ನಿಮಗೆ ನೆನಪಿರಬಹುದು, ಬಾಲ್ಯದಲ್ಲಿ ಆಕಾಶಕ್ಕೆ ಮುಖ ಮಾಡಿ ಕುಳಿತು ಅದೆಷ್ಟೋ ದಿನ ನೀವು ನಕ್ಷತ್ರ ಎಣಿಸುವ ಪ್ರಯತ್ನ ಮಾಡಿರುತ್ತೀರಿ. ಮೊದಲ ದಿನ ನೂರಿನ್ನೂರು, ಎರಡನೇ ದಿನ ಐದುನೂರು ಹೀಗೇ ಎಣಿಸುತ್ತಾ ಎಣಿಸುತ್ತಾ ಅದೊಂದು ದಿನ ನನ್ನ ಕಣ್ಣಿಗೆ ಕಾಣಿಸುವ ಎಲ್ಲಾ ನಕ್ಷತ್ರಗಳನ್ನೂ ಬಹುತೇಕ ಎಣಿಸಿ ಮುಗಿಸಿದೆ ಎನಿಸುತ್ತಿತ್ತು. ಜೊತೆಗೆ ಹಾಗೆ ಅನಿಸಿದಾಗಲೆಲ್ಲಾ ಹೊಸ ಪುಟ್ಟ ಪುಟ್ಟ ನಕ್ಷತ್ರಗಳು ಮಿನುಗಲಾರಂಭಿಸುತ್ತಿದ್ದವು. ಆದರೂ ಬಾಲ್ಯದಲ್ಲಿ ನಕ್ಷತ್ರ ಎಣಿಸುವಾಗಿದ್ದ ಛಲ ಬಹುತೇಕರಲ್ಲಿ ದೊಡ್ಡವರಾದ ಮೇಲೆ ಕಾಣಿಸುವುದೇ ಇಲ್ಲ. ಹಲವರು ತಮ್ಮ ಹಣೆಬರಹವನ್ನು ಶಪಿಸಿಕೊಂಡೇ ಬದುಕುತ್ತಾರೆ.
ಚುನಾವಣೆ ಹತ್ತಿರಕ್ಕೆ ಬಂದಿರುವ ಈ ಸಮಯದಲ್ಲಂತೂ ಎಲ್ಲರೂ ಬದಲಾವಣೆಯ ಬಗ್ಗೆ ಮಾತನಾಡುವವರೆ. ಚುನಾವಣೆಯಲ್ಲಿ ಆಯ್ಕೆಯಾಗಿ ಬರುವ ನಾಯಕರು ನಮ್ಮ ಬದುಕನ್ನು ಬದಲಿಸಲಿ ಎಂಬುದೇ ಹಲವರ ಆಶಯ. ಖ್ಯಾತ ಆಧ್ಯಾತ್ಮ ಚಿಂತಕರು ಹಾಗೂ ಬರಹಗಾರರಾದ ಶ್ರೀ ಸತ್ಯಕಾಮರು ಹೇಳಿದ ಒಂದು ಮಾತು ಸದಾ ಕಾಲ ಪ್ರಸ್ತುತ. ಒಮ್ಮೆ ಕನ್ನಡದ ಖ್ಯಾತ ಪತ್ರಕರ್ತರೊಬ್ಬರು ಒಂದು ಪತ್ರಿಕೆಯ ಸಂಪಾದಕರಾಗಿ ಜವಾಬ್ದಾರಿ ವಹಿಸಿಕೊಂಡರಂತೆ. ಆ ಪತ್ರಿಕೆಯನ್ನು ಹೇಗೆ ಬೆಳೆಸಬಹುದು? ಒಬ್ಬ ಸಂಪಾದಕನಾಗಿ ನಾನು ಈ ಪತ್ರಿಕೆಗೆ ಹೇಗೆ ಒಳಿತು ಮಾಡಬಹುದು ಎಂದು ಸತ್ಯಕಾಮರಿಗೆ ಒಂದು ಪತ್ರ ಬರೆದರಂತೆ. ಕೆಲವು ದಿನಗಳ ನಂತರ ಸತ್ಯಕಾಮರಿಂದ ಬಂದ ಪತ್ರದಲ್ಲಿ ಇವರ ಪ್ರಶ್ನೆಗೆ ಒಂದೇ ಸಾಲಿನ ಉತ್ತರವಿತ್ತು. “ನಿನಗೆ ನೀನು ಒಳ್ಳೆಯದು ಮಾಡಿಕೊಳ್ಳದ ಹೊರತು ಬೇರೆ ಯಾರಿಗೂ ನೀನು ಒಳಿತು ಮಾಡಲಾರೆ” ಇದು ಸತ್ಯಕಾಮರ ಮಾತು. ಅವರ ಮಾತಿನ ಅರ್ಥ ನಾವು ಸ್ವಾರ್ಥಿಗಳಾಗಬೇಕು ಎಂಬುದಲ್ಲ, ನಮಗೆ ಅವಶ್ಯಕತೆಯಿರುವಷ್ಟು ನಾವು ಸಂಪಾದಿಸಬೇಕು, ಅದು ಹಣವಿರಬಹುದು, ಸ್ನೇಹವಿರಬಹುದು, ಜ್ಞಾನವಿರಬಹುದು ಒಟ್ಟಾರೆಯಾಗಿ ನಮ್ಮ ಪಾಲಿಗೆ ಬೇಕಾದಷ್ಟನ್ನು ನಾವೇ ಸಂಪಾದಿಸಬೇಕು. ನಂತರ ಇತರರಿಗೆ ಹಂಚುವ ಕಾರ್ಯ ಮಾಡಬೇಕು.
ಈ ಹಿನ್ನೆಲೆಯಲ್ಲಿ ನಾವು ನಮ್ಮ ನಮ್ಮ ಬದುಕುಗಳನ್ನು ವಿಶ್ಲೇಷಿಸಿಕೊಳ್ಳುವುದಾದರೆ ನಾವು ಸದಾ ಸಮಾಜ, ಸರ್ಕಾರ ಹಾಗೂ ಜನರನ್ನು ದೂಷಿಸುತ್ತಾ ಕಾಲ ಕಳೆಯುತ್ತೇವೆ. ಆ ಸಮಯದಲ್ಲಿ ತನ್ನ ಬದುಕು ತನ್ನ ಜವಾಬ್ದಾರಿ ಎಂದು ಬದುಕಿದವನು ನಮ್ಮನ್ನು ಇಲ್ಲಿಯೇ ಬಿಟ್ಟು ಮುಂದೆ ಹೋಗಿರುತ್ತಾನೆ. ದುಡಿಯುವ ಹತ್ತು ಸಾವಿರದಲ್ಲಿ ಒಂದೆರಡು ಸಾವಿರ ರೂಪಾಯಿಗಳನ್ನು ತನ್ನ ಭವಿಷ್ಯಕ್ಕಾಗಿ ಎಂದು ಉಳಿಸುವವನು ನೋಡ ನೋಡುತ್ತಲೇ ಒಂದಷ್ಟು ಹಣ ಗಳಿಸಿ ಅದನ್ನು ಮತ್ತೆಲ್ಲೋ ಇನ್ವೆಸ್ಟ್ ಮಾಡಿ ಅದನ್ನು ಹೆಚ್ಚಿಸುವ ಕಾರ್ಯಕ್ಕೆ ಮುಂದಾಗುತ್ತಾನೆ.
ಇದನ್ನೂ ಓದಿ: ಮನಿ ಕಹಾನಿ ಅಂಕಣ: ಹಣವನ್ನಷ್ಟೇ ಅಲ್ಲ, ಸಮಯವನ್ನೂ ಹೂಡಿಕೆ ಮಾಡಿ
ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕೋವಿಡ್ ನಂತರದ ಸಮಯದಲ್ಲಿ ಕೆಲವು ಕುಟುಂಬಗಳಲ್ಲಿ ದುಡಿಯುವವರೇ ಇಲ್ಲದಂತಾಗಿದ್ದಾರೆ. ಯಾರೂ ಊಹಿಸದ ರೀತಿಯಲ್ಲಿ ಬಂದ ಕೋವಿಡ್ ಮನೆಯ ದುಡಿಯುವ ಕೈಗಳನ್ನೇ ಇದ್ದಕ್ಕಿದ್ದಂತೆ ಮಾಯ ಮಾಡಿರುತ್ತದೆ. ಹೀಗಾಗಬಹುದು ಎಂಬ ಸಣ್ಣ ಸುಳಿವೂ ಯಾರಿಗೂ ಇರಲಿಲ್ಲ. ಯಾವುದಕ್ಕೂ ಇರಲಿ ಎಂದಾದರೂ ಒಂದು ಇನ್ಷೂರೆನ್ಸ್ ಕಟ್ಟಿದ್ದರೆ ಬಹುತೇಕ ಕುಟುಂಬಗಳು ಇಂದು ನಿಶ್ಚಿಂತೆಯಿಂದಿರಬಹುದಿತ್ತು. ಬದುಕಿದ್ದಾಗ ಕೆಲವರು ಮಾಡಿದ ಒಂದು ಒಳ್ಳೆಯ ಹಾಗೂ ದೃಡ ನಿರ್ಧಾರದಿಂದ ಈಗ ಅವರ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ. ಹಲವರು ನನಗೇನಾದೀತು ಎಂದು ಸುಮ್ಮನಾಗಿದ್ದರೆ ಇನ್ನು ಕೆಲವರು ನಾನು ಸತ್ತ ನಂತರವೂ ನನ್ನ ಮನೆಯವರು ಬೀದಿಗೆ ಬೀಳಬಾರದು ಎಂದು ಆಶಿಸಿ ಟರ್ಮ್ ಇನ್ಷೂರೆನ್ಸ್ ಕಟ್ಟಲಾರಂಭಿಸುತ್ತಾರೆ. ಇನ್ನು ನಮ್ಮ ಹಾಸ್ಯಗಾರರಲ್ಲಿ ಅನೇಕರು ಇನ್ಷೂರೆನ್ಸ್ ಎಂದರೆ ನಾವು ಬದುಕಿರುವಾಗ ಏನೂ ಮಾಡದೆ ನಾವು ಸತ್ತ ನಂತರ ಬೇರೆಯವರನ್ನು ಉದ್ಧಾರ ಮಾಡುವ ಕಂಪನಿಗಳು ಎಂದು ತಿರುಚಿ ಹೇಳುತ್ತಾರೆ. ಆ ಬೇರೆಯವರು ನಮ್ಮದೇ ಕುಟುಂಬದವರು, ಹೆಂಡತಿ, ಮಕ್ಕಳಾಗಿರುತ್ತಾರೆ ಎಂಬುದನ್ನೊಮ್ಮೆ ಒತ್ತಿ ಹೇಳಿದರೆ ಅದೆಷ್ಟೋ ಕುಟುಂಬಗಳಿಗೆ ಅವರು ದಾರಿದೀಪವಾದಂತಾಗುತ್ತಿತ್ತು.
ನಮ್ಮನ್ನು ಉದ್ಧಾರ ಮಾಡಲು ಯಾರೋ ಬರಬೇಕಿಲ್ಲ, ನಮ್ಮ ಬದುಕಿನ ಶಿಲ್ಪಿಗಳು ನಾವೇ ಎಂಬುದನ್ನು ಮೊದಲು ಮನಗಾಣಬೇಕು. ಮನೆಯ ಒಬ್ಬ ಸದಸ್ಯ ಮನಸು ಮಾಡಿದರೆ ಇಡೀ ಮನೆಯ ಎಲ್ಲಾ ಸದಸ್ಯರೂ ಜೀವನ ಪರ್ಯಂತ ನೆಮ್ಮದಿಯಾಗಿ ಬದುಕಬಹುದು. ನಮ್ಮ ಮುಂದಿನ ತಲೆಮಾರು ನಮ್ಮಂತೆ ಕಷ್ಟ ಪಡದಂತೆ ಸುಸ್ಥಿರ ಅಭಿವೃದ್ದಿಗೆ ಮುನ್ನುಡಿ ಬರೆಯಬಹುದು.
ನಮ್ಮ ರಾಜ್ಯದ ಹಣೆ ಬರಹವನ್ನು ನಾವೇ ಬರೆಯುವ ಪರ್ವಕಾಲ ಈ ಚುನಾವಣೆ. ಈ ಸಮಯದಲ್ಲಾದರೂ ನಾವು ನಮ್ಮ ಬದುಕನ್ನು ಉದ್ಧರಿಸಲು ಯಾರೂ ಬರುವುದಿಲ್ಲ ಎಂಬ ಸತ್ಯವನ್ನು ಅರಿತು, ನಮ್ಮ ಹಣೆ ಬರಹವನ್ನು ಶಪಿಸುವುದನ್ನು ಮರೆತು, ನಮ್ಮ ಹಾಗೂ ನಮ್ಮ ಕುಟುಂಬದವರ ಬದುಕನ್ನು ನಾವೇ ಕಟ್ಟಿಕೊಳ್ಳಬೇಕು ಎಂಬ ದಿಕ್ಕಿನಲ್ಲಿ ಆಲೋಚಿಸಿದರೆ ನಮ್ಮೆಲ್ಲರ ಬದುಕಿನಲ್ಲೂ ಒಂದು ಸಣ್ಣ ಬದಲಾವಣೆ ಆರಂಭವಾಗಬಹುದು.
(ಲೇಖಕರು ಫಿನ್ ಪ್ಲಸ್. ಕಾಮ್ ಮುಖ್ಯಸ್ಥರು)
ಇದನ್ನೂ ಓದಿ: ಮನಿ ಕಹಾನಿ ಅಂಕಣ: ಗಣಿತ ಅರ್ಥ ಆಗದಿದ್ದರೂ ಅರ್ಥಶಾಸ್ತ್ರ ಗೊತ್ತಿದ್ದರೆ ಸಾಕು!