ಸೋಲು ಅನ್ನೋದಿದೆಯಲ್ಲಾ ಅದು ಯಾರನ್ನೂ ಬಿಟ್ಟಿರುವುದಿಲ್ಲ. ಸೋಲಿಲ್ಲದ ಸರದಾರ ಅಂತ ಯಾರೂ ಇಲ್ಲ. ಹಲವರನ್ನು ರಾಜಕೀಯದಲ್ಲಿ ಸೋಲಿಲ್ಲದ ಸರದಾರ ಎನ್ನುವುದುಂಟು ಆದರೆ ಅವರ ವೈಯಕ್ತಿಕ ಬದುಕಿನಲ್ಲಿ ಸಾವಿರಾರು ಸೋಲುಗಳ ಸಾಲೇ ಅವರ ಕಣ್ಣೆದುರಿಗಿರಬಹುದು. ಶಾಸಕರಾಗಿ, ಮಂತ್ರಿಗಳಾಗಿ ಮೆರೆಯುತ್ತಿರುವ ಅದೆಷ್ಟೋ ಜನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತು ಬಂದವರಿದ್ದಾರೆ, ದೊಡ್ಡ ದೊಡ್ಡ ಬ್ಯುಸಿನೆಸ್ ಕಟ್ಟಿ ಸಾಧಕರು ಎನಿಸಿಕೊಂಡವರು ವೈವಾಹಿಕ ಬದುಕಿನಲ್ಲಿ ಸೋತಿರುತ್ತಾರೆ, ಸಿನಿಮಾ ರಂಗದಲ್ಲಿ ಸ್ಟಾರ್ ಎನಿಸಿಕೊಂಡವರು ಯಾವುದೋ ಸೋಲಿನಿಂದ ನಿತ್ಯವೂ ನರಳುತ್ತಿರುತ್ತಾರೆ. ಈ ಜಗತ್ತಿನ ಬಹುಪಾಲನ್ನು ಗೆದ್ದ ಅಲೆಗ್ಸಾಂಡರ್ ಕೂಡ ಈ ಬದುಕಿನೆದುರು ಸೋಲೊಪ್ಪಿಕೊಳ್ಳಲೇ ಬೇಕಾಯ್ತು. ಈ ಬದುಕೆಂಬುದು ನೂರಾರು ಸೋಲುಗಳ ಸಂತೆ. ಹಲವು ಬಾರಿ ಸೋಲುಗಳೇ ನಮ್ಮ ಸಾಧನೆಗೆ ಮೆಟ್ಟಿಲಾಗುತ್ತವೆ, ಸೋಲೇ ಮತ್ತೊಂದು ಸಾಧನೆಯ ಹಠ ಹುಟ್ಟಿಸುತ್ತದೆ, ಇನ್ನೂ ಕೆಲವೆಡೆ ಸೋಲೇ ನಿಜವಾದ ಗೆಲುವಿನಂತೆ ಕಂಡುಬಿಡುತ್ತದೆ.
ಯಾವುದೋ ಒಂದು ಲವ್ ಫೇಲ್ಯುರ್, ಮತ್ಯಾವುದೋ ಬ್ಯುಸಿನೆಸ್ ನಲ್ಲಿ ಸೋಲು, ಇನ್ಯಾವುದೋ ನಂಬಿಕೊಂಡಿದ್ದ ಕೆಲಸ ಹೋಯ್ತು ಎಂಬೆಲ್ಲಾ ಕಾರಣಗಳಿಗೆ ಹಲವರು ಆತ್ಮಹತ್ಯೆ ಮಾಡಿಕೊಳ್ತಾರಲ್ಲಾ ಅಂಥವರನ್ನು ಕಂಡಾಗ ಅಯ್ಯೋ ಎನಿಸುತ್ತದೆ. ಅವರು ನೂರಾರು ಸೋಲುಗಳನ್ನು ನೋಡಬೇಕು, ಸೋಲನ್ನು ಕಂಡು ‘ಅಷ್ಟೇ ತಾನೆ’ ಎಂಬಂತೆ ನಗು ಚೆಲ್ಲುವ ಮಟ್ಟಕ್ಕೆ ಬೆಳೆಯಬೇಕು. ಪಾಪ ಅವರಿಗಿನ್ನೂ ಬದುಕಿನ ಆಳ ಅಗಲಗಳ ಅರಿವಿರುವುದಿಲ್ಲ. ಸಾವಿರಾರು ಫೇಲ್ಯುರ್‌ಗಳ ನಡುವೆಯೇ ಬದುಕುತ್ತಿರುವ ಅದೆಷ್ಟೋ ಜನ ನಮ್ಮ ನಿಮ್ಮ ನಡುವೆಯಿದ್ದಾರೆ.
ಅದೊಂದು ದಿನ ಫಿನ್ ಪ್ಲಸ್ ಮೆಟ್ಟಿಲು ಹತ್ತಿಬಂದ ಹೆಂಗಸೊಬ್ಬರನ್ನು ಕೂರಿಸಿ ಮಾತನಾಡಿಸಿದೆ. ಅವರ ಕಥೆ ಕೇಳಿ ಇಡೀ ದಿನ ಅಂಬೋ ಎಂಬ ಫೀಲು. ಅವರ ಅಪ್ಪ ಅಮ್ಮನಿಗೆ ಇವರು ಬೇಡವಾಗಿ ಬಹಳ ವರ್ಷಗಳಾಗಿವೆ. ತಂದೆಗಿಂತ ಸ್ವಲ್ಪ ಚಿಕ್ಕವಯಸ್ಸಿನ ಮುದುಕನಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಈಗ ಅವನಿಗೆ ವಯಸ್ಸು ಐವತ್ತು ದಾಟಿದೆ. ಹೆಂಡತಿ, ಸಂಸಾರ ಇದ್ಯಾವುದೂ ಬೇಡವಾಗಿದೆ, ಕೇವಲ ದಿನಕ್ಕೊಂದು ಬಾಟಲಿ ಜೊತೆಗಿದ್ದರೆ ಅವನಿಗದೇ ಬದುಕು. ಇತ್ತ ಗಂಡನೇ ಮುದುಕನಾದರೂ ಅತ್ತೆ ಮಾತ್ರ ನೆನ್ನೆ ಮೊನ್ನೆ ಮದುವೆಯಾದ ಟಿಪಿಕಲ್ ಸೊಸೆಯಂತೆ ಸಿಡಿ ಸಿಡಿ ಉರು ಉರು ಎನ್ನುತ್ತಲೇ ಇರುತ್ತಾಳೆ. ಮೈದುನರ ಪಾಲಿಗೆ ಇವರು ಅಡುಗೆ ಮಾಡಿ ಹಾಕುವ ಮಷಿನ್, ಗಂಡನಿಗೂ ಅಷ್ಟೇ. ಮಾವ ಜಗುಲಿಯ ಮೇಲೆ ಕುಳಿತರೆ ದಿನಕ್ಕೊಮ್ಮೆ ಏಳುವುದೂ ಕಷ್ಟ. ಅವರಿಗೆ ಈ ಲೋಕದ ಗೊಡವೆ ಸಾಕಾಗಿದೆ. ಇನ್ನು ನನ್ನದು ಅಂತ ಈ ಮನೆಯಲ್ಲೇನೂ ಇಲ್ಲ, ನನ್ನ ಬದುಕು ಕೂಡ ನನ್ನದಲ್ಲ ಎನಿಸಿ ತವರಿಗೆ ಹೋದರೆ ಅಲ್ಲಿ ಅಣ್ಣಂದಿರು ಈಗ ಮೊದಲಿನಂತಿಲ್ಲ. ಮದುವೆಗಿಂತ ಮೊದಲು ಏನಾದರೂ ನಿನ್ನ ಹೆಗಲಿಗೆ ಹೆಗಲು ಕೊಡ್ತೇವೆ ಎಂದು ಮಾತು ಕೊಟ್ಟವರು ನಿನ್ ಸಂಸಾರ ನಿನ್ ಹಣೆಬರಹ ಎನ್ನತೊಡಗಿದ್ದಾರೆ. ಅತ್ತಿಗೆ ನಾದಿನಿಯರು ಯಾವಾಗ ಹೊರಡ್ತೀರಿ ಎಂಬಂತೆ ಮುಖ ನೋಡ್ತಾರೆ. ಈ ತವರು ಕೂಡ ಈಗ ನನ್ನದಾಗಿ ಉಳಿದಿಲ್ಲ ಎನಿಸಿ ವಾಪಾಸು ಬಂದರೆ ಮತ್ತದೇ ನರಕದಂತಹಾ ಗಂಡನ ಮನೆ.
ಯಾಕೆ ಹೀಗಾಯ್ತು? ವಯಸ್ಸಿರುವಾಗ ಅವರಿವರ ಮಾತು ಕೇಳಿದ್ದಕ್ಕೆ. ತನ್ನ ಬದುಕು ಹೇಗಿರಬೇಕು ಎಂದು ತಾನೇ ನಿರ್ಧರಿಸದೇ ಇದ್ದದ್ದಕ್ಕೆ, ತನ್ನದೂ ಅಂತ ದುಡಿಮೆ ಮಾಡಿಕೊಳ್ಳದೇ ಬದುಕಿದ್ದಕ್ಕೆ, ನನ್ನ ಭವಿಷ್ಯಕ್ಕೆಂದು ಒಂದಷ್ಟು ಹಣ ಉಳಿಸಿಕೊಳ್ಳದೇ ಬದುಕಿದ್ದಕ್ಕೆ, ತನ್ನ ಹುಡುಗ ಹೇಗಿರಬೇಕು ಎಂದು ತಾನು ಯೋಚಿಸದೇ ತಾಳಿಗೆ ಕೊರಳೊಡ್ಡಿದ್ದಕ್ಕೆ. ಇಂಥಾ ನೂರಾರು ತಪ್ಪುಗಳನ್ನು ಹಲವರು ಮಾಡಿಕೊಳ್ಳೋದುಂಟು. ಅವರ ಬದುಕೆಂಬುದು ನಿತ್ಯ ನರಕವಾಗಿರುತ್ತದೆ. ನಾನವರಿಗೆ ಕೊಟ್ಟ ಸಲಹೆಯೆಂದರೆ ಮೊದಲು ದುಡಿಯಲು ಆರಂಭಿಸುವುದು. ಸಂಬಳವೇ ಇಲ್ಲದ ಅದೆಷ್ಟೋ ಕೆಲಸಗಳನ್ನು ಅವರು ಮಾಡಿಕೊಂಡೇ ಬದುಕಿದ್ದಾರೆ. ಈಗ ಸಂಬಳಕ್ಕಾಗಿ ಕೆಲಸ ಮಾಡಿ ಎಂದೆ. ಒಂದಷ್ಟು ದಿನ ದುಡಿದು ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಇಡುವಂತೆ ಹೇಳಿದೆ. ಇಟ್ಟ ಹಣದಲ್ಲಿ ಆಗಾಗ ಗಂಡನಿಗೆ, ಮಕ್ಕಳಿಗೆ ಬರ್ತಡೇ, ಆನಿವರ್ಸರಿ ಅಂತ ಗಿಫ್ಟ್ ಮಾಡಲಾರಂಭಿಸಿದರು. ಗಂಡ ಕುಡಿದು ಹೊಡೆಯುವುದನ್ನು ನಿಲ್ಲಿಸಿದ. ದುಡಿಯುವ ಸೊಸೆ ಅಂತ ಅತ್ತೆ ಗೌರವಿಸಲಾರಂಭಿಸಿದರು. ಯಾವಾಗ ಪ್ರೊಫೆಷನಲ್ ಆಗಿ ಓಡಾಡುವುದನ್ನು ಕಂಡರೋ ತವರಿನವರೂ ಈಗ ಚೆನ್ನಾಗಿಯೆ ಮಾತನಾಡಿಸುತ್ತಾರಂತೆ. ಈಗ ಬದುಕಿನಲ್ಲಿ ಹೊಸ ಭರವಸೆ ಹುಟ್ಟಿದೆ.
ಇದನ್ನೂ ಓದಿ | ಮನಿ ಕಹಾನಿ ಅಂಕಣ | ನವರಾತ್ರಿಗೆ ಹೀಗೊಂದು ಸಂಕಲ್ಪ ಮಾಡೋಣ
ಹೀಗೇ ಇನ್ನೇನು ಮುಗಿದೇ ಹೋಯಿತು ಎನ್ನುವ ಸ್ಥಿತಿಗೆ ತಲುಪಿದ್ದ ಅದೆಷ್ಟೋ ಜನರ ಬದುಕು ಒಂದು ಸಣ್ಣ ತಿರುವಿನಿಂದ ಮತ್ತೆ ಆರಂಭವಾಗುತ್ತದೆ. ಇವತ್ತು ಮ್ಯಾನೇಜರ್ ಪೋಸ್ಟಿಗಾಗಿ ತಾರಾ ಮಾರಾ ಜಗಳವಾಡಿ ರಾಜಿನಾಮೆ ಕೊಟ್ಟು ಹೋದವನು ಮುಂದೊಂದು ದಿನ ನೂರಾರು ಜನಕ್ಕೆ ಕೆಲಸ ಕೊಡುವ ಕಂಪನಿಯ ಮಾಲೀಕನಾಗಬಹುದು. ಕಾಲೇಜಿನಲ್ಲೇ ಪ್ರೀತಿಯಲ್ಲಿ ಸೋತ ಹುಡುಗನೊಬ್ಬ ಸಿನಿಮಾ ಸ್ಟಾರ್ ಆಗಿ ಲಕ್ಷಾಂತರ ಜನ ಹುಡುಗಿಯರು ಅವನಿಗಾಗಿ ಹಂಬಲಿಸುವಮತೆ ಮಾಡಿರುವ ಉದಾಹರಣೆಗಳಿವೆ. ಎಸ್.ಎಸ್.ಎಲ್.ಸಿ ಪಾಸು ಮಾಡಲಾಗದೇ ಸೋತವರು ಐಎಎಸ್ ಪಾಸ್ ಮಾಡಿರುವುದೂ ಉಂಟು. ಯಾವ ಸೋಲೂ ಪರ್ಮನೆಂಟ್ ಅಲ್ಲ. ಆದರೆ ಇದೇ ಪರ್ಮನೆಂಟ್ ಎನ್ನುವಂಥಾ ನೋವು ಕೊಡುತ್ತವೆ ನಿಜ. ಆ ನೋವು ತಡೆದುಕೊಂಡಾಗಲೇ ನಿಜವಾದ ಬದುಕು ಅರ್ಥವಾಗುವುದು.
ಯಾರದೋ ಮಾತು ಕೇಳಿ ಬ್ಯುಸಿನೆಸ್ ಆರಂಭಿಸುವುದು, ಮತ್ಯಾರದೋ ಒತ್ತಡಕ್ಕೆ ಮದುವೆಯಾಗುವುದು, ಯಾರೋ ಏನ್ ಕೆಲಸ ಮಾಡ್ತಿದಿಯ ಅಂತ ಕೇಳಿದಾಗ ಉತ್ತರ ಹೇಳೋದಕ್ಕೋಸ್ಕರವೇ ಸಿಕ್ಕ ಸಿಕ್ಕ ಕೆಲಸಕ್ಕೆ ಸೇರಿ ತನ್ನ ಕನಸನ್ನು ಬಲಿ ಕೊಡೋದು, ಯಾರೋ ಹೇಳಿದ ʼನಾನಿದೀನಿʼ ಅನ್ನೋ ಮಾತನ್ನ ನಂಬಿ ಇಡೀ ಬದುಕನ್ನೇ ರಿಸ್ಕಿಗೆ ಒಡ್ಡೋದು, ಇಂಥಾ ಹುಚ್ಚಾಟಗಳನ್ನು ಮಾಡುವ ಮೊದಲು ಕೊಂಚ ಯೋಚಿಸುವುದು ಒಳ್ಳೆಯದು. ಯಾರ ಬದುಕಿಗೆ ಯಾರೂ ಬರುವುದಿಲ್ಲ. ಗೆದ್ದಾಗ ಸುತ್ತಲೂ ನಿಂತು ಚಪ್ಪಾಳೆ ತಟ್ಟುವ ಸಾವಿರ ಕೈಗಳಿರುತ್ತವೆ. ಸೋತಾಗ ಕೈಚಾಚಲು ಯಾರೂ ಇರುವುದಿಲ್ಲ. ನಾವೇ ದುಡಿದ ಹಣ, ನಮ್ಮದೇ ಕನಸು, ನಾವೇ ಪ್ಲಾನ್ ಮಾಡಿ ಮಾಡಿಕೊಂಡ ಇನ್ವೆಸ್ಟ್ ಮೆಂಟ್‌ಗಳು, ನಮ್ಮದೇ ಸಣ್ಣ ಸಣ್ಣ ಲೆಕ್ಕಾಚಾರಗಳು ಮಾತ್ರ ನಮ್ಮ ಕೈಹಿಡಿಯುತ್ತವೆ. ಎಂದೋ ಹಾಕಿದ ಐದು ಸಾವಿರದ ಚೀಟಿ ಮತ್ತೆಂದೋ ಕಷ್ಟದಲ್ಲಿ ದಿಡೀರನೆ ಕೈಚಾಚಿ ಸಹಾಯಕ್ಕೆ ಬರುತ್ತೆ, ಯಾವತ್ತೋ ಮಾಡಿದ ಇನ್ವೆಸ್ಟ್‌ಮೆಂಟ್ ಇನ್ಯಾವತ್ತೋ ಬದುಕನ್ನೇ ಬದಲಿಸುವ ಮಟ್ಟಲ್ಲೆ ಬೆಳೆದು ನಿಂತಿರುತ್ತದೆ. ಆಗ ನೋಡಿ ನಿಮ್ಮ ಬದುಕಿನ ನೂರಾರು ಸೋಲುಗಳಿಗೊಂದು ಅಂತ್ಯ ಸಿಗುತ್ತದೆ.
ಹಲವರ ಪಾಲಿಗೆ ಈ ಬದುಕು ಸೋಲುಗಳ ಸಂತೆಯಂತೆ ಕಾಣುತ್ತಿರುತ್ತದೆ. ಸಾಲು ಸಾಲು ಸೋಲುಗಳನ್ನೇ ಕಂಡು ಹತಾಶರಾಗಿರುತ್ತಾರೆ. ನೂರು ಸೋಲುಗಳ ನಂತರವೂ ನೂರಾ ಒಂದನೇ ಸಾಲಿನ ಕಡೆಗೆ ಸಾಗುವುದೇ ಬದುಕು ಎನ್ನುವಂತಾಗಿರುತ್ತದೆ. ಆದರೆ ಎಲ್ಲಕ್ಕೂ ಒಂದು ಕೊನೆಯಿರುತ್ತದೆ. ಒಮ್ಮೆ ಥಟ್ಟನೆ ನಿಂತು ಯೋಚಿಸಿದರೆ ಸೋಲಿಗೊಂದು ಪರಿಹಾರ ನಮ್ಮೆದುರು ನಿಂತು ಖಿಲ್ಲನೆ ನಗುತ್ತದೆ. ಆ ನಗು ಅರ್ಥವಾದರೆ ಸಾಕು ಬದುಕು ಗೆಲುವಿನೆಡೆಗೆ ಓಡಲಾರಂಭಿಸುತ್ತದೆ.
ಇದನ್ನೂ ಓದಿ | ಮನಿ ಕಹಾನಿ ಅಂಕಣ | ಅವರಿಗೆ ಹಣದ ಬದಲು ಒಂದಷ್ಟು ಸಮಯ ಕೊಡಿ