ಡಿಐಜಿ ದರ್ಜೆಯ ಹಿರಿಯ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ (Roopa Moudgil) ಮತ್ತು ಹಿರಿಯ ಸ್ಥಾನಕ್ಕೆ ಸದ್ಯದಲ್ಲೇ ಏರಬೇಕಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದಾಸರಿ (Rohini Sindhuri) ನಡುವೆ ನಡೆದಿರುವ ಪರಸ್ಪರ ಕೆಸರೆರಚಾಟ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ನುಂಗಲೂ ಆಗದ ಉಗುಳಲೂ ಬಾರದ ಬಿಸಿ ತುಪ್ಪದ ಸಂದಿಗ್ಧವನ್ನು ನಿರ್ಮಿಸಿದೆ. ಪಾರಂಪರಿಕ ಎನ್ನಬಹುದಾದ ನಮ್ಮ ಪುರುಷ ಪ್ರಧಾನ ಆಡಳಿತ ವ್ಯವಸ್ಥೆಯಲ್ಲಿ ತಮ್ಮ ಇರುವಿಕೆಯನ್ನು ಈ ಇಬ್ಬರೂ ಮಹಿಳಾ ಅಧಿಕಾರಿಗಳು ಸಾಬೀತುಗೊಳಿಸಿದವರು ಎನ್ನುವುದಕ್ಕಾಗಿ ವಿಶೇಷ ಗೌರವಕ್ಕೆ ಪಾತ್ರರಾಗಿರುವುದು ಸುಳ್ಳಲ್ಲ. ಮೇಲ್ನೋಟಕ್ಕೆ ಮತ್ತು ಜನ ಭಾವಿಸಿರುವಂತೆ ಇಬ್ಬರೂ ಕಾರ್ಯದಕ್ಷತೆ, ಕಾರ್ಯಕ್ಷಮತೆ ಮತ್ತು ಪ್ರಾಮಾಣಿಕತೆಗೆ ಮಾದರಿ ಎನಿಸಿಕೊಂಡವರು. ಮಾತ್ರವಲ್ಲ, ಸರ್ಕಾರಿ ಸೇವೆಯ ಭಾಗವಾಗಿ ತಾವು ಕೆಲಸ ಮಾಡಿ ಬಂದ ಸ್ಥಳದಲ್ಲೆಲ್ಲ ಒಂದಲ್ಲಾ ಒಂದು ವಿವಾದವನ್ನು ಸೃಷ್ಟಿಸಿ ಅದನ್ನು ಮೈ ಮೇಲೆ ಎಳೆದುಕೊಂಡವರೂ ಹೌದು. ಇದೀಗ ಈ ಇಬ್ಬರೂ ನಡೆಸಿರುವ ಜಗಳ ಸರ್ಕಾರದ ಮತ್ತು ಅಧಿಕಾರಶಾಹಿಯ ವಿಶ್ವಾಸಾರ್ಹತೆಗೇ ಮರ್ಮಾಘಾತವನ್ನುಂಟು ಮಾಡುವ ಮಟ್ಟಕ್ಕೆ ಬೆಳೆದಿದೆ.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎನ್ನುವಂತಿದೆ ಇವರು ಆಡುತ್ತಿರುವ ಆಟ. ಬೇರೆ ಬೇರೆ ಸಂದರ್ಭ ಸ್ಥಳದಲ್ಲಿ ಈ ಇಬ್ಬರೂ ಸೃಷ್ಟಿಸಿರುವ ಕೋಲಾಹಲ ಶಾಂತ ರೀತಿಯಲ್ಲಿ ಸುಗಮವಾಗಿ ನಡೆಯಬೇಕಾದ ಸರ್ಕಾರದ ಕೆಲಸಕ್ಕೆ ಭಂಗ ತಂದಿರುವುದು ಹೊಸ ಬೆಳವಣಿಗೆಯೇನೂ ಅಲ್ಲ. ರೂಪಾ ಮತ್ತು ರೋಹಿಣಿ ತಂತಮ್ಮ ಸೇವಾವಧಿಯುದ್ದಕ್ಕೆ ಸಾಗಿ ಬಂದ ದಾರಿಯನ್ನು ನೋಡಿದರೆ ಅವರು ಸಿನಿಮಾ ರಂಗದಲ್ಲಿ ಕಟೌಟ್ ಮೀರಿ ಬೆಳೆದ ನಾಯಕ ನಟರಂತೆ ಕಾಣಿಸುತ್ತಾರೆ. ಸಂವಿಧಾನದಲ್ಲಿ ಅಧಿಕಾರಿ (ಆಫೀಸರ್) ಎಂಬ ಶಬ್ದವೇ ಇಲ್ಲ. ಅಲ್ಲಿ ಇರುವುದು ಸೇವಕ (ಸರ್ವೆಂಟ್) ಎಂದು ಮಾತ್ರ. ನಮ್ಮ ಕಾರ್ಯಾಂಗದೊಳಕ್ಕೆ ಅದೆಲ್ಲಿಂದ ಬಂದು ತೂರಿಕೊಂಡಿತೋ ಸಾಹೇಬರು ಎಂಬ ಶಬ್ದ. ಅಧಿಕಾರದ ಅಮಲನ್ನು ಉದ್ದೀಪಿಸುವುದೇ ಸಾಹೇಬರು ಶಬ್ದದ ಕೆಲಸ. ತಥಾಕಥಿತ ಈ ಇಬ್ಬರೂ ಅಧಿಕಾರಿಗಳು ಅಧಿಕಾರ ಶಾಹಿಯ ಸುಲ್ತಾನರ ಸ್ವರೂಪ. ರೂಪಾ ಮತ್ತು ರೋಹಿಣಿ ಅಕ್ಷರಶಃ ಈ ಜಮಾನಾದ ಸುಲ್ತಾನಿಯರು.
ನಿಜಕ್ಕೂ ಇದೇ ಮತ್ತು ಈ ಒಂದೇ ಕಾರಣಕ್ಕಾಗಿ ಈ ಇಬ್ಬರ ನಡುವೆ ಜಗಳ ಜಟಾಪಟಿ ನಡೆದಿದೆ ಎನ್ನುವುದು ಅವರಿಬ್ಬರ ಹೊರತಾಗಿ ಮೂರನೆಯವರಿಗೆ ಸ್ಪಷ್ಟವಾಗಿ ಗೊತ್ತಿರಲಿಕ್ಕಿಲ್ಲ. ನಡೆದಿರುವ ಜಗಳ ಸದ್ಯದಲ್ಲಿ ಶಮನವಾಗುವ ಸಣ್ಣ ಲಕ್ಷಣವೂ ತೋರುತ್ತಿಲ್ಲ. ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಸರಳ ಸಜ್ಜನ ಹೆಣ್ಣು ಮಗಳು. ಮೂರೂವರೆ ದಶಕದ ಸೇವಾವಧಿಯಲ್ಲಿ ಯಾರಿಂದಲೂ ಅನಿಸಿಕೊಳ್ಳದ, ಯಾರಿಗೂ ಅನ್ನದ ಅಪರೂಪದ ವರ್ಗಕ್ಕೆ ಸೇರಿರುವ; ರಾಜ್ಯ ಆಡಳಿತಂಗದಲ್ಲಿ ಅತ್ಯುನ್ನತ ಹುದ್ದೆಗೆ ಏರಿರುವ ಮುಖ್ಯ ಕಾರ್ಯದರ್ಶಿ ಇದೀಗ ತಮ್ಮ ದೈನಂದಿನ ಕೆಲಸ ಕಾರ್ಯ ಪಕ್ಕಕ್ಕಿಟ್ಟು ರೂಪಾ ಮತ್ತು ರೋಹಿಣಿ ಜಗಳ ತಡೆಯುವ ಕೆಲಸ ಮಾಡುವ ಸ್ಥಿತಿ ಎದುರಾಗಿರುವುದು ಯಾವ ಸರ್ಕಾರಕ್ಕೂ ಯಾವ ಮುಖ್ಯ ಕಾರ್ಯದರ್ಶಿಗೂ ಮರ್ಯಾದೆ ತರುವ ಬೆಳವಣಿಗೆಯಲ್ಲ.
ಜಗಳಕ್ಕೆ ಇಂಥಹುದೇ ಕಾರಣ ಎನ್ನುವುದು ಗೊತ್ತಿಲ್ಲ ಎನ್ನುವುದು ಯಾವ ಮಿತಿಯೂ ಇಲ್ಲದ ಊಹಾಪೋಹಗಳಿಗೆ ಹೆಬ್ಬಾಗಿಲನ್ನು ತೆರೆದಿರುವ ಬೆಳವಣಿಗೆ. ಮುಚ್ಚಿಟ್ಟಷ್ಟೂ ಅನುಮಾನ ಬೆಳೆಯುತ್ತದೆ ಎನ್ನುತ್ತಾರಲ್ಲ ಹಾಗಿದೆ ಈಗಿನ “ಕಾರಣ ಗೊತ್ತಿಲ್ಲದ” ಜಟಾಪಟಿ. ಅವರೊಂದು ಕಥೆ ಹೇಳಿದರೆ ಇವರೊಂದು ಕಥೆ ಕಟ್ಟುತ್ತಾರೆ. ಇಬ್ಬರಿಗೂ ಅಭಿಮಾನಿ ಸಮೂಹವಿದೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಮತ್ತು ಅವರ ಪರ ವಾದ ಪ್ರತಿವಾದ ನಡೆಯುತ್ತಲೇ ಇದೆ. ಸಿನಿಮಾ ರಂಗದಲ್ಲಿ ನಾಯಕ ನಟರು ಹಣ ಕೊಟ್ಟು ಅಭಿಮಾನಿ ಸಂಘವನ್ನು ಹುಟ್ಟು ಹಾಕುವುದು; ಆ ಸಂಘ ಸಕ್ರಿಯವಾಗಿರುವಂತೆ ನೋಡಿಕೊಳ್ಳುವುದಕ್ಕೆ ತಮ್ಮ ಸಂಪಾದನೆಯಲ್ಲಿ ಒಂದಿಷ್ಟು ಭಾಗವನ್ನು ಕೊಡುವುದು ಎಲ್ಲ ಬಲ್ಲ ಗುಟ್ಟಿನ ಸಂಗತಿ.
ಕರ್ನಾಟಕದಲ್ಲಿ ಕೆಲವು ಐಎಎಸ್ ಅಧಿಕಾರಿಗಳ, ಐಪಿಎಸ್ ಅಧಿಕಾರಿಗಳ ಅಭಿಮಾನೀ ಸಂಘಗಳು ಇರುವುದನ್ನು ನೋಡಬಹುದು. ತಮ್ಮ ಆರಾಧ್ಯ ದೈವ ಅಧಿಕಾರಿಯನ್ನು ವೈಭವೀಕರಿಸುವುದು ಅವರ ಕೆಲಸ. ಅದನ್ನು ಅವರು ಮಾಡುತ್ತಿದ್ದಾರೆ. ತಮ್ಮ ದೇವರ ಹುಟ್ಟುಹಬ್ಬದ ದಿವಸ ಅಲ್ಲಿ ಇಲ್ಲಿ ದೊಡ್ಡ ದೊಡ್ಡ ಪೋಸ್ಟರ್ ಹಾಕಿಸುವಲ್ಲಿಗೆ ಅವರ ಕೆಲಸ ಮುಗಿಯುತ್ತದೆ. ಆದರೆ ರೂಪಾ, ರೋಹಿಣಿ ಅಭಿಮಾನಿಗಳದು ಬೇರೆಯದೇ ಆದ ಸ್ವರೂಪ. ಎದುರಾಳಿಯನ್ನು ಹಳಿಯುವುದೇ ಇಲ್ಲಿ ಅವರ ಬಹುಮುಖ್ಯ ಕೆಲಸ. ಮಳೆ ನಿಂತರೂ ಮರದ ಹನಿ ನಿಲ್ಲದು ಎನ್ನುವ ಮಾತು ಇದೆ. ರೋಹಿಣಿ, ರೂಪಾ ಬಾಯಿ ಮುಚ್ಚಿ ಕುಳಿತರೂ ಅಭಿಮಾನಿಗಳು ಬಾಯಿ ಮುಚ್ಚಲಾರರು. ರೂಪಾ ರೋಹಿಣಿ ಸರ್ಕಾರದ ಸೂಚನೆ ಮೇರೆಗೆ ಬಾಯಿ ಬಂದ್ ಮಾಡಿಕೊಳ್ಳಬಹುದು (ಈ ವಿಚಾರದಲ್ಲಿ ಅನುಮಾನವಿದ್ದೇ ಇದೆ, ಹೆಣ್ಣು ಮಕ್ಕಳನ್ನು ಸುಮ್ಮನಾಗಿಸುವುದು ಅಷ್ಟೆಲ್ಲ ಸುಲಭದ ಕೆಲಸವಲ್ಲ). ಆದರೆ ಅವರ ಅಭಿಮಾನಿಗಳ ಬಾಯಿ ಮುಚ್ಚಿಸುವ ಯಾವ ಕಾನೂನೂ ಇಲ್ಲ. ಅಧಿಕಾರವಂತೂ ಸರ್ಕಾರಕ್ಕೆ ಇಲ್ಲವೇ ಇಲ್ಲ.
ಅಖಿಲ ಭಾರತ ಸೇವಾ ವ್ಯಾಪ್ತಿಯಲ್ಲಿರುವ ಅಧಿಕಾರಿಗಳು ನಿರ್ದಿಷ್ಟ ನಿಯಮ ಪಾಲನೆಯ ಚೌಕಟ್ಟಿನಲ್ಲಿಯೇ ಕರ್ತವ್ಯ ನಿರ್ವಹಿಸಬೇಕೆಂಬ ನಿರ್ಬಂಧವಿದೆ. ಯಾವುದೇ ಕಾರಣಕ್ಕೂ ಎಂಥ ಸಂದರ್ಭದಲ್ಲಿಯೂ ಅವರು ಸೇವೆ ಸಲ್ಲಿಸುತ್ತಿರುವ ಸರ್ಕಾರಕ್ಕೆ ಮುಜುಗರ ತರುವಂಥ ಕೆಲಸವನ್ನು ಮಾಡತಕ್ಕದ್ದಲ್ಲ (ಷಲ್ ನಾಟ್) ಎಂದು ನಿಯಮ ಆದೇಶಿಸುತ್ತದೆ. ಕೇಂದ್ರ ಸೇವಾ ಆಯೋಗದ (ಯುಪಿಎಸ್‍ಸಿ) ಮೂಲಕ ಆಯ್ಕೆಯಾಗುವ ಐಎಫ್‍ಎಸ್, ಐಎಎಸ್, ಐಪಿಎಸ್ ಇತ್ಯಾದಿ ನೌಕರರಿಗೆ ಅನುಮಾನ ಗೊಂದಲಕ್ಕೆ ಕಿಂಚಿತ್ ಎಡೆಯೂ ಇಲ್ಲದಂತೆ ಇದನ್ನೇ ಮಾಡು..ಇದನ್ನು ಮಾಡಲೇಬೇಡ (ಡೂಸ್ ಅಂಡ್ ಡೋಂಟ್ಸ್)ಎಂಬ ಕಠಿಣ ಕಟ್ಟುಪಾಡು ಇದೆ. ಕಟ್ಟುಪಾಡು ಮೀರಿದವರನ್ನು ಶಿಸ್ತಿನ ದಾರಿಗೆ ಎಳೆದು ತರುವುದಕ್ಕೆ ಅಗತ್ಯವಾದ ಬಲವಾದ ನಿಯಮ ಮಾತ್ರ ಇಲ್ಲ. ಅಂಥ ನಿಯಮ ರೂಪಿಸಿ ಅದನ್ನು ಕಾನೂನಾಗಿಸುವುದು ಐಎಎಸ್ ಅಧಿಕಾರಿಗಳ ಕೈಲೇ ಇರುವುದರಿಂದ ಅವರು ಈ ಕಾಯ್ದೆ ರಚನೆಯಾಗದಂತೆ ಜಾಗರೂಕವಾಗಿ ನೋಡಿಕೊಂಡಿದ್ದಾರೆ.
ತಮಗೆ ಬೇಕಾದಂತೆ ಬೇಕಾದಾಗ ಸಂಬಳ ಸಾರಿಗೆ ಹೆಚ್ಚಿಸಿಕೊಳ್ಳುವ, ತಮ್ಮ ಸೇವಾ ನಿಯಮಗಳನ್ನು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಬಗ್ಗಿಸಿ ಹಿಗ್ಗಿಸಿಕೊಳ್ಳುವ ಕೆಲಸವನ್ನು ಐಎಎಸ್ ಲಾಬಿ ಅತ್ಯಂತ ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿದೆ. ನಮ್ಮದು ಪಕ್ಷಾಧಾರಿತ ಸರ್ಕಾರ. ಚುನಾವಣೆಯಿಂದ ಚುನಾವಣೆಗೆ ಹೊಸ ಸರ್ಕಾರ ಬರುತ್ತದೆ. ಶಾಸಕಾಂಗದ ಭಾಗವಾಗಿ ಬರುವ ಶಾಸಕರೆಲ್ಲರೂ ಹಳಬರು, ಅನುಭವಸ್ಥರೇ ಆಗಿರುತ್ತಾರೆಂದೇನೂ ಇಲ್ಲ. ಮೊದಲಬಾರಿಗೆ ಶಾಸಕರಾದವರು ಮುಖ್ಯಮಂತ್ರಿಯಾದ, ಲೋಕಸಭೆಗೆ ಚೊಚ್ಚಲ ಸದಸ್ಯರಾಗಿ ಬಂದವರು ಪ್ರಧಾನಿಯಾದ ನಿದರ್ಶನವಿರುವ ಪ್ರಜಾಪ್ರಭುತ್ವ ನಮ್ಮದು. ಹಾಗೆ ಮಂತ್ರಿ ಮುಖ್ಯಮಂತ್ರಿ ಆಗುವವರಿಗೆ ಮಾರ್ಗದರ್ಶನ ಮಾಡುವ “ಸಕಲಕಲಾವಲ್ಲಭ” ಪಡೆಯೊಂದಿರುತ್ತದೆ. ಆ ಪಡೆಯೇ ಐಎಎಸ್ ಅಧಿಕಾರಿಗಳದು. ಸರ್ಕಾರದ ಜುಟ್ಟು ಜನಿವಾರವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಗಾಡಿಯನ್ನು ಓಡಿಸುತ್ತಾರೆ. ಐಎಎಸ್ ಅಧಿಕಾರಿಗಳು ತಪ್ಪು ಮಾಡಿದರೆ ಅದು ಬೆಳಕಿಗೆ ಬಾರದಂತೆ ಈ ಲಾಬಿ ನೋಡಿಕೊಳ್ಳುತ್ತದೆ, ಅಕಸ್ಮಾತ್ ಬಯಲಾದರೆ ಮುಚ್ಚಿ ಹಾಕುತ್ತದೆ. ಈ ಮಾತು ಐಪಿಎಸ್‍ಗಳಿಗೂ ಸಮಾನವಾಗಿ ಅನ್ವಯ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಹೊಸ ವರ್ಷದಲ್ಲಿ ಹಳೆ ಬಜೆಟ್, ಎಡವಟ್ಟು ಮಾಡಿದ ಗೆಹ್ಲೋಟ್
ಎಲ್ಲ ರಾಜ್ಯದಲ್ಲೂ ಆಡಳಿತ ಕೇಂದ್ರವಾಗಿ ವಿಧಾನ ಸೌಧವಿರುತ್ತದೆ. ಕೆಲವು ಕಡೆ ಬೇರೆ ಹೆಸರಿನಿಂದಲೂ ಅದನ್ನು ಕರೆಯುತ್ತಾರೆ. ಉದಾಹರಣೆಗೆ ಮಹಾರಾಷ್ಟ್ರದಲ್ಲಿ ಮಂತ್ರಾಲಯ ಎನ್ನುತ್ತಾರೆ. ನಮ್ಮಲ್ಲಿ ಮಂತ್ರಾಲಯ ಎಂದರೆ ರಾಘವೇಂದ್ರ ಸ್ವಾಮಿಗಳು ನೆನಪಾಗುತ್ತಾರೆ. ಅಲ್ಲಿ ಹಾಗಿಲ್ಲ. ಅದರೊಳಗೆ ದರ್ಬಾರು ಮಾಡಿದ, ಮಾಡುತ್ತಿರುವ ಯಾರ್ಯಾರೋ ಕಣ್ಮುಂದೆ ಹಾದು ಹೋಗುತ್ತಾರೆ. ನಮ್ಮ ರಾಜಧಾನಿ ಬೆಂಗಳೂರಿನಲ್ಲಿರುವ ವಿಧಾನ ಸೌಧ ರಾಜಕೀಯ ಶಕ್ತಿಸೌಧವೂ ಹೌದು. ಇದರ ಮೂರನೆ ಮಹಡಿಯಲ್ಲಿ ವಿರಾಜಮಾನ ಆಗುವುದು ಪ್ರತಿಯೊಬ್ಬ ರಾಜಕಾರಣಿಯ ಕನಸು. ಪಕ್ಷ ರಾಜಕಾರಣದಲ್ಲಿ ಮೂರನೇ ಮಹಡಿಯಲ್ಲಿ ಶಾಶ್ವತವಾಗಿ ಗೂಟ ಹೊಡೆದುಕೊಂಡಿರಲು ಅವಕಾಶ ಇಲ್ಲವೇ ಇಲ್ಲ. ಐದು ವರ್ಷಕ್ಕೊಮ್ಮೆ ಜಾಗ ತೆರವು ಮಾಡಬೇಕಾದ ಅಪಾಯ ಇದ್ದೇ ಇದೆ.
ಆದರೆ ಅಧಿಕಾರಿಗಳ ಮಾತು ಹಾಗಲ್ಲ. ಮೂವತ್ತು ಮೂವತ್ತೈದು ವರ್ಷ ಕಾಲ ಅವರು ಅಧಿಕಾರ ಚಲಾಯಿಸುತ್ತಿರುತ್ತಾರೆ. ಎಷ್ಟೋ ಅಧಿಕಾರಿಗಳು ಸೇವೆಗೆ ಸೇರಿದ ದಿವಸದಿಂದ ನಿವೃತ್ತೆರಾಗುವವರೆಗೂ ವಿಧಾನ ಸೌಧದಲ್ಲಿ ಬೀಡು ಬಿಟ್ಟಿದ್ದೂ ಉಂಟು. ಉತ್ತರದಾಯಿತ್ವವೇ ಜವಾಬ್ದಾರಿ ಅವರಿಗೆ ಇರುವುದಿಲ್ಲ. ಮೂರನೇ ಮಹಡಿಗೆ ಬಂದು ಕೂರುವ ರಾಜಕಾರಣಿಗಳ ದಿಕ್ಕು ತಪ್ಪಿಸುವುದು ಈ ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಇಂಥ ಅಧಿಕಾರಿಗಳು ಹಾಕುವ ಬಿಸ್ಕತ್ತಿಗೆ ರಾಜಕಾರಣಿಗಳು ಬಹಳ ಬೇಗ ಬಲಿಯಾಗುತ್ತಾರೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಬ್ರಾಹ್ಮಣ ರಾಜಕೀಯ, ಮತ್ತೆ ಮುನ್ನೆಲೆಗೆ
ಸರ್ಕಾರವನ್ನು ಮುಜುಗರಕ್ಕೆ ಈಡು ಮಾಡಿರುವ ರೋಹಿಣಿ, ರೂಪಾ ಮೌದ್ಗಿಲ್‍ರನ್ನು ಅವರು ಹೊಂದಿದ್ದ ಸ್ಥಾನದಿಂದ ಬಿಡುಗಡೆ ಮಾಡಲಾಗಿದೆ. ಬೇರೆ ಸ್ಥಳವನ್ನು ಸೂಚಿಸಿಲ್ಲ. ಇದರ ಅರ್ಥ ಮನೆಯಲ್ಲಿ ಕುಳಿತು ಸಂಬಳ ಪಡೆಯಿರಿ ಎಂದಲ್ಲದೆ ಮತ್ತೇನೂ ಅಲ್ಲ. ಇಷ್ಟರಲ್ಲೇ ಜಾಗ ತೋರಿಸುವುದು ಸರ್ಕಾರಕ್ಕೆ ಅನಿವಾರ್ಯವಾಗುತ್ತದೆ. ಯಾಕೆ…? ಮುಂದೆ ಓದಿ. ಇವರಿಗೆ ಜಾಗ ತೋರಿಸದೇ ಇದ್ದರೆ ಅದನ್ನು ಏನೆಂದು ಅರ್ಥ ಮಾಡಿಕೊಳ್ಳಬೇಕೆಂಬ ಪ್ರಶ್ನೆ ಉದ್ಭವಿಸುತ್ತದೆ. ನಿರ್ದಿಷ್ಟ ಅವಧಿಯಲ್ಲಿ ಜಾಗ ತೋರಿಸದಿದ್ದರೆ ಸರ್ಕಾರದ ಮೌನವನ್ನು ಈ ಅಧಿಕಾರಿಗಳು ಸಿಎಟಿಯಲ್ಲಿ (ಸೆಂಟ್ರಲ್ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್) ಪ್ರಶ್ನಿಸಬಹುದು. ಆಗ ಸಿಎಟಿ ಜಾರಿ ಮಾಡುವ ನೋಟೀಸಿಗೆ ಮುಖ್ಯಕಾರ್ಯದರ್ಶಿ ಉತ್ತರಿಸಬೇಕಾಗುತ್ತದೆ. ಈ ಅಧಿಕಾರಿಗಳು ಮಾಡಿರುವ ತಪ್ಪು ಏನೆಂದು ಕೇಳಿದರೆ ಉತ್ತರ ಕೊಡುವುದು ಸರ್ಕಾರಕ್ಕೆ ಕಷ್ಟವಾಗುತ್ತದೆ. ತಪ್ಪು ಮಾಡಿದ್ದರೆ ಆ ತಪ್ಪು ಏನೆಂದು ಹೇಳಬೇಕು; ಆ ತಪ್ಪಿಗೆ ಏನು ಶಿಕ್ಷೆ ಎನ್ನುವುದನ್ನು ವಿಷದೀಕರಿಸಬೇಕು. ತಪ್ಪಿಗೆ ತೆಗೆದುಕೊಂಡಿರುವ ಶಿಸ್ತು ಕ್ರಮ ಏನೆನ್ನುವುದು ಗೊತ್ತಾಗಬೇಕು. ರೋಹಿಣಿ, ರೂಪಾರಿಗೆ ಕಚ್ಚಾಡಬೇಡಿ ಎಂದು ಮುಖ್ಯಕಾರ್ಯದರ್ಶಿ ಮೌಖಿಕ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ತರುವಾಯವೂ ಗಲಾಟೆ ಮುಂದುವರಿದಿದೆ. ಅಂದರೆ ಸಿಎಸ್ ಸೂಚನೆಯನ್ನು ಈ ಇಬ್ಬರೂ ಲೆಕ್ಕಕ್ಕೇ ತೆಗೆದುಕೊಂಡಿಲ್ಲ ಎಂದು ಅರ್ಥ.
ಕಾರಣ ಕೇಳಿ ನೋಟೀಸ್ ಜಾರಿ ಮಾಡಲು ಸರ್ಕಾರಕ್ಕೆ ಅವಕಾಶವಿದೆ. ಆ ನೋಟೀಸಿಗೆ ಉತ್ತರ ಪಡೆದ ನಂತರ ಏನು…? ಸೇವೆಯಿಂದ ಅಮಾನತು ಮಾಡಲಾಗುವುದೇ…? ಆಗದು ಎಂದಲ್ಲ. ಆದರೆ ಅದಕ್ಕೆ ಬಲವತ್ತರವಾದ ಸಾಕ್ಷ್ಯಾಧಾರಗಳನ್ನು ಸರ್ಕಾರ ಒದಗಿಸಬೇಕಾಗುತ್ತದೆ. ಇಲ್ಲಿ ರೋಹಿಣಿ ವಿರುದ್ಧದ ಸಾಕ್ಷ್ಯಕ್ಕೆ ಸರ್ಕಾರ ರೂಪಾ ಮೌದ್ಗಿಲ್‍ರ ಮೊರೆ ಹೋಗಬೇಕು. ರೂಪಾ ವಿರುದ್ಧದ ಸಾಕ್ಷ್ಯಕ್ಕೆ ರೋಹಿಣಿ ಮನೆಮುಂದೆ ಹೋಗಬೇಕು. ಫಜೀತಿ ಸ್ಥಿತಿ ಸರ್ಕಾರದ್ದು. ಈ ಎಲ್ಲವೂ ಮುಗಿದು ಸರ್ಕಾರ ಇಬ್ಬರನ್ನೂ ಸೇವೆಯಿಂದ ಅಮಾನತು (ಸಸ್ಪೆಂಡ್) ಮಾಡಿತು ಎಂದುಕೊಳ್ಳೋಣ. ಆರು ತಿಂಗಳಲ್ಲಿ ತನಿಖೆ ನಡೆದು ಪ್ರಕರಣಕ್ಕೆ ಪೂರ್ಣ ವಿರಾಮ ಹಾಕಬೇಕು. ಆರು ತಿಂಗಳ ಅವಧಿಯಲ್ಲಿ ಈ ಇಬ್ಬರೂ ಮತ್ತೆ ಬೀದಿರಂಪ ಹಾದಿ ರಂಪ ಮಾಡೋಲ್ಲ ಎನ್ನುವುದಕ್ಕೆ ಯಾವ ಭರವಸೆ ಇದೆ. ಸುಪ್ರೀಂ ಕೋರ್ಟ್‍ನ ತೀರ್ಪೊಂದರ ರೀತ್ಯ ಅಮಾನತು ಎನ್ನುವುದು ಶಿಕ್ಷೆಯಲ್ಲವೇ ಅಲ್ಲ (ಸಸ್ಪೆನ್ಶನ್ ಈಸ್ ನಾಟ್ ಪನಿಷ್‍ಮೆಂಟ್). ತನಗೆ ಮುಜುಗರ ತಂದ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಲಾಗದೆ ನಗೆಪಾಟಲಿಗೆ ಈಡಾಗುವ ಸರದಿ ಸರ್ಕಾರದ್ದೇ ಆಗಬಹುದೆ…? ಗೊತ್ತಿಲ್ಲ. ಅಧಿಕಾರಿಗಳಿಗೆ ಹೀಗೇ ನಡೆದುಕೊಳ್ಳಿರಿ ಎಂಬ ಶಿಸ್ತನ್ನು ಯಾರು ಕಲಿಸಬೇಕು…? ಇದೊಂದು ರೀತಿಯಲ್ಲಿ ಇಲಿಗಳು ಬೆಕ್ಕಿಗೆ ಘಂಟೆ ಕಟ್ಟಿದಂತೆ!
ಇದನ್ನೂ ಓದಿ: ಮೊಗಸಾಲೆ ಅಂಕಣ: ಭದ್ರಾ ಮೇಲ್ದಂಡೆ: ರಾಜ್ಯದ ಮೊದಲ ಕೇಂದ್ರ ಯೋಜನೆ