Site icon Vistara News

ಮನಿ ಕಹಾನಿ ಅಂಕಣ: ಗಣಿತ ಅರ್ಥ ಆಗದಿದ್ದರೂ ಅರ್ಥಶಾಸ್ತ್ರ ಗೊತ್ತಿದ್ದರೆ ಸಾಕು!

money kahani

ಇದು ದುಡ್ಡಿನ ದುನಿಯಾ! ಇಲ್ಲಿ ಎಲ್ಲ ಕಾಲಕ್ಕೂ, ಎಲ್ಲಾ ಜಾಗಕ್ಕೂ ಸಲ್ಲುವ ಏಕೈಕ ವಸ್ತು ಹಣ ಎಂಬಂತಾಗಿದೆ. ಹಣವಿಲ್ಲದ ಯಾವ ಸಾಧಕನನ್ನೂ ಜನ ಸಾಧಕ ಎನ್ನುವುದಿಲ್ಲ, ಆಫ್‌ಕೋರ್ಸ್ ಸಿದ್ದೇಶ್ವರ ಶ್ರೀಗಳಂಥ ಸಾವಿರಕ್ಕೊಬ್ಬರು ನಮ್ಮ ಇಂಥಾ ಥಿಯರಿಗಳನ್ನೆಲ್ಲಾ ಸುಳ್ಳು ಎಂದು ಸಾಬೀತು ಮಾಡಿದ್ದಾರೆ. ಆದರೆ ನಾನು ಹೇಳುತ್ತಿರುವುದು ಈ ಸಾವಿರಕ್ಕೊಬ್ಬರ ಬಗ್ಗೆಯಲ್ಲ ! ಸಾವಿರದಲ್ಲಿ ಇಂಥವರೊಬ್ಬರು ಬಿಟ್ಟು ಉಳಿದ ಒಂಬೈನೂರ ತೊಂಬತ್ತೊಂಬತ್ತು ಜನರಿಗೆ. ಅವರದು, ನನ್ನದು ಮತ್ತು ನಿಮ್ಮದು ಸಿದ್ದೇಶ್ವರ ಶ್ರೀಗಳಂಥಾ ಬದುಕಲ್ಲ, ನಾವು ಸಾಮಾನ್ಯರಲ್ಲಿ ಅತೀ ಸಾಮಾನ್ಯರು. ನೂರು ರೂಪಾಯಿಗಾಗಿ ಗಂಟೆಗಟ್ಟಲೆ ತಲೆಕೆಡಿಸಿಕೊಂಡು ಕೆಲಸ ಮಾಡುವ ನಾವುಗಳು ರಾಜ್ಯ ಸರ್ಕಾರವೇ ಕೊಟ್ಟ ಐದು ಕೋಟಿ ರೂಪಾಯಿಗಳು ನನಗವಶ್ಯಕತೆಯಿಲ್ಲ ಎಂದು ತಿರಸ್ಕರಿಸಿದ ಮಹಾನ್ ಸಂತರೊಂದಿಗೆ ಹೋಲಿಸಿಕೊಂಡು ನೋಡಬಾರದು. ಅವರಿಗೆ ಅರ್ಥಶಾಸ್ತ್ರವೇ ಬೇಕಿರಲಿಲ್ಲ. ಏಕೆಂದರೆ ಅವರಿಗೆ ಬದುಕು ಆ ಮಟ್ಟಕ್ಕೆ ಅರ್ಥವಾಗಿತ್ತು. ನಾವೂ ನೀವು ಹಾಗಲ್ಲ ನಮ್ಮದು ಸಾದಾ ಸೀದಾ ದುಡಿಮೆಗಾಗಿ ಬದುಕುವ ಬದುಕು. ನಾವು ದುಡಿಯಲೇ ಬೇಕು, ಗಳಿಸಲೇಬೇಕು.

ಎಷ್ಟೋ ಜನ ನನಗೆ ಶಾಲೆಯಲ್ಲಿ ಹೇಳುವ ಯಾವುದೂ ಅರ್ಥವಾಗಲ್ಲ ಅಂತ ಎಜುಕೇಷನ್‌ಗೆ ಬ್ರೇಕ್ ಹಾಕಿದವರನ್ನು ನೋಡಿದ್ದೇವೆ. ಅದರಲ್ಲೂ ಎಸ್.ಎಸ್.ಎಲ್.ಸಿ ಒಳಗೆ ಶಾಲೆ ಬಿಟ್ಟ ಮಕ್ಕಳನ್ನು ಕೇಳಿ ನೋಡಿ, ಅವರಿಗೆ ಪಾಠಗಳು ತುಂಬಾ ಭಾರ ಎನಿಸಿರುತ್ತವೆ. ಅದರಲ್ಲೂ ಗಣಿತ! ಮುಕ್ಕಾಲು ಭಾಗ ಮಕ್ಕಳಿಗೆ ಗಣಿತ ಅರ್ಥವಾಗಿರುವುದಿಲ್ಲ. ಆದರೆ ಗಣಿತಕ್ಕೇ ಹೆದರಿ ಶಾಲೆ ಬಿಟ್ಟ ಅದೆಷ್ಟೋ ಮಕ್ಕಳು ದಿನಸಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿ ನಾಲ್ಕಾರು ವರ್ಷ ದುಡಿದು ಇಂದು ಸ್ವಂತದ್ದೊಂದು ಸೂಪರ್ ಮಾರ್ಕೆಟ್ ತೆರೆದಿರುತ್ತಾರೆ. ಹೀಗೆ ಎಂಬತ್ತು ತೊಂಬತ್ತರ ದಶಕಗಳಲ್ಲಿ ಗಣಿತದ ಕಾರಣಕ್ಕೆ ಶಾಲೆ ಬಿಟ್ಟ ಅದೆಷ್ಟೋ ಜನ ಈಗ ಆರೂ ಸಬ್ಜೆಕ್ಸ್‌ಗಳನ್ನು ಅರೆದು ಕುಡಿದ ನೂರಾರು ಜನಕ್ಕೆ ನೌಕರಿ ಕೊಟ್ಟಿದ್ದಾರೆ. ಅವರು ಶಾಲೆ ಬಿಟ್ಟು ಯಾವುದೋ ಕೆಲಸಕ್ಕೆ ಸೇರಿ, ಅದೇ ಕೆಲಸವನ್ನು ತಪಸ್ಸಿನಂತೆ ಮಾಡಿರುತ್ತಾರೆ. ತಮ್ಮ ಮಾಲೀಕನಿಲ್ಲದ ಸಮಯದಲ್ಲೂ ತಾವೇ ಸ್ವಂತ ಆಸಕ್ತಿಯಿಂದ ಮಾಲೀಕನ ಕೆಲಸಗಳನ್ನೂ ಮಾಡಿ ಮಾಲೀಕನಿಂದ ಸೈ ಎನಿಸಿಕೊಂಡಿರುತ್ತಾರೆ. ಇವರ ಕೆಲಸ ನೋಡಿದ ಮಾಲೀಕ ಸ್ವಲ್ಪ ಸ್ವಲ್ಪವೇ ಜವಾಬ್ದಾರಿಗಳನ್ನು ಕೊಡುತ್ತಾ ಹೋದಂತೆ ಇವರು ಸಂಪೂರ್ಣ ಬ್ಯುಸಿನೆಸ್‌ನ ಆಳ ಅಗಲಗಳನ್ನು ಅಳೆದು ಬಿಸಾಕಿರುತ್ತಾರೆ. ಕೈಲೊಂದಷ್ಟು ಹಣವಾದಾಗ ತಾವೇ ಒಂದು ಪುಟ್ಟ ವ್ಯವಹಾರ ಆರಂಭಿಸಿ ಕಷ್ಟಪಟ್ಟು ಅದನ್ನು ಕಟ್ಟಿ ಬೆಳೆಸಿ ಇಂದು ಸಕ್ಸಸ್‌ಫುಲ್ ಬ್ಯುಸಿನೆಸ್‌ಮನ್ ಎನಿಸಿಕೊಂಡಿರುತ್ತಾರೆ.

ಮಗನಿಗೋ ಮಗಳಿಗೋ ಕಡಿಮೆ ಅಂಕ ಬಂದಾಗ ಅವರನ್ನು ದೇಶದ್ರೋಹಿಯಂತೆ ನೋಡುವ ಅದೆಷ್ಟೋ ತಂದೆತಾಯಿಗಳಿಗೆ ಮಗನ ವಯಸ್ಸಲ್ಲಿ ನಾನೇನು ಮಾಡುತ್ತಿದ್ದೆ ಎಂಬುದೇ ಮರೆತುಹೋಗಿರುತ್ತದೆ. ಕೇಳಿದರೆ ನಾನು ಮಾಡಲಾಗದ್ದನ್ನ ಅವನಿಂದ ಮಾಡಿಸುತ್ತೇನೆ ಎನ್ನುತ್ತಾರೆ. ಅದಕ್ಕೂ ಮುಂದೆ ಹೋಗಿ ನಮಗೆಲ್ಲಾ ಈ ರೀತಿ ಯಾರೂ ಸಪೋರ್ಟ್ ಮಾಡಲಿಲ್ಲ, ಈಗ ಇವರಿಗೆ ನಾನು ಸಂಪೂರ್ಣ ಸಪೋರ್ಟ್ ಮಾಡ್ತಿದ್ದೇನೆ ಎನ್ನುತ್ತಾರೆ. ತಾವು ಮಕ್ಕಳಿಗೆ ಪ್ರತಿನಿತ್ಯ ಕೊಡುತ್ತಿರುವ ಬೆಂಬಲ ಮಕ್ಕಳ ಪಾಲಿಗೆ ಟಾರ್ಚರ್ ಎಂಬಂತೆ ಗೋಚರವಾಗುತ್ತಿರುತ್ತದೆ. ಅದು ಇವರಿಗೆ ತಿಳಿದಿರುವುದೇ ಇಲ್ಲ. ಕೇವಲ ಸಬ್ಜೆಕ್ಟ್‌ಗಳನ್ನೇ ತಲೆಗೆ ತುಂಬಿಸುವ ಬದಲು ಮಗುವಿನ ಆಸಕ್ತಿ ಯಾವುದರ ಮೇಲಿದೆ ಎಂಬುದನ್ನು ತಿಳಿದುಕೊಂಡು ಆ ಕ್ಷೇತ್ರದಲ್ಲಿಯೇ ಮಗುವನ್ನು ಬೆಳೆಸುವುದು ಉತ್ತಮ. ಅವನಿಗೆ ಇಂಗ್ಲೀಷ್ ಬಾರದಿದ್ದರೂ ಒಬ್ಬ ಶಾಸಕನಾಗಿ ಮಂತ್ರಿಯಾಗಬಹುದು, ಲಾಂಗ್ವೇಜ್ ಸಬ್ಜೆಕ್ಟ್ ಪಾಸ್ ಮಾಡದ ಅದೆಷ್ಟೋ ಗಾಯಕರ ಹಾಡನ್ನು ದಿನವೂ ನಾವು ಕೇಳುತ್ತಲೇ ಇದ್ದೇವೆ, ವಿಜ್ಞಾನದ ಮೊದಲ ಅಕ್ಷರವನ್ನೂ ಬರೆಯಲಾದವರು ಸಕ್ಸಸ್‌ಫುಲ್ ಸಿನಿಮಾ ನಿರ್ದೇಶಕನಾಗಬಹುದು, ಯಾವುದೋ ವ್ಯವಹಾರಕ್ಕೆ, ಇನ್ಯಾವುದೋ ಸಾಧನೆಗೆ, ಮತ್ಯಾವುದೋ ಮೈಲಿಗಲ್ಲಿಗೆ ಕಾಲೇಜಿನ ಸರ್ಟಿಫಿಕೇಟ್ ಒಂದೇ ಮಾನದಂಡವಾಗಿರುವುದಿಲ್ಲ.

ಇದನ್ನೂ ಓದಿ: ಮನಿ ಕಹಾನಿ ಅಂಕಣ: ಬ್ಯುಸಿನೆಸ್ ಈಗ ವೃತ್ತಿಗೆ ಸೀಮಿತವಾಗಿಲ್ಲ, ಬದುಕಿಗೂ ಬಂದಾಗಿದೆ!

ನೀವು ಕೊಡಿಸುವ ಸರ್ಟಿಫಿಕೇಟು ಮಕ್ಕಳಿಗೆ ಉಪಯೋಗಕ್ಕೆ ಬರುವ ಅತೀ ದೊಡ್ಡ ಸ್ಥಳವೆಂದರೆ ಉದ್ಯೋಗ. ಈ ಉದ್ಯೋಗ ನಿಮ್ಮ ಮಗುವಿಗೆ ಸಿಗಬೇಕಾದರೆ ಅವನಿಗೆ ನೀವು ಶಾಲೆಯಿಂದ ಕೊಡಿಸಿದ ಸರ್ಟಿಫಿಕೇಟ್ ಕೊಡಲೇ ಬೇಕು. ಆದರೆ ಆ ಉದ್ಯೋಗ ಕೊಟ್ಟವನಿದ್ದಾನಲ್ಲ ಅವನಿಗೆ ಈ ಯಾವ ಮಾರ್ಕ್ಸ್ ಕಾರ್ಡೂ ಉಪಯೋಗಕ್ಕೆ ಬಂದಿರುವುದಿಲ್ಲ. ಹಾಗಂತ ಮಕ್ಕಳನ್ನು ಓದಿಸುವುದೇ ಬೇಡ ಎಂದು ನಾನು ಹೇಳುತ್ತಿಲ್ಲ. ಆದರೆ ಓದಿನ ಜೊತೆ ಜೊತೆಗೆ ಮಕ್ಕಳಿಗೆ ಬದುಕನ್ನೂ ಕಲಿಸಿಕೊಡಬೇಕು. ಕೊತ್ತಂಬರೀ ಸೊಪ್ಪು ಇವತ್ತಿನದೋ ನೆನ್ನೆಮೊನ್ನೆಯದ್ದೋ ಎಂದು ಕಂಡುಹಿಡಿಯಲು ಸಸ್ಯಶಾಸ್ತ್ರ ಓದಬೇಕಿಲ್ಲ, ಲೋಡುಗಟ್ಟಲೇ ಜೋಳ ಖರೀದಿಸಿ ಬಾಯಿ ಲೆಕ್ಕದಲ್ಲೇ ಲಕ್ಷಾಂತರ ಹಣ ಲೆಕ್ಕಹಾಕುವ ವ್ಯಾಪಾರಸ್ತನಿಗೆ ಗಣಿತದ ಯಾವ ಸೂತ್ರಗಳೂ ನೆನಪಿರಬೇಕಿಲ್ಲ. ಅಲ್ಲೆಲ್ಲಾ ಉಪಯೋಗಕ್ಕೆ ಬರುವುದು ಅರ್ಥಶಾಸ್ತ್ರ.

ಈ ಬದುಕಿಗೆ ಅಂಥಾ ಒಂದು ಅರ್ಥಶಾಸ್ತ್ರದ ಅಗತ್ಯವಿದೆ. ಎದುರು ನಿಂತ ವ್ಯಕ್ತಿ ತನ್ನಿಂದ ಏನು ಬಯಸುತ್ತಿದ್ದಾನೆ ಎಂಬುದನ್ನು ಛಕ್ಕನೆ ಹೇಳಿಬಿಡಬಲ್ಲ ಅದೆಷ್ಟೋ ಚಾಣಾಕ್ಷರಿದ್ದಾರೆ, ಎರಡೇ ನಿಮಿಷ ಮಾತನಾಡಿ ನಮ್ಮ ಗುಣಾವಗುಣಗಳನ್ನು ಅಳೆಯಬಲ್ಲ ಪ್ರಚಂಡರಿದ್ದಾರೆ. ಒಂದಕ್ಷರವನ್ನೂ ಓದದೇ ದೇಶದ ರಾಜಕಾರಣವನ್ನೇ ಬದಲಿಸಬಲ್ಲ ಘಟಾನುಘಟಿಗಳಿದ್ದಾರೆ. ಅವರೆಲ್ಲರೂ ಬದುಕಿನ ಆಲ್ಗರಿದಮ್ ಅರ್ಥಮಾಡಿಕೊಂಡಿರುತ್ತಾರೆ. ಇಂದಿಗೂ ಹಣ ಸಿಕ್ಕಾಗ ಇನ್ವೆಸ್ಟ್ ಮಾಡುವ ಬದಲು ಕಾರು, ಪೆಟ್ರೋಲು, ಪಾರ್ಟಿಗೆ ಸುರಿಯುವ ಅದೆಷ್ಟೋ ಬುದ್ಧಿವಂತರಿದ್ದಾರೆ. ಹತ್ತು ವರ್ಷದ ಹಿಂದೆ ಖರೀದಿಸಿದ ಸೈಟನ್ನು ಹತ್ತು ಪಟ್ಟು ಹೆಚ್ಚು ಬೆಲೆಗೆ ಮಾರುವ ಚಾಲಾಕಿಗಳಿದ್ದಾರೆ. ಇವರಿಬ್ಬರಲ್ಲಿ ಬದುಕಿನ ಅರ್ಥಶಾಸ್ತ್ರ ಯಾರಿಗೆ ಅರ್ಥವಾಗಿದೆ ಎಂಬುದನ್ನು ನೀವೇ ತೀರ್ಮಾನಿಸಿ. ಅದಕ್ಕೇ ಹೇಳಿದೆ ನಮಗೆ ಕೇವಲ ಗಣಿತ ಅರ್ಥವಾದರೆ ಸಾಲದು “ಬದುಕಿನ ಅರ್ಥಶಾಸ್ತ್ರವೂ ತಿಳಿದಿರಬೇಕು”.

ಇದನ್ನೂ ಓದಿ: ಮನಿ ಕಹಾನಿ ಅಂಕಣ | ನಿಮ್ಮ ಬದುಕನ್ನು ನೀವೇ ನಿರ್ಧರಿಸಿ

Exit mobile version