ಮೊದಲೆಲ್ಲಾ ಹಾಗೇ, ವ್ಯಾಪಾರ ಮಾಡೋ ಜಾಗದಲ್ಲಿ ವ್ಯಾಪಾರ ಬಿಟ್ಟು ಬೇರೇನೂ ನಡೆಯುತ್ತಿರಲಿಲ್ಲ. ಹೀಗಾಗಿಯೇ ಹಿಂದೆ ಸಂತೆ, ಜಾತ್ರೆ, ಮಾರ್ಕೆಟ್ ಅಂತೆಲ್ಲಾ ಸಪರೇಟ್ ಜಾಗಗಳಿದ್ದವು. ಇಂಥದ್ದೇ ಸಮಯದಲ್ಲಿ ಇಂಥದ್ದೇ ಜಾಗದಲ್ಲಿ ಅಂತ ವ್ಯಾಪಾರ ನಡೆಸಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಸಂತೆ, ಜಾತ್ರೆ, ಮಾರ್ಕೆಟ್ಟುಗಳೆಂಬ ಹೆಸರು ಈಗ ಮೊದಲಿನ ಅರ್ಥದಲ್ಲಿ ಉಳಿದಿಲ್ಲ. ಇಡೀ ಸಮಾಜವೇ ಈಗ ಮಾರ್ಕೆಟ್ಟು, ಬದುಕೇ ವ್ಯಾಪಾರದಂತಾಗಿದೆ, ಇದನ್ನ ಅರ್ಥಮಾಡಿಕೊಳ್ಳದ ಹೊರತು ಈ ಜೀವನ ಸುಲಭವೆನ್ನಿಸುವುದಿಲ್ಲ.
ಮೊನ್ನೆ ಯೂಟ್ಯೂಬಿನ ಯಾವುದೋ ವಿಡಿಯೋ ನೋಡುವಾಗ ಸುಮ್ಮನೇ ಅದರ ಕಮೆಂಟ್ ಬಾಕ್ಸ್ ತೆರೆದು ನೋಡಿದೆ. ವಿಡಿಯೋಗಿಂತ ಆ ವಿಡಿಯೋ ಮಧ್ಯೆ ಬರುವ ಜಾಹೀರಾತಿನ ಕುರಿತೇ ಹೆಚ್ಚು ಕಮೆಂಟುಗಳಿದ್ದವು. ಜನ ಯಾಕಿಷ್ಟು ಕಿರಿಕಿರಿಗೊಳಗಾಗುತ್ತಾರೆ ಎಂದು ಚಿಂತಿಸಿದೆ. ಅವರಿಗೆ ಇನ್ನೂ ಸತ್ಯ ಅರ್ಥವಾಗಿಲ್ಲ, ಆ ಸತ್ಯ ಏನೆಂದರೆ ಇದು ಜಾಹೀರಾತಿನ ಯುಗ, ಇಲ್ಲಿ ಎಲ್ಲಕ್ಕಿಂತ ಹೆಚ್ಚು ನಡೆಯುವುದು ಜಾಹೀರಾತುಗಳೇ. ಹೀಗಿರುವಾಗ ಜಾಹೀರಾತುಗಳನ್ನೇ ದ್ವೇಷಿಸಲಾರಂಭಿಸಿದರೆ ಹೇಗೆ?
ಹಿಂದೊಂದು ಕಾಲವಿತ್ತು, ರಾಜಕಾರಣಿಯೊಬ್ಬ ಜನಪ್ರಿಯನಾಗಬೇಕಾದರೆ ಆತ ಅತೀ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಿತ್ತು. ವಕೀಲನೊಬ್ಬ ಜನಪ್ರಿಯನಾಗಬೇಕಾದರೆ ಅತ ಅತೀ ಹೆಚ್ಚು ಕೇಸುಗಳನ್ನು ಗೆಲ್ಲಬೇಕಿತ್ತು. ವೈದ್ಯನೊಬ್ಬ ಎಷ್ಟು ರೋಗಿಗಳನ್ನು ಗುಣಪಡಿಸುತ್ತಾನೆ ಎಂಬುದರ ಆಧಾರದಲ್ಲಿ ಆತನನ್ನು ಅಳೆಯಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ, ನಟನೊಬ್ಬನ ಅರ್ಹತೆಯನ್ನು ಆತನ ಸಾಮಾಜಿಕ ಜಾಲತಾಣಗಳ ಫಾಲೋವರ್ಸ್ ಲೆಕ್ಕದಲ್ಲಿ ಅಳೆಯಲಾಗುತ್ತದೆ. ಕೇವಲ ಫೇಸ್‌ಬುಕ್ ಲೈವ್ ಮಾಡುವುದರ ಮೂಲಕ ಅತೀ ಹೆಚ್ಚು ಹೆಸರು ಸಂಪಾದಿಸಿರುವ ಲಾಯರ್, ಡಾಕ್ಟರ್ ಹಾಗೂ ರಾಜಕಾರಣಿಗಳು ನಮ್ಮ ನಿಮ್ಮ ಮಧ್ಯೆ ಇದ್ದಾರೆ. ಆದರೆ ನಾವವರನ್ನು ಅಳೆಯಬೇಕಾದದ್ದು ಅವರ ಕೆಲಸದ ಆಧಾರದಲ್ಲಿ ಎಂಬ ಸತ್ಯವನ್ನೇ ಮರೆತು ಅವರು ಹೇಳಿದ್ದೇ ಸತ್ಯ, ಅವರೇ ಅತೀ ದೊಡ್ಡ ವೃತ್ತಿಪರರು ಎಂಬಂತೆ ವರ್ತಿಸುತ್ತೇವೆ. ನಾವು ಮಾಡುವ ಅಂತಹಾ ತಪ್ಪುಗಳಿಂದಲೇ ಉಳಿದವರೂ ಪ್ರಚಾರದ ಗೀಳಿಗೆ ಬೀಳುತ್ತಾರೆ. ಇನ್ನೂ ಕಾಲೇಜು ದಾಟದ ಅದೆಷ್ಟೋ ಮಕ್ಕಳು ತಾವು ಮಾಡುವ ವಿಡಿಯೋಗಳಿಗೆ ಲೈಕ್ಸ್ ಬಂದಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿವೆ. ಅದೆಲ್ಲದಕ್ಕೂ ಕಾರಣ ಇದೇ ಪ್ರಚಾರದ ಹುಚ್ಚು.
ಆರಂಭದಲ್ಲಿ ಜಾಹೀರಾತು ಬೇಕಾಗಿದ್ದದ್ದು ಕೇವಲ ವಸ್ತುಗಳಿಗೆ ಮಾತ್ರ. ನೀವು ಹಳೇ ಪೇಪರ್‌ಗಳನ್ನು ತೆಗೆದು ನೋಡಿ. ಅದರಲ್ಲಿ ಸೋಪು, ಶಾಂಪು, ಊದಿನಕಡ್ಡಿ, ಬಟ್ಟೆ ಒಗೆಯುವ ಪೌಡರ್ ಇಂಥಾ ವಸ್ತುಗಳಿಗೆ ಮಾತ್ರ ಜಾಹೀರಾತು ನೀಡಲಾಗುತ್ತಿತ್ತು. ನಿನ್ನೆ ಮೊನ್ನೆಯ ಯಾವುದಾದರೂ ಪೇಪರ್ ತೆಗೆದು ನೋಡಿ, ಅದರಲ್ಲಿ ಬಹುಪಾಲು ರಾಜಕಾರಣಿಗಳದ್ದೇ ಜಾಹೀರಾತು, ಇನ್ನು ಆಸ್ಪತ್ರೆಗಳು, ಶಾಲೆಗಳು ಸೇರಿದಂತೆ ಇತ್ತೀಚೆಗೆ ಕೆಲವು ಅನಾಥಾಶ್ರಮಗಳು ಕೂಡ ಜಾಹೀರಾತಿನ ಹಿಂದೆ ಬಿದ್ದಿವೆ. ಜಾಹೀರಾತಿನ ಮೂಲ ಉದ್ದೇಶ ಪ್ರಚಾರದ ಮೂಲಕ ಬ್ಯುಸಿನೆಸ್ ಹೆಚ್ಚಿಸುವುದು. ಈ ಕೆಲಸವನ್ನು ಬ್ಯುಸಿನೆಸ್‌ನವರು ಮಾಡುವುದು ಹಿಂದೆ ಸಾಮಾನ್ಯವಾಗಿತ್ತು, ಅವರ ವ್ಯಾಪಾರ ವೃದ್ಧಿಗಾಗಿ ಅವರು ಜಾಹೀರಾತು ಕೊಡುತ್ತಿದ್ದರು, ಈಗ ಬದುಕೇ ಒಂದು ವ್ಯಾಪಾರವಾಗಿದೆ, ನಮ್ಮ ಬದುಕಿನ ಪ್ರತೀ ಹಂತವನ್ನೂ ತಮ್ಮ ವ್ಯಾಪಾರದ ಲಾಭವಾಗಿ ಬಳಸಿಕೊಳ್ಳುವ ಮಾರುಕಟ್ಟೆಗಳು ಹುಟ್ಟಿಕೊಂಡಿವೆ.
ಇದನ್ನೂ ಓದಿ: ಮನಿ ಕಹಾನಿ ಅಂಕಣ | ನಿಮ್ಮ ಸಂಬಳದಲ್ಲಿ ನೀವು ಎಷ್ಟು ಉಳಿಸುತ್ತಿದ್ದೀರಿ?
ಯಾವುದೋ ಒಂದೂರಿನ ದೇವಾಲಯಕ್ಕೆ ಹೋಗುವ ಎಲ್ಲಾ ಭಕ್ತರೂ ತಮ್ಮ ಬದುಕಿನಲ್ಲಿ ಹೆಚ್ಚು ಸಂಪಾದನೆಯಾಗುವ ದಾರಿ ತೋರಿಸು ಅಂತಲೇ ಬೇಡುತ್ತಾರೆ. ಅದೇ ಯಾವ ದೇವಾಲಯದಲ್ಲಿ ನಾವು ಸುಖ, ಶಾಂತಿ, ಸಮೃದ್ಧಿಗಾಗಿ ಬೇಡುತ್ತೇವೆಯೋ ಆ ಊರಿನ ಅದೇ ದೇವಾಲಯದಲ್ಲಿ ವೈದ್ಯರೊಬ್ಬರು ತನ್ನ ಆಸ್ಪತ್ರೆಯ ಉದ್ಧಾರಕ್ಕಾಗಿ ಬೇಡುತ್ತಿರುತ್ತಾರೆ, ಅದೇ ಊರಿನ ವಕೀಲರು ತನ್ನ ಬಳಿ ಹೆಚ್ಚು ಹೆಚ್ಚು ಕಕ್ಷಿದಾರರು ಬರಲೆಂದು ಬೇಡುತ್ತಿರುತ್ತಾರೆ. ದೇವರು ಎಲ್ಲರನ್ನೂ ಗಮನಿಸಿಕೊಳ್ಳಬೇಕಾಗುತ್ತದೆ. ಅಂತೆಯೇ ಈಗಿನ ಮಾಧ್ಯಮಗಳು ಕೂಡ ಅಲ್ಲಿ ಜಾಹೀರಾತುಗಳು ರಾರಾಜಿಸುತ್ತಲೇ ಇರುತ್ತವೆ. ನೀವು ಬಳಸುವ ಟೂತ್ ಪೇಸ್ಟಿನಿಂದ ಹಿಡಿದು ನೀವು ನಿತ್ಯ ಬದುಕಿನಲ್ಲಿ ಮಾಡಬಹುದಾದ ಎಲ್ಲಾ ಕೆಲಸಗಳಲ್ಲಿಯೂ ಯಾರದೋ ಒಂದು ವ್ಯಾಪಾರ ಅಡಗಿರುತ್ತದೆ, ಅವರು ತಮ್ಮ ವ್ಯಾಪಾರಕ್ಕಾಗಿ ಜಾಹೀರಾತು ನೀಡುತ್ತಲೇ ಇರುತ್ತಾರೆ.
ಈಗ ಮಾರ್ಕೆಟ್ ಎಂದರೆ ಸಮಾಜ ಎಂಬಂತಾಗಿದೆ. ಹೀಗಿರುವಾಗ ಬರುವ ಸಾವಿರ ಜಾಹೀರಾತುಗಳ ಪೈಕಿ ನನಗೆ ಯಾವುದು ಉತ್ತಮ, ಯಾವ ವಸ್ತು ಅಥವಾ ಸೇವೆ ನನಗೆ ಅವಶ್ಯಕತೆಯಿದೆ ಎಂದು ನಿರ್ಧರಿಸುವ ಅಂತಿಮ ತೀರ್ಮಾನ ನಮ್ಮದೇ ಆಗಿರುತ್ತದೆ. ಹೀಗಿದ್ದೂ ಯಾರದೋ ಮೇಲೆ ಕೋಪಿಸಿಕೊಂಡು ಪ್ರಯೋಜನವೇನು? ಜಾಹೀರಾತು ನೀಡುವ ಬ್ಯುಸಿನೆಸ್‌ಮನ್ ಅಥವಾ ಮಾಧ್ಯಮಗಳಿಗೆ ಶಾಪ ಹಾಕಿ ಏನಾಗಬೇಕಿದೆ, ನಾವು ಬೇಡುವ ದೇವರನ್ನೇ ಅವರೂ ಬೇಡುತ್ತಿರುತ್ತಾರೆ, ಅಂತಿಮವಾಗಿ ನಮ್ಮಂತೆಯೇ ಅವರದೂ ಬದುಕು. ಅವರ ಬದುಕೂ ಬೇರೆಯವರ ಮಾರ್ಕೆಟ್ಟು ಎಂಬ ಸತ್ಯ ನಮಗರ್ಥವಾದರೆ ಸಾಕು.
ಇದನ್ನೂ ಓದಿ: ಮನಿ ಕಹಾನಿ ಅಂಕಣ | ನಿಮ್ಮ ಬದುಕನ್ನು ನೀವೇ ನಿರ್ಧರಿಸಿ