Site icon Vistara News

ನನ್ನ ದೇಶ ನನ್ನ ದನಿ: ಅಮ್ಮಾ, ನ್ಯಾಯದೇವತೆ, ತುರ್ತಾಗಿ ನಮ್ಮನ್ನೆಲ್ಲಾ ಪೊರೆಯಮ್ಮಾ…

angel of justice

ಈ ಅಂಕಣವನ್ನು ಇಲ್ಲಿ ಕೇಳಿ:

http://vistaranews.com/wp-content/uploads/2023/04/ANM-Audio-File-ON-Judiciary-4th.mp3

ತಾಯೀ, ನಾವೆಲ್ಲರೂ ನಿನ್ನ ಮಕ್ಕಳೇ. ಮತಧರ್ಮಗಳ ಕಾರಣಕ್ಕೆ, ಜಾತಿ – ಪಂಗಡಗಳ ಕಾರಣಕ್ಕೆ ನಮ್ಮಲ್ಲಿ ಭೇದಭಾವ ಬೇಡ ತಾಯೀ. ನಿನ್ನೆಲ್ಲಾ ಮಕ್ಕಳಿಗೆ ಕಾನೂನು ಸಮಾನವಾಗಿ ಜಾರಿಗೆ ಬರಲಿ, ನ್ಯಾಯವೂ ಅಷ್ಟೇ, ತಾಯಿ, ಸಮಾನವಾಗಿಯೇ ದೊರೆಯಲಿ. ಬೇರೆ ಬೇರೆ ಮತಧರ್ಮಗಳಿಗೆ ಬೇರೆಬೇರೆ ನ್ಯಾಯ ಎಂಬುದು ಸರಿಯಾಗಲಾರದು, ತಾಯೀ. ಮೇಲ್ನೋಟಕ್ಕೆ ನೀನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರಬಹುದು. ಅಂತರಂಗದ ನಿನ್ನ ಕಣ್ಣುಗಳು ತೆರೆದೇ ಇರಲಿ. ಮೊಕದ್ದಮೆ ಹೂಡಿದವರಿಗೆ ಮಾತ್ರ ನ್ಯಾಯ ಎನ್ನುವ ಪರಿಕಲ್ಪನೆ ಸಾಲದು. ಸ್ವಯಂಪ್ರೇರಿತವಾಗಿಯೂ (suo moto) ಅನೇಕ ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳಲು, ನ್ಯಾಯ ದಯಪಾಲಿಸಲು ಅವಕಾಶವಿದೆಯಲ್ಲಾ ತಾಯೀ. ಪಾಕಿಸ್ತಾನದಿಂದ ಗತಿಗೆಟ್ಟು ನಿರಾಶ್ರಿತರಾಗಿ ಬಂದವರ ಮೇಲಾಗಲೀ, ಸ್ವಂತ ದೇಶದಲ್ಲಿಯೇ ಹತಭಾಗ್ಯರಾದ ಕಾಶ್ಮೀರಿ ಹಿಂದುಗಳಿಗಾಗಲೀ ನ್ಯಾಯ ದೊರೆಯಬೇಕಿತ್ತು, ತಾಯೀ. ಆಗೆಲ್ಲಾ ಈ suo moto ನಿನಗೆ ನೆನಪಾಗಲಿಲ್ಲವೇಕೆ?

ನಮ್ಮ MP, MLAಗಳಿಗೆ ಎಲ್ಲೆಡೆ VIP ಆದ್ಯತೆಯಿದೆ. ಅದು ನ್ಯಾಯದೇಗುಲದಲ್ಲಿಯೂ ದೊರೆಯಬೇಕು, ಅವರ ಮೇಲಿನ ಮೊಕದ್ದಮೆಗಳು ಸಹ ಆದ್ಯತೆ ಪಡೆಯಬೇಕು, ಎಂಬ ಸದುದ್ದೇಶದಿಂದ ಹೂಡಿದ ಮನವಿ ಮನ್ನಣೆ ಪಡೆದು ಆರು ವರ್ಷಗಳ ಹಿಂದೆ ನಿನ್ನ ನ್ಯಾಯಾದೇಶವೂ ಹೊರಟಿತು. ನಿಜ, ನಾವೆಲ್ಲಾ ಸಂಭ್ರಮಿಸಿದೆವು. ಒಂದು ವರ್ಷದಲ್ಲಿ ವಿಶೇಷ ನ್ಯಾಯಾಲಯಗಳೂ ಕಾರ್ಯಾರಂಭ ಮಾಡಿದವು. ಭ್ರಷ್ಟ, ಅನ್ಯಾಯಕೋರ MP, MLAಗಳಿಗೆ ಶಿಕ್ಷೆಯೂ ಆಯಿತು, ಅಂತಹ ಇನ್ನೂರು ಮಂದಿಗೆ ಸದಸ್ಯತ್ವವೂ ಹೋಯಿತು. ಇದು ನಮ್ಮ ನ್ಯಾಯವ್ಯವಸ್ಥೆಯ ಬಹು ದೊಡ್ಡ ಸಾಧನೆ, ತಾಯೀ. ಆದರೆ, ಖೂಳರು ರಂಗೋಲಿ ಕೆಳಗೆ ನುಸಿಯುತ್ತಾರೆ. ಅಂತಹವರಿಗೆ ಆರು ವರ್ಷಗಳ ಅವಧಿಯ ಮಿತಿಯ ಬದಲು ಜೀವಮಾನಕ್ಕೇ ಯಾವ ಚುನಾವಣೆಯಲ್ಲಿಯೂ ಸ್ಪರ್ಧಿಸದಂತೆ ಆದೇಶ, ಆಜ್ಞೆ ನೀಡು, ತಾಯಿ. ಉಳಿದ ಖೂಳರು ಹೀಗಾಗಿಯಾದರೂ ಎಚ್ಚರಿಕೆ ವಹಿಸಲಿ, ದುರ್ಬುದ್ಧಿ ಬಿಡಲಿ.

ಅಂದ ಹಾಗೆ, ಕೆಲವು ದುರುಳರು ಇಂತಹ ಶಿಕ್ಷೆಯ ಅನಂತರವೂ ತಮ್ಮ ತಮ್ಮ ರಾಜಕೀಯ ಪಕ್ಷಗಳ ಅಧ್ಯಕ್ಷ ಸ್ಥಾನದಲ್ಲಿ, ಪ್ರಮುಖ ಹುದ್ದೆಗಳಲ್ಲಿ ಮುಂದುವರಿದು ಅಭ್ಯರ್ಥಿಗಳಿಗೆ ಟಿಕೆಟ್ “ಮಾರುವ” – ಹಂಚುವ ದುರ್ವ್ಯಾಪಾರ ಮುಂದುವರಿಸಿದ್ದಾರೆ. ಬೇಡ ತಾಯಿ. ಶಿಕ್ಷಿತ ಖೂಳ ರಾಜಕಾರಣಿಗಳು, ಅವರವರ ಪಕ್ಷಗಳಲ್ಲಿಯೂ ಯಾವುದೇ ಪದಾಧಿಕಾರಿ ಆಗದಂತೆ ನಿಷೇಧಿಸುವ ಆಜ್ಞೆ ಹೊರಡಲಿ. ಈ ಸಂಬಂಧವಾಗಿ, ಯಾರಾದರೂ “petition” ಸಲ್ಲಿಸಿದರೆ, ಸೂಕ್ತ ಆದೇಶ ಹೊರಡಲಿ.

ಕೆಲವರು ಇದ್ದಷ್ಟೂ ದಿನ ನಮ್ಮ ದೇಶದ ಜನರನ್ನು ಜಾತಿಯ ಹೆಸರಿನಲ್ಲಿ, ಅವೈಜ್ಞಾನಿಕವಾದ ಆರ್ಯ-ದ್ರಾವಿಡ ಸಿದ್ಧಾಂತದ ಹೆಸರಿನಲ್ಲಿ ಒಡೆದರು, ಭೇದಭಾವ ತಂದಿಟ್ಟರು. ಇಂದಿಗೂ ಸತ್ಯದ ಬದಲು ಸುಳ್ಳೇ ಕೆಲವು ರಾಜ್ಯಗಳನ್ನು ಆಳುತ್ತಿದೆ. ಬೇಡ, ತಾಯಿ. ಈಗ ಆಗಿರುವ ಹಾನಿಯೇ ಸಾಕು. ಮತ್ತಷ್ಟು ವಿನಾಶ ವಿಧ್ವಂಸಗಳು ತಪ್ಪಲಿ. ಹಿಂಸೆಯನ್ನು ಪ್ರಚೋದಿಸುವ ಹೇಳಿಕೆಗಳು ಇನ್ನಾದರೂ ನಿಲ್ಲಲಿ. ನಗಬೇಡ, ತಾಯಿ. ಇಂತಹ ಸಂಗತಿಗಳಿಗೆ ನೀನು ನಕ್ಕರೆ ನಮಗೆಲ್ಲಾ ತುಂಬ ಸಂಕಟವಾಗುತ್ತದೆ. ಸಮಾಜದಲ್ಲಿ ದ್ವೇಷವನ್ನು ಉದ್ದೀಪಿಸುವ ಹೇಳಿಕೆಗಳು, ಭಾಷಣಗಳು ನಿಲ್ಲಲಿ. ಬೆಂಕಿ ಹಚ್ಚುವ ಭಾಷಣಗಳ ಬಗೆಗೆ ನಿನ್ನ ಉದಾರ ಸಹಮತ, ಪರೋಕ್ಷ ಸಂಮತಿ ಬೇಡ, ತಾಯಿ. ಅಂತಹ ಪ್ರಕರಣಗಳಲ್ಲಿಯೂ ಸ್ವಯಂಪ್ರೇರಣೆಯಿಂದ ಪ್ರಕರಣವನ್ನು ಕೈಗೆತ್ತಿಕೋ ತಾಯಿ, ನಿನಗೆ ಕೋಟಿಕೋಟಿ ಜನ ನಮಸ್ಕರಿಸುತ್ತೇವೆ.

ಅಷ್ಟೇ ಅಲ್ಲ, ಅಮ್ಮಾ. ತಾಯಿ ಸರಸ್ವತಿಯಂತೆ ಬರೀ ಜಾಗೃತಿ ಮೂಡಿಸಿದರೆ ಸಾಲದು. ದುರ್ಗಾಮಾತೆಯಂತೆ ದುಷ್ಟಶಿಕ್ಷಣಕ್ಕೆ, ಶಿಷ್ಟಪಾಲನೆಗೆ ನೀನು ಮುಂದಾಗಬೇಕು. ಸಾಮಾಜಿಕ ವ್ಯವಸ್ಥೆಯ ಪರಿಪಾಲನೆಯಲ್ಲಿ, ಕಾನೂನು ಪಾಲನೆಯಲ್ಲಿ ದಂಡನೆಯ ಆಯಾಮ ಬಹಳ ಮಹತ್ತ್ವದ್ದು ಎಂಬುದು ನಿನಗೆ ತಿಳಿಯದೇ, ತಾಯಿ. ಖೂಳರು ಬಗ್ಗುವುದೇ ಕಠಿಣ ಶಿಕ್ಷೆಯ ಎದುರು.

ಎರಡೂವರೆ ಸಾವಿರ ವರ್ಷಗಳ ಹಿಂದೆಯೇ, ಆಚಾರ್ಯ ಚಾಣಕ್ಯರು ತಮ್ಮ “ಅರ್ಥಶಾಸ್ತ್ರ” ಮಹತ್-ಕೃತಿಯಲ್ಲಿ ದಂಡನೆಯ ಬಗೆಗಿನ ಸೂತ್ರಗಳನ್ನು ಅದ್ಭುತವಾಗಿ ಕ್ರೋಡೀಕರಿಸಿದ್ದಾರೆ:

“ಅಮಿತ್ರೋ ದಂಡನೀತ್ಯಾಮಾಯತ್ತಃ”
ಶತ್ರುವು (ಇಲ್ಲಿ ಖೂಳನು ಎಂದು ಅರ್ಥೈಸಿಕೊಳ್ಳಬಹುದು) ದಂಡನೀತಿಗೆ (ಮಾತ್ರ) ಅಧೀನನಾಗಿರುವನು.

“ದಂಡನೀತಿಮಧಿತಿಷ್ಠನ್ ಪ್ರಜಾಸ್ಸಂರಕ್ಷತಿ”
ದಂಡನೀತಿಯನ್ನು ಆಧಾರವಾಗಿಟ್ಟುಕೊಂಡು ಪ್ರಜೆಗಳನ್ನು ಸಂರಕ್ಷಿಸಬೇಕು.

“ನ ದಂಡಾತ್ ಅಕಾರ್ಯಾಣಿ ಕುರ್ವಂತಿ”
ದಂಡಭಯದಿಂದ (ದುಷ್ಟ) ಜನರು ತಪ್ಪು ಕೆಲಸ ಮಾಡುವುದಿಲ್ಲ.

“ಏವಂ ಕಾರ್ಯಾಣಿ ಧರ್ಮಸ್ಥಾಃ ಕುರ್ಯುರಚ್ಛಲದರ್ಶಿನಃ
ಸಮಾಃ ಸರ್ವೇಷು ಭಾವೇಷು ವಿಶ್ವಾಸ್ಯಾಃ ಲೋಕಸಂಪ್ರಿಯಾಃ”
ಧರ್ಮಸ್ಥರು ಸ್ವಲ್ಪವೂ ಛಲಕ್ಕೆ ಬಲಿ ಬೀಳದೆ, ಎಲ್ಲ ವಿವಾದಗಳ ವಿಷಯದಲ್ಲಿಯೂ ಪಕ್ಷಪಾತರಹಿತರಾಗಿ, ಲೋಕಸಂಪ್ರಿಯರಾಗಿ ಪ್ರಜೆಗಳ ನಂಬಿಕೆಗೆ ಪಾತ್ರರಾಗಿ, ಅವರ ವಿವಾದಗಳನ್ನು ನಿರ್ಣಯಿಸಬೇಕು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ

ಅಮ್ಮ, ನಿನಗೆ ಇವೆಲ್ಲಾ ಗೊತ್ತೇ ಇದೆ. ಒಮ್ಮೆ ನಾನು ನೆನಪಿಸಿದೆ, ಅಷ್ಟೇ.

ಇದು ಸಂಕ್ರಮಣ ಕಾಲ. ಈಗ ನೀನು ದುಷ್ಟಶಿಕ್ಷಣಕ್ಕೆ ಸಂಕಲ್ಪ ಮಾಡದಿದ್ದರೆ, ಆಸುರೀ ಶಕ್ತಿಗಳು ವಿಜೃಂಭಿಸುತ್ತವೆ. ಅಮ್ಮಾ, ನಿನ್ನೆಲ್ಲಾ ಆಜ್ಞೆ ಆದೇಶಗಳು ಇನ್ನಾದರೂ ಸತ್ಯಸ್ಥಾಪನೆಯತ್ತ ದಾಪುಗಾಲಿಡಲಿ. ಈ ಕುರಿತಂತೆ, ಯಾರೇ “ಮನವಿ” ಮಾಡಿದರೂ ಸಹಾನುಭೂತಿಯಿಂದ ನೋಡು, ತಾಯಿ. ಕೆಲವು ಪ್ರಕರಣಗಳಲ್ಲಿ, (Suo Moto) ಸ್ವಯಂಪ್ರೇರಿತವಾಗಿಯೂ ಕೈಗೆತ್ತಿಕೊಂಡು ನ್ಯಾಯದಾನ ನೀಡು, ತಾಯಿ.

ಅಮ್ಮಾ, ಇಡೀ ದೇಶದ ನ್ಯಾಯಾಲಯಗಳಲ್ಲಿ ಐದು ಕೋಟಿ ಮೊಕದ್ದಮೆಗಳು ನಿನ್ನ ನ್ಯಾಯಾದೇಶಕ್ಕಾಗಿ ಕಾಯುತ್ತಿವೆ, ಮೊರೆಯಿಡುತ್ತಿವೆ. ನ್ಯಾಯತೀರ್ಮಾನ ತಡವಾದರೆ, ನ್ಯಾಯವೇ ಅಲಭ್ಯವಾದಂತೆ ಎಂಬುದು ನಿನಗೆ ತಿಳಿಯದೇ, ತಾಯಿ! ನಿನ್ನ ಒಳಗಣ್ಣು ತೆರೆಯಮ್ಮಾ. ಶೀಘ್ರ ವಿಲೇವಾರಿ ಆಗಲಿ, ನಾವೆಲ್ಲರೂ ನ್ಯಾಯದ ಬೆಳಕಿನಲ್ಲಿ ನಿಟ್ಟುಸಿರುಬಿಡುತ್ತೇವೆ. ಮೊಕದ್ದಮೆಗಳು ಮೂವತ್ತು, ನಲವತ್ತು ವರ್ಷಗಳು ನಡೆಯುತ್ತಾ, ಮುಂದೂಡಲ್ಪಡುತ್ತಾ ಹೋದರೆ, ನಾವು ನೆಮ್ಮದಿ ಕಾಣುವುದಾದರೂ ಹೇಗೆ? ತಡವಾದಷ್ಟೂ ದುಷ್ಟಶಕ್ತಿಗಳಿಗೇ ಲಾಭವಾಗುತ್ತದೆ, ಅಲ್ಲವೇ, ತಾಯಿ.

ಯಾರೇ ನ್ಯಾಯದಾನ ಮಾಡುವಾಗ, ಅವರ ಅಂಧಕಾರದ- ಅನೃತದ- ಅಜ್ಞಾನದ ಪೊರೆ ಕಳಚಿಹೋಗಲಿ, ಜಾಗೃತಿ ಮೂಡಲಿ, ಎಂದು ಆಶೀರ್ವದಿಸು, ತಾಯಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಅಂತಃಸ್ಫೋಟದ ಅಂಚಿನಲ್ಲಿ ಪಾಪಿಸ್ತಾನ

Exit mobile version