ಭಾರತೀಯ ಜನತಾ ಪಾರ್ಟಿಯ ನಾಗಾಲೋಟಕ್ಕೆ ನಿಯಂತ್ರಕ ತಡೆಯೊಂದನ್ನು ನಿರ್ಮಿಸುವುದಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರೀತಿಯಲ್ಲಿ ಹಗಲೂ ಇರುಳೂ ಜನರೊಂದಿಗೆ ಬೆರೆತು ಕೆಲಸ ಮಾಡಬೇಕಿರುವ ಅಗತ್ಯವನ್ನು ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಪ್ರಕಾಶ್ ಕಾರಟ್ ಪ್ರತಿಪಾದಿಸಿದ್ದಾರೆ. ಸಂಘದ ಕಾರ್ಯ ಚಟುವಟಿಕೆಯನ್ನು ಸೈದ್ಧಾಂತಿಕ ಪ್ರತಿರೋಧದ ಮೂಲಕವೇ ನಿಯಂತ್ರಿಸಬಹುದೆಂಬ ಮಾರ್ಕ್ಸ್‌ವಾದಿಗಳ ಲೆಕ್ಕಾಚಾರ ತಲೆಕೆಳಗಾಗಿರುವುದನ್ನು ಕಾರಟ್ ಒಪ್ಪಿಕೊಂಡಿದ್ದು ಅದು ಅವರ ಇತ್ತೀಚಿನ ಭಾಷಣದಲ್ಲಿ ಶಬ್ದರೂಪ ಪಡೆದುಕೊಂಡಿದೆ.
ಸಿಪಿಎಂ ಪ್ರತಿಪಾದಿಸಿಕೊಂಡು ಬಂದಿರುವ ರಾಜಕೀಯ ಮತ್ತು ಸೈದ್ಧಾಂತಿಕ ಸಂಘರ್ಷದ ಜೊತೆಯಲ್ಲಿ ದಿನದ ಇಪ್ಪತ್ತನಾಲ್ಕು ಘಂಟೆಯೂ ಜನರೊಂದಿಗಿದ್ದು ಸಂಘಟನಾತ್ಮಕ ಕೆಲಸ ಮಾಡುವ ಚಾಳಿಯನ್ನು ಬೆಳೆಸಿಕೊಳ್ಳುವ ಅನಿವಾರ್ಯ ದೇಶದಲ್ಲಿದೆ ಎಂಬ ಅಭಿಪ್ರಾಯವನ್ನು ಅವರು ಮಂಡಿಸಿದ್ದಾರೆ. ಜನರಿಗೆ ನೆಮ್ಮದಿಯ ಬದುಕಿನ ವಾತಾವರಣ ಕಲ್ಪಿಸುವುದು, ಖಾಸಗೀಕರಣದ ವಿರುದ್ಧ ದಣಿವರಿಯದ ಹೋರಾಟ ಮುನ್ನಡೆಸುವುದು, ಬೆಲೆ ಏರಿಕೆ, ನಿರುದ್ಯೋಗದಂಥ ನಿತ್ಯ ಪೀಡಕ ಜ್ವಲಂತ ಸಮಸ್ಯೆಗಳ ವಿರುದ್ಧ ಜನ ಜಾಗೃತಿ ಮೂಡಿಸುವ ಕೆಲಸದ ಜೊತೆಯಲ್ಲಿ ರಾಜಕೀಯ ಸೈದ್ಧಾಂತಿಕ ಸಂಘರ್ಷ ನಡೆಯಬೇಕಿದೆ. ಆರ್‍ಎಸ್‍ಎಸ್ ರೀತಿಯಲ್ಲಿ ಜನರನ್ನು ಒಳಗೊಳ್ಳುವ ಕೆಲಸ ಮಾಡದಿದ್ದರೆ ಭಾರತೀಯ ಜನತಾ ಪಾರ್ಟಿಯನ್ನು ಚುನಾವಣಾ ರಾಜಕೀಯದಲ್ಲಿ ಮಣಿಸುವುದು ಅಸಾಧ್ಯದ ಕೆಲಸ ಎಂಬುದು ಕಾರಟ್‍ರ ಮನದಾಳದ ಮಾತು.
ಮುಳ್ಳನ್ನು ತೆಗೆಯಲು ಮುಳ್ಳನ್ನೇ ಬಳಸಬೇಕೆಂಬುದು ಅನುಭಾವಿಗಳ ಮಾತು. ಆರ್‍ಎಸ್‍ಎಸ್ ಸ್ಥಾಪನೆಯಾಗಿ 97 ವರ್ಷವಾಗಿದೆ. ಮುಂದಿನ ಮೂರು ವರ್ಷದಲ್ಲಿ ಶತಮಾನದ ಆಚರಣೆಗೆ ಸಿದ್ಧವಾಗುತ್ತಿರುವ ಆರ್‍ಎಸ್‍ಎಸ್ ಸಂಘಟನೆಯ ಅಜೆಂಡಾದಲ್ಲಿ ಕದ್ದುಮುಚ್ಚಿಟ್ಟಿರುವುದೇನೂ ಇಲ್ಲ. ಅದರ ಕಾರ್ಯಕ್ರಮ ಏನೇನು, ನೀತಿ ನಿಯಮಗಳೇನೇನು ಎನ್ನುವುದು ಅದರ ನಿತ್ಯ ನಡೆಯಲ್ಲಿ ವ್ಯಕ್ತವಾಗುತ್ತಿದೆ. 19ನೇ ಶತಮಾನದ ಮಧ್ಯಂತರದಲ್ಲಿ ಆರ್‍ಎಸ್‍ಎಸ್ ನಿರ್ಣಯಿಸಿದ್ದು ಶತಮಾನಾಂತ್ಯದೊಳಗೆ ದೆಹಲಿ ಸಿಂಹಾಸನದಲ್ಲಿ ಕೂರುವ ಆಶಯವನ್ನು. ಕ್ರಿಶ 2000 ಗಡಿ ಮುಟ್ಟುವಷ್ಟರಲ್ಲಿ ದೆಹಲಿಯ ಆಡಳಿತ ಪೀಠದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿ ಕೂತಿದ್ದರು. ಇಂದು ಕೈಗೊಳ್ಳುವ ತೀರ್ಮಾನ ನಾಳೆ ಬೆಳಗಾಗುವಷ್ಟರಲ್ಲಿ ಕಾರ್ಯರೂಪಕ್ಕೆ ಬರಬೇಕೆಂಬ ಅವಸರ ಆರ್‍ಎಸ್‍ಎಸ್‍ನಲ್ಲಿ ಇಲ್ಲವೇ ಇಲ್ಲ. ತಾಳ್ಮೆಯಿಂದ ಕಾದಿದ್ದು ತಾನಾಗೇ ಅವಕಾಶ ಒಲಿದುಬರುವಂತೆ ಮಾಡಿ ಬಲ ಹೆಚ್ಚಿಸಿಕೊಳ್ಳುವ ಪರಿ ಆರ್‍ಎಸ್‍ಎಸ್‍ನದು. ಅವಸರವೂ ಕೂಡಾ ಅಲ್ಲಿ ನಿಧಾನದ ಬೆನ್ನೇರಿ ತಾಳ್ಮೆಯಿಂದ ಚಲಿಸುತ್ತದೆ. ಬಲೆ ನೇಯುವುದಕ್ಕೆ ಜೇಡ ಅವಸರ ಪಟ್ಟಿರುವ ಉದಾಹರಣೆಯೂ ಇಲ್ಲ, ಬಲೆ ನಾಶವಾದರೆ ಮತ್ತೆ ನೇಯುವುದಕ್ಕೆ ಬೇಸರವೂ ಅದಕ್ಕಿಲ್ಲ. ಮರಳಿ ಮರಳಿ ಯತ್ನವ ಮಾಡುತ್ತಿರು ಎನ್ನುವುದು ಸಂಘ ಪರಿವಾರದ ಸಿದ್ಧವೂ ಪ್ರಸಿದ್ಧವೂ ಆಗಿರುವ ಸೂತ್ರ.
ಆರ್‍ಎಸ್‍ಎಸ್‍ನ ರಾಜಕೀಯ ಶತ್ರುಗಳ ಸಾಲಿನಲ್ಲಿ ಕಮ್ಯೂನಿಸಂಗೆ, ಕಮ್ಯೂನಿಸ್ಟ್ ಪಾರ್ಟಿಗಳಿಗೆ ಮೊದಲ ಸ್ಥಾನ. ಕಾಂಗ್ರೆಸ್ ಸೇರಿದಂತೆ ಬೇರೆ ಯಾವ ಪಕ್ಷವೂ ಆರ್‍ಎಸ್‍ಎಸ್‍ಗೆ ಸಾರಾಸಗಟು ನಿಷಿದ್ಧವಲ್ಲ. ಸಂಘ ಪರಿವಾರದ ಒಂದಲ್ಲ ಒಂದು ಕವಲಿನೊಂದಿಗೆ ಬೇರೆಬೇರೆ ರಾಜಕೀಯ ಪಕ್ಷಗಳಲ್ಲಿರುವ ನೇತಾರರೋ ಕಾರ್ಯಕರ್ತರೋ ಒಂದಲ್ಲಾ ಒಂದು ರೀತಿಯ ಸಂಬಂಧ ನೆಂಟಸ್ತನ ಇಟ್ಟುಕೊಂಡಿರುವವರೇ. ಮೂಲತಃ ಅವರ್ಯಾರೂ ಹಿಂದುತ್ವದ ವಿರೋಧಿಗಳಲ್ಲ ಎನ್ನುವುದು ಆರ್‍ಎಸ್‍ಎಸ್ ಪ್ರತಿಪಾದನೆ. ಆದರೆ ಕಮ್ಯೂನಿಸ್ಟರ ವಿಚಾರದಲ್ಲಿ ಈ ಮೃದು ಭಾವನೆ ಆರ್‍ಎಸ್‍ಎಸ್‍ಗೆ ಇಲ್ಲ. ಕಮ್ಯೂನಿಸ್ಟರಲ್ಲೂ ಅಷ್ಟೆ ಆರ್‍ಎಸ್‍ಎಸ್ ಬಗ್ಗೆ ಕಿಂಚಿತ್ ಎನ್ನಬಹುದಾದ ಮೃದು ಭಾವನೆಯೂ ಇಲ್ಲ. ಕಮ್ಯೂನಿಸ್ಟ್ ಪಾರ್ಟಿ ಕಾರ್ಯಕರ್ತನೊಬ್ಬ ಸಂಘ ಪರಿವಾರದ ಜೊತೆ ಸಣ್ಣ ದೂರದ ಸಂಬಂಧ ಸಂಪರ್ಕ ಇಟ್ಟುಕೊಂಡರೂ ಪಕ್ಷದಲ್ಲಿ ಅಂಥವರು ಮುಂದುವರಿಯುವುದು ಕಷ್ಟ. ಇಂತಿಪ್ಪ ಕಮ್ಯೂನಿಸ್ಟ್ ಪಾರ್ಟಿ ಇದೀಗ ಮುಳ್ಳಿನಿಂದ ಮುಳ್ಳನ್ನು ತೆಗೆಯುವ ಸಂಕಲ್ಪಕ್ಕೆ ಬಂದು ನಿಂತಿರುವ ಸೂಚನೆ ಪ್ರಕಾಶ್ ಕಾರಟ್ ಹೇಳಿಕೆಯಲ್ಲಿ ಸ್ಪಷ್ಟವಾಗಿದೆ.
ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸುವ ನಿರ್ಧಾರದಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ. ಕೆಲವು ಸಂದರ್ಭಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವುದೇ ಮುಖ್ಯ ಉದ್ದೇಶವಾಗಿ ಚುನಾವಣೋತ್ತರ ಕೂಡಿಕೆಯನ್ನೂ ಮಾಡಿಕೊಳ್ಳುತ್ತವೆ. ಇವು ಆ ಸಮಯಕ್ಕೆ ಸರಿಯಾದ ರಾಜಕೀಯ ನಿರ್ಧಾರವೇ ಹೌದೆನಿಸಿದರೂ ಶಾಶ್ವತ ನೆಲೆಯಲ್ಲಿ ಬಿಜೆಪಿಯನ್ನು ಮಣಿಸುವುದಕ್ಕೆ ಇದರಿಂದ ಆಗದು. ಅಗಾಧ ಶಕ್ತಿಯಾಗಿ ಬೆಳೆದಿರುವ ಬಿಜೆಪಿ ಬಲದ ಮೂಲವನ್ನು ಅರ್ಥಮಾಡಿಕೊಳ್ಳುವುದು ಈ ಹೊತ್ತಿನ ರಾಜಕೀಯ ತುರ್ತು. ಬಿಜೆಪಿ ಶಕ್ತಿಮೂಲ ಆರ್‍ಎಸ್‍ಎಸ್. ಅದರ ಸಂಘಟನಾತ್ಮಕ ಕಾರ್ಯಶೈಲಿಯಲ್ಲಿ ಬಿಜೆಪಿ ಹಿತ ಅಡಗಿದೆ ಎನ್ನುತ್ತಾರೆ ಕಾರಟ್.
ಈ ಮಾತನ್ನು ಹೇಳುವಾಗ ಕಾರಟ್ ಒಂದು ಪುಟ್ಟ ಆದರೆ ಗಟ್ಟಿಯಾದ ಉದಾಹರಣೆಯನ್ನೂ ನೀಡುತ್ತಾರೆ. ಅವರು ಹೇಳಿರುವಂತೆ ಒಡಿಶಾ ರಾಜ್ಯವೊಂದರಲ್ಲಿಯೇ ಸಂಘ ಪರಿವಾರ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಒಂದು ಸಾವಿರ. ಇದು ಇವತ್ತು ನಿನ್ನೆಯ ಕಥೆ ಅಲ್ಲ. ಕಾರಟ್‍ಗೆ ಅವರ ಪಕ್ಷದವರೊಬ್ಬರು ಹದಿನೈದು ವರ್ಷದ ಹಿಂದೆ ನೀಡಿದ್ದ ಮಾಹಿತಿ ಇದು. ಈಗ ಅಂಥ ಶಾಲೆಗಳ ಸಂಖ್ಯೆ ಆ ರಾಜ್ಯದಲ್ಲಿ ಎಷ್ಟು ಸಾವಿರಕ್ಕೆ ಹೆಚ್ಚು ವೃದ್ಧಿಸಿರಬಹುದು…? ಕಾರಟ್‍ರಲ್ಲೂ ಇತ್ತೀಚಿನ ಮಾಹಿತಿ ಇದ್ದಂತಿಲ್ಲ. ಒಡಿಶಾದಲ್ಲಿ ಬಿಜೆಪಿ ಸರ್ಕಾರವೇನೂ ಇಲ್ಲ. ಬಿಜು ಜನತಾ ದಳದ ನವೀನ್ ಪಾಟ್ನಾಯಿಕ್ ಸರ್ಕಾರ ಅಲ್ಲಿ ಎರಡೂವರೆ ದಶಕಕ್ಕೂ ಹೆಚ್ಚು ಅವಧಿಯಿಂದ ಅಧಿಕಾರದಲ್ಲಿದೆ. ಬೇರೆ ಪಕ್ಷದ ಸರ್ಕಾರವಿದೆ ಎನ್ನುವುದು ಸಂಘ ಪರಿವಾರದ ಓಘಕ್ಕೆ ಅಡ್ಡಿಯಾಗಿಲ್ಲ ಎನ್ನುವುದನ್ನು ಬೆರಳು ಮಾಡಿ ತೋರಿಸುವ ಯತ್ನ ಕಾರಟ್ ನೀಡಿರುವ ನಿದರ್ಶನದಲ್ಲಿರುವಂತಿದೆ. ಅದೇ ಕಾಲಕ್ಕೆ ದೇಶದ ಇತರೆಲ್ಲ ರಜ್ಯಗಳಲ್ಲಿ ಇಂಥ ಶಿಕ್ಷಣ ಸಂಸ್ಥೆಗಳು ಎಷ್ಟಿರಬಾರದು..ಕಾರಟ್ ಪ್ರಶ್ನೆ.
ಬೇರೆ ಬೇರೆ ಕವಲುಗಳ ಮೂಲಕ ಜನರನ್ನು ಆರ್‍ಎಸ್‍ಎಸ್ ಮುಟ್ಟುತ್ತಿದೆ. ಅಂಥ ಹಲವಾರು ಕವಲುಗಳಲ್ಲಿ ಬಿಜೆಪಿಯೂ ಒಂದು, ಅದು ರಾಜಕೀಯ ಕವಲು ಬಿಜೆಪಿ. ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಕ ನೆಲೆಯಲ್ಲಿ ಕಾರ್ಯನಿರ್ವಹಿಸುವ ಸಂಘಟನೆಗಳು ಆರ್‍ಎಸ್‍ಎಸ್‍ನ ಕಾರ್ಯಸೂಚಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ದಿನವಿಡೀ ಕೆಲಸ ಮಡುವುದನ್ನು ನಾವು ಪಂಥಾಹ್ವಾನವಾಗಿ ಸ್ವೀಕರಿಸಬೇಕೆನ್ನುವುದು ಕಾರಟ್ ಸಿಪಿಎಂ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಮಾಡಿರುವ ಮನವಿ. ಬಿಜೆಪಿ ದೇಶವ್ಯಾಪಿಯಾಗಿ ಅದರದೇ ವೇಗದಲ್ಲಿ ಬೆಳೆಯುತ್ತಿದೆ. ಆದರೆ ಅದರ ಓಟ ಎಲ್ಲಾ ಕಡೆಯಲ್ಲೂ ನಿರ್ವಿಘ್ನವಾಗೇನೂ ಇಲ್ಲ. ಆಂಧ್ರಪ್ರದೇಶದಲ್ಲಿ ಜಗನ್‍ಮೋಹನ್ ರೆಡ್ಡಿ, ತೆಲಂಗಾಣಾದಲ್ಲಿ ಚಂದ್ರಶೇಖರ ರಾವ್, ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್, ಕೇರಳದಲ್ಲಿ ಪಿಣರಾಯಿ ವಿಜಯನ್, ಒಡಿಶಾದಲ್ಲಿ ನವೀನ್ ಪಾಟ್ನಾಯಿಕ್, ರಾಜಸ್ತಾನದಲ್ಲಿ ಅಶೋಕ್ ಗೆಹ್ಲೋಟ್, ಪಶ್ಚಿಮ ಬಂಗಾಳಾದಲ್ಲಿ ಮಮತಾ ಬ್ಯಾನರ್ಜಿ, ಹಿಮಾಚಲ ಪ್ರದೇಶದಲ್ಲಿ ಸುಖವಿಂದರ್ ಸುಖು, ಪಂಜಾಬ್‍ನಲ್ಲಿ ಭಗವಂತ ಮಾನ್, ದೆಹಲಿಯಲ್ಲಿ ಅರವಿಂದ ಕೇಜ್ರೀವಾಲ್… ಹೀಗೆ ಹಲವರು ರೋಡ್‍ಹಂಪ್ಸ್ ಮಾದರಿಯಲ್ಲಿ ಬಿಜೆಪಿ ವೇಗಕ್ಕೆ ಬಿರಿ ಹಾಕಿದ್ದಾರೆ.
ಕಾರಟ್ ಉದ್ದೇಶ ಸರಿಯಾಗೇನೋ ಇದೆ. ಆದರೆ ಬಿಜೆಪಿ ಇಷ್ಟೆಲ್ಲ ಬೆಳೆದಿರುವುದರ ಹಿಂದೆ ಯಾರೆಲ್ಲರ ಕೈ ಇದೆ ಎನ್ನುವುದನ್ನು ಅವರು ಹೇಳುತ್ತಿಲ್ಲ. ಪಶ್ಚಿಮ ಬಂಗಾಳಾದಲ್ಲಿ ಕಾರಟ್ ನೇತೃತ್ವದ್ದೇ ಸಿಪಿಎಂ ಪಕ್ಷ ಸರ್ಕಾರ ಆಡಳಿತ ನಡೆಸಿದ್ದು ಬರೋಬ್ಬರಿ ಮೂವತ್ತನಾಲ್ಕು ವರ್ಷ. ಕಮ್ಯೂನಿಸ್ಟ್ ಪ್ರತಿಸ್ಠಾಪಿತ ಕಲ್ಯಾಣ ರಾಜ್ಯದ ವಿರುದ್ಧ ಆ ರಾಜ್ಯದ ಜನ ಬಂಡಾಯ ಎದ್ದರಾದರೂ ಯಾಕೆ…? ಕಮ್ಯೂನಿಸ್ಟರು ಆರೋಪಿಸಿರುವಂತೆ “ಪ್ರತಿಗಾಮಿ” ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ದಾಳಿಯಿಂದ ಸಿಪಿಎಂ ವೃಕ್ಷ ಬೇರು ಕಿತ್ತು ಉರುಳಿದ್ದೇಕೆ ಎನ್ನುವುದನ್ನು ಕಾರಟ್ ಹೇಳುವುದಿಲ್ಲ. ತ್ರಿಪುರಾದಲ್ಲಿ ಕಾಲು ಶತಮಾನಕ್ಕೂ ಹೆಚ್ಚು ಅವಧಿ ಅಧಿಕಾರದಲ್ಲಿದ್ದ ಸಿಪಿಎಂ ಅಲ್ಲಿಂದ ಕಾಲು ಕೀಳಲು ಏನು ಕಾರಣ… ಕಾರಟ್ ಹೇಳುವುದಿಲ್ಲ.
ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್‍ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ಐದು ವರ್ಷದ ಪರ್ಯಾಯ. ಒಮ್ಮೆ ಕಾಂಗ್ರೆಸ್ ಇನ್ನೊಮ್ಮೆ ಸಿಪಿಎಂ ನೇತೃತ್ವದ ಸರ್ಕಾರ. ಪರಂಪರೆ ಕಡಿದಿದ್ದು ಎರಡನೆ ಬಾರಿಗೂ ಕಾಂಗ್ರೆಸ್ ಸೋತಾಗ. ಅಲ್ಲಿ ಗೆದ್ದಿದ್ದು ಸಿಪಿಎಂ ಅಲ್ಲ, ಪಿಣರಾಯಿ ವಿಜಯನ್ ಎಂಬ ವ್ಯಾಖ್ಯಾನಕ್ಕೆ ಪಕ್ಷದೊಳಗಿನಿಂದ ಬಂದ ಪ್ರತಿರೋಧ ಯಾವ ಪ್ರಮಾಣದ್ದು..ಕಾರಟ್ ಹೇಳುವುದಿಲ್ಲ.
ಇದನ್ನೂ ಓದಿ | ಮೊಗಸಾಲೆ ಅಂಕಣ | ಕರ್ನಾಟಕದ ಪ್ರಾದೇಶಿಕ ಪಕ್ಷಗಳು ಮಣ್ಣು ಮುಕ್ಕಿದ ಇತಿಹಾಸ
ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಿದ್ದಾಗಿ ಕಾರಟ್ ಹೇಳುತ್ತಾರೆ. ಯುಪಿಎ- ಅಧಿಕಾರಾವಧಿಯಲ್ಲಿ (2004-08) ಸೋಮನಾಥ ಚಟರ್ಜಿಯವರನ್ನು ಯುಪಿಎ ಜೊತೆಗೂಡಿದರು ಎಂಬ ಕಾರಣಕ್ಕೆ ಪಕ್ಷದಿಂದ ಉಚ್ಚಾಟಿಸಿದ್ದರ ಬಗ್ಗೆ ಮಾತ್ರ ಕಾರಟ್ ಉಸಿರೆತ್ತುವುದಿಲ್ಲ. “ಹಿಸ್ಟಾರಿಕಲ್ ಬ್ಲಂಡರ್” ಎಂದು ಜ್ಯೋತಿ ಬಸು, ಸಿಪಿಎಂ ನಿರ್ಣಯವನ್ನು ಟೀಕಿಸಿದ್ದು ಯಾವ ಕಾರಣಕ್ಕಾಗಿ ಎನ್ನುವುದನ್ನು ಕೂಡಾ ಕಾರಟ್ ಹೇಳುವುದಿಲ್ಲ. 1996ರಲ್ಲಿ ಲೋಕ ಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿತ್ತು. ಆದರೆ ಅದಕ್ಕೆ ಬಹುಮತವಿರಲಿಲ್ಲ. ಹಾಗಾಗಿ 13 ದಿವಸದಲ್ಲೇ ವಾಜಪೇಯಿ ಸರ್ಕಾರ ಉರುಳಿಹೋಯಿತು. ಹೊರ ಬೆಂಬಲ ನೀಡುವ ಕಾಂಗ್ರೆಸ್ ನಿರ್ಣಯದ ಲಾಭ ಪಡೆಯಲು ಹತ್ತಾರು ಪಕ್ಷಗಳು ಒಗ್ಗೂಡಿದ ಸಂಯುಕ್ತ ರಂಗ ತೀರ್ಮಾನಿಸಿತು. ಮೊದಲಿಗೆ ಅಲ್ಲಿ ಪ್ರಸ್ತಾಪವಾದ ಹೆಸರು ಪಶ್ಚಿಮ ಬಂಗಾಳದ ಸಿಎಂ ಆಗಿದ್ದ ಜ್ಯೋತಿ ಬಸು ಅವರದು.
ಸಿಎಂ ಜ್ಯೋತಿ ಬಸು ಅವರನ್ನು ಪಿಎಂ ಸ್ಥಾನಕ್ಕೇರಲು ಕಳುಹಿಸಿಕೊಡಬೇಕೇ ಬೇಡವೇ ಎಂಬ ವಿಚಾರದಲ್ಲಿ ಖಚಿತ ನಿಲುವು ತೆಗೆದುಕೊಳ್ಳಲು ಸಿಪಿಎಂನ ಪಾಲಿಟ್ ಬ್ಯೂರೋಕ್ಕೆ ಸಾಧ್ಯವೇ ಆಗಲಿಲ್ಲ. ಅಲ್ಲಿಂದ ಅದು ಪಕ್ಷದ ಕೇಂದ್ರ ಸಮಿತಿ (ಸೆಂಟ್ರಲ್ ಕಮಿಟಿ) ಮುಂದೆ ಹೋಯಿತು. ಅಲ್ಲೂ ಅದಕ್ಕೆ ಅನುಮೋದನೆ ದೊರೆಯಲಿಲ್ಲ. ಪಕ್ಷ ತೆಗೆದುಕೊಂಡ ನಿರ್ಧಾರವನ್ನು ಜ್ಯೋತಿ ಬಸು “ಐತಿಹಾಸಿಕ ಪ್ರಮಾದ” ಎಂದು ವರ್ಣಿಸಿದ್ದು ನಂತರದ ಬೆಳವಣಿಗೆ. ಬೂರ್ಜ್ವಾ ಪಕ್ಷದ (ಕಾಂಗ್ರೆಸ್ ಎಂದು ಓದಿಕೊಳ್ಳಿ) ಸಹಕಾರದಲ್ಲಿ ಸರ್ಕಾರ ರಚಿಸುವುದು ತರವಲ್ಲ ಎಂಬ ಕಾರಣಕ್ಕೆ ಜ್ಯೋತಿ ಬಸು ಹೆಸರಿಗೆ ಅನುಮೋದನೆ ಕೊಡಲಿಲ್ಲ ಎನ್ನುವುದು ಸಿಪಿಎಂ ನಂತರದಲ್ಲಿ ನೀಡಿದ ವಿವರಣೆ. ಮನಮೋಹನ್ ಸಿಂಗ್ ಸರ್ಕಾರ ಬೂರ್ಜ್ವಾ ಸರ್ಕಾರವಲ್ಲದೆ ಇನ್ನೇನಾಗಿತ್ತು…ಕಾರಟ್ ಬಾಯಿ ಬಿಡುವುದಿಲ್ಲ. ಜ್ಯೋತಿ ಬಸು ಪಿಎಂ ಸ್ಥಾನದಲ್ಲಿ ಕೂತಿದ್ದರೆ ಇಂಡಿಯಾದ ಸ್ಥಿತಿ ಖಂಡಿತವಾಗಿಯೂ ಈಗಿನಂತೆ ಇರುತ್ತಿರಲಿಲ್ಲ ಎನ್ನುವುದು ಇತರರಿಗಿಂತ ಬಹಳ ಚೆನ್ನಾಗಿ ಗೊತ್ತಿರುವುದು ಕಾರಟ್‍ರಿಗೇ.
ಇದೆಲ್ಲವೂ ಆಗಿ ಹೋದ ಮಾತು. ಇದೀಗ ಕಾರಟ್‍ರಲ್ಲಿ ಮುಳ್ಳಿನಿಂದ ಮುಳ್ಳನ್ನು ತೆಗೆಯುವ ಯೋಚನೆ ಹುಟ್ಟಿಕೊಂಡಿದೆ. ದೇಶದ ಉದ್ದಗಲಕ್ಕೆ ಬೆಳೆಯಬಹುದಾದ ರಾಜಕೀಯ ಸನ್ನಿವೇಶ ಕಂಡಿದ್ದ ಕಮ್ಯೂನಿಸ್ಟ್ ಪಕ್ಷಗಳು ಇವತ್ತು ಅಪ್ರಸ್ತುತವಾಗಿರುವುದಕ್ಕೆ ಅವು ಅನುಸರಿಸಿಕೊಂಡು ಬಂದ ನೀತಿ ನಿಲುವುಗಳೇ ಕಾರಣ. ಅನುಭವಸ್ಥ ರಾಜಕಾರಣಿ ಪ್ರಕಾಶ್ ಕಾರಟ್‍ರಿಗೆ ಇದೆಲ್ಲ ಗೊತ್ತಿಲ್ಲ ಎಂದೇನೂ ಅಲ್ಲ. ಆದರೆ ಅಸಹಾಯಕತೆ ಅವರ ಕೈಯನ್ನೂ ಬಾಯನ್ನೂ ಕಟ್ಟಿಹಾಕಿರಬಹುದು.
ಇದನ್ನೂ ಓದಿ | ಶಾಲೆ ಎಂದರೆ ನೆನಪುಗಳ ಮೊಗಸಾಲೆ, ಐನಾಪುರದಲ್ಲಿ ಎಸ್ಸೆಸ್ಸೆಲ್ಸಿ ಬ್ಯಾಚ್‌ನ ಬೆಳ್ಳಿ ಹಬ್ಬ, ಗುರುವಂದನೆ, ಸ್ನೇಹಸಂಗಮ