ಎಂಬತ್ತರ ದಶಕದ ಕರ್ನಾಟಕ ಹೇಳುವ ಕಥೆ ಅಸಂಖ್ಯ. ಅದೇ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಬಂದುದು ಇದೇ ದಶಕದಲ್ಲಿ. ಭಾರತೀಯ ಜನತಾ ಪಾರ್ಟಿ, ಉಭಯ ಕಮ್ಯೂನಿಸ್ಟ್ ಪಕ್ಷಗಳು ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಅಸ್ತಿತ್ವ ಪಡೆದ ಮೊದಲ “ಕಿಚಡಿ” ಸರ್ಕಾರ ಜನಿಸಿದ್ದೂ ಇದೇ ಸಮಯದಲ್ಲಿ. 1984ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷ ದಯನೀಯವಾಗಿ ಸೋತಿದ್ದನ್ನೇ ನೆಪ ಮಾಡಿಕೊಂಡು ವಿಧಾನ ಸಭೆ ವಿಸರ್ಜಿಸಿ ಮತ್ತೆ ಚುನಾವಣೆ ನಡೆಸಿದಾಗ ಜನತಾ ಪಾರ್ಟಿ ಸರ್ಕಾರವೇ ಬೇಕೆಂದು ಜನ ಬಹುಮತ ನೀಡಿದ್ದು ಇದೇ ದಶಕದ ವಿಶೇಷ. ಜನತಂತ್ರಕ್ಕೇ ಸವಾಲೊಡ್ಡಿದ್ದ ತುರ್ತು ಪರಿಸ್ಥಿತಿ ಎಂಬ ಗಂಡಾಂತರ ಯುಗದಲ್ಲಿ ಜೈಲು ಸೇರಿದ್ದ ಎರಡನೆ ಸ್ವಾತಂತ್ರ್ಯ ಸಮರದ ವೀರರು ಮಂತ್ರಿ, ಮುಖ್ಯಮಂತ್ರಿ ಆದ ಕಾಲಘಟ್ಟ. ಜನರಲ್ಲಿ ಹೊಸ ಭರವಸೆ, ಹಲವು ನಿರೀಕ್ಷೆ ಹುಟ್ಟುಹಾಕಿದ್ದ ಪರ್ವ.
ತುರ್ತು ಪರಿಸ್ಥಿತಿ ಹಿಂತೆಗೆದ ತರುವಾಯದಲ್ಲಿ ಹುಟ್ಟಿದ್ದು ಜನತಾ ಪಕ್ಷ. ಕೇಂದ್ರದಲ್ಲಿ ಅದು ಅಧಿಕಾರಕ್ಕೆ ಬಂದರೂ ಪೂರ್ಣ ಅವಧಿಗೆ ಬಾಳಲಿಲ್ಲ. ಒಳ ಮತ್ತು ಹೊರ ಕಚ್ಚಾಟ, ಪೂರ್ವಗ್ರಹ, ಬಾಲಗ್ರಹಗಳು ಅದರ ಅವಸಾನಕ್ಕೆ ಪೂರಕವಾದ ಕೆಲವು ಕಾರಣಗಳು. ಸಂಸ್ಥಾ ಕಾಂಗ್ರೆಸ್, ಜನಸಂಘ, ಸಮಾಜವಾದಿ ಪಕ್ಷ, ಸ್ವತಂತ್ರ ಪಾರ್ಟಿ ಇತ್ಯಾದಿ ಇತ್ಯಾದಿ ಪಕ್ಷಗಳು ಜೈಲು ಕುಲುಮೆಯಲ್ಲಿ ಕರಗಿ ಒಂದು ಘಟ್ಟಿಯಾದರೂ ಸರ್ಕಾರ ರಚನೆಯೊಂದಿಗೇ ಅದರಲ್ಲಿ ಬಿರುಕು ಕಂಡಿದ್ದು ಆಡಳಿತ ಪಕ್ಷ ಚಿಂದಿಚಿಂದಿಯಾಗಿದ್ದು ಇತಿಹಾಸ. ಮುರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದ ಜನತಾ ಪಕ್ಷದ ಸರ್ಕಾರವನ್ನು “ಕಿಚಡಿ” ಸರ್ಕಾರವೆಂದು ಇಂದಿರಾ ಗಾಂಧಿ ಅಂದು ಮೂದಲಿಸಿದ್ದರು. ರಾಜ್ಯದಲ್ಲೂ ಮೊದಲಿಗೆ ಬಂದುದು ತಥಾಕಥಿತ ಕಿಚಡಿ ಸರ್ಕಾರವೇ.
ಜೆಪಿ ಚಳವಳಿ ಕರ್ನಾಟಕದಲ್ಲೂ ಹೊಸ ಹೊಸ ಮುಖಗಳು ಸಾರ್ವಜನಿಕ ಬದುಕಿನಲ್ಲಿ ಮುಂಚೂಣಿಗೆ ಬರುವಂತೆ ಮಾಡಿತ್ತು. ಹತ್ತು ಹಲವು ನಾಯಕರು ಆ ವೇಳೆಗೆಲ್ಲಾ ಹೆಸರು ಮಾಡಿದವರು ಇದ್ದರು. ಆ ಸಾಲಿನಲ್ಲಿ ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ, ಎಚ್.ಡಿ.ದೇವೇಗೌಡ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ ಮುಂತಾದವರು ಇದ್ದರು. ಎರಡನೆ ಸಾಲಿನಲ್ಲಿ ಮುಖ್ಯವಾಗಿ ಕಾಣಿಸಿಕೊಂಡ ಆರ್.ವಿ. ದೇಶಪಾಂಡೆ, ಪಿಜಿಆರ್ ಸಿಂಧ್ಯಾ, ಬಿ.ಎಲ್.ಶಂಕರ್, ಜೀವರಾಜ ಆಳ್ವಾ, ರಮೇಶ ಜಿಗಜಿಣಗಿ ಮುಂತಾದವರ ನಡುವೆ ಮಿಂಚು ಹುಳದಂತೆ ಗಮನ ಸೆಳೆದವರು ವೈ.ಎಸ್.ವಿ.ದತ್ತ ಮತ್ತು ವಿ.ಎಸ್. ಉಗ್ರಪ್ಪ.
ರಾಮಕೃಷ್ಣ ಹೆಗಡೆ, ಬೊಮ್ಮಾಯಿ, ದೇವೇಗೌಡ ಅಥವಾ ಜೆ.ಎಚ್.ಪಟೇಲರ ಆಡಳಿತಾವಧಿಯಲ್ಲಿ ಇವರಿಬ್ಬರಿಗೂ ಹೇಳಿಕೊಳ್ಳುವಂಥ ಹುದ್ದೆ ಆಧರಿತ ಪ್ರಾಮುಖ್ಯತೆ ಇರಲಿಲ್ಲ. ಆದರೆ ಇಲ್ಲಿ ಪ್ರಸ್ತಾಪಿತ ನಾಲ್ವರೂ ಜನತಾ ಪರಿವಾರದ ಮುಖ್ಯಮಂತ್ರಿಗಳಿಗೆ ಒಂದಲ್ಲ ಒಂದು ಕಾರಣಕ್ಕೆ ಹತ್ತಿರವಾಗೇ ಇದ್ದವರು. ಮುಖ್ಯಮಂತ್ರಿಗಳ ಕಿಚೆನ್ ಕ್ಯಾಬಿನೆಟ್‍ನಲ್ಲಿ ಇಬ್ಬರೂ ದಿನನಿತ್ಯ ಕಾಣಿಸಿಕೊಳ್ಳುತ್ತಿದ್ದರು. ಸಿಎಂಗೆ ಹತ್ತಿರದವರೆಂಬ ಕಾರಣಕ್ಕಾಗಿ ವಿಧಾನ ಸೌಧದ ಮೊಗಸಾಲೆಯಲ್ಲಿ ಅವರು ಪದೇ ಪದೇ ಗಮನ ಸೆಳೆಯುತ್ತಿದ್ದರು. ವಿಧಾನ ಸಭೆ, ವಿಧಾನ ಪರಿಷತ್‍ನ ಮೊಗಸಾಲೆಗಳಲ್ಲಿ ಸಚಿವ, ಶಾಸಕರಿಗೆಂದೇ ಮೀಸಲಿಟ್ಟ, ಕೂತರೆ ಹೂತು ಹೋಗುವಂಥ ಐಷಾರಾಮಿ ಆಸನಗಳಲ್ಲಿ ಕುಳಿತು ಸ್ನೇಹ ಸಲ್ಲಾಪದಲ್ಲಿ ತೊಡಗುತ್ತಿದ್ದರು. ತಮ್ಮ ಪಕ್ಷದ ಸರ್ಕಾರದಲ್ಲಿ ತಾವು ಕೂಡಾ ಏನಾದರೂ ಆಗಬೇಕೆಂದು ಇವರಿಬ್ಬರೂ ಕನಸಿದ್ದು ಸುಳ್ಳಲ್ಲ, ಅಸಹಜವೂ ಆಗಿರಲಿಲ್ಲ. ಆದರೆ ಆಗಲಿಲ್ಲ. ಇದಕ್ಕೆ ಕಾರಣ ಹೆಗಡೆ ಬಣ, ದೇವೇಗೌಡ ಬಣಗಳ ನಡುವಣ ಕಿತ್ತಾಟ. ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಎಳೆಯುವ ಶಕ್ತಿ ರಾಜಕಾರಣ.
83ರಿಂದ 89ರವರೆಗೆ ಹೆಗಡೆ, ಬೊಮ್ಮಾಯಿ ಸರ್ಕಾರ. 89ರ ಚುನಾವಣೆಯಲ್ಲಿ ಜನ ಅಧಿಕಾರವನ್ನು ಮತ್ತೆ ಕಾಂಗ್ರೆಸ್‍ಗೆ ನೀಡಿದರು. 179 ಶಾಸಕರು ಕಾಂಗ್ರೆಸ್‍ನಲ್ಲಿದ್ದರೂ ಮೂವರು (ವೀರೇಂದ್ರ ಪಾಟೀಲ, ಎಸ್.ಬಂಗಾರಪ್ಪ, ವೀರಪ್ಪ ಮೊಯಿಲಿ) ಮುಖ್ಯಮಂತ್ರಿಗಳನ್ನು ರಾಜ್ಯ ಕಂಡಿತು. 94ರಲ್ಲಿ ಚುನಾವಣೆ. ಜನತಾ ಪರಿವಾರ ಮತ್ತೆ ಬಹುಮತ ಪಡೆಯಿತು. ಹತ್ತು ಹಲವು ರೀತಿಯ ಗದ್ದಲ ಕೋಲಾಹಲದ ನಡುವೆ ಸಿಎಂ ಆದವರು ದೇವೇಗೌಡರು. ಆ ವೇಳೆಗೆ ಹೆಗಡೆ- ಗೌಡರ ನಡುವೆ ಮಾತುಕತೆ ನಿಂತುಹೋಗಿತ್ತು. ಒಂದು ಕಾಲದ ಗೆಳೆಯರು ಪರಸ್ಪರ ಮುಖ ನೋಡದ ಹಂತಕ್ಕೆ ಬಂದಿದ್ದರು. ಪರಿವಾರದ ಎರಡನೆ ಹಂತದ ನಾಯಕರಲ್ಲಿ ಹಲವರಿಗೆ ಯಾವ ಬಣದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡರೆ ಸುರಕ್ಷಿತವಾಗಿ ದಡ ಸೇರಬಹುದೆಂಬ ಯೋಚನೆ. ಈ ಕಾಲಘಟ್ಟದಲ್ಲಿ ದತ್ತ ಮತ್ತು ಉಗ್ರಪ್ಪ ಆಯ್ಕೆ ಮಾಡಿಕೊಂಡಿದ್ದು ಗೌಡರ ಬಣವನ್ನು.
ರೇಸ್‍ಕೋರ್ಸ್ ರಸ್ತೆಯಲ್ಲಿ (ಈಗ ಕಾಂಗ್ರೆಸ್‍ನ ಸ್ವಾಧೀನದಲ್ಲಿರುವ) ಜನತಾ ಪಕ್ಷದ ಕಚೇರಿಯಿದ್ದ ಕಟ್ಟಡದ ಮೇಲೆ ಸ್ವಾಮಿತ್ವ ಸಾಧಿಸುವ ಒಳ ಪ್ರಯತ್ನ ಉಭಯ ಬಣದಿಂದ ನಡೆದಿತ್ತು. ಯಾವ ಕ್ಷಣದಲ್ಲೂ ಹೆಗಡೆ ಬಣ ಅದನ್ನು ಕಬ್ಜಾಕ್ಕೆ ತೆಗೆದುಕೊಳ್ಳುವ ಸುಳಿವು ಗೌಡರಿಗೆ ಸಿಕ್ಕಿತ್ತು. ಅದನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಕಾರ್ಯತಂತ್ರವನ್ನು ಗೌಡರ ಬಣ ಹೆಣೆಯಿತು. “ಯಾರು ಬರುತ್ತಾರೋ ನೋಡೋಣ” ಎಂದು ಆ ಕಟ್ಟಡದ ಮುಂದಿನ ಅಂಗಳದಲ್ಲಿ ಕಬ್ಬಿಣದ ಕುರ್ಚಿ ಹಾಕಿಕೊಂಡು ಕಾವಲು ಕುಳಿತವರು ದತ್ತ ಮತ್ತು ಉಗ್ರಪ್ಪ. ಪೊಲೀಸರಾಗಲೀ ಹೆಗಡೆ ಬಣದ ಕಾರ್ಯಕರ್ತರಾಗಲೀ ಏನನ್ನೂ ಮಾಡುವುದು ಸಾಧ್ಯವಾಗದಂತೆ ಈ ಇಬ್ಬರೂ ತರುಣ ಉತ್ಸಾಹಿಗಳು ನೋಡಿಕೊಂಡರಷ್ಟೇ ಅಲ್ಲ ದೇವೇಗೌಡರಿಂದ ಮೆಚ್ಚುಗೆಯ ಶಹಬ್ಬಾಸ್‍ಗಿರಿಯನ್ನೂ ಪಡೆದರು.
ಕಾಲ ಉರುಳಿತು. ಗೌಡರು ಪ್ರಧಾನಿಯೂ ಆದರು. ವಾಲ್ಮೀಕಿ ಸಮುದಾಯದೊಳಗೆ ನಾಯಕರಾಗಿ ಬೆಳೆಯುತ್ತಿದ್ದ ಉಗ್ರಪ್ಪನವರಿಗೆ ಜನತಾ ಪಕ್ಷ, ಜನತಾ ದಳ, ಜೆಡಿಎಸ್ ಎಂಬಿತ್ಯಾದಿ ಜನತಾ ಪರಿವರದ ಸಹವಾಸ ಸಾಕೆನಿಸಿತ್ತು. ಅವರನ್ನು ಕಾಂಗ್ರೆಸ್ ಪಕ್ಷ ಕೈ ಬೀಸಿ ಕರೆಯಿತು. ವಿಧಾನ ಪರಿಷತ್ ಸದಸ್ಯನನ್ನಾಗಿಸಿತು. ಅದೇ ಪರಿಷತ್‍ನಲ್ಲಿ ಕೆಲವು ಕಾಲದ ಮಟ್ಟಿಗಾದರೂ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿತು. ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಾಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಉಗ್ರಪ್ಪ ವಿಜೇತರಾಗಿ ಸಂಸತ್‍ನೊಳಗೆ ಪ್ರವೇಶವನ್ನೂ ಪಡೆದರು. ಪಕ್ಷದೊಳಗೆ ಬಣ ರಾಜಕೀಯ ಪರಾಕಾಷ್ಟೆ ತಲುಪಿದ ಹಂತದಲ್ಲಿ ಉಗ್ರಪ್ಪ ಕೂಡಾ ಬಣ ರಾಜಕೀಯದ ಒಳಸುಳಿಗೆ ಸಿಕ್ಕರು. ಕಾಂಗ್ರೆಸ್‍ನೊಳಗೂ ಅಹಿಂದದ ನಾಯಕರಾಗಿರುವ ಸಿದ್ದರಾಮಯ್ಯ ಪಾಳಯದಲ್ಲಿ ಮುಖ್ಯ ವಕ್ತಾರರಾಗಿರುವ ಉಗ್ರಪ್ಪ ಬರಲಿರುವ ಚುನಾವಣೆಯಲ್ಲಿ ಒಂದು ಕೈ ನೋಡಲು ಸಿದ್ಧರಾಗುತ್ತಿದ್ದಾರೆ. ಕಣಕ್ಕಿಳಿಯುವುದಕ್ಕೆ ಸುರಕ್ಷಿತ ಎಸ್‍ಟಿ ಮೀಸಲು ಕ್ಷೇತ್ರದ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ | ಮೊಗಸಾಲೆ ಅಂಕಣ | ವಿಶ್ವನಾಥ್ ಹೇಳುವ ಕಾಗಕ್ಕ ಗುಬ್ಬಕ್ಕ ಕಥೆ
ದತ್ತ ಅವರೂ ಬಣ ರಾಜಕೀಯದ ಬಲಿಪಶುವಾದುದು ಹೌದು. ಆದರೆ ದತ್ತ ನಡೆಯುವ ರೀತಿಗೂ ಉಗ್ರಪ್ಪ ಹೆಜ್ಜೆ ಹಾಕುವ ರೀತಿಗೂ ಬಹಳ ಅಂತರವಿದೆ. ಉಗ್ರಪ್ಪನವರಂತೆ ಅವರಿಗೆ ರಾಜಕೀಯವಾಗಿ ಅನುಕೂಲಕರವಾದ “ಅವಸರ”ದ ತೀರ್ಮಾನಕ್ಕೆ ದತ್ತ ಬರಲಿಲ್ಲ. ದೇವೇಗೌಡರನ್ನು ಅಥವಾ ಜನತಾ ಪರಿವಾರವನ್ನು ದಶಕಗಳ ಕಾಲ ತೊರೆಯದೆ ಉಳಿದರು. “ತೊರೆದು ಜೀವಿಸಬಹುದೆ ಹರಿ ನಿನ್ನ ಪಾದಗಳಾ” ಎಂಬಂತೆ ದೇವೇಗೌಡರ ಪರಮ ಶಿಷ್ಯರಾಗಿದ್ದ ದತ್ತ, ಜೆಡಿಎಸ್‍ಗೆ ನೀಡಿದ ಕೊಡುಗೆ ಸಣ್ಣದೂ ಅಲ್ಲ, ಅಲಕ್ಷಿಸುವಂಥದೂ ಅಲ್ಲ. ಸ್ವಾಮಿನಿಷ್ಟರನ್ನೆಲ್ಲ ಕೈ ಹಿಡಿದು ನಡೆಸಿ ಪೋಷಿಸಿದ ದೇವೇಗೌಡರಿಗೆ ದತ್ತರನ್ನು ಕಾಪಾಡಿಕೊಳ್ಳುವುದು ಮಾತ್ರ ಕಷ್ಟವಾಗಿದ್ದು ಜೆಡಿಎಸ್‍ನ ಆಂತರ್ಯದಲ್ಲಿ ನಡೆದಿರುವ ವಿರೋಧಾಭಾಸಗಳಿಗೆ ಕನ್ನಡಿ ಹಿಡಿಯುವ ಬೆಳವಣಿಗೆ.
ಉಗ್ರಪ್ಪನವರಂತೆ ದತ್ತ ಕೂಡಾ ವಿಧಾನ ಪರಿಷತ್‍ನಲ್ಲಿ ಜೆಡಿಎಸ್ ಸದಸ್ಯರಾದರು. ಆಡಳಿತ ಪಕ್ಷದ ಸಾಲಿನಲ್ಲಿ ಒಬ್ಬರು, ವಿರೋಧ ಪಕ್ಷದ ಸಾಲಿನಲ್ಲಿ ಮತ್ತೊಬ್ಬರು. 2013ರಲ್ಲಿ ವಿಧಾನ ಸಭೆ ಚುನಾವಣೆ. ಕಡೂರು ಕ್ಷೇತ್ರದಲ್ಲಿ ದತ್ತ ಕಣಕ್ಕೆ ಇಳಿದರು. ಮಾರುತಿ ಓಮ್ನಿ ವ್ಯಾನಿನಲ್ಲಿ ಅವರ ಚುನಾವಣಾ ಏಕವ್ಯಕ್ತಿ ಪ್ರಚಾರ-ಪ್ರವಾಸ. ಊರಿಂದೂರಿಗೆ ಸುತ್ತಾಟ, ಜನರ ನಡುವೆ ದತ್ತ ಒಂದಾದರು. ಸರಳ ಸಜ್ಜನಿಕೆಯೇ ಅವರಿಗೆ ಮತ-ವರ ಒಲಿಯುವಂತೆ ಮಾಡಿತು. ದತ್ತ ಹುಟ್ಟಿರುವ ಬ್ರಾಹ್ಮಣ ಸಮುದಾಯದ ಮತದಾರರು ಕಡೂರು ಮತ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ. ಜಾತಿ ರಾಜಕೀಯದ್ದೇ ಮೇಲುಗೈಯಾಗಿರುವ ಈ ದಿನಮಾನಗಳಲ್ಲಿ ಜಾತಿ ಜನರ ಬೆಂಬಲದಿಂದ ಗೆಲ್ಲಲಾಗದ ದತ್ತರನ್ನು ಕ್ಷೇತ್ರದ ಎಲ್ಲ ಜಾತಿ ವರ್ಗಕ್ಕೆ ಸೇರಿದ ಮತದಾರರು ಕೈಹಿಡಿದರು. ಜನರಿಂದ ನೇರವಾಗಿ ಚುನಾಯಿತರಾದ ಶಾಸಕರೆನಿಸಿದರು.
ಆ ಚುನಾವಣೆಯಲ್ಲಿ ಜೆಡಿಎಸ್‍ನ ವರಿಷ್ಟ ದೇವೇಗೌಡರು, ಪಕ್ಷ ಬಹುಮತ ಪಡೆದರೆ ಮುಖ್ಯಮಂತ್ರಿಯಾಗಲಿದ್ದ ಎಚ್.ಡಿ. ಕುಮಾರಸ್ವಾಮಿಯವರು “ಸ್ಟಾರ್ ಕ್ಯಾಂಪೈನರ್ಸ್”. ಈ ಇಬ್ಬರಲ್ಲಿ ಒಬ್ಬರೂ ಕಡೂರು ಕ್ಷೇತ್ರದಲ್ಲಿ ಪ್ರಚಾರ ಮಾಡಲಿಲ್ಲ. ಅದಕ್ಕೆ ಕಾರಣ ಸ್ವತಃ ದತ್ತ ಅವರೇ. ದೊಡ್ಡ ನಾಯಕರು ಬಂದರೆ ದೊಡ್ಡ ಸಭೆ ನಡೆಯಬೇಕು; ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸಬೇಕು; ದೊಡ್ಡ ವೇದಿಕೆಯನ್ನು ರಚಿಸಬೇಕು; ದೊಡ್ಡದಾದ ರೀತಿಯಲ್ಲಿ ರ್ಯಾಲಿ ಪೂರ್ವ ಪ್ರಚಾರ ನಡೆಸಬೇಕು; ಖರ್ಚು ಬಹಳವಾಗುವ ತಲೆನೋವು ಬೇಡವೇ ಬೇಡವೆಂದು ತೀರ್ಮಾನಿಸಿದ ದತ್ತ, ಗೌಡರನ್ನೂ ಕುಮಾರಸ್ವಾಮಿಯವರನ್ನೂ ಕಡೂರು ಕ್ಷೇತ್ರಕ್ಕೆ ಬರಬೇಡಿ ಎಂದು ಮನವಿ ಮಾಡಿಕೊಂಡರು. ಅವರ ಕೋರಿಕೆಯಂತೆ ಅವರಿಬ್ಬರೂ ಕ್ಷೇತ್ರದಲ್ಲಿ ಕಾಲಿಡಲಿಲ್ಲ. ಒಕ್ಕಲಿಗ ಮತದಾರರು ಬಹಳ ದೊಡ್ಡ ಪ್ರಮಾಣದಲ್ಲಿರುವ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಡೂರೂ ಒಂದು. ತಮ್ಮ ನಾಯಕರು ಬರಲಿಲ್ಲವೆಂದು ಅವರು ಮುನಿಸಿಕೊಂಡರೆ ದತ್ತ ಸೋಲು ಖಚಿತವೆಂದು ದತ್ತ ವಿರೋಧಿಗಳು ಮನಸ್ಸಿನಲ್ಲೇ ಮಂಡಿಗೆ ತಿಂದಿದ್ದರು. ಆದರೆ ದತ್ತ ಗೆದ್ದು ಬೀಗಿದರು.
ಇದನ್ನೂ ಓದಿ | ಮೊಗಸಾಲೆ ಅಂಕಣ | ಆಚಾರವಿಲ್ಲದ ನಾಲಗೆಗೆ ಎಲುಬೂ ಇಲ್ಲ
ಐದು ವರ್ಷದ ಬಳಿಕ 2018ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ದತ್ತ ಕಣಕ್ಕೆ ಇಳಿದರು. ಅವರ ವಿರುದ್ಧ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿದ್ದರು. ಆದರೆ ಅವರಿಬ್ಬರಿಗಿಂತಲೂ ಜೆಡಿಎಸ್‍ನ ಒಂದು ಗುಂಪು ದತ್ತ ಸೋಲಿಸುವ ಸಂಚು ರೂಪಿಸಿ ಯಶಸ್ವಿಯಾಯಿತು. ಹಾಗೆ ಸಂಚು ರೂಪಿಸಿದವರಿಗೆ ಪಕ್ಷದಲ್ಲಿ ದೊಡ್ಡ ಗೌರವವೂ ಸಂದಾಯವಾಯಿತು. ಇದು ದತ್ತರ ಹೃದಯ ಒಡೆದ ಬೆಳವಣಿಗೆ. ಚುನಾವಣಾ ರಾಜಕೀಯದಲ್ಲಿ ಸೋಲು ಅಥವಾ ಗೆಲುವು ದೊಡ್ಡದಲ್ಲ, ಸೋಲಿನ ಹಿಂದಿದ್ದ ಆತ್ಮವಂಚಕ ಪ್ರವೃತ್ತಿ ದತ್ತರ ಮನ ಕಲಕಿದ ಬೆಳವಣಿಗೆ. ಆ ದಿನದಿಂದ ಗೊತ್ತಾಗದ ರೀತಿಯಲ್ಲಿ ಮರೆಗೆ ಸರಿಯುವ ಯತ್ನ ಮಾಡಿದವರು ದತ್ತ. ಜೆಡಿಎಸ್‍ನಲ್ಲಿ ಅವರು ಈಗ ಅನುಭವಿಸುತ್ತಿರುವುದು ಉಸಿರುಗಟ್ಟಿಸುವ ವಾತಾವರಣವನ್ನು. ಅವರಿಗೆ ಅಲ್ಲಿಂದ ಹೊರಬೀಳುವುದು ಅನಿವಾರ್ಯವಾಗಿದೆ. ಯಾರನ್ನೂ ದೂರದೆ ದೂಷಿಸದೆ ಜಾತ್ಯತೀತ ಜನತಾ ದಳಕ್ಕೆ ವಿದಾಯ ಹೇಳಿ ಕಾಂಗ್ರೆಸ್‍ನಲ್ಲಿ ವಿಶ್ವಾಸವಿಟ್ಟಿರುವ ಅವರು ಈಗಾಗಲೇ ಒಂದು ಹೆಜ್ಜೆಯನ್ನು ಹೊರಕ್ಕೆ ಇಟ್ಟಿದ್ದಾರೆ. ಉಗ್ರಪ್ಪ, ದತ್ತ ಇಬ್ಬರೂ ತುರ್ತು ಪರಿಸ್ಥಿತಿ ಸಮಯದಲ್ಲಿ ಅಂದಿನ ಕಾಂಗ್ರೆಸ್ ವಿರುದ್ಧ ದಣಿವರಿಯದೆ ಹೋರಾಟ ಮಾಡಿದವರು ಎನ್ನುವುದನ್ನು “ಮರೆತೇನೆಂದರೂ ಮರೆಯಲಿ ಹ್ಯಾಂಗಾ…”
ಹೊರ ಹೋಗುವವರು ಹೋಗಲಿ ಎನ್ನುವುದು ಪ್ರಸ್ತುತದ ಜೆಡಿಎಸ್‍ನ ಘೋಷಿತ ನೀತಿ. ಜಾಗ ತೆರವಾದಂತೆಲ್ಲ ಅದನ್ನು ಭರ್ತಿ ಮಾಡಲು ಜನ ಇದ್ದಾರೆಂಬ ಅದರ ಆಶಯಕ್ಕೆ ದತ್ತ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ಕೊಡುವ ದಾರಿಯಲ್ಲಿದ್ದಾರೆ. ಅವರು ಭವಿಷ್ಯ ಅರಸಿರುವ ಕಾಂಗ್ರೆಸ್‍ನಲ್ಲಿ ಎಲ್ಲವೂ ಚೆನ್ನಾಗಿದೆ ಎಂಬ ಭ್ರಮೆ ಅವರಲ್ಲೂ ಇದೆ. ದೂರದ ಬೆಟ್ಟ ನುಣ್ಣಗೆ ಎಂಬಂತೆ. ಬಹುತೇಕ ರಾಜಕಾರಣಿಗಳು ಆಡುವ “ಇದೇ ನನ್ನ ಕೊನೆ ಚುನಾವಣೆ” ಎಂಬ ಮಾತು ದತ್ತರದ್ದೂ ಆಗಿದೆ. ತಮ್ಮ ವ್ಯಕ್ತಿಗತ ರಾಜಕೀಯ ಹಿತಕ್ಕಿಂತ ತಮ್ಮ ಜೊತೆ ನಿಂತಿರುವ ಕಾರ್ಯಕರ್ತರ ರಾಜಕೀಯ ಹಿತ ಕಾಯುವ ಜವಾಬ್ದಾರಿ ತಮ್ಮದಾಗಿದೆ ಎಂಬ ಮಾತನ್ನೂ ಅವರು ಆಡಿದ್ದಾರೆ. ಸಿದ್ದರಾಮಯ್ಯ ವರ್ಷಗಳು ಹಿಂದೆಯೇ ನೀಡಿದ್ದ ಆಹ್ವಾನ ಒಪ್ಪಿ ಕಾಂಗ್ರೆಸ್‍ಗೆ ದತ್ತ ಸೇರಿದ್ದರೆ ಆ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿರುತ್ತಿದ್ದರು. ತಡವಾಗಿಯಾದರೂ ಸಿದ್ದರಾಮಯ್ಯನವರನ್ನು ದತ್ತ ಸೇರಿಕೊಳ್ಳುತ್ತಾರೆ. ಇದೇನೋ ಸರಿ. ವಲಸೆ ಕಾಂಗ್ರೆಸ್ಸಿಗರ ವಿಚಾರದಲ್ಲಿ ವಿಷ ಕಾರುತ್ತಿರುವ ಡಿ.ಕೆ.ಶಿವಕುಮಾರ್ ಹಾಗೂ ಅವರ ನೇತೃತ್ವದ ಬಣದಿಂದ ದತ್ತ ಪ್ರವೇಶಕ್ಕೆ ಯಾವ ಬಗೆಯ ಸ್ವಾಗತ ಕಾದಿದೆ ಎನ್ನುವುದು ಕುತೂಹಲ ಕೆರಳಿಸಿರುವ ರಾಜಕೀಯ ಬೆಳವಣಿಗೆ.
ಇದನ್ನೂ ಓದಿ | ಮೊಗಸಾಲೆ ಅಂಕಣ | ಪದಾಧಿಕಾರಿಗಳಿಲ್ಲದ ಪದವಿಯಲ್ಲಿ ಖರ್ಗೆ ಏಕಾಂಗಿ