನನ್ನಾಗಿ ರೂಪಿಸುವ ಮೂಲಕ ಅದರ ಇಚ್ಛೆಗಳನ್ನು ಲಕ್ಷ್ಯವನ್ನಾಗಿಸಿಕೊಳ್ಳುವುದು. ಆಗ ‘ಏಕೋಹಂ ಬಹುಸ್ಯಾಮ್’ ಎಂಬ ವಾಸ್ತವತೆ ಮತ್ತು ಅದರಿಂದ ನಿವೃತ್ತರಾದ ನಂತರ ‘ಏಕೋಹಂ’ ಮಾರ್ಗದಲ್ಲಿ ಮತ್ತೆ ನಡೆಯುವಂತೆ ಪ್ರೇರೇಪಿಸಲು ಸಾಧ್ಯ. ಬದುಕಿನಲ್ಲಿ ತಪಸ್ಸಿನ ಉದ್ದೇಶ ಇದೊಂದೇ. ಮನಸ್ಸಿಗೆ ಕೋಟಿಗಟ್ಟಲೆ ಕಡ್ಡಿಗಳು (ಸಮಿತ್ತು) ಚುಚ್ಚಿಕೊಂಡಿವೆ. ಎಂಭತ್ನಾಲ್ಕು ಲಕ್ಷ ಜೀವ ಪ್ರಭೇದಗಳ ಸ್ಮೃತಿ, ರಾಗ-ದ್ವೇಷದ ಬಂಧನಗಳು ಅವುಗಳ ಮೇಲೆ ಕಟ್ಟಿಕೊಂಡಿವೆ. ಕರ್ಮಫಲಗಳ ಬಂಧನದಲ್ಲಿ ಕಡ್ಡಿಗಳೂ ಇವೆ. ತಪಸ್ಸಿನ ಅರ್ಥ ಎಂದರೆ ಈ ಸಮಿತ್ತುಗಳನ್ನು ಒಂದೊಂದಾಗಿ ಬಿಡಿಸುವುದು. ಮನಸ್ಸನ್ನು ಮುಕ್ತಗೊಳಿಸಲು ಮತ್ತು ನಿರ್ಮಲಗೊಳಿಸಲು ಪ್ರಯತ್ನಿಸುವುದು. ನಮ್ಮಲ್ಲಿ ದೌರ್ಬಲ್ಯವಿದೆ. ಈ ಸಮಿತ್ತುಗಳನ್ನು ತೆಗೆದುಹಾಕಲು ನಮಗೆ ಸಾಧ್ಯವಾಗುತ್ತಿಲ್ಲ ಅಥವಾ ಹೊಸ ಸಮಿಧೆಗಳನ್ನು ಸೇರಿಸುವ ಸ್ವಭಾವವನ್ನು ನಿಲ್ಲಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಹಾಗಾದರೆ ತಪಸ್ಸಿನ ಹಾದಿ ಹೇಗೆ ತೆರೆಯುತ್ತದೆ?
ಎಲ್ಲಾ ಉಪಾಸನೆಗಳು, ಜಪಗಳು, ಸಾಧನೆಗಳು, ಧ್ಯಾನ, ಪ್ರತಿಕ್ರಮಣಗಳು ಈ ತಪಸ್ಸಿನ ಪರ್ಯಾಯಗಳು. ಕೇವಲ ಉಪವಾಸ, ಪೂಜೆ, ಯಜ್ಞ ಮಾಡುವುದು ತಪಸ್ಸಲ್ಲ. ಚಿನ್ನ ಎಷ್ಟೇ ಪರಿಶುದ್ಧವಾಗಿರಲಿ, ಅದು ಕೂಡ ಹೊಳೆಯಲು ತಪವೆಂಬ ಹದಬೇಕು. ಆತ್ಮವು ಯಾವುದೇ ಋಷಿ-ಮುನಿ ಆಗಿರಬಹುದು. ಅದು ಮಾನವ ದೇಹದಲ್ಲಿ ಬಂದು ನಾರಾಯಣನಾಗಲು ಬಯಸಿದರೆ, ತಪಸ್ಸೇ ಮಾರ್ಗ. ಈ ಕಾರಣದಿಂದಾಗಿ ವ್ಯಕ್ತಿತ್ವವು ಹಗುರವಾಗಿ ಮೇಲಕ್ಕೇರುತ್ತದೆ.
ಇದನ್ನೂ ಓದಿ | ಲೈಫ್ ಸರ್ಕಲ್ ಅಂಕಣ | ಜೀವನದಲ್ಲಿ ಧ್ಯಾನ ಧಾರಣೆಗಳ ಉಪಯೋಗ ಹೇಗೆ?