Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಮಹಾನ್ ಬೌದ್ಧಿಕ ಕ್ಷತ್ರಿಯ ಸೀತಾರಾಮ ಗೋಯಲ್

sitaram goyal

ಕೋಟ್ಯಂತರ ಭಾರತೀಯರಲ್ಲಿ ಇಂದು ಜಾಗೃತಿ ಮೂಡಿದ್ದರೆ, ಹೊಸ ಪ್ರೇರಣೆ ದೊರೆತಿದ್ದರೆ, ಅದಕ್ಕೆ ಪ್ರಮುಖವಾಗಿ – ಪ್ರತ್ಯಕ್ಷವಾಗಿ – ಪರೋಕ್ಷವಾಗಿ ಕಾರಣರಾದವರು ಸೀತಾರಾಮ ಗೋಯಲ್ (Sitaram Goyal) ಮತ್ತು ಪತ್ರಕರ್ತ ಅರುಣ್ ಶೌರಿ (Arun Shourie) ಅವರು.

ಸಹಸ್ರ ಸಹಸ್ರ ವರ್ಷಗಳ ಅದ್ಭುತ ಇತಿಹಾಸ – ಪರಂಪರೆಗಳ ಭಾರತವರ್ಷವಿಂದು ಸಂಕ್ರಮಣ ಸ್ಥಿತಿಯಲ್ಲಿದೆ. ಸುಷುಪ್ತಾವಸ್ಥೆಯಲ್ಲಿದ್ದ ನಮ್ಮ ದೇಶವನ್ನು ಎಚ್ಚರಿಸಿದ ಸ್ವಾಮಿ ವಿವೇಕಾನಂದರು (Swami Vivekananda) ಹೊಸ ಪರ್ವದ ಅಧ್ವರ್ಯುವಾದರು. “ಆರ್ಯ ಸಮಾಜ”ವನ್ನಾರಂಭಿಸಿದ ಸ್ವಾಮಿ ದಯಾನಂದ ಸರಸ್ವತಿಗಳು, ಮಹರ್ಷಿ ಅರವಿಂದರು ಬೆಳಕು ತೋರಿದರು. 19 ಮತ್ತು 20ನೆಯ ಶತಮಾನಗಳಲ್ಲಿ, ಬ್ರಿಟಿಷರು – ಕಮ್ಯೂನಿಸ್ಟರು ವಿಕೃತಗೊಳಿಸಿದ್ದ “ಭಾರತೀಯ ಇತಿಹಾಸ”ವನ್ನು (indian history) ಅಪಾರವಾದ ಪರಿಶ್ರಮದಿಂದ ಸರಿದಾರಿಗೆ ತರಲು ಬಹಳ ದೊಡ್ಡ ಕೊಡುಗೆ ನೀಡಿದವರು ಇತಿಹಾಸರಚನಾ ಶಾಸ್ತ್ರಜ್ಞರಾದ ಸೀತಾರಾಮ ಗೋಯಲ್ ಮತ್ತು ಪತ್ರಕರ್ತ ಅರುಣ್ ಶೌರಿ ಅವರು.

ಸೀತಾರಾಮ ಗೋಯಲ್ ಅವರು ಜನಿಸಿದ್ದು 1921ರ ಅಕ್ಟೋಬರ್ 16ರಂದು. ಇಂದು ಅವರ ಜನ್ಮ ದಿನ. ಸೀತಾರಾಮ ಗೋಯಲ್ ಅವರ “ವಾಯ್ಸ್ ಆಫ್ ಇಂಡಿಯಾ” ಸರಣಿಯ ಗ್ರಂಥಗಳು, ಭಾರತವನ್ನು ಮತ್ತೆ ಪರಮ ವೈಭವದ ದಿನಗಳಿಗೆ ಕೊಂಡೊಯ್ಯುವಂತಹ ಪ್ರೇರಣೆಯನ್ನು ತುಂಬುವಷ್ಟು ಮಹತ್ತ್ವಪೂರ್ಣವಾದಂತಹವು. ಸೀತಾರಾಮ ಗೋಯಲ್ ಅವರ ಜನ್ಮದಿನದ (Sitaram Goyal birthday) ಈ ಸಂದರ್ಭದಲ್ಲಿ ಅವರನ್ನು, ಅವರ ಕೊಡುಗೆಯನ್ನು ಸ್ಮರಿಸೋಣ.

ಭಾರತೀಯ “ಇತಿಹಾಸ”ವು ಪ್ರಾರಂಭವಾಗುವುದೇ ವಿದೇಶೀ ಆಕ್ರಮಣಗಳಿಂದ! ಅಲೆಕ್ಸಾಂಡರ್‌ನಿಂದ ಆರಂಭವಾಗಿ ಬ್ರಿಟಿಷರವರೆಗೆ ನಮ್ಮ ಇತಿಹಾಸವು ಬರಿಯ ಸೋಲಿನ ಕಥೆಯಾಗಿ ಹೋಗಿದೆ, ಅಳುಬುರುಕರ ರೋದನವಾಗಿ ಹೋಗಿದೆ! ಭಾರತದ ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ಆಡಳಿತ ಎಲ್ಲವೂ ಎಲ್ಲವೂ ಮೊಘಲರ ಇಲ್ಲವೇ ಬ್ರಿಟಿಷರ ಕೊಡುಗೆಗಳು ಮಾತ್ರ, ಎನ್ನುವಂತಾಗಿದೆ. ದೇಶವೆಲ್ಲ ಹೆಮ್ಮೆಪಡುವ ಇತಿಹಾಸ-ಸಂಗತಿಗಳನ್ನೂ, ಪರಂಪರೆಯನ್ನೂ ಅಲ್ಲಗಳೆಯುವುದು ಮತ್ತು ಸಂಕುಚಿತವೂ – ಹಿಂಸಾಪ್ರಧಾನವೂ ಆದ ಆಳ್ವಿಕೆಗಳನ್ನು ವೈಭವೀಕರಿಸುವುದು ಈ ದೇಶದ ಮಾರ್ಕ್ಸ್‌ವಾದಿ “ಇತಿಹಾಸಕಾರ”ರ ದುರುದ್ದೇಶವಾಗಿತ್ತು, ಷಡ್ಯಂತ್ರವಾಗಿತ್ತು. ಭಾರತೀಯರ ಅಸ್ಮಿತೆ-ಆತ್ಮಾಭಿಮಾನಗಳನ್ನು ನಾಶಮಾಡಿಬಿಡುವ ಬ್ರಿಟಿಷರ “ವಾರಸಿಕೆ”ಯನ್ನು ಈ ಕಮ್ಯೂನಿಸ್ಟರು ಸ್ವಾತಂತ್ರ್ಯೋತ್ತರ ಪರ್ವದಲ್ಲಿ ಮುಂದುವರಿಸಿಕೊಂಡುಹೋದರು.

ಸೀತಾರಾಮ ಗೋಯಲ್ ಮತ್ತು ಅರುಣ್ ಶೌರಿ ಅವರು ಅಕ್ಷರಶಃ ಸಾವಿರಾರು ಸಾಕ್ಷ್ಯಾಧಾರಗಳನ್ನು, ದಾಖಲೆಗಳನ್ನು ನೀಡಿ, ಈ ಕಮ್ಯೂನಿಸ್ಟ್ – ಇಸ್ಲಾಂ – ಕ್ರೈಸ್ತಮತಗಳ ಕುತಂತ್ರ, ದ್ರೋಹಗಳನ್ನು ಬಯಲಿಗೆಳೆದಿದ್ದಾರೆ. ಅಪಾರವಾದ ಅಧ್ಯಯನದಿಂದ ಭಾರತೀಯ ಇತಿಹಾಸದ ನಿಜಸ್ವರೂಪವನ್ನು ಜನರ ಮುಂದೆ ಪ್ರಸ್ತುತಪಡಿಸಿದ್ದಾರೆ. ಮೂರು ದಶಕಗಳ ಹಿಂದೆಯೇ, ಗೋಯಲ್ ಅವರು ಅಕ್ರಮ ನುಸುಳುಕೋರರ ಬಗೆಗೆ, ಫಿಫ್ತ್ (FIFTH COLUMN) ಕಾಲಂ – ಸ್ಲೀಪರ್ ಸೆಲ್‍ಗಳ ಬಗೆಗೆ ಎಚ್ಚರಿಕೆ ನೀಡಿರುವುದು ಅಚ್ಚರಿ ಹುಟ್ಟಿಸುತ್ತದೆ. ಹಾಗೆ ಬೆಳೆದುನಿಂತ ಅಪಾಯಗಳ ವಿಷಫಲಗಳನ್ನು ನಾವಿಂದು ನಿತ್ಯ ಉಣ್ಣುತ್ತಿದ್ದೇವೆ, ಹಬ್ಬುತ್ತಲೇ ಇರುವ ವಿಷವೃಕ್ಷಗಳ ಬಿಳಲು-ಬೇರುಗಳನ್ನು ಪ್ರತಿದಿನ ನಾವು ಎಡವುತ್ತಿದ್ದೇವೆ, ಎಡತಾಕುತ್ತಿದ್ದೇವೆ.

ನಮ್ಮಲ್ಲಿ ಮಹಾಪುರುಷರು ಅನೇಕರು. ಕಲಾವಿದರು, ವೇದ – ಶಾಸ್ತ್ರ ಪಾರಂಗತರು, ಋಷಿಗಳು, ಆಡಳಿತಗಾರರು, ನರ್ತಕರು, ವೀರರು, ನೀವು ಯಾವ ಕ್ಷೇತ್ರವನ್ನೇ ನೋಡಿ, ಮಹಾನ್ ಸಾಧಕರು ಸಿಕ್ಕುತ್ತಾರೆ. ಅಷ್ಟೇ ಅಲ್ಲ; ಜ್ಞಾನಿಗಳು, ವಿರಾಗಿಗಳು, ಯೋಗಿಗಳು, ಅವಧೂತರು, ನಮ್ಮಲ್ಲಿರುವಷ್ಟು ಬೇರೆಲ್ಲೂ ಇರಲಾರರೋ ಏನೋ! ವೇದಗಳು, ಉಪನಿಷತ್ತುಗಳು, ಮಹಾಕಾವ್ಯಗಳು, ಪರಂಪರೆ, ಅಧ್ಯಾತ್ಮ – ಯೋಗ ಮುಂತಾದವುಗಳ ಬಗೆಗೆ ಗೌರವದಿಂದ – ಪ್ರೀತಿಯಿಂದ ಮೆಚ್ಚಿ ಮಾತನಾಡುವವರು ತುಂಬ ಜನ. ನಮ್ಮ ಹಿಂದೂ ಸಂಸ್ಕೃತಿಯ (Hindu Culture) ಬಗೆಗೆ ಅನೇಕ ವಿದೇಶೀಯರೂ ನಮ್ಮಂತೆಯೇ ಅಭಿಮಾನವಿಟ್ಟುಕೊಂಡಿದ್ದಾರೆ. ಆದರೆ ನಾವು ಅನೇಕ ಬಾರಿ ಗಮನಿಸದ, ಗಂಭೀರವಾಗಿ ಪರಿಗಣಿಸದ ವಿಷಯವೊಂದಿದೆ. ಹಿಂದೂ ಸಮಾಜವು ಉಳಿಯದೇ ಹೋದರೆ, ಈ ನಮ್ಮ ಕಲೆ, ಶಿಲ್ಪಗಳು, ನೃತ್ಯ, ಚಿತ್ರಕಲೆ, ಸಾಹಿತ್ಯ, ಭಾಷೆಗಳು ಉಳಿಯುತ್ತವೆಯೇ, ಎಂಬುದನ್ನು ಪ್ರಶ್ನಿಸಿಕೊಳ್ಳಲು ನಾವು ಮರೆತುಬಿಡುತ್ತೇವೆ. ಸಾರಾಂಶ ಇಷ್ಟೇ. ಹಿಂದೂ ಸಮಾಜವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ. ಹಿಂದೆಂದಿಗಿಂತಲೂ ಇಂದು ಈ ಅನಿವಾರ್ಯತೆ ತುಂಬ ಹೆಚ್ಚಾಗಿದೆ. ಮಹತ್ತ್ವದ ಈ ಅಂಶವನ್ನು ಒತ್ತಿ ಹೇಳಿದ ಅಪರೂಪದ ಚಿಂತಕ – ಲೇಖಕ ಸೀತಾರಾಮ ಗೋಯಲ್.

ಎಳೆವಯಸ್ಸಿನಲ್ಲಿ ಗೋಯಲ್‍ರಿಗೆ ಸ್ವಾಮಿ ದಯಾನಂದ ಸರಸ್ವತಿ ಅವರ “ಸತ್ಯಾರ್ಥ ಪ್ರಕಾಶ” ಮಹಾಗ್ರಂಥದ ಪರಿಚಯವಾಯಿತು. “ಸತ್ಯಾರ್ಥ ಪ್ರಕಾಶ”ದ ತೀಕ್ಷ್ಣ ಸತ್ಯದ ಪ್ರಖರತೆಯಿಂದ ಗೋಯಲ್‍ರ ಎಳೆಯ ಮನಸ್ಸು ವಿಚಲಿತವಾಯಿತು. ಮೊಹಮ್ಮದ್ ಅಲಿ ಜಿನ್ನಾ ಬೀದಿ ಕಾಳಗಕ್ಕಾಗಿ ನೀಡಿದ ಕರೆ ಕೋಲ್ಕತ್ತದಲ್ಲಿ ಭೀಷಣ ಪರಿಣಾಮವನ್ನುಂಟುಮಾಡಿತು. 1946ರ ಆಗಸ್ಟ್ 16 – 17ರ ಹಿಂಸೆ, ಅತ್ಯಾಚಾರ, ಕೊಲೆ, ದೊಂಬಿ, ಆಸ್ತಿ ಪಾಸ್ತಿ ನಾಶ, ಲೂಟಿ, ಬೆಂಕಿ ಹಚ್ಚುವ ಮತೀಯ ಗಲಭೆಗಳನ್ನು ಗೋಯಲ್ ಕಣ್ಣಾರೆ ಕಂಡರು. ರಸ್ತೆರಸ್ತೆಗಳಲ್ಲಿ ಹೆಣಗಳ ರಾಶಿ ಬಿದ್ದಿತು. ಹೂಗ್ಲಿ ನದಿಯಲ್ಲಿ ಹೆಣಗಳು ತೇಲಿಹೋದವು, ನದಿಯು ರಕ್ತದಿಂದ ಕೆಂಪಾಯಿತು. ಗುಂಪು ಗಲಭೆ, ದೊಂಬಿಗಳ ರಕ್ಕಸನೃತ್ಯಕ್ಕೆ ಗೋಯಲ್ ಸಾಕ್ಷಿಯಾದರು. ಸ್ವತಃ ಅವರು ಜೀವಸಹಿತ ಉಳಿದದ್ದೂ ವಿಸ್ಮಯವೇ.

ಅನಂತರದ ಕಾಲಘಟ್ಟದಲ್ಲಿ ಫ್ರೆಂಚ್ ಸಮಾಜವಾದಿ ಲೇಖಕಿ ಸುಸೇನ್ ಲ್ಯಾಬಿನ್ ಬರೆದ “ಸ್ಟ್ಯಾಲಿನ್ನನ ರಷ್ಯಾ” ಓದಿದಾಗ, ಸೋವಿಯತ್ ಒಕ್ಕೂಟದ ವಿಭಿನ್ನ ಮುಖಗಳು ಪರಿಚಯವಾದವು. ಇಂದು ಅಮೆರಿಕಾ (USA) ಏನಾಗಿದೆಯೋ, ಅದು ಸೋವಿಯತ್ ಒಕ್ಕೂಟದ ನಾಳೆಯ ಗುರಿಯಾಗಿತ್ತು. ಪ್ರಭುತ್ವ – ನಿರ್ದೇಶಿತ (State Sponsored) ಬಂಡವಾಳಶಾಹಿ ಮತ್ತು ವ್ಯವಸ್ಥಿತ ಭಯೋತ್ಪಾದನೆಗಳು ರಷ್ಯಾ ಅನುಸರಿಸಿದ ಮಾರ್ಗಗಳಾಗಿದ್ದರೆ, ಅಮೆರಿಕಾ ದೇಶವು ಮಾರುಕಟ್ಟೆ-ದುಃಶಕ್ತಿಗಳಿಗೆ, ಲಾಭಪ್ರದತೆಗೆ ಆದ್ಯತೆ ನೀಡಿತ್ತು. ಮನುಷ್ಯ ಜೀವನದ ಔನ್ನತ್ಯಗಳನ್ನು ಎಲ್ಲರೂ ಮರೆತಿದ್ದರು. ಬೌದ್ಧಿಕ ಗೊಂದಲದ ಈ ಸಂಕ್ರಮಣ ಸ್ಥಿತಿಯಲ್ಲಿ, ಗೆಳೆಯ ರಾಮಸ್ವರೂಪರ ವಿಚಾರಗಳು, ಸಲಹೆ, ಮಾರ್ಗದರ್ಶನಗಳು ಗೋಯಲ್‍ರಿಗೆ ದಿಕ್ಕು ತೋರಿದವು. ಗೋಯಲ್‍ರ “ಹೌ ಐ ಬಿಕೇಮ್ ಎ ಹಿಂದು” ಕೃತಿಯು ಅವರ ಬೌದ್ಧಿಕ ಆತ್ಮವೃತ್ತಾಂತ. ಆರ್ಯಸಮಾಜದಿಂದ ಗಾಂಧೀವಾದದೆಡೆಗೆ, ಗಾಂಧೀವಾದದಿಂದ ಕಮ್ಯೂನಿಸಂ ಕಡೆಗೆ, ಕಮ್ಯೂನಿಸಂನಿಂದ ಭಾರತೀಯ ತತ್ತ್ವಜ್ಞಾನ – ಅಧ್ಯಾತ್ಮಗಳಿಗೆ ಗೋಯಲ್‍ರು ಹಿಂತಿರುಗಿದ ಹಾದಿಯ ಅಪೂರ್ವ ಚಿತ್ರಣವನ್ನು ಈ ಕೃತಿಯಲ್ಲಿ ಕಾಣಬಹುದು.

sitaram goyal books

ಹಿಂದೀ, ಉರ್ದು, ಬಂಗಾಳಿ, ಸಂಸ್ಕೃತ, ಪರ್ಷಿಯನ್ ಹಾಗೂ ಇಂಗ್ಲಿಷ್ ಭಾಷೆಗಳನ್ನು ಕಲಿತ ಸೀತಾರಾಮ ಗೋಯಲ್‍ ಅವರು ಸಾಹಿತ್ಯ, ಅಧ್ಯಾತ್ಮ, ತತ್ತ್ವಜ್ಞಾನ, ಧರ್ಮ, ಮತ, ಇತಿಹಾಸ, ಸಮಾಜಶಾಸ್ತ್ರ ಮತ್ತು ಪ್ರಾಚೀನ – ಮಧ್ಯಕಾಲೀನ – ಆಧುನಿಕ ಸಂಸ್ಕೃತಿ – ನಾಗರಿಕತೆಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಮಹಾಭಾರತ, ಸುತ್ತಪಿಟಕ, ಪ್ಲೇಟೋ ಮತ್ತು ಮಹರ್ಷಿ ಅರವಿಂದರಿಂದ ಗೋಯಲ್‍ ಅವರು ಸ್ಫೂರ್ತಿ ಪ್ರೇರಣೆಗಳನ್ನು ಪಡೆದುಕೊಂಡರು. ಇಸ್ಲಾಂ, ಕ್ರೈಸ್ತಮತ ಮತ್ತು ಕಮ್ಯೂನಿಸ್ಟ್ ವಿಚಾರಧಾರೆಗಳ ಬಗೆಗೆ ವಿಸ್ತೃತ ಅಧ್ಯಯನ ಮಾಡಿದ ಗೋಯಲ್‍ ಅವರು ದಾಖಲೆ – ಸಾಕ್ಷ್ಯಾಧಾರಗಳಿಗೆ ತುಂಬ ಮಹತ್ತ್ವ ನೀಡಿದಂತಹವರು. ಸಂದೇಹಕ್ಕೆ ಅವಕಾಶವಿಲ್ಲದಂತಹ, ನಿಸ್ಸಂದಿಗ್ಧವಾದ ಅಧ್ಯಯನ – ಪರಿಶ್ರಮಗಳಿಂದ ಅವರು 30ಕ್ಕೂ ಹೆಚ್ಚು ಸಂಖ್ಯೆಯ ಗ್ರಂಥಗಳನ್ನು ಇಂಗ್ಲಿಷ್ – ಹಿಂದಿ ಭಾಷೆಗಳಲ್ಲಿ ರಚಿಸಿ ಪ್ರಕಟಿಸಿದ್ದಾರೆ. ಕೆಲವು ಮಹತ್ತ್ವದ ಕೃತಿಗಳನ್ನು ಹಿಂದೀ ಭಾಷೆಗೆ ಅನುವಾದಿಸಿಯೂ ಇದ್ದಾರೆ.

“ಹಿಂದೂಯಿಸಂ ಟುಡೆ”, “ಇಂಡಿಯನ್ ಎಕ್ಸ್‌ಪ್ರೆಸ್” ಮತ್ತು “ಆರ್ಗನೈಸರ್” ಪತ್ರಿಕೆಗಳಲ್ಲಿ, ಗೋಯಲ್ ಅವರ ವಿಚಾರ ಸರಣಿ ಪ್ರಕಟವಾಗಿದೆ. ಈ ಲೇಖನಗಳು – ಅಂಕಣಗಳು ಅನಂತರ ಗ್ರಂಥರೂಪದಲ್ಲಿಯೂ ಹೊರಬಂದಿವೆ. ಮೂಲತಃ ಕ್ರೈಸ್ತಮತದ ವಿರುದ್ಧವಾಗಿ ಯೂರೋಪಿನಲ್ಲಿ ಆಧುನಿಕ ಕಾಲದಲ್ಲಿ ಹುಟ್ಟಿದ “ಸೆಕ್ಯುಲರಿಸಂ”, ಭಾರತದಲ್ಲಿ ವಿಕೃತ ರೂಪವನ್ನು ತಳೆದಿರುವುದನ್ನು ಗೋಯಲ್ ಟೀಕಿಸಿದ್ದಾರೆ. ಭಾರತದಲ್ಲಿ ಸೆಕ್ಯುಲರಿಸಂ ಎನ್ನುವುದು ಬರಿಯ ಹಿಂದೂದ್ವೇಷದ ವಾದವಾಗಿದೆ, ಅದು ಇಸ್ಲಾಮಿನ ಬಗೆಗೆ ಮಾತೇ ಆಡುವುದಿಲ್ಲ, ಎನ್ನುತ್ತಾರೆ ಗೋಯಲ್.

ಅಲಿಗಢ ವಿಶ್ವವಿದ್ಯಾನಿಲಯ ಮತ್ತು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯಗಳಿಗೆ ಲಗ್ಗೆಯಿಟ್ಟ ಮಾರ್ಕ್ಸ್‌ವಾದಿ “ಇತಿಹಾಸಕಾರರು” ಮಧ್ಯಕಾಲೀನ ಭಾರತದ ಇತಿಹಾಸವನ್ನು ಮತ್ತು ಮುಸ್ಲಿಂ ಆಕ್ರಮಣ – ಆಡಳಿತಗಳನ್ನು ವಿಕೃತವಾಗಿ ತಿರುಚಿದುದನ್ನು, ಪಠ್ಯಪುಸ್ತಕಗಳಲ್ಲಿ ಅಸತ್ಯಗಳನ್ನು ತುಂಬಿದುದನ್ನು, NCERT, ICHR ಸಂಸ್ಥೆಗಳ ಮೂಲ ಉದ್ದೇಶ – ಕೆಲಸಕಾರ್ಯಗಳನ್ನು ವಿರೂಪಗೊಳಿಸಿದುದನ್ನು ಗೋಯಲ್ ಬಯಲಿಗೆಳೆದಿದ್ದಾರೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಉಪ್ಪಿನ ಸತ್ಯಾಗ್ರಹದ ವೈಭವೀಕರಣವೇನೋ ಸರಿ, ಉಪ್ಪಿನ ಮೇಲಿನ ತೆರಿಗೆ ಕಡಿಮೆಯಾಯಿತೇ?

ಜವಾಹರಲಾಲ್ ನೆಹರೂ ಅವರ ಕಾರ್ಯನೀತಿ ಕುರಿತ ಟೀಕೆ ಮತ್ತು ಇಸ್ಲಾಮಿನ ವಿಮರ್ಶೆಗಳನ್ನು ಕುರಿತಂತೆ, ಭಾರತೀಯ ಮಾಧ್ಯಮದ ಪಕ್ಷಪಾತವನ್ನು ಗೋಯಲ್ ಐವತ್ತರ ದಶಕದಲ್ಲಿಯೇ ಖಂಡಿಸಿದ್ದರು. 1982ರಲ್ಲಿ ರಾಮಸ್ವರೂಪರೊಂದಿಗೆ, ದೆಹಲಿಯಲ್ಲಿ “ವಾಯ್ಸ್ ಆಫ್ ಇಂಡಿಯಾ” (voice of india) ಸಂಸ್ಥೆಯನ್ನು ಗೋಯಲ್ ಸ್ಥಾಪಿಸಿದರು. ನಿಜ ಇತಿಹಾಸವನ್ನು ದಾಖಲಿಸುವ, ದಾಖಲಿಸಿರುವ ಈ ಸಂಸ್ಥೆಯು ಲಾಭ ಮಾಡುವ ಉದ್ದೇಶವಿಟ್ಟುಕೊಂಡಿಲ್ಲ. ಕೆ.ಎಸ್. ಲಾಲ್, ಕೊನ್ರಾಡ್ ಎಲ್ಸ್ಟ್, ಹರ್ಷ ನಾರಾಯಣ್, ಸುಹಾಸ್ ಮಜುಮದಾರ್, ರಾಜೇಂದ್ರ ಸಿಂಗ್, ಡೇವಿಡ್ ಫ್ರಾಲಿ (ವಾಮದೇವ ಶಾಸ್ತ್ರೀ), ಸಂತ ಆರ್.ಎಸ್. ನಿರಾಲಾ, ಶ್ರೀಕಾಂತ ತಲಗೇರಿ, ನಮ್ಮ ನವರತ್ನ ಎಸ್. ರಾಜಾರಾಮ್, ಎ.ಕೆ. ಚಟರ್ಜಿ, ಮುಂತಾದ ವಿದ್ವಾಂಸರ ಮಹತ್ತ್ವದ ಗ್ರಂಥಗಳನ್ನು ಈ ಸಂಸ್ಥೆಯು ಪ್ರಕಟಿಸಿದೆ.

ಸೀತಾರಾಮ ಗೋಯಲ್ ಅವರು ಸತ್ಯಸಂಗತಿಗಳ ಬಗೆಗೆ ರಾಜಿ ಮಾಡಿಕೊಳ್ಳುವವರಲ್ಲ. ಕೃತಕತೆಯ ನಯನಾಜೂಕುಗಳೂ ಅವರಿಗೆ ಹಿಡಿಸುವುದಿಲ್ಲ. ಹಿಂದೂ ಬೌದ್ಧಿಕ ವಲಯಗಳಲ್ಲಿ, ತುಂಬ ಅಪರೂಪ ಎನ್ನುವಂತಹ ಬೌದ್ಧಿಕ ನಿಷ್ಠುರತೆ ಸೀತಾರಾಮ ಗೋಯಲ್‍ರದ್ದು, ಎಂದಿದ್ದಾರೆ ಡೇವಿಡ್ ಫ್ರಾಲಿ. “ಸ್ವಾತಂತ್ರ್ಯೋತ್ತರ ಭಾರತದ ಬಹುಮುಖ್ಯ ಚಿಂತಕರಲ್ಲೊಬ್ಬರು ಗೋಯಲ್”, “ಆಧುನಿಕ ಭಾರತದ ಮಹಾನ್ ಬೌದ್ಧಿಕ ನವಕ್ಷತ್ರಿಯ ಈ ಸೀತಾರಾಮ ಗೋಯಲ್”, ಎನ್ನುತ್ತಾರೆ ಫ್ರಾಲಿ. ಸೀತಾರಾಮ ಗೋಯಲ್ 2003ರಲ್ಲಿ ನಿಧನರಾದರು. ಅವರು ಬರೆದಿಟ್ಟುಹೋಗಿರುವ ವಿದ್ವತ್ಪೂರ್ಣವಾದ ಸಾಹಿತ್ಯವನ್ನು – ವೈಚಾರಿಕ ಬರಹಗಳನ್ನು ಮೂಲದಲ್ಲಿಯೇ ಓದುವುದು ಅತ್ಯುತ್ತಮವೆನಿಸಿದರೂ, ಕನ್ನಡದ ಓದುಗರಿಗೆ ಅಂತಹ ಬೆಳಕಿಂಡಿಯನ್ನು ಪರಿಚಯಿಸುವ ಪ್ರಾಮಾಣಿಕ ಪ್ರಯತ್ನವೂ ನಡೆಯುತ್ತಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಬೌದ್ಧ ನಿರ್ಮಾಣಗಳನ್ನು ಹಿಂದೂಗಳು ನಾಶ ಮಾಡಿದರೇ?

Exit mobile version