“ನಮ್ಮದೊಂದು ಪುಟ್ಟ ಸಂಸಾರ, ಇರೋಕೊಂದು ಗೂಡು, ಮನೇಲಿದ್ದು ಅಡುಗೆ ಮಾಡೋಕೆ ನಾನು, ಹೊರಗೆ ಹೋಗಿ ದುಡಿಯೋಕೆ ನೀನು, ನಮಗೊಂದು ಮುದ್ದಾದ ಮಗು, ಇಷ್ಟೇ ನಮ್ಮ ಪ್ರಪಂಚ. ಬೇರೆ ಏನೂ ಬೇಡ ಈ ಜೀವಕ್ಕೆ” ಅದೆಷ್ಟು ಸಿನಿಮಾಗಳಲ್ಲಿ ನಾಯಕಿ ಇಂಥಾ ಸಾಲು ಸಾಲು ಡೈಲಾಗ್ ಹೇಳಿರಲ್ಲ? ಇದನ್ನೇ ಸ್ಫೂರ್ತಿಯಾಗಿ ಪಡೆದ ಅದೆಷ್ಟೋ ಹುಡುಗಿಯರು ನಿಜಕ್ಕೂ ಇಂಥದೊಂದು ಕಮಿಟ್ಮೆಂಟ್ ಕೊಟ್ಟುಬಿಡುತ್ತಾರೆ. ಆದರೆ ನಾನು ಕೊಟ್ಟ ಈ ಕಮಿಟ್ಮೆಂಟೇ ತನ್ನ ಪಾಲಿಗೆ ಕಾರಾಗೃಹವಾಗುತ್ತೆ ಅನ್ನೋ ಸಣ್ಣ ಕಲ್ಪನೆಯೂ ಆ ಎಳೆ ಮನಸ್ಸಿಗಿರೋದಿಲ್ಲ.
ಮನೇಲಿರೋದು ಅನ್ನೋದು ಕೇಳೋಕಷ್ಟೇ ಚೆಂದ. ನಿಜಕ್ಕೂ ಮನೆಲಿರೋದು ಎಂಥಾ ಕಷ್ಟದ ಕೆಲಸ ಅಂತ ಗೊತ್ತಾಗಬೇಕಾದರೆ “ನೀನದೆಷ್ಟು ಆರಾಮವಾಗಿದ್ದೀಯ ಅಲ್ವಾ ಅಮ್ಮಾ” ಅಂತ ಮನೆಲಿರೋ ಅಮ್ಮನನ್ನೇ ಒಮ್ಮೆ ಕೇಳಿ ನೋಡಿ. ಆಫೀಸುಗಳಲ್ಲಿ ಅತ್ಯಂತ ಬ್ಯುಸಿಯಾಗಿರುವ ವ್ಯಕ್ತಿ ಅಂದ್ರೆ ಅಡ್ಮಿನ್. ಹಾಗೇ ಮನೆಯಲ್ಲಿ ಅಮ್ಮನೂ ಕೂಡ. ಅಲ್ಲೆಲ್ಲೋ ಕರೆಂಟ್ ಹೋಯ್ತು, ವಾಶ್ ರೂಮಿನ ಕೊಳಾಯಿ ಸೋರ್ತಿದೆ, ಕಾರಿಡಾರ್‌ನಲ್ಲಿ ಕಸ ಬಿದ್ದಿದೆ, ಆಫೀಸಿಗೆ ಹೋಗುವವರಿಗೆ ಸಮಯಕ್ಕೆ ಸರಿಯಾಗಿ ತಿಂಡಿ ಕೊಡಬೇಕು, ಮಗುವನ್ನು ಶಾಲೆಗೆ ಕಳಿಸಬೇಕು, ಮನೆಕೆಲಸ ರಾಶಿ ಬಿದ್ದಿದೆ. ಹೀಗೆ ಸಾವಿರ ಕೆಲಸಗಳಿರ್ತವೆ ಅವರ ತಲೆಯಲ್ಲಿ. ಆದರೆ ನೋಡೋರ ಕಣ್ಣಿಗೆ ಮಾತ್ರ ಅವರು ಆರಾಮವಾಗಿರುತ್ತಾರೆ. ಅಡ್ಮಿನ್‍ನ ಕೆಲಸವೂ ಅಂಥದ್ದೇ. ವ್ಯತ್ಯಾಸ ಏನಂದ್ರೆ ಅವರು ಸಂಬಳಕ್ಕೆ ಕೆಲಸ ಮಾಡ್ತಾರೆ. ಅಮ್ಮ ಉಚಿತವಾಗಿ.
ಸಂಬಳ ತಂದರೆ ಮಾತ್ರ ದುಡಿಮೆ ಅನ್ನೋ ತಪ್ಪು ಕಲ್ಪನೆ ಅದೆಷ್ಟೋ ಜೀವಗಳ ಖುಷಿಯನ್ನೇ ತಿಂದುಹಾಕಿದೆ. ದಿನಕ್ಕೆ ಎಂಟರಿಂದ ಹತ್ತು ಗಂಟೆ ದುಡಿಯುವ ನಾವು ವಾರಕ್ಕೊಂದಾದರೂ ರಜೆ ಪಡೆದು ವಿಶ್ರಾಂತಿ ಪಡೆಯುತ್ತೇವೆ. ತಿಂಗಳಾಂತ್ಯವಾದರೆ ಸಂಬಳವಂತೂ ಕೈ ಸೇರುತ್ತದೆ. ಆದರೆ ತಿಂಗಳಿನ ಯಾವ ದಿನವೂ ರಜೆ ಇಲ್ಲದೇ, ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಮನೆಯ ಎಲ್ಲಾ ಕೆಲಸಗಳನ್ನೂ ಮಾಡುವ ಅಮ್ಮ, ಹೆಂಡತಿ, ತಂಗಿ ಇವರ ಬಗ್ಗೆ ಒಮ್ಮೆಯಾದರೂ ಚಿಂತಿಸಲೇಬೇಕಲ್ಲವೇ. ಇಲ್ಲಿ ಖರ್ಚು, ಉಳಿತಾಯದ ವಿಷಯ ಬೇರೆ. ಆದರೆ “ನಾನು ದುಡೀತಿದಿನಿ, ನಾನು ಖರ್ಚು ಮಾಡ್ತಿರೋದು ನಾನೇ ದುಡಿದ ಹಣ” ಅನ್ನೋ ಒಂದು ಸಣ್ಣ ಭಾವನೆ ಇದೆ ನೋಡಿ, ಅದನ್ನೇ ಆರ್ಥಿಕ ಸ್ವಾತಂತ್ರ್ಯ ಅನ್ನೋದು. ಬಹುತೇಕ ಮನೆಗಳಲ್ಲಿ ಇಂಥದೊಂದು ವಿಷಯದ ಬಗ್ಗೆ ಯೋಚನೆಯನ್ನೂ ಮಾಡಿರಲ್ಲ.
ನಮ್ಮಪ್ಪ ಅಮ್ಮನ ಕಾಲಕ್ಕೆ ಅದರ ಅವಶ್ಯಕತೆಯೂ ಕಡಿಮೆಯಿತ್ತೇನೋ. ಆದರೆ ಈಗ? ಕಾಲಚಕ್ರ ತಿರುಗಿ ನಿಂತಿದೆ. ಪ್ರತೀ ಜೀವವೂ ಅದರದ್ದೇ ಆದ ಸ್ವಾತಂತ್ರ್ಯ ಬೇಡುತ್ತದೆ. ವಯಸ್ಸಾದ ತಂದೆ ತಾಯಿಗೆ ತಮ್ಮ ಮಗನಿಗೋ ಮಗಳಿಗೋ ಒಂದು ಬರ್ತಡೇ ಗಿಫ್ಟ್ ಕೊಡಬೇಕು ಅನ್ನೋ ಆಸೆಯಿರಬಹುದು, ಯಾವತ್ತೂ ನಮ್ಮಿಂದ ಒಂದು ರೂಪಾಯಿಯನ್ನೂ ಕೇಳದ ತಾಯಿಗೆ ಪಕ್ಕದ ಮನೆಯವರ ವೆಡ್ಡಿಂಗ್ ಆ್ಯನಿವರ್ಸರಿಗೆ ಹೋಗಲೇಬೇಕೆನ್ನೋ ಆಸೆಯಿರಬಹುದು. ನಮ್ಮಿಂದ ಬಿಡಿಗಾಸನ್ನೂ ಕೇಳದೆ ನಮ್ಮದೇ ಹುಟ್ಟುಹಬ್ಬವನ್ನ ಆಚರಣೆ ಮಾಡೋದು ಹೆಂಡತಿಯ ಅತಿದೊಡ್ಡ ಕನಸಿರಬಹುದು, ಆಗ ಅವರ ಮನಸ್ಸು ಏನನ್ನೋ ಬಯಸುತ್ತೆ ನೋಡಿ, ಅದನ್ನೇ ಆರ್ಥಿಕ ಸ್ವಾತಂತ್ರ್ಯ ಅನ್ನೋದು.
ಇದನ್ನೂ ಓದಿ: Vistara Money+| ವಿಸ್ತಾರ ಮೀಡಿಯಾದಿಂದ ಹಣಕಾಸು ಕುರಿತ ಯೂಟ್ಯೂಬ್ ಚಾನೆಲ್ ಲೋಕಾರ್ಪಣೆ
ಇತ್ತೀಚೆಗೆ ಭಾರತದಂತಹ ರಾಷ್ಟ್ರಗಳಲ್ಲಿ ಇದರ ಬಗ್ಗೆ ಯೋಚಿಸಲಾರಂಭಿಸಿದ್ದಾರೆ. ಮೊದಮೊದಲು ಮಗುವಿಗೆ ಪಾಕೆಟ್ ಮನಿ ಕೊಡೋದು ಅಂತ ಶುರುವಾಯ್ತು, ಅದೇ ಆರ್ಥಿಕ ಸ್ವಾತಂತ್ರ್ಯದ ಸಣ್ಣ ಆರಂಭ. ಅಲ್ಲಿಂದ ಆರಂಭವಾಗಿ ಈಗಂತೂ ನಿವೃತ್ತಿಯಾಗುವ ಪ್ರತಿಯೊಬ್ಬರೂ ತಮ್ಮ ನಿವೃತ್ತಿ ನಂತರ ತಿಂಗಳ ಖರ್ಚಿಗೆ ಎಲ್ಲಿಂದ ಹಣ ಬರತ್ತೆ ಅಂತ ಪ್ಲಾನ್ ಮಾಡಲಾರಂಭಿಸಿದ್ದಾರೆ. ಅತ್ಯುತ್ತಮ ಬೆಳವಣಿಗೆ ಅಂದ್ರೆ ಮೂವತ್ತು ನಲವತ್ತು ವರ್ಷದವರೇ ತಮ್ಮ ನಿವೃತ್ತಿಯ ನಂತರವೂ ಸಂಬಳದ ಹಾಗೆ ಪ್ರತೀ ತಿಂಗಳು ಹಣ ಬರುವಂತೆ ಇನ್ವೆಸ್ಟ್ಮೆಂಟ್ ಪ್ಲಾನ್ ಖರೀದಿಸುತ್ತಿರೋದು. ಇದು ಹಣಕಾಸಿನ ಸ್ವಾತಂತ್ರ್ಯದ ಮತ್ತೊಂದು ರೂಪ.
ಇದೆಲ್ಲದರ ಹಿಂದೆ ಇರೋದು ಆರ್ಥಿಕ ಸ್ವಾತಂತ್ರ್ಯದ ಹಂಬಲವೇ. ಮಗುವೊಂದು ತನ್ನ ಶಾಲೆಯ ಬಡ ವಿದ್ಯಾರ್ಥಿಗೆ ಪೆನ್ಸಿಲ್ ಗಿಫ್ಟ್ ಮಾಡಬೇಕು ಎನಿಸಿದಾಗ ತನ್ನದೇ ಜೇಬಿನ ಹಣ ಕೊಡಲು ಬಯಸುತ್ತದೆ. ಹೀಗಾಗಿ ಮಕ್ಕಳಿಗೆ ಒಂದಷ್ಟು ಪಾಕೆಟ್ ಮನಿ ಕೊಡುವ ಪರಿಪಾಠವಿದೆ. ಇನ್ನು ವಯಸ್ಸಾದವರಿಗೆ ಪೆನ್ಷನ್ ಪ್ಲಾನ್ ಇದೆ. ಇದ್ಯಾವುದೂ ಇಲ್ಲದೇ ಇರುವ ವರ್ಗವೆಂದರೆ ಮನೆಯೊಳಗೇ ದುಡಿಯುವ ಹೆಣ್ಣುಮಕ್ಕಳದು. ಅವರು ದಿನದ ಬಹುತೇಕ ಸಮಯ ದುಡಿಯುತ್ತಾರೆ, ಆಫೀಸ್ ಅಡ್ಮಿನ್‌ಗಳ ರೀತಿ ಮನೆಯ ಅಡ್ಮಿನ್ ಅವರೇ ಆಗಿರುತ್ತಾರೆ. ಅಡುಗೆಯಿಂದ ಹಿಡಿದು, ಮನೆಗೆಲಸ, ಮನೆಯವರ ಕೆಲಸಗಳನ್ನೆಲ್ಲಾ ಮಾಡಿದರೂ ಅವರಿಗೆ ಹೇಳಿಕೊಳ್ಳುವ ಡೆಸಿಗ್ನೇಷನ್ ಮಾತ್ರ ಇರುವುದಿಲ್ಲ. ಹಾಗಾಗಿ ಅವರಿಗೆ ಸಂಬಳವೂ ಇಲ್ಲ ಖರ್ಚು ಮಾಡುವ ಸ್ವಾತಂತ್ರ್ಯವೂ ಇಲ್ಲ.
ಇದೊಂದು ಕೊರಗು ಅದೆಷ್ಟೋ ಹೆಣ್ಣುಮಕ್ಕಳನ್ನು ಕಾಡುತ್ತಲೇ ಇರುತ್ತದಾದರೂ ಅದರಲ್ಲಿ ಬಹುತೇಕರು ಅದನ್ನು ಹೇಳಿಕೊಳ್ಳುವುದಿಲ್ಲ. ಸುಮ್ಮನೇ ಮನೆಯಲ್ಲಿದ್ದು ಇಷ್ಟೆಲ್ಲಾ ಕೆಲಸ ಮಾಡಿಯೂ ಮೂಲೆಗುಂಪಾಗುವುದು ಸಿನಿಮಾದಲ್ಲಿ ಹೇಳಿಸುವಷ್ಟು ಸುಲಭವೂ ಅಲ್ಲ. ಹೀಗಾಗಿಯೇ ಹೇಳಿದ್ದು ನಮ್ಮ ಸ್ವಾತಂತ್ರ್ಯ ಮನೆಯ ಹಣ್ಣುಮಕ್ಕಳನ್ನು ಅಣಕಿಸದಿರಲಿ ಅಂತ. ಅವರು ಹೊರಗೆ ಹೋಗಿ ದುಡಿಯುತ್ತಾರಾದರೆ ಅವರೇ ಖರ್ಚು ಮಾಡಲಿಕ್ಕಾಗಿ ಒಂದಷ್ಟು ಹಣವಾದರೂ ಅವರ ಬಳಿಯಿರಲಿ. ಹೊರಹೋಗದೇ ಮನೆಯಲ್ಲೇ ದುಡಿಯುವ ಹೆಣ್ಣುಮಕ್ಕಳಾದರೆ ಅವರಿಗೂ ಒಂದಷ್ಟು ಹಣವನ್ನು ಪ್ರತೀ ತಿಂಗಳೂ ಕೊಟ್ಟು ನೋಡಿ. ಆ ಹಣ ಎಲ್ಲಿ, ಯಾವಾಗ, ಯಾತಕ್ಕಾಗಿ ಖರ್ಚಾಯ್ತು ಅಂತ ಅಪ್ಪಿತಪ್ಪಿಯೂ ಕೇಳಬೇಡಿ. ಅದು ಆ ಜೀವಕ್ಕೆ ನೀವು ಕೊಡೋ ಸ್ವಾತಂತ್ರ್ಯವಾಗಿರಲಿ. ಇದೊಂದು ಸಣ್ಣ ಬದಲಾವಣೆ ಆ ಜೀವಕ್ಕೆ ಅದೆಷ್ಟು ಖುಷಿ ನೀಡುತ್ತೆ ಅಂದ್ರೆ ಇಡೀ ಮನೆಯ ವಾತಾವರಣವನ್ನೇ ಅದು ಬದಲಿಸಿಬಿಡುತ್ತದೆ. ಅದು ಆರ್ಥಿಕ ಸ್ವಾತಂತ್ರ್ಯಕ್ಕಿರುವ ಶಕ್ತಿ.
ಇದನ್ನೂ ಓದಿ: ಮನಿ ಕಹಾನಿ ಅಂಕಣ | ನಮಗೆ ದುಡ್ಡು ಕೊಡೋ ಕಾನ್ಫಿಡೆನ್ಸೇ ಬೇರೆ!
ಹೆಂಡತಿ ಅಂದರೆ ಸಂಬಳವಿಲ್ಲದೇ ಬದುಕಿಡೀ ದುಡಿಯುವ ಕೆಲಸದವಳ ಡೆಸಿಗ್ನೇಷನ್ನು ಅನ್ನೋ ವ್ಯಂಗ್ಯ ಇನ್ನಾದರೂ ನಾಶವಾಗಲಿ. ಎಪ್ಪತ್ತೈದನೇ ಸ್ವಾತಂತ್ರ್ಯೋತ್ಸವದ ಹೊಸ್ತಿಲಿನಲ್ಲಿರುವ ನಾವು ಇದೊಂದು ಸಣ್ಣ ವಿಚಾರದ ಬಗ್ಗೆ ಯೋಚಿಸಿದರೆ ಮುಂದೊಂದು ದಿನ ಇದು ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಬಹುದು.
(ಲೇಖಕರು ಫಿನ್ ಫ್ಲಸ್.ಕಾಮ್ ಮುಖ್ಯಸ್ಥರು)