Site icon Vistara News

ಮೊಗಸಾಲೆ ಅಂಕಣ | ಗಡಿ ತಂಟೆ: ಕೇಂದ್ರದ ತಾರಮ್ಮಯ್ಯ ನೀತಿಯ ಫಲ

belagavi border issue

ಒಂದು ಕೈಯಲ್ಲಿ ತೊಟ್ಟಿಲು ತೂಗುತ್ತ ಮತ್ತೊಂದು ಕೈಯಲ್ಲಿ ಮಗುವನ್ನು ಚಿವುಟುತ್ತ ಬಂದಿರುವ ಕೇಂದ್ರವನ್ನಾಳಿದ ಸರ್ಕಾರಗಳು ಮಹಾರಾಷ್ಟ್ರ, ಕರ್ನಾಟಕ, ಕೇರಳ ರಾಜ್ಯ ಗಡಿ ಸಮಸ್ಯೆ ಬಿಗಡಾಯಿಸುವುದಕ್ಕೆ ನೇರ ಹೊಣೆ ಹೊರಬೇಕಿದೆ. ಮೊದಲ ಪ್ರಧಾನಿ ಜವಾಹರಲಾಲ್ ನೆಹರೂರಿಂದ ಹಿಡಿದು ಇವತ್ತಿನ ಪ್ರಧಾನಿ ನರೇಂದ್ರ ಮೋದಿವರೆಗೆ ಆಡಳಿತ ಸೂತ್ರ ಹಿಡಿದ ಪ್ರತಿಯೊಬ್ಬ ಪ್ರಧಾನಿಯೂ ಈ ಗಡಿ ವಿವಾದ ಹೊತ್ತಿ ಉರಿಯುದಕ್ಕೆ ತಮ್ಮದೇ ಆದ ಕೊಡುಗೆ ನೀಡಿಕೊಂಡು ಬಂದರೇ ಶಿವಾಯಿ ಸಮಸ್ಯೆಯನ್ನು ಇತ್ಯರ್ಥಗೊಳಿಸುವತ್ತ ಮನಸ್ಸು ಮಾಡಲಿಲ್ಲ. ಖಾರವಾಗಿ ಕಂಡರೂ ಈ ಮಾತು ನೂರಕ್ಕೆ ಸಾವಿರಪಟ್ಟು ಸತ್ಯ. ಈ ವಿವಾದವನ್ನು ಜೀವಂತವಿರಿಸಿಕೊಂಡು ಬಂದಿರುವ ಕೇಂದ್ರದ ಅರ್ಥವಾಗದ ನೀತಿ ಹತ್ತಾರು ಬಗೆಯ ಅನುಮಾನಗಳನ್ನು ಹುಟ್ಟು ಹಾಕುತ್ತಿದೆ. ಭೂತ, ವರ್ತಮಾನ ಮತ್ತು ಭವಿಷ್ಯದ ನೆಮ್ಮದಿಯನ್ನು ಹಾಳು ಮಾಡಿರುವ ಗಡಿ ತಂಟೆ, ತಲೆನೋವಿನ ಮೂಟೆಯನ್ನೇ ದೇಶದ ಮೇಲೆ ಹೇರಿದೆ.

ಬೆಳಗಾವಿಯಲ್ಲಿ ಇದೀಗ ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ಶುರುವಾಗಿದ್ದು ತಿಂಗಳಾಂತ್ಯದವರೆಗೂ ನಡೆಯಲಿದೆ. ಇದು ಈ ವಿಧಾನ ಸಭೆಯ ಕೊನೆ ಅಧಿವೇಶನ. ಹಾಗಾಗಿ ಕಲಾಪವೆಲ್ಲವೂ ರಾಜಕೀಯ ಕೇಂದ್ರಿತ, ಚುನಾವಣೆ ಮೇಲೆ ದೃಷ್ಟಿ ನೆಟ್ಟ ರಾಜಕಾರಣಕ್ಕೆ ಆದ್ಯತೆ. ಈ ಆದ್ಯತೆಯ ಭಾಗವಾಗಿ ಗಡಿ ಕ್ಯಾತೆ ವಿಚಾರವೂ ಮುನ್ನೆಲೆಗೆ ಬಂದಿದೆ. ಮೂರೂ ರಾಜ್ಯಗಳ ನಡುವಣ ಮುಖ್ಯವಾಗಿ ಮಹಾರಾಷ್ಟ್ರ-ಕರ್ನಾಟಕ ನಡುವಣ ಗಡಿ ವಿವಾದ ತಣ್ಣಗಾಗಲು ಮಹಾರಾಷ್ಟ್ರದ ಕೆಲವು ನಾಯಕರು, ಕೆಲವು ಸಂಘಟನೆಗಳು ಬಿಡದೇ ಇರುವುದು ರಾಜ್ಯ ರಾಜ್ಯಗಳ ನಡುವಣ ಸೌಹಾರ್ದ ಸಂಬಂಧಕ್ಕೆ ಕೊಡಲಿ ಏಟು ಹಾಕುತ್ತಿದೆ. ಭಾರತ ಒಕ್ಕೂಟ ವ್ಯವಸ್ಥೆಯ ಮೇಲೆ ನಿಂತಿರುವ ಪ್ರಜಾ ಪ್ರಭುತ್ವ. ಇಲ್ಲಿ ಪ್ರತಿ ರಾಜ್ಯವೂ ಸಾರ್ವಭೌಮ ಸ್ವರೂಪದ್ದು. ಈ ರಾಜ್ಯದ ಮಹತ್ವ ಕಡಿಮೆ, ಅದರದು ಹೆಚ್ಚು ಎನ್ನುವ ಯಾವುದೇ ಭೇದಭಾವ ಇರದ ಈ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ನೀತಿ “ಕೂಡಿ ಬಾಳಿದರೆ ಸ್ವರ್ಗ ಸುಖ” ಎನ್ನುವುದಲ್ಲದೆ ಬೇರೇನೂ ಅಲ್ಲ. ಈ ನೀತಿಯನ್ನೆ ಅಣಕಿಸುವಂತೆ ಮರಾಠಿಗರ ಕ್ಯಾತೆ ಮುಂದುವರಿದೆ. ಅಲ್ಲಿ ಅವರಿಗೆ ರಾಜಕೀಯ ಸುಭದ್ರತೆಗೆ ಗಡಿ ವಿವಾದ ಸದಾ ಜೀವಂತವಿರಬೇಕು. ಇಲ್ಲಿ ಕರ್ನಾಟಕದ ರಾಜಕಾರಣಕ್ಕೆ ಕೂಡಾ ಗಡಿ ವಿವಾದ ಆಗಾಗ ಭುಗಿಲೇಳುತ್ತಿರಬೇಕು. ಅಂಥ ಮತ್ತೊಂದು ಹಂಗಾಮಾದ ಸಂದರ್ಭದಲ್ಲಿ ನಾವಿದ್ದೇವೆ.

ವಿಧಾನ ಮಂಡಲದ ಅಧಿವೇಶನದಿಂದ ಉಳಿದೆಲ್ಲ ಸಂಗತಿಗಳಿಗಿಂತ “ನಮ್ಮ ಭೂಮಿಯ ಒಂದಿಂಚು ನೆಲವನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡೆವು” ಎಂಬ ಪ್ರತಿಜ್ಞೆಯಂಥ ಮಾತು ಹೇಳಿಕೆಗಳೇ ವೀರಾವೇಶದಲ್ಲಿ ಹೊರಬರುತ್ತಿದ್ದು ಬರಲಿರುವ ಚುನಾವಣೆಯಲ್ಲಿ ಕೂಡಾ ಇದು ಲಾಭ ತರುವ ಸಾಧ್ಯತೆಯ ಲೆಕ್ಕಾಚಾರದಲ್ಲಿ ವಿವಿಧ ರಾಜಕೀಯ ಪಕ್ಷಗಳು ಮುಳುಗಿವೆ. ಭಾಷಾವಾರು ಪ್ರಾಂತ್ಯ ರಚಿಸುವ ಹಂತದಲ್ಲಿ ಬಹು ಭಾಷಿಕರ ಸಂಖ್ಯೆ ಆಧರಿಸಿ ಆಯಾ ರಾಜ್ಯಗಳನ್ನು ರಚಿಸಿದ ಬಳಿಕವೂ ಎಲ್ಲೆಲ್ಲೋ ಚದುರಿ ಹೋಗಿರುವ ಭಾಷಿಕರ ಪ್ರದೇಶಗಳನ್ನು ಅವರವರ ಭಾಷಿಕ ರಾಜ್ಯದ ವ್ಯಾಪ್ತಿಯಲ್ಲಿ ತರುವ ಯತ್ನವಾಗಿ ಒಂದಿಷ್ಟು ಸಾಹಸವನ್ನು ಕೇಂದ್ರ ಸರ್ಕಾರ ಸ್ವಾತಂತ್ರ್ಯದ ಹೊಸದರಲ್ಲಿ ಮಾಡಬೇಕಾಗಿ ಬಂತು.

ಇದನ್ನೂ ಓದಿ | ಮೊಗಸಾಲೆ ಅಂಕಣ | ಕಾಂಗ್ರೆಸ್‍ನತ್ತ ದತ್ತ ಗಮನ

ಭಾಷಾವಾರು ಪ್ರಾಂತ್ಯ ರಚನೆಯಲ್ಲಿ ಅನ್ಯಾಯವಾಗಿದೆ ಎಂದು ಮೊದಲಿಗೆ ಆಕಾಶ ಬಿರಿಯುವಂತೆ ಕೂಗು ಹಾಕಿದ್ದು ಮಹಾರಾಷ್ಟ್ರವೇ. ಅದರ ಒತ್ತಾಯಕ್ಕೆ ಮಣಿದ ಅಂದಿನ ನೆಹರೂ ಸರ್ಕಾರ ಸುಪ್ರೀಂ ಕೋರ್ಟ್‍ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮಹಾಜನ್ ನೇತೃತ್ವದ ಏಕ ಸದಸ್ಯ ಆಯೋಗ ರಚಿಸಿತು. ಈ ಆಯೋಗದ ರಚನೆಯಾಗಿದ್ದು ತನಿಖಾ ಕಾಯ್ದೆ (ಕಮಿಷನ್ ಆಫ್ ಎನ್‍ಕ್ವೈರಿ ಆಕ್ಟ್) ಅಡಿಯಲ್ಲಿ. ಮಹಾಜನ್ ಅವರು ಸಾದ್ಯಂತ ಮಾಹಿತಿ ಸಂಗ್ರಹ ಮಾಡುವ ಸಮಯದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದವರು ವಿ.ಪಿ. ನಾಯಕ್. ಇಲ್ಲಿ ಕನಾಟಕದಲ್ಲಿ ಎಸ್.ನಿಜಲಿಂಗಪ್ಪ. ಕೇರಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಇತ್ತಾಗಿ ಅದರ ನಿಲುವು ಲೆಕ್ಕಕ್ಕೆ ಇರಲಿಲ್ಲ. ನಾಯಕ್ ಮತ್ತು ನಿಜಲಿಂಗಪ್ಪ ಇಬ್ಬರೂ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳು. ನೆಹರೂ ಆಡಳಿತದಲ್ಲಿ ಅನ್ಯಾಯವಾಗದು ಎಂದು ನಂಬಿದ್ದ ಧುರೀಣರು. ಆ ಭರವಸೆಯಲ್ಲೇ “ಮಹಾಜನ್ ವರದಿಯನ್ನು ಮಹಾರಾಷ್ಟ್ರೀಯರು ಸ್ವಾಗತಿಸುತ್ತೇವೆ” ಎಂದು ನಾಯಕ್ ಬಹಿರಂಗವಾಗಿ ಘೋಷಿಸಿದ್ದು.

ಕೇರಳ ಭಾಗದಲ್ಲಿ ಕಾಸರಗೋಡು ಯವ ದೃಷ್ಟಿಯಿಂದ ನೋಡಿದರೂ ಕರ್ನಾಟಕದ ಭಾಗ. ಆದರೆ ಮಹಾಜನ್ ಆಯೋಗ ಅದನ್ನು ಕೇರಳಕ್ಕೆ ಉಡುಗೊರೆಯಾಗಿ ನೀಡಿತು. ಕಾಸರಗೋಡಿನದು ಮತ್ತೊಂದು ಬಗೆಯ ಕಣ್ಣೀರ ಕಥೆ. ಅದರತ್ತ ಇನ್ನೊಮ್ಮ ನೋಡೋಣ. ಇತ್ತ ಮಹಾರಾಷ್ಟ್ರದ ಕ್ಯಾತೆ ನಡೆದಿರುವ ರೀತಿಗೆ ಒತ್ತು ಕೊಡೋಣ. ಬೆಳಗಾವಿ ಸೇರಿದಂತೆ ಗಡಿ ಭಾಗದ 814 ಹಳ್ಳಿಗಳು ತನಗೆ ಬರತಕ್ಕದ್ದು ಎನ್ನುವುದು ಮಹಾರಾಷ್ಟ್ರ ಮಾಡಿಕೊಂಡು ಬಂದಿರುವ ವಾದ. ಇದರಲ್ಲಿ ಬೆಳಗಾವಿ, ಕಾರವಾರ, ಖಾನಾಪುರ, ನಿಪ್ಪಾಣಿಯಂಥ ಅನೇಕವು ಸೇರಿವೆ. ಆದರೆ ಮಹಾಜನ್ ಆಯೋಗ, ಈ ವಾದಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಲಿಲ್ಲ. ಅದರ ವರದಿ ಪ್ರಕಾರ 264 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಿದವು. ಬೆಳಗಾವಿ ಸೇರಿದಂತೆ ಗಡಿ ಭಾಗದ 247 ಹಳ್ಳಿಗಳು ಕರ್ನಾಟಕಕ್ಕೆ ಬಂದವು. ವಿವಾದವೊಂದು ಇತ್ಯರ್ಥವಾಗಲಿ ಎಂಬೊಂದೇ ಕಾರಣಕ್ಕೆ ಕರ್ನಾಟಕ, ಕೇರಳಗಳು ವರದಿಯನ್ನು ಒಪ್ಪಿಕೊಂಡವು. ಮಹಾರಾಷ್ಟ್ರ ಮಾತ್ರ ವರದಿಯನ್ನು ಸುಡುವಲ್ಲೀವರೆಗೂ ಹೋಯಿತು.

ಆರು ದಶಕದಲ್ಲಿ ಈ ವಿವಾದ ಸಾಗಿ ಬಂದ ದಾರಿಯನ್ನು ನೋಡಿದರೆ, ಇನ್ನೇನು ಚುನಾವಣೆ ಬಂತು ಎಂಬ ಹಂತದಲ್ಲಿ ಗಡಿ ಕ್ಯಾತೆ ಭುಗಿಲೇಳುತ್ತದೆ. ಮಹಾರಾಷ್ಟ್ರ ವಿಧಾನ ಮಂಡಲ “ನಮ್ಮ ಜಾಗವನ್ನು ನಾವು ಪಡೆದೇ ಸಿದ್ಧ” ಎಂದು ಠರಾವು ಅಂಗೀಕರಿಸುವುದು; ಕರ್ನಾಟಕ ವಿಧಾನ ಮಂಡಲ “ಒಂದಿಂಚು ಜಾಗವನ್ನೂ ಬಿಟ್ಟುಕೊಡೆವು” ಎಂಬ ನಿರ್ಣಯ ಅಂಗೀಕರಿಸುವುದು ವಾರ್ಷಿಕ ವಿಧಿ ಎಂಬಂತಾಗಿದೆ. ಉಭಯ ರಾಜ್ಯಗಳಲ್ಲಿ ಶಾಶ್ವತ ಎನ್ನಬಹುದಾದ ಸಮಸ್ಯೆಗೆ ಪರಿಹಾರವೇ ಇಲ್ಲವೇ? ಇದೆ. ಅದು ಕೇಂದ್ರ ಸರ್ಕಾರದ ಕೈಯಲ್ಲಿದೆ. ಮಹಾಜನ್ ಆಯೋಗದ ವರದಿಯನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರ ಮುಂದೆ ಮಾಡಿದ್ದಾದರೂ ಏನು? ಕಮಿಷನ್ ಆಫ್ ಎನ್‍ಕ್ವೈರಿ ಆಕ್ಟ್ ಪ್ರಕಾರ ರಚನೆಯಾದ ಆಯೋಗದ ವರದಿಯನ್ನು ಮಂಡಿಸಿದ ಮಾತ್ರಕ್ಕೆ ಅದರ ಹೊಣೆ ಮುಗಿಯುವುದಿಲ್ಲ. ಈ ವಿಚಾರದಲ್ಲಿ ತಾನು ತೆಗೆದುಕೊಂಡಿರುವ ಕ್ರಮ (ಆಕ್ಷನ್ ಟೇಕನ್ ರಿಪೋರ್ಟ್-ಎಟಿಆರ್) ಏನು ಎನ್ನುವುದನ್ನು ಕೇಂದ್ರ ಹೇಳಬೇಕಾಗಿತ್ತು, ಈವರೆಗೂ ಈ ವಿಚಾರದಲ್ಲಿ ಕೇಂದ್ರ ಸರ್ಕಾರದ್ದು ಅರ್ಥವಾಗದ ಮೌನ ಎನ್ನುತ್ತಾರೆ ದಶಕಗಳಿಂದ ಗಡಿ ತಂಟೆಯನ್ನು ಆಳವಾಗಿ ಅಧ್ಯಯನ ಮಾಡಿರುವ ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಎಂ. ಮದನ್ ಮೋಹನ್. ಈ ವರದಿಯನ್ನು ಒಪ್ಪಿದೆ ಅಥವಾ ಒಪ್ಪಿಲ್ಲ ಎಂದು ಈವರೆಗೂ ಕೇಂದ್ರ ಸರ್ಕಾರ ಹೇಳಿಲ್ಲ ಎನ್ನುವ ವಾಸ್ತವದತ್ತ ಅವರು ಗಮನ ಸೆಳೆಯುತ್ತಾರೆ. ನಿಮ್ಮ ಪಾಡಿಗೆ ನೀವು ಕಚ್ಚಾಡಿಕೊಂಡಿರಿ ಎಂಬ ಸಂದೇಶ ಕೇಂದ್ರ ಸರ್ಕಾರದ್ದಾಗಿದೆಯೇ…? ಉತ್ತರ ಅವರವರ ಭಾವಕ್ಕೆ ಬಿಟ್ಟಿದ್ದು.

ಇದನ್ನೂ ಓದಿ | ಮೊಗಸಾಲೆ ಅಂಕಣ | ಆಚಾರವಿಲ್ಲದ ನಾಲಗೆಗೆ ಎಲುಬೂ ಇಲ್ಲ

ಬರೋಬ್ಬರಿ 63 ವರ್ಷದ ಹಿಂದೆ 1967ರಲ್ಲಿ ಮಹಾಜನ್ ಆಯೋಗ ತನ್ನ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿತು. ಅದನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಲಾಯಿತು. ಯಾವಾಗ ಬೆಳಗಾವಿ, ಕಾರವಾರ, ನಿಪ್ಪಾಣಿ, ಖಾನಾಪುರ ಮುಂತಾದವು ಕರ್ನಾಟಕದಲ್ಲೇ ಉಳಿಯುತ್ತವೆ ಎನ್ನುವುದು ವರದಿಯಿಂದ ಸ್ಪಷ್ಟವಾಯಿತೋ ಆ ಕ್ಷಣದಿಂದಲೇ ಮಹಾರಾಷ್ಟ್ರ ಅದರ ವಿರುದ್ಧ ತಿರುಗಿ ಬಿತ್ತಲ್ಲದೆ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕೆಂಬ ವಾದದೊಂದಿಗೆ ನ್ಯಾಯಾಲಯದ ಕಟ್ಟೆಯನ್ನೂ ಏರಲು ತೀರ್ಮಾನ ಕೈಗೊಂಡು ಅದರಂತೆ ಮುಂದುವರಿಯಿತು. ಮಹಾರಾಷ್ಟ್ರದ ಖಟ್ಲೆ ಈಗಲೂ ಸುಪ್ರೀಂ ಕೋರ್ಟ್ ಮುಂದಿದೆ. ಮಹಾಜನ್ ವರದಿಯನ್ನು ಸ್ವಾಗತಿಸುವುದಾಗಿ ವೀರಾವೇಶದ ಮಾತಾಡಿದ್ದ ಮಹಾರಾಷ್ಟ್ರ ಮುಖ್ಯ ಮಂತ್ರಿ ತಮ್ಮ ಬಾಯಿಗೆ ಹೊಲಿಗೆ ಹಾಕಿಕೊಂಡು ಕುಳಿತರು. ಈ 63 ವರ್ಷಗಳಲ್ಲಿ ಮಹಾರಾಷ್ಟ್ರ ರಾಜ್ಯದ ರಾಜಕಾರಣ ನಿಂತಿರುವುದೇ ಗಡಿ ಕ್ಯಾತೆಯನ್ನು ಆಗಾಗ ಎತ್ತುವ ಅರ್ಥಹೀನ ನಡವಳಿಕೆಯಲ್ಲಿ.

ಅರವತ್ತರ ದಶಕದಲ್ಲಿ ಆಯೋಗ ರಚನೆಗೆ ಕೇಂದ್ರ ಸರ್ಕಾರ ಮುಂದಾದಾಗ ಯಾವುದೇ ಒಂದು ರಾಜ್ಯ ವಿರೋಧಿಸಿದ್ದರೂ ಅದು ಅಸ್ತಿತ್ವಕ್ಕೆ ಬರುತ್ತಿರಲಿಲ್ಲ. ಕರ್ನಾಟಕ ವಿರೋಧ ಮಾಡದೇ ಇರುವುದಕ್ಕೆ ಕಾರಣ ನೆಹರೂ ಮೇಲಿದ್ದ ಭರವಸೆ ಎನ್ನುವುದು ಸ್ಪಷ್ಟ. ವರದಿ ಮಂಡನೆಯಾದ ತರುಣದಲ್ಲೇ ಮಹಾರಾಷ್ಟ್ರದ ಒತ್ತಡವನ್ನು ಪಕ್ಕಕ್ಕೆ ತಳ್ಳಿ, ಆಯೋಗದ ವರದಿಯನ್ನು ಅಂಗೀಕರಿಸಿದ್ದಾಗಿಯೂ, ಅದರ ವರದಿಯೇ ಅಂತಿಮ (ಎಟಿಆರ್) ಎಂದು ಕೇಂದ್ರ ಸರ್ಕಾರ ಹೇಳಿದ್ದರೆ ಅರ್ಬುದ ವ್ರಣ ರೂಪ ಪಡೆಯುತ್ತಿರಲಿಲ್ಲ. ಮಹಾರಾಷ್ಟ್ರ, ಕರ್ನಾಟಕ ಎರಡೂ ರಾಜ್ಯದಲ್ಲಿ ಮೋದಿ ಮಾತು ಕೇಳುವ ಸರ್ಕಾರಗಳೇ ಇವೆ. ಹಿಂದೆಯೂ ನೆಹರೂ ಇಂದಿರಾ ಗಾಂಧಿ ಮಾತು ಕೇಳುವ ಸರ್ಕಾರಗಳೇ ಈ ರಾಜ್ಯಗಳಲ್ಲಿದ್ದವು. ಈಗ ಮಹಾಜನ್ ವರದಿ ವಿಚಾರದಲ್ಲಿ ಮೋದಿ ಬಾಯಿ ಬಿಡಲಾಗದಂಥ ಸ್ಥಿತಿ ವಾತಾವರಣ ಮಹಾರಾಷ್ಟ್ರದಲ್ಲಿದೆ. ಇಷ್ಟಕ್ಕೂ ಸಮಸ್ಯೆ ಇತ್ಯರ್ಥವಾಗುವುದು ಯಾವುದೇ ರಾಜಕೀಯ ಪಕ್ಷಕ್ಕೆ ಬೇಕಾಗಿಲ್ಲ ಎನ್ನುವುದಕ್ಕೆ ಇದೊಂದೇ ವಿವಾದ ಹಲವು ನಿದರ್ಶನಗಳನ್ನು ಮುಂದಿಡುತ್ತದೆ.

ಇತ್ತೀಚೆಗೆ ಬಂದ ಸುದ್ದಿ ಪ್ರಕಾರ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕೆಂಬ ಒತ್ತಡ ಬರುತ್ತಿದೆ. ಮಹಾರಾಷ್ಟ್ರದ ಕೆಲವು ಸಂಘಟನೆಗಳು, ನಾಯಕರು ಈ ಕಿತಾಪತಿಗೆ ಈಗ ಮುಂದಾಗಿದ್ದಾರೆ. “ಬೆಳಗಾವಿ ನಮಗೆ ಬರದಿದ್ದರೆ ಬೇಡ, ಆದರೆ ಕರ್ನಾಟಕದಲ್ಲಿ ಉಳಿಯುವುದು ಮಾತ್ರ ಬೇಡವೇ ಬೇಡ” ಎಂಬ ವಿಕೃತ ಸಿದ್ಧಾಂತದಲ್ಲಿ ಬಂದಿರುವ ಬೇಡಿಕೆ ಇದು ಎಂದು ಯಾರಾದರೂ ಹೇಳಬಹುದು.

ಇದನ್ನೂ ಓದಿ | ಮೊಗಸಾಲೆ ಅಂಕಣ | ವಿಶ್ವನಾಥ್ ಹೇಳುವ ಕಾಗಕ್ಕ ಗುಬ್ಬಕ್ಕ ಕಥೆ

Exit mobile version