Site icon Vistara News

ಮನಿ ಕಹಾನಿ ಅಂಕಣ | ನಿಮ್ಮ ಬದುಕನ್ನು ನೀವೇ ನಿರ್ಧರಿಸಿ

money Earned Salary Advance Drawal Scheme

ನಮ್ಮೂರಿನಲ್ಲಿ ಎಪ್ಪತ್ತರ ಹರೆಯದ ಅಜ್ಜಿ ಇದ್ದಾರೆ. ಅವರ ಹೆಸರು ಮರುಳಸಿದ್ದಮ್ಮ. ಈ ಸಿದ್ದಮ್ಮನವರಿಗೆ ಹದಿಮೂರೋ ಹದಿನಾಲ್ಕೋ ವರ್ಷಕ್ಕೇ ಮದುವೆಯಾಯ್ತಂತೆ. ಹುಡುಗ ಯಾರು, ಏನು ಕೆಲಸ ಮಾಡ್ತಿದ್ದಾನೆ ಎಂಬೆಲ್ಲ ವಿಚಾರಗಳು ಒಂದು ಬದಿಗಿರಲಿ, ಅವನ ಮುಖ ಹೇಗಿದೆ ಅಂತ ಕೂಡ ಅವರು ನೋಡಿರಲಿಲ್ಲವಂತೆ. ತೀರಾ ತಾಳಿಕಟ್ಟುವ ಕೊನೆ ಕ್ಷಣದಲ್ಲಾದರೂ ನೋಡಬಹುದಿತ್ತು. ಆದರೆ ನೋಡಲಿಲ್ಲ. ಇವರು ತಮ್ಮ ಗಂಡನ ಮುಖ ನೋಡಿದ್ದು ಮದುವೆಯ ಶಾಸ್ತ್ರವೆಲ್ಲಾ ಮುಗಿದ ಮೇಲೆ. ಆಗ ಇವರಿಗರ್ಥವಾದದ್ದು ಹುಡುಗನಿಗೆ ತನ್ನ ತಂದೆಯಷ್ಟೇ ವಯಸ್ಸಾಗಿದೆ ಮತ್ತು ಅವನಿಗೆ ಯಾವುದೋ ರೋಗವಿದೆ ಅಂತ. ಅಯ್ಯೋ ಹುಡುಗ ಸ್ವಲ್ಪ ಕೆಮ್ಮುತ್ತಾರೆ ಅನ್ನೋದು ಬಿಟ್ರೆ ಅವನಿಗೇನಾಗಿದೆ ಮಹಾರಾಜನ ತರ ಇದ್ದಾರೆ. ಹದಿನಾರು ಎಮ್ಮೆ ಸಾಕಿದ್ದಾರೆ ಅಂತ ಸಿದ್ದಮ್ಮನವರ ಭಾವ ಹುಡುಗನಿಗೆ ಹೆಲ್ತ್ ಅಂಡ್ ಫಿಟ್ನೆಸ್ ಸರ್ಟಿಫಿಕೇಟು ಕೊಟ್ಟುಬಿಟ್ಟರು. ಅಕ್ಕ ಭಾವನ ನಿರ್ಧಾರವೆಂದ ಮೇಲೆ ತನ್ನ ಒಳ್ಳೆಯದಕ್ಕೇ ಮಾಡಿರುತ್ತಾರೆ ಎಂಬುದು ಸಿದ್ದಮ್ಮನವರ ನಂಬಿಕೆಯಾಗಿತ್ತು. ಆದರೆ ಹುಡುಗ ಸ್ವಲ್ಪ ಕೆಮ್ಮುತ್ತಾನೆ ಎಂದಿದ್ದರಲ್ಲ ಅದು ಆಗಿನ ಭಯಾನಕ ಟಿ.ಬಿ ಕಾಯಿಲೆ ಅಂತ ಮಾತ್ರ ಅವರು ಹೇಳಿರಲಿಲ್ಲ.

ಮದುವೆಯಾಗಿ ತುಂಬಾ ದಿನಗಳ ನಂತರ ಸಿದ್ದಮ್ಮನವರಿಗೆ ಸತ್ಯದ ಅರಿವಾಗಿತ್ತು. ಕೇವಲ ಮೂರೇ ಮೂರು ತಿಂಗಳಲ್ಲಿ ಗಂಡ ಉಸಿರು ನಿಲ್ಲಿಸಿದ್ದ. ಇತ್ತ ತವರಿಗೂ ವಾಪಾಸಾಗದೆ, ಗಂಡನ ಮನೆಯಲ್ಲೂ ಇರಲಾಗದೆ ಈ ಹೆಣ್ಣು ಅನಾಥೆಯಂತೆ ದಿನಗೂಲಿ ಮಾಡಿ ಜೀವನ ಸಾಗಿಸಬೇಕಾಯ್ತು. ಇಡೀ ಜೀವನ ತಾನಿರುವ ಜಿಲ್ಲೆಯಿಂದ ಹೊರಹೋಗದ ಈ ಮುದುಕಿ ತಾಲೂಕು ಕೇಂದ್ರವೇ ಜಗತ್ತಿನ ಅತೀದೊಡ್ಡ ಸಿಟಿ ಎಂದು ತಿಳಿದಿದ್ದಾಳೆ. ಇವತ್ತಿಗೂ ಆಕೆಯ ಮನೆಯಲ್ಲಿ ಟಿವಿ ಇಲ್ಲ, ಮೊಬೈಲ್ ಬಳಸಲ್ಲ. ಒಮ್ಮೊಮ್ಮೆ ಇವರದ್ದೇ ನಮಗಿಂತ ನೆಮ್ಮದಿ ಎನ್ನಿಸಿದರೂ ಪ್ರತೀ ದಿನ ಒಬ್ಬಂಟಿಯಾಗಿ ಆ ಹೆಣ್ಣು ಕಣ್ಣೀರು ಹಾಕುವಾಗ ಮಾತ್ರ ಕರುಳು ಚುರಕ್ ಎನ್ನದೇ ಇರಲಾರದು. ತಾನು ಮಾಡಿದ ತಪ್ಪಾದರೂ ಏನು ಅಂತ ಕೇಳಿಕೊಂಡ್ರೆ ಅವರ ಮುಂದೆ ಬರುವ ಉತ್ತರ ಅವರ ಭಾವನ ಮೇಲಿದ್ದ ಕುರುಡು ನಂಬಿಕೆ. ತನ್ನ ಜೀವನದ ಅತೀ ದೊಡ್ಡ ನಿರ್ಧಾರವನ್ನು ಯಾರದೋ ಹೆಗಲಿಗೆ ಹಾಕಿದ್ದರ ಪರಿಣಾಮ ಇಡೀ ಬದುಕು ನರಕಮಯವಾಯ್ತು.

ಸಿದ್ದಮ್ಮನಂತ ಸಾವಿರಾರು ಹೆಣ್ಣುಮಕ್ಕಳು ನಮ್ಮ ನಿಮ್ಮ ನಡುವೆಯಿದ್ದಾರೆ. ಈ ಕ್ಷಣಕ್ಕೆ ಅವರು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು “ನನ್ ಕೈಲಿ ಏನೂ ಇಲ್ಲ” “ನನ್ ಮಾತು ಇಲ್ಲಿ ಯಾರ್ ಕೇಳ್ತಾರೆ” ಅನ್ನೋ ರೆಡಿಮೇಡ್ ಡೈಲಾಗುಗಳ ಮೊರೆ ಹೋಗಬಹುದು. ಆದರೆ ಬದುಕು ಈ ಸಬೂಬುಗಳನ್ನ ಕೇಳುತ್ತಾ? ಊಹುಂ.

ಇದನ್ನೂ ಓದಿ | ಮನಿ ಕಹಾನಿ ಅಂಕಣ | ನೂರು ಸೋಲಿನಿಂದ ನೂರಾ ಒಂದರೆಡೆಗೆ ಪಯಣವೆ ಜೀವನ !

ಯಾರೋ ಹೇಳಿದರು ಅದಕ್ಕೇ ಮದುವೆಯಾದೆ, ಯಾರೋ ಈ ಜಮೀನು ಚೆನ್ನಾಗಿದೆ ಅಂದ್ರು ಕೊಂಡುಕೊಂಡೆ, ಮತ್ಯಾರೋ ಇದಕ್ಕಿಂತ ಒಳ್ಳೆ ಕೆಲಸ ಬೇಕಾ ಅಂದ್ರು, ಸೇರಿಕೊಂಡೆ ಅಂತ ಮುಂದೆ ಯಾವತ್ತೋ ತಲೆ ಚೆಚ್ಚಿಕೊಳ್ಳುವ ಹತ್ತಾರು ಜನರನ್ನು ನೋಡಿದ್ದೇನೆ. ಇವರೆಲ್ಲಾ ತಮ್ಮ ಬದುಕಿನ ನಿರ್ಧಾರಗಳನ್ನ ಬೇರೆ ಬೇರೆಯವರ ಕೈಗೆ ಕೊಟ್ಟು ಮುಂದೆ ಪಶ್ಚಾತ್ತಾಪ ಪಡೋರೆ. ಇಂಥವರ ಸಂಖ್ಯೆ ಅತೀ ಹೆಚ್ಚಿರುವುದರಿಂದಲೇ ಜಾಹೀರಾತು ಕ್ಷೇತ್ರ ಈಗ ಎಲ್ಲಿಲ್ಲದಂತಹಾ ವೇಗದಲ್ಲಿ ಬೆಳೀತಿದೆ. ಆನ್‌ಲೈನ್‌ನಲ್ಲಿ ಅದ್ಯಾವುದೋ ಗೇಮ್ ಆಡಿ ದಿನಕ್ಕೆ ಹತ್ತಾರು ಸಾವಿರ ಗೆಲ್ಲಿ ಅಂತ ಇತ್ತೀಚೆಗೆ ಹಲವು ಜಾಹೀರಾತುಗಳನ್ನು ನೋಡಿರುತ್ತೀರಿ. ಈ ಜಾಹೀರಾತುಗಳಲ್ಲಿ ನಟಿಸುವ ಕೆಲವು ನಟನಟಿಯರಂತೂ ನಾನೂ ಈ ಆಟವಾಡಿಯೇ ಇಷ್ಟು ಹಣ ಗಳಿಸಿದ್ದು ಅಂತ ಪುಂಗಿ ಬಿಡುತ್ತಾರೆ. ಯಾವುದೋ ಜಾಹೀರಾತು ಅಂತ ನಾವೇನೋ ಸುಮ್ಮನಾಗ್ತೀವಿ. ಆದರೆ ಕೆಲವರಿರ್ತಾರೆ ಅವರು ಇದನ್ನ ತುಂಬಾ ಸೀರಿಯಸ್ಸಾಗಿ ತಗೊಂಡು ನಿಜವಾಗಿಯೂ ಅವರಷ್ಟೆ ಗಳಿಸಿ ಶ್ರೀಮಂತನಾಗ್ತೇನೆ ಅಂತ ನಂಬಿಬಿಡ್ತಾರೆ. ಸ್ವಲ್ಪೇ ಹೊತ್ತಿನಲ್ಲಿ ಅದೇ ಆಪ್ ಡೌನ್‌ಲೋಡ್ ಮಾಡಿ ಹಣವನ್ನೂ ಹಾಕಿ ಆಕಾಶ ನೋಡ್ತಾ ಕಣ್ಣೀರಿಡ್ತಾರೆ. ಇಂಥವರು ಎಲ್ಲೆಡೆ ಇದ್ದಾರೆ.

ಯಾರೋ ನಟ ಹೇಳಿದ ಅಂತ ಯಾವುದೋ ಪ್ರಾಡಕ್ಟ್ ಬಳಸೋದು ಬದುಕಿನ ಒಂದು ಸಣ್ಣ ನಿರ್ಧಾರ. ಆದರೆ ಮದುವೆ, ಮಕ್ಕಳು, ಉದ್ಯೋಗದಂತಹಾ ದೊಡ್ಡ ನಿರ್ಧಾರಗಳಲ್ಲೂ ಸ್ವಂತವಾಗಿ ಯೋಚಿಸದೇ ಅವರಿವರ ಸಜೆಷನ್ ಕೇಳೋದಿದೆಯಲ್ಲ ಅದಕ್ಕಿಂತ ಡೇಂಜರಸ್ ಮತ್ತೊಂದಿಲ್ಲ. ಯಾವುದೋ ಭೂಮಿಯ ಮೇಲೆ, ಚಿನ್ನದ ಮೇಲೆ, ಬ್ಯಾಂಕ್‌ಗಳಲ್ಲಿ ಹಣ ಹೂಡಿದರೆ ಅದು ಗ್ಯಾರೆಂಟಿ ಅಂತ ಗೊತ್ತಿರುತ್ತದೆ. ಆದರೂ ಯಾರೋ ಹೇಳಿದರು ಅಂತ ಮತ್ತೆಲ್ಲೋ ಮನಿ ಡಬಲಿಂಗ್‌ಗೆ ಹಣ ಹಾಕಿ ಇಡೀ ಬದುಕು ದುಡಿದ ಹಣವನ್ನು ಯಾರದೋ ಬಾಯಿಗೆ ಬಸಿಯುತ್ತಾರೆ. ಜಗತ್ತಿನಲ್ಲಿ ಎಲ್ಲಿಯವರೆಗೂ ಮೋಸ ಹೋಗೋರು ಇರ್ತಾರೊ ಅಲ್ಲಿಯವರೆಗೂ ಮೋಸ ಮಾಡೋರೂ ಇರ್ತಾರೆ.

ಇದನ್ನೂ ಓದಿ | ಮನಿ ಕಹಾನಿ ಅಂಕಣ | ನಿಮ್ಮ ಸಂಬಳದಲ್ಲಿ ನೀವು ಎಷ್ಟು ಉಳಿಸುತ್ತಿದ್ದೀರಿ?

ಹೀಗಾಗಿ ಸಾಧ್ಯವಾದಷ್ಟೂ ಹುಷಾರಾಗಿರಿ. ನಿಮ್ಮ ಬದುಕಿನ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಿ. ಬೇರೆಯವರ ಸಹಾಯ ಪಡೆದರೂ ತೊಂದರೆಯಿಲ್ಲ ಆದರೆ ಅಂತಿಮ ನಿರ್ಧಾರ ನಿಮ್ಮದೇ ಆಗಿರಲಿ.

(ಲೇಖಕರು ಫಿನ್ ಪ್ಲಸ್. ಕಾಮ್ ಮುಖ್ಯಸ್ಥರು)

Exit mobile version