Site icon Vistara News

ನನ್ನ ದೇಶ ನನ್ನ ದನಿ: “ಬೇಟೆಯಾಡಲು ಹೋಗಿ ಅಜಂತಾ ಕಂಡುಹಿಡಿದನಲ್ಲಾ ಒಬ್ಬ ಬ್ರಿಟಿಷ್ ಅಧಿಕಾರಿ, ಅದು ಅದ್ಭುತ”!

ajanta caves

ಈ ಅಂಕಣವನ್ನು ಇಲ್ಲಿ ಕೇಳಿ:

http://vistaranews.com/wp-content/uploads/2023/05/Revised-ANM-ON-Ajanta-vistara-ne.mp3

“ಕೆಲವು ದೃಶ್ಯಗಳು ಅನುಭಾವದಂತಿರುತ್ತವೆ. ಅವುಗಳನ್ನು ಹಾಗೆಯೇ ಸವಿಯಬೇಕು, ಮೌನದಲ್ಲಿ ನಮ್ಮ ಅನುಭವವನ್ನು ಆವಾಹಿಸಿಕೊಳ್ಳಬೇಕು. ಪ್ರತಿಯೊಂದನ್ನೂ ಪದಗಳಲ್ಲಿ ಹಿಡಿಯಲು ಹೋಗಬಾರದು” ಎನ್ನುತ್ತಿರುತ್ತಾರೆ ಗೆಳೆಯ- ಲೇಖಕ ಅಪೂರ್ವ ಅಜ್ಜಂಪುರ. ಇರಬೇಕು. ಹಾಗೆಂದೇ, ಶ್ರೀಮದ್ಭಗವದ್ಗೀತೆಯ ಕವಿ ವಿಶ್ವರೂಪ ದರ್ಶನವನ್ನು “ಅನುಚ್ಛಿಷ್ಟಃ” ಎಂದು ಕರೆದಿದ್ದು. ನಿಜ. “ಅವನನ್ನು” ವರ್ಣಿಸಲು – ಚಿತ್ರಿಸಲು ನಮ್ಮ ನಾಲಗೆ ಸೋಲುತ್ತದೆ. of course, ನಮ್ಮ ಲೇಖನಿಯೂ ಸೋಲುತ್ತದೆ. ನಲವತ್ತು ವರ್ಷಗಳ ಹಿಂದೆ ಅಜಂತಾ ಎಲ್ಲೋರಾಗಳನ್ನು ನೋಡುವ ಸುಯೋಗ ಒದಗಿತ್ತು. ಇವೂ ಅಂತೆಯೇ. ಅದ್ಭುತ, ಪವಾಡ ಸದೃಶ, ಮನಮೋಹಕ, ಇತ್ಯಾದಿ ಏನೇ ಹೇಳಿ, ಎಲ್ಲ ಪದಗಳೂ ಸೋಲುತ್ತವೆ. ದಿವ್ಯ ಮೌನಕ್ಕೇ ಶರಣಾಗಬೇಕಾಗುತ್ತದೆ.

ಆಗ ನೋಡಿದ ತುಂಬ ತುಂಬ ಸಂಗತಿಗಳು ಇಂದಿಗೂ ನೆನಪಿವೆ. ಅಜಂತಾ ಎಲ್ಲೋರಾಗಳ ಗುಹೆಗಳಿಗೆ, ಅಲ್ಲಿನ ಗುಹಾಂತರ್ದೇವಾಲಯಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಜಂತಾದ ವಿಶ್ವವಿಖ್ಯಾತ ವರ್ಣಚಿತ್ರಗಳು ಎರಡು ಸಾವಿರ ವರ್ಷ ಹಳೆಯವು. ಅಜಂತಾದಲ್ಲಿ ಬುದ್ಧ ಭಗವಾನನ ಬೃಹತ್ ಪ್ರತಿಮೆಯೊಂದಿದೆ. ಒಂದು ಕಡೆಯಿಂದ ಹಸನ್ಮುದ್ರೆ, ಇನ್ನೊಂದು ಕಡೆಯಿಂದ ವಿಷಾದಮುದ್ರೆ, ಮೂರನೆಯದು ಧ್ಯಾನಮುದ್ರೆ. ಒಂದೇ ಪ್ರತಿಮೆ, ಒಂದೇ ಮುಖ, ಮೂರು ದಿಕ್ಕುಗಳಲ್ಲಿ ಮೂರು ವಿಭಿನ್ನ ಮುದ್ರೆಗಳು. ಹೌದು. ಅಜಂತಾ ಎಲ್ಲೋರಾಗಳಿಗೆ ಅಜಂತಾ ಎಲ್ಲೋರಾಗಳೇ ಸಾಟಿ. ಆ ಮಹಾಶಿಲ್ಪಿಗಳು, ಅವರ ಯೋಜನೆ, ವಿನ್ಯಾಸ, ಕಲ್ಪನೆ, ಪರಿಕಲ್ಪನೆ, ಎಲ್ಲ ಆಯಾಮಗಳಲ್ಲಿಯೂ ಶತಪ್ರತಿಶತ ಪರಿಪೂರ್ಣತೆ.

ಓಹ್. ಅದ್ಭುತ!

ಒಮ್ಮೆ ಗೆಳೆಯನೊಬ್ಬನ ಜೊತೆ, ನಾನು ನೋಡಿದ ಈ ಅಜಂತಾ ಎಲ್ಲೋರಾಗಳ ಅದ್ಭುತವಾದ ವೈಶಿಷ್ಟ್ಯ- ಮಹಾನತೆಗಳ ಬಗೆಗೆ ಅತ್ಯುತ್ಸಾಹದಿಂದ ಹೇಳುತ್ತಿದ್ದೆ. ನನ್ನ ಮಾತು ಕತ್ತರಿಸಿ “ಅದು ಬಿಡಯ್ಯಾ, ನಿನಗೆ ಗೊತ್ತಾ? ಬೇಟೆಯಾಡಲು ಹೋಗಿ ಅಜಂತಾ ಕಂಡುಹಿಡಿದನಲ್ಲಾ ಒಬ್ಬ ಬ್ರಿಟಿಷ್ ಅಧಿಕಾರಿ, ಅದು ಅದ್ಭುತ” ಎಂದ. ಒಂದೆರಡು ನಿಮಿಷಗಳ ಕಾಲ ನನಗೆ ಮಾತೇ ಹೊರಡಲಿಲ್ಲ. ಆ ಬ್ರಿಟಿಷ್ ಅಧಿಕಾರಿಯ ಕಥೆ ಹೀಗಿದೆ. ಆತ ಬ್ರಿಟಿಷ್ ಅಶ್ವಾರೋಹಿ ಸೇನೆಯ ಜಾನ್ ಸ್ಮಿತ್. 1819ರಲ್ಲಿ ಅಜಂತಾ ಬಳಿಯ ಕಾಡುಗಳಲ್ಲಿ ಹುಲಿ ಬೇಟೆಯಾಡಲು ಹೋಗಿದ್ದ. ಎಲ್ಲಿಯೇ ಆಗಲೀ, ಹೊರಗಿನ ಸಂಶೋಧಕರಿಗಾಗಲೀ ಬೇಟೆಗಾರರಿಗಾಗಲೀ, ಸ್ಥಳೀಯರ ಸಹಕಾರ, ಮಾರ್ಗದರ್ಶನ ಬೇಕೇಬೇಕು. ಸ್ಥಳೀಯರಿಗೆ ಅಜಂತಾ ಗುಹೆಗಳ ಬಗೆಗೆ ಚೆನ್ನಾಗಿಯೇ ಗೊತ್ತಿತ್ತು. ಸ್ಮಿತ್‌ನಿಗೆ ಕುರಿಕಾಯುವ ಹುಡುಗನೊಬ್ಬ ಅಜಂತಾದ 10ನೆಯ ಗುಹೆ ತೋರಿಸಿದ. ಒಂದು ಕಾಲದ ಅತ್ಯದ್ಭುತ ಕಲೆ-ಸಂಸ್ಕೃತಿಗಳ ನಮ್ಮ ದೇಶದ ಈ ಭಾಗವು ಸಂಸ್ಕೃತಿವಿಹೀನರಾದ ಆಕ್ರಮಣಕಾರಿ ದಾಳಿಕೋರರ ಆಳ್ವಿಕೆಗೆ ಸಿಲುಕಿ, ಅಕ್ಷರಶಃ ಕಾಡಾಗಿಹೋಗಿತ್ತು, ಕೊಂಪೆಯಾಗಿಹೋಗಿತ್ತು. ಇಡೀ ಪ್ರದೇಶದಲ್ಲಿ ಮರಗಿಡಗಳು ಬೆಳೆದುಬಿಟ್ಟಿದ್ದವು. ಹತ್ತಿರದ ಹಳ್ಳಿಯ ಜನರಿಗೆ ಕೊಡಲಿ, ಈಟಿಗಳನ್ನು ತರಹೇಳಿ ಮರಗಿಡಗಳನ್ನು ಸವರಿಸಿ, ಜಾನ್ ಸ್ಮಿತ್ ಒಳಗೆ ನೋಡಿದ. ಅಜಂತಾದ ಅದ್ಭುತಗಳನ್ನು ಸವಿಯುವ ರಾಸಿಕ್ಯವಾಗಲೀ, ಸುಸಂಸ್ಕೃತಿಯಾಗಲೀ ಅವನಲ್ಲಿರಲಿಲ್ಲ. ಈ ಕತ್ತೆ ಜಾನ್ ಸ್ಮಿತ್ ಮಾಡಿದುದಾದರೂ ಏನು? ಆ 10ನೆಯ ಗುಹೆಯ ಗೋಡೆಯ ಮೇಲೆ ತನ್ನ ಹೆಸರು ಕೆತ್ತಿದ. ಅದು ಇಂದಿಗೂ ರಾರಾಜಿಸುತ್ತಿದೆ. ಇದೇ ಅವನು ಮಾಡಿದ ಮಹಾನ್ ಕಾರ್ಯ.

ಬ್ರಿಟಿಷರ ವಸಾಹತುಶಾಹಿಯು ಬರೆದಿಟ್ಟ ಸುಳ್ಳು ಇತಿಹಾಸ, ಅವರ ಹೀನ ದೃಷ್ಟಿಕೋನ, ಎಲ್ಲವೂ ಇಂದಿಗೂ ನಮ್ಮ ತಲೆಯೊಳಗೆ ಕುಳಿತುಬಿಟ್ಟಿವೆ. ಹಾಗಾಗಿಯೇ ಬ್ರಿಟಿಷರದ್ದು ಎಲ್ಲವೂ ಆಧುನಿಕ, ಅವರು ಮಾಡಿದ್ದೆಲ್ಲವೂ ಅತ್ಯದ್ಭುತ ಎನ್ನುವ ಮಾನಸಿಕತೆ ನಮ್ಮದು. ನಮ್ಮ ದೇಶದ ಶಿಕ್ಷಣ ವ್ಯವಸ್ಥೆ, ಆಸ್ಪತ್ರೆಗಳು ಅವರಿಂದಲೇ ಆರಂಭವಾದವು, ಎಂದೇ ನಮ್ಮ ಗಾಢ ನಂಬಿಕೆ. ಹಾಗಾಗಿ ಭಾರತದ ಗುರುಕುಲ, ಕೃಷಿ, ಉದ್ಯಮಗಳನ್ನು ನಾಶ ಮಾಡಿದ ಬ್ರಿಟಿಷರೇ ನಮ್ಮ ಉದ್ಧಾರಕರಾಗಿಬಿಟ್ಟರು. ಜಗತ್ತಿನ ವಿಸ್ಮಯ ಎನ್ನುವಂತಹ ಶಿಲ್ಪಕಲೆ, ವಿನ್ಯಾಸ, ಕಲಾಸಂಸ್ಕೃತಿಗಳಿಗಿಂತ, ಅದರ ನಿರ್ಮಾತೃಗಳಾದ ನಮ್ಮ ಪೂರ್ವಿಕರಿಗಿಂತ, ಅಜಂತಾ ಗುಹೆಗಳನ್ನು “ಕಂಡುಹಿಡಿದ” ಜಾನ್ ಸ್ಮಿತ್ ಮಹಾತ್ಮನಾಗಿಬಿಟ್ಟ. ಕೇವಲ ಸುಡಲು ಮಾತ್ರ ಯೋಗ್ಯವಾದ ಕಮ್ಯೂನಿಸ್ಟ್ ಪ್ರಣೀತ ಇತಿಹಾಸದ ಪಠ್ಯಪುಸ್ತಕಗಳು ನಮ್ಮ ತಲೆಯಲ್ಲಿ ತುಂಬಿರುವುದು ಇಂತಹುದನ್ನೇ. ಇಪ್ಪತ್ತು ಸಾವಿರ ವರ್ಷಗಳ ಪರಂಪರೆಯ ನಮ್ಮ ದೇಶವನ್ನು ವಾಸ್ಕೋ ಡ ಗಾಮಾ 1497ರಲ್ಲಿ “ಕಂಡುಹಿಡಿದನಂತೆ”. ದಕ್ಷಿಣ ಮತ್ತು ಉತ್ತರ ಅಮೆರಿಕಾಗಳ ವಿಶಿಷ್ಟ ಸಂಸ್ಕೃತಿಯ ಮೂಲನಿವಾಸಿಗಳನ್ನು ಕೋಟಿಕೋಟಿ ಸಂಖ್ಯೆಯಲ್ಲಿ ತರಿದೆಸೆಯಲು ಮೂಲಕಾರಣನಾದ ಕಡಲ್ಗಳ್ಳ – ಕೊಲೆಗಡುಕ ಕೊಲಂಬಸ್ ಸರಿಸುಮಾರು ಅದೇ ಕಾಲಾವಧಿಯಲ್ಲಿ ಅಮೇರಿಕಾವನ್ನು “ಕಂಡುಹಿಡಿದ”ನಂತೆ. ನಾವೆಲ್ಲಾ ಚಿಕ್ಕವರಾಗಿದ್ದಾಗ ಇದನ್ನೇ ನಮಗೂ ಇತಿಹಾಸದ ಪಠ್ಯಪುಸ್ತಕಗಳಿಂದ ಬಾಯಿಪಾಠ ಮಾಡಿಸುತ್ತಿದ್ದರು. ಲೂಟಿಕೋರರು, ನರಹಂತಕರು, ವಿಧ್ವಂಸಕರು ನಮ್ಮ “ಆರಾಧ್ಯದೈವ”ಗಳಾಗಿದ್ದು ಹೀಗೆಯೇ. ಕೋಟಿಕೋಟಿ ಜನ ಭಾರತೀಯರಿಗೆ ಇಂದಿಗೂ ಖಿಲ್ಜಿಗಳು, ಮೊಘಲರು, ಬ್ರಿಟಿಷರು ಹೀರೋಗಳಾಗಿಬಿಟ್ಟಿದ್ದಾರೆ.

ಇಲ್ಲಿ ಇನ್ನೂ ಒಂದು ಹಾಸ್ಯಾಸ್ಪದ ಆಯಾಮವನ್ನು ನೆನಪು ಮಾಡಿಕೊಳ್ಳಬಹುದು. ಹಾಲಿವುಡ್ ಮತ್ತು ಇಂಗ್ಲೆಂಡಿನಲ್ಲಿ ತಯಾರಾದ ಅನೇಕ ಚಿತ್ರಗಳನ್ನು ನೋಡಿದ್ದೇನೆ. “ಪ್ಯಾಸೇಜ್ ಟು ಇಂಡಿಯಾ”, “ಸ್ಫಿಂಕ್ಸ್” ಇತ್ಯಾದಿ ಹತ್ತಾರು ಚಲನಚಿತ್ರಗಳಲ್ಲಿ, ಮುಖ್ಯವಾಗಿ ಅವುಗಳ ಚಿತ್ರಕಥೆಯಲ್ಲಿ, ಬರೀ ಶ್ವೇತವರ್ಣೀಯ ದುರಹಂಕಾರವೇ ತುಂಬಿರುತ್ತದೆ. ಈಜಿಪ್ಟಿಗೋ ಭಾರತಕ್ಕೋ ಐರೋಪ್ಯನೊಬ್ಬ ಬಂದು ಇಳಿಯುತ್ತಾನೆ. ಈ ಎಲ್ಲ ದೇಶಗಳು ಐರೋಪ್ಯರ ವಸಾಹತುಗಳೇ ಆಗಿರುತ್ತವೆ, ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಚಲನಚಿತ್ರದ ಅರ್ಧ ಭಾಗ ಅವನು ಸಾರೋಟಿನಲ್ಲೋ ರೈಲು ಗಾಡಿಯಲ್ಲೋ ಬಂದು ಇಳಿಯುವುದು, ಬ್ರೆಡ್ ತಿನ್ನುವುದು, ಸ್ಥಳೀಯರು ಅವನ ಬೂಟುಗಳನ್ನು ತೆಗೆಯುವುದು ಹಾಕುವುದು, ಕುದುರೆಯನ್ನೋ- ಆನೆಯನ್ನೋ ಅವನಿಗಾಗಿ ಸಿದ್ಧಪಡಿಸುವುದು, ಸಾಬ್ ಸಾಬ್ ಎನ್ನುತ್ತಾ ದೀನರಾಗಿ ಅವನ ಹಿಂದೆ ಹಿಂದೆ ಅಲೆಯುವುದು. ಇಂತಹ ದೃಶ್ಯಗಳೇ ತುಂಬಿರುತ್ತಿದ್ದವು. ಶ್ವೇತವರ್ಣೀಯ ಕಥಾನಾಯಕ ಪಿರಮಿಡ್ಡಿನೊಳಗೆ ಹೋಗುತ್ತಾನೆ, ಇಲ್ಲವೇ ಭಾರತದ ಪಾಳು ಬಿದ್ದ ದೇವಾಲಯವೊಂದಕ್ಕೆ ಹೋಗುತ್ತಾನೆ. ಎಲ್ಲದಕ್ಕೂ ಸ್ಥಳೀಯರ ಸಹಕಾರ, ಸಹಾಯವಿರುತ್ತದೆ, ಆದರೆ ಅವರೆಲ್ಲ ಗುಲಾಮರಂತೆ – ಆಳುಗಳಂತೆ ಕೆಲಸ ಮಾಡುತ್ತಾರೆ. ಪಿರಮಿಡ್ ಅನ್ನು, ಪುರಾತನ ಭಾರತೀಯ ದೇವಾಲಯವನ್ನು ಅವನೇ “ಕಂಡುಹಿಡಿದ”, ಅವುಗಳನ್ನು ಕೆತ್ತಿದ ಶಿಲ್ಪಿಗಿಂತ ಅವನೇ ಹೆಚ್ಚು ಎಂಬ ದಿವ್ಯ ಸಂದೇಶವನ್ನು ತೋರಿಸುವುದರೊಂದಿಗೆ, ಚಿತ್ರವು ಅಂತ್ಯವನ್ನು ಕಾಣುತ್ತದೆ.

ಇಂತಹ ಚಲನಚಿತ್ರಗಳು, “ಥ್ರಿಲ್ಲರ್ಸ್” ಎಂಬ ಪ್ರವರ್ಗದ ಇಂಗ್ಲಿಷ್ ಕಾದಂಬರಿಗಳು, ಬ್ರಿಟಿಷರು – ಕಮ್ಯೂನಿಸ್ಟರು ಬರೆದಿಟ್ಟಿರುವ ಸುಳ್ಳು ಇತಿಹಾಸ, ಎಲ್ಲ ಸೇರಿ ನಮ್ಮ ಅಭಿಪ್ರಾಯಗಳನ್ನೇ ನಾಶ ಮಾಡಿಬಿಟ್ಟಿವೆ. ವಸಾಹತುಶಾಹಿ ಶೋಷಕರನ್ನೇ ಮೆಚ್ಚುವ ಆರಾಧಿಸುವ ಮನಃಸ್ಥಿತಿ ನಮ್ಮದಾಗಿದೆ. ನಮ್ಮ ಪರಂಪರೆಯಲ್ಲಿ “ಸ್ವಸ್ಥಾನ ಪರಿಜ್ಞಾನ” ಎಂಬ ಅದ್ಭುತ ಪರಿಕಲ್ಪನೆಯಿದೆ. ಅದೇ ರೀತಿಯಲ್ಲಿ ಸ್ವಭಾಷಾ ಪರಿಜ್ಞಾನ, ಸ್ವರಾಷ್ಟ್ರ ಪರಿಜ್ಞಾನ, ಸ್ವ-ಇತಿಹಾಸ ಪರಿಜ್ಞಾನಗಳೂ ತುರ್ತಾಗಿ ನಮ್ಮಲ್ಲಿ ಆವಾಹನೆಯಾಗಬೇಕಾಗಿವೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಅನುವಾದ, ಅಭಿವ್ಯಕ್ತಿಗಳು ಸರಿಯಾದ ಮೂಲಾರ್ಥವನ್ನೇ ಹೊಮ್ಮಿಸಲಿ

ರೆ. ಫಾ ಕಿಟ್ಟೆಲ್ ನಿಘಂಟು ನನ್ನ ಬಳಿ ಐವತ್ತು ವರ್ಷಗಳಿಂದ ಇದೆ. ಅದೊಂದೇ ಅಲ್ಲ, ನಮ್ಮ ಮನೆಯಲ್ಲಿ ಹತ್ತಾರು ಬಗೆಯ ಶಬ್ದಕೋಶಗಳು, ನಿಘಂಟುಗಳು ನಮ್ಮ ತಾತನ ಕಾಲದಿಂದಲೂ ಇವೆ. ಒಮ್ಮೆ ಕನ್ನಡ ಸಂಘದ ಕಾರ್ಯಕ್ರಮವೊಂದರಲ್ಲಿ, ಬುದ್ಧಿಜೀವಿಯೊಬ್ಬರು ಕಿಟ್ಟೆಲರನ್ನು ಹೊಗಳಲಾರಂಭಿಸಿದರು. ಅದು ಮಿತಿಮೀರಿತು. ನಾನು ಮೊದಲೇ ಊಹಿಸಿದಂತೆ, ಅವರು ಮುಂದುವರಿದು ನಮ್ಮ ಇಡೀ ಪರಂಪರೆಯನ್ನು ತೆಗಳಲಾರಂಭಿಸಿದರು. ಅವರ ಅಮೋಘ’ ಭಾಷಣದ ಅನಂತರ, “ಸರ್, ಕಿಟ್ಟೆಲರು ಜರ್ಮನಿಯಿಂದ ಪಾದ್ರಿಯಾಗಿ ಕರ್ನಾಟಕಕ್ಕೆ ಬಂದು ಕನ್ನಡ ಕಲಿತು ನಿಘಂಟು ರಚಿಸಿದ್ದಾರೆ. ಅದರಲ್ಲಿ 70,000 ಪದಗಳಿವೆ. ಅವರು ವ್ಯಾಕರಣ ಗ್ರಂಥಗಳನ್ನೂ ರಚಿಸಿದ್ದಾರೆ. ದೊಡ್ಡ ಸಂಖ್ಯೆಯ ಸ್ಥಳೀಯ ಕನ್ನಡ ವಿದ್ವಾಂಸರ ನೆರವು, ಸಹಕಾರ, ಮಾರ್ಗದರ್ಶನಗಳಿಲ್ಲದೆಯೇ ಅವರು ನಿಘಂಟು ರಚಿಸಿದರೇ?” ಎಂದು ಪ್ರಶ್ನಿಸಿದೆ. ಅವರಿಗೆ ಉತ್ತರಿಸಲು ಕಷ್ಟವಾಯಿತು. “ಸರ್, ಇನ್ನೊಂದು ಪ್ರಶ್ನೆ. ಕಿಟ್ಟೆಲರಿಗಿಂತ ಎಂಟು ಶತಮಾನಗಳ ಮೊದಲೇ, ಚಾವುಂಡರಾಯನ ಪ್ರೋತ್ಸಾಹದಿಂದ ಒಂದನೆಯ ನಾಗವರ್ಮ, ಗುಣವರ್ಮರು ವ್ಯಾಕರಣ ಗ್ರಂಥಗಳನ್ನು ರಚಿಸಿದ್ದಾರೆ, ಅಲ್ಲವೇ?” ಎಂದೂ ಕೇಳಿದೆ. ಸದರಿ ಬುದ್ಧಿಜೀವಿ ದುರ್ದಾನ ತೆಗೆದುಕೊಂಡವರಂತೆ ಮುಖ ಮಾಡಿದರು. ಇನ್ನೇನಾದರೂ ಅಬದ್ಧಗಳನ್ನು ಉದುರಿಸಿಯಾರು, ಎಂದು ‘ಹೆದರಿ’ ನಾನೇ ಹೊರಟುಬಿಟ್ಟೆ.

ಕಿಟ್ಟೆಲ್ ನಿಘಂಟನ್ನು ಕಡಿಮೆ ಎಂದು ನಾನೇನೂ ಹೇಳುತ್ತಿಲ್ಲ. ನಿಘಂಟುಗಳು, ಕೋಶಗಳು, ವಿಶ್ವಕೋಶಗಳು ಸಹ ನಮ್ಮ ಪರಂಪರೆಯಲ್ಲಿ ಇದ್ದವು, ಎಂಬುದನ್ನು ಒತ್ತಿ ಹೇಳಲು ಪ್ರಯತ್ನಿಸುತ್ತಿದ್ದೇನೆ. ನಮ್ಮ ಮೈಸೂರು ಸಂಸ್ಥಾನದ ಒಡೆಯರ್ ಪರಂಪರೆಯ ಕೊಡುಗೆಗಳು ಅಗಣಿತ. ಚಾಮರಾಜೇಂದ್ರ ಒಡೆಯರ್ ಅವರ ಕಾಲದಲ್ಲಿ ಅವರ ಆಸ್ಥಾನ-ವಿದ್ವಾನ್ ಜಯರಾಯಾಚಾರ್ಯರು ರಚಿಸಿದ “ಅಕಾರಾದಿ ನಿಘಂಟು” 1891ರಲ್ಲಿ (ಅಂದರೆ, ಕಿಟ್ಟೆಲ್ ನಿಘಂಟು ಪ್ರಕಟವಾಗುವ ಮೂರು ವರ್ಷಗಳ ಮೊದಲೇ) ಅಚ್ಚಾಗಿತ್ತು. ಐರೋಪ್ಯರನ್ನು ಹೀನಾಮಾನವಾಗಿ ಹೊಗಳುವ ಮೊದಲು, ನಮ್ಮ ಅಕಾಡೆಮಿಷಿಯನ್ನರು ನಮ್ಮ ಪರಂಪರೆಯ ಕನಿಷ್ಠ ಮಾಹಿತಿಯನ್ನಾದರೂ ಹೊಂದಿರಬೇಕೆಂಬುದು ನಮ್ಮಂಥವರ ಆಶಯ.

ಇಲ್ಲವಾದರೆ, ವಸಾಹತುಶಾಹಿ ಶೋಷಕರು, ಲೂಟಿಕೋರರು, ನರಹಂತಕರು, ವಿಧ್ವಂಸಕರು ನಮ್ಮ `ಆರಾಧ್ಯದೈವ’ಗಳಾಗಿಬಿಡುತ್ತಾರೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಇತಿಹಾಸ ಸಂಕಥನಕ್ಕೇ ತಿರುವು ನೀಡಿದ ಐತಿಹಾಸಿಕ ಕೃತಿ ʼಅಜೇಯʼ

Exit mobile version