ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಕ್ವಾರಂಟೈನ್ ಆಗಿ, ಒಂಟಿಯಾಗಿ ಬಳಲುವವರ ಸಮಸ್ಯೆ ಮುನ್ನಲೆಗೆ ಬಂತು. ಮನಸ್ಸಿಗೆ ಬೇಕಾದ ಕೌನ್ಸೆಲಿಂಗ್‌ನ, ಮನೋಚಿಕಿತ್ಸೆಯ ವಿಚಾರ ಚರ್ಚೆಗೊಳಗಾಯಿತು. ಕೊರೊನಾದ ಬಳಿಕ ಮತ್ತೆ ಅದು ಹಿಂದೆ ಸರಿದ ಹಾಗಿದೆ. ಆದರೆ ಮಾನಸಿಕ ಸಮಸ್ಯೆಗಳು ಕಡಿಮೆಯಾಗಿವೆಯಾ? ಖಂಡಿತಾ ಇಲ್ಲ. ಅದರ ಬಗ್ಗೆ ಮಾತನಾಡಬೇಕಾದ ಅಗತ್ಯ ತುಂಬಾ ಇದೆ.
ಪ್ರಪಂಚದ ಎಲ್ಲಾ ಕಡೆಯೂ ಮಾನಸಿಕ ಸಮಸ್ಯೆಗಳು ಈಗ ಪ್ರಮುಖ ಆರೋಗ್ಯ ಕಾಳಜಿಯ ವಿಚಾರ. 1990ರ ಬಳಿಕ ಈ ವಿಚಾರದಲ್ಲಿ ತುಂಬಾ ಬೆಳವಣಿಗೆಯಾಯಿತು. 2017ರ ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ 19.73 ಕೋಟಿ ಜನರಿಗೆ ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಚಿಕಿತ್ಸೆಯ ಅಗತ್ಯವಿದೆ ಎಂದು ಕಂಡುಬಂದಿತ್ತು. ಇದರಲ್ಲಿ 4.57 ಕೋಟಿ ಜನರಿಗೆ ಖಿನ್ನತೆ ಸಂಬಂಧಿತ ಸಮಸ್ಯೆಗಳಿದ್ದರೆ, 4.49 ಕೋಟಿ ಜನರು ಆತಂಕ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಕೋವಿಡ್-19 ಸಾಂಕ್ರಾಮಿಕದ ಬಳಿಕ ಪರಿಸ್ಥಿತಿ ಇನ್ನೂ ಕೆಟ್ಟಿದೆ. ಇದು ಜಾಗತಿಕವಾಗಿ ಉಂಟಾದ ತೊಂದರೆ. ಆದರೆ ಈ ಸಂಖ್ಯೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಾನಸಿಕ ಆರೋಗ್ಯ ಸಮಸ್ಯೆಯನ್ನು ದಾಖಲಿಸಿರುವವರದ್ದು. ಚಿಕಿತ್ಸೆ ಪಡೆಯಲು ಸಾಧ್ಯವಾಗದಿರುವ, ನೋಂದಾಯಿಸದ ಜನರೂ ದೊಡ್ಡ ಪ್ರಮಾಣದಲ್ಲಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.
ಈ ಹೆಚ್ಚುತ್ತಿರುವ ಸವಾಲಿಗೆ ಜನರ ಸ್ವಯಂ ರೋಗನಿರ್ಣಯ, ಜಾಗೃತಿಯ ಕೊರತೆ ಹಾಗೂ ಸಾಮಾಜಿಕ ಕಳಂಕಗಳೂ ಸೇರಿ ಇನ್ನಷ್ಟು ಕಠಿಣವಾಗಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೇನೆಂದರೆ, ಮಾನಸಿಕ ಸಮಸ್ಯೆ ಇದೆಯೇ ಅನ್ನುವುದನ್ನು ಹಲವು ಮಾನದಂಡಗಳನ್ನು ಹೊಂದಿರುವ ಪರೀಕ್ಷೆಯ ಮೂಲಕವೇ ತಿಳಿಯಲು ಸಾಧ್ಯ. ಅದರಲ್ಲೂ ಜನರಲ್ಲಿರುವ, ನನಗೆ ಮಾನಸಿಕ ಸಮಸ್ಯೆ ಇಲ್ಲ ಎನ್ನುವ ಮನೋಭಾವನೆಯನ್ನೇ ಬದಲಾಯಿಸುವ ಅನಿವಾರ್ಯತೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಾನಸಿಕ ಆರೋಗ್ಯ ಎನ್ನುವುದು ಒಂದು ಆರೋಗ್ಯ ಸ್ಥಿತಿ. ಇಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅವನ ಸಾಮರ್ಥ್ಯ ಅರಿವಿರುತ್ತದೆ, ಆತ ಉತ್ಪಾದಕ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ, ಜೀವನದ ಸಾಮಾನ್ಯ ಸವಾಲುಗಳನ್ನು ಎದುರಿಸುತ್ತಾ, ಸಮಾಜಕ್ಕೂ ತನ್ನಿಂದಾದ ಕೊಡುಗೆಗಳನ್ನು ನೀಡಲು ಸಾಧ್ಯವಾಗುತ್ತದೆ.
ಮಾನಸಿಕ ಸಮಸ್ಯೆಗಳು ಜೈವಿಕ, ಮಾನಸಿಕ, ಅನುವಂಶಿಕ, ಹಾಗೂ ಪರಿಸರದ ಒತ್ತಡಗಳ ಕಾರಣದಿಂದ ಉಂಟಾಗುತ್ತವೆ. ಸಾಮಾಜಿಕ ಒತ್ತಡಗಳು ವ್ಯಕ್ತಿಗಳನ್ನು ಮಾನಸಿಕ ಅನಾರೋಗ್ಯದೊಡೆಗೆ ತಳ್ಳುತ್ತವೆ. ನೇಚರ್ ಪತ್ರಿಕೆಯಲ್ಲಿ ಪ್ರಕಟವಾದ ಜಿನೋಮ್ ವೈಡ್ ಅಸೋಸಿಯೇಷನ್ ಸ್ಟಡಿ (ಜಿಡಬ್ಲ್ಯುಎಎಸ್) ಪ್ರಕಾರ, ಖಿನ್ನತೆ 40% ಅನುವಂಶಿಕವಾಗಿ ಬರುವ ಸಾಧ್ಯತೆಗಳಿವೆ. ಆದರೆ ತೀವ್ರ ಹಾಗೂ ಮರುಕಳಿಸುವ ಖಿನ್ನತೆ ಹೊಂದಿರುವ ಅವಳಿ ಜವಳಿಗಳನ್ನು ಪರೀಕ್ಷೆಗೊಳಪಡಿಸಿದಾಗ ಈ ಸಾಧ್ಯತೆ 70%ರಷ್ಟು ಕಂಡುಬಂದಿದೆ. ಆದ್ದರಿಂದ ಸಾಮಾಜಿಕ ಅಂಶಗಳಾದ ಜನಾಂಗ, ಲಿಂಗ, ಇತ್ಯಾದಿಗಳೂ ಮಾನಸಿಕ ಆರೋಗ್ಯ ಸ್ಥಿತಿಗೆ ಕಾರಣವಾಗುತ್ತವೆ.
ಸಾಮಾಜಿಕ ಸ್ಥಿತಿಗತಿಗಳು ಕೇವಲ ಮಾನಸಿಕ ಸಮಸ್ಯೆಗಳ ಅಪಾಯಕ್ಕೆ ಮಾತ್ರ ಕಾರಣವಾಗುವುದಿಲ್ಲ. ಅದರೊಡನೆ ಆರೋಗ್ಯ ಸೇವೆಗಳನ್ನು ಪಡೆಯುವಲ್ಲಿಯೂ ಪ್ರಭಾವ ಬೀರುತ್ತವೆ. ಮಾನಸಿಕ ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯವೂ ಸಹ ಸಾಮಾಜಿಕ ವಿಚಾರಗಳಾದ ಕೌಟುಂಬಿಕ ವಿನ್ಯಾಸ, ಆದಾಯ, ಇತ್ಯಾದಿಗಳ ಮೇಲೆ ಅವಲಂಬಿತವಾಗಿರುತ್ತದೆ. ಮಾನಸಿಕ ಸಮಸ್ಯೆ ಇದೆ ಎಂದು ಪರಿಗಣಿಸಲಾದ ರೋಗಿಗಳೂ ಆರೋಗ್ಯದಿಂದಿರುವ ಅವಧಿ ಇರುತ್ತದೆ. ಯಾವುದೇ ಸಮಸ್ಯೆ ಇಲ್ಲ ಎಂದುಕೊಂಡವರೂ ಮಾನಸಿಕ ಸಮಸ್ಯೆ ಎದುರಿಸಬಹುದು. ಆದ್ದರಿಂದ ಮಾನಸಿಕ ಆರೋಗ್ಯ ಸೇವೆಗಳು ಕೇವಲ ಮಾನಸಿಕ ಸಮಸ್ಯೆಗಳಿಂದ ಬಳಲುವವರಿಗೆ ಮಾತ್ರವೇ ಸೀಮಿತವಾಗಿರುವುದಿಲ್ಲ. ಸಣ್ಣ ಪ್ರಮಾಣದಲ್ಲಿ ಮಾನಸಿಕ ಕ್ಷೋಭೆ ಅನುಭವಿಸುತ್ತಿದ್ದು, ದೈನಂದಿನ ಚಟುವಟಿಕೆಗಳಿಗೆ ತೊಡಕುಂಟಾಗುತ್ತದೆ ಎನ್ನುವವರಿಗೂ ಸಹಾಯದ ಅಗತ್ಯವಿದೆ.
ಇದನ್ನೂ ಓದಿ | ಮನ ಸಾಂತ್ವನ ಅಂಕಣ | ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್: ನಿಮ್ಮ ಸಂತಸವನ್ನು ಕಸಿದುಕೊಳ್ಳುವ ಲೂಟಿಕೋರ!
ಭಾರತದಲ್ಲಿ ಮಾನಸಿಕ ಆರೋಗ್ಯ ಸೇವೆಯನ್ನು ಜನಪ್ರಿಯಗೊಳಿಸಲು ಸಹಾಯಕವಾಗುವ ಮುಖ್ಯ ಅಂಶವೆಂದರೆ ಮಾನಸಿಕ ಆರೋಗ್ಯ ಜಾಗೃತಿ. ಮಾನಸಿಕ ಆರೋಗ್ಯದ ಕುರಿತಾದ ಅರಿವಿನ ಕೊರತೆಯಿಂದ ಸಮಸ್ಯೆಯನ್ನು ತಪ್ಪಾಗಿ ನಿರ್ಣಯಿಸುವುದು, ಕಡೆಗಣಿಸುವುದು, ಅಥವಾ ಮಾನಸಿಕ ಆರೋಗ್ಯ ಸೇವೆಯ ಅಗತ್ಯವಿರುವ ರೋಗಿಗಳು ತೋರುವ ಲಕ್ಷಣಗಳನ್ನು ಅಲಕ್ಷ್ಯ ಮಾಡುವ ಅಪಾಯಗಳು ಉಂಟಾಗಬಹುದು. ಮಾನಸಿಕ ಸಮಸ್ಯೆಯನ್ನು ಹೊಂದಿರುವ ರೋಗಿಗಳ ಕುರಿತು ಅಸಮಂಜಸ ಶಬ್ದಗಳನ್ನು ಬಳಸುವುದು ಅವರ ಮೇಲೆ ಆಳವಾದ ಮಾನಸಿಕ ಪರಿಣಾಮ ಬೀರಬಹುದು. ಅದು ಅವರನ್ನು ಸಮಾಜದಿಂದ ಇನ್ನಷ್ಟು ದೂರ ಹೋಗುವಂತೆ, ಏಕಾಂಗಿಯಾಗುವಂತೆ ಮಾಡಬಲ್ಲದು.
2016ರಲ್ಲಿ ನಿಮ್ಹಾನ್ಸ್ ಕೈಗೊಂಡ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯ ಪ್ರಕಾರ, 80%ದಷ್ಟು ಭಾರತೀಯರು ಸಾಮಾಜಿಕ ಕಳಂಕ, ಜಾಗೃತಿಯ ಕೊರತೆ, ದುಬಾರಿ ವೆಚ್ಚ ಮುಂತಾದ ಯಾವುದಾದರೂ ಕಾರಣದಿಂದ ಮಾನಸಿಕ ಆರೋಗ್ಯ ಸೇವೆ ಪಡೆಯಲು ಹಿಂಜರಿಯುತ್ತಾರೆ. 2022-23ರ ಕೇಂದ್ರ ಬಜೆಟ್ ಈ ಅಂಶವನ್ನು ಪರಿಗಣಿಸಿ, ಭಾರತದಲ್ಲಿ ನ್ಯಾಷನಲ್ ಟೆಲಿ-ಮೆಂಟಲ್ ಹೆಲ್ತ್ ಪ್ರೋಗ್ರಾಂ ಅನ್ನು ಜಾರಿಗೆ ತಂದಿತು. ಇದು 24×7 ಉಚಿತ ಟೆಲಿ ಕೌನ್ಸಿಲಿಂಗ್ ಸೇವೆಯನ್ನು ಒದಗಿಸುತ್ತದೆ. ಇದೊಂದು ಅವಶ್ಯಕವಾದ ಬದಲಾವಣೆಯಾಗಿದ್ದು, ಭಾರತದಾದ್ಯಂತ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಹೂಡಿಕೆಯ ಅಗತ್ಯವಿದೆ. ಪ್ರಸ್ತುತ ಕೇಂದ್ರ ಬಜೆಟ್‌ನಲ್ಲಿ 932.13 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದ್ದು, ಇದು ಮಾನಸಿಕ ಆರೋಗ್ಯ ತಜ್ಞರು ಅಂದಾಜಿಸಿದ ಅಂದಾಜು ಮೊತ್ತಕ್ಕಿಂತ ತುಂಬಾ ಕಡಿಮೆ.
ಇದನ್ನೂ ಓದಿ | Genetic Cause | ಮಕ್ಕಳಲ್ಲಿ ಮಾನಸಿಕ ವಿಕಲ್ಪಕ್ಕೆ ವಂಶವಾಹಿ ದೋಷ ಕಾರಣವೇ? ಏನು ಹೇಳುತ್ತದೆ ಸಂಶೋಧನೆ?
ಮಾನಸಿಕ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ಅತ್ಯಂತ ಅಗತ್ಯವಾಗಿದ್ದ ವಿಚಾರಗಳು, ಕ್ರಮಗಳು ಈಗ ನಿಧಾನವಾಗಿಯಾದರೂ ಮುನ್ನಲೆಗೆ ಬರುತ್ತಿವೆ. ಇನ್ನು ಮುಂದಿರುವ ಸವಾಲುಗಳನ್ನು ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಸೂಕ್ತ ಅಂಕಿ ಅಂಶಗಳನ್ನು ಪಡೆಯಲು ಜಾಗರೂಕತೆಯಿಂದ ಸಂಶೋಧನೆ ಮತ್ತು ಮ್ಯಾಪಿಂಗ್ ನಡೆಸುವ ಅಗತ್ಯವಿದೆ. ಈ ಮಾಹಿತಿಗಳು ಸಮಸ್ಯೆಯ ಆಳ ಅಗಲಗಳನ್ನು ಅರ್ಥ ಮಾಡಿಕೊಳ್ಳಲು ಅಗತ್ಯ. ಬಳಿಕ ರಾಜಕೀಯ, ವೈಜ್ಞಾನಿಕ ಹಾಗೂ ನಾಗರಿಕರನ್ನು ಒಳಗೊಂಡ ಕ್ರಮಗಳನ್ನು ಕೈಗೊಳ್ಳಬೇಕಿದೆ.
(ಅಂಕಣಕಾರರು ಹಿರಿಯ ಮನೋವೈದ್ಯಶಾಸ್ತ್ರಜ್ಞರು, ಸ್ಪಂದನಾ ಆಸ್ಪತ್ರೆ ಹಾಗೂ ರಿಹ್ಯಾಬಿಲಿಟೇಷನ್ ಸೆಂಟರ್)