Site icon Vistara News

ಸ್ಮರಣೆ | ಸರ್ದಾರ್‌ ಉಧಮ್‌ ಸಿಂಗ್‌ | ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡದ ಸೇಡಿಗಾಗಿ 21 ವರ್ಷ ಕಾದಿದ್ದ!

udham singh

| ಮಯೂರಲಕ್ಷ್ಮೀ

ಜಲಿಯನ್ ವಾಲಾ ಬಾಗ್ ಹಿಂಸಾಚಾರ ಮತ್ತು ನರಮೇಧ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ನಡೆದ ಅತ್ಯಂತ ಘೋರ ಘಟನೆಗಳಲ್ಲಿ ಒಂದು. ೧೩ ಏಪ್ರಿಲ್ ೧೯೧೯ರಂದು ಜಲಿಯನ್ ವಾಲಾ ಬಾಗ್ ಎನ್ನುವ ಸ್ಥಳದಲ್ಲಿ ಬ್ರಿಟಿಷ್ ಕಾನೂನುಗಳನ್ನು ಕುರಿತು ಚರ್ಚಿಸಲು ಭಾರತದ ನಾಗರೀಕರು ಸಭೆ ಸೇರಿದ್ದರು. ಅಂದಿನ ಗವರ್ನರ್ ಜನರಲ್ ಡಯರ್ ಅಲ್ಲಿ ಸೇರಿದ್ದ ೨೫,೦೦೦ ನಾಗರಿಕರ ಮೇಲೆ ಗುಂಡಿಟ್ಟು ಕೊಲ್ಲಲು ಸೇನೆಗೆ ಆಜ್ಞೆ ನೀಡಿದ. ಆ ಬೃಹತ್ ಸ್ಥಳದ ಎಲ್ಲಾ ದ್ವಾರಗಳನ್ನೂ ಮುಚ್ಚಲಾಯಿತು. ಕೇವಲ ೧೫ ನಿಮಿಷಗಳಲ್ಲಿ ಜನರಲ್ ಡಯರ್ ಎನ್ನುವ ಅಧಿಕಾರಿ ನಡೆಸಿದ ಫೈರಿಂಗ್‌ನಲ್ಲಿ ನೂರಾರು ಜನ ಸ್ಥಳದಲ್ಲೇ ಸತ್ತರು. ಅನೇಕರು ಕಾಲ್ತುಳಿತಕ್ಕೆ ತುತ್ತಾದರು. ಸಾವಿರಾರು ಜನ ಗಾಯಗೊಂಡರು, ಹಿರಿಯರು, ಹೆಂಗಸರು ಮಕ್ಕಳೆಲ್ಲರ ಆಕ್ರಂದನ ಮುಗಿಲು ಮುಟ್ಟಿತು. ಅನೇಕರು ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಅಲ್ಲಿದ್ದ ಬಾವಿಗಳಲ್ಲಿ ಹಾರಿದರು.

ಅಂದು ಅಲ್ಲಿದ್ದವರಿಗೆ ನೀರುಣಿಸಲು ತನ್ನ ಅನಾಥಾಶ್ರಮದ ಸ್ನೇಹಿತರೊಂದಿಗೆ ಬಾಲಕ ಉಧಮ್ ಸಿಂಗ್ ಆ ಸಭೆಗೆ ಬಂದಿದ್ದ. ಅಮಾನುಷ ರೀತಿಯಲ್ಲಿ ಬಲಿಯಾದ ತನ್ನವರನ್ನು ಕಂಡು ಮರುಗಿದ. ಯಾರಿಗೂ ಕಾಣದಂತೆ ಅಡಗಿಕೊಂಡು ಪ್ರಾಣಾಪಾಯದಿಂದ ತಪ್ಪಿಸಿಕೊಂಡ. ಬ್ರಿಟಿಷರ ವಿರುದ್ಧ ಸೇಡನ್ನು ತೀರಿಸಿಕೊಳ್ಳಲು ಅಂದೇ ಪಣ ತೊಟ್ಟ. ಈ ಕೃತ್ಯಕ್ಕೆ ಕಾರಣನಾದ ಡಯರ್‌ನ ಮೇಲೆ ಸೇಡನ್ನು ತೀರಿಸಿಕೊಂಡೇ ಸಾಯುವೆ ಎಂದು ತನ್ನ ಮಾತೃಭೂಮಿಯ ಮೇಲೆ ಆಣೆ ಮಾಡಿದ.

ಆದರೆ ಜನರಲ್ ಡಯರ್ ಮತ್ತು ಪೋಲೀಸ್ ಅಧಿಕಾರಿ ಡಯರ್ ಮೇಲೆ ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಭಾರತದಲ್ಲಿ ಸೇವಾ ಅವಧಿ ಮುಗಿಸಿದ ನಂತರ ಡಯರ್‌ನನ್ನು ಉನ್ನತ ಹುದ್ದೆಯ ಮೇರೆಗೆ ಲಂಡನ್ನಿಗೆ ಕಳುಹಿಸಲಾಯಿತು. ಆದರೆ ಉಧಮ್ ಸಿಂಗ್ ಅವನನ್ನು ಮರೆಯಲಿಲ್ಲ. ಮುಂದೆ ಡಯರ್ ಎನ್ನುವ ವಿಕೃತ ಮನಸ್ಸಿನ ಆಂಗ್ಲನನ್ನು ಕೊಲ್ಲುವುದಾಗಿ ಪಣ ತೊಟ್ಟ ಆ ಬಾಲಕ.

ಡಿಸೆಂಬರ್ ೨೬, ೧೮೯೯ರಲ್ಲಿ ಪಂಜಾಬಿನ ಸಂಗ್ರೂರ್ ಜಿಲ್ಲೆಯ ಸುನಮ್ ಗ್ರಾಮದ ಕಾಂಬೋಜ್ ಪರಿವಾರದಲ್ಲಿ ಜನಿಸಿದ ಉಧಮ್ ಸಿಂಗ್ ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ. ಉಧಮ್ ಮತ್ತು ಅವನ ಸಹೋದರ ಅಮೃತಸರದ ಅನಾಥಾಲಯವೊಂದರಲ್ಲಿ ಬೆಳೆದರು. ಉಧಾಮನ ಮೇಲೆ ಜಲಿಯನ್ ವಾಲಾ ಹತ್ಯಾಕಾಂಡ ತೀವ್ರ ಪರಿಣಾಮ ಬೀರಿತು. ತನ್ನ ಸೇಡಿಗಾಗಿ ಗುರಿ ಸಾಧನೆಗಾಗಿ ಉಧಮ್ ಸಿಂಗ್ ಕಾದದ್ದು ಬರೋಬ್ಬರಿ ೨೧ ವರ್ಷಗಳು.

ಮುಂದೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ನಂತರ ತನ್ನ ಸೇಡು ತೀರಿಸಿಕೊಳ್ಳಲು ಲಂಡನ್ನಿಗೆ ತೆರಳುವ ಯೋಜನೆಯಿತ್ತು. ಪಂಜಾಬಿನ “ಗದಾರ್” ಸಂಘಟನೆ ಮತ್ತು ಕ್ರಾಂತಿಕಾರಿಗಳ ನೆರವಿನಿಂದ ದೇಣಿಗೆ ಸಂಗ್ರಹಿಸಿ ಮೊದಲು ದಕ್ಷಿಣ ಆಫ್ರಿಕಾ ಸೇರಿ, ರೈಲ್ವೇ ಕಾರ್ಮಿಕನಾಗಿ ದುಡಿದು ಅಮೆರಿಕ ತಲುಪಿದ. ಹಡಗುಗಳಲ್ಲಿ ಬಡಗಿಯ ಕೆಲಸ ಮಾಡಿ ಪೋಲ್ಯಾಂಡ್, ಜರ್ಮನಿ, ಹಾಲೆಂಡ್, ಇಟಲಿ ದೇಶಗಳಲ್ಲಿ ತಿರುಗಿ ಕೊನೆಗೆ ೧೦೩೩ರಲ್ಲಿ ಲಂಡನ್ ತಲುಪಿದ. ಹೆಸರು, ವೇಷ-ಭೂಷಣ ಬದಲಿಸಿ ಯಾರಿಗೂ ಅನುಮಾನ ಬರದಂತೆ ಲಂಡನ್ನಿನಲ್ಲಿ ಹಗಲೂ-ರಾತ್ರಿ ದುಡಿದು ಹಣ ಹೊಂದಿಸಿಕೊಂಡು ಪಿಸ್ತೂಲು ಕೊಂಡದ್ದಾಯಿತು.

೧೩ ಮಾರ್ಚ್, ೧೯೪೦ ಕಾಕ್ಸ್‌ಟನ್ ಹಾಲ್, ಲಂಡನ್. ಈಸ್ಟ್ ಇಂಡಿಯಾ ಅಸೋಸಿಯೇಷನ್ ಮತ್ತು ರಾಯಲ್ ಸೆಂಟ್ರಲ್ ಏಷಿಯಾ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ಸಭೆ ನಡೆದಿತ್ತು. ಲಾರ್ಡ್ ಜೆಟ್‌ಲ್ಯಾಂಡ್ ಅಧ್ಯಕ್ಷತೆಯಲ್ಲಿ ಜಗತ್ತಿನ ವಿದ್ಯಮಾನಗಳ ಚರ್ಚೆಯಾಗುತ್ತಿತ್ತು. ಭಾಷಣಗಳ ನಂತರ ವಿಶೇಷವಾಗಿ ಸನ್ಮಾನ ಸಮಾರಂಭವೂ ಇತ್ತು. ಅಂದಿನ ಸನ್ಮಾನಿತ ಸರ್ ಮೈಕಲ್ ಓ’ ಡಯರ್ ಭಾರತದಲ್ಲಿ ಅಧಿಕಾರಿಯಾಗಿದ್ದಾಗ ತಾನು ಮಾಡಿದ ಸಾಧನೆಗಳನ್ನು ಕುರಿತು ಬೀಗುತ್ತಾ ಮಾತನಾಡಿದ. ಮುಖ್ಯ ಭಾಷಣಕಾರರ ಮಾತುಗಳು ಮುಗಿದ ನಂತರ ಅವನಿಗೆ ಸನ್ಮಾನ.

ಇದನ್ನೂ ಓದಿ | ಸ್ಮರಣೆ | ಸ್ವದೇಶೀ ಚಿಂತನೆಯ ಹರಿಕಾರ ರಾಜೀವ್ ದೀಕ್ಷಿತ್

ಸನ್ಮಾನ ಮತ್ತು ವಂದನಾರ್ಪಣೆಯ ಬಳಿಕ ಎಲ್ಲರೂ ಹೊರಡಲನುವಾದರು. ಡಯರ್‌ನ ಹಿಂದೆ ಸುಮಾರು ಮೂರು ಗಜಗಳಷ್ಟು ಅಂತರದಲ್ಲಿದ್ದ ಉಧಮ್ ಮಿಂಚಿನ ವೇಗದಲ್ಲಿ ಅವನೆದುರಾಗಿ ನಿಂತ. ನಿಶ್ಚಿತ ಗುರಿಯಿಟ್ಟು ಪಿಸ್ತೂಲಿನಿಂದ ಅವನ ಮೇಲೆ ಗುಂಡು ಹಾರಿಸಿದ. ಡಯರ್ ನೆಲಕ್ಕುರುಳಿದ. ರಕ್ತದ ಮಡುವಲ್ಲಿ ಬಿದ್ದ. ಎದುರು ಬಂದವರತ್ತ ಪಿಸ್ತೂಲು ಗುರಿಯಿಟ್ಟು ಉಧಮ್‌ ದೂರ ಸರಿಯಲು ಹೇಳಿದ. ಲಾರ್ಡ್ ಜೆಟ್‌ಲ್ಯಾಂಡ್ ಸೇರಿದಂತೆ ಮೂವರು ಗಾಯಗೊಂಡರು. ಕೆಲಸ ಮುಗಿದಿತ್ತು. ಸಾವಿರಾರು ಮುಗ್ಧ ಜನರ ನರಮೇಧ ನಡೆದ ಹತ್ಯಾಕಾಂಡದ ರೂವಾರಿ ಡಯರನ ವಧೆಯಾಯಿತು.

ಉಧಮ್‌ ಸಿಂಗ್ ಸ್ವಲ್ಪವೂ ಹೆದರದೆ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡದೆ ತಾನೇ ಮುಂದೆ ಬಂದು ತನ್ನ ಕೃತ್ಯವನ್ನು ಒಪ್ಪಿಕೊಂಡು ಕೈಸೆರೆಯಾದ. ಅವನನ್ನು ಬ್ರಿಕ್ಸ್‌ಟನ್ ಜೈಲಿನಲ್ಲಿರಿಸಲಾಯಿತು. ಕಾನೂನು ರೀತ್ಯಾ ಮೊಕದ್ದಮೆ ನಡೆಯಿತು. ಜೂನ್ ೫ರಂದು ಅವನ ಅಂತಿಮ ಹೇಳಿಕೆಯನ್ನು ಪಡೆಯಲಾಯಿತು. ಸಾವಿರಾರು ಮುಗ್ಧರ ಹರಣಕ್ಕೆ ಕಾರಣನಾಗಿದ್ದ ಡಯರನ ಕೊಲೆ ತನ್ನ ಅಂತಿಮ ಗುರಿಯೆಂದು ವಾದಿಸಿದ. ಗುರಿ ತಲುಪಲು ೨೧ ವರ್ಷಗಳೇನು ಇಡೀ ಜನ್ಮವೇ ಕಾದಿದ್ದರೂ ಸೇಡನ್ನು ತೀರಿದ ನಂತರವೇ ಸಾಯುತ್ತಿದ್ದೆ ಎಂದ.

ವಿಶ್ವದೆಲ್ಲೆಡೆ ಅದರದೇ ಚರ್ಚೆಯಾಯಿತು. ಜರ್ಮನ್ ಪತ್ರಿಕೆಯೊಂದರಲ್ಲಿ ಅವನನ್ನು ಭಾರತದ ಸ್ವಾತಂತ್ರ್ಯದ ಕನಸಿನ ಹೊಸ ಬೆಳಕು ಎಂದು ಹೊಗಳಿ ಬರೆದರು. ೧೯೪೦, ಜುಲೈ ೩೧ರಂದು ೩೦ ವರ್ಷಗಳ ಹಿಂದೆ ಮದನ್ ಲಾಲ್ ಡಿಂಗ್ರಾರನ್ನು ಗಲ್ಲಿಗೇರಿಸಿದ್ದ ಪೆಂಟೋವಿಲ್ಲೇ ಸೆರೆಮನೆಯಲ್ಲಿ ಸರ್ದಾರ್ ಉಧಮ್ ಸಿಂಗ್‌ನನ್ನು ಗಲ್ಲಿಗೇರಿಸಲಾಯಿತು. ಭಾರತದ ಕೆಚ್ಚೆದೆಯ ಕ್ರಾಂತಿಕಾರಿ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಅಂತಿಮ ಬಲಿದಾನಿ ಉಧಮ್ ಸಿಂಗ್ ಅಸ್ತಂಗತನಾದ.

ಇದನ್ನೂ ಓದಿ | ಖುದಿರಾಮ್ ಬೋಸ್ ಸ್ಮರಣೆ | ಸ್ವಾತಂತ್ರ್ಯ ಸಂಗ್ರಾಮದ ಕಿರಿಯ ಬಲಿದಾನಿ

Exit mobile version