| ಡಾ. ಡಿ.ಸಿ. ರಾಮಚಂದ್ರ
ʼನೀ ಹೀಂಗ ನೋಡಬ್ಯಾಡ ನನ್ನ, ನೀ ಹೀಂಗ ನೋಡಿದರೆ ನನ್ನ, ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ..ʼ ಎಂದು ನೋವನ್ನು ಸಹ ಕಾವ್ಯಮಯ ಮಾಡಿದ ಶ್ರೇಷ್ಠ ಗ್ರಾಮೀಣ ಸೊಗಡಿನ ಕುಂದಾನಗರಿಯ ಕವಿ ದ.ರಾ.ಬೇಂದ್ರೆ. ವರಕವಿ ದ.ರಾ.ಬೇಂದ್ರೆಯವರು ಜೀವನದಲ್ಲಿ ನೊಂದು, ಬೆಂದು ಬಳಲಿದವರಾದರೂ ಕಾವ್ಯದ ಮೂಲಕವಾಗಿ ಮಿಂಚಿದ ರತ್ನ. ಜೀವನದಲ್ಲಿ ಮಕ್ಕಳ ಸಾವು, ಪತ್ನಿಯ ಸಾವು ಬೆಂದ್ರೆಯವರಿಗೆ ಅತೀವ ದುಃಖವನ್ನುಂಟು ಮಾಡಿದವು. ಆದರೂ ಇದಾವುದಕ್ಕೂ ಧೃತಿಗೆಡದೆ ಕೊರತೆಯ ಬದುಕಿನಲ್ಲಿಯೇ ಅಪಾರವಾದ ಶ್ರೇಷ್ಠ ಸಾಹಿತ್ಯ ಸಂಪತ್ತನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಬೇಂದ್ರಯವರಿಗೆ ಸಲ್ಲುತ್ತದೆ.
ಬಾಲ್ಯದ ಬೇಂದ್ರೆ
“ಕಷ್ಟಗಳು ಎಷ್ಟೇ ಬರಲಿ ಅವುಗಳನ್ನು ಯಾರಿಗೂ ಹೇಳದೆ ನನ್ನ ಪಾಡೇ ನನಗಿರಲಿ, ಅದರ ಹಾಡಿನಷ್ಟೇ ನೀಡುವೆ ನಿನಗೆ ಓ..ರಸಿಕಾ” ಎಂದು ಹೇಳುವ ಮೂಲಕ ಜನರ ಹೃದಯ ಗೆದ್ದ ಸಹೃದಯಿ ಕವಿ ಬೇಂದ್ರೆಯವರು.
ಆಡಿಕೆಯ ಮಾತುಗಳನ್ನೇ ಕಾವ್ಯದಲ್ಲಿ ಪಳಗಿಸಿದ ಸಾಹಿತಿ ದ.ರಾ.ಬೇಂದ್ರೆಯವರು 31 ಜನವರಿ 1886 ರಂದು ಉತ್ತರ ಕರ್ನಾಟಕದ ಧಾರವಾಡದಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಇವರ ತಂದೆ ರಾಮಚಂದ್ರ ಬೇಂದ್ರೆ, ತಾಯಿ ಅಂಬವ್ವ. ಬೇಂದ್ರೆಯವರು ವೈದಿಕ ಮನೆತನದಲ್ಲಿ ಹುಟ್ಟಿ ಉತ್ತಮ ಸಂಸ್ಕಾರವನ್ನು ಪಡೆದರು. ಧಾರವಾಡವೇ ಬೇಂದ್ರೆಯವರ ಜನ್ಮಭೂಮಿ, ಕರ್ಮಭೂಮಿ, ಧರ್ಮಭೂಮಿ ಹಾಗೂ ಸಿದ್ಧಿಯ ಕ್ಷೇತ್ರವೂ ಆಯಿತು.
ತಾಯಿ ಹೆಸರೇ ಕಾವ್ಯನಾಮ
ಅಂಬಿಕೆಯ ತನಯ ತಾನು ದತ್ತ ಎಂದು ಹೇಳಿಕೊಂಡು ಕಾವ್ಯನಾಮವನ್ನು ಅಂಬಿಕಾತನಯದತ್ತ ಎಂದಿಟ್ಟುಕೊಂಡರು. ನಂತರದ ದಿನಗಳಲ್ಲಿ ಕನ್ನಡ ಸಾಹಿತ್ಯದಲ್ಲಿನ ಕೆಲವೇ ಶ್ರೇಷ್ಠ ಕವಿಗಳಲ್ಲಿ ಬೇಂದ್ರೆಯವರು ಒಬ್ಬರೆನಿಸಿದರು. ಆಡು ಭಾಷೆಯಲ್ಲಿ ಸುಲಲಿತವಾದ ಶೈಲಿಯಲ್ಲಿ ಕಾವ್ಯವನ್ನು ರಚಿಸುವ ಮೂಲಕ ಧೀಮಂತ ಕವಿ ಎಂಬ ಕೀರ್ತಿಗೆ ಪಾತ್ರರಾದರು. ಧಾರವಾಡದಲ್ಲಿಯೇ 1902ರಲ್ಲಿ ಕನ್ನಡ ಶಾಲೆ ಪ್ರವೇಶಿಸಿದ ಬೇಂದ್ರೆಯವರು ಮುಂದೆ 1913ರಲ್ಲಿ ಮೆಟ್ರಿಕ್ ಪೂರೈಸಿ ನಂತರ ಮಹಾರಾಷ್ಟ್ರದ ಪುಣೆ ನಗರದ ಫರ್ಗ್ಯುಸನ್ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದು ಮತ್ತೆ ಧಾರವಾಡಕ್ಕೆ ಮರಳಿದರು. ನಂತರದ ದಿನಗಳಲ್ಲಿ ಎಂ.ಎ ಪದವಿಯನ್ನು ಪಡೆದು ಧಾರವಾಡದ ವಿಕ್ಟೋರಿಯಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ಅದೇ ಸಂದರ್ಭದಲ್ಲಿ ಉತ್ತಮ ಸಾಹಿತ್ಯ ರಸಿಕರ ಬಳಗವನ್ನು ಕಟ್ಟಿದರು. ಅದು ಗೆಳೆಯರ ಬಳಗವೆಂದೇ ಹೆಸರು ಗಳಿಸಿತ್ತಲ್ಲದೆ, ಈ ಬಳಗದಿಂದ ಹಲವಾರು ಮಹನೀಯರು ಸಾಹಿತ್ಯ ದಿಗ್ಗಜರೆನಿಸಿದರು.
ನಾಕುತಂತಿಗೆ ಗೌರವ
ವಿದ್ಯಾಭ್ಯಾಸದ ಸಂದರ್ಭದಲ್ಲೇ ಕನ್ನಡ ಸಾಹಿತ್ಯದಲ್ಲಿ ಅಪಾರ ಒಲವನ್ನು ಹೊಂದಿದ್ದ ಬೇಂದ್ರೆಯವರು ಕಾವ್ಯವನ್ನು ಲೀಲಾಜಾಲವಾಗಿ ರಚಿಸಿದರು. ಕನ್ನಡ, ಇಂಗ್ಲೀಷ್, ಮರಾಠಿ, ಸಂಸ್ಕೃತ ಭಾಷೆಗಳಲ್ಲಿ ಒಟ್ಟು 67 ಕೃತಿಗಳನ್ನು ರಚಿಸಿದ್ದಾರೆ. ಬೇಂದ್ರೆಯವರು ರಚಿಸಿದ ನಾಕುತಂತಿ ಕವನ ಸಂಕಲನವು 1947ರಲ್ಲಿ ಕನ್ನಡ ಭಾಷೆಗೆ ಎರಡನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿತು. ಈ ಕವನ ಸಂಕಲನದಲ್ಲಿ ಆತ್ಮ, ಅಧ್ಯಾತ್ಮ, ಲೌಕಿಕ, ಪಾರಮಾರ್ಥಿಕ, ಕೃಷಿ, ರಾಜಕೀಯ ಇತ್ಯಾದಿ ದ್ವಂದ್ವಗಳನ್ನು ಕಲಾತ್ಮಕವಾಗಿ ಬಿಂಬಿಸಿದ್ದಾರೆ. ಬೇಂದ್ರೆಯವರ ಕೃತಿಗಳಲ್ಲಿ ಒಂದೊಂದೂ ವಿವಿಧ ವಿಶೇಷಗಳಾಗಿ ಮೂಡಿಬಂದು ಜನಮನ್ನಣೆ ಗಳಿಸಿವೆ. ಅವುಗಳಲ್ಲಿ ಪ್ರಮುಖವಾದವು ಗರಿ, ನಾಕುತಂತಿ, ನಾದಲೀಲೆ, ಅರಳು-ಮರಳು, ಸಾಯೋ ಆಟ, ದೆವ್ವದ ಮನೆ, ಜಾತ್ರೆ ಮುಂತಾದವು ತುಂಬಾ ಪ್ರಸಿದ್ಧವಾಗಿವೆ.
ಬಡತನದ ಹೂವು
ಬೇಂದ್ರೆಯವರು “ಬೆಂದು ಬೆಂಡಾದವರು ಬೇಂದ್ರೆ” ಎಂದು ಒಂದು ಕಡೆ ಹೀಗೆ ತಿಳಿಸಿದ್ದಾರೆ. ಬಡತನದಲ್ಲಿ ಬೆಂದವರೇ ವರಕವಿ ಬೇಂದ್ರೆ ಎಂಬುದು ಈ ಮೇಲಿನ ಮಾತಿನಿಂದ ತಿಳಿದು ಬರುವುದು. ಅವರ ಅನೇಕ ಕವನಗಳಲ್ಲಿ ಸಹ ದುಃಖದ ಅನುಭವ ಉಂಟಾಗುವುದು. ಆದರೆ ಬೇಂದ್ರೆಯವರ ಕಾವ್ಯದ ಸೆಲೆಯೆಂದರೆ ಆಧ್ಯಾತ್ಮವಾಗಿರುವುದು. ಆರಂಭಿಕ ಕವನಗಳಲ್ಲಿ ಮುಗ್ಧ ಕವಿಯ ಭಾವ ಕಂಡರೂ ಅಂತ್ಯದಲ್ಲಿ ಸಾಕ್ಷಾತ್ಕಾರ ಕಂಡು ಬರುವುದು ಅವರ್ಣನೀಯವಾಗಿದೆ.
ಸಂದ ಪುರಸ್ಕಾರಗಳಿವು
ಕನ್ನಡ ನಾಡಿನ ಜನರ, ಸಾಹಿತಿಗಳ ನಾಲಿಗೆಯಲ್ಲಿ ಸದಾ ನೆನೆಯಲ್ಪಡುವಂತಹ ಕವಿಯಾದ ಬೇಂದ್ರೆಯವರಿಗೆ 1959ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1965ರಲ್ಲಿ ಕೇಳ್ಕರ ಪ್ರಶಸ್ತಿ, 1966ರಲ್ಲಿ ಸಾಹಿತ್ಯ ಆಚಾರ್ಯ ಪ್ರಶಸ್ತಿ, 1968ರಲ್ಲಿ ಪದ್ಮಶ್ರೀ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಇನ್ನೂ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಕನ್ನಡ ಸಾಹಿತ್ಯ ಪರಿಷತ್ತು ಬೇಂದ್ರೆಯವರನ್ನು 1943ರಲ್ಲಿ ಶಿವಮೊಗ್ಗದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಅವರನ್ನು ಗೌರವಿಸಿತು.
ಸಾಹಿತ್ಯ ಕೃಷಿ
ಬೇಂದ್ರೆ ಬರೆದ ಸಾಹಿತ್ಯ ವಿಪುಲವೂ ಹೆಚ್ಚು ಮೌಲಿಕವೂ ಆಗಿದೆ. ಅವರಿಗೆ ‘ಕಾವ್ಯವೇ ಜೀವನ, ಜೀವನವೇ ಕಾವ್ಯ’ವಾಗಿತ್ತು. 1922ರಿಂದ 1981ರ ಅವಧಿಯಲ್ಲಿ ಬೇಂದ್ರೆ 29 ಕವನ ಸಂಗ್ರಹಗಳನ್ನೂ, 9 ವಿಮರ್ಶಾ ಗ್ರಂಥಗಳನ್ನು, 14 ನಾಟಕಗಳನ್ನು, 1 ಕಥಾ ಸಂಕಲನವನ್ನು, 2 ಉಪನ್ಯಾಸ ಸಂಗ್ರಹಗಳನ್ನು, 7 ಅನುವಾದ ಕೃತಿಗಳನ್ನು, 5 ಮರಾಠಿ ಗ್ರಂಥಗಳನ್ನು, 1 ಇಂಗ್ಲೀಷ್ ಕೃತಿಯನ್ನು ಹೀಗೆ ಒಟ್ಟು 67 ಕೃತಿಗಳನ್ನು ಬರೆದಿದ್ದಾರೆ. ಸಂವಾದ, ವಿಠ್ಠಲ ಸಂಪ್ರದಾಯ, ಶಾಂತಲಾ ಇವು ಮರಾಠಿ ಕೃತಿಗಳು. ಬೇಂದ್ರೆ ಅವರು ಅಣಕವಾಡುಗಳನ್ನೂ, ನಗೆ ಬರಹಗಳನ್ನೂ ಸಹ ರಚಿಸಿದ್ದಾರೆ.
ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದ್ದಾರೆ.
ಅಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳಿಗೆ ನಾದಮಾಧುರ್ಯ ಅಪಾರ. ಇವರು ಬರೆದ ‘ಪಾತರಗಿತ್ತಿ ಪಕ್ಕ ನೋಡಿದ್ದೇನ ಅಕ್ಕ’ ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿ ಪಾತ್ರ ಕವನವಾಗಿದೆ.
ಗಣಿತದ ಲೆಕ್ಕಾಚಾರ ಮಾಡುತ್ತ ಬಾಳೆಹಣ್ಣಿನ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿನಲ್ಲಿ, ನಿಮ್ಮ ಕಿರುಬೆರಳಿನ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ ಎಲ್ಲೆಲ್ಲೂ ಲೆಕ್ಕಾಚಾರವಿದೆ ಅನ್ನುತ್ತಾ ಕೊನೆ ಕೊನೆಗೆ ದ.ರಾ.ಬೇಂದ್ರೆಯವರು ಗಣಿತದ ಲೆಕ್ಕಾಚಾರದಲ್ಲೇ ಮುಳುಗಿದ್ದರು. ಇವರನ್ನು ‘ಕನ್ನಡದ ಠಾಗೋರ್’ ಎಂದು ಕರೆಯಲಾಗುತ್ತದೆ. ನಮ್ಮ ಬೇಂದ್ರೆಯವರಿಗೆ ಸಂಖ್ಯೆಗಳು ಹೊಸ ಲೋಕವೊಂದನ್ನು ತೆರೆದಿದ್ದವು. ಬೇಂದ್ರೆ ಮನಸ್ಸಿಗೆ 441 ಹಾಗೂ ಹೃದಯಕ್ಕೆ 881 ಎಂದು ಸಂಖ್ಯೆ ನೀಡಿದ್ದರು.
ಇದನ್ನೂ ಓದಿ: ಸ್ಮರಣೆ | ಕನ್ನಡದ ಕಣ್ವ ಬಿ.ಎಂ ಶ್ರೀಕಂಠಯ್ಯ
ಧಾರವಾಡದಿಂದ ಪ್ರಕಟಗೊಳ್ಳುತ್ತಿದ್ದ ‘ಸ್ವಧರ್ಮ’ ಎನ್ನುವ ಪತ್ರಿಕೆಯಲ್ಲಿ ಮೊದಲು ಪ್ರಕಟಗೊಂಡ ‘ಬೆಳಗು’ ಕವಿತೆಯು, 1932 ರಲ್ಲಿ ಪ್ರಕಟಗೊಂಡ ಬೇಂದ್ರೆಯವರ ‘ಗರಿ’ ಸಂಕಲನದಲ್ಲಿದೆ. ಅದರಲ್ಲಿ ಮೊದಲ ಕವನವಾದ ಈ ಕವಿತೆಯು ರಚನೆಗೊಂಡಿದ್ದು 1919ರಲ್ಲಿ. ಇದು 2019ರಲ್ಲಿಯೂ ಪ್ರಸಿದ್ಧವಾಗಿದೆ.
ಸಣ್ಣಕತೆಗಳ ಜನಕ
ನಾಡಿನ ತುಂಬೆಲ್ಲಾ ನಡೆದಾಡಿದ ಅವರಲ್ಲಿರುವಂತಹ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೆ ಶ್ರೀಮಂತಗೊಳಿಸಿವೆ ಎಂದರೆ ತಪ್ಪಾಗಲಾರದು. ಇಡೀ ಜೀವನದ ತುಂಬಾ ನಿಸ್ವಾರ್ಥ ಸೇವೆಗೈದ ‘ಧಾರವಾಡದ ಅಜ್ಜ’ ಅವರ ಕೆಲವೊಂದು ಮಕ್ಕಳ ಕವಿತೆಗಳು, ಕತೆಗಳು ಮಕ್ಕಳ ಮನಸ್ಸನ್ನು ಪರಿವರ್ತಿಸುತ್ತಿವೆ.
ಬೇಂದ್ರೆಯವರು 1981, ಅಕ್ಟೋಬರ್‌ನ ನರಕ ಚತುರ್ದಶಿಯ ದಿನ ಮುಂಬೈನ ಹರಕಿಶನ್ ದಾಸ್ ಆಸ್ಪತ್ರೆಯಲ್ಲಿ ವಿಧಿವಶರಾದರು. ಬೇಂದ್ರೆಯವರು ನಮ್ಮಿಂದ ಭೌತಿಕವಾಗಿ ದೂರವಾಗಿದ್ದರೂ, ಕಾವ್ಯದ ಮೂಲಕ ಇನ್ನೂ ಜೀವಂತವಾಗಿದ್ದಾರೆ. ಸರ್ಕಾರವು ಸಹ ಬೇಂದ್ರೆಯವರ ಕವನಗಳನ್ನು ಶಾಲಾ ಪಠ್ಯದಲ್ಲಿ ಅಳವಡಿಸುವ ಮೂಲಕ ಗೌರವ ಸೂಚಿಸಿರುವುದು ಸ್ವಾಗತಾರ್ಹವಾಗಿದೆ. ಅದರ ಜೊತೆಗೆ ಅವರ ಅಮೂಲ್ಯದ ಕೃತಿಗಳನ್ನು ಮುದ್ರಿಸಿ ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರವು ಗಮನಹರಿಸಿದರೆ ಬೇಂದ್ರೆ ಅಜ್ಜನಿಗೆ ಸಲ್ಲಿಸುವ ನಿಜ ಗೌರವ.
ಇದನ್ನೂ ಓದಿ: ಸ್ಮರಣೆ: ಧೀಮಂತ ನೇತಾರ ಲಾಲಾ ಲಜಪತ್ ರಾಯ್