Site icon Vistara News

ಮೊಗಸಾಲೆ ಅಂಕಣ: ಆ ಕರಾಳ ದಿನಗಳ ಮರೆತೇನೆಂದರೆ ಮರೆಯಲಿ ಹ್ಯಾಂಗ?

indira gandhi

ಮರೆತೇನೆಂದರೂ ಮರೆಯಲಿ ಹ್ಯಾಂಗಾ…. ಚಂದ್ರಶೇಖರ ಕಂಬಾರರ ಬಹುಚರ್ಚಿತ ಕವನವೊಂದರ ಪ್ರಸಿದ್ಧ ಸಾಲು ಇದು. ರಾಜಶಾಹಿಯಾಗಿದ್ದ ಚೀನಾವನ್ನು ಕಮ್ಯೂನಿಸ್ಟ್ ದೇಶವನ್ನಾಗಿಸಿದ ಮಾವೋತ್ಸೆ ತುಂಗ್‍ರನ್ನು ಕುರಿತ ಪದ್ಯದ ಮೊದಲ ಸಾಲು. ಈ ಲೇಖನಕ್ಕೂ ಮಾವೋ ಅಥವಾ ಚೀನಾಕ್ಕೂ ಚೂರೂ ಸಂಬಂಧವಿಲ್ಲ. ಈ ಸಾಲು ಇಲ್ಲಿ ಈಗ ನೆನಪಿನಂಗಳದ ಅಂಚಿಗೆ ಬಂದು ನಿಂತಿರುವುದಕ್ಕೆ ಕಾರಣ ಭಾರತ ಕಂಡು ಅನುಭವಿಸಿದ ಎಮರ್ಜೆನ್ಸಿ ಯಾನೆ ತುರ್ತು ಪರಿಸ್ಥಿತಿ. ಸ್ವತಂತ್ರ ಭಾರತ ಕಂಡ ಅನಾಗರಿಕ ಅವಸ್ಥೆ ಎಮರ್ಜೆನ್ಸಿ (Emergency). ಅಲಹಾಬಾದ್ ಹೈಕೋರ್ಟ್ (Allahabad high court) ನೀಡಿದ ತೀರ್ಪೊಂದು ಅಂತಿಮವಾಗಿ ದೇಶವನ್ನು ಬಯಲು ಬಂದೀಖಾನೆಯನ್ನಾಗಿಸಲು ಅಂದಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರಿಗೆ ನೆಪವಾಗಿದ್ದು ಕರಾಳ ಅಧ್ಯಾಯದ ಮೊದಲ ಪುಟ. ನಾಳೆ 24ಕ್ಕೆ ತುರ್ತು ಪರಿಸ್ಥಿತಿ ಎಂಬ ಕರಾಳ ಶಾಸನ ಈ ಭಾರತದ ಮೇಲೆ ವಕ್ಕರಿಸಿ 49 ವರ್ಷ. ಮರೆತೇನೆಂದರೂ ಮರೆಯಲಿ ಹ್ಯಾಂಗಾ…

1974ರ ಜೂನ್ 24-25ರ ನಡುರಾತ್ರಿ ತುರ್ತು ಪರಿಸ್ಥಿತಿ ಘೋಷಣೆಯಾಯಿತು. ಅಲ್ಲಿಂದ ಮುಂದಕ್ಕೆ ಬರೋಬ್ಬರಿ 21 ತಿಂಗಳು ಇಡೀ ಭಾರತದ ಜನತಂತ್ರಕ್ಕೆ ಕತ್ತಲ ಶಕೆ. 25ರ ಬೆಳಗಿನ ಝಾವದ ಹೊತ್ತಿಗೆ ಸಹಸ್ರ ಸಹಸ್ರ ಜನ ಜೈಲೊಳಗೆ ಬಂಧಿಯಾಗಿದ್ದರೆ, ಕೋಟ್ಯಂತರ ಜನ ಉಸಿರುಗಟ್ಟಿದ ಸ್ಥಿತಿಯಲ್ಲಿ ಮುಂದಿನ ಅವಧಿ ಕಳೆದರು. ದೇಶಕ್ಕೆ ಆಂತರಿಕ ಗಂಡಾಂತರ ಎದುರಾಗಿದೆ ಎನ್ನುವುದು ಇಂದಿರಾ ಮತ್ತು ಅವರ ಪರಿವಾರದ ನಿಲುವಾಗಿತ್ತು. ತಾವು ಕುಳಿತಿದ್ದ ಸಿಂಹಾಸನ ಅದುರುತ್ತಿರುವುದರ ಸುಳಿವು ಹಿಡಿದ ಇಂದಿರಾ, ಅದು ದೇಶದ ಸ್ವಾತಂತ್ರ್ಯಕ್ಕೆ, ಸಾರ್ವಭೌಮತ್ವಕ್ಕೆ ಎದುರಾಗಿರುವ ಗಂಡಾಂತರ ಎಂದು ವ್ಯಾಖ್ಯಾನಿಸಿದರು. ಸ್ವತಂತ್ರ ಭಾರತವನ್ನು ಮತ್ತು ಅದರ ಸಾರ್ವಭೌಮತ್ವವನ್ನು ಕಾಪಾಡಲೆಂದೇ ದೇಶದಲ್ಲಿ ತುರ್ತು ಪರಿಸ್ಥಿತಿ ಶಾಸನವನ್ನು ಜಾರಿಗೊಳಿಸಲಾಗಿದೆಯೆಂದು ಜನರನ್ನು ನಂಬಿಸುವ ಯತ್ನ ಮಾಡಿದ ಇಂದಿರಾ ಸರ್ಕಾರ, ಕಾಗಕ್ಕ ಗುಬ್ಬಕ್ಕ ಕಥೆ ನಂಬದವರನ್ನು ಬಗ್ಗು ಬಡಿಯುವ ಕೆಲಸದಲ್ಲಿ ಯಾವ ಮುಲಾಜನ್ನೂ ತೋರಲಿಲ್ಲ.

ಪ್ರಜಾಪ್ರಭುತ್ವವಿರುವ ದೇಶದ ರಾಜಕಾರಣದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಸಹಜ. ಅದು ಜನತಂತ್ರದ ಗುಣವಿಶೇಷ. ಜಯಪ್ರಕಾಶ ನಾರಾಯಣರು ಆರಂಭಿಸಿದ ಸಂಪೂರ್ಣ ಕ್ರಾಂತಿ ಚಳವಳಿ ಕೇವಲ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಅಭಿವ್ಯಕ್ತಿಯಷ್ಟೇ ಆಗಿರದೆ ಭ್ರಷ್ಟಾಚಾರ ಮುಕ್ತ ಭಾರತ ಕನಸಿನ ಭಾಗವೂ ಆಗಿತ್ತು. ರಾಜಕೀಯ ಭ್ರಷ್ಟಾಚಾರ ಮೇರೆ ಮೀರಿದೆ ಎಂದು ಚಳವಳಿಗೆ ಶ್ರೀಕಾರ ಹಾಕಿದ ಜೆಪಿ ನಡವಳಿಕೆ ಇಂದಿರಾ ಪ್ರಭುತ್ವಕ್ಕೆ ಸಹನೆಯಾಗಲಿಲ್ಲ. ಬಿಹಾರಕ್ಕೆ ಸೀಮಿತವಾಗಿದ್ದ ಚಳವಳಿ, ಕಾಳ್ಗಿಚ್ಚಿನಂತೆ ದೇಶದ ಉದ್ದಗಲಕ್ಕೆ ಹರಡುವ ಅಪಾಯದ ಕಾವು ದಿನದಿಂದ ದಿನಕ್ಕೆ ಏರಲಾರಂಭಿಸಿದಾಗ ದೆಹಲಿ ಗದ್ದುಗೆಯಲ್ಲಿ ಅನಿಯಂತ್ರಿತ ಕಂಪನ ಮೂಡಿತು. ಪೀಠ ತ್ಯಾಗವೆಂದರೆ ಹುಡುಗಾಟಿಕೆಯೇ? ಶತಾಯ ಗತಾಯ ಅಧಿಕಾರದಲ್ಲಿ ಮುಂದುವರಿಯುವ ಛಲ ಇಂದಿರಾರಲ್ಲಿ ಹೆಡೆ ಬಿಚ್ಚಿದ ಕಾಳಸರ್ಪದಂತೆ ಬುಸುಗುಡಲಾರಂಭಿಸಿತು.

ಇಂದಿರಾ ವಿರುದ್ಧ ರಾಯ್‍ಬರೈಲಿ (1971ರ ಲೋಕಸಭಾ ಚುನಾವಣೆ) ಕ್ಷೇತ್ರದಲ್ಲಿ ಸೋತಿದ್ದ ರಾಜನಾರಾಯಣ್, ಎದುರಾಳಿ ಇಂದಿರಾ ಗಾಂಧಿ ಚುನಾವಣಾ ಅಕ್ರಮ ಎಸಗಿದ್ದಾರೆಂದೂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆಂದೂ ಅಲಹಾಬಾದ್ ಹೈಕೋರ್ಟ್‍ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದರು. ಅದೇ ಮೊದಲಬಾರಿಗೆ ಭಾರತದ ಪ್ರಧಾನಿಯೊಬ್ಬರು ಐದು ತಾಸು ಕಾಲ ಕೋರ್ಟ್ ಕಟಕಟೆಯಲ್ಲಿ ನಿಂತು ಪಾಟೀಸವಾಲು ಎದುರಿಸಿದ ಐತಿಹಾಸಿಕ ಘಟನೆಗೆ ಆ ಕಟಕಟೆ ಸಾಕ್ಷಿಯಾಯಿತು. ಅಂತಿಮವಾಗಿ ಇಂದಿರಾ ಎಸಗಿದ ಅಕ್ರಮಗಳು ಸಾಬೀತಾಗಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಹೈಕೋರ್ಟು, ಮುಂದಿನ ಆರು ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಿತು. ಹೈಕೋರ್ಟ್ ತೀರ್ಪನ್ನು ಇಂದಿರಾ ಗಾಂಧಿ ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸಿದರಾದರೂ ಕೆಳ ಕೋರ್ಟಿನ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವೂ ಎತ್ತಿ ಹಿಡಿಯಿತು. ಅನ್ಯ ಮಾರ್ಗ ತೋಚದ ಪ್ರಧಾನಿ, ಸಂವಿಧಾನದ 352 ವಿಧಿಯನ್ವಯ ತುರ್ತುಪರಿಸ್ಥಿತಿ ಘೋಷಿಸಿ ಕೋರ್ಟ್ ಆದೇಶವನ್ನು ನಿಷ್ಕ್ರಿಯಗೊಳಿಸಿ ಅಧಿಕಾರದಲ್ಲಿ ಸರ್ವಾಧಿಕಾರ ಸಹಿತ ಮುಂದುವರಿದರು.

ಅತ್ತ ಜೆಪಿ ಚಳವಳಿ ಕಾವು ಇತ್ತ ಕೋರ್ಟ್ ಆದೇಶ. ಇಂದಿರಾ ಗಾಂಧಿ ಮತ್ತು ಅವರ ಪಾಳಯ ಬಚಾವ್ ಆಗಲು ಸಾಂವೈಧಾನಿಕ ಮಾರ್ಗದಲ್ಲಿ ಅವಕಾಶವೇ ಇರಲಿಲ್ಲ. ಅಂದಿನ ಪಶ್ಚಿಮ ಬಂಗಾಳಾದ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ಧಾರ್ಥ ಶಂಕರ ರಾಯ್, ಮಗ ಸಂಜಯ್ ಗಾಂಧಿ ಮುಂತಾದವರ ಸಲಹೆ ಮೇರೆಗೆ ಏಕಪಕ್ಷೀಯವಾಗಿ ತುರ್ತುಪರಿಸ್ಥಿತಿ ಘೋಷಿಸಿ ತಮ್ಮ ಗದ್ದುಗೆಯನ್ನೂ, ಆಡಳಿತದ ಮೇಲಿನ ನಿಯಂತ್ರಣವನ್ನೂ ಇಂದಿರಾಗಾಂಧಿ ಕಾಪಾಡಿಕೊಂಡರು. ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದು ಅವರದೇ ಸಂಪುಟದ ಸಚಿವರಿಗೆ ಜೂನ್ 25ರ ಬೆಳಗಿನ ಅಚ್ಚರಿಯಾಗಿತ್ತು. ಆಕಾಶವಾಣಿ ತನ್ನ ಬೆಳಗಿನ ಆರು ಘಂಟೆ ಸುದ್ದಿ ವಾಚನದಲ್ಲಿ ತುರ್ತು ಪರಿಸ್ಥಿತಿ ಹೇಋಇದ್ದನ್ನು ಪ್ರಕಟಿಸಿದಾಗಲೇ ಸಚವರಿಗೆ ಅದು ಗೊತ್ತಾಗಿದ್ದು! ನಂತರದಲ್ಲಿ ಔಪಚಾರಿಕವಾಗಿ ಸಂಪುಟದ ಒಪ್ಪಿಗೆಯನ್ನು ಇಂದಿರಾ ಪಡೆದರು. ಪ್ರಧಾನಿ ತೀರ್ಮಾನದಂತೆ ಸಿದ್ಧವಾದ ತುರ್ತುಪರಿಸ್ಥಿತಿ ಘೋಷಣೆ ಆದೇಶಕ್ಕೆ ಕ್ಷಣ ಮಾತ್ರವೂ ಹಿಂದೆಮುಂದೆ ನೋಡದೆ, ಕಾನೂನು ತಜ್ಞರ ಸಲಹೆ ಪಡೆಯದೆ ಒಪ್ಪಿಗೆ ನೀಡಿ ಸಹಿ ಹಾಕಿದ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್, ರಬ್ಬರ್ ಸ್ಟಾಂಪ್ ರಾಷ್ಟ್ರಪತಿ ಎಂದೇ ಭವಿಷ್ಯ ಭಾರತದಲ್ಲಿ ಕು-ಖ್ಯಾತರಾದರು.

ತುರ್ತು ಪರಿಸ್ಥಿತಿ ಸಮಯದಲ್ಲಿ ಕಠೋರ ಕಾನೂನುಗಳನೇಕವು ಜಾರಿಗೆ ಬಂದವು. ಆಂತರಿಕ ಭದ್ರತಾ ಕಾಯ್ದೆ (ಮಿಸಾ) ಅಡಿಯಲ್ಲಿ ಬಹುತೇಕ ವಿರೋಧ ಪಕ್ಷಗಳ ನಾಯಕರು, ಕಾರ್ಮಿಕ ಸಂಘಟನೆಗಳ ಮುಖಂಡರನ್ನು ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟಲಾಯಿತು. ಇನ್ನಿತರ ಕಾನೂನಿನ ನೆಪದಲ್ಲಿ ಸಮಾಜದ ವಿವಿಧ ಸ್ತರದ ಹೋರಾಟಗಾರರನ್ನು, ತುರ್ತು ಪರಿಸ್ಥಿತಿ ಹೇರಿಕೆ ಅಗತ್ಯವಾಗಿತ್ತೇ ಎಂದು ಪ್ರಶ್ನಿಸಿದವರನ್ನು, ಅಲಹಾಬಾದ್ ಹೈಕೋರ್ಟ್‍ನ ಆದೇಶ ಪಾಲಿಸದೆ ಸಂವಿಧಾನಕ್ಕೆ ಚ್ಯುತಿ ತಂದ ನಡವಳಿಕೆಯನ್ನು “ಇದು ಸರಿಯೇ” ಎಂದು ಕೇಳಿದವರನ್ನು ಜೈಲಿಗೆ ತಳ್ಳಲಾಯಿತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಭಾರತ್ ಮಾತಾಕೀ ಜೈ ಎನ್ನುವುದು ಕೂಡಾ ಅಪರಾಧವಾಗಿ ಕೂಗು ಹಾಕಿದವರು ಕಂಬಿ ಹಿಂದೆ ಕೊಳೆತರು. ಮಾನವ ಹಕ್ಕುಗಳ ದಮನ ತುರ್ತು ಪರಿಸ್ಥಿತಿ ಅಸಿತ್ವದಲ್ಲಿದ್ದಷ್ಟೂ ಕಾಲ ದಿನದ ಘಟನೆ ಎಂಬಂತೆ ನಡೆಯಿತು.

ತುರ್ತು ಪರಿಸ್ಥಿತಿ ಭಾಗವಾಗಿ ವಿವಿಧ ಕಾಯ್ದೆಯಡಿ ದೇಶದ್ರೋಹಿಗಳಾಗಿ ಬಂಧನಕ್ಕೆ ಒಳಗಾದವರ ಅಧಿಕೃತ ಸಂಖ್ಯೆ 75, 818. ಅನಧಿಕೃತವಾಗಿ ಪೊಲೀಸ್ ವಶದಲ್ಲಿದ್ದು ಪ್ರಥಮ ಮಾಹಿತಿ ವರದಿ ಕೋರ್ಟ್‍ಗಳಿಗೆ ಸಲ್ಲಿಕೆಯಾಗದೆ ಜೈಲುಗಳಲ್ಲಿ ನೊಂದು ನೊಣೆದವರಿಗೆ ಲೆಕ್ಕವಿಲ್ಲ. ನಸ್‍ಬಂದಿ ಎಂಬ ಹೆಸರಿನಲ್ಲಿ ಬಲಾತ್ಕಾರದಲ್ಲಿ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ ನಡೆಸಿ ದೇಶದ ಜನಸಂಖ್ಯೆ ವೃದ್ಧಿಯನ್ನು ನಿಯಂತ್ರಿಸುವ ಆಡಳಿತದ ಕಿರುಕುಳಕ್ಕೆ ಒಳಗಾದವರ ಸಂಖ್ಯೆ ಅದೆಷ್ಟೋ ಕೋಟಿ. ಎಪ್ಪತ್ತು ಎಂಭತ್ತು ವರ್ಷದವರನ್ನೆಲ್ಲ ಎಳೆದೊಯ್ದು ಬಲಾತ್ಕಾರ ಚಿಕಿತ್ಸೆಗೊಳಪಡಿಸಿದ ಅಧಿಕಾರಿಗಳು ಪಾರಿತೋಷಕ ಪಡೆದರು. ದೆಹಲಿ ನಗರವನ್ನು ಸುಂದರಗೊಳಿಸುವ ಯೋಜನೆ ಅಂಗವಾಗಿ ಸಹಸ್ರ ಸಹಸ್ರ ಬಡವರ ಮನೆ ಗುಡಿಸಿಲುಗಳನ್ನು ಬುಲ್‍ಡೋಜರ್ ಬಳಸಿ ನೆಲಸಮಗೊಳಿಸಿ ವಿಕೃತ ಆನಂದ ಪಡಲಯಿತು.

ಪತ್ರಿಕಾ ಮಾಧ್ಯಮದ ಮೇಲೆ ಸೆನ್ಸಾರ್ ನಿರ್ಬಂಧ ಹೇರಲಾಯಿತು. ಪ್ರತಿ ರಾಜ್ಯದಲ್ಲೂ ಪ್ರತಿಯೊಂದೂ ವಾರ್ತಾ ಪತ್ರಿಕೆಗಳು ಅವು ಸಿದ್ಧಗೊಂಡ ಬಳಿಕ ಸೆನ್ಸಾರ್ ಅಧಿಕಾರಿಗೆ ತೋರಿಸಿ ಒಪ್ಪಿಗೆ ಪಡೆದು ಮುದ್ರಣಕ್ಕೆ ಹೋಗಬೇಕಿತ್ತು. ಕೇಂದ್ರ-ರಾಜ್ಯ ಸರ್ಕಾರದ ನೀತಿಯನ್ನು ವಿಮರ್ಶಿಸುವ ಹಕ್ಕು ಮೊಟಕುಗೊಂಡಿತ್ತು. ವಿರೋಧ ಪಕ್ಷಗಳ ಭೂಗತ ನಾಯಕರು ಕಳಿಸುತ್ತಿದ್ದ ಹೇಳಿಕೆಗಳನ್ನು ಪ್ರಕಟಿಸುವುದಕ್ಕೆ ಅವಕಾಶವೇ ಇರಲಿಲ್ಲ. ಮುದ್ರಣಕ್ಕೆ ಸಿದ್ಧವಾಗಿರುವ ಪುಟಗಳಲ್ಲಿ ಅಂಥದ್ದೇನಾದರೂ ಕಂಡು ಬಂದರೆ ಸೆನ್ಸಾರ್ ಅಧಿಕಾರಿ ಕಿತ್ತು ಹಾಕಿಸುತ್ತಿದ್ದರು. ನಕ್ಷತ್ರಿಕನಂತೆ ಕಾಯುವ ಅವರ ಹದ್ದುಗಣ್ತಪ್ಪಿ ಸಣ್ಣ ಸುದ್ದಿ ಪ್ರಕಟವಾದರೂ ಸಂಪಾದಕರು/ಪ್ರಕಾಶಕರು ತರಾಟೆಗೆ ಒಳಗಾಗುತ್ತಿದ್ದರು. ಆದರೆ ಆಡಳಿತ, ತನಗೆ ಬೇಕಾದ ಸುದ್ದಿಯನ್ನು ಮಾತ್ರ ತನಗೆ ಬೇಕಾದಂತೆ ತಿರುಚಿಮುರುಚಿ ಪ್ರಕಟಿಸಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿತ್ತು ಮತ್ತು ಇದಕ್ಕೆ ಮುದ್ರಣ ಮಾಧ್ಯಮವನ್ನು ನಿರ್ಲಜ್ಜವಾಗಿ ದುರುಪಯೋಗಪಡಿಸಿಕೊಳ್ಳುತ್ತಿತ್ತು.

ಇದನ್ನೂ ಓದಿ: ಮೊಗಸಾಲೆ ಅಂಕಣ: ಕರ್ನಾಟಕದ ಸೋಲಿನ ಬಗ್ಗೆ ಮೋದಿ ಮೌನವೇಕೆ?

ಈ ಮಾತಿಗೆ ಇಲ್ಲೊಂದು ಸಣ್ಣ ಆದರೆ ಗಂಭೀರವಾದ ಉದಾಹರಣೆ, ಓದಿ. ತುರ್ತು ಪರಿಸ್ಥಿತಿ ಘೋಷಣೆಗೆ ಮುನ್ನ ಬಂಧನಕ್ಕೆ ಮೊದಲು ಬೆಂಗಳೂರಿಗೆ ಜಯಪ್ರಕಾಶ ನಾರಾಯಣ್ ಬಂದಿದ್ದರು. ಶೇಷಾದ್ರಿಪುರದಲ್ಲಿ ಕಿಕ್ಕಿರಿದ ಸಾರ್ವಜನಿಕ ಸಭೆ. ಜೆಪಿ ಭಾಷಣ ಮಾಡಿ ನಿರ್ಗಮಿಸಿದರು. ಅದಾದ ನಾಲ್ಕಾರು ದಿವಸಕ್ಕೇ ತುರ್ತು ಪರಿಸ್ಥಿತಿ ಘೋಷಣೆಯಾಯಿತು. ಆ ಬಳಿಕ ಇಂದಿರಾ ಗಾಂಧಿಯವರು ವಿಜಯೋತ್ಸಾಹದಲ್ಲಿ ಬೆಂಗಳೂರಿಗೆ ಆಗಮಿಸಿ ಸಾರ್ವಜನಿಕ ಸಭೆಯಲ್ಲಿ ಮಾತಾಡಿದರು. ಆದರೆ ಜನ ಆ ಸಭೆಯನ್ನು ತಿರಸ್ಕರಿಸಿದವರಂತೆ ದೂರವೇ ಉಳಿದರು. ಎಷ್ಟೆಂದರೂ ಪ್ರಧಾನಿ. ಅವರ ಸಭೆಯಲ್ಲಿ ಜನರೇ ಇರಲಿಲ್ಲ ಎಂದರೆ ಹೇಗೆ…? ಜೆಪಿ ಸಭೆಗೆ ಸೇರಿದ್ದ ಜನಸಮೂಹದ ಚಿತ್ರವನ್ನು ಕತ್ತರಿಸಿ ಇಂದಿರಾ ಭಾಷಣ ಮಾಡುತ್ತಿದ್ದ ಚಿತ್ರದೊಂದಿಗೆ ಜೋಡಿಸಿ ಮಾಧ್ಯಮ ಕಾರ್ಯಾಲಯಗಳಿಗೆ ಕಳುಹಿಸುವ ಕೆಲಸವನ್ನು ವಾರ್ತಾ ಇಲಾಖೆ ಮಾಡಿತಷ್ಟೇ ಅಲ್ಲ ಪ್ರತಿಯೊಂದೂ ಪತ್ರಿಕೆ ಮುಖ ಪುಟದಲ್ಲಿ ಇಂದಿರಾ ಗಾಂಧಿಯವರು “ಬೃಹತ್ ಸಾರ್ವಜನಿಕ ಸಭೆ” ಉದ್ದೇಶಿಸಿ ಮಾಡುತ್ತಿರುವ ಭಾಷಣದ ಚಿತ್ರವನ್ನು ದೊಡ್ಡದಾಗಿ ಛಾಪಿಸುವಂತೆ ಎಚ್ಚರದಿಂದ ನೋಡಿಕೊಂಡಿತು.

ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಆಧಾರವಾಗಿಟ್ಟುಕೊಂಡು ಅನೇಕ ಸಿನಿಮಾಗಳು ಬಂದವು. ಆ ಸಮಯದಲ್ಲಿ ತೆರೆಗೆ ಬಂದ “ಆಂಧಿ” ಚಿತ್ರದ ನಾಯಕಿ ಸುಚಿತ್ರಾ ಸೇನ್‍ರ ಮೇಕಪ್ ಇಂದಿರಾರನ್ನು ಹೋಲುವಂತಿತ್ತು ಎಂಬೊಂದೇ ಕಾರಣಕ್ಕೆ ಆ ಸಿನಿಮಾವನ್ನು ಬ್ಯಾನ್ ಮಾಡಲಾಯಿತು. “ಕಿಸ್ಸಾ ಕುರ್ಸೀ ಕಾ” ಸಿನಿಮಾವನ್ನು ಬ್ಯಾನ್ ಮಾಡಲಾಯಿತಷ್ಟೇ ಅಲ್ಲ, ಅದರ ಪ್ರಿಂಟ್‍ಗಳನ್ನು ಹುಡುಹುಡುಕಿದ ಸಂಜಯ್ ಗಾಂಧಿ ಬಂಟರು ಅವನ್ನೆಲ್ಲ ಗುರುಗಾಂವ್‍ನಲ್ಲಿರುವ ಮಾರುತಿ ಕಾರು ತಯಾರಿಕಾ ಕಾರ್ಖಾನೆ ಆವರಣಕ್ಕೆ ಒಯ್ದು ಸುಟ್ಟು ಹಾಕಿ ಯಾರನ್ನೋ ಖುಷಿಪಡಿಸಿದ ಸಂತೋಷದಲ್ಲಿ ಕೃತಾರ್ಥರಾದರು. ಮೇರೆ ಮೀರಿದ ಹಿಂಸಾಚಾರವುಳ್ಳ ಚಲನಚಿತ್ರಗಳಿಗೆ ಸೆನ್ಸಾರ್ ನಿರ್ಬಂಧವಿತ್ತು. ಈ ನೆಪದಲ್ಲಿ ರಾಜಕುಮಾರ್ ಅಭಿನಯದ “ರಾಜಾ ನನ್ನ ರಾಜಾ” ಚಿತ್ರದ ಅನೇಕ ದೃಶ್ಯಗಳಿಗೆ ಕತ್ತರಿ ಹಾಕಲಯಿತು. ಅದೇ ಸಮಯದಲ್ಲಿ ಕನ್ನಡ ಚಿತ್ರಕ್ಕಿಂತ ಹೆಚ್ಚು ಹಿಂಸಾಮಯವಾಗಿದ್ದ “ಶೋಲೆ” ಯಾವುದೇ ರೀತಿ ಕತ್ತರಿ ಪ್ರಯೋಗವಿಲ್ಲದೆ ತೆರೆಗೆ ಬಂತು. “ಶೋಲೆ” ಚಿತ್ರದ ಇಬ್ಬರು ನಾಯಕರಲ್ಲಿ ಅಮಿತಾಬ್ ಬಚ್ಚನ್ ಒಬ್ಬರು. ಅವರಿಗೂ ಇಂದಿರಾ ಗಾಂಧಿ ಕುಟುಂಬಕ್ಕೂ ಗಳಸ್ಯಕಂಠಸ್ಯ ಸ್ನೇಹ. ಅಮಿತಾಬ್ ಪ್ರಭಾವ ಕೆಲಸ ಮಾಡಿತು, ಸೆನ್ಸಾರ್ ಕತ್ತರಿ ಮೊನಚು ಕಳೆದುಕೊಂಡಿತು. ಇಂಥ ಉದಾಹರಣೆ ಒಂದೆರಡಲ್ಲ.

ಇಂದಿರಾ ಗಾಂಧಿ ಭಾಷಣ ಮಾಡಲಿದ್ದ ಕಾಂಗ್ರೆಸ್ ರ್ಯಾಲಿಯಲ್ಲಿ ಸೇರಿದ ಜನರನ್ನು ಹಾಡು ಹೇಳಿ ರಂಜಿಸುವಂತೆ ಗಾಯಕ ಕಿಶೋರ್ ಕುಮಾರ್‌ಗೆ ಸಂಜಯ್ ಗಾಂಧಿ ತಾಕೀತು ಮಾಡಿದ್ದೂ ಒಂದು ಘಟನೆಯೇ. ಕಿಶೋರ್ ಮಾತ್ರ ಮಣಿಯಲಿಲ್ಲ. ಅಂದಿನ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ವಿದ್ಯಾಚರಣ ಶುಲ್ಕರ ಆದೇಶದಂತೆ ಕಿಶೋರ್ ಕುಮಾರ್ ಹಾಡುಗಳನ್ನು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪ್ರಸಾರ ಮಾಡದಂತೆ ನಿಷೇಧಿಸಲಾಯಿತು. ಆಡಳಿತದ ಸರ್ವಾಧಿಕಾರಿ ಧೋರಣೆಗೆ ಇದೂ ಕೂಡಾ ಒಂದು ಜ್ವಲಂತ ನಿದರ್ಶನ. ಇದರಿಂದ ಕಿಶೋರ್ ಖ್ಯಾತಿ ಇನ್ನಷ್ಟು ಹೆಚ್ಚಿತು; ಸರ್ಕಾರದ ಮರ್ಯಾದೆ ಮಣ್ಣುಗೂಡಿತು.

ಇದನ್ನೂ ಓದಿ: ಮೊಗಸಾಲೆ ಅಂಕಣ: AIIMS ಸಂಸ್ಥೆ ಹೆಸರಿನಲ್ಲಿ ರಾಯಚೂರು v/s ಕಲಬುರಗಿ ಶೀತಲ ಸಮರ ಶುರು

Exit mobile version