Site icon Vistara News

ವಾಕಿಂಗ್‌ ಚಿತ್ರಗಳು ಅಂಕಣ | ಮನಸ್ಸನ್ನು ಓದಿ ಕತೆ ಬರೆಯಬಲ್ಲ ಮೆಶೀನು!

machine

ಈ ಅಂಕಣ ಬರೆಯೋಕೆ ಒಪ್ಪಿಕೊಂಡಾಗ ನಾನು ದಿನಕ್ಕೆ ಮಿನಿಮಮ್ 10 ಸಾವಿರ ಸ್ಟೆಪ್ಸ್ ನಡೆಯುತ್ತಿದ್ದೆ. 10 ಸಾವಿರ ಹೆಜ್ಜಗಳನ್ನು ಆಯಾಸ ಇಲ್ಲದೇ ಹಾಕುತ್ತಿದ್ದೆ. 10 ಸಾವಿರ ಹೆಜ್ಜೆಗಳು ನನಗೆ ನನ್ನ ವಯಸ್ಸಿನ ಅಲ್ಲದವರ ಗೆಳೆತನವನ್ನು ತಂದುಕೊಟ್ಟಿತ್ತು. ಬೆಳಗ್ಗೆ ಬೆಳಗ್ಗೆ ಬೇಗ ಪಾರ್ಕಿಗೆ ಹೋದರೆ ಸುಮ್ಮನೆ ಟೈಮ್ ಪಾಸ್ ಮಾಡುವವರು ಸಿಗೋದಿಲ್ಲ. ನಿಜವಾಗಿಯೂ ಒಂದು ಗುರಿ ಇಟ್ಟುಕೊಂಡು ವಾಕ್ ಮಾಡೋದಕ್ಕೆ ಬರುತ್ತಾರೆ. ಆ ಗುರಿ ಅವರ ತೂಕ ಕಡಿಮೆ ಮಾಡಿಕೊಳ್ಳೋದು ಆಗಿರಬಹುದು ಅಥವಾ ಒಳ್ಳೆ ಗಾಳಿ ಸೇವನೆ ಆಗಿರಬಹುದು ಅಥವಾ ವಿಟಮಿನ್ ಡಿಗೋಸ್ಕರ ಎಳೆ ಬಿಸಿಲೇ ಆಗಿರಬಹುದು, ಇವೆಲ್ಲವೂ ಅವಶ್ಯಕ ಎಂದು ಬಂದಿರುತ್ತಾರೆ. ಮೊದಲು ಕೆಲಸ ಆಮೇಲೆ ಮಾತು, ನಂತರ ಷುಗರ್‌ಲೆಸ್ ಕಾಫಿ. ಇದು ಬೆಳಗ್ಗೆ ಬೆಳಗ್ಗೆ ಬರುವವರ ಕಥೆ.

ಇನ್ನು ಸ್ವಲ್ಪ ಸೂರ‍್ಯ ನೆತ್ತಿಯ ಹತ್ತಿರತ್ತಿರ ಬರುವಾಗ ಬರುವವರು ಖಾಲಿ ಟೈಮ್ ಪಾಸೇ. ಮನೆಯ ವಿಷಯಗಳನ್ನು ಆಚೆ ಕಡೆ ಕಕ್ಕೋದಕ್ಕೆ ಬರುತ್ತಾರೆ. ಒಂದು 4 ದಿನ ಅದೇ ಸಮಯಕ್ಕೆ ನಾವೂ ವಾಕಿಂಗ್ ಹೋದರೆ ಅವರ ಮನೆಯ ಸೀರಿಯಲ್ ಕಥೆ ಗೊತ್ತಾಗತ್ತೆ. ನನಗೊಂದು ಅನುಭವ ಆಗಿತ್ತು. ಒಂದು ಅಂಕಲ್ ಎರಡು ವರ್ಷದ ಹಿಂದೆ ವಾಕಿಂಗ್ ಬರುತ್ತಿದ್ದರು. ನಾನು ಚಳಿಗಾಲದಲ್ಲಿ ಸೋಂಬೇರಿಯಾಗಿ ಲೇಟಾಗಿ ವಾಕಿಂಗ್ ಹೋಗುತ್ತಿದ್ದೆ. ಅಂಕಲ್ ಬಹಳ ಕಷ್ಟ ಪಟ್ಟು ಮೊದಲ ಮಗನಿಗೆ ಮದುವೆ ಮಾಡಿದ್ದರು. ಈಗ ಅವನು ಬೇರೆ ಮನೆಗೆ ಹೋಗುತ್ತೇನೆ ಎಂದು ನಿರ್ಧಾರ ತೆಗೆದುಕೊಂಡಿದ್ದಾರೆ ಅಂತೆ. ಅದನ್ನು ಬೇಜಾರಿನಿಂದ ಹೇಳಿಕೊಳ್ಳುತ್ತಿದ್ದರು. “ಸೊಸೆ ಬಂದ ಮೇಲೆ ಮಗ ಬದಲಾಗಿಬಿಟ್ಟ” ಎಂದು ಕಣ್ಣೀರು ಹಾಕಿದ್ದರು. ಅದೇ ಸೇಮ್ ಅಂಕಲ್ ರೀಸೆಂಟಾಗಿ ಅವರ ಎರಡನೆಯ ಮಗನಿಗೂ ಮದುವೆ ಮಾಡಿದ್ದಾರೆ. 2 ತಿಂಗಳಲ್ಲೇ ಎರಡನೇ ಮಗನೂ ಇವರ ಮನೆಯಿಂದ ಬೇರೆ ಮನೆಗೆ ಹೋಗುತ್ತಾನಂತೆ ಎಂದು ಅಲವತ್ತುಕೊಳ್ಳುತ್ತಿದ್ದರು. “ಎರಡನೆಯ ಸೊಸೆಯೂ ಹಾಗೇನೆ” ಎಂದು ಹೇಳಿಕೊಳ್ಳುತ್ತಿದ್ದರು. ನನಗೆ ಇದೊಂದು ಅಪ್ಪಟ ಟ್ವಿಸ್ಟ್ ಇರುವ ಕಥೆ. ಲಾಜಿಕಲಿ ಯೋಚಿಸಿದರೆ ಇಲ್ಲಿ ದೊಡ್ಡವರದ್ದೇ ಏನೋ ಸಮಸ್ಯೆ ಇದೆ. ಅದಕ್ಕೆ ಎರಡಕ್ಕೆ ಎರಡೂ ವೇರಿಯಬಲ್ ಉಲ್ಟಾ ಹೊಡೆದಿದೆ. ಆದರೆ ಇದನ್ನು ಜನಕ್ಕೆ ಗೋಳಿನ ರೂಪದಲ್ಲಿ, ಅಸಹಾಯಕ ಪರಿಸ್ಥಿತಿಯಲ್ಲಿ ಮೊದಲು ತಾವೇ ಹೇಳಿಬಿಟ್ಟರೆ ಅಲ್ಲಿಗೆ ಅವರು ವಿಕ್ಟಿಮ್ ಆಗಿಬಿಡುತ್ತಾರೆ. ಹೇಳದೇ ಇರುವವರು ವಿಲನ್ನುಗಳು. ಇಂತಹ ಟ್ವಿಸ್ಟೆಡ್ ಸ್ಟೋರೀಸ್‌ಗಳ ಮಹಾಪೂರ ಕೆಲವೊಮ್ಮೆ ಕಿವಿಗೆ ಕೇಳಲು ಸಿಗುತ್ತದೆ. ಎಲ್ಲಿದ್ದರೂ ಒಂದು ಕಥೆ ಹುಡುಕುವ ನನ್ನಂಥವರಿಗೆ ಇದು ಹೇಳಿ ಮಾಡಿಸಿದ ಚಿತ್ರ.

ಆದರೆ ಎರಡನೆಯ ವಾಕಿಂಗ್ ಚಿತ್ರ ಬರೆಯುವಷ್ಟರಲ್ಲೇ ನನ್ನ ವಾಕಿಂಗ್ ನಿಂತು ಹೋಯಿತು. ಮೊದಲನೆಯ ಕಾರಣ ಬೆಂಗಳೂರಿನಲ್ಲಿ ಸುರಿಯುತ್ತಿದ್ದ ಧಾರಾಕಾರ ಮಳೆ. ಬೆಳಗ್ಗೆ, ರಾತ್ರಿ ಯಾವ ವ್ಯತ್ಯಾಸವೂ ಗೊತ್ತಾಗದೇ ಗಡ ಗಡ ನಡುಗುವ ಛಳಿಯಲ್ಲಿ ಬೆಂಗಳೂರು ಮಳೆಯಲ್ಲಿ ನೆಂದಿತ್ತು. ಈ ಧಾರಾಕಾರ ಮಳೆಯಲ್ಲಿ ವಾಕಿಂಗ್ ಬಂದರೆ ಕಷ್ಟ ಎಂದು ಈ ಬಿಬಿಎಂಪಿಯವರು ಪಾರ್ಕಿನ ಗೇಟುಗಳಿಗೆ ಬೀಗ ಹಾಕಿಬಿಟ್ಟಿದ್ದರು. ಇದೊಂಥರ ಮಳೆ ಬಂದರೆ ಏನೂ ಕೆಲಸ ಮಾಡದೇ ಮನೆಯಲ್ಲಿ ಇರಿ ಎಂದು ಹೇಳಿದ ಹಾಗಾಯಿತು. ಇನ್ನೊಂದು ಒಂದು ಹೊಸ ಪುಸ್ತಕ ಬರೆಯಲು ಒಪ್ಪಿಕೊಂಡಿದ್ದು. ದಿನಕ್ಕೆ ಸಲೀಸಾಗಿ 10 ಸಾವಿರ ಸ್ಟೆಪ್ಸ್ ಹಾಕುತ್ತಿದ್ದವಳು ಒಂದಷ್ಟು ಸಾವಿರ ಪದಗಳನ್ನ ಬರೆಯಬೇಕಾದರೆ ಮಾಡುವ ಸರ್ಕಸ್ಸುಗಳು ಒಂದೆರಡಲ್ಲ.

ಬೆಳಗ್ಗೆ ಬೆಳಗ್ಗೆ ಎದ್ದು ಒಂದು ಲೆಕ್ಕಾಚಾರ ಹಾಕಿ ಪ್ಯೂರ್ ಡೇಟಾ ಸೈಂಟಿಸ್ಟ್ ಹಾಗೆ ಒಟ್ಟು ಇಷ್ಟು ಪದಗಳು, ಒಂದು ದಿನಕ್ಕೆ ಇಷ್ಟಾದರೂ ಪದಗಳು ಬರೆಯಬೇಕು, ಅದಕ್ಕೆ ಅಧ್ಯಯನ ಎರಡು ಗಂಟೆ ಬೇಕು, ಹೀಗೆ ಲೆಕ್ಕ ಹಾಕಿಕೊಂಡು ಯಾವ ರೇಂಜಿಗೆ ತಯಾರಾದೆ ಎಂದರೆ ನನ್ನ ಪಿಯೂಸಿ ಎಕ್ಸಾಮಿಗೂ ಈ ರೀತಿ ಟೈಮ್ ಟೇಬಲ್ ಹಾಕಿಕೊಂಡು ಎಕ್ಸೈಟ್ ಆಗಿದ್ದೆ. ಆದರೆ ದಿನಕ್ಕೆ ಇಷ್ಟು ಶಬ್ದಗಳನ್ನು ಬರೆಯಬೇಕು ಎಂಬ ನನ್ನ ಸ್ತ್ರಿಕ್ಟ್ ವಾಕಿಂಗ್ ರೆಜೀಮಿನ ಹಾಗಿನ ಪ್ಲಾನ್ ಎರಡನೇ ದಿನಕ್ಕೆ ಮಟಾಶ್ ಆಯಿತು. ನಡಿಗೆಯಷ್ಟು ಸುಲಭವೇ ಬರಹ? ಒಂದು ಹೆಜ್ಜೆಯ ನಂತರ ಇನ್ನೊಂದು ಹೆಜ್ಜೆ ಬಂದೇ ಬರುತ್ತದೆ. ಆದರೆ ಒಂದು ಪದದ ನಂತರ ಇನ್ನೊಂದು ಪದ ಬರೋಕೆ ಬಹಳ ಸರ್ಕಸ್ ಮಾಡಬೇಕು. ಅಂತಹ ಒಂದು ಸಂದರ್ಭದಲ್ಲಿ ಪುಸ್ತಕ ಬರೆಯಲು ಒಪ್ಪಿಕೊಂಡ ಕೆಲವು ಗೆಳೆಯರು ಪಬ್ಲಿಷರ್ ಜೊತೆ ಮಾತಾಡಿ 20 ದಿನಕ್ಕೆ ಪುಸ್ತಕ ಕೊಟ್ಟು ಬಿಟ್ಟರು. ಎಂತಹ ಲೇಟ್ ಲತೀಫ್ ನಾನು ಎಂದು ಬೈದುಕೊಂಡೆ.

ಇದನ್ನೂ ಓದಿ | ವಾಕಿಂಗ್‌ ಚಿತ್ರಗಳು ಅಂಕಣ: ಸ್ಮಾರ್ಟ್‌ ವಾಚಿಗೆ ಯಾಮಾರಿಸೋ ಪ್ರೋಗ್ರಾಂಗಳು

ನನ್ನ ಗೆಳೆಯನೊಬ್ಬ ಏನ್ ಪ್ರಾಬ್ಲಂ ಎಂದು ಕೇಳಿದಾಗ, “ಮನಸ್ಸಲ್ಲಿ ಆಲೋಚನೆ ಎಲ್ಲಾ ಬರತ್ತೆ ಮಾರಾಯ, ಕಥೇನೂ ತಲೆಯಲ್ಲಿ ಓಡತ್ತೆ, ಆದರೆ ಅದನ್ನ ಅಕ್ಷರರೂಪಕ್ಕಿಳಿಸೋವಾಗ ಬಹಳ ಟೈಮ್ ಲ್ಯಾಗ್ ಆಗತ್ತೆ” ಎಂದು ಹೇಳುತ್ತಿದ್ದೆ. ಒಂದು ರೀತಿ ನನ್ನ ಆಲೋಚನೆಯನ್ನು ಅಕ್ಷರ ರೂಪಕ್ಕಿಳಿಸೋದಕ್ಕೆ ನನಗೊಂದು ಮೆಷೀನ್ ಬೇಕು ಎಂದು ಹೊಳೆಯಿತು. ನಾವು ಯೋಚಿಸಿದ್ದನ್ನು ಮಾತಾಡಿದರೆ ಟೈಪ್ ಮಾಡುವ ಸಾಧನಗಳೇನೋ ಇದೆ. ಆದರೆ ಇಲ್ಲಿ ಅದನ್ನು ಮಾತಿಗೆ ಇಳಿಸುವಾಗಲೂ ತುಂಬಾ ಭಾವನೆಗಳು ಕಳೆದುಹೋಗುತ್ತವೆ. ಹೀಗಿದ್ದಾಗ ನಮ್ಮ ನ್ಯೂರಾನುಗಳು ಮಾಡುವ ಕೆಲಸವನ್ನು ಒಂದು ಮೆಷೀನ್ ಓದಿದರೆ ಎಷ್ಟು ಆರಾಮ್ ಜೀವನ ಅಲ್ಲವೇ.

ಎಂಐಟಿಯ ಜಾಣರು ಇಂತಹ ಒಂದು ಪ್ರಯೋಗವನ್ನು ಮಾಡಿ ಮುಗಿಸಿದ್ದಾರೆ. ಪ್ರೈವೆಸಿಯ ವಯೋಲೇಷನ್ ಎಂದು ಇನ್ನೂ ಬಳಸಲು ಅನುಮತಿ ಸಿಕ್ಕಿಲ್ಲ. ಅವರ ಪ್ರಯೋಗ ಬಹಳ ಅರ್ಥಪೂವಾದದ್ದು. ಮುಖಕ್ಕೆ ಮೌಂಟ್ ಮಾಡಬಹುದಾದ ಒಂದು ಡಿವೈಸ್ ಹಾಕಿ ಅದರಲ್ಲಿರುವ ಎಲೆಕ್ಟ್ರೋಡ್ಸ್, ಮೆದುಳು ಮುಖಕ್ಕೆ ಕಳಿಸುವ ನ್ಯೂರೋ ಮಸ್ಕ್ಯುಲರ್ ಸಂದೇಶಗಳನ್ನು ಅದು ಓದಿ ಅರ್ಥ ಮಾಡಿಕೊಂಡು ಅದನ್ನು ಬರಹವನ್ನಾಗಿ ಮಾರ್ಪಡಿಸುತ್ತದೆ. ಇದು ಹೈ ಫಂಡಾ. ಒಂದೊಂದು ನ್ಯೂರೋ ಮಸ್ಕ್ಯುಲರ್ ಸಂದೇಶ ಒಂದೊಂದು ಮನಸ್ಸಿನ ಚಿತ್ರಗಳಿಗೆ ಮ್ಯಾಪ್ ಆಗಿರುತ್ತದೆ. ಮೊದಲು ಆ ಡೇಟಾವನ್ನು ನಾವು ಕ್ರೋಢೀಕರಿಸಿ ನಂತರ ಒಬ್ಬೊಬ್ಬರ ಮೆದುಳು ಒಂದೊಂದು ರೀತಿ ಕೆಲಸ ಮಾಡುವುದರಿಂದ ಆ ಮಾಹಿತಿಯನ್ನು ಪರ್ಸನಲೈಸ್ ಮಾಡಿದರೆ ಕೆಲಸ ಮುಗಿಯಿತು. ಒಂದು ಡಿವೈಸ್ ಹಾಕಿಕೊಂಡು ಯೋಚನೆ ಮಾಡುತ್ತಾ ಕುಳಿತರೆ ಒಂದು ಕಥೆ ಟಕ್ ಎಂದು ಬರೆಯಬಹುದು. ಅಥವಾ ಬರೆಸಬಹುದು. ಸದ್ಯಕ್ಕೆ 92% ಅಕ್ಯುರೇಟ್ ಆಗಿ ಈ ಡಿವೈಸ್ ಕೆಲಸ ಮಾಡುತ್ತಿದೆ ಮತ್ತು 15 ನಿಮಿಷಗಳ ಕಾಲ ತಪ್ಪಿಲ್ಲದೇ ಕೆಲಸ ಮಾಡಬಲ್ಲದು. ಇದು ಪ್ರಾಯಶಃ ನಮ್ಮ ಬರೆವಣಿಗೆಗೆ ಸಹಾಯ ಆಗುತ್ತದೆ. ನನ್ನ ಡೆಡ್‌ಲೈನಿಗೆ ಅರಾಮಾಗಿ ಸೆಟ್ ಆಗುತ್ತದೆ, ಇದು ಕ್ವಿಕ್ ಫಿಕ್ಸ್ ಎಂದು ಅನ್ನಿಸಿದರೂ, ಇದು ಬಹಳಷ್ಟು ವೈದ್ಯಕೀಯ ಚಿಕಿತ್ಸೆಗಳಿಗೆ ಉಪಯೋಗವಾಗಬಹುದು ಎಂದು ಹೊಳೆಯಿತು.

ಇದನ್ನೂ ಓದಿ | ಸಾಲಭಂಜಿಕೆ ಅಂಕಣ: ಚೋಮನ ದುಡಿಯೂ ನಮ್ಮ ನುಡಿಯೂ

ಎಪಿಲೆಪ್ಸಿ ಪೇಷೆಂಟುಗಳಿಗೆ ಎಲೆಕ್ಟ್ರೋಡುಗಳನ್ನು ನೇರವಾಗಿ ಮೆದುಳಿನ ಮೇಲ್ಮೈಯಲ್ಲಿ ಅಳವಡಿಸಲಾಗುತ್ತದೆ. ವಿಜ್ಞಾನಿಗಳು ಆ ಎಲೆಕ್ಟ್ರೋಡುಗಳನ್ನು ಶ್ರವಣೇಂದ್ರಿಯ ಕಾರ್ಟೆಕ್ಸ್‌ನಲ್ಲಿ ಮೆದುಳಿನ ಅಲೆಗಳನ್ನು ಮೇಲ್ವಿಚಾರಣೆ ಮಾಡುವ ಕೆಲಸಕ್ಕೆ ಬಳಸಿದರು. ಅವರು ಆ ಡೇಟಾವನ್ನು ತೆಗೆದುಕೊಂಡು ಡಿಕೋಡ್ ಮಾಡಲು ಅಲ್ಗಾರಿದಂಗಳನ್ನು ಬಳಸಿದರು. ಮೆದುಳಿನಲ್ಲಿ ಬರುವ ಸಂಕೀರ್ಣ ಸಮಸ್ಯೆಗಳನ್ನು ಅಥವಾ ಏನಾಗಿದೆ ಎಂದು ಅರಿಯಲು ಇನ್ನು ಮುಂದೆ ಈ ವೇರಬಲ್ ಡಿವೈಸ್‌ಗಳನ್ನು ಬಳಸಬಹುದು. ಈಗಾಗಲೇ ಮೈಕ್ರೋಸಾಫ್ಟ್ ತನ್ನ ಕಂಪ್ಯೂಟರ್ ಅಪ್ಲಿಕೇಷನ್ನುಗಳ ವಾಲ್ಯೂಮ್ ಕಡಿಮೆ ಮಾಡಲು ಒಂದು ಕೀ ಒತ್ತದೆ, ಮೌಸ್ ಕ್ಲಿಕ್ ಮಾಡದೇ “ಸೌಂಡ್ ಕಡಿಮೆ ಮಾಡು” ಎಂದು ಮನಸ್ಸಲ್ಲಿ ಅಂದುಕೊಂಡರೆ ಕಡಿಮೆ ಆಗುವಷ್ಟು ಟೆಕ್ನಾಲಜಿಯನ್ನು ತಂದಿದೆ. ಯಾವಾಗಲೂ ನಿಮ್ಮ ಮನಸಲ್ಲಿ ಏನಿದೆ ಎಂದು ಕೇಳುವ ಫೇಸ್‌ಬುಕ್ ನಮ್ಮ ಮನಸ್ಸಲ್ಲಿರುವ ಹೆಸರನ್ನು ತಿಳಿದುಕೊಂಡು ಅದರ ಮೆಸೆಂಜರಿನಲ್ಲಿ ಮೆಸೇಜು ಕಳಿಸುವ ಟೆಕ್ನಾಲಜಿಯನ್ನು ಅಭಿವೃದ್ಧಿ ಪಡಿಸುತ್ತಿದೆ. ಇನ್ನು ನ್ಯೂರಬಲ್ ಎಂಬ ಕಂಪೆನಿ ಒಂದು AR/VR ಡಿವೈಸ್ ಅಭಿವೃದ್ಧಿಪಡಿಸುತ್ತಿದ್ದೆ. ಅದರಲ್ಲಿ ನಾವು ನೋಡುವ ಸಿನಿಮಾದಲ್ಲಿ ವಿಲನ್ ಏನಾದರೂ ಹೀರೋಯಿನ್ನಿಗೆ ಕಾಟ ಕೊಡುತ್ತಿದ್ದರೆ ಅವಳನ್ನು ಕಾಪಾಡಲು ಹೀರೋ ಬರುವ ಮುಂಚೆ, ನಾವೇ ಮನಸ್ಸಲ್ಲಿ, “ಅವನಿಗೆ ಎರಡು ತದುಕು ಎಂದೋ, ಇಲ್ಲ ಹಿಂದೆ ಕಲ್ಲಿದೆ ಅವನ ಮೇಲೆ ಎತ್ತಾಕುʼʼ ಎಂದು ಹೇಳಿದರೆ ಆ ಕೆಲಸ ಪರದೆಯ ಮೇಲೆ ಆಗುತ್ತದೆ.

ಮನಸ್ಸಿನ ಮಾತನ್ನು ಹೇಳದೆಯೇ ಕೇಳಲು ಮತ್ತು ಅರ್ಥ ಮಾಡಿಕೊಳ್ಳಲು ಇನ್ನು ಮುಂದೆ ನಲ್ಲನೇ ಬೇಕಿಲ್ಲ, ಒಂದು ಕಿರೀಟದಂತಿರುವ ಮೆಷೀನು ಸಾಕು !

(ಅಂಕಣಕಾರ್ತಿ ಮೇಘನಾ ಸುಧೀಂದ್ರ ಕೃತಕ ಬುದ್ಧಿಮತ್ತೆ (AI) ವಲಯದಲ್ಲಿ ಉದ್ಯೋಗಿ. ಇವರ ಜಯನಗರದ ಹುಡುಗಿ, ಲಿಪಿಯ ಪತ್ರಗಳು, ಪ್ರೀತಿ ಗೀತಿ ಇತ್ಯಾದಿ, ಎಐ ಕತೆಗಳು ಕೃತಿಗಳು ಜನಪ್ರಿಯವಾಗಿವೆ. ಓದು, ಚಾರಣ, ಶಾಸ್ತ್ರೀಯ ಸಂಗೀತ ಹವ್ಯಾಸಗಳು. ʼಕನ್ನಡ ಗೊತ್ತಿಲ್ಲʼ ಸಂಸ್ಥೆಯಲ್ಲಿ ಕನ್ನಡೇತರರಿಗೆ ಭಾಷೆ ಕಲಿಸುವ ಕಾಯಕದಲ್ಲಿ ಸಕ್ರಿಯರು.)

Exit mobile version