Site icon Vistara News

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಅನುವಾದ, ಅಭಿವ್ಯಕ್ತಿಗಳು ಸರಿಯಾದ ಮೂಲಾರ್ಥವನ್ನೇ ಹೊಮ್ಮಿಸಲಿ

gangarathi

ಈ ಅಂಕಣವನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/05/ANM-ON-Nation-Religion-Dharma-2n.mp3

ಈ ಇಂಗ್ಲಿಷ್ ಎಂಬ ಭಾಷೆ ನಮ್ಮ ಪರಿಕಲ್ಪನೆಗಳನ್ನು, ಚಿಂತನೆಗಳನ್ನು ವಿಪರೀತ ಪ್ರಭಾವಿಸಿಬಿಟ್ಟಿದೆ. ಆಕ್ರಮಿತ ದೇಶಗಳ ಮೂಲ ಸಂಸ್ಕೃತಿ, ಸ್ವರೂಪಗಳನ್ನು ಉದ್ದೇಶಪೂರ್ವಕವಾಗಿಯೇ ನಾಶಮಾಡುವ ವಸಾಹತುಶಾಹಿ (colonialism) ಮತ್ತು ಸಾಮ್ರಾಜ್ಯಶಾಹಿ ದುಃಶಕ್ತಿಗಳೇ ಹಾಗೆ. ನಮ್ಮ ಇತಿಹಾಸ, ನಮ್ಮ ಗ್ರಹಿಕೆಗಳನ್ನೇ ಅವು ಬದಲಾಯಿಸಿಬಿಡುತ್ತವೆ. ಬ್ರಿಟಿಷರ “ಪ್ರೀತಿಪಾತ್ರ ಉತ್ತರಾಧಿಕಾರಿಗಳು” ಬ್ರಿಟಿಷರ ವಾರಸಿಕೆಯನ್ನೇ ನಡುಬಗ್ಗಿಸಿ ಮುಂದುವರಿಸಿ, ಅವರ ಕಾನೂನುಗಳನ್ನು, ಅವರ ನ್ಯಾಯಾಂಗ ವ್ಯವಸ್ಥೆಯನ್ನು, ಅವರ ಪದ್ಧತಿಗಳನ್ನು ವಿನೀತರಾಗಿ ಮುಂದುವರಿಸಿಕೊಂಡು ಬಂದರು. ಅವರ ಭಾಷೆಯನ್ನಂತೂ ತಲೆಯ ಮೇಲಿಟ್ಟುಕೊಂಡು ಬಂದರು. ಈಗ ಬಿಡಿ. ಇಳಿಸಲು ಸಾಧ್ಯವೇ ಇಲ್ಲ, ಎನ್ನುವಂತಹ ಪರಿಸ್ಥಿತಿಯನ್ನು ನಾವೇ ರೂಪಿಸಿಕೊಂಡುಬಿಟ್ಟಿದ್ದೇವೆ.

ನಮ್ಮ ಕೆಲವು ʼಹೋರಾಟಗಾರರುʼ ಮೇಲ್ನೋಟಕ್ಕೆ ಹಿಂದೀ ಭಾಷೆಯನ್ನು ವಿರೋಧಿಸುವ ಹುನ್ನಾರ ಮಾಡುತ್ತಾ, ಅಸಲಿಗೆ ಕನ್ನಡವನ್ನೇ ನಾಶ ಮಾಡಿಬಿಟ್ಟರು. ಐವತ್ತು, ಅರುವತ್ತು ವರ್ಷಗಳ ಹಿಂದೆ ಇದ್ದ ಕನ್ನಡ ಶಾಲೆಗಳನ್ನು – ಸರ್ಕಾರಿ ಶಾಲೆಗಳನ್ನು ಮುಚ್ಚಲು ಪರೋಕ್ಷವಾಗಿ ʼಸಹಾಯಹಸ್ತʼ ಚಾಚಿದರು. ಇಂಗ್ಲಿಷ್ ಶಾಲೆಗಳನ್ನು ವಿರೋಧಿಸಿ ಪ್ರತಿಭಟನೆ ಮಾಡಿದ, ಉಪವಾಸ ಕುಳಿತ, ಇಂಗ್ಲಿಷ್ ಫಲಕಗಳ ಮೇಲೆ ಕಪ್ಪು ಬಣ್ಣ ಬಳಿದ ಒಬ್ಬ ಹೋರಾಟಗಾರನನ್ನೂ ನಾನು ಈವರೆಗೆ ನೋಡಿಲ್ಲ. ರಾಜಕಾರಣಿಗಳು ಪ್ರತಿಯೊಬ್ಬರೂ ಇಂಗ್ಲಿಷ್ ಶಾಲೆಗಳ ಮಾಲೀಕರಾಗಿ, ಜೊತೆಗೆ ಆಸ್ಪತ್ರೆ, ಕಾಲೇಜುಗಳನ್ನೂ ನಿರ್ಮಿಸಿಕೊಂಡು ಸಾಮ್ರಾಜ್ಯಶಾಹಿಗಳೇ ಆಗಿಬಿಟ್ಟಿದ್ದಾರೆ. ಚುನಾವಣೆಯ ಒಂದು ಅಂಶವಾಗಿಯೂ ಕನ್ನಡ ಭಾಷೆಯು ಇತ್ತೀಚೆಗೆ ಪರಿಗಣಿಸಲ್ಪಡುತ್ತಿಲ್ಲ. ಜನರಿಗೂ ಮರೆತುಹೋಗಿದೆ. ನವೆಂಬರ್ ತಿಂಗಳಲ್ಲಿ ಕನ್ನಡದ ಜಪ ಮಾಡಿದರೆ ಸಾಕು ಎಂದು ನಾವೇ ಅಂದುಕೊಂಡುಬಿಟ್ಟಿದ್ದೇವೆ.

ನಮ್ಮ ಹೋರಾಟಗಾರರು ಕನ್ನಡ ಒಂದು ರಾಷ್ಟ್ರ ಭಾಷೆ, ಭಾರತವು ರಾಷ್ಟ್ರಗಳ ಒಂದು ಗುಂಪು ಎನ್ನುತ್ತಿದ್ದರು. ಆಗೆಲ್ಲಾ ಗೊಂದಲವಾಗುತ್ತಿತ್ತು. ಅಂತಹವರ ಭಾಷಣಗಳಲ್ಲಿ ಹಿಂದೀ ವಿರೋಧ ಬಿಟ್ಟರೆ, ಅಪ್ಪಿ ತಪ್ಪಿಯೂ ಇಂಗ್ಲಿಷ್ ವಿರೋಧ ಸುಳಿಯುತ್ತಿರಲಿಲ್ಲ. ಹೋರಾಟಗಾರರ ಹುನ್ನಾರ, ಒಳಸುಳಿ, ಷಡ್ಯಂತ್ರಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗಿರಲಿಲ್ಲ. ಹಾಗೆ ನೋಡಿದರೆ, ಇಂಗ್ಲಿಷ್ ಭಾಷೆಯೇ ಕನ್ನಡಕ್ಕೆ ಕಂಟಕಪ್ರಾಯವಾಗಿತ್ತು, ಈಗಲೂ ಕಂಟಕಪ್ರಾಯವಾಗಿದೆ.

ಇತ್ತೀಚೆಗೆ, ಕೆಲವು ದಿನಗಳ ಹಿಂದೆ ಇಟಲಿ ದೇಶದ ಸುದ್ದಿಯೊಂದು (April 4th, 2023) ಮೈನವಿರೇಳಿಸಿತು. ಅಲ್ಲಿನ ಸರ್ಕಾರವು ಇಂಗ್ಲಿಷ್ ಭಾಷೆಯ ಬಳಕೆಯನ್ನು ನಿಷೇಧಿಸಿದೆ. ಅಷ್ಟೇ ಅಲ್ಲ. ಉಲ್ಲಂಘಿಸಿದವರು ಬಹಳ ದೊಡ್ಡ ಮೊತ್ತದ ದಂಡವನ್ನು ತೆರಬೇಕಾಗುತ್ತದೆ. ಇಟಾಲಿಯನ್ ಭಾಷೆ ಮತ್ತು ಅಲ್ಲಿನ ಸಂಸ್ಕೃತಿಗಳನ್ನು ಉಳಿಸಲು, ಅಲ್ಲಿನ ಸರ್ಕಾರವು ನಮ್ಮಂತಹವರು ಊಹಿಸಿಕೊಳ್ಳಲೂ ಸಾಧ್ಯವಿಲ್ಲದ ಇಂತಹ ಕ್ರಮ ಕೈಗೊಂಡಿದೆ. ೧೯೪೭ರಲ್ಲಿ ಬ್ರಿಟಿಷರ ಕೈಕಾಲು ಒತ್ತಿ, ಟವೆಲ್ ಹಾಸಿ ಅಧಿಕಾರ ಹಿಡಿದವರು, ಈ ಬಗೆಯ ದಿಟ್ಟ ಕ್ರಮದ ಶತಾಂಶವನ್ನಾದರೂ ಕೈಗೊಂಡಿದ್ದರೆ, ಕನ್ನಡವೂ ಸೇರಿದಂತೆ, ನಮ್ಮ ಎಲ್ಲ ಸೋದರ ಭಾಷೆಗಳನ್ನು ಉಳಿಸಿಕೊಳ್ಳಬಹುದಿತ್ತು. ಭಾರತೀಯ ಭಾಷೆ ಮತ್ತು ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ರಾಜಕೀಯ ಇಚ್ಛಾಶಕ್ತಿಯ ಜೊತೆಗೆ, ಕನಿಷ್ಠ ಪ್ರಮಾಣದ ಭಾರತ-ಪ್ರೀತಿಯಾದರೂ ಇರಬೇಕಿತ್ತು. ಅವರಲ್ಲಿ ಅದೇ ಇರಲಿಲ್ಲ.

ಭಾರತೀಯ ಭಾಷೆ, ಸಂಸ್ಕೃತಿಗಳನ್ನು ಮತ್ತು ಐರೋಪ್ಯ ಭಾಷೆ, ಸಂಸ್ಕೃತಿಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ – ತೌಲನಿಕ ವಿವೇಚನೆ ಮಾಡುವಲ್ಲಿ ನಾವು ಸೋತಿದ್ದೇವೆ. ಫ್ರಾನ್ಸ್ ದೇಶದಲ್ಲಿ ಇಂಗ್ಲಿಷೂ ಇಲ್ಲ, ಜರ್ಮನ್ ಭಾಷೆಯೂ ಇಲ್ಲ. ಜರ್ಮನಿಯಲ್ಲೂ ಅಷ್ಟೇ. ಜರ್ಮನಿಯ ಗಡಿಯೊಳಗೆ ಇಂಗ್ಲಿಷಿನ ಅಟಾಟೋಪ ನಡೆಯುವುದಿಲ್ಲ. ನೋಡಿ, ಐರೋಪ್ಯ ಮೂಲದ “ನೇಷನ್” (Nation) ಪದಕ್ಕೆ ವಿವರಣೆ ಬೇರೆಯೇ ಇದೆ. ನಾವು ಅದನ್ನು ಕಣ್ಣುಮುಚ್ಚಿಕೊಂಡು ʼರಾಷ್ಟ್ರʼ ಎಂದು ಭಾಷಾಂತರಿಸಿ ಗೊಂದಲದಲ್ಲಿ ಮುಳುಗಿದ್ದೇವೆ. ಸರ್ಕಾರವೊಂದರ ಆಡಳಿತದ ವ್ಯಾಪ್ತಿಯಲ್ಲಿ ಒಂದೇ ಇತಿಹಾಸ, ಜನಾಂಗೀಯ ವೈಶಿಷ್ಟ್ಯ, ಸಂಸ್ಕೃತಿ ಮತ್ತು ಮುಖ್ಯವಾಗಿ ಒಂದೇ ಭಾಷೆಯನ್ನಾಡುವ ಜನಸಮೂಹವನ್ನು ಅಲ್ಲಿ ʼನೇಷನ್ʼ ಎಂದು ಕರೆಯಲಾಗುತ್ತದೆ. ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ, ಇಟಲಿಗಳಿಗೂ ಭಾರತದ ವಿಭಿನ್ನ ರಾಜ್ಯಗಳಿಗೂ ಮೂಲತಃ ವ್ಯತ್ಯಾಸವಿದೆ. ಅಲ್ಲಿ ಗಡಿ ದಾಟಿದರೆ ಸಾಕು, ಭಾಷೆ ಸಂಪೂರ್ಣವಾಗಿ ಬದಲಾಗಿಬಿಡುತ್ತದೆ. ಇಲ್ಲಿ ಹಾಗಿಲ್ಲ. ನಮ್ಮಲ್ಲಿಯ ಹೊಸೂರು, ಹಿಂದೂಪುರ, ಪರಶುರಾಮಪುರ, ಕೋಲಾರಗಳಲ್ಲಿ ಎರಡೆರಡು ಭಾಷೆಗಳನ್ನು ನೋಡಬಹುದು. ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಗಡಿ ಭಾಗಗಳಲ್ಲಿ, ಮರಾಠೀ ಮತ್ತು ಕನ್ನಡ ಎರಡೂ ಭಾಷೆಗಳು ಹಾಸುಹೊಕ್ಕಾಗಿರುವುದನ್ನು ನೋಡಬಹುದು. ವೃತ್ತಿನಿಮಿತ್ತ (1979ರಲ್ಲಿ) ಹಿಂದೂಪುರದಲ್ಲಿದ್ದಾಗ, ಎರಡು ವಾರಗಳ ಕಾಲ ನಾನು ಕನ್ನಡವನ್ನೇ ಬಳಸಿದೆ. ಯಾರೂ ಆಕ್ಷೇಪಿಸಲಿಲ್ಲ, ಯಾರೂ ವಿಚಿತ್ರವಾಗಿ ನೋಡಲಿಲ್ಲ ಮತ್ತು ಮುಖ್ಯವಾಗಿ ಎಲ್ಲರೂ ಕನ್ನಡದಲ್ಲಿಯೇ ಉತ್ತರಿಸಿದರು. ಇಂತಹ ಎಷ್ಟೋ ಉದಾಹರಣೆಗಳನ್ನು ಕೊಡಬಹುದು. ನಮ್ಮ ಈ ಭಾಷೆಗಳೆಲ್ಲಾ, ಅಕ್ಷರಶಃ ಸೋದರ ಭಾಷೆಗಳು. ಯೂರೋಪಿನಲ್ಲಿ ಅವರು ಹೀಗೇನೂ ಪರಿಭಾವಿಸುವುದಿಲ್ಲ.

ವಿಷ್ಣುಪುರಾಣದಲ್ಲಿರುವ ಒಂದು ಶ್ಲೋಕವು ಪ್ರಾತಿನಿಧಿಕವಾಗಿದೆ, ಮಹತ್ತರವಾದುದಾಗಿದೆ. ಅದು ಹೀಗಿದೆ:
“ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ । ವರ್ಷಮ್ ತದ್ಭಾರತಂ ನಾಮ ಭಾರತೀ ಯತ್ರ ಸಂತತಿಃ ॥ 1 ॥

ಅರ್ಥ: ಸಮುದ್ರಕ್ಕೆ ಉತ್ತರದಲ್ಲಿ ಮತ್ತು ಹಿಮಾಲಯದ ದಕ್ಷಿಣಕ್ಕೆ ಇರುವ ಈ ದೇಶಕ್ಕೆ (ವರ್ಷ) ಭಾರತ ಎನ್ನುತ್ತಾರೆ. ಇಲ್ಲಿರುವ ಸಂತತಿಗೆ, ಅಂದರೆ ಜನರಿಗೆ ಭಾರತೀ ಎನ್ನುತ್ತಾರೆ.

ಹಾಗೆ ನೋಡಿದರೆ, ಸಾಂಸ್ಕೃತಿಕ ಭಾರತದ ವ್ಯಾಪ್ತಿಯು ಈ ಶ್ಲೋಕದ ಪರಿಧಿಗಳನ್ನೂ ಮೀರುತ್ತದೆ. ಹೀಗೆ ನಮ್ಮ ನಾಡಿನಲ್ಲಿ, ನಮ್ಮ ಭಾಷೆಗಳಲ್ಲಿ ಮೊಳಗುವ ರಾಷ್ಟ್ರದ ಪರಿಕಲ್ಪನೆಯು ಈ ಕಾರಣದಿಂದ ಭಾಷೆಗಳ ಬಂಧನವನ್ನು, ಮಿತಿಯನ್ನು ಮೀರುತ್ತದೆ. ಹೌದು, ʼನೇಷನ್ʼ ಬೇರೆ, ʼರಾಷ್ಟ್ರʼವೇ ಬೇರೆ. ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿಗಳು ಬಿತ್ತಿರುವ ಎರವಲು ವಿಚಾರಗಳ ಹೆಣಭಾರವನ್ನು ಹೊತ್ತ ನಮಗೆ ರಾಷ್ಟ್ರ ಮತ್ತು ನೇಷನ್ ಎರಡೂ ಒಂದೇ ಆಗಿಬಿಟ್ಟಿವೆ. ಗೊಂದಲ ಬಗೆಹರಿದಿಲ್ಲ, ಹರಿಯುವುದೂ ಕಷ್ಟವೇ.

ಇನ್ನೂ ಸಂಕೀರ್ಣವಾದ, ಇನ್ನೂ ಅಪಾಯಕಾರಿಯಾದ ಪದಪ್ರಯೋಗಗಳೆಂದರೆ ಧರ್ಮ ಮತ್ತು ರಿಲಿಜನ್ ಪದಗಳು. ಎರಡನ್ನೂ ನಾವು ಒಂದೇ ಎಂದು ಪರಿಭಾವಿಸಿಕೊಂಡುಬಿಟ್ಟಿದ್ದೇವೆ. ಧರ್ಮ, ಮತ, ರಿಲಿಜನ್ ಇತ್ಯಾದಿ ಪದಗಳನ್ನು ಸೂಕ್ತವಾಗಿ ಪ್ರಯೋಗಿಸಬೇಕಾಗಿದೆ, ಬಳಸಬೇಕಾಗಿದೆ. ಇಸ್ಲಾಂ ಧರ್ಮ, ಕ್ರೈಸ್ತ ಧರ್ಮ ಎಂದು ಬರೆಯದಿರೋಣ. ಅವು ತಪ್ಪು ಪ್ರಯೋಗಗಳು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಇತಿಹಾಸ ಸಂಕಥನಕ್ಕೇ ತಿರುವು ನೀಡಿದ ಐತಿಹಾಸಿಕ ಕೃತಿ ʼಅಜೇಯʼ

ಧರ್ಮದ (religion) ಸ್ವರೂಪವೇ ಬೇರೆ. ಹಿಂದೂ ಧರ್ಮ ಎನ್ನಿ, ಸನಾತನ ಧರ್ಮ ಎನ್ನಿ, ʼಧರ್ಮʼದ ವ್ಯಾಖ್ಯೆ ಕಷ್ಟಸಾಧ್ಯ. ನಮ್ಮ ಪರಂಪರೆಯ ಋಷಿಗಳ ಸಹಸ್ರಾರು ವರ್ಷಗಳ ತಪಸ್ಸಿನ – ಜ್ಞಾನಾರ್ಜನೆಯ – ಚಿಂತನೆಯ ಫಲವದು. ಆದರೆ, ಮತದ (Religion : a particular system of faith and worship) ಸ್ವರೂಪವೇ ಬೇರೆ.

ರಿಲಿಜನ್ ಮತ್ತು ಧರ್ಮಗಳ ಪರಿಕಲ್ಪನೆಗಳೇ ಬೇರೆ. ಕ್ರೈಸ್ತ ಧರ್ಮ ತಪ್ಪು, ಕ್ರೈಸ್ತ ರಿಲಿಜನ್ (ಕ್ರಿಶ್ಚಿಯಾನಿಟಿ) ಎಂದೇ ಬಳಸೋಣ. ಬೈಬಲ್‌ನಲ್ಲಿರುವ ಪರಿಕಲ್ಪನೆಗಳಿಗೆ ಅನುಗುಣವಾಗಿಯೇ ʼಕ್ರಿಶ್ಚಿಯಾನಿಟಿʼಯನ್ನು ಅರ್ಥೈಸಬೇಕು. ಆ ರೀತಿಯಲ್ಲಿಯೇ ಕ್ರೈಸ್ತಮತದ ನಿಜಾರ್ಥ ಹೊರಹೊಮ್ಮಬೇಕು. ʼಇಸ್ಲಾಂ ಧರ್ಮʼ ತಪ್ಪು, ʼಇಸ್ಲಾಂʼ ಸಾಕು (ಅಥವಾ ಇಸ್ಲಾಂ ಮತ). ಖುರಾನ್, ಹದೀಸುಗಳಲ್ಲಿ ಅಭಿವ್ಯಕ್ತವಾಗಿರುವ ಸೈದ್ಧಾಂತಿಕ ಪರಿಕಲ್ಪನೆಗಳಿಗೆ ಅನುಗುಣವಾಗಿಯೇ ಇಸ್ಲಾಮನ್ನು ಅರ್ಥೈಸಬೇಕು. ನಿಜಾರ್ಥ ಹೊರಹೊಮ್ಮಬೇಕು.

ನಮಾಜ್ ʼನಮಾಜ್ʼ ಆಗುತ್ತದೆಯೇ ಹೊರತು, ʼಪ್ರಾರ್ಥನಾ ಸಭೆʼ ಅಲ್ಲ. ಕ್ರೈಸ್ತ ದೇವಾಲಯ ತಪ್ಪು, ʼಚರ್ಚ್ʼ ಸರಿ. ʼಧರ್ಮಗುರುʼ ತಪ್ಪು, ಸಂದರ್ಭೋಚಿತವಾಗಿ ಮುಲ್ಲಾ, ಮೌಲ್ವಿ, ಪಾದ್ರಿ, ಫಾದರ್ ಇತ್ಯಾದಿ ಬಳಸುವುದು ಸೂಕ್ತ. ಸಾವಿರಾರು ವರ್ಷಗಳ ಇತಿಹಾಸದುದ್ದಕ್ಕೂ, ಈ ಅಬ್ರಹಾಮಿಕ್ ಮತಗಳು ʼಪರಮತಧರ್ಮʼಗಳ ವಿನಾಶವನ್ನೇ ತಮ್ಮ ಮತಸಿದ್ಧಾಂತವನ್ನಾಗಿಸಿಕೊಂಡಿರುವುದನ್ನು ಮರೆಯದಿರೋಣ. ನಮ್ಮ ಅನುವಾದ, ಅಭಿವ್ಯಕ್ತಿ, ಕಥಾನಕಗಳು ಸರಿಯಾದ ಮೂಲಾರ್ಥವನ್ನೇ ಹೊಮ್ಮಿಸಲಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ: ಅಮ್ಮಾ, ನ್ಯಾಯದೇವತೆ, ತುರ್ತಾಗಿ ನಮ್ಮನ್ನೆಲ್ಲಾ ಪೊರೆಯಮ್ಮಾ…

Exit mobile version