Site icon Vistara News

ಮೊಗಸಾಲೆ ಅಂಕಣ | ಆಚಾರವಿಲ್ಲದ ನಾಲಗೆಗೆ ಎಲುಬೂ ಇಲ್ಲ

Gujarat Election and Narendra modi

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿಯವರನ್ನು “ರಾವಣನಂತೆ ನಿಮಗೆ ನೂರು ತಲೆ ಇದೆಯೇ” ಎಂದು ಟೀಕಿಸುವ ಅರ್ಥದಲ್ಲಿ ಕೇಳಿದ್ದು ದೇಶದ ಉದ್ದಗಲಕ್ಕೆ ಬಿಜೆಪಿ ಮುಖಂಡರ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹೇಳಿಕೆಯನ್ನು ಖಂಡಿಸುವ, ತಾವು ಮಾಡಿದ ಹೇಳಿಕೆಗಾಗಿ ದೇಶದ ಕ್ಷಮೆ ಯಾಚಿಸಬೇಕೆಂದು ಖರ್ಗೆಯವರನ್ನು ಒತ್ತಾಯಿಸುವ ಯತ್ನ ಸತತ ಎಂಬಂತೆ ನಡೆದಿದೆ. ಖರ್ಗೆಯವರು ತಮ್ಮ ಈ ಹೇಳಿಕೆ ಮೂಲಕ ಪ್ರಧಾನಿಯಂಥ ಅತ್ಯುನ್ನತ ಸ್ಥಾನಕ್ಕೆ ಅಗೌರವ ಸೂಚಿಸಿದ್ದಾರೆಂದು ನೇರವಾಗಿ ಆರೋಪಿಸಲಾಗಿದೆ. ಅದೇ ರೀತಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಖರ್ಗೆಯವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಖರ್ಗೆಯವರನ್ನು ಸಮರ್ಥಿಸಿಕೊಳ್ಳುವ ಯತ್ನ ನಡೆಸಿದ್ದಾರೆ.

ಖರ್ಗೆ ಹೇಳಿಕೆ ವಿಚಾರದಲ್ಲಿ ಪ್ರಧಾನಿ ಮೋದಿಯವರು ತಲೆ ಕೆಡಿಸಿಕೊಂಡಂತಿಲ್ಲ. ಯಾವುದೇ ರೀತಿಯ ಪ್ರತಿಕ್ರಿಯೆಯೂ ಅವರಿಂದ ಬಂದಿಲ್ಲ. ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡಾ ಪ್ರತಿಕ್ರಿಯಿಸಿದ್ದು ವರದಿಯಾಗಿಲ್ಲ. ಇತ್ತ ಖರ್ಗೆಯವರು ಬಿಜೆಪಿ ಆಕ್ರೋಶಕ್ಕೆ ಮಂಡೆಬಿಸಿ ಮಾಡಿಕೊಂಡಿದ್ದೂ ಗೊತ್ತಾಗಿಲ್ಲ. ಬಿಜೆಪಿ ಒತ್ತಾಯಿಸಿದಂತೆ ಕ್ಷಮೆ ಕೇಳುವ ಅಥವಾ ಪಶ್ಚಾತ್ತಾಪ ವ್ಯಕ್ತಪಡಿಸುವ ಹೇಳಿಕೆ ಅವರಿಂದ ಬಂದಿಲ್ಲ. ಇದರರ್ಥವೆಂದರೆ ಟೀಕಿಸಿದ ಮತ್ತು ಟೀಕಿಸಿಕೊಂಡ ನಾಯಕರಿಬ್ಬರೂ ಹೇಳಿಕೆಯನ್ನು ಗಾಳಿಯಲ್ಲಿ ಹಾರಿ ಹೋಗಲು ಬಿಟ್ಟುಬಿಟ್ಟಿದ್ದಾರೆ. ಆದರೆ ಅವರಿಬ್ಬರ ಹಿಂಬಾಲಕರು ಮಾತ್ರ ಹವಾದಲ್ಲಿ ಹಾರಿ ಹೋಗುತ್ತಿರುವ ಹೇಳಿಕೆಯನ್ನು ಹಿಡಿಯುವ ಸಾಹಸದಲ್ಲಿ ಸಮಯವನ್ನು ವ್ಯರ್ಥಮಾಡುತ್ತಿದ್ದಾರೆ.

ಚುನಾವಣಾ ಸಮಯದಲ್ಲಿ ಇಂಥ ಹೇಳಿಕೆಗಳು ಬರುವುದು ಸಾಮಾನ್ಯ. ಕಳೆದ ಕೆಲವು ದಶಕಗಳಿಂದೀಚೆಗೆ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಚರ್ಚೆ ನಡೆಸುವ ಪ್ರವೃತ್ತಿ ಕಣ್ಮರೆಯಾಗಿದೆ. ಇದಕ್ಕೆ ಕಾರಣವಿದೆ. ದೇಶದಲ್ಲಿ ರಾಷ್ಟ್ರೀಯ ಪಕ್ಷವೆಂದು ನಾವು ಗುರುತಿಸುತ್ತಿರುವುದು ಬಿಜೆಪಿ ಮತ್ತು ಕಾಂಗ್ರೆಸ್ಸನ್ನು ಮಾತ್ರ. ಉಳಿದವು ಅಕ್ಷರಶಃ ಪ್ರಾದೇಶಿಕ ಪಕ್ಷಗಳು. ದೇಶದ ಬಹುತೇಕ ರಾಜ್ಯ ಮತ್ತು ಕೇಂದ್ರ ಸರ್ಕಾರ ಬಿಜೆಪಿ ಕೈಯಲ್ಲಿದೆ. ಎರಡು ರಾಜ್ಯ ಕಾಂಗ್ರೆಸ್ ವಶದಲ್ಲಿದೆ. ಹೀಗಿದ್ದರೂ ದೇಶದ ಉದ್ದಗಲಕ್ಕೆ ಹೌದು ಅಲ್ಲ ಎಂಬಂತೆ ಕಾಂಗ್ರೆಸ್ ಪಕ್ಷ ಉಸಿರಾಟ ನಡೆಸಿದೆ. ಒಂದಿಷ್ಟು ನೀರಿನ ಸಿಂಚನವಾದರೆ ತಲೆ ಎತ್ತುವ ಸಾಧ್ಯತೆ ಇದೆ. ಉಳಿದ ಎಲ್ಲ ಪಕ್ಷಗಳೂ ಸಿಪಿಐ, ಸಿಪಿಎಂ ಸೇರಿದಂತೆ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿರುವ ಪಕ್ಷಗಳು.

ಸ್ವಾತಂತ್ರ್ಯಾನಂತರದ ಏಳೂವರೆ ದಶಕದಲ್ಲಿ ಕಾಂಗ್ರೆಸ್ ಆಳ್ವಿಕೆಯನ್ನು ದೇಶ ಕಂಡಿದೆ. ಬಿಜೆಪಿ ಆಳ್ವಿಕೆಯನ್ನು ನೋಡುತ್ತಿದೆ. ಪ್ರತಿ ರಾಜ್ಯದಲ್ಲೂ ಒಂದೊಂದು ಪ್ರಾದೇಶಿಕ ಪಕ್ಷ ಸಾಕಷ್ಟು ಬಲಿತು ಕಾರ್ಯ ನಿರ್ವಹಿಸುತ್ತಿವೆ. ಒಡಿಶಾದಲ್ಲಿ ಬಿಜು ಜನತಾ ದಳ, ಕರ್ನಾಟಕದಲ್ಲಿ ಜಾತ್ಯತೀತ ಜನತಾ ದಳ, ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‍ಸಿಪಿ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಬಿಎಸ್‍ಪಿ, ಬಿಹಾರದಲ್ಲಿ ಆರ್‌ಜೆಡಿ, ಜೆಡಿಯು, ತಮಿಳುನಾಡಿನಲ್ಲಿ ಡಿಎಂಕೆ, ಅಣ್ಣಾ ಡಿಎಂಕೆ, ಆಂಧ್ರಪ್ರದೇಶದಲ್ಲಿ ವೈಎಸ್‍ಆರ್ ಕಾಂಗ್ರೆಸ್, ತೆಲುಗು ದೇಶಂ, ತೆಲಂಗಾಣಾದಲ್ಲಿ ಟಿಆರ್‍ಎಸ್, ಪಶ್ಚಿಮ ಬಂಗಾಳಾದಲ್ಲಿ ಟಿಎಂಸಿ, ಜಮ್ಮು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್…ಹೀಗೆ ಇನ್ನೂ ಹಲವು ಪ್ರಾದೇಶಿಕ ಪಕ್ಷಗಳು ಇದ್ದು ಕಾಲ ಕಾಲಕ್ಕೆ ತಮ್ಮ ಅಸ್ತಿತ್ವವನ್ನು ದಾಖಲಿಸಿವೆ. ಕೆಲವು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳನ್ನು ಆಯಾ ರಾಜ್ಯದಿಂದ ಗಡಿಪಾರು ಮಾಡುವಲ್ಲಿ ಕೂಡಾ ಅದ್ಭುತ ಎನ್ನಬಹುದಾದ ಜಯ ಕಂಡಿವೆ. ಮತ್ತೆ ಕೆಲವು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳನ್ನು “ಲೆಟರ್ ಹೆಡ್” ಪಕ್ಷವನ್ನಾಗಿಸಿವೆ.

ಪಶ್ಚಿಮ ಬಂಗಾಳಾದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಉಭಯ ಕಮ್ಯೂನಿಸ್ಟ್ ಪಕ್ಷಗಳನ್ನೂ, ಖರ್ಗೆ ನೇತೃತ್ವದ ಕಾಂಗ್ರೆಸ್ ಪಕ್ಷವನ್ನೂ ಗಡಿಪಾರು ಮಾಡುವಲ್ಲಿ ಯಶಸ್ವಿಯಾಗಿದೆ. ಸಿಪಿಎಂ ನೇತೃತ್ವದ ಸರ್ಕಾರ ಆ ರಾಜ್ಯದಲ್ಲಿ ಮೂರು ದಶಕಕ್ಕೂ ಹೆಚ್ಚಿನ ಅವಧಿಗೆ ಆಡಳಿತ ನಡೆಸಿದ್ದು ಹೌದೇ ಎಂಬ ಅನುಮಾನ ಮೂಡುವಂತಾಗಿದೆ. ತಮಿಳುನಾಡಿನಲ್ಲಿ ಬಿಜೆಪಿ ಮೊಳಕೆ ಒಡೆಯುವುದಕ್ಕೆ ಅವಕಾಶವೇ ಇಲ್ಲ ಎನ್ನುವುದು ವರ್ತಮಾನದ ವಾಸ್ತವ. ಡಿಎಂಕೆ ಅಣ್ಣಾಡಿಎಂಕೆಗಳು ಆ ರಾಜ್ಯದಲ್ಲಿ ಕಟ್ಟಿರುವ ಭದ್ರ ಕೋಟೆಯಲ್ಲಿ ನುಸುಳಲು ತಥಾಕಥಿತ ರಾಷ್ಟ್ರೀಯ ಪಕ್ಷಗಳಿಗೆ ಕಿಂಡಿಯೇ ಕಾಣಿಸುತ್ತಿಲ್ಲ. ಒಂದಾನೊಂದು ಕಾಲದಲ್ಲಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಆಡಳಿತ ನಡೆಸಿತ್ತು. ಅದರ ಸ್ಥಾನ ಪಲ್ಲಟಗೊಂಡು “ಲೆಟರ್ ಹೆಡ್” ಪಕ್ಷದ ಹಂತಕ್ಕೆ ಬಂದು ನಿಂತು ಬರೋಬ್ಬರಿ ಐವತ್ತೈದು ವರ್ಷವೇ ಕಳೆದುಹೋಗಿದೆ.

ಒಡಿಶಾದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಗೆ ಎಡೆ ಇಲ್ಲ ಎನ್ನುವುದನ್ನು ಬಿಜು ಜನತಾ ದಳ ಪದೇ ಪದೇ ಸಾಬೀತುಗೊಳಿಸಿದೆ. ಎರಡು ದಶಕದಿಂದ ಅಲ್ಲಿ ಅದರದೇ ಆಡಳಿತ. ಆಂಧ್ರ ಪ್ರದೇಶದಲ್ಲಿ, ತೆಲಂಗಾಣಾದಲ್ಲೂ ಇದೇ ಸ್ಥಿತಿ. ಬಿಹಾರದ ಆಡಳಿತದಲ್ಲಿ ಕೈಯಾಡಿಸುವ ಬಿಜೆಪಿ ಯತ್ನಕ್ಕೆ ಹಿನ್ನಡೆಯಾಗಿದೆ. ಅಲ್ಲೇನಿದ್ದರೂ ಜೆಡಿಯು, ಆರ್‍ಜೆಡಿ ಪಾರಮ್ಯ. ಹೀಗೆ ರಾಷ್ಟ್ರೀಯ ಪಕ್ಷಗಳನ್ನು ಅಪ್ರಸ್ತುತಗೊಳಿಸಿರುವ ಪ್ರಾದೇಶಿಕ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಏಗಬೇಕಾಗಿರುವ ಸ್ಥಿತಿಗೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಉಭಯ ಕಮ್ಯೂನಿಸ್ಟ್ ಪಕ್ಷಗಳು ಬಂದಿವೆ. ಸದ್ಯಕ್ಕೆ ಬಿಜೆಪಿ ಈ ಪಕ್ಷಗಳಷ್ಟು ದುರ್ಬಲವಾಗಿಲ್ಲ; ಪ್ರಾದೇಶಿಕ ಪಕ್ಷಗಳನ್ನು ನುಂಗಿನೊಣೆಯುವ ಅದರ ಯತ್ನ ಯಥಾಪ್ರಕಾರ ಮುಂದುವರಿದಿದೆ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಪದಾಧಿಕಾರಿಗಳಿಲ್ಲದ ಪದವಿಯಲ್ಲಿ ಖರ್ಗೆ ಏಕಾಂಗಿ

ಇದೀಗ ನಡೆದಿರುವ, ಮುಂದೆ ನಡೆಯಲಿರುವ ಚುನಾವಣೆಯಲ್ಲಿ ರಾಷ್ಟ್ರೀಯ ಇಲ್ಲವೆ ಪ್ರಾದೇಶಿಕ ಪಕ್ಷಗಳ ಆಡಳಿತ ವೈಖರಿ ಚರ್ಚೆಗೆ ಬರುತ್ತದೆಂದು ನಿರೀಕ್ಷಿಸಿದವರು ಮೂರ್ಖರ ಸ್ವರ್ಗದಲ್ಲಿ ಇದ್ದಾರೆಂದೇ ಅರ್ಥ. ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ನಡೆಯುವುದು ಇಲ್ಲವೇ ಇಲ್ಲ ಎಂಬಷ್ಟು ಅಪರೂಪವಾಗಿದೆ. ರಾಷ್ಟ್ರೀಯ ಪಕ್ಷಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದನ್ನು ನೋಡಿರುವ ಜನ ತಮ್ಮತಮ್ಮ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಕಡಿದು ಗುಡ್ಡೆ ಹಾಕಿರುವುದನ್ನೂ ಕಂಡಿದ್ದಾರೆ. ಯಾರು ಹಿತವರು ನಿಮಗೆ ಈ ಮೂವರೊಳಗೆ ಎಂದು ಕೇಳಿದರೆ ಯಾರೂ ಹಿತವರಲ್ಲ ಎಂಬ ಉತ್ತರ ಕೊಡುತ್ತಾರೆ. ಆದರೆ ನಮ್ಮದು ಚುನಾವಣಾ ಆಧರಿತ ಜನತಂತ್ರ. ಕುರಡು ಕಣ್ಣಿಗಿಂತ ಮೆಳ್ಳೆಗಣ್ಣು ಲೇಸು ಎನ್ನುವುದು ನಮ್ಮ ಲೆಕ್ಕಾಚಾರ.

ಇದರ ಆಚೆಗೆ ಸುಲಭದಲ್ಲಿ ಜನರನ್ನು ಯಾಮಾರಿಸಬಹುದಾದ ಆಮಿಷ. ಆಮಿಷವೊಡ್ಡದ ಪಕ್ಷಗಳಿಲ್ಲ ಆಮಿಷಕ್ಕೆ ಬಲಿಯಾಗದ ಮತದಾರೂ ಕಡಿಮೆ ಆಗುತ್ತಿದ್ದಾರೆ ಎಂಬಂಥ ದುರಂತ ಸ್ಥಿತಿಗೆ ನಮ್ಮ ಪ್ರಜಾಪ್ರಭುತ್ವ ಬಂದು ನಿಂತಿರುವುದಕ್ಕೆ ಎಲ್ಲ ಪಕ್ಷಗಳೂ ಹೊಣೆ ಹೊರಬೇಕು. ಕೆಲವು ಪಕ್ಷಗಳು ಹಣ ತೋರಿಸಿ ಮತ ಪೀಕುತ್ತವೆ, ಮತ್ತೆ ಕೆಲವು ರೌಡಿಗಳನ್ನು ಮುಂದಿಟ್ಟುಕೊಂಡು ಮತ ಕೀಳುತ್ತವೆ. ಜಾತಿ ಧರ್ಮ ಕೋಮು ಇವೆಲ್ಲವೂ ಈ ಹೊತ್ತು ಓಟು ಒಡೆಯುವ ಮತ್ತು ಹೊಡೆಯುವ ತಂತ್ರ ರಾಜಕಾರಣದ ಭಾಗ. ಹೀಗಿರುವಾಗ ಅಭಿವೃದ್ಧಿ ಬಗ್ಗೆ ಮಾತು ಎಲ್ಲಿಂದ ಬರಬೇಕು.

ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ ಎಂದರು ದಾಸವರೇಣ್ಯರು. ಯಾವುದನ್ನು ಬಿಡಬೇಕು ಎಂದಿದೆಯೋ ಅದನ್ನೇ ಇವತ್ತಿನ ರಾಜಕಾರಣ ಹಿಡಿಯ ಹೊರಟಿದೆ. ಭ್ರಷ್ಟಾಚಾರ ಬಿಡಿ ಎಂದರು ನಮ್ಮ ಹಿಂದಿನವರು. ಬಿಡಲಿಲ್ಲ. ಲಂಚಾವತಾರ ಬೇಡ ಎಂದರೂ ಕೇಳದೆ ರಾಜಕಾರಣ ಅದಕ್ಕೇ ಕಚ್ಚಿಕೊಂಡಿತು. ಸುಳ್ಳು ತಟವಟ ಸಲ್ಲದು ಎಂದರು. ಅದೇ ಜೀವನೋಪಾಯವಾಯಿತು. ಮೋಸ ಮಾಡಬೇಡಿ ಎಂದರು. ಮೋಸ ಮಾಡದಿದ್ದರೆ ಜನರೇ ನಂಬದ ಸ್ಥಿತಿಯನ್ನು ತಂದಿಟ್ಟರು. ರಾಜಕಾರಣಿಗಳು ಬಾಯಿ ಬಿಟ್ಟರೆಂದರೆ ಅಲ್ಲಿ ಕೇಳುವುದು ಕಡಿ ಕೊಚ್ಚು ಕೊಲ್ಲು ಕಾಲುಕೈ ಮುರಿ ಎಂಬಂಥ ಮುಕ್ತಾಫಲಗಳು. ಕಳೆದ ವಾರ ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಅಲ್ಲಿಯ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮ “ರಾಹುಲ್ ಗಾಂಧಿ ಸದ್ದಾಂ ಹುಸೇನರಂತೆ ಕಾಣಿಸ್ತಿದ್ದಾರೆ” ಎಂದು ಗಡ್ಡಧಾರಿ ರಾಹುಲರನ್ನು ಲೇವಡಿ ಮಾಡಿದರು. ಅವರು ಗಡ್ಡ ಬಿಟ್ಟಿರುವುದಕ್ಕೂ ಚುನಾವಣೆಗೂ ಏನು ಸಂಬಂಧ? ಸಂಸ್ಕೃತಿಯ ಮಾತನ್ನಾಡುವ ಬಿಜೆಪಿ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದು ವರದಿಯಾಗಿಲ್ಲ.

ಈ ಹಿಂದಿನ ಚುನಾವಣೆಗಳಲ್ಲಿ ಮೋದಿಯವರನ್ನು “ಸಾವಿನ ವ್ಯಾಪಾರಿ” ಎಂದು ಸೋನಿಯಾ ಗಾಂಧಿ ಕರೆದರು. “ಚೌಕಿದಾರ್ ಏಕ್ ಚೋರ್ ಹೈ” ಎಂದು ರಾಹುಲ್ ಗಾಂಧಿ ಕುಟುಕಿ ಸಂಭ್ರಮಿಸಿದರು. “ಚಹಾ ಮಾರುತ್ತಿದ್ದವ ಏನು ಮಾಡಿಯಾನು” ಎಂದು ಜೈರಾಂ ರಮೇಶ್ ಕಟಕಿಯಾಡಿದರು. ಮೋದಿ ಹಾಗೂ ಬಿಜೆಪಿ ಪಾಲಿಗೆ ಪ್ರತಿ ಟೀಕೆ, ಮೂದಲಿಕೆಯೂ ಓಟಾಗಿ ಪರಿವರ್ತನೆ ಆಯಿತೆನ್ನುವುದನ್ನು ಗಮನಿಸಿದರೆ ಎಲ್ಲಿ ಯಾವಾಗ ಏನನ್ನು ಹೇಳಬೇಕೆಂಬ ಪಾಠ ದೊರೆಯುತ್ತದೆ. ಕೇಳುವ ಮನಸ್ಸಿದ್ದವರು ಕಲಿಯಲು ಬೇಕಷ್ಟು ಪಾಠವಿರುವ ವಾತಾವರಣ ನಮ್ಮಲ್ಲಿದೆ. ಆದರೆ ಅರಿವು ನಮಗೆ ಬೇಡವೇ ಬೇಡ. ಅದು ಚಿಂದಿಯಾದ ಅರಿವೆ ಎನ್ನುವುದು ರಾಜಕಾರಣಿಗಳ ವಾದ. ವಿವಾದವನ್ನು ಬೇಕೋಬೇಡವೋ ಮೈಮೇಲೆ ಎಳೆದುಕೊಳ್ಳುವ ಪ್ರವೃತ್ತಿ ರಾಜಕಾರಣದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಈ ಮಾತಿಗೆ ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆ ಸಾಗಿದ್ದಾಗ ವೀರ ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿ ಆಡಿದ ಮಾತು ಮತ್ತು ಅದು ಸೃಷ್ಟಿಸಿದ ವಿವಾದ. ರಾಜಕಾರಣಿಗಳಿಗೆ ಅನಗತ್ಯವಾದುದೆಲ್ಲವೂ ಅಗತ್ಯವಾಗುವ ವಿಪರೀತಕ್ಕೆ ಇದು ಮತ್ತೊಂದು ನಿದರ್ಶನ. ಈಗ ಈ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಸರದಿ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಗುಜರಾತ್ ಚುನಾವಣೆ: ಯಾರು ಹಿತವರು ಈ ಮೂವರೊಳಗೆ!?

ಖರ್ಗೆಯವರ ಪ್ರಕಾರ ಮೋದಿಯವರನ್ನು ಮಾತ್ರವೇ ಮುಂದಿಟ್ಟುಕೊಂಡು ನಡೆಸುವ ಚುನಾವಣೆ ಜನತಂತ್ರಕ್ಕೆ ಮಾಡುವ ಅಪಚಾರ. ರಾವಣನಂತೆ ನಿಮಗೆ ನೂರು ತಲೆ ಇದೆಯೇ ಎಂಬ ಅವರ ಪ್ರಶ್ನೆ ರಾಮಾಯಣ ಕುರಿತಾಗಿ ಅವರ ಅಜ್ಞಾನವನ್ನೂ ಹೇಳುತ್ತದೆ. ದೇಶದಲ್ಲಿ ಸಹಸ್ರ ಸಂಖ್ಯೆಗೂ ಹೆಚ್ಚಿನ ರಾಮಾಯಣವಿದೆ ಎನ್ನುತ್ತಾರೆ ಸಂಶೋಧಕರು. ಯಾವುದೇ ರಾಮಾಯಣದಲ್ಲೂ ನೂರು ತಲೆಯ ರಾವಣ ಇಲ್ಲ. ದಶಕಂಠ ನಮಗೆಲ್ಲ ಗೊತ್ತು. ಖರ್ಗೆಯವರಿಗೆ ಈ ಶತಶಿರ ರಾವಣ ಎಲ್ಲಿ ಸಿಕ್ಕು ಬಿದ್ದನೋ, ಇರಲಿ. ಪಂಚಾಯತ್, ನಗರಸಭೆ, ಪುರಸಭೆ ಚುನಾವಣೆಗಳಲ್ಲೂ ಪ್ರಚಾರ ಮಾಡುತ್ತೀರಿ. ನಿಮ್ಮ ಮುಖ ನೋಡಿ ನೋಡಿ ಸಾಕಾಗಿ ಹೋಗಿದೆ ಎಂದೂ ಖರ್ಗೆ ಲೇವಡಿ ಮಾಡಿದ್ದಾರೆ.

ಭಾರತದ ರಾಜಕೀಯ ನಾಯಕ ಕೇಂದ್ರಿತ ಎನ್ನುವುದನ್ನು ಇತರ ರಾಜಕಾರಣಿಗಳಿಗಿಂತ ಹೆಚ್ಚು ಚೆನ್ನಾಗಿ ಬಲ್ಲವರು ಖರ್ಗೆ. ಇವತ್ತು ಬಿಜೆಪಿಯ ಮುಖ್ಯ ಮುಖ ಮೋದಿ. ಇಂದಿರಾ ಗಾಂಧಿ ಹತ್ಯೆಯಾಗುವವರೆಗೂ ಅವರೇ ಕಾಂಗ್ರೆಸ್‍ನ ಮುಖವಾಗಿದ್ದರು. ಅವರ ತರುವಾಯದಲ್ಲಿ ರಾಜೀವ ಗಾಂಧಿ ಮುಖವಾದರು. ಮನಮೋಹನ ಸಿಂಗ್ ಹತ್ತು ವರ್ಷ ಪ್ರಧಾನಿ ಆಗಿದ್ದರೂ ಅವರನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವ ಧೈರ್ಯ ಕಾಂಗ್ರೆಸ್‍ಗೆ ಬರಲಿಲ್ಲ. ಚುನಾವಣಾ ರಾಜಕಾರಣದಲ್ಲಿ ಜನರನ್ನು ಸೆಳೆಯುವುದಕ್ಕೆ ಮೋದಿಯವರನ್ನು ಬಳಸಿಕೊಳ್ಳುವುದಕ್ಕೆ ಬಿಜೆಪಿ ಸರ್ವತಂತ್ರ ಸ್ವತಂತ್ರ. ಈಗ ಖರ್ಗೆಯವರ ಸಮಸ್ಯೆ ಎಂದರೆ ಅವರ ಪಕ್ಷಕ್ಕೆ ಒಂದು ಸಮರ್ಥ ಮುಖ ಇಲ್ಲವಾಗಿರುವುದು. ನೆಹರೂ, ಇಂದಿರಾ, ರಾಜೀವ್ ಹೀಗೆ ಮೂರು ಮುಖವುಳ್ಳ ಮುಖವಾಡವನ್ನು ಧರಿಸಿಯೇ ಜನರ ಮುಂದೆ ಹೋಗಬೇಕಿರುವ ಸ್ಥಿತಿ ಖರ್ಗೆಯವರಿಗೆ ಬಂದಿದ್ದರೆ ಅದಕ್ಕೆ ಖಂಡಿತವಾಗಿಯೂ ಮೋದಿ ಕಾರಣರಲ್ಲ.

ಇನ್ನು ರಾವಣನ ಪ್ರಸ್ತಾಪ ಮತ್ತು ಮೋದಿಗೆ ರಾವಣನ ಹೋಲಿಕೆ ಮಾಡಿರುವ ಪರಿಯ ವಿಚಾರ. ರಾಮಾಯಣದ ಪ್ರಕಾರ ಯುದ್ಧಕ್ಕೆ ಮೊದಲು ರಾಮ ಮಾಡುವ ಪೂಜೆಗೆ ಪುರೋಹಿತನಾಗಿ ಬಂದವನು ರಾವಣ. ಪೂಜೆ ಬಳಿಕ ವಿಜಯೀಭವ ಎಂದು ರಾಮನಿಗೆ ಆಶೀರ್ವದಿಸಿದವನೂ ರಾವಣನೇ. ಅತ್ತ ಶ್ರೀಲಂಕಾದಲ್ಲಿ ರಾವಣ “ರಾಷ್ಟ್ರೀಯ ನಾಯಕ” (ನ್ಯಾಷನಲ್ ಹೀರೋ). ಒಂದು ದೇಶದ ನ್ಯಾಷನಲ್ ಹೀರೋ ಜೊತೆ ನಮ್ಮ ದೇಶದ ಪ್ರಧಾನಿಯನ್ನು ಸಮೀಕರಿಸುವ ಖರ್ಗೆ ನಿಲುವಿಗೆ ಭಾರತೀಯ ಜನತಾ ಪಾರ್ಟಿ ಕೃತಜ್ಞವಾಗಿರಬೇಕು. ಹೀರೋ ಜೊತೆ ಯಾರ್ಯಾರನ್ನೋ ಕೂರಿಸುವುದು ನಮ್ಮ ಜಾಯಮನವಲ್ಲ ಎನ್ನುವುದು ಕಾಂಗ್ರೆಸ್‍ಗೂ ಗೊತ್ತಿದೆ, ಬಿಜೆಪಿಗೂ ಗೊತ್ತಿದೆ. ಫಾಯ್ದೆ ತಾರದ ಇಂಥ ಮಾತು ಆರೋಪದ ಆಚೆಗೆ ನೋಡುವುದು ನಮ್ಮ ರಾಜಕಾರಣಕ್ಕೆ ಸಾಧ್ಯವಾಗುವುದು ಯಾವಾಗ? ಶಿವಭಕ್ತ ಆ ರಾವಣನೇ ಬಲ್ಲ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಸಡಿಲವಾಗುತ್ತಿರುವ ರಾಜ್ಯ-ಕೇಂದ್ರ ಸಂಬಂಧ: ಜ್ವಾಲಾಮುಖಿ ಸ್ಫೋಟ?

Exit mobile version