Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಪ್ರಾಚೀನ ಭಾರತದ ವಿಶಿಷ್ಟ ಸಾಂಸ್ಕೃತಿಕ ಲೋಕ 

hiuen tsang fa hian

ಈ ಅಂಕಣವನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/06/Manjunatha-Ajjampura-6th-June-20.mp3

ಪ್ರಾಚೀನ ಭಾರತ (ancient India) ಇದ್ದುದೇ ಹಾಗೆ. ಅದೊಂದು ಅದ್ಭುತ ಲೋಕ. ಅದು ವರ್ಣರಂಜಿತ, ವಿಶಿಷ್ಟ, ಸಂಕೀರ್ಣ. ವಿನಾಶಕಾರಿ ವಿದೇಶೀ ಆಕ್ರಮಣಗಳಿಂದ, ನಮ್ಮ ಪರಂಪರೆಯ ಅಮೂಲ್ಯವಾದ ದಾಖಲೆಗಳೇ ಲುಪ್ತವಾಗಿವೆ, ನಾಶವಾಗಿವೆ, ಸುಟ್ಟುಹಾಕಲ್ಪಟ್ಟಿವೆ. ಫಾಹಿಯಾನ್, ಯುವಾನ್ ಚ್ವಾಂಗ್ (ಇದು ಸರಿಯಾದ ಉಚ್ಚಾರ, ಹಿಂದೆ ಹ್ಯೂಯೆನ್ ತ್ಸಾಂಗ್ ಎನ್ನಲಾಗುತ್ತಿತ್ತು) ಮೊದಲಾದವರ ಪ್ರವಾಸಕಥನಗಳು ನಿಜಕ್ಕೂ ಮಾಹಿತಿಗಳ ಗಣಿಗಳೇ. ಅವು ಪ್ರಾಚೀನ ಭಾರತದ ಒಂದು ಚಿತ್ರವನ್ನು ನಮ್ಮ ಅಂತಃಚಕ್ಷುಗಳ ಮುಂದೆ ನಿರ್ಮಿಸಿಕೊಳ್ಳಲು ನೆರವಾಗುತ್ತವೆ.

ಯುವಾನ್ ಚ್ವಾಂಗನ ಕಾಲ ಸಾಮಾನ್ಯಯುಗದ ೭ನೆಯ ಶತಮಾನ. ಅವನ ಪ್ರವಾಸಕಥನಗಳಿಂದ ನಮಗೆ ಕ್ರೈಸ್ತಪೂರ್ವ- ಇಸ್ಲಾಂಪೂರ್ವ ಭಾರತದ ನಿಜೇತಿಹಾಸದ ಚಿತ್ರವು ಸಾಕಾರವಾಗುತ್ತದೆ. ತೋಷಾಸನ ವಿಹಾರ, ತಾಮಸವನ, ನಾಗಾರಾಧನೆಯ ಜಲಂಧರ, ಮಥುರೆಗಳ ಮೂಲಕ ಮತ್ತು ಗಂಗಾನದಿಯ ಮಹಾಧಾರೆಯೊಂದಿಗೆ ಸಾಗುವ ಚ್ವಾಂಗನ ಯಾತ್ರೆಯ ವಿವರಗಳದ್ದೇ ಒಂದು ಸೊಗಸು. ಬುದ್ಧನ ಶಿಷ್ಯರಾದ ಸಾರಿಪುತ್ತ, ಮೌದ್ಗಲಾಯನ, ಮೈತ್ರಾಯಣಿ ಪುತ್ರ, ಉಪಾಲಿ, ಆನಂದ, ರಾಹುಲ ಮಂಜುಶ್ರೀ ಮೊದಲಾದವರ ಸ್ತೂಪಗಳು ಮಥುರೆಯಲ್ಲಿವೆ. ಎಲ್ಲವನ್ನೂ ನೋಡಿ, ಜಯಗುಪ್ತನೆಂಬ ಬೌದ್ಧ ಮತಪಂಡಿತನ ಬಳಿ ನೆಲೆಸಿ ಆರು ತಿಂಗಳ ಕಾಲ ಸೌತಂತ್ರಿಕ ಸಂಪ್ರದಾಯದ ವಿಭಾಸ ಶಾಸ್ತ್ರವನ್ನು ಯುವಾನ್ ಚ್ವಾಂಗ್ ಅಧ್ಯಯನ ಮಾಡುತ್ತಾನೆ. ಪ್ರಾಚೀನ ಭಾರತದ ಗುರುಗಳ ಹೃದಯವೈಶಾಲ್ಯವನ್ನು ಮೆಚ್ಚಬೇಕು. ದೇಶೀಯರಾಗಲೀ, ವಿದೇಶೀಯರಾಗಲೀ ಪ್ರೀತಿ-ವಾತ್ಸಲ್ಯಗಳಿಂದ ವಿದ್ಯೆ ಕಲಿಸಿ ಊಟ, ವಸತಿಗಳನ್ನೂ ನೀಡುತ್ತಿದ್ದರು. ಇಂತಹ ಗುರುಕುಲಗಳಿಗೆ ಅಂದಿನ ಹಿಂದೂರಾಜರ ಪ್ರೋತ್ಸಾಹ, ಧನಸಹಾಯಗಳ ಬೆಂಬಲವಿತ್ತು.

“ನಾನು ಗಂಗಾನದಿಯನ್ನು ದಾಟಿ ಪೂರ್ವದಂಡೆಯಲ್ಲಿರುವ ಮತಿಪುರಕ್ಕೆ ಬಂದೆ. ಈ ಪ್ರದೇಶವನ್ನು ಶೂದ್ರವಂಶಕ್ಕೆ ಸೇರಿದ ಅರಸನೊಬ್ಬ ಆಳುತ್ತಿದ್ದಾನೆ. ಇಲ್ಲಿ ಹತ್ತು ವಿಹಾರಗಳಿವೆ. ಅವುಗಳಲ್ಲಿ ಎಂಟು ನೂರು ಜನ ಭಿಕ್ಷುಗಳು ವಾಸಿಸುತ್ತಿದ್ದಾರೆ. ಇಲ್ಲಿಂದ ಒಂದು ಹರದಾರಿ ಅಂತರದಲ್ಲಿ ಇನ್ನೊಂದು ವಿಹಾರವಿದೆ. ಹಿಂದೆ ಆಚಾರ್ಯ ಗುಣಪ್ರಭರು ಇಲ್ಲಿ ನೆಲೆಸಿ ತತ್ತ್ವಸಂದೇಶವೆಂಬ ಗ್ರಂಥವನ್ನೂ ಇತರ ನೂರು ಕೃತಿಗಳನ್ನೂ ರಚಿಸಿದರು. ಇಲ್ಲಿಂದ ಇನ್ನೊಂದು ಹರದಾರಿ ಅಂತರದಲ್ಲಿರುವ ವಿಹಾರವೊಂದರಲ್ಲಿ ಹೀನಯಾನ ಪರಂಪರೆಯ ಇನ್ನೂರು ಜನ ಯತಿಗಳಿದ್ದಾರೆ. ಮೂಲತಃ ಕಾಶ್ಮೀರದವರಾದ ಮತ್ತು ಶಾಸ್ತ್ರಾಚಾರ್ಯರಾದ ಸಂಘಭದ್ರರು ಇದ್ದುದಿಲ್ಲಿ. “ಸರ್ವಾರ್ಥ ಸಾಧನ ವಿಭಾಸ ಶಾಸ್ತ್ರ”ವನ್ನು ಅರೆದು ಕುಡಿದ ಪಂಡಿತವರೇಣ್ಯರವರು. ಇವರ ಸಮಕಾಲೀನರಾದ ವಸುಬಂಧು ಸಹ ಪ್ರಾಜ್ಞ, ವಿದ್ವಾಂಸ. ಇವರು ವಿಭಾಸ ಸಂಪ್ರದಾಯದ ಸಿದ್ಧಾಂತಗಳನ್ನು ಅಲ್ಲಗಳೆದು “ಅಭಿಧರ್ಮ ಕೋಶಶಾಸ್ತ್ರ” ಎಂಬ ಗ್ರಂಥವನ್ನು ರಚಿಸಿದರು. ಅನೇಕ ದೇಶಗಳವರು ಈ ಕೃತಿಯನ್ನು ಪ್ರಮಾಣ ಗ್ರಂಥವೆಂದು ಪರಿಗಣಿಸಿ ಅಭ್ಯಾಸ ಮಾಡತೊಡಗಿದಾಗ, ಕುಪಿತಗೊಂಡ ಸಂಘಭದ್ರರು 12 ವರ್ಷಗಳ ಕಾಲ ಪರಿಶ್ರಮ ವಹಿಸಿ 25,000 ಶ್ಲೋಕಗಳ “ಅಭಿಧರ್ಮನ್ಯಾಯಾನುಸಾರ ಶಾಸ್ತ್ರ”ವನ್ನು ರಚಿಸಿ, ಅನಂತರ ತರ್ಕಗೋಷ್ಠಿಯನ್ನು ಏರ್ಪಡಿಸಿ ವಸುಬಂಧುಗಳನ್ನು ಸೋಲಿಸಲು ಬಯಸಿದರು. ಆದರೆ, ವಸುಬಂಧುಗಳನ್ನು ಭೇಟಿಯಾಗುವ ಮೊದಲೇ ತೀರಿಹೋದರು. ಮುಂದೆ ವಸುಬಂಧು ಈ ಕೃತಿಯನ್ನು ಓದಿ, ತಮ್ಮ ಪಂಥವನ್ನು ಖಂಡಿಸುವ ಕೃತಿಯಾದರೂ ಅಲ್ಲಿನ ಪಾಂಡಿತ್ಯವನ್ನು ಬಹುವಾಗಿ ಮೆಚ್ಚಿಕೊಂಡರು” ಎಂದು ಬರೆದಿದ್ದಾನೆ ಯುವಾನ್ ಚ್ವಾಂಗ್.

ಅಂದಿನ ಕಾಲಘಟ್ಟದ ವಿದ್ವಾಂಸರ ವಿದ್ವತ್ತು, ಪರಿಶ್ರಮ, ಶಿಷ್ಯರ ಮೇಲಿನ ವಾತ್ಸಲ್ಯ, ತರ್ಕಗೋಷ್ಠಿ, ಚರ್ಚೆಗಳ ವಿವರಗಳು ರೋಮಾಂಚನಗೊಳಿಸುತ್ತವೆ. ಎಂತಹ ವಿದ್ವಲ್ಲೋಕವನ್ನು ಕಳೆದುಕೊಂಡುಬಿಟ್ಟೆವಲ್ಲಾ, ಆಕ್ರಮಣಕಾರಿ ಸಂಸ್ಕೃತಿನಾಶಕರನ್ನು ಮೂಲೋತ್ಪಾಟನೆ ಮಾಡುವಲ್ಲಿ ಆಚಾರ್ಯ ಚಾಣಕ್ಯರ ರಾಜಕಾರಣದ ಸೂತ್ರಗಳನ್ನು ಮರೆತುಬಿಟ್ಟೆವಲ್ಲಾ, ಎಂದು ವ್ಯಥೆಯಾಗುತ್ತದೆ.

ಭಾರತ ಅಧ್ಯಯನಶಾಸ್ತ್ರದ (Indology) ದೊಡ್ಡಪಂಡಿತರಾದ ಆರ್ಥರ್ ಲೆವೆಲಿನ್ ಬಾಶಂ ಅವರ ಕೃತಿ ‘ಪ್ರಾಚೀನ ಭಾರತವೆಂಬ ಅದ್ಭುತ’ (“The Wonder that was India”) ಮೂಲಕೃತಿಯು ಇಂಗ್ಲಿಷಿನಲ್ಲಿ ಏಳು ದಶಕಗಳ ಹಿಂದೆ ಇಂಗ್ಲೆಂಡಿನಲ್ಲಿ ಪ್ರಕಟವಾಯಿತು. ವಿದ್ವಾಂಸರಾದ ಧ್ರುವರಾಜ ಮಿರ್ಜಿ ಅವರು ಅಪಾರ ಪರಿಶ್ರಮದಿಂದ ಕನ್ನಡಕ್ಕೆ ಅನುವಾದಿಸಿ 800 ಪುಟಗಳ ಈ ಗ್ರಂಥವನ್ನು ಸಿದ್ಧಪಡಿಸಿದ್ದಾರೆ. ಇದು ಸಹ ಪ್ರಾಚೀನ ಭಾರತದ ಅಧ್ಯಯನಕ್ಕೆ ಸೂಕ್ತವಾದ ಉದ್ಗ್ರಂಥ.

ನಮ್ಮ ಪ್ರಾಚೀನ ಸಂಸ್ಕೃತಿ, ಹರಪ್ಪಾ – ಋಗ್ವೇದಗಳ ಸಂಸ್ಕೃತಿಗಳ ಬಗೆಗೆ, ಅಂತೆಯೇ ಪ್ರಾಚೀನ ಹಾಗೂ ಮಧ್ಯಯುಗದ ಸಾಮ್ರಾಜ್ಯಗಳ ಬಹುಮೂಲ್ಯ ವಿವರಗಳಿಲ್ಲಿವೆ. ಈ ಗ್ರಂಥದಲ್ಲಿ ಮತಧರ್ಮಗಳ ಬಗೆಗೆ, ಸಾಮಾಜಿಕ ರೀತಿನೀತಿಗಳ ಬಗೆಗೆ, ಲಲಿತಕಲೆ-ಶಿಲ್ಪಕಲೆಗಳ ಬಗೆಗೆ, ಅನೇಕ ಭಾರತೀಯ ಭಾಷೆಗಳ ಬಗೆಗೆ ತುಂಬ ತುಂಬ ವಿವರಗಳಿವೆ.

ಇಸ್ಲಾಂಪೂರ್ವ ಭಾರತದ ಸಾಮಾಜಿಕ ವ್ಯವಸ್ಥೆ – ಆಡಳಿತ ವ್ಯವಸ್ಥೆಗಳ ವಿವರಗಳು ತುಂಬ ಸ್ವಾರಸ್ಯವಾಗಿವೆ. ಭಾರತದ ಆಡಳಿತ–ವ್ಯವಸ್ಥೆಯ ಎಲ್ಲವೂ ಮೊಘಲರ ಇಲ್ಲವೇ ಬ್ರಿಟಿಷರ ‘ಕೊಡುಗೆ’ ಎನ್ನುವ ನಮ್ಮ ‘ಬುದ್ಧಿಜೀವಿ’ಗಳು, ಕಮ್ಯೂನಿಸ್ಟರು, ಇಂಗ್ಲಿಷರ ‘ಔರಸಪುತ್ರ’ರು ಇಂತಹ ಕೃತಿಗಳನ್ನು ಓದುವುದು ಒಳ್ಳೆಯದು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ: “ಬೇಟೆಯಾಡಲು ಹೋಗಿ ಅಜಂತಾ ಕಂಡುಹಿಡಿದನಲ್ಲಾ ಒಬ್ಬ ಬ್ರಿಟಿಷ್ ಅಧಿಕಾರಿ, ಅದು ಅದ್ಭುತ”!

“ರಾಜನ ಶಾಸನಗಳನ್ನು ಸಂಬಂಧಪಟ್ಟ ಜನರಿಗೆ ತಲುಪಿಸುವುದಕ್ಕಾಗಿ ಕಾರ್ಯದರ್ಶಿ ಮತ್ತು ಗುಮಾಸ್ತರುಗಳ ಒಂದು ಪಡೆಯೇ ಇತ್ತು. ತಪ್ಪಾಗದಂತೆ ನೋಡಿಕೊಳ್ಳುವುದಕ್ಕಾಗಿ ಗಮನಾರ್ಹ ಮುನ್ನೆಚ್ಚರಿಕೆಗಳನ್ನು ತೆಗದುಕೊಳ್ಳಲಾಗುತ್ತಿತ್ತು. ಉದಾಹರಣೆಗೆ ಚೋಳರ ಕಾಲದಲ್ಲಿ ರಾಜನ ಆದೇಶಗಳನ್ನು ಮೊದಲು ಕಾರಕೂನರು ರಾಜನು ಹೇಳುತ್ತಿದ್ದಂತೆ ಬರೆದುಕೊಳ್ಳುತ್ತಿದ್ದರು. ಕರಡು ಸರಿಯಾಗಿದೆಯೇ ಎಂಬುದನ್ನು ಪರಿಣತ ಸಾಕ್ಷಿಗಳು ಪರಿಶೀಲಿಸುತ್ತಿದ್ದರು. ಆದೇಶಗಳನ್ನು ಪಡೆಯಬೇಕಾದವರಿಗೆ ಅದು ತಲಪುವ ಮೊದಲು ತುಂಬ ಎಚ್ಚರಿಕೆಯಿಂದ ಇನ್ನೊಮ್ಮೆ ಅವುಗಳನ್ನು ಬರೆಯಲಾಗುತ್ತಿತ್ತು. ಭೂಮಿಯನ್ನು ಅನುದಾನವಾಗಿ ಕೊಡಬೇಕಾದ ಸಂದರ್ಭದಲ್ಲಿ, ಸವಲತ್ತುಗಳನ್ನು ಕೊಡಬೇಕಾದ ಸಂದರ್ಭಗಳಲ್ಲಿ, ರಾಜನ ಆದೇಶಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯವಾಗಿ ರಾಜನ ಆಸ್ಥಾನದಿಂದ ಒಬ್ಬ ಮುಖ್ಯ ಅಧಿಕಾರಿಯನ್ನು ಕಳುಹಿಸಿಕೊಡಲಾಗುತ್ತಿತ್ತು. ದಾಖಲೆಗಳನ್ನು ಬಹಳ ಎಚ್ಚರಿಕೆಯಿಂದ ಇಡಲಾಗುತ್ತಿತ್ತು. ಯಾವುದನ್ನೂ ಅನಿರೀಕ್ಷಿತ ಘಟನೆಗಳಿಗೆ ಬಿಡುತ್ತಿರಲಿಲ್ಲ. ಮಂತ್ರಿಗಳನ್ನು ಉನ್ನತ ಅಧಿಕಾರಿಗಳನ್ನು, ಮೊದಲಿನ ಗ್ರಂಥಗಳಲ್ಲಿ, ಮಹಾಮಾತ್ಯರೆಂದು ಕರೆಯಲಾಗಿದೆ. ಖಾತೆಗಳನ್ನು ಆಗಾಗ ಬದಲಾಯಿಸಲಾಗುತ್ತಿತ್ತು. ಬ್ರಾಹ್ಮಣವರ್ಗದ ವೃದ್ಧರೂ ಸೇರಿದಂತೆ, ಎಲ್ಲರೂ ಸೈನಿಕ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು” (ಪುಟ 144).

“ಮೌರ್ಯರ ಕಾಲದಲ್ಲಿ ವ್ಯಕ್ತಿಜೀವನದ ಪ್ರತಿಯೊಂದು ಮಗ್ಗುಲ ಮೇಲೂ ಸರಕಾರದ ನಿಗಾ ಇರುತ್ತಿತ್ತು, ಸಾಧ್ಯವಿದ್ದ ಮಟ್ಟಿಗೆ ನಿಯಂತ್ರಣ ಇರುತ್ತಿತ್ತು. ಎಲ್ಲಾ ಗಣಿಗಳು (ಆಗ ಈ ವರ್ಗೀಕರಣಕ್ಕೆ ಮುತ್ತು, ಉಪ್ಪು, ಮೀನುಗಾರಿಕೆಗಳೂ ಸೇರುತ್ತಿದ್ದವು) ಸರಕಾರದ ಒಡೆತನದಲ್ಲಿರುತ್ತಿದ್ದವು. ನೇರವಾಗಿ ಕೈದಿಗಳ-ದಾಸರ ನೆರವಿನಿಂದ ಇಲ್ಲವೇ ಸ್ವತಂತ್ರ ಉದ್ದಿಮೆದಾರರಿಗೆ ಗುತ್ತಿಗೆ ನೀಡುವುದರ ಮೂಲಕ, ಸರಕಾರವೇ ಗಣಿಗಳನ್ನು ನಿರ್ವಹಿಸುತ್ತಿತ್ತು. ಆನೆಗಳಿಂದ ಹಿಡಿದು ಉರುವಲು ಕಟ್ಟಿಗೆಯವರೆಗೆ ಅರಣ್ಯದ ಉತ್ಪನ್ನಗಳೆಲ್ಲವೂ ಸರಕಾರದ ಆಸ್ತಿಯಾಗಿದ್ದವು. ಮದ್ದುಗುಂಡುಗಳನ್ನು ಸರಕಾರೀ ಸ್ವಾಮ್ಯದ ಮದ್ದುಗುಂಡುಗಳ ಕಾರ್ಖಾನೆಗಳಲ್ಲಿಯೇ ತಯಾರಿಸಲಾಗುತ್ತಿತ್ತು. ಸರಕಾರೀ ಹಡಗು ನಿರ್ಮಾಣ ಕೇಂದ್ರಗಳಲ್ಲಿ ಹಡಗುಗಳು ನಿರ್ಮಿತವಾಗುತ್ತಿದ್ದವು….” (ಪುಟ 145-146).

ನಮ್ಮ ಶ್ರೀಕೃಷ್ಣದೇವರಾಯನ ಬಗೆಗೆ, ಆ ಕಾಲದಲ್ಲಿ ರಾಜಕುಮಾರರಿಗೆ ನೀಡುತ್ತಿದ್ದ ತರಬೇತಿಗಳ ಬಗೆಗೆ, ರಾಶಿರಾಶಿ ಮಾಹಿತಿಯಿಲ್ಲಿದೆ. ‘ಪ್ರಾಚೀನ ಭಾರತವೆಂಬ ಅದ್ಭುತ’ ಗ್ರಂಥವು ನಿಜಕ್ಕೂ ಒಂದು ಅದ್ಭುತವೇ!

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಅನುವಾದ, ಅಭಿವ್ಯಕ್ತಿಗಳು ಸರಿಯಾದ ಮೂಲಾರ್ಥವನ್ನೇ ಹೊಮ್ಮಿಸಲಿ

Exit mobile version