ಅಗತ್ಯವೋ ಅನಗತ್ಯವೋ ಇದಮಿತ್ಥಂ ಎಂದು ವ್ಯಾಖ್ಯಾನಿಸಲಾಗದು. ಕರ್ನಾಟಕದಲ್ಲಿ ಪ್ರತಿಶತ ಎರಡಕ್ಕಿಂತ (ರಾಷ್ಟ್ರೀಯ ಸರಾಸರಿ ಶೇಕಡಾ ನಾಲ್ಕು) ಕಡಿಮೆ ಇರುವ ಬ್ರಾಹ್ಮಣ ಸಮುದಾಯದ ಸುತ್ತ ಪ್ರಸ್ತುತದ ರಾಜ್ಯ ರಾಜಕೀಯ (Brahmin politics) ಗಿರಕಿ ಹೊಡೆಯಲಾರಂಭಿಸಿರುವುದು ಬರಲಿರುವ ವಿಧಾನ ಸಭಾ ಚುನಾವಣೆಯ ಒಂದು ತಂತ್ರವಾಗಿ ರೂಪು ಪಡೆಯಬಹುದೇ…? ಹೌದು ಎಂದಾಗಲೀ ಇಲ್ಲವೇ ಇಲ್ಲ ಎಂದಾಗಲೀ ಈ ಕ್ಷಣದಲ್ಲಿ ಕಣಿ ಹೇಳುವುದು ಕಷ್ಟ. ಈ ರಾಜ್ಯದಲ್ಲಿ ಆರ್.ಗುಂಡೂರಾಯರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮೊದಲ ಮುಖ್ಯಮಂತ್ರಿ. ಅವರು ಅಧಿಕಾರ ಕಳೆದುಕೊಂಡ ಮರುಕ್ಷಣದಲ್ಲೇ ಆ ಸ್ಥಾನಕ್ಕೆ ಬಂದ ರಾಮಕೃಷ್ಣ ಹೆಗಡೆ ಅದೇ ಸಮುದಾಯದವರು. ಕಾಂಗ್ರೆಸ್ ಮತ್ತು ಜನತಾ ಪರಿವಾರದ ಆಳ್ವಿಕೆಯಲ್ಲಿ ಇವರಿಬ್ಬರೂ ಸಿಎಂ ಆದವರು. ಗುಂಡೂರಾವ್ ಒಮ್ಮೆ ಆಡಿದ ಮಾತನ್ನು ಇಲ್ಲಿ ಉಲ್ಲೇಖಿಸುವುದು ಅಪ್ರಸ್ತುತವಾಗಲಾರದು. “ಊಟದ ಪದಾರ್ಥದಲ್ಲಿ ಬಳಸುವ ಕರಿಬೇವಿನ ಸೊಪ್ಪಿನಂತೆ ಬ್ರಾಹ್ಮಣರು. ಊಟ ಮಾಡುವ ಹಂತದಲ್ಲಿ ಅದನ್ನು ಹೆಕ್ಕಿ ಪಕ್ಕಕ್ಕಿಡುವುದು ಬಹುತೇಕರ ಕ್ರಮ” ಎಂದು ಅವರು ಹೇಳಿದ್ದು ಆ ಕಾಲದಲ್ಲಿ ಸಾಕಷ್ಟು ಚರ್ಚೆ ವಾದ ಪ್ರತಿವಾದಕ್ಕೆ ಕಾರಣವಾಗಿತ್ತು. ಆದರೆ ಹೆಗಡೆಯವರು ಎಂದೂ ಬ್ರಾಹ್ಮಣಪರ ವಾದ ಮಂಡಿಸಿದವರಲ್ಲ. ಹಾಗಾಗಿ ಬ್ರಾಹ್ಮಣ ಸಮುದಾಯದಲ್ಲಿ ಹೆಗಡೆಗಿಂತ ಗುಂಡೂರಾಯರಿಗೇ ಹೆಚ್ಚು ವಜನ್.
ಅಕ್ಷರ ಜ್ಞಾನಕ್ಕೆ ಮೊದಲಿಗೆ ತೆರೆದುಕೊಂಡವರು ಮೇಲ್ಜಾತಿಯ ಜನ. ಅದರಲ್ಲೂ ಬ್ರಾಹ್ಮಣರು ಮೊದಲಿಗರು. ಕಲಿತ ಜನಸಮುದಾಯದವರು, ಕಲಿಯದವರನ್ನು ಕಲಿಯಲು ಆಗದವರನ್ನು ಕಾಲಕ್ರಮದಲ್ಲಿ ಶೋಷಿಸಿದರು ಎಂಬ ಈಗಲೂ ಕೇಳಿಬರುತ್ತಿರುವ ಮಾತು ಕೇವಲ ಆರೋಪವಲ್ಲ. ಈಗ ಈ ಮಾತು ಅರ್ಥ ಕಳೆದುಕೊಂಡಿದ್ದರೂ ಆರೋಪ ಕಡಿಮೆ ಆಗುತ್ತಿಲ್ಲ. ವರ್ತಮಾನದಲ್ಲಿ ಸಕಲರಿಗೂ ಅಕ್ಷರ ಲೋಕಕ್ಕೆ ರಹದಾರಿ ಕಲ್ಪಿಸಲಾಗಿದೆ. ತಾನು ಕಲಿಯೋಲ್ಲ ಎಂದು ತೀರ್ಮಾನಿಸಿದವರಷ್ಟೇ ಜ್ಞಾನ ಪ್ರವಾಹದಿಂದ ಹೊರಕ್ಕೆ ಉಳಿಯಬಹುದು. ಕಲಿಕೆಯಲ್ಲಿ ಸಾಸಿವೆ ಕಾಳಿನಷ್ಟು ಆಸಕ್ತಿ ಕುತೂಹಲ ಕೆರಳಿಸಿಕೊಂಡವರಿಗೂ ಕಲಿಕೆಯ ಬಾಗಿಲು ತೆರೆದಿದೆ. ಹಳೆಯದು ಇತಿಹಾಸವಾಗಿ ನಮ್ಮನ್ನು ಎಚ್ಚರದಲ್ಲಿ ಇಡಬೇಕು, ವರ್ತಮಾನದಲ್ಲಿ ಪಾಪಪ್ರಜ್ಞೆಯಾಗಿ ಕಾಡದಂತೆಯೂ ಎಚ್ಚರ ವಹಿಸಬೇಕು. ಹಳೆಯದನ್ನು ಕೆದಕಿದರೆ ಅಲ್ಲಿ ಸಿಗುವುದು ಅಸ್ಥಿಪಂಜರದ ಭಾಗಗಳು ಮಾತ್ರ. ಇದು ಸಂಶೋಧನೆಗೆ ಅಗತ್ಯ. ಬದುಕಿಗೆ, ಬದುಕಿ ಬಾಳಬೇಕಾದ ರೀತಿ ರಿವಾಜಿಗೆ ಖಂಡಿತವಾಗಿಯೂ ಅಲ್ಲ. ಒಬ್ಬರನ್ನು ಹುಟ್ಟಿನಿಂದ ಗುರುತಿಸುವುದು ಅನಾಗರಿಕ ಎಂದು ಒಂದೆಡೆ ಹೇಳುವ ನಾವು, ಇನ್ನೊಂದೆಡೆಯಲ್ಲಿ ಹುಟ್ಟಿದ್ದೇ ಅಪರಾಧ ಎನ್ನುವಂತೆ ಮಾತಾಡುತ್ತೇವೆ.
ಇಷ್ಟೆಲ್ಲ ಪೂರ್ವ ಪೀಠಿಕೆಗೆ ಜೆಡಿಎಸ್ ಮುಖ್ಯಮಂತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿಯವರು ಹೊತ್ತಿಸಿರುವ ಕಿಡಿ. ಕೇಂದ್ರದ ಸಂಸದೀಯ ಸಚಿವ ಹುಬ್ಬಳ್ಳಿ ಮೂಲದ ಪ್ರಹ್ಲಾದ ಜೋಷಿಯವರನ್ನು ಹಳಿಯುವ ಭರದಲ್ಲಿ ಕುಮಾರಸ್ವಾಮಿಯವರು ಬ್ರಾಹ್ಮಣ ಸಮುದಾಯವನ್ನು ಮೈಮೇಲೆ ಎಳೆದುಕೊಳ್ಳುವ ಸಾಹಸ ಮಾಡಿರುವುದು ಹಾಲಿ ವಿವಾದಕ್ಕೆ ಕಾರಣವಾಗಿರುವ ಬೆಳವಣಿಗೆ. ಬ್ರಾಹ್ಮಣರ ಅಥವಾ ಯಾವುದೇ ಜಾತಿ ಸಮುದಾಯವನ್ನು ಹಳಿಯುವುದು ಪಂಚತಂತ್ರದಲ್ಲಿ ಹೇಳಿರುವ ತೋಳ ಕುರಿಮರಿ ಕಥೆಯನ್ನು ನೆನಪಿಸುತ್ತದೆ. ನದಿಯ ಕೆಳಭಾಗದಲ್ಲಿ ನೀರು ಕುಡಿಯುವ ಕುರಿ ಮರಿಗೆ ನಿನ್ನ ಎಂಜಲು ನೀರನ್ನು ನಾನು ಕುಡಿಯಬೇಕಾ ಎಂದು ನದಿಯ ಮೇಲುಭಾಗದಲ್ಲಿರುವ ತೋಳ ಕೇಳುತ್ತದೆ. ನದಿಯ ಕೆಳ ಭಾಗದಲ್ಲಿ ನಾನಿದ್ದೇನೆ, ನನ್ನ ಎಂಜಲು ಹೇಗಾಗುತ್ತದೆಂದು ಅಮಾಯಕ ಕುರಿ ಕೇಳುತ್ತದೆ. ನೀನಲ್ಲವಾದರೆ ನಿನ್ನ ಅಜ್ಜನೋ ಪಿಜ್ಜನೋ ಎಂಜಲು ಮಾಡಿರಬಹುದಲ್ಲವೆ ಎನ್ನುವ ತೋಳ ಅದಕ್ಕೆ ಶಿಕ್ಷೆಯಾಗಿ ಕುರಿ ಮರಿಯನ್ನು ಸ್ವಾಹಾ ಮಾಡುತ್ತದೆ. ಕಥೆಗೆ ಹೆಚ್ಚಿನ ವಿವರಣೆ ಅನಗತ್ಯ.
ಪ್ರಹ್ಲಾದ ಜೋಷಿಯವರು ಸಭೆಯೊಂದರಲ್ಲಿ ಮಾತಾಡುತ್ತ ಜೆಡಿಎಸ್‍ನ ಪಂಚರತ್ನ ಯಾತ್ರೆ ಬಗ್ಗೆ ವ್ಯಂಗ್ಯವಾಡಿದ್ದು; ಆ ಹೆಸರಿನ ಬದಲಿಗೆ ನವಗ್ರಹ ಯಾತ್ರೆ ಎನ್ನುವುದು ಹೆಚ್ಚು ಸೂಕ್ತವೆಂದು ಜೆಡಿಎಸ್‍ನ ಕುಟುಂಬ ರಾಜಕೀಯವನ್ನು ಗೇಲಿ ಮಾಡಿ ಕಟಕಿಯಾಡಿದ್ದು ಕುಮಾರಸ್ವಾಮಿಯವರ ಸಹಜ ಆಕ್ರೋಶಕ್ಕೆ ಕಾರಣವಾಗಿರುವ ಅಂಶ. ಇದಕ್ಕಾಗಿ ಜೋಷಿಯವರನ್ನು ಟೀಕಿಸುವ ಖಂಡಿಸುವ ಮತ್ತೆ ಆ ವಿಚಾರದಲ್ಲಿ ಅವರು ಉಸಿರೆತ್ತದಂತೆ ಮಾಡುವ ಸಕಲ ಅಧಿಕಾರ ಹಕ್ಕು ಕುಮಾರಸ್ವಾಮಿಯವರಿಗೆ ಇದೆ. ಆದರೆ ಸಿಟ್ಟಿನ ಭರದಲ್ಲಿ ಒಂದು ಸಮುದಾಯವನ್ನು ಇಡಿಯಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಕುಮಾರಸ್ವಾಮಿಯವರಿಗಾಗಲೀ ಬೇರೆ ಯಾರಿಗೇ ಆಗಲಿ ಹೇಗೆ ಸಾಧ್ಯ ಎನ್ನುವುದು ಬ್ರಾಹ್ಮಣ ಸಮುದಾಯದಲ್ಲಿ ಈಗ ನಡೆದಿರುವ ಜಿಜ್ಞಾಸೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೋ ಗೊತ್ತಿಲ್ಲ. ಚುನಾವಣೆ ಸಮಯ ಇದಾಗಿರುವುದರಿಂದ ಆ ಪ್ರಕ್ರಿಯೆ ಮುಗಿಯುವವರೆಗೂ ಜನ ಮರೆಯದಂತೆ ಮಾಡುವ ಕರಾಮತ್ತಿನ ಸಾಧ್ಯತೆಯನ್ನು ಅಲ್ಲಗಳೆಯಲಾಗದು.
ಕರ್ನಾಟಕದಲ್ಲಿ ಬ್ರಾಹ್ಮಣ ಸಮುದಾಯದ ಸಂಖ್ಯಾಬಲ ಕಡಿಮೆ. ಆದರೆ ಕೆಲವು ವಿಧಾನ ಸಭಾ ಕ್ಷೇತ್ರಗಳಿಗೆ ಸೀಮಿತಗೊಂಡಂತೆ ಬ್ರಾಹ್ಮಣ ಮತಗಳು ನಿರ್ಣಾಯಕ. ಹೀಗೆಂದ ಮಾತ್ರಕ್ಕೆ ಅಲ್ಲೆಲ್ಲ ಬ್ರಾಹ್ಮಣರೇ ಗೆದ್ದ ಉದಾಹರಣೆಯೇನೂ ಇಲ್ಲ. ಬದಲಿಗೆ ಅಭ್ಯರ್ಥಿಯಾದವರು ವ್ಯಕ್ತಿಗತ ಸಂಪರ್ಕ ಸ್ನೇಹ ವಿಶ್ವಾಸವೇ ಮುಂತಾದ ಸಂಬಂಧದ ಕಾರಣವಾಗಿ ಬ್ರಾಹ್ಮಣರ ಮತ ಬೆಂಬಲ ಪಡೆದು ಗೆದ್ದ ನಿದರ್ಶನ ಹಲವಿವೆ. 224 ವಿಧಾನ ಸಭಾ ಸದಸ್ಯರ ಪೈಕಿ ಬ್ರಾಹ್ಮಣ ಶಾಸಕರನ್ನು ಎಣಿಸಲು ಒಂದೇ ಹಸ್ತದ ಐದು ಬೆರಳು ಸಾಕು. ಬ್ರಾಹ್ಮಣ ಸಮುದಾಯಕ್ಕೆ ಹೆಚ್ಚಿನ ಸೀಟು ಕೊಡುವುದು ರಾಜಕೀಯ ಪಕ್ಷಗಳಿಗೆ ಕರ್ನಾಟಕದ ಮಟ್ಟಿಗಂತೂ ಅನಿವಾರ್ಯವಾಗಿಲ್ಲ. ಈ ರಾಜ್ಯದಲ್ಲಿ ಬಹುತೇಕ (ಒಂದು ಅಂದಾಜಿನ ರೀತ್ಯ 80 ಪರ್ಸೆಂಟ್) ಬ್ರಾಹ್ಮಣರು ಬಿಜೆಪಿಯೊಂದಿಗೇ ಇದ್ದಾರೆ. ಅವರಿಗೆ ಬೇರೆ ರಾಜಕೀಯ ಪಕ್ಷಗಳ ಆಸರೆ ಇಲ್ಲವಾಗಿರುವುದೂ ಬಿಜೆಪಿ ಜೊತೆ ಗುರುತಿಸಿಕೊಳ್ಳುವುದಕ್ಕೆ ಅನಿವಾರ್ಯವೆನಿಸಿದ ಕಾರಣವಾಗಿರಬಹುದು.
ಆದರೆ ಉತ್ತರ ಪ್ರದೇಶದಂಥ ರಾಜ್ಯವನ್ನು ಪರಿಗಣನೆಗೆ ತೆಗೆದುಕೊಂಡರೆ ಬ್ರಾಹ್ಮಣರ ಬೆಂಬಲ ಇರುವತ್ತ ತಕ್ಕಡಿ ವಾಲಿರುವ ಹಲವು ಉದಾಹರಣೆಗಳಿವೆ. 403 ವಿಧಾನ ಸಭಾ ಕ್ಷೇತ್ರ, ಎಂಭತ್ತು ಲೋಕಸಭಾ ಕ್ಷೇತ್ರವುಳ್ಳ ಆ ರಾಜ್ಯದಲ್ಲಿ ಜನಸಂಖ್ಯೆ ದೃಷ್ಟಿಯಿಂದ ಮೊದಲ ಸ್ಥಾನದಲ್ಲಿರುವುದು ಪರಿಶಿಷ್ಟ ಜಾತಿ ಸಮುದಾಯ. ಎರಡು ಮತ್ತು ಮೂರನೇ ಸ್ಥಾನದಲ್ಲಿ ಕ್ರಮವಾಗಿ ಯಾದವ ಹಾಗೂ ಮುಸ್ಲಿಂ ಸಮುದಾಯವಿದೆ. ಯಾದವರ ಜೊತೆಯಲ್ಲಿ ವಿವಿಧ ಹಿಂದುಳಿದ ವರ್ಗಗಳಿವೆ. ಅಬ್ಬಬ್ಬಾ ಎಂದರೆ ಪ್ರತಿಶತ ಹತ್ತರಷ್ಟಿರುವ ಬ್ರಾಹ್ಮಣ ಸಮುದಾಯ ಅಲ್ಲಿ ಆಡಿರುವ ರಾಜಕೀಯ ಆಟ, ಈಗಲೂ ಸದ್ದುಗದ್ದಲವಿಲ್ಲದೆ ಮುಂದುವರಿದಿದೆ. ಸ್ವಾತಂತ್ರ್ಯ ಬಂದ ಬಳಿಕ ಗೋವಿಂದ ವಲ್ಲಭ ಪಂತ್‍ರಿಂದ ಹಿಡಿದು ನಾರಾಯಣ ದತ್ತ ತಿವಾರಿವರೆಗೆ ಒಂಬತ್ತು ಜನ ಬ್ರಾಹ್ಮಣರು ಆ ರಾಜ್ಯದ ಮುಖ್ಯಮಂತ್ರಿಗಳಾದರು ಎನ್ನುವುದು ಅವರು ಹೊಂದಿದ್ದ ರಾಜಕೀಯ ಹಿಡಿತಕ್ಕೆ ನಿದರ್ಶನ. ಕಾಲ ಸಂದರ್ಭ ಸನ್ನಿವೇಶ ಬದಲಾಗಿದೆ ಅದರಂತೆ ರಾಜಕೀಯ ಸ್ಥಿತಿಗತಿಯೂ.
ಉತ್ತರ ಪ್ರದೇಶದಲ್ಲಿ ಸ್ವಾತಂತ್ರ್ಯಕ್ಕೆ ಮೊದಲು ಮತ್ತು ತರುವಾಯ ದಶಕಗಳ ಕಾಲ ಬ್ರಾಹ್ಮಣರು ಅಖಂಡವಾಗಿ ಕಾಂಗ್ರೆಸ್ ಜೊತೆಗಿದ್ದರು. ಒಂಬತ್ತು ಜನ ಮುಖ್ಯಮಂತ್ರಿಗಳಷ್ಟೇ ಅಲ್ಲ, ಪ್ರಧಾನಿಗಳಾಗಿದ್ದ ಜವಾಹರಲಾಲ್ ನೆಹ್ರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, “ಜನಿವಾರಧಾರಿ ಬ್ರಾಹ್ಮಣ” ರಾಜೀವ್ ಗಾಂಧಿ ಇವರೆಲ್ಲ ಬ್ರಾಹ್ಮಣರಿಗೆ ಪ್ರಿಯರೇ ಆಗಿದ್ದರು. ಆ ರಾಜ್ಯದ ರಾಜಕೀಯ ಮುಲಾಯಂ ಸಿಂಗ್ ಯಾದವ್ ಪ್ರವೇಶದೊಂದಿಗೆ ಕವಲು ದಾರಿಗೆ ಹೊರಳಿತು. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರನ್ನು ರಾಜಕೀಯ ಶಕ್ತಿಯಾಗಿ ಪರಿವರ್ತಿಸಿಕೊಂಡ ಮುಲಾಯಂ, ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಶೀರಾಮ್‍ರಿಗೆ ಆದರ್ಶವಾದರು. “ಮನುವಾದಿ ಬ್ರಾಹ್ಮಣರ” ಮತ್ತು ಅವರ ಬೆಂಬಲದ ರಾಜಕೀಯ ಶಕ್ತಿಗಳನ್ನು ಮಣಿಸಿ ದಲಿತ-ಮುಸ್ಲಿಂ ಕೈಗೆ ಅಧಿಕಾರ ತರುವ ಛಲದಲ್ಲಿ ಕಾನ್ಶೀರಾಂ ಶಿಷ್ಯೆ ಮಾಯಾವತಿ ಸಾಕಷ್ಟು ಮಟ್ಟಿಗೆ ಯಶಸ್ವಿಯಾದರೂ ಅವರೇ ಆರೋಪಿಸುತ್ತಿರುವ ಮನುವಾದಿಗಳ ಸಹಕಾರ ಬೇಡುವ ಸ್ಥಿತಿ ಅವರ ರಾಜಕೀಯದಲ್ಲಿ ಎದುರಾದ ಮಹತ್ವದ ತಿರುವೆನಿಸಿತು.
ಇದನ್ನೂ ಓದಿ: ಮೊಗಸಾಲೆ ಅಂಕಣ: ಭದ್ರಾ ಮೇಲ್ದಂಡೆ: ರಾಜ್ಯದ ಮೊದಲ ಕೇಂದ್ರ ಯೋಜನೆ
2007ರ ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಮಾಯಾವತಿ ನೇತೃತ್ವದಲ್ಲಿ ಬಿಎಸ್‍ಪಿ 403ರಲ್ಲಿ 206 ಸ್ಥಾನ ಗಳಿಸಿ ಅಧಿಕಾರಕ್ಕೆ ಬಂತು. ಚುನಾವಣಾ ಪೂರ್ವದಲ್ಲಿ ಬ್ರಾಹ್ಮಣ ಸಂಘಟನೆಗಳೊಂದಿಗೆ ಮಾಯಾವತಿ ಕುದುರಿಸಿಕೊಂಡ ಸ್ನೇಹ ಅವರಿಗೆ ಬಹುದೊಡ್ಡ ಡಿವಿಡೆಂಡ್ ತಂದಿತ್ತ ಬೆಳವಣಿಗೆ. ಉತ್ತರ ಪ್ರದೇಶದ ವಿವಿಧೆಡೆಗಳಲ್ಲಿ ಮೂವತ್ತು ಬ್ರಾಹ್ಮಣ ಸಮಾವೇಶ ಮನುವಾದಿಗಳೆಂದು ಬ್ರಾಹ್ಮಣರನ್ನು ಬ್ರ್ಯಾಂಡ್ ಮಾಡಿದ್ದ ಬಿಎಸ್‍ಪಿ ಆಶ್ರಯದಲ್ಲಿ ನಡೆಯಿತು. ಆ ಸಮಾವೇಶಗಳಲ್ಲಿ ಮನುವಾದಿಗಳನ್ನು ಟೀಕಿಸುವ ಖಂಡಿಸುವ ಮಾತು ಭಾಷಣ ಕೇಳಿ ಬರಲಿಲ್ಲ. ಇದಕ್ಕೆ ಬದಲಿಯಾಗಿ “ಬ್ರಾಹ್ಮಣರು ಶಂಖ ಊದುತ್ತ ನಡೆದಂತೆ ಆನೆ ಹೆಜ್ಜೆ ಹಾಕುತ್ತದೆ” ಎಂಬ ಘೋಷಣೆ ಮೊಳಗಿತು. ಅಂದಹಾಗೆ, ಆನೆ ಬಿಎಸ್‍ಪಿ ಚುನಾವಣಾ ಚಿನ್ಹೆ!
ಯಾವ ಕಿರಿಕಿರಿ ಎದುರಾಯಿತೋ, ಏನು ಸಮಸ್ಯೆ ಉದ್ಭವಿಸಿತೋ, ಯಾರು ಹುಳಿ ಹಿಂಡಿದರೋ ಯಾರು ಕಿವಿ ಕಚ್ಚಿದರೋ… ಬ್ರಾಹ್ಮಣರೊಂದಿಗಿನ ಬಿಎಸ್‍ಪಿ ಮೈತ್ರಿ ಕಡಿದು ಹೋಯಿತು. 2012ರ ಚುನಾವಣೆಯಲ್ಲಿ ಬಿಎಸ್‍ಪಿಗೆ ತಿರುಗಿಬಿದ್ದ ಬ್ರಾಹ್ಮಣರು ಸಮಾಜವಾದಿ ಪಕ್ಷಕ್ಕೆ ಬೆಂಬಲವಾಗಿ ನಿಂತರು. ಅಖಿಲೇಶ್ ಯಾದವ್ ಸಿಎಂ ಪಟ್ಟಕ್ಕೇರಿದರು. ರಾಜನಾಥ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾಟ್‍ರನ್ನು ಅವರು ಬ್ರಾಹ್ಮಣರ ವಿರುದ್ಧ ಎತ್ತಿಕಟ್ಟಿದರೆಂಬ ಬ್ರಾಹ್ಮಣರ ಗುಮಾನಿಯನ್ನು ಪರಿಹರಿಸುವ ಕೆಲಸಕ್ಕೆ ಬಿಜೆಪಿ ಮುಂದಾಗಲಿಲ್ಲ. ಜಾಟ್ ಸಮುದಾಯ ಆ ರಾಜ್ಯದಲ್ಲಿ ಪ್ರತಿಶತ ಎಂಟರಷ್ಟಿದ್ದರೆ ಬ್ರಾಹ್ಮಣರು ಶೇ. 10ರಷ್ಟಿದ್ದಾರೆ. (ಇದು 2011ರ ಜನಗಣತಿ ಅಂಕಿಸಂಖ್ಯೆ) ಜಾಟರ ವಿರುದ್ಧ ಅಖಿಲೇಶರೊಂದಿಗೆ ಬ್ರಾಹ್ಮಣ ಸಮುದಾಯ ಕೈಜೋಡಿಸಿತು. ಉತ್ತರ ಪ್ರದೇಶದಲ್ಲಿ ಜಾಟರು ಮತ್ತು ಬ್ರಾಹ್ಮಣರು ರಾಜಕೀಯವಾಗಿ ಪರಸ್ಪರ ವಿರೋಧಿಗಳು. ಅವರ ಸಂಬಂಧ ಎಣ್ಣೆ ಸೀಗೆಕಾಯಿಯ ಹಾಗೆ. ಆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 127 ಹೆಚ್ಚುವರಿ ಸೀಟು ಗಳಿಸಿ 224 ಸದಸ್ಯ ಬಲದೊಂದಿಗೆ ಸರ್ಕಾರ ರಚಿಸಿತು. ವಿಸರ್ಜಿತ ವಿಧಾನಸಭೆಯಲ್ಲಿ 206 ಸೀಟು ಹೊಂದಿದ್ದ ಬಿಎಸ್‍ಪಿ ಬಲ ಎಂಬತ್ತು ಸ್ಥಾನಕ್ಕೆ ಕುಸಿಯಿತು. ಜಾಟರ ಅಖಂಡ ಬೆಂಬಲದೊಂದಿಗೆ ಬಿಜೆಪಿ ಗಳಿಸಿದ್ದು 47 ಸೀಟು ಮಾತ್ರ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಸುಪ್ರೀಂ ತೀರ್ಪು ನಮ್ಮ ಮನದಂಗಳಕೆ
2014ರ ಲೋಕಸಭಾ ಚುನಾವಣೆ ಮತ್ತೆ ಬ್ರಾಹ್ಮಣ ಮತದಾರರನ್ನು ಬಿಜೆಪಿಯತ್ತ ನೋಡುವಂತೆ ಮಾಡಿದ್ದಕ್ಕೆ ಮುಖ್ಯ ಕಾರಣ ನರೇಂದ್ರ ಮೋದಿ; ಸ್ಥಳೀಯ ರಾಜಕಾರಣವಲ್ಲ. ಚುನಾವಣೆಯಲ್ಲಿ ಮೋದಿ ಹವಾ ಕೆಲಸ ಮಾಡಿತು. ಲೋಕಸಭಾ ಚುನಾವಣೆ ನಡೆದ ಮೂರು ವರ್ಷಕ್ಕೆ 2017ರಲ್ಲಿ ವಿಧಾನ ಸಭಾ ಚುನಾವಣೆ ನಡೆಯಿತು. ಮೂರನೇ ಎರಡು ಬಹುಮತಕ್ಕಿಂತ ಹೆಚ್ಚು ಸ್ಥಾನ ಬಿಜೆಪಿಯದಾಯಿತು.2022ರ ವಿಧಾನ ಸಭಾ ಚುನಾವಣೆ ಮತ್ತೆ ಬಿಜೆಪಿಗೇ ಅಧಿಕಾರ ನೀಡಿತು. 2014ರ ಲೋಕಸಭಾ ಚುನಾವಣಾ ಗೆಲುವು ಒಂದು ಆಕಸ್ಮಿಕ ಅಲ್ಲ ಎನ್ನುವುದಕ್ಕೆ 2019ರ ಚುನಾವಣೆ ಮರು ಪುರಾವೆ ಒದಗಿಸಿತು.
ದೇಶದಲ್ಲಿ ಶೇಕಡಾ ನಾಲ್ಕರಷ್ಟಿರುವ ಬ್ರಾಹ್ಮಣ ಮತ ರಾಷ್ಟ್ರವ್ಯಾಪಿ ಪವಾಡ ಮಾಡಿಬಿಡುತ್ತದೆ ಎಂದರೆ ಅದು ಮೂರ್ಖವಾದವಾಗುತ್ತದೆ. ಆದರೆ ಆ ಸಮುದಾಯ ಇತರ ಸಮುದಾಯಗಳ ಮೇಲೆ ಹೊಂದಿರುವ ಪ್ರಭಾವ ಚುನಾವಣೆ ನಂತರದ ಚುನಾವಣೆಯಲ್ಲಿ ಕೆಲಸ ಮಾಡಿರುವುದು ಸುಳ್ಳಲ್ಲ. ದೇಶದ ಪ್ರಧಾನಿಯಾದವರಲ್ಲಿ ಶೇ.45 ಜನ ಬ್ರಾಹ್ಮಣರು. ರಾಷ್ಟ್ರಪತಿ ಸ್ಥಾನಕ್ಕೆ ಏರಿದವರಲ್ಲಿ ಶೇ. 30 ಜನ ಬ್ರಾಹ್ಮಣರು. ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಏರಿದವರಲ್ಲಿ ಪ್ರತಿಶತ 47 ಜನ ಬ್ರಾಹ್ಮಣರು. ದೇಶದ ಒಟ್ಟಾರೆ ಜನ ಸಮುದಾಯ ಅಚ್ಚರಿಯಿಂದ ನೋಡುವುದಕ್ಕೆ ಇಷ್ಟು ಸಾಲದೆ?
ಇದೆಲ್ಲವೂ ಕುಮಾರಸ್ವಾಮಿಯವರಿಗೆ ಗೊತ್ತಿದೆ. ಹಾಗಂತ ಅವರು ಯಾವತ್ತೂ ಬ್ರಾಹ್ಮಣರನ್ನು ರಾಜಕೀಯವಾಗಿ ಎದುರು ಹಾಕಿಕೊಂಡವರಲ್ಲ. ಅವರ ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಾದಿಯಾಗಿ ಆ ಕುಟುಂಬದ ಎಲ್ಲರಿಗೂ ಈ ಮಾತು ಅನ್ವಯ. ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕುಮಾರಸ್ವಾಮಿಯವರು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರವಿದ್ದಾಗ ಈ ಬೇಡಿಕೆ ಇತ್ತು; ಆದರೆ ನೆನೆಗುದಿಗೆ ಬಿದ್ದಿತ್ತು. ಅದನ್ನು ಆಗು ಮಾಡಿದ್ದು ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ. ಬ್ರಾಹ್ಮಣ ಮಹಾಸಭಾಕ್ಕೆ ಬೆಂಗಳೂರಿನ ಆಯಕಟ್ಟಿನ ಸ್ಥಳದಲ್ಲಿ ಬೃಹತ್ ನಿವೇಶನ ಮಂಜೂರು ಮಾಡಿದ್ದರಲ್ಲಿ ಕೂಡಾ ಕುಮಾರಸ್ವಾಮಿಯವರ ಮನಸ್ಸು ಕೆಲಸ ಮಾಡಿದೆ. ರಾಜಕೀಯದಲ್ಲಿ ಫುಟ್‍ಬಾಲ್ ಆಡುವವರೂ ಇದ್ದಾರೆ, ಚದುರಂಗ ಆಡುವವರೂ ಇದ್ದಾರೆ. ಚದುರಂಗ ಆಡುವ ಸಮಯದಲ್ಲಿ ಒಂದೊಂದು ದಾಳವನ್ನು ಮುನ್ನಡೆಸುವಾಗಲೂ ತಾಳ್ಮೆ ಆಧರಿಸಿದ ಯೋಚನೆ ಬೇಕಾಗುತ್ತದೆ. ರಾಜಕೀಯ ನೂರಕ್ಕೆ ನೂರು ಪರ್ಸೆಂಟ್ ಚೆಸ್ ಆಡಿದಂತೆ. ಯಾವುದೋ ಆವೇಶದಲ್ಲಿ ತಾಳ್ಮೆ ಕಳೆದುಕೊಂಡ ಕುಮಾರ ಸ್ವಾಮಿಯವರು ಫುಟ್‍ಬಾಲ್ ಆಟಕ್ಕೆ ಹೊರಳಿಬಿಟ್ಟರೆ?
ಇದನ್ನೂ ಓದಿ: ಮೊಗಸಾಲೆ ಅಂಕಣ | ಒಂಬತ್ತು ರಾಜ್ಯದಲ್ಲಿ ಚುನಾವಣೆ: ಸಿಕ್ಕೀತೆ ಮೋದಿ ಮಾತಿಗೆ ಮನ್ನಣೆ?