Site icon Vistara News

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ನಾಳೆಗಳಿಗಾಗಿ ಇಂದು ಜೀವ ತೆತ್ತವರು

indian spys

ಈ ಅಂಕಣವನ್ನು ಇಲ್ಲಿ ಆಲಿಸಿ:

https://vistaranews.com/wp-content/uploads/2023/07/Audio-file-ANM-Kulkarni-SIN-Naga.mp3

ಮೂರನೆಯ ದರ್ಜೆಯ ಬಾಂಡ್ (james bond) ಸಿನಿಮಾಗಳಿಂದ ಮನರಂಜನೆ ಸಿಕ್ಕುತ್ತದೆಯೋ ಇಲ್ಲವೋ, ದುಷ್ಪರಿಣಾಮವಂತೂ ಅಧಿಕಾಧಿಕ. ಅಮೆರಿಕೆಯಲ್ಲಂತೂ ಶಸ್ತ್ರಾಸ್ತ್ರ ಖರೀದಿಗೆ ಅಂಕೆಯೂ ಇಲ್ಲ, ಶಂಕೆಯೂ ಇಲ್ಲ. ಟಿವಿ ಮತ್ತು ಇಂತಹ ಸಿನಿಮಾಗಳಿಂದ ಮಕ್ಕಳ ಮೇಲೆ, ಹದಿಹರೆಯದವರ ಮೇಲೆ ಅದೆಷ್ಟೆಷ್ಟು ಕೆಟ್ಟ ಪರಿಣಾಮಗಳಾಗಿವೆ ಎಂಬುದನ್ನು ತಿಳಿಸುವ ತುಂಬ ತುಂಬ ವರದಿಗಳೇ ಇವೆ. crime thrillers ಎಂಬ ಹೆಸರಿನಲ್ಲಿ ಈ ಪಿಡುಗು ಜಗತ್ತಿನಾದ್ಯಂತ ಹಬ್ಬಿತು. ಸಾಲದುದೆಂದು ನಮ್ಮಲ್ಲಿಯೂ ಕ್ರೈಂ ಧಾರಾವಾಹಿಗಳು, ಕ್ರೈಂ ಪತ್ರಿಕೆಗಳು ಹುಟ್ಟಿಕೊಂಡವು, ಕ್ರೈಂ ವರದಿಗಾರರೂ ಹುಟ್ಟಿಕೊಂಡರು.

ವಿಚಿತ್ರವೆಂದರೆ, ಬಾಂಡ್ ಸಿನಿಮಾಗಳನ್ನು ನೋಡಿ, ಗೂಢಚಾರರ ಬಗೆಗೆ ನೋಡುಗರು ರಮ್ಯಾದ್ಭುತ ಕಲ್ಪನೆಗಳನ್ನು ಇಟ್ಟುಕೊಂಡುಬಿಡುತ್ತಾರೆ. ಕಲ್ಪಿತ ದುಷ್ಕಥನಗಳಿಗೂ ಕಟುವಾಸ್ತವಕ್ಕೂ ಅಂತರ ತಿಳಿಯಲು IB, RAW ಮುಂತಾದ ಸಂಸ್ಥೆಗಳ ಬಗೆಗೆ ಮಹತ್ತ್ವದ ಲೇಖಕರೂ ಇತಿಹಾಸಕಾರರೂ ಅದ ಆರ್.ಎನ್.ಕುಲಕರ್ಣಿಯವರು ಬರೆದ “Sin of National Conscience”ನಂತಹ ಗ್ರಂಥಗಳನ್ನು ಅಧ್ಯಯನ ಮಾಡಬೇಕು. ಬೇಹುಗಾರರು, ಗೂಢಚಾರರು (indian spys) ಹೇಗೆಲ್ಲಾ ಕೆಲಸ ಮಾಡುತ್ತಾರೆ, ಏನೆಲ್ಲಾ ಅಪಾಯ-ಸಂಭಾವ್ಯತೆಗಳಿರುತ್ತವೆ, ಅವರ ಸೇವೆ, ತ್ಯಾಗ, ಬಲಿದಾನಗಳು ಹೇಗೆ ಜನಸಾಮಾನ್ಯರಿಗೆ ಗೊತ್ತೇ ಆಗುವುದಿಲ್ಲ, ಎಂಬಂತಹ ಇಲ್ಲಿನ ಪ್ರತಿ ಆಖ್ಯಾಯಿಕೆಯೂ ವಿಷಾದಪೂರ್ಣವೇ.

ಲೇಖಕರಾದ ಕುಲಕರ್ಣಿಯವರು ಸ್ವತಃ ತಾವು ಅನುಭವಿಸಿದ, ಎದುರಿಸಿದ ಅನುಭವಗಳನ್ನು ಎಷ್ಟೋ ಬಾರಿ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ದೆಹಲಿಯ IB ಪ್ರಭುಗಳಿಗೆ, ಕೇವಲ ಆದೇಶಗಳನ್ನು ನೀಡಿ ಮಾತ್ರ ಗೊತ್ತು. ಅತಿ-ಸೂಕ್ಷ್ಮವಾದ ಅರುಣಾಚಲ ಪ್ರದೇಶದಂತಹ, ಅತಿ-ಕ್ಲಿಷ್ಟ ಬೆಟ್ಟಗುಡ್ಡಗಳ ನಾಡಿನಲ್ಲಿ ಪ್ರತಿದಿನವೂ, ಪ್ರತಿಕ್ಷಣವೂ ಭಯಾನಕವೇ. ಒಮ್ಮೆ ಭಾರತದ ಗಡಿಯ ಅಂಚಿನ ತಾಣವೊಂದಕ್ಕೆ ಭೇಟಿ ನೀಡಿ ಚೀನಾ ರಕ್ಕಸರ ಅತಿಕ್ರಮಣ ಕುರಿತು ವರದಿ ಮಾಡಬೇಕಿತ್ತಂತೆ. ಅಲ್ಲಿಗೆ ಹೋಗಿಬರಲು ಕಾಲ್ನಡಿಗೆ, ಚಾರಣಗಳು ಮಾತ್ರವೇ ಸಾಧನಗಳು. ಅವರು ಹೇಳುತ್ತಿದ್ದ ವಿವರಗಳನ್ನು ಕೇಳಿದರೆ ಪ್ರತಿ ಬಾರಿಯೂ ಆಘಾತವೇ ಆಗುತ್ತಿತ್ತು. ಏಕೆಂದರೆ, ಒಂದು ಅಂತಹ ಭೇಟಿಗೆ ಹದಿನಾಲ್ಕು ದಿನಗಳು ಬೇಕಾಗುತ್ತಿತ್ತಂತೆ. ದೆಹಲಿಯ ಬಾಸ್ ಗಳಿಂದ “ಇವತ್ತೇ ರಿಪೋರ್ಟ್ ಕಳುಹಿಸು, ನಾಳೆಯೇ ಕಳುಹಿಸು” ಎಂಬಂತಹ ಚಿತ್ರಹಿಂಸೆಯ ಆದೇಶಗಳು. ದೆಹಲಿಯ ಪ್ರಭುಗಳಿಗೆ ಬೇಕಾಗಿದ್ದುದು ಸತ್ಯಸಂಗತಿಗಳಲ್ಲ, ಕೇವಲ ಕೇವಲ ಸುಳ್ಳು ವರದಿಗಳು ಮಾತ್ರ. ಜನಸಾಮಾನ್ಯರಿಗಿರಲಿ, ಪತ್ರಕರ್ತರಿಗೂ ಈ ಎಲ್ಲ ಸಂಗತಿಗಳು ಬೇಡ. ಅವರಿಗೂ ಆಸಕ್ತಿ ಇಲ್ಲ.

ಎಲ್ಲೆಡೆ ಈ ಗೂಢಚಾರರ ಕಾರ್ಯವಿಧಾನ, ಜೀವನ, ಓಡಾಟ ಪೊಲೀಸರಿಗಿಂತ ಕಠಿಣಾತಿಕಠಿಣ. ಪೊಲೀಸರೆಂದು ಗೊತ್ತಾದ ತಕ್ಷಣ ಜನ ದೂರವಾಗಿ ಬಿಡುತ್ತಾರೆ. ಪೊಲೀಸರ ತೊಂದರೆ-ತಾಪತ್ರಯಗಳೇನೇ ಇದ್ದರೂ, ಜನ ಹೊಡೆಯಲು ಬರುವುದಿಲ್ಲ, ಜನಸಾಮಾನ್ಯರು ಹೆದರುತ್ತಾರೆ ಎಂಬ “ರಕ್ಷಣೆ” ಅವರಿಗಿದೆ. ಗೂಢಚಾರರಾದರೋ ಎಲ್ಲಿಯೂ ಹೇಳಿಕೊಳ್ಳುವಂತಿಲ್ಲ, ಬಿಡುವಂತಿಲ್ಲ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದರೆ, ಜನರು ಹಿಡಿದು ಹೊಡೆಯಬಹುದು. ಬೇರೆಬೇರೆ ಕ್ಷೇತ್ರಗಳಲ್ಲಿ, ಅದರಲ್ಲೂ ಮುಖ್ಯವಾಗಿ ಜನರ ನಡುವೆಯಿದ್ದು ಕೆಲಸ ಮಾಡುವ ಗೂಢಚಾರರ ಸಂಕಷ್ಟಗಳ ದಾರುಣ ಚಿತ್ರಣ ಇಂತಹ ಗ್ರಂಥಗಳಿಂದ ಸಿಕ್ಕುತ್ತದೆ. ಗ್ರಂಥಕರ್ತರ ನಾಗಾಲ್ಯಾಂಡ್ ಅನುಭವಗಳಿಗಾದರೂ, ನಾವೆಲ್ಲಾ ಈ ಕೃತಿಯನ್ನು ಓದಬೇಕು. ನಾಗಾಲ್ಯಾಂಡ್ ಮೊದಲುಗೊಂಡು ಪೂರ್ವಾಂಚಲವೇ, ದೇಶದ ಉಳಿದ ಭಾಗಗಳ ಜನರಿಗೆ ಅಪರಿಚಿತವಾಗಿದೆ, ಅನೂಹ್ಯವಾಗಿದೆ. ಅಲ್ಲಿನ ಪ್ರಕೃತಿ, ಬ್ರಹ್ಮಪುತ್ರ ನದಿ ಬಗ್ಗೆ ಸುಂದರ, ಅತಿ ಸುಂದರ, ಅದ್ಭುತ, ಮನೋಹರ ಎಂದು ಬರೆದುಬಿಡುವುದು ಸುಲಭ. ಒಬ್ಬ ಗೂಢಚಾರ ಅಲ್ಲಿನ ಜನರ ನಡುವೆ, ದಂಗೆಕೋರರ ನಡುವೆ, ಸೈನಿಕರ ನಡುವೆ, ಶತ್ರುಗಳ ಮಧ್ಯೆ ಒಂದೊಂದು ದಿನ ಸವೆಸುವುದೂ ಕಷ್ಟ. ಆಹಾರ ಪದ್ಧತಿ, ಸಾಮಾಜಿಕ ರೀತಿನೀತಿಗಳು, ಪ್ರಯಾಣ ವ್ಯವಸ್ಥೆ, ಸಂಪರ್ಕ ವ್ಯವಸ್ಥೆ ಎಲ್ಲವೂ ತುಂಬ ಕಠಿಣವೇ. ಈಗಲೂ ಕಡುಕಷ್ಟ ಎನ್ನುವಾಗ ನಾಲ್ಕು ದಶಕಗಳ ಹಿಂದೆ, ಗ್ರಂಥಕರ್ತರು ಸೇವೆ ಸಲ್ಲಿಸುತ್ತಿದ್ದಾಗ ಹೇಗಿದ್ದಿರಬಹುದು?! ಆಗಂತೂ ದಂಗೆಕೋರರು ಇನ್ನಿಲ್ಲವೆನ್ನುವಷ್ಟು ವಿಜೃಂಭಿಸುತ್ತಿದ್ದರು. ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಈ ದಂಗೆಕೋರರಿಗೆ ತರಬೇತಿ ನೀಡುತ್ತಿದ್ದವು ಮತ್ತು ಈಗಲೂ ನೀಡುತ್ತಿವೆ. ಶತ್ರುರಾಷ್ಟ್ರಗಳಿಂದ ಶಸ್ತ್ರಾಸ್ತ್ರ ಪೂರೈಕೆಯೂ ನಿರಂತರವಾಗಿ ಆಗುತ್ತಿದೆ.

ಭಾರತೀಯ ಸೇನೆಯೂ ಅಲ್ಲಿ ಬೀಡುಬಿಟ್ಟಿದೆ. ಆದರೆ ಅವರದ್ದು ಪೂರ್ಣವಾಗಿ ಅವರದ್ದೇ ಆದ ವ್ಯವಸ್ಥೆ, ಏರ್ಪಾಟು, ವಾಹನಗಳು ಇರುತ್ತವೆ. ಈ ಗೂಢಚಾರರಾದರೋ ಅಲ್ಲಿಯೂ ತಬ್ಬಲಿಗಳು, “ಪರದೇಶಿ”ಗಳು. ಸಂಚಾರ, ಆಹಾರ, ಮನೆ, ನೀರು ಎಲ್ಲವೂ ಸಮಸ್ಯೆಯೇ, ದುರ್ಭರವೇ. ದೆಹಲಿಯಲ್ಲಿ ಕೂತ IPS ದಣಿಗಳದ್ದು ಬರಿಯ ದರ್ಬಾರು ಮಾತ್ರವೇ. ಯಾವುದೇ ಅಹವಾಲು ಅವರು ಕೇಳುವುದೂ ಇಲ್ಲ, ಹೇಳುವಂತೆಯೂ ಇಲ್ಲ. ಅವರಿಂದ ಬರಿಯ ಏಕಪಕ್ಷೀಯ ಆದೇಶ, ಆಜ್ಞೆಗಳು ಮಾತ್ರ.

ಪೂರ್ವಾಂಚಲದಲ್ಲಿ ಹೀಗೆ ಸೇವಾನಿಮಿತ್ತ ವರ್ಗವಾಗಿ ಹೋದ ಗೂಢಚಾರರ ದುರಂತ ಕಥೆಗಳು ಎದೆಯನ್ನು ಮುದುಡಿಸುತ್ತವೆ, ಹೊಟ್ಟೆ ಕಲಕಿದಂತಾಗುತ್ತದೆ. ಒಮ್ಮೆ ಹೀಗಾಯಿತು. ಸಭೆಯೊಂದಕ್ಕೆ ಹಾಜರಾಗಲು ಫ್ರಾನ್ಸಿಸ್ ಎಂಬ ಯುವ-ಗೂಢಚಾರ ಕೋಹಿಮಾಗೆ ಬರಬೇಕಿತ್ತು. ಅವನು ಕೆಲಸ ಮಾಡುತ್ತಿದ್ದ ಫುಟ್ಸೆರೋದಲ್ಲಿ ಗೂಢಚರ್ಯೆಯ ಕಛೇರಿಯು ಹೊಸದಾಗಿ ಆರಂಭವಾಗಿತ್ತು. ಅಲ್ಲಿ ನಾಗಾ ಗುತ್ತಿಗೆದಾರರು ಹಳೆಯ ಮಿಲಿಟರಿ ವಾಹನಗಳಲ್ಲಿ ಸಾಮಾನು ಸರಂಜಾಮುಗಳನ್ನೂ, ನಾಗರಿಕರನ್ನೂ ಸಾಗಿಸುತ್ತಿದ್ದರು. ಅಂದು ಆ ದುರದೃಷ್ಟದ ದಿನ ನಾಗಾ ದಂಗೆಕೋರರು ಮಿಂಚಿನ ದಾಳಿ ನಡೆಸಿದರು. ಈ ಹಳೆಯ ಮಿಲಿಟರಿ ಟ್ರಕ್ಕನ್ನು ಸೇನೆಯ ವಾಹನವೆಂದೇ ಪರಿಭಾವಿಸಿ, ಅದರಲ್ಲಿದ್ದ ಎಲ್ಲ ಒಂಬತ್ತು ಜನ ನಾಗರಿಕರನ್ನು ಸಾಲಾಗಿ ನಿಲ್ಲಿಸಿ ಅಮಾನುಷವಾಗಿ ಹತ್ಯೆಗೈದರು. ಈ ಬಡಪಾಯಿ ಫ್ರಾನ್ಸಿಸ್ ಎದೆ-ಹೊಟ್ಟೆಗಳಿಗೆ ಹತ್ತು ಗುಂಡುಗಳು ಬಿದ್ದಿದ್ದವು. ನಾಗಾ ದಂಗೆಕೋರರ ಕುರಿತಾದ ಮಾಹಿತಿ, ಚೀನಾ ಗಡಿಗೆ ಹೋಗುವ ಮಾರ್ಗದ ವಿವರಗಳು, ಇತ್ಯಾದಿ ವಿವರಗಳನ್ನು ಈ ಫ್ರಾನ್ಸಿಸ್ ಸಂಗ್ರಹಿಸಿದ್ದ. ಅನಂತರ ಆ ಲಕೋಟೆಯೇ ಮಾಯವಾಗಿತ್ತು. ಕೋಹಿಮಾದ IB ಕಛೇರಿಗೆ ಅವನ ಶವ ತಂದಾಗ ಅದು ಮಾಂಸದ ಮುದ್ದೆಯಾಗಿತ್ತು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಸ್ವಾತಂತ್ರ್ಯ ದಿನ ಆಚರಿಸುವ ನೈತಿಕತೆ ಇವರಿಗಿದೆಯೇ?

ಫ್ರಾನ್ಸಿಸ್ ತುಂಬ ಚಿಕ್ಕವನು. ಶಾಲಾ ಮಾಸ್ತರನಾಗಿದ್ದ ತಂದೆಗೆ ಇವನೊಬ್ಬನೇ ಮಗ. ಅವನಿಗೆ ಇಬ್ಬರು ತಂಗಿಯರು. ಅವರ ಮದುವೆ ಆಗಬೇಕಿತ್ತು. ಮನೆಯ ಕಡೆ ತುಂಬ ಬಡತನ. ಫ್ರಾನ್ಸಿಸ್ ನ ತಂದೆ “ಹಣವಿಲ್ಲದೆ, ಕೋಹಿಮಾಗೆ ಮಗನ ಅಂತ್ಯ ಸಂಸ್ಕಾರಕ್ಕೆ ಬರಲಾಗುತ್ತಿಲ್ಲ, ದಯಮಾಡಿ ನೀವೇ ಗೌರವಯುತವಾಗಿ ಸಂಸ್ಕಾರ ಮಾಡಿ” ಎಂದು ವಿನಂತಿಸಿದರು. IB ಎಂಬುದು ಭಯಂಕರ. ಅದು ಪೊಲೀಸು ಸೇವೆಯೂ ಅಲ್ಲ, ಮಿಲಿಟರಿ ಸೇವೆಯೂ ಅಲ್ಲ. ಶವವನ್ನು ಕುಟುಂಬದವರಿಗೆ ತಲಪಿಸುವ ಯಾವ ವ್ಯವಸ್ಥೆಯೂ ಇಲ್ಲ. ಅಂತ್ಯ ಸಂಸ್ಕಾರಕ್ಕೆ ಯಾವ ವೆಚ್ಚವೂ ಮಂಜೂರಾಗುವುದಿಲ್ಲ. ಕೊನೆಗೆ ಸಹೋದ್ಯೋಗಿಗಳೇ ಕೈಯಿಂದ ನಾಲ್ಕು ಕಾಸು ಹಾಕಿ ಮಣ್ಣು ಮಾಡಿದರಂತೆ. ನಿಯಮಗಳ ಪ್ರಕಾರ, ಕನಿಷ್ಠ ಐದು ವರ್ಷಗಳ ಸೇವೆಯನ್ನೂ ಸಲ್ಲಿಸಿರದ ಕಾರಣ, ಫ್ರಾನ್ಸಿಸ್ ನ ಕುಟುಂಬಕ್ಕೆ ಯಾವುದೇ ಪರಿಹಾರ, ಅನುಕಂಪಗಳ ಮೊತ್ತ ದೊರೆಯಲಿಲ್ಲ.

ಕುಲಕರ್ಣಿಯವರು ಬರೆದಿರುವ, “He committed no crime except, to be on call of the national duty. In return, neither the nation nor the IB gave anything to him or to his family. He truly died unheard, unsung, unseen for India’s tomorrow” ಎನ್ನುವ ಮಾತುಗಳು ಕರುಳು ಹಿಂಡುತ್ತವೆ.

ವಾಸ್ತವ ಅದೆಷ್ಟು ಕಠಿಣ, ಅದೆಷ್ಟು ಘೋರ. ಇಂತಹ ಸೈನಿಕರ, ಗೂಢಚಾರರ ತ್ಯಾಗ ಬಲಿದಾನಗಳಿಂದಲೇ ನಾವು ಸಾಮಾನ್ಯ ಜನ ನೆಮ್ಮದಿಯಿಂದ ನಿದ್ರೆ ಮಾಡುತ್ತೇವೆ. ಈ ಸೈನಿಕರ, ಗೂಢಚಾರರ ಸಮಸ್ಯೆಗಳಿಗೆ – ತೊಂದರೆಗಳಿಗೆ ನಾವೆಲ್ಲಾ ಸ್ಪಂದಿಸಬೇಕು, ಅಷ್ಟೇ ಅಲ್ಲ, ಹಾಗೆ ಸ್ಪಂದಿಸುವವರ ಬೆಂಬಲಕ್ಕೂ ನಾವೆಲ್ಲಾ ನಿಲ್ಲಬೇಕು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಅತ್ಯಪರೂಪದ ರಾಜಕಾರಣಿ ಹಮೀದ್ ದಲವಾಯಿ

Exit mobile version