Site icon Vistara News

ಮೊಗಸಾಲೆ ಅಂಕಣ: ಯಾರು ಹಿತವರು ನಮಗೆ ಈ ಎರಡು ಒಕ್ಕೂಟದೊಳಗೆ?

UPA and NDA

ಮಹಾಭಾರತದ ಯುದ್ಧಕ್ಕೆ ಕುರುಕ್ಷೇತ್ರ ಅಣಿಯಾಗಿದೆ. ಕೌರವರ ಪಾಳಯದ ಹನ್ನೊಂದು ಲಕ್ಷ ಅಕ್ಷೋಹಿಣಿ ಮತ್ತು ಪಾಂಡವ ಪಾಳಯದ ಏಳು ಲಕ್ಷ ಅಕ್ಷೋಹಿಣಿ ಸೇನೆ ಪರಸ್ಪರ ತಲೆ ತರಿಯಲು ಸನ್ನದ್ಧವಾಗಿ ಯುದ್ಧ ಘೋಷಣೆಗೆ ಕಾದಿದೆ. ಯುದ್ಧದಲ್ಲಿ ನೀತಿ ನಿಯಮವಿದ್ದ ಕಾಲ ಅದು. ಉಭಯ ಸೇನಾ ಮುಖ್ಯಸ್ಥರು ಸೂಚನೆ ಕೊಡದೆ ಸೈನಿಕರಲ್ಲಿ ಯಾರೊಬ್ಬರೂ ಆಯುಧ ಎತ್ತುವಂತಿರಲಿಲ್ಲ. ಎದುರು ಬದುರು ಸೇನೆಯ ಮುಂಚೂಣಿಯಲ್ಲಿ ನಿಂತ ಪ್ರಮುಖರನ್ನು ಪರಸ್ಪರ ಪರಿಚಯ ಮಾಡಿಕೊಳ್ಳುವ ಪರಿಪಾಠವೂ ಇತ್ತು. ಇದೆಲ್ಲವೂ ಆ ಹದಿನೆಂಟು ದಿನದಲ್ಲಿ ಇತಿಹಾಸವಾಯಿತು. ಮತ್ತೆ ಉಳಿದುದು ರಕ್ತಸಿಕ್ತ ಕುರುಕ್ಷೇತ್ರ; ಬಸಿರು ಬಡಿದುಕೊಳ್ಳುವ ತಾಯಂದಿರ, ಅನಾಥರ ಆಕ್ರಂದನ.

ಕಳೆದ ವಾರ ಬೆಂಗಳೂರಿನಲ್ಲಿ ಮತ್ತು ದೆಹಲಿಯಲ್ಲಿ ಕ್ರಮವಾಗಿ ನಡೆದ ಯುಪಿಎ (UPA) ಮತ್ತು ಎನ್‍ಡಿಎ (NDA) ಒಕ್ಕೂಟ ನಾಯಕರ ಸಮಾವೇಶ ಒಂಥರಾ ಕುರುಕ್ಷೇತ್ರಕ್ಕೆ ಅಣಿಯಾಗಿರುವ ಸೇನೆಯಂತೆ, ಹಿರಿಕಿರಿಯ ರಜಕಾರಣಿಗಳು ಸೇನಾ ಪ್ರಮುಖರಂತೆ ಕಂಡರೆ ಅದರಲ್ಲಿ ಅಚ್ಚರಿಯೂ ಇಲ್ಲ; ಅತಿಶಯೋಕ್ತಿಯೂ ಇಲ್ಲ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತದ ಕೇಂದ್ರ ಅಧಿಕಾರ ಹಿಡಿಯುವುದು ಯಾವುದೇ ಯುದ್ಧಕ್ಕೆ ಕಡಿಮೆ ಎನಿಸದ ವಿದ್ಯಮಾನ. ಚುನಾವಣೆ ಎಂದ ಮೇಲೆ ಸೋಲು ಗೆಲುವು ಸಹಜ. ಗೆದ್ದವರು ಬೀಗುವುದು ಸೋತವರು ಮುಲುಗುವುದು ಸಹಜ ಸಾಮಾನ್ಯ. ಚುನಾವಣೆಯಲ್ಲಿ ಮತದಾರರೇ ನಿರ್ಣಾಯಕ ನ್ಯಾಯಮೂರ್ತಿಗಳು. ಅವರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕಾದ್ದು ಜನತಂತ್ರದ ಅಸಲಿಯತ್ತು.

ಹದಿನೆಂಟನೇ ಲೋಕಸಭೆಯನ್ನು ಜನ ಆಯ್ಕೆ ಮಾಡಬೇಕಿರುವುದು ಬರಲಿರುವ 2024ರ ಏಪ್ರಿಲ್-ಮೇ ತಿಂಗಳಲ್ಲಿ. ಅಲ್ಲಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ/ ಎನ್‍ಡಿಎ (National Democratic Alliance) ಸರ್ಕಾರ ಹತ್ತು ವರ್ಷದ ಅವಧಿಯನ್ನು ಪೂರೈಸುತ್ತದೆ. 2004-2014 ರವರೆಗೆ ಹತ್ತು ವರ್ಷ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್/ಯುಪಿಎ (united progressive alliance) ಸರ್ಕಾರ ಅಧಿಕಾರದಲ್ಲಿತ್ತು. ಆ ದಾಖಲೆಯನ್ನು ಮೋದಿ ಆಡಳಿತ ಸರಿಗಟ್ಟಿದಂತಾಗುತ್ತದೆ. ಮೋದಿ ಆಡಳಿತ ಇನ್ನೊಂದು ಅವಧಿಗೆ ಮುಂದುವರಿಯಲೇಬೇಕು ಎನ್ನುವುದು ಎನ್‍ಡಿಎ ಛಲ ಸಹಿತದ ಅಪೇಕ್ಷೆ. ಮೋದಿ ಆಡಳಿತವನ್ನು ಅಂತ್ಯ ಕಾಣಿಸಲೇಬೇಕು ಎನ್ನುವುದು ಯುಪಿಎ ಮೈತ್ರಿಕೂಟದ ಹಟಮಿಶ್ರಿತ ಛಲ. ಕುರ್ಚಿ ಬಿಡಲಾರೆ ಎನ್ನುವ ಮೋದಿ ಜಿಗುಟಿನ ವಿರುದ್ಧ ಎನ್‍ಡಿಯೇತರ ವಿರೋಧ ಪಕ್ಷಗಳು ಪ್ರಬಲ ಹೋರಾಟಕ್ಕೆ ಅಣಿಯಾಗುತ್ತಿವೆ. ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಎರಡೂ ಪಾಳಯಗಳು ಜನರ ಪಾದದ ಬಳಿ ನಿಂತು ಗೋಗರೆಯಲಾರಂಭಿಸಿವೆ.

ದಶಕಗಳಿಂದ ಕಾಂಗ್ರೆಸ್ ನೇತೃತ್ವದಲ್ಲಿ ರಾಜಕಾರಣ ಮಾಡಿರುವ ಯುಪಿಎ ಈಗ ಆ ಹೆಸರನ್ನು ಕಿತ್ತು ಹಾಕಿ ಹೊಸ ರೂಪದೊಂದಿಗೆ ದೇಶದ ಮುಂದೆ ಬಂದಿದೆ. ಬೆಂಗಳೂರಿನಲ್ಲಿ ನಡೆದ 26 ಪ್ರತಿಪಕ್ಷ ನಾಯಕರ ಸಭೆಯಲ್ಲಿ ಒಕ್ಕೂಟಕ್ಕೆ ಐ.ಎನ್.ಡಿ.ಐ.ಎ = ಇಂಡಿಯಾ (𝐈𝐧𝐝𝐢𝐚𝐧 𝐍𝐚𝐭𝐢𝐨𝐧𝐚𝐥 𝐃𝐞𝐯𝐞𝐥𝐨𝐩𝐦𝐞𝐧𝐭𝐚𝐥 𝐈𝐧𝐜𝐥𝐮𝐬𝐢𝐯𝐞 𝐀𝐥𝐥𝐢𝐚𝐧𝐜𝐞) ಎಂದು ನಾಮಕರಣ ಮಾಡಲಾಗಿದೆ. ಈ ಹಿಂದಿದ್ದ ಯುಪಿಎ ಒಕ್ಕೂಟದಲ್ಲಿ ಇರದ ತೃಣಮೂಲ ಕಾಂಗ್ರೆಸ್, ಸಿಪಿಎಂ, ಸಿಪಿಐ ಮುಂತಾದ ಪಕ್ಷಗಳೂ ಐ.ಎನ್.ಡಿ.ಐ.ಎದಲ್ಲಿ ಸ್ಥಾನ ಕಂಡುಕೊಂಡಿರುವ ಕಾರಣ ಈ ಹೊಸ ನಾಮಕರಣ. ಅತ್ತ ದೆಹಲಿಯಲ್ಲಿ ನಡೆದ ಎನ್‍ಡಿಎ ಸಭೆ 38 ಪಕ್ಷಗಳ ಒಕ್ಕೂಟ ತಾನು ಎಂದು ಹೇಳಿಕೊಂಡಿತು.

nda alliance

ಐ.ಎನ್.ಡಿ.ಐ.ಎದಲ್ಲಿ ವೇದಿಕೆ ಹಂಚಿಕೊಂಡಿರುವ ಪಕ್ಷಗಳಲ್ಲಿ ಗಮನ ಸೆಳೆಯುವುದು ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್. ಇದು ಸಣ್ಣ ಬೆಳವಣಿಗೆಯಲ್ಲ. ಪಶ್ಚಿಮ ಬಂಗಾಳದಲ್ಲಿ ತಾನುಂಟೋ ಮೂಲೋಕವುಂಟೋ ಎಂದು 34 ವರ್ಷ ಆಡಳಿತ ನಡೆಸಿ ಮೆರೆಯುತ್ತಿದ್ದ ಸಿಪಿಎಂ ಇಂದು ಲೆಟರ್‍ಹೆಡ್ ಪಕ್ಷದ ಸ್ಥಾನಕ್ಕೆ ಇಳಿದಿರುವುದಕ್ಕೆ ಕಾರಣ ತೃಣಮೂಲ ಕಾಂಗ್ರೆಸ್ ಮತ್ತು ಅದರ ನಾಯಕಿ ಮಮತಾ ಬ್ಯಾನರ್ಜಿ. 2019ರ ಲೋಕಸಭಾ ಚುನಾವಣೆ ಮುಗಿದ ಸಂದರ್ಭ. ಆ ರಾಜ್ಯದ ಒಟ್ಟಾರೆ 42 ಲೋಕಸಭಾ ಸೀಟುಗಳ ಪೈಕಿ 22 ಸೀಟು ಟಿಎಂಸಿ ಪಾಲಾಗಿತ್ತು. ಬಿಜೆಪಿ ಅಚ್ಚರಿಯ 18 ಸ್ಥಾನ ಪಡೆದರೆ ಕಾಂಗ್ರೆಸ್ ಎರಡು ಸೀಟಿಗೆ ಸಮಾಧಾನ ಪಟ್ಟುಕೊಂಡಿತ್ತು. ಸಿಪಿಎಂದು ಮಾತ್ರ ಶೂನ್ಯ ಸಾಧನೆ. ಅಂದು ಮಾತಾಡಿದ್ದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ “ಕೇಂದ್ರ ಸರ್ಕಾರದ ಹಲವು ಜನವಿರೋಧಿ ನೀತಿ ಕಾರ್ಯಕ್ರಮಗಳನ್ನು ಮಮತಾ ಬ್ಯಾನರ್ಜಿ ವಿರೋಧಿಸುತ್ತಿರುವುದು ನಿಜವೇ ಹೌದಾದರೂ ಪಶ್ಚಿಮ ಬಂಗಾಳಾದಲ್ಲಿ ಅವರು ಮತ್ತು ಅವರ ಪಕ್ಷ ಜನತಂತ್ರದ ಕೊಲೆ ನಡೆಸಿರುವುದರಿಂದ ಆ ಪಕ್ಷದೊಂದಿಗೆ ವೇದಿಕೆ ಹಂಚಿಕೊಳ್ಳುವ ಪ್ರಶ್ನೆಯೇ ಇಲ್ಲ” ಎಂದಿದ್ದರು. ಇನ್ನೂ ಐದು ವರ್ಷ ಭರ್ತಿಯಾಗಿಲ್ಲ ಈ ಹೇಳಿಕೆಗೆ, ಯಚೂರಿಯವರು ಬೆಂಗಳೂರಿನಲ್ಲಿ ನಡೆದ ಐ.ಎನ್.ಡಿ.ಐ.ಎ ಸಭೆಯಲ್ಲಿ ಮಮತಾರೊಂದಿಗೆ ವೇದಿಕೆ ಹಂಚಿಕೊಂಡರು. ಕಾಲಾಯ ತಸ್ಮೈ ನಮಃ ಎಂದರೆ ಇದೇ ಇರಬೇಕು.

ಮೋದಿ ಆಳ್ವಿಕೆಯಿಂದ ಎದುರಾಗಿರುವ ದೊಡ್ಡ ಗಂಡಾಂತರದಿಂದ ದೇಶ ಪಾರಾಗಬೇಕಿದೆ. ಮೊದಲು ಈ ಕೆಲಸ ಎಂದೇ ಸಣ್ಣಪುಟ್ಟ ಮತಭೇದ ಮರೆಯುವುದು ಅನಿವಾರ್ಯ ಎಂಬ ಸಿಪಿಎಂ ನಿಲುವು ಮೆಚ್ಚಬೇಕಾದ್ದೇ. ಆದರೆ ಸಿಪಿಎಂ ವಿಚಾರದಲ್ಲಿ ಮಮತಾ ಬ್ಯಾನರ್ಜಿ ಏನು ಹೇಳಲಿದ್ದಾರೆನ್ನುವುದು ಕುತೂಹಲಕಾರಿ, ಏಕೆಂದರೆ ದೀದಿ ಈ ವಿಚಾರದಲ್ಲಿ ಇನ್ನೂ ತುಟಿಪಿಟಿಕ್ ಎಂದಿಲ್ಲ. ಈ ಬಗೆಯ ವೈರುಧ್ಯ ವಿಪರ್ಯಾಸಗಳೊಂದಿಗೇ ಹೊಸ ಒಕ್ಕೂಟವನ್ನು ಅಧಿಕಾರಕ್ಕೆ ತರುವ ಹಂಬಲದಲ್ಲಿ ಬಗೆಬಗೆಯ ರಾಜಿಗೆ ಕಾಂಗ್ರೆಸ್ ಕೂಡಾ ಅಣಿಯಾಗಿದೆ ಎನ್ನುವುದು ಕೂಡಾ ಮೆಚ್ಚುವಂಥ ಬೆಳವಣಿಗೆ. ಲೋಕಸಭಾ ಚುನಾವಣೆ ಬಂದಾಗೆಲ್ಲಾ ಉಭಯ ಬಣದಲ್ಲಿ ಪ್ರಧಾನಿ ಯಾರೆಂಬ ಚರ್ಚೆ ಸಾಮಾನ್ಯ. ಒಂದಾನೊಂದು ಕಾಲದಲ್ಲಿ ನಿತಿಶ್ ಕುಮಾರ್ ಹೆಸರು ಚಲಾವಣೆಯಲ್ಲಿತ್ತು. ಈಗ ಅವರು ರೇಸಿನಲ್ಲಿ ಇದ್ದಂತಿಲ್ಲ. ಮಮತಾ ಬ್ಯಾನರ್ಜಿ ಈ ವಿಚಾರದಲ್ಲಿ ಒಂದು ಕಾಲನ್ನು ಮುಂದೆಯೇ ಇಟ್ಟಿದ್ದಾರೆ. ಆದರೆ ಸದ್ಯದ ಸ್ಥಿತಿಯಲ್ಲಿ ಐ.ಎನ್.ಡಿ.ಐ.ಎದ ಯಾವೊಂದು ಮಿತ್ರ ಪಕ್ಷವೂ 40-42 ಸೀಟಿಗಿಂತ ಹೆಚ್ಚು ಸ್ಥಾನ ಗೆಲ್ಲುವ ಸಂಭವ ಇಲ್ಲವೇ ಇಲ್ಲ. ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸುವ ಅವಕಾಶವಿರುವ ಕಾರಣ ಆ ಪಕ್ಷದ ಯಾರಾದರೊಬ್ಬರು ಕುರ್ಚಿ ಅಲಂಕರಿಸುವ ಸಾಧ್ಯತೆ ಆ ಒಕ್ಕೂಟದಲ್ಲಿದೆ.

ಇತ್ತ ಬಿಜೆಪಿ ವರಿಷ್ಟರಿಗೆ ಇದೇ ಮೊದಲ ಬಾರಿ ಜ್ಞಾನೋದಯವಾದಂತಿದೆ. 2014ರ ಪೂರ್ವದಲ್ಲಿ ಮೂರು ದಶಕ ಕಾಲ ಲೋಕಸಭೆಯಲ್ಲಿ ಯಾವೊಂದು ಪಕ್ಷವೂ ನಿಚ್ಚಳ ಬಹುಮತ ಪಡೆದಿರಲಿಲ್ಲ. ಮೋದಿ ಅಲೆ ಬಿಜೆಪಿಗೆ ಏಕಾಂಗಿಯಾಗಿ ಆಡಳಿತ ನಡೆಸುವಷ್ಟು ಬಹುಮತ ತಂದುಕೊಟ್ಟಿತು. 2019ರ ಚುನಾವಣೆ ಇದನ್ನು ಪುಷ್ಟೀಕರಿಸಿತು. ತಾನುಂಟೋ ಮೂಲೋಕವುಂಟೋ ಎಂದು ಮೆರೆಯುವ ಸರದಿ ಬಿಜೆಪಿಯದಾಯಿತು. ಎನ್‍ಡಿಎದಲ್ಲಿದ್ದ ಕೆಲವು ಪಕ್ಷಗಳು ದೂರ ಆದವು. ಮೋದಿ ತಲೆ ಕೆಡಿಸಿಕೊಳ್ಳಲಿಲ್ಲ. ಹೋಗುವವರು ಹೋಗಲಿ ಎಂಬ ದಾಷ್ಟ್ರ್ಯ ಬಿಜೆಪಿಯದಾಯಿತು. ಕರ್ನಾಟಕ ವಿಧಾನ ಸಭಾ ಚುನಾವಣೆ ಫಲಿತಾಂಶ ಕಾಲಿನ ಬುಡಕ್ಕೆ ಸುಡುವ ನೀರು ತಂದಾಗಲಷ್ಟೇ ಅದಕ್ಕೆ ಜ್ಞಾನೋದಯವಾಗಿದ್ದು. ಇದೀಗ 38 ಪಕ್ಷಗಳ ಒಕ್ಕೂಟ ಎನ್‍ಡಿಎ ಎನ್ನುತ್ತಿರುವ ಹಂತದಲ್ಲಿ ನಾವು ಗಮನಿಸಬೇಕಾದ್ದು ಅದರಲ್ಲಿ ಅನೇಕ ಪಕ್ಷಗಳು ಲೆಟರ್‍ಹೆಡ್ ಪಕ್ಷಗಳು ಎನ್ನುವುದು! ಎನ್‍ಡಿಎ ಮಿತ್ರ ಪಕ್ಷಗಳಲ್ಲಿ ಹದಿನೈದು ಪಕ್ಷಗಳು ಒಬ್ಬ ಲೋಕಸಭಾ ಸದಸ್ಯನನ್ನೂ ಹೊಂದಿಲ್ಲ. ಕಟಕಟೆ ದೇವರಿಗೆ ಮರದ ಜಾಗಟೆ ಎಂಬಂತಿದೆ ಎನ್‍ಡಿಎದ ಕೆಲವು ಮಿತ್ರ ಪಕ್ಷಗಳ ಸ್ಥಿತಿಗತಿ.

nda alliance

ಇದನ್ನೂ ಓದಿ: ಮೊಗಸಾಲೆ ಅಂಕಣ: ಬಿಜೆಪಿಯ ಸೂತಕದ ಕಳೆ ಎಂದು ಮುಗಿದೀತು?

ಈಗ ಮೋದಿ ಮತ್ತು ಅವರ ಬೆಂಬಲಿಗರಿಗೆ ಐ.ಎನ್.ಡಿ.ಐ.ಎ ಉದಯ ನಿಜ ಅರ್ಥದಲ್ಲಿ ಗಾಬರಿ ಹುಟ್ಟಿಸಿರುವ ಬೆಳವಣಿಗೆ. ಚುನಾವಣೆಯನ್ನು ಗೆಲ್ಲಬೇಕಾದ ಅನಿವಾರ್ಯದಲ್ಲಿ ಇರುವ ಬಿಜೆಪಿ ಈಗ ಕಂಡಕಂಡವರನ್ನು ಮಾತಾಡಿಸಲು ಮುಂದಾಗಿರುವುದಕ್ಕೆ ಕಾರಣ ಒಳ ಗಾಬರಿ. ತೋರಿಕೆಗೆ ಆ ಪಕ್ಷ ಮತ್ತು ಮುಖಂಡರು ಏನನ್ನೇ ಹೇಳಿಕೊಳ್ಳಲಿ ಒಳಗುದಿ ಇರುವುದು ಮಾತ್ರ ಸುಳ್ಳಲ್ಲ. ಲೋಕಸಭಾ ಚುನಾವಣೆಗೂ ಮುನ್ನ ಚತ್ತೀಸ್‍ಘಡ (90 ಸ್ಥಾನ); ಮಧ್ಯಪ್ರದೇಶ (230 ಸ್ಥಾನ); ರಾಜಸ್ತಾನ (200 ಸೀಟು); ತೆಲಂಗಾಣಾ (119 ಸ್ಥಾನ) ವಿಧಾನ ಸಭೆಗೆ ಚುನಾವಣೆ ನಡೆಯಲಿದೆ. ಕೇಂದ್ರ ಮನಸ್ಸು ಮಾಡಿದರೆ ಪ್ರಸ್ತುತ ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ಜಮ್ಮು ಕಾಶ್ಮೀರ ವಿಧಾನ ಸಭೆಗೂ ಚುನಾವಣೆ ನಡೆಯಬಹುದು. ಈ ಚುನಾವಣೆಗಳಲ್ಲಿ ಎನ್‍ಡಿಎ ಅಥವಾ ಐ.ಎನ್.ಡಿ.ಐ.ಎ ಯಾವ ರೀತಿಯಲ್ಲಿ ಮತದಾರರ ಪುರಸ್ಕಾರಕ್ಕೆ ಒಳಗಾಗಲಿವೆ ಎನ್ನುವುದು ಲೋಕಸಭಾ ಚುನಾವಣಾ ಪೂರ್ವದ ರೋಚಕ ವಿದ್ಯಮಾನಗಳಿಗೆ ಮುನ್ನುಡಿ ಎನಿಸಲಿದೆ.

ತಮಿಳು ನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣಾದಲ್ಲಿ ಬಿಜೆಪಿಯೂ ಲೆಟರ್‍ಹೆಡ್ ಪಕ್ಷವೇ. ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಇರುವ ಬಿಜೆಪಿ ಸರ್ಕಾರವನ್ನು ಉಳಿಸಿಕೊಳ್ಳುವ ಹೊಣೆ ಬಿಜೆಪಿ ಮೇಲಿದೆ. ಕರ್ನಾಟಕದಲ್ಲಿ ಇದ್ದ ಸರ್ಕಾರವನ್ನು ಕಳೆದುಕೊಂಡಿದ್ದಕ್ಕೆ ಅಸಲಿ ಕಾರಣವನ್ನು ಆ ಪಕ್ಷ ಇನ್ನೂ ಬಹಿರಂಗಪಡಿಸಿಲ್ಲ. ಜನ ಭಾವಿಸಿರುವಂತೆ ಭ್ರಷ್ಟಾಚಾರಕ್ಕೆ ತೆತ್ತ ತಲೆದಂಡ ಅದು. ಕರ್ನಾಟಕದ ಸೋಲು ಬಿಜೆಪಿಯ ಆತ್ಮಸ್ಥೈರ್ಯವನ್ನು ಕುಗ್ಗಿಸಿದೆ. ಈ ಸ್ಥಿತಿಯಿಂದ ಹೊರಬರುವ ದಾರಿಯೇ ಅದಕ್ಕೆ ಕಾಣಿಸಿಲ್ಲ. ಸೋಲು ಸಹಜ ಎಂಬಂತಿದ್ದರೆ ಕರ್ನಾಟಕ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಆ ಪಕ್ಷಕ್ಕೆ ಇಷ್ಟೆಲ್ಲ ಕಗ್ಗಂಟಾಗಬೇಕಿರಲಿಲ್ಲ.

ಚತ್ತೀಸ್‍ಘಡ ಮತ್ತು ರಾಜಸ್ತಾನದಲ್ಲಿ ತನ್ನ ಕೈಲಿರುವ ಸರ್ಕಾರವನ್ನು ಉಳಿಸಿಕೊಳ್ಳಬೇಕಿರುವ ಜವಾಬ್ದಾರಿ ಕಾಂಗ್ರೆಸ್ ಹೆಗಲೇರಿದೆ. ಕರ್ನಾಟಕವನ್ನು ಗೆದ್ದಷ್ಟು ಸುಲಭವಲ್ಲ ಈ ರಾಜ್ಯಗಳಲ್ಲಿರುವ ಸರ್ಕಾರವನ್ನು ಉಳಿಸಿಕೊಳ್ಳುವುದು ಎಂಬ ಪ್ರಜ್ಞೆ ಆ ಪಕ್ಷದಲ್ಲಿ ಜಾಗೃತವಾಗಿರಬೇಕಾದ ಸಮಯ ಇದು. ಐ.ಎನ್.ಡಿ.ಐ.ಎ ಮಿತ್ರ ಪಕ್ಷಗಳು ಈ ಚುನಾವಣೆಗಳಲ್ಲಿ ಹೇಗೆ ಸಹಕರಿಸುತ್ತವೆ ಎನ್ನುವುದು ಕುತೂಹಲ ಕೆರಳಿಸಿದೆ. ಇದೆಲ್ಲ ಇತ್ತ ಮುಗಿಯುವ ವೇಳೆಗೆ ಅಂದರೆ ಇಂದಿಗೆ ಕೇವಲ ಒಂಬತ್ತು ತಿಂಗಳಲ್ಲಿ ನಡೆಯುವ ಹಣಾಹಣಿ ಲೋಕಸಭಾ ಚುನಾವಣೆಯಲ್ಲಿ “ಯಾರು ಹಿತವರು ನಮಗೆ ಈ ಎರಡು ಒಕ್ಕೂಟದೊಳಗೆ” ಎನ್ನುವುದರ ತೀರ್ಮಾನವನ್ನು ಜನ ಮಾಡಬೇಕಿದೆ. ಮಾಡುತ್ತಾರೆ.

ಅಂದಹಾಗೆ ಮಹಾ ಭಾರತ ಯುದ್ಧ ನಡೆದ ಸಮಯದಲ್ಲಿ ಪರಮಾತ್ಮ ಪಾಂಡವರಿಗೆ ರಕ್ಷಕನಾಗಿ ನಿಂತಿದ್ದ. ಈಗ ದೇವರೂ ಗೊಂದಲದಲ್ಲಿರುವಂತಿದೆ. ಯಾರು ನ್ಯಾಯವಂತರು ಯಾರು ಅಲ್ಲ ಎನ್ನುವುದು ದೇವರ ಗೊಂದಲಕ್ಕೆ ಕಾರಣ ಎನ್ನಬಹುದು. ಇಷ್ಟಕ್ಕೂ ದೇವರು ಇದ್ದ ಪಕ್ಷ ನ್ಯಾಯದ ಪಕ್ಷ ಎಂದು ಧೈರ್ಯವಾಗಿ ಭಾವಿಸುವುದೂ ಕಷ್ಟವೇ. ನಮ್ಮ ದೇಶದ ರಾಜಕಾರಣ ಎಲ್ಲ ದೇವರನ್ನೂ ಖರೀದಿಸಿರುವುದರಿಂದ ದೇವರು ಪಕ್ಷ-ಪಾತಿಯಾಗುವ ಸಂಭವವೂ ಇದೆ ಎಂದು ಕೆಲವರಾದರೂ ಭಾವಿಸಿದರೆ ಪಾಪ ಅದು ದೇವರ ತಪ್ಪಲ್ಲ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಕಾಂಗ್ರೆಸ್‌ ಭರವಸೆಗಳ ಮುಂದೆ ಬಿಜೆಪಿ ಹತಾಶೆ

Exit mobile version