ಕರ್ನಾಟಕದಂತೆ ರಾಜಸ್ಥಾನದಲ್ಲಿಯೂ ಬಜೆಟ್ ಅಧಿವೇಶನ ನಡೆದಿದೆ. ಹಣಕಾಸು ಖಾತೆಯನ್ನು ಸ್ವತಃ ತಮ್ಮಲ್ಲೇ ಇಟ್ಟುಕೊಂಡಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಳೆದ ವಾರ ಮಂಡಿಸಿದ ಬಜೆಟ್ ಅದರೊಳಗೆ ಇದ್ದಿರಬಹುದಾದ ಹೊಸ ಕನಸುಗಳ ಕಾರಣವಾಗಿ ಸುದ್ದಿ ಮಾಡಲಿಲ್ಲ. ಬದಲಿಗೆ ಬಳಸಿದ ಹಳಸಲು ರಾಗ ದೇಶದ ಜನ ಅವರನ್ನು ಗೇಲಿ ಮಾಡಲು ಸಾಕಾಯಿತು. ಕಾರಣ ಮೇಲ್ನೋಟಕ್ಕೆ ಸರಳಾತಿಸರಳ. 2023-24ರ ಸಾಲಿನ ಬಜೆಟ್ ಬದಲಿಗೆ ಅವರು ಸದನದಲ್ಲಿ ಓದಲು ಆರಂಭಿಸಿದ್ದು 2022-23ರ ಹಳೆ ಬಜೆಟನ್ನು. ಓದಿದ್ದರಲ್ಲೇನೂ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿರುವ ಸಿಎಂ, ಅದನ್ನು ಓದಿದ್ದಕ್ಕೆ ಸ್ಸಾರಿ ಎಂದಿದ್ದಾರೆ. ಅನುಷ್ಟಾನದಲ್ಲಿರುವ ಸದನ ನಿಯಮವಳಿ ಪ್ರಕಾರ ಇದು ಅಕ್ಷರಶಃ ಕರ್ತವ್ಯ ಲೋಪ. ಪ್ರಮಾದ ಎನ್ನಬಹುದಾದ ಇಷ್ಟು ದೊಡ್ಡ ಲೋಪಕ್ಕೆ ಸ್ಸಾರಿ ಎನ್ನುವುದು ಒಂದು ಪರಿಹಾರವೇ?
ಫೆಬ್ರವರಿ 9ರ ಗುರುವಾರ ರಾಜಸ್ಥಾನ ವಿಧಾನ ಸಭೆ ಮತ್ತು ಇಡೀ ರಾಜ್ಯ ಬರಲಿರುವ ಆರ್ಥಿಕ ಸಾಲಿನ ಮುಂಗಡ ಪತ್ರದಲ್ಲಿ ಅಡಗಿ ಕುಳಿತಿರುವ ಕುತೂಹಲ ಇವತ್ತು ಒಡೆಯುತ್ತದೆ ಎಂದು ಚಾತಕ ಪಕ್ಷಿಯಂತೆ ಕಾದಿದ್ದವು. ಬೆಳಗ್ಗೆ ಹನ್ನೊಂದಕ್ಕೆಲ್ಲ ಬಜೆಟ್ ಪ್ರತಿ ಹಿಡಿದು ಓದಲಾರಂಭಿಸಿದ ಗೆಹ್ಲೋಟ್, ಏಳೇ ನಿಮಿಷದಲ್ಲಿ ಅತ್ತಿತ್ತ ಪೆಕರನಂತೆ ಹುಳ್ಳುಳ್ಳು ಮುಖ ಮಾಡುತ್ತ ಓದು ನಿಲ್ಲಿಸಿ “ಸ್ಸಾರಿ” ಎಂದರು. ಮುಖ್ಯಮಂತ್ರಿ ಒಂದು ವರ್ಷ ಹಳತಾದ ಬಜೆಟ್ ಓದುತ್ತಿದ್ದಾರೆ ಎನ್ನುವುದು ಆ ಹೊತ್ತಿಗೆ ವಿರೋಧ ಪಕ್ಷಗಳಿಗೆ ಮನವರಿಕೆಯಾಗಿತ್ತು. ಆಡಳಿತ ಪಕ್ಷದ ಮುಖ್ಯ ಸಚೇತಕ ಮಹೇಶ ಜೋಷಿ ಓಡೋಡುತ್ತ ಸಿಎಂ ಬಳಿಗೆ ಬಂದು ಕಿವಿಯಲ್ಲಿ ಏನೋ ಹೇಳಿದರು. ಬಜೆಟ್ ಓದು ಅಲ್ಲಿಗೆ ಸ್ಥಗಿತವಾಯಿತು. ಮಹೇಶ್ ಜೋಷಿ ಹೇಳಿದ್ದು “ನೀವು ಓದುತ್ತಿರುವುದು ಕಳೆದ ವರ್ಷ ನೀವೇ ಮಂಡಿಸಿದ ಬಜೆಟನ್ನು, ಈಗ ನಿಲ್ಲಿಸಿ ಹೊಸದನ್ನು ಓದಿ”.
ಮುಖ್ಯಮಂತ್ರಿಯ ಮುಖ ಪೆಕರ ಭಾವಕ್ಕೆ ತಿರುಗಲು ಇನ್ನೇನು ಬೇಕು. ಸಿಎಂರ ಸ್ಸಾರಿ ಯಾರಿಗೂ ಬೇಕಾಗಿರಲಿಲ್ಲ. ಸದನದಲ್ಲಿ ವಿರೋಧ ಪಕ್ಷಗಳ ಗದ್ದಲ ಶುರುವಾಗಿ ಕೋಲಾಹಲ ಸ್ವರೂಪ ತಾಳಿದಾಗ, ಧರಣಿಗೆ ಮುಂದಾಗಿ ಸರ್ಕಾರದ ರಾಜೀನಾಮೆಗೆ ಒತ್ತಾಯಿಸಿದಾಗ, ಬಜೆಟ್‍ನ ಪ್ರಕಟಿತ ಅಂಶಗಳು ವರ್ಷ ಹಿಂದೆಯೇ ಸೋರಿಕೆ ಆಗಿದೆ ಎಂದು ವ್ಯಂಗ್ಯವಾಗಿ ತಿವಿದು ಅದಕ್ಕೆ ಯಾರಿಗೆ ಶಿಕ್ಷೆ ಆಗಬೇಕೋ ಆಗಬೇಕು ಎಂಬ ಪಟ್ಟು ಹಾಕಿ ರಾದ್ಧಾಂತಕ್ಕೆ ಮುಂದಾದಾಗ ಸದನ ಕಲಪವನ್ನು ಒಂದಿಷ್ಟು ಹೊತ್ತು ಮುಂದಕ್ಕೆ ಹಾಕುವುದು ಸ್ಪೀಕರ್‌ಗೆ ಅನಿವಾರ್ಯವಾಯಿತು. ಸದನ ಮತ್ತೆ ಸೇರುವ ಹೊತ್ತಿಗೆ ಕಾವು ಇಳಿದಿತ್ತು. ಹೊಸ ಭಾಷಣವನ್ನು ಮುಖ್ಯಮಂತ್ರಿ ಮಂಡಿಸಿದರು. ಪ್ರಕರಣ ಅಷ್ಟರಮಟ್ಟಿಗೆ ಸುಖಾಂತ್ಯ ಎನಿಸಿಕೊಂಡಿತು.
ಸದನದಲ್ಲಿ ಬೇಷರತ್ ಕ್ಷಮೆ ಯಾಚಿಸುವ ಸ್ಥಿತಿಗೆ ಮುಖ್ಯಮಂತ್ರಿ ಬಂದುದು ಸಣ್ಣ ಸಂಗತಿಯಲ್ಲ; ನಿರ್ಲಕ್ಷಿಸಬಹುದಾದ ಯಕಃಶ್ಚಿತ್ ಬೆಳವಣಿಗೆಯೂ ಅಲ್ಲ. ಕಾರ್ಯಾಂಗದ ಲೋಪ ಇಲ್ಲಿ ಒಡೆದು ಕಾಣಿಸುತ್ತದೆ. ಮುಖ್ಯಮಂತ್ರಿ ಆದವರಿಗೆ ನೆರವಾಗಲೆಂದು ಅಧಿಕಾರಿಗಳು ಸಿಬ್ಬಂದಿಯ ದೊಡ್ಡ ಪಟಾಲಮ್ಮೇ ಇರುತ್ತದೆ. ಕನಿಷ್ಟವೆಂದರೂ ಮೂವರು ಹಿರಿಯ ಐಎಎಸ್ ಅಧಿಕಾರಿಗಳ ನೇರ ಸುಪರ್ದಿಯಲ್ಲಿ ಅವರೆಲ್ಲ ಕರ್ತವ್ಯ ನಿರ್ವಹಿಸುತ್ತಾರೆ. ಎಂಥ ಸಂದರ್ಭದಲ್ಲೂ ಮುಖ್ಯಮಂತ್ರಿಯನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸದಂತೆ ನೋಡಿಕೊಳ್ಳುವ ಬಹುದೊಡ್ಡ ಹೊಣೆ ಅವರೆಲ್ಲರ ಮೇಲಿರುತ್ತದೆ.
ಮಂಡನೆಗೆ ತಿಂಗಳು ಮೊದಲೇ ಬಜೆಟ್ ಸಿದ್ಧಗೊಳಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಅದಕ್ಕೆ ಅಂತಿಮ ರೂಪ ಕೊಟ್ಟ ತರುವಾಯ ಸರ್ಕಾರಿ ಮುದ್ರಣಾಲಯದಲ್ಲಿ ಅತ್ಯಂತ ಗೋಪ್ಯ ವ್ಯವಸ್ಥೆಯಲ್ಲಿ ಬಜೆಟ್ ಪ್ರತಿ ಮುದ್ರಣವಾಗುತ್ತದೆ. ಸಾಮಾನ್ಯವಾಗಿ ಬಜೆಟ್ ಮಂಡನೆ ದಿವಸಕ್ಕೆ ಒಂದು ಅಥವಾ ಎರಡು ದಿವಸ ಮೊದಲು; ಕೆಲವು ಸಂದರ್ಭಗಳಲ್ಲಿ ಒಂದೆರಡು ತಾಸು ಮೊದಲು ಅದರ ಮುದ್ರಣವಾಗುತ್ತದೆ. ಅಲ್ಲಿಂದ ಬಿಗಿ ಭದ್ರತೆಯಲ್ಲಿ ಮುದ್ರಿತ ಪ್ರತಿಗಳನ್ನು ವಿಧಾನ ಸೌಧಕ್ಕೆ ಸುರಕ್ಷಿತ ವಾಹನದಲ್ಲಿ ತರಲಾಗುತ್ತದೆ. ಬಂದೂಕುಧಾರಿ ಪೊಲೀಸರ ಸರ್ಪಗಾವಲಿನಲ್ಲಿ ಪ್ರತಿಗಳನ್ನು ಸುರಕ್ಷಿತ ಕೊಠಡಿಯಲ್ಲಿಡುತ್ತಾರೆ.
ಅನುಕೂಲ ನೋಡಿಕೊಂಡು ಮುಖ್ಯಮಂತ್ರಿಯ ಕೈಗೆ ಒಂದು ಪ್ರತಿಯನ್ನು ತಲುಪಿಸುತ್ತಾರೆ. ಅದಕ್ಕೂ ಮೊದಲು ಒಂದು ಪ್ರತಿಯನ್ನು ಸ್ವತಃ ಹಣಕಾಸು ಸಚಿವರೇ (ಹಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿ) ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮುಟ್ಟಿಸಿ ಬಂದು ಇಲ್ಲಿ ಸದನಕ್ಕೆ ಪ್ರತಿ ಇರುವ ಸೂಟ್‍ಕೇಸ್ ಸಹಿತ ಬಂದು “ಈಗ ಅರ್ಥ ಸಚಿವರಿಂದ ಪ್ರಸಕ್ತ ಸಾಲಿನ ಬಜೆಟ್ ಮಂಡನೆ” ಎಂಬ ಸೂಚನೆ ಬಂದಾಕ್ಷಣ ಓದುವ ಕೆಲಸ ಶುರುಮಾಡುತ್ತಾರೆ. ಅವರು ಓದಲು ಎದ್ದು ನಿಲ್ಲುತ್ತಿದ್ದಂತೆಯೇ ವಿಧಾನ ಸಭಾ ಸಚಿವಾಲಯದ ಸಿಬ್ಬಂದಿ ಸದನದಲ್ಲಿ ಉಪಸ್ಥಿತರಿರುವ ಎಲ್ಲ ಸಚಿವರು ಶಾಸಕರಿಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಯನ್ನು ಹಂಚುತ್ತಾರೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಬ್ರಾಹ್ಮಣ ರಾಜಕೀಯ, ಮತ್ತೆ ಮುನ್ನೆಲೆಗೆ
ಇಷ್ಟೆಲ್ಲ ಕರಾರುವಾಕ್ ನಡೆಯುವ ಶಾಸಕಾಂಗ-ಕಾರ್ಯಾಂಗದ ಜಂಟಿ ಪ್ರಕ್ರಿಯೆಯಲ್ಲಿ ಲೋಪಕ್ಕೆ ಎಡೆ ಇರಲೇಬಾರದು. ಲೋಪ ಘಟಿಸಿದೆ ಎಂದಾದರೆ ಅದಕ್ಕೆ ಕಾರಣರಾದವರ ಪತ್ತೆಯಾಗಬೇಕು. ಯಾರು ಎನ್ನುವುದು ಸಾರ್ವಜನಿಕವಾಗಬೇಕು, ಮುಖ್ಯಮಂತ್ರಿ ಮುಖಭಂಗಕ್ಕೆ ಒಳಗಾಗುವಂತೆ ಮಾಡಿದ ಬೇಜವಾಬ್ದಾರಿ ನೌಕರರ ತಲೆದಂಡವನ್ನು ಸರ್ಕಾರ ಪಡೆಯಬೇಕು. ಇಂಥ ಯಾವುದೂ ರಾಜಸ್ಥಾನದಲ್ಲಿ ಆಗಲೇ ಇಲ್ಲ. ಮುಖ್ಯಮಂತ್ರಿ ಸ್ಸಾರಿ ಹೇಳುವುದರೊಂದಿಗೆ ಇಡೀ ಪ್ರಕರಣವನ್ನು ಮುಚ್ಚಿಹಾಕುವ ರಾಜಕೀಯ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆದುಹೋಯಿತು. ಅಚ್ಚರಿಯ ಮಾತೆಂದರೆ ಮುಖ್ಯ ವಿರೋಧ ಪಕ್ಷ ಬಿಜೆಪಿಯೂ ಸೇರಿದಂತೆ ವಿರೋಧ ಪಕ್ಷಗಳು ಇದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವ ಕೆಲಸಕ್ಕೆ ಬೆನ್ನು ಹಾಕಿದ್ದು.
ಇತಿಹಾಸ ಮರುಕಳಿಸುತ್ತದೆ ಎನ್ನುತ್ತಾರೆ ಬಲ್ಲವರು. ರಾಜಸ್ಥಾನದ ರಾಜಧಾನಿ ಜೈಪುರದಿಂದ ಈಗ ನೇರವಾಗಿ ವಿಶ್ವಸಂಸ್ಥೆ ಅಂಗಳಕ್ಕೆ ಜಿಗಿಯೋಣ. 2011ರಲ್ಲಿ ಕೇಂದ್ರದಲ್ಲಿ ಮನ ಮೋಹನ್‍ಸಿಂಗ್ ನೇತೃತ್ವದ ಯುಪಿಎ ಸರ್ಕಾರ. ಅದರಲ್ಲಿ ನಮ್ಮ ಕನ್ನಡಿಗ ಎಸ್.ಎಂ. ಕೃಷ್ಣ ಪ್ರತಿಷ್ಠಿತ ವಿದೇಶಾಂಗ ಖಾತೆ ಸಚಿವರು. ವಿಶ್ವಸಂಸ್ಥೆಯ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಲು ಅವರು ಅಮೆರಿಕಾಕಕ್ಕೆ ತರಳಿದ್ದರು. ಅವರ ಸರದಿ ಬಂದಾಗ ಭಾಷಣ ಓದಲು ಶುರುಮಾಡಿದರು. ಐದು ನಿಮಿಷದಲ್ಲಿ ಸಭೆಯಲ್ಲಿ ಗುಸುಗುಸು ಪಿಸಪಿಸ ಶುರುವಾಯಿತು. ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಹರದೀಪ್ ಪುರಿ ತಾವು ಕುಳಿತಲ್ಲಿಂದ ಎದ್ದು ಬಂದು ಕೃಷ್ಣ ಕಿವಿಯಲ್ಲಿ ಏನೋ ಉಸುರಿದರು. ನೋಡಿದರೆ ಕೃಷ್ಣ ಓದುತ್ತಿದ್ದುದು ಪೋರ್ಚುಗೀಸ್ ಪ್ರತಿನಿಧಿ ಮಂಡಿಸಿದ್ದ ಭಾಷಣವನ್ನು. ಇಂಗ್ಲಿಷ್ ಬರದವರು ಅಥವಾ ಆ ಭಾಷೆಯಲ್ಲಿ ಮಾತನಾಡಲು ಬಯಸದವರು ತಮ್ಮ ದೇಶದ ಭಾಷೆಯಲ್ಲಿ ಭಾಷಣ ಮಾಡಲು ಅವಕಾಶವಿದೆ. ಹಾಗೆ ಮಂಡನೆಯಾದ ಭಾಷಣವನ್ನು ಇಂಗ್ಲಿಷ್‍ಗೆ ತರ್ಜುಮೆ ಮಾಡಿ, ಎಲ್ಲ ಪ್ರತಿನಿಧಿಗಳಿಗೂ ಹಂಚುತ್ತಾರೆ. ಹಾಗೆ ತಮ್ಮಲ್ಲಿಗೆ ಬಂದಿದ್ದ ಆ ದೇಶದ ಭಾಷಣವನ್ನು ಕೃಷ್ಣ ಐದು ನಿಮಿಷ ಓದಿದ್ದರು.
ಇದನ್ನೂ ಓದಿ: ಮೊಗಸಾಲೆ ಅಂಕಣ: ಭದ್ರಾ ಮೇಲ್ದಂಡೆ: ರಾಜ್ಯದ ಮೊದಲ ಕೇಂದ್ರ ಯೋಜನೆ
ವಿಶ್ವಸಂಸ್ಥೆಯ ವೇದಿಕೆಯೆಂದರೆ ಸಾಮಾನ್ಯವೇ? ಕೃಷ್ಣ ಮಾಡಿದ ಭಾನಗಡಿ ಜಗತ್ತಿನಾದ್ಯಂತ ಟೀಕೆ ವ್ಯಂಗ್ಯ ಮೂದಲಿಕೆ ಅವಹೇಳನಗಳಿಗೆ ಕಾರಣವಾಯಿತು. ಸಪ್ಪೆ ಮೋರೆ ಹೊತ್ತು ಭಾರತಕ್ಕೆ ಮರಳಿದ ಕೃಷ್ಣ, ತಾವು ಹೊಂದಿದ್ದ ವಿದೇಶಾಂಗ ಖಾತೆ ಸಚಿವ ಸ್ಥಾನದಿಂದ ಹೊರಬೀಳಬೇಕಾಯಿತು. ಇಂಥ ಯಾವುದೂ ರಾಜಸ್ಥಾನದಲ್ಲಿ ಆಗಲೇ ಇಲ್ಲ. ತಪ್ಪು ಮಾಡಿದವರು ಹಾಯಾಗಿರಲು ಮುಖ್ಯಮಂತ್ರಿಯೇ ಅವಕಾಶ ಮಾಡಿಕೊಟ್ಟಂತಿದೆ.
ಕೃಷ್ಣ ಅವರಿಗೇನೋ ತಪ್ಪು ಭಾಷಣ ಓದುವ ಕಾಲಕ್ಕೆ ವಯಸ್ಸು ಎಪ್ಪತ್ತರ ಗಡಿ ದಾಟಿತ್ತು. ಅರವತ್ತಕ್ಕೆ ಅರಳುಮರಳು ಎನ್ನುತ್ತಾರೆ. ವಯಸ್ಸಾಗಿದೆ ಎಂದು ಮನಮೋಹನ್ ಸಿಂಗ್ ಕ್ಷಮಿಸಬಹುದಾಗಿತ್ತು. ಕ್ಷಮಿಸಲಿಲ್ಲ. ಹಾಗಂತ ವಿಶ್ವ ಸಂಸ್ಥೆ ವೇದಿಕೆಯಲ್ಲಿ ಯಾವುದೋ ದೇಶದ ಯಾವುದೋ ಪ್ರಧಾನಿ/ಅಧ್ಯಕ್ಷರ ಭಾಷಣ ಓದಿದ ಮೊದಲಿಗರೇನೂ ನಮ್ಮ ಕೃಷ್ಣ ಅವರಾಗಿರಲಿಲ್ಲ. ಅಮೆರಿಕಾದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಕೂಡಾ ಈ ಭಾನಗಡಿ ಮಾಡಿದವರೇ! 2009ರಲ್ಲಿ ಅವರು ತಮ್ಮ ಭಾಷಣ ಎಂದು ಓದಿದ್ದು ಐರಿಷ್ ಪ್ರಧಾನಿ ಬ್ರಿಯಾನ್ ಕೋವೆನ್‍ರ ಭಾಷಣವನ್ನು. ಯಾರೂ ಅವರನ್ನು ಎಚ್ಚರಿಸಲಿಲ್ಲ. ತಮ್ಮ ಭಾಷಣದಲ್ಲಿ ಕೋವೆನ್‍ರು ಬರಾಕ್ ಒಬಾಮಾರನ್ನು ಅಭಿನಂದಿಸುವ ಸಾಲು ಸೇರಿಸಿದ್ದರು. ತಮ್ಮನ್ನು ತಾವೇ ಅಭಿನಂದಿಸಿಕೊಳ್ಳಲು ಸಾಧ್ಯವೇ ಎಂಬ ಒಬಾಮಾ ಸಮಯ ಪ್ರಜ್ಞೆ ಮುಂದೆ ಆ ಭಾಷಣ ಓದದಂತೆ ಮಾಡಿತು! ಒಂದಂತೂ ಸತ್ಯ, ಆದದ್ದೆಲ್ಲಾ ಒಳಿತೇ ಆಯಿತು ಎಂಬ ವೇದಾಂತದ ಸಾಲಿಗೆ ಇದನ್ನೆಲ್ಲ ಸೇರಿಸಲಾಗದು.
ಇದನ್ನೂ ಓದಿ: ಮೊಗಸಾಲೆ ಅಂಕಣ: ಸುಪ್ರೀಂ ತೀರ್ಪು ನಮ್ಮ ಮನದಂಗಳಕೆ