Site icon Vistara News

Motivational story : ಮುಂಬಯಿಯಲ್ಲಿದ್ದ ಮಗ ಅಪ್ಪನ ಬಳಿ ಆಸರೆ ಕೇಳಿದ್ದು ಯಾರಿಗಾಗಿ?

Hemanth dead

#image_title

ಕೃಷ್ಣ ಭಟ್‌ ಅಳದಂಗಡಿ- Motivational story
ಹೇಮಂತ್ ಮುಂಬಯಿಗೆ ಬಂದು ಕೆಲವು ವರ್ಷಗಳೇ ಆಗಿದ್ದವು. ಯಾವುದೋ ಸಣ್ಣ ಉದ್ಯೋಗ ಮಾಡುತ್ತಿದ್ದ. ಊರಿಗೆ ಆಗಾಗ ಹೋಗುತ್ತಿದ್ದರೆ ದುಡಿದ ಹಣವೆಲ್ಲ ಖರ್ಚಾಗುತ್ತದೆ ಎಂಬ ಕಾರಣಕ್ಕೆ ಅದನ್ನೂ ಮಿಸ್ ಮಾಡುತ್ತಿದ್ದ. ಒಂದಿಷ್ಟು ಹಣವನ್ನು ಮನೆಯಲ್ಲಿರುವ ಅಪ್ಪ-ಅಮ್ಮನಿಗೆ ಕಳುಹಿಸುತ್ತಿದ್ದ. ಈ ನಡುವೆ ಕೊರೊನಾ ಬಂತು. ದುಡಿಮೆಗೂ ಅವಕಾಶ ಇರಲಿಲ್ಲ. ಇಂಥ ಹೊತ್ತಿನಲ್ಲಿ ಉಳಿಸಿದ್ದ ಹಣ ಸ್ವಲ್ಪ ಮಟ್ಟಿಗೆ ಸಹಾಯಕ್ಕೆ ಬಂತು.

ಅದೊಂದು ದಿನ ಹೇಮಂತ್ ಅಪ್ಪನಿಗೆ ಕರೆ ಮಾಡಿದ: ಅಪ್ಪಾ.. ಇಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ. ನಾನು ಊರಿಗೆ ಬರಬೇಕು ಅಂದುಕೊಂಡಿದ್ದೇನೆ.
ಅಪ್ಪನಿಗೆ ಏನು ಮಾಡಬೇಕು ಎಂದು ತೋಚಲಿಲ್ಲವಾದರೂ ʻಬಾ ಮಗ.. ಇಲ್ಲಿ ಏನಾದರೂ ಬೇರೆ ವ್ಯವಹಾರ ನೋಡೋಣ’ ಎಂದರು.
ಅಷ್ಟು ಹೊತ್ತಿಗೆ ಹೇಮಂತ್ ಹೇಳಿದ: ಅಪ್ಪಾ, ನಾನು ಊರಿಗೆ ಬರುವಾಗ ನನ್ನೊಟ್ಟಿಗೆ ನನ್ನೊಬ್ಬ ಫ್ರೆಂಡ್ ಕೂಡಾ ಬರ್ತಿದ್ದಾನೆ.. ಓಕೇನಾ?

ಅಪ್ಪ ಹೇಳಿದರು: ಹೌದಾ? ಪರ್ವಾಗಿಲ್ಲ.. ಕರೆದುಕೊಂಡು ಬಾ.. ಊರಿನ ಹುಡುಗನೇನಾ?
ಹೇಮಂತ್: ಊರಿನವನೇ.. ಆದರೆ ಅವನಿಗೆ ಸ್ವಲ್ಪ ಹುಷಾರಿಲ್ಲ. ಅವನಿಗೆ ಒಂದು ಅಪಘಾತ ಆಗಿ ಒಂದು ಕಾಲು, ಒಂದು ಕೈ ಮತ್ತು ಒಂದು ಕಣ್ಣು ಕಳೆದುಕೊಂಡಿದ್ದಾನೆ. ಅವನಿಗೆ ಬೇರೆ ಯಾರೂ ಇಲ್ಲ. ಸೋ.. ನನ್ನೊಟ್ಟಿಗೆ ಬರ್ತಿದ್ದಾನೆ.

ಅಪ್ಪ ಸ್ವಲ್ಪ ಯೋಚನೆ ಮಾಡಿ ನಂತರ ಹೇಳಿದರು: ಹೌದಾ, ನಿನ್ನ ಫ್ರೆಂಡ್ ವಿಷಯ ಕೇಳಿ ಬೇಸರ ಆಗ್ತದೆ.. ಬರ್ಲಿ ಈಗ. ಕೆಲವು ದಿನ ಮನೆಯಲ್ಲಿದ್ದು ನಂತ್ರ ಬೇರೆ ಏನಾದರೂ ವ್ಯವಸ್ಥೆ ಮಾಡೋಣ..
ಹೇಮಂತ್ ಹೇಳಿದ: ಅಪ್ಪಾ.. ಅವನಿಗೆ ಬೇರೆ ವ್ಯವಸ್ಥೆ ಮಾಡುವುದು ಬೇಡ.. ಅವನು ನಮ್ಮ ಮನೆಯಲ್ಲೇ ಇರ್ಲಿ ಅಲ್ವಾ

ಅಪ್ಪ ಹೇಳಿದರು: ಮಗಾ ನೀನು ಕೇಳ್ತಾ ಇರುವುದು ತುಂಬ ಗಂಭೀರ ವಿಷಯ. ಈ ರೀತಿಯ ಒಬ್ಬ ವಿಕಲಚೇತನನನ್ನು ಜೀವನಪೂರ್ತಿ ಸಾಕುವುದು ತುಂಬ ಹೊರೆಯಾಗುತ್ತದೆ ಅಲ್ವಾ? ನಾವು ಕೂಡಾ ಶ್ರೀಮಂತರೇನೂ ಅಲ್ಲ. ಬದುಕಬೇಕಲ್ವಾ? ಒಂದು ಕೆಲಸ ಮಾಡು ನೀನು ನಿನ್ನ ಪಾಡಿಗೆ ಬಾ. ಅವನಿಗೆ ದೇವರು ಬೇರೆ ದಾರಿ ತೋರಿಸಬಹುದು. ಅವನನ್ನು ನೀನು ಮರೆತುಬಿಡು..

ಅಷ್ಟು ಮಾತುಕತೆಯ ನಂತರ ಫೋನ್ ಕಟ್ ಆಯಿತು.
ಕೆಲವು ದಿನಗಳ ನಂತರ ಅಪ್ಪನ ಮೊಬೈಲ್‍ಗೆ ಒಂದು ಕಾಲ್ ಬಂತು: ನಾವು ದಾದರ್ ಪೊಲೀಸ್ ಸ್ಟೇಷನ್‍ನಿಂದ ಮಾತಾಡ್ತಿರೋದು.. ಇಲ್ಲೊಬ್ಬ ಯುವಕ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನ ಮೊಬೈಲ್‍ನಲ್ಲಿ ʻಅಪ್ಪ’ ಅಂತ ನಿಮ್ಮ ನಂಬರ್ ಸೇವ್ ಆಗಿತ್ತು.

ತುಂಬ ನೋವಿನಿಂದ ಅಪ್ಪ-ಅಮ್ಮ ಇಬ್ಬರೂ ಮುಂಬಯಿಗೆ ಧಾವಿಸಿದರು. ಅಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಶವವನ್ನು ಇಡಲಾಗಿತ್ತು. ಪೊಲೀಸರು ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಿ, ನೋಡಿ, ಇವನು ನಿಮ್ಮ ಮಗನೇನಾ ಅಂತ ನೋಡಿ ಅಂದರು.
ಹೇಮಂತ್‍ನ ತಂದೆ ಶವದ ಬಟ್ಟೆಯನ್ನು ಸರಿಸಿ ನೋಡಿದರು. ಶವಕ್ಕೆ ಒಂದು ಕಾಲಿರಲಿಲ್ಲ, ಒಂದು ಕೈಯೂ ಇರಲಿಲ್ಲ. ಕಣ್ಣೂ ಇರಲಿಲ್ಲ.

ಇದನ್ನೂ ಓದಿ | Motivational story | ಗುಜರಿಯಲ್ಲಿ ಬಿದ್ದ ಕಬ್ಬಿಣ ತುಂಡಿನ ಬೆಲೆಯೇ ಬೇರೆ, ಅದನ್ನೇ ಬಳಸಿ ಮಾಡಿದ ಮೂರ್ತಿ ಬೆಲೆಯೇ ಬೇರೆ!

Exit mobile version