ಕೃಷ್ಣ ಭಟ್ ಅಳದಂಗಡಿ- Motivational story
ವಿಶ್ವನಾಥ್ ತಮ್ಮ ಹೊಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಆಫೀಸಿಗೆ ಹೊರಟಿದ್ದರು. ಲೇಟಾಯ್ತು ಅಂತ ಸ್ವಲ್ಪ ವೇಗವಾಗಿಯೇ ಹೋಗ್ತಾ ಇದ್ದರು. ಆಗ ಒಂದು ತಿರುವಿನಲ್ಲಿ ಸಣ್ಣ ನಾಯಿ ಮರಿಯೊಂದು ಅಡ್ಡ ಬಂತು. ವಿಶ್ವನಾಥ್ ಎಷ್ಟು ಕಂಟ್ರೋಲ್ ಮಾಡಿದರೂ ಸಾಧ್ಯವಾಗಲೇ ಇಲ್ಲ. ಸ್ಕೂಟರ್ ನಾಯಿ ಮರಿ ಮೇಲೆ ಹರಿದೇಬಿಟ್ಟಿತು. ಒಮ್ಮೆಗೇ ಎರಡೂ ಬ್ರೇಕ್ ಹಿಡಿದಿದ್ದರಿಂದ ಸ್ಕೂಟರ್ ಕೂಡಾ ನಿಯಂತ್ರಣ ತಪ್ಪಿ ಪಲ್ಟಿ ಆಯಿತು. ವಿಶ್ವನಾಥನ ತಲೆ ಮಾರ್ಗದ ಪಕ್ಕದ ವಿದ್ಯುತ್ ಕಂಬಕ್ಕೆ ಬಡಿಯಿತು.
ಸ್ವಲ್ಪ ಹೊತ್ತಿನಲ್ಲಿ ವಿಶ್ವನಾಥ್‍ಗೆ ಪ್ರಜ್ಞೆ ಬಂದಂತೆ ಆಯಿತು. ಕಣ್ತೆರೆದು ನೋಡಿದರೆ ಸ್ಕೂಟರ್ ಕೂಡಾ ಇಲ್ಲ. ಯಾವುದೋ ಒಂದು ರಸ್ತೆ ಕಂಡಿತು. ಅದರಲ್ಲಿ ನಡೆಯಲು ಶುರು ಮಾಡಿದರು. ಪಕ್ಕದಲ್ಲೇ ಆ ನಾಯಿ ಮರಿ!
ವಿಶ್ವನಾಥ್ ನಾಯಿ ಮರಿಗೆ ಹೇಳಿದ: ಸಾರಿ ಕಣೋ, ಯಾವತ್ತೂ ನಾನು ಯಾರಿಗೂ ಡಿಕ್ಕಿ ಹೊಡೆದಿರಲಿಲ್ಲ. ಇವತ್ತು ನಿಂಗೆ ಹೊಡೆದುಬಿಟ್ಟೆ. ಏಟಾಯ್ತಾ?
ನಾಯಿ ಮರಿ ಸುಮ್ಮನೆ ಬಾಲ ಆಡಿಸಿತು. ಹತ್ತಿರಕ್ಕೆ ಬಂದು ಕಾಲು ಹಿಡಿದುಕೊಂಡಿತು.
ಅವರಿಬ್ಬರೂ ಮುಂದಕ್ಕೆ ಹೋಗುತ್ತಲೇ ಇದ್ದರು. ಆದರೆ ಎಷ್ಟು ನಡೆದರೂ ದಾರಿ ಮುಗಿಯುತ್ತಿಲ್ಲ. ವಿಶ್ವನಾಥನಿಗೆ ಬಾಯಾರಿಕೆ ಆಯಿತು. ಅಯ್ಯೋ ಮನೆ ತಲುಪುವುದಕ್ಕೆ ಇನ್ನೆಷ್ಟು ದೂರವೋ, ಇಲ್ಲಿ ಯಾರೂ ಕಾಣಿಸುತ್ತಲೂ ಇಲ್ಲ. ಎಲ್ಲಿಗೆ ಬಂದಿದ್ದೇವೆ ನಾವು ಅಂದುಕೊಳ್ಳುತ್ತಾ ಎಲ್ಲಾದರೂ ನೀರು ಸಿಗಬಹುದು ಅಂತ ಅತ್ತಿತ್ತ ನೋಡುತ್ತಾ ಸಾಗಿದರು.
ಕೊನೆಗೆ ಒಂದು ದೊಡ್ಡ ಕಾಂಪೌಂಡ್ ಕಾಣಿಸಿತು. ಅದು ಬಂಗಾರದ ಬಣ್ಣದ್ದು. ವಿಶ್ವನಾಥ ಅಲ್ಲಿಗೆ ಹೋದಾಗ ಒಬ್ಬ ಸೆಕ್ಯುರಿಟಿ ಮ್ಯಾನ್ ತಡೆದು ನಿಲ್ಲಿಸಿದ. ಏನಾಗಬೇಕು ಎಂದು ಕೇಳಿದ.
ಆಗ ವಿಶ್ವನಾಥ್: ತುಂಬ ಬಾಯಾರಿಕೆ ಆಗ್ತಿದೆ. ಸ್ವಲ್ಪ ನೀರು ಸಿಗಬಹುದಾ ಎಂದು ಕೇಳಿದ.
ಆಗ ಆ ಭದ್ರತಾ ಸಿಬ್ಬಂದಿ ಹೇಳಿದ: ಆಯ್ತು ಬಾ ಒಳಗೆ, ನೀರು ಕೊಡುತ್ತೇನೆ. ನೀನು ಮಾತ್ರ ಬರಬೇಕು. ಆ ನಾಯಿ ಹೊರಗೇ ಇರಲಿ. ಇಲ್ಲಿ ಪ್ರಾಣಿಗಳಿಗೆ ನೀರು ಕೊಡುವುದಿಲ್ಲ.
ಆಗ ವಿಶ್ವನಾಥ ಹೇಳಿದ: ಇಲ್ಲ ಸ್ವಾಮಿ, ನಾಯಿ ಕೂಡಾ ನನ್ನ ಜತೆ ಬರಲಿ, ಅದೂ ನಡೆದು ನಡೆದು ಸುಸ್ತಾಗಿದೆ. ಅದಕ್ಕೂ ನೀರು ಬೇಕು.
ಸೆಕ್ಯುರಿಟಿ ಮ್ಯಾನ್ ಹೇಳಿದ: ನಿನಗೆ ಬೇಕಾದರೆ ನೀರು ಕೊಡುತ್ತೇನೆ, ಒಳಗೆ ಬಂದರೆ. ನಾಯಿಗೆ ಕೊಡಲಾಗದು.
ಆಗ ವಿಶ್ವನಾಥ್ ಸಿಟ್ಟಿನಿಂದಲೇ ಹೇಳಿದ: ಇಲ್ಲ ಸ್ವಾಮಿ, ನಾಯಿಗೆ ಕೊಡದಿದ್ದರೆ ನನಗೂ ಬೇಡ. ಬೇರೆ ಕಡೆ ಹುಡುಕಿಕೊಳ್ಳುತ್ತೇನೆ.
ಅಷ್ಟು ಹೇಳಿ ವಿಶ್ವನಾಥ ಅಲ್ಲಿಂದ ಹೊರಟ. ಸ್ವಲ್ಪ ದೂರದಲ್ಲಿ ಇನ್ನೊಂದು ಕಾಂಪೌಂಡ್ ಮತ್ತು ಪ್ರವೇಶ ದ್ವಾರ ಕಂಡಿತು. ಅಲ್ಲಿನ ಸೆಕ್ಯುರಿಟಿ ಬಳಿ ಹೋಗಿ ಕೇಳಿದ: ದಯವಿಟ್ಟು ಸ್ವಲ್ಪ ನೀರು ಕೊಡಬಹುದಾ?
ಆಗ ಸೆಕ್ಯುರಿಟಿ ಮ್ಯಾನ್ ಹೇಳಿದ: ಖಂಡಿತ ಒಳಗೆ ಬನ್ನಿ.
ಆಗ ವಿಶ್ವನಾಥ ಕೇಳಿದ: ನನ್ನ ನಾಯಿಗೂ ನೀರು ಬೇಕಿತ್ತು. ಅದನ್ನು ಒಳಗೆ ಕರೆದುಕೊಂಡು ಬರಬಹುದಾ?
ಆಗ ಸೆಕ್ಯುರಿಟಿಯವನು, ಓ ಖಂಡಿತವಾಗಿ ಕರೆದುಕೊಂಡು ಬನ್ನಿ ಎಂದ.
ಇಬ್ಬರೂ ಒಳಗೆ ಹೋದರು. ಅಲ್ಲಿದ್ದ ಪಾತ್ರೆಯಿಂದ ಸ್ವಲ್ಪ ನೀರನ್ನು ತೆಗೆದ ವಿಶ್ವನಾಥ್ ಮೊದಲಿಗೆ ನಾಯಿಗೆ ಕುಡಿಸಿದ. ಬಳಿಕ ತಾನೂ ಕುಡಿದ.
ಬಾಯಾರಿಕೆ ಇಂಗಿದ ಮೇಲೆ ವಿಶ್ವನಾಥ ಕೇಳಿದ: ಅಲ್ಲ ಸ್ವಾಮಿ ನಮಗೆ ಮೊದಲು ಇಂಥಹುದೇ ಒಂದು ಕಟ್ಟಡ, ಕಂಪೌಂಡ್ ಸಿಕ್ಕಿತು. ಅಲ್ಲೂ ನೀರು ಕೇಳಿದೆವು. ಅವರು ನಾಯಿಗೆ ನೀರು ಕೊಡುವುದಿಲ್ಲ ಎಂದು ಹೇಳಿದರು. ನೀವು ನೋಡಿದ್ರೆ ಯಾವ ತಕರಾರೂ ಇಲ್ಲದೆ ನೀರು ಕೊಟ್ರಲ್ವಾ.. ಅದು ಹೇಗೆ? ಅಂದ ಹಾಗೆ, ಯಾವ ಊರಿದು?
ಸೆಕ್ಯುರಿಟಿ ಮ್ಯಾನ್ ಹೇಳಿದ: ಇದು ಸ್ವರ್ಗ.ವಿಶ್ವನಾಥ್‍ಗೆ ಆಶ್ಚರ್ಯ ಆಯ್ತು.. `ಹೌದಾ.. ಹಾಗಿದ್ರೆ ಅದು?’
ದ್ವಾರಪಾಲಕ ಹೇಳಿದ: ಅದು ನರಕ!
ವಿಶ್ವನಾಥ ಅತ್ಯಂತ ಸಂಯಮದಿಂದ ಹೇಳಿದ: ನನ್ನ ಪಾಲಿಗೆ ಈ ನಾಯಿ ಎಲ್ಲಿರುತ್ತದೋ ಅದೇ ಸ್ವರ್ಗ.
ಇದನ್ನೂ ಓದಿ| Motivational story : ವಿಶಾಲಾಕ್ಷಮ್ಮನ ಅಪಮಾನಕ್ಕೆ ಗಗನಸಖಿ ಮಾಡಿದ್ರು ಸನ್ಮಾನ
ಇದನ್ನೂ ಓದಿ| Motivational story: ಕುಂಟ ನಾಯಿ ಮರಿಯ ನೋವು ಆ ಮಗುವಿಗಷ್ಟೇ ಅರ್ಥವಾಯ್ತು…