Site icon Vistara News

ವಾರದ ವ್ಯಕ್ತಿಚಿತ್ರ: ಅಗಣಿತ ಸಾಧನೆಗಳ ಗಣಿತಜ್ಞ, ಸಂಖ್ಯಾಶಾಸ್ತ್ರದಲ್ಲಿ 75 ವರ್ಷ ಪೂರೈಸಿದ ಕನ್ನಡಿಗ ಸಿ.ಆರ್‌.ರಾವ್

C R Rao

C R Rao

| ಬಿ.ಸೋಮಶೇಖರ್‌, ಬೆಂಗಳೂರು

ಬದಲಾದ ಜೀವನ ಶೈಲಿ, ಆಹಾರ ಪದ್ಧತಿ ಸೇರಿ ಹಲವು ಕಾರಣಗಳಿಂದ ಭಾರತ ಸೇರಿ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಮನುಷ್ಯನ ಆಯಸ್ಸು ಕಡಿಮೆಯಾಗಿದೆ. ಒಬ್ಬ ವ್ಯಕ್ತಿ 75 ವರ್ಷ ಬದುಕುವುದೇ ಹೆಗ್ಗಳಿಕೆ ಎಂಬಂತಾಗಿದೆ. ಆದರೆ, ಯಾವುದೇ ಒಂದು ಕ್ಷೇತ್ರದಲ್ಲಿ ಪರಿಣತಿ ಸಾಧಿಸಿ, ಅದೇ ಕ್ಷೇತ್ರದಲ್ಲಿ 75 ವರ್ಷ ದುಡಿಯುವುದು, ಆ ಕ್ಷೇತ್ರಕ್ಕಾಗಿಯೇ ಜೀವನದ ಬಹುತೇಕ ಭಾಗವನ್ನು ಕಳೆಯುವುದು ಆ ಪರಿಣತನ ಸೌಭಾಗ್ಯವೇ ಸರಿ. ಹೀಗೆ, ಬಳ್ಳಾರಿಯ ಹಡಗಲಿಯಲ್ಲಿ ಜನಿಸಿ, ಆಂಧ್ರಪ್ರದೇಶದಲ್ಲಿ ಓದಿ, ಅಮೆರಿಕದಲ್ಲಿ ನೆಲೆಸಿ, ಜಾಗತಿಕ ಸಂಖ್ಯಾಶಾಸ್ತ್ರಕ್ಕೆ ಅನರ್ಘ್ಯ ಕೊಡುಗೆ ನೀಡಿರುವ ಕಾಲ್ಯಂಪುಡಿ ರಾಧಾಕೃಷ್ಣ ರಾವ್‌ (C R Rao) ಅವರು ಅಂತಹ ಸೌಭಾಗ್ಯವಂತರು.

ಕರ್ನಾಟಕ ಮೂಲದ ಗಣಿತಶಾಸ್ತ್ರಜ್ಞ,‌ ಸಂಖ್ಯಾಶಾಸ್ತ್ರಕ್ಕೆ ನೀಡಿದ ಕೊಡುಗೆ, ಗಣಿತ ಕ್ಷೇತ್ರದಲ್ಲಿ ಸಾಧಿಸಿದ ಪಾರಮ್ಯಕ್ಕಾಗಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಸಿ.ಆರ್‌.ರಾವ್ ಅವರಿಗೆ 102ನೇ ವಯಸ್ಸಿನಲ್ಲಿ 2023ನೇ ಸಾಲಿನ ಸಂಖ್ಯಾಶಾಸ್ತ್ರದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ (International Prize in Statistics) ಲಭಿಸಿದೆ. ಸಂಖ್ಯಾಶಾಸ್ತ್ರದಲ್ಲಿ ಈ ಪ್ರಶಸ್ತಿಯು ನೊಬೆಲ್‌ಗೆ ಸಮ ಎಂದೇ ಹೇಳಲಾಗುತ್ತಿದೆ. ಇಂತಹ ಪ್ರತಿಷ್ಠಿತ ಪ್ರಶಸ್ತಿಗೆ ಅಮೆರಿಕದಲ್ಲಿಯೇ ನೆಲೆಸಿರುವ ಸಿ.ಆರ್.ರಾವ್‌ ಅವರು ಭಾಜನರಾಗಿದ್ದಾರೆ. ಆ ಮೂಲಕ ಅವರು ಮತ್ತೆ ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ. ಹಾಗಾದರೆ, ಸಿ.ಆರ್‌.ರಾವ್‌ ಅವರ ಹಿನ್ನೆಲೆ ಏನು? ಅವರು ಸಂಖ್ಯಾಶಾಸ್ತ್ರಕ್ಕೆ ನೀಡಿದ ಕೊಡುಗೆ ಎಷ್ಟಿದೆ ಎಂಬುದು ಸೇರಿ ಅವರ ಜೀವನದ ಪ್ರಮುಖ ಘಟ್ಟಗಳ ಸಂಕ್ಷಿಪ್ತ ಪರಿಚಯವೇ ಈ ವಾರದ ವ್ಯಕ್ತಿಚಿತ್ರ.

ಹಡಗಲಿ ಟು ಅಮೆರಿಕ

1920ರ ಸೆಪ್ಟೆಂಬರ್‌ 10ರಂದು ಕರ್ನಾಟಕದ ಬಳ್ಳಾರಿ ಜಿಲ್ಲೆ ಹಡಗಲಿಯಲ್ಲಿ ಸಿ.ಆರ್‌. ರಾವ್‌ ಅವರು ಜನಿಸಿದರು. ಇವರ ತಂದೆಯವರ ನಿವೃತ್ತಿಯ ನಂತರ ಆಂಧ್ರಪ್ರದೇಶಕ್ಕೆ ಕುಟುಂಬವು ತೆರಳಿತು. ಹಾಗಾಗಿ, ರಾವ್‌ ಅವರು ಆಂಧ್ರಪ್ರದೇಶದಲ್ಲಿ ಆರಂಭಿಕ ಶಿಕ್ಷಣ ಪಡೆದರು. ಗಣಿತದಲ್ಲಿ ಅಪಾರ ಆಸಕ್ತಿ ಇದ್ದ ಕಾರಣ ರಾವ್‌ ಅವರು 1941 ರಲ್ಲಿ ಆಂಧ್ರಪ್ರದೇಶ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದಲ್ಲಿ ಎಂಎಸ್ಸಿ, 1943ರಲ್ಲಿ ಕೋಲ್ಕೊತಾ ವಿಶ್ವವಿದ್ಯಾಲಯದಿಂದ ಸಂಖ್ಯಾಶಾಸ್ತ್ರದಲ್ಲಿ ಎಂಎ ಮತ್ತು ಪಿಎಚ್‌.ಡಿ ಪಡೆದರು. 1948ರಲ್ಲಿ ಕೆಂಬ್ರಿಡ್ಜ್‌ ವಿಶ್ವವಿದ್ಯಾನಿಲಯದ ಕಿಂಗ್ಸ್ ಕಾಲೇಜಿನಲ್ಲಿ ಪದವಿ ಪಡೆದರು. ದೆಹಲಿ ಏಮ್ಸ್‌ನಲ್ಲಿ ನೇತ್ರವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದ ಅವರು, ಕಾರ್ನಿಯಾ, ಐ ಬ್ಯಾಂಕಿಂಗ್‌, ಕಾರ್ನಿಯಲ್‌ ಕಸಿ ಸೇರಿ ಹಲವು ವಿಭಾಗದಲ್ಲಿ ಅವರು ಪಾರಂಗತರಾಗಿದ್ದರು.

2010ರಲ್ಲಿ ಆಗಿನ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರಿಂದ ಇಂಡಿಯಾ ಸೈನ್ಸ್‌ ಪ್ರೈಜ್‌ ಸ್ವೀಕರಿಸಿದ ಸಿ.ಆರ್.ರಾವ್.‌

ಇದಾದ ನಂತರ ಬ್ರಿಟನ್‌ತೆ ತೆರಳಿ, ಅಲ್ಲಿ ಪದವಿ ಪಡೆದ ಅವರು ಭಾರತಕ್ಕೆ ಆಗಮಿಸಿದರು. ದೇಶದಲ್ಲಿ ಸಂಖ್ಯಾಶಾಸ್ತ್ರ ವಿಭಾಗವನ್ನು ಸ್ಥಾಪಿಸಿದರು. ಆ ಮೂಲಕ ಭಾರತದ ಸಂಖ್ಯಾಶಾಸ್ತ್ರಕ್ಕೆ ಕೊಡುಗೆ ನೀಡಿದರು. ಇಂಡಿಯನ್‌ ಸ್ಟ್ಯಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರಾಗಿ, ಪ್ರೊಫೆಸರ್‌ ಆಗಿ ಕಾರ್ಯನಿರ್ವಹಿಸಿದ ಅವರು 1980ರ ಆರಂಭದಲ್ಲಿ ಅಮೆರಿಕ್ಕೆ ತೆರಳಿ, ಅಲ್ಲಿಯೇ ನೆಲೆಸಿದರು. ಅಮೆರಿಕದ ಹಲವು ವಿಶ್ವವಿದ್ಯಾಲಯಗಳಲ್ಲಿ ಇವರು ಪ್ರೊಫೆಸರ್‌ ಆಗಿ ಕಾರ್ಯನಿರ್ವಹಿಸಿದ್ದು, 102ನೇ ವಯಸ್ಸಿನಲ್ಲೂ ಸಿ.ಆರ್‌. ರಾವ್‌ ಅವರು ಈಗ ಪೆನ್ಸಿಲ್ವೇನಿಯಾ ಸ್ಟೇಟ್‌ ಯೂನಿವರ್ಸಿಟಿ ಹಾಗೂ ಬಫಲೋ ಯೂನಿವರ್ಸಿಟಿಯಲ್ಲಿ ಸಂಶೋಧನಾ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದಹಾಗೆ, ಸಿ.ಆರ್‌.ರಾವ್‌ ಅವರನ್ನು ಭಾರತದ ಸಂಖ್ಯಾಶಾಸ್ತ್ರ ಸಂಶೋಧನೆಯ ಪಿತಾಮಹ ಎಂದೇ ಕರೆಯಲಾಗುತ್ತದೆ.

ಇವರಿಗೆ ಜಾಗತಿಕ ಪ್ರಶಸ್ತಿ ನೀಡಿದ್ದೇಕೆ?

1945ರಲ್ಲಿ ಅಂದರೆ ಸಿ.ಆರ್‌.ರಾವ್‌ ಅವರು 24 ವರ್ಷದವರಿದ್ದಾಗ ಬುಲೆಟಿನ್‌ ಆಫ್ ಕೋಲ್ಕೊತಾ ಮ್ಯಾಥೆಮ್ಯಾಟಿಕಲ್‌ ಸೊಸೈಟಿಯಲ್ಲಿ ಸಂಖ್ಯಾಶಾಸ್ತ್ರದ ಕುರಿತು ಮಂಡಿಸಿದ ಪ್ರಬಂಧಕ್ಕಾಗಿ ಅವರಿಗೆ ಇಂಟರ್‌ನ್ಯಾಷನಲ್‌ ಪ್ರೈಜ್‌ ಇನ್‌ ಸ್ಟ್ಯಾಟಿಸ್ಟಿಕ್ಸ್‌ ಫೌಂಡೇಷನ್‌ ಪ್ರಶಸ್ತಿ ಘೋಷಿಸಲಾಗಿದೆ. ರಾವ್‌ ಅವರು ಮಂಡಿಸಿದ ಪ್ರಬಂಧದ ಮೂರು ಅಂಶಗಳು ಸಂಖ್ಯಾಶಾಸ್ತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಿರುವುದನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಇವರಿಗೆ 102ನೇ ವಯಸ್ಸಿನಲ್ಲಿ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಕೆನಡಾದ ಒಟ್ಟಾವದಲ್ಲಿರುವ ಇಂಟರ್‌ನ್ಯಾಷನಲ್‌ ಸ್ಟ್ಯಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ ವರ್ಲ್ಡ್‌ ಸ್ಟ್ಯಾಟಿಸ್ಟಿಕ್ಸ್‌ ಕಾಂಗ್ರೆಸ್‌ನಲ್ಲಿ ಜುಲೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಪ್ರಶಸ್ತಿಯ ಮೊತ್ತವು 64.80 ಲಕ್ಷ ರೂಪಾಯಿ ಆಗಿದೆ. “ಸಿ.ಆರ್.‌ ರಾವ್‌ ಅವರು ಸಂಖ್ಯಾಶಾಸ್ತ್ರಕ್ಕೆ ನೀಡಿದ ಕೊಡುಗೆ ಜತೆಗೆ ಜಾಗತಿಕವಾಗಿ ಮನುಷ್ಯರು ವಿಜ್ಞಾನವನ್ನು ಅರ್ಥೈಸಿಕೊಳ್ಳುವಲ್ಲಿ ರಾವ್‌ ಅವರ ಪಾತ್ರವನ್ನು ಪರಿಗಣಿಸಿ ಪ್ರಶಸ್ತಿಯನ್ನು ಘೋಷಿಸಲಾಗಿದೆ” ಎಂದು ಇಂಟರ್‌ನ್ಯಾಷನಲ್‌ ಪ್ರೈಜ್‌ ಇನ್‌ ಸ್ಟ್ಯಾಟಿಸ್ಟಿಕ್ಸ್‌ ಫೌಂಡೇಷನ್‌ ಅಧ್ಯಕ್ಷ ಗಯ್‌ ನೇಸನ್‌ (Guy Nason) ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನೆನಪು | ಗಣಿತದ ಗಣಿ ಶ್ರೀನಿವಾಸ ರಾಮಾನುಜನ್‌

ಸಂದ ಪ್ರಶಸ್ತಿ-ಪುರಸ್ಕಾರಗಳು

ಕೇಂಬ್ರಿಡ್ಜ್ ವಿಶ್ವವಿದ್ಯಾಲಯವು 1965 ರಲ್ಲಿ ಅವರಿಗೆ ಪ್ರತಿಷ್ಠಿತ Sc.D ಪದವಿ ನೀಡಿ ಗೌರವಿಸಿದೆ. ಇವರು 31 ದೇಶಗಳ ವಿಶ್ವವಿದ್ಯಾಲಯಗಳಿಂದ 18 ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ. ಭಾರತ ಸರ್ಕಾರವೂ ಇವರಿಗೆ 1968ರಲ್ಲಿ ಪದ್ಮಭೂಷಣ ಹಾಗೂ 2001ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಸಂಖ್ಯಾ ಶಾಸ್ತ್ರದಲ್ಲಿ ಇವರನ್ನು ಜೀವಂತ ದಂತಕತೆ ಎಂದೇ ಪರಿಗಣಿಸಲಾಗಿದೆ. ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯು ಸಂಖ್ಯಾಶಾಸ್ತ್ರಗಳಲ್ಲಿ ಸಿ.ಆರ್. ಮತ್ತು ಭಾರ್ಗವಿ ರಾವ್ ಪ್ರಶಸ್ತಿಯನ್ನು ಸ್ಥಾಪಿಸಿದೆ.

2001ರಲ್ಲಿ ಆಗಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್‌ ಅವರಿಂದ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ರಾವ್.‌

ಸಿಆರ್ ರಾವ್ ಅಡ್ವಾನ್ಸ್ಡ್ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮ್ಯಾಟಿಕ್ಸ್, ಸ್ಟ್ಯಾಟಿಸ್ಟಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ಮತ್ತು ಹೈದರಾಬಾದ್‌ನಲ್ಲಿ ಒಂದು ರಸ್ತೆಗೆ ‘ಪ್ರೊ. ಸಿ.ಆರ್. ರಾವ್ ರಸ್ತೆ’ ಎಂದು ಹೆಸರಿಡಲಾಗಿದೆ. ಅಷ್ಟೇ ಏಕೆ, ಸಂಖ್ಯಾಶಾಸ್ತ್ರಕ್ಕೆ ಸಿ.ಆರ್‌. ರಾವ್‌ ಅವರು ನೀಡಿದ ಕೊಡುಗೆ, ಸೇವೆ ಪರಿಗಣಿಸಿ ಅವರಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ವಿಶ್ವ ಆರೋಗ್ಯ ಸಂಸ್ಥೆಯ ಸೌತ್‌-ಈಸ್ಟ್‌ ಏಷ್ಯಾ ರೀಜನಲ್‌ ಆಫೀಸ್‌ನಲ್ಲಿ ಪ್ರತಿಷ್ಠಿತ ಹೀರೋಸ್‌ ಆಫ್‌ ಪಬ್ಲಿಕ್‌ ಹೆಲ್ತ್‌ ಅವಾರ್ಡ್-‌2023 ನೀಡಿ ಗೌರವಿಸಿದೆ.

ವೈಯಕ್ತಿಕ ಜೀವನ

ಸಿ.ಆರ್‌.ರಾವ್‌ ಅವರ ತಂದೆ ಸಿ.ದೊರೈಸ್ವಾಮಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿದ್ದರು. ಅವರ ತಾಯಿ ಎ. ಲಕ್ಷ್ಮೀಕಾಂತಮ್ಮ ಅವರು ಗೃಹಿಣಿಯಾಗಿದ್ದರು. ಸಿ.ದೊರೈಸ್ವಾಮಿ ಹಾಗೂ ಲಕ್ಷ್ಮೀಕಾಂತಮ್ಮ ದಂಪತಿಯ ಎಂಟು ಮಕ್ಕಳಲ್ಲಿ ಸಿ.ಆರ್‌.ರಾವ್‌ ಎಂಟನೆಯವರು. ಎಂಟು ಮಕ್ಕಳಲ್ಲಿ ಇಬ್ಬರು ಚಿಕ್ಕಂದಿನಲ್ಲೇ ತೀರಿಕೊಂಡಿದ್ದರು. ಇಡೀ ಕುಟುಂಬದಲ್ಲಿ ಸಿ.ಆರ್.‌ ರಾವ್‌ ಅವರೇ ಶಿಕ್ಷಣ ಕಲಿತರು.

ಸಿ.ಆರ್‌.ರಾವ್‌ ಕುಟುಂಬ.

ಶಾಲಾ ದಿನಗಳಲ್ಲಿಯೇ ಸಿ.ಆರ್.‌ ರಾವ್‌ ಅವರು ಬೆಳಗ್ಗೆ ನಾಲ್ಕು ಗಂಟೆಗೇ ಎದ್ದು ಓದುವ ಅಭ್ಯಾಸ ರೂಢಿಸಿಕೊಂಡಿದ್ದರು. ಇದೇ ಶಿಸ್ತು ಅವರ ಜೀವನವನ್ನೇ ಬದಲಾಯಿಸಿತು. ಕೋಲ್ಕೊತಾಗೆ ಆಗಮಿಸಿ, ಇಂಡಿಯನ್‌ ಸ್ಟ್ಯಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ನಲ್ಲಿ ವೃತ್ತಿ ಆರಂಭಿಸಿದ ಕೆಲವೇ ದಿನಗಳಲ್ಲಿ ಅಂದರೆ, 1948ರ ಸೆಪ್ಟೆಂಬರ್‌ 9ರಂದು ಬಾಲ್ಯದ ಗೆಳತಿ ಭಾರ್ಗವಿ ಅವರನ್ನು ಮದುವೆಯಾದರು. ಇವರಿಗೆ ತೇಜಸ್ವಿನಿ ಹಾಗೂ ವೀರೇಂದ್ರ ಎಂಬ ಇಬ್ಬರು ಮಕ್ಕಳಿದ್ದಾರೆ.

Exit mobile version