Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಸ್ವಾತಂತ್ರ್ಯ ದಿನ ಆಚರಿಸುವ ನೈತಿಕತೆ ಇವರಿಗಿದೆಯೇ?

red indians

ಈ ಅಂಕಣವನ್ನು ಇಲ್ಲಿ ಆಲಿಸಿ:

http://vistaranews.com/wp-content/uploads/2023/07/WhatsApp-Audio-2023-07-02-at-194.mp3

ಇಂದು ಜುಲೈ 4. ಅಮೆರಿಕನ್ನರು ತಮ್ಮ ಸ್ವಾತಂತ್ರ್ಯ ದಿನವನ್ನು (us independence day) ಆಚರಿಸುತ್ತಾರೆ, ಸಂಭ್ರಮಿಸುತ್ತಾರೆ. ಈ ಅಮೆರಿಕನ್ನರಲ್ಲಿ ಯೂರೋಪ್ ಮೂಲದ ಶ್ವೇತವರ್ಣೀಯ ಕ್ರೈಸ್ತರದ್ದೇ ಮೇಲುಗೈ. ಆಫ್ರಿಕಾ, ಆಸ್ಟ್ರೇಲಿಯಾ, ಭಾರತ, ಉತ್ತರ ಮತ್ತು ದಕ್ಷಿಣ ಅಮೆರಿಕಾ ಖಂಡಗಳ ನೂರಾರು ದೇಶಗಳನ್ನು ವಸಾಹತುಗಳನ್ನಾಗಿ ಮಾಡಿಕೊಂಡು, ಬರ್ಬರವಾಗಿ ನರಹತ್ಯಾಕಾಂಡಗಳನ್ನು ನಡೆಸಿ, ಇನ್ನಿಲ್ಲದಂತೆ ಶೋಷಿಸಿ ರೋಗರುಜಿನಗಳನ್ನು ಹರಡಿ, ಅಲ್ಲಿನ ಎಲ್ಲ ಸಂಸ್ಕೃತಿ – ನಾಗರಿಕತೆಗಳನ್ನು ನಾಶಮಾಡಿದ ಐರೋಪ್ಯರ ಸಂತತಿಯೇ ಇವರು. ಅನೇಕ ದೇಶಗಳ ಸ್ವಾತಂತ್ರ್ಯ-ಹರಣ ಮಾಡಿ (ಪರೋಕ್ಷವಾಗಿ ಇಂದಿಗೂ ಅಂತಹುದೇ ಹೀನಚಾಳಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ) ಇವರಿಗೆ ಇಂತಹುದೊಂದು ಸ್ವಾತಂತ್ರ್ಯ ದಿನಾಚರಣೆಯನ್ನು ಮಾಡುವ ನೈತಿಕತೆ ಇದೆಯೇ? ಎಂಬ ಪ್ರಶ್ನೆ ಮೂಡುತ್ತದೆ ಮತ್ತು ಕಳೆದ ಐದು ಶತಮಾನಗಳ ನಿಜ-ಇತಿಹಾಸದ ಅಧ್ಯಯನ ಮಾಡಿದಾಗ ತುಂಬ ವಿಷಾದಭಾವ ಮೂಡುತ್ತದೆ.

ಡೇವಿಡ್ ಇ.ಸ್ಟಾನಾರ್ಡನೆಂಬ ಲೇಖಕನು ʼಅಮೆರಿಕನ್ ಹೋಲೋಕಾಸ್ಟ್ʼ (ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, 1992ರಲ್ಲಿ ಪ್ರಕಟಣೆ) ಎಂಬ ಗ್ರಂಥದಲ್ಲಿ ಈ ಐರೋಪ್ಯ ಶ್ವೇತವರ್ಣೀಯರ ನರಹತ್ಯಾಕಾಂಡಗಳ ವಿವರಗಳ ದಾಖಲೆಗಳನ್ನು ನೀಡಿದ್ದಾನೆ. ಭಾರತದಂತಹ ದೇಶಗಳನ್ನು ಲೂಟಿ ಮಾಡಿದ, ಹಾಳು ಮಾಡಿದ ಯೂರೋಪಿಯನ್ ದಾಳಿಕೋರರ ಈ ಎಲ್ಲ ಬೀಭತ್ಸ ವಿವರಗಳನ್ನು ನಾವು ತಿಳಿದುಕೊಳ್ಳಬೇಕು. ಬರೀ ಅಸತ್ಯ, ಅನೃತಗಳೇ ಐತಿಹಾಸಿಕ ಪಠ್ಯಗಳಾಗಿ ನಮ್ಮನ್ನು ಈವರೆಗೆ ಪ್ರಭಾವಿಸಿವೆ. ಇನ್ನಾದರೂ, ಸತ್ಯದ ಪ್ರಮುಖ ಸಾಕ್ಷ್ಯಾಧಾರಗಳು ಓದುಗರಿಗೆ ದೊರೆಯಬೇಕೆಂಬ ಅಪೇಕ್ಷೆಯಿಂದ ಇದನ್ನೆಲ್ಲ ಉಲ್ಲೇಖಿಸಬೇಕಾಗಿ ಬಂದಿತು.

ನ್ಯೂಯಾರ್ಕಿನ ʼದ ಹೆರಿಟೇಜ್ ಪ್ರೆಸ್ʼ ಸಂಸ್ಥೆಯು 1963ರಲ್ಲಿ, ಕೊಲಂಬಸ್‌ನು ತನ್ನ ಮೊದಲ ಸಮುದ್ರಸಾಹಸದ ಬಗೆಗೆ ತನ್ನ “ಕಿಂಗ್”ಗಳಿಗೆ (1493ರಲ್ಲಿ) ಬರೆದ ಪತ್ರವನ್ನು ಉಳಿದ ದಾಖಲೆಗಳೊಂದಿಗೆ ಪ್ರಕಟಿಸಿದೆ: “ಜುವಾನಾ ಮತ್ತು ಇತರ ಎಲ್ಲ ದ್ವೀಪಗಳು ತುಂಬ ಸಮೃದ್ಧವಾಗಿದ್ದವು. ಎತ್ತರವಾದ ಮರಗಳು, ಬೆಟ್ಟಗುಡ್ಡಗಳು, ತುಂಬ ವೈವಿಧ್ಯದ ಹಣ್ಣುಗಳು, ಹೂವುಗಳು, ಇತ್ಯಾದಿ ನೋಡಿದೆ. ನವೆಂಬರ್ 1492ರಲ್ಲಿ ನಾನು ಅಲ್ಲಿಗೆ ಭೇಟಿ ನೀಡಿದಾಗ ಸಾವಿರಾರು ಬಗೆಯ ಪಕ್ಷಿಗಳ ಕಲರವ ಕೇಳಿದೆ. ತುಂಬಿ ಹರಿಯುವ ನದಿಗಳ ದಡದಲ್ಲಿ ಚಿನ್ನ ನೋಡಿದೆ. ಅನೇಕ ಬಗೆಯ ಜಾನುವಾರುಗಳು, ಜನ, ಪಟ್ಟಣಗಳು, ಹಳ್ಳಿಗಳು. ಅಲ್ಲಿನ ಬಂದರುಗಳು ಹೇಗಿದ್ದವು ಎಂದು ವರ್ಣಿಸಿದರೆ, ನೋಡದೆಯೇ ನೀವು ನಂಬಲಾರಿರಿ. ಇಲ್ಲಿನ (ಮೂಲನಿವಾಸಿಗಳು) ಜನರು ನಗ್ನರಾಗಿದ್ದರು. ಕೆಲವರು ಹೆಂಗಸರು ಮಾತ್ರ, ತಮ್ಮ ಗುಪ್ತಾಂಗವನ್ನು ಎಲೆಗಳಿಂದ ಮುಚ್ಚಿಕೊಂಡಿದ್ದರು. ಎಲ್ಲರೂ ದೃಢಕಾಯರಾಗಿದ್ದರು, ಸುಂದರವಾಗಿದ್ದರು. ಆದರೆ ಅವರಲ್ಲಿ ಯಾರಿಗೂ ಆಯುಧಗಳ, ಶಸ್ತ್ರಾಸ್ತ್ರಗಳ, ಉಕ್ಕಿನ ಪರಿಚಯವೇ ಇರಲಿಲ್ಲ. ಅವರ ಬಳಿಯಿದ್ದುದನ್ನು ನಾವು ಯಾರು ಏನು ಕೇಳಿದರೂ ಕೊಟ್ಟುಬಿಡುತ್ತಿದ್ದರು. ಅವರಿಗೆ ಇಲ್ಲ ಎಂದು ಹೇಳಿಯೇ ಗೊತ್ತಿಲ್ಲ. ಬದಲಿಗೆ ಅವರೇ ಕರೆದು ಕರೆದು ತಮ್ಮ ಬಳಿ ಇರುವುದನ್ನು ಹಂಚುವಂತಹವರು. ಪ್ರೀತಿಪೂರ್ವಕವಾದ ನಡವಳಿಕೆಯ ಈ ಜನರಲ್ಲಿ ಸಂತೃಪ್ತಿಯ ಭಾವ ಸೂಸುತ್ತಿತ್ತು” (ಪುಟ 142- 183).

ಕೊಲಂಬಸ್‌ನ ಈ ದೀರ್ಘ ಪತ್ರವು – ವರದಿಯು ಮುದ್ರಿತವಾಯಿತು, ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿತು, ಮುದ್ರಿಸಲ್ಪಟ್ಟಿತು. ತೀರತೀರ ಕೆಟ್ಟ ಸ್ಥಿತಿಯಲ್ಲಿದ್ದ ಯೂರೋಪಿಯನ್ನರಿಗೆ ಮೇಲಿನ ಈ ದ್ವೀಪಗಳು ಸ್ವರ್ಗದಂತೆ ಕಂಡವು. ಮುಂದೆ ಆದ ದಾಳಿಗಳಿಗೆ, ಲೂಟಿಗಳಿಗೆ ಇತಿಮಿತಿಯಿಲ್ಲ. ಸ್ಪಾನಿಶ್ ಸೈನಿಕರು ಕ್ರೂರವಾದ ಬೇಟೆ ನಾಯಿಗಳನ್ನೂ ಸಾಕಿದ್ದರು (ಈ ಎಲ್ಲ ಯೂರೋಪಿಯನ್ ಕಡಲ್ಗಳ್ಳರು-ಲೂಟಿಕೋರರು ಸಮೃದ್ಧವಾದ ಭಾರತವನ್ನು ಗುರಿಮಾಡಿಕೊಂಡು ಹೊರಟಿದ್ದುದರಿಂದ ಕ್ಯೂಬಾ, ಜಮೈಕಾ ಮುಂತಾದ ಅನೇಕ ದ್ವೀಪಗಳಲ್ಲಿನ ಮೂಲನಿವಾಸಿಗಳನ್ನು ಇಂಡಿಯನ್ನರೆಂದೇ ಕರೆದಿದ್ದಾರೆ. ಇಂದಿಗೂ ಬಹುತೇಕ ಗ್ರಂಥಗಳಲ್ಲಿ, ದಾಖಲೆಗಳಲ್ಲಿ ಹಾಗೆಯೇ ಕರೆಯಲಾಗುತ್ತಿದೆ. ಗೊಂದಲ ತಪ್ಪಿಸಲು, ನಾನಿಲ್ಲಿ ಇಂಡಿಯನ್ ಪದದ ಬದಲು ಮೂಲನಿವಾಸಿಗಳು ಎಂದೇ ಸಂಬೋಧಿಸಿದ್ದೇನೆ). ಬೇಟೆನಾಯಿಗಳನ್ನು ಛೂ ಬಿಟ್ಟು ಈ ಸೈನಿಕರು ಆ ಮೂಲನಿವಾಸಿಗಳಿಂದ ಆಹಾರವನ್ನು, ಹೆಂಗಸರನ್ನು ಕಿತ್ತುಕೊಂಡರು. ಆ ಮೂಲನಿವಾಸಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡರು. ಕೇಳಿದುದೆಲ್ಲಾ ಈ ಸೈನಿಕರಿಗೆ ಸಿಕ್ಕಿತು. ಕೊಲಂಬಸ್‌ನ ಸೈನಿಕರು ಕೊಂದುಹಾಕಿದ ಮೂಲನಿವಾಸಿಗಳಿಗೆ ಲೆಕ್ಕವೇ ಇಲ್ಲ. ಅವರಿಗೆ ಕೊಲ್ಲುವುದೇ ಒಂದು ಆಟವಾಗಿತ್ತು. ಪಶುಪಕ್ಷಿ ಪ್ರಾಣಿಗಳನ್ನೂ ಹೀಗೆಯೇ ಕೊಂದುಕೊಂದುಹಾಕಿದರು.

ಈ ಕ್ರಿಸ್ಟೋಫರ್ ಕೊಲಂಬಸ್‌ನ ಮಗ ಫರ್ನಾಂಡೊ, ತುಂಬ ಹರ್ಷೋಲ್ಲಾಸದಿಂದ, “ನಮ್ಮ ಸೈನಿಕರು ಏನು ಸಿಕ್ಕಿದರೂ ಲೂಟಿ ಮಾಡಿದರು, ನಾಶಮಾಡಿದರು…. ಕದಿಯುವುದು, ಕೊಲ್ಲುವುದು, ಹಿಂಸೆ-ಅತ್ಯಾಚಾರ ಮಾಡಿ ಸಂಭೋಗಿಸುವುದು, ಹಿಂಸಿಸುವುದು, ಚಿನ್ನ ಸಂಗ್ರಹಿಸಿರುವ ತಾಣಗಳಿಗಾಗಿ ಚಿತ್ರಹಿಂಸೆ ಮಾಡಿ ಹುಡುಕುವುದು…. ಇದನ್ನೇ ಮುಂದುವರಿಸಿದರು” ಎಂದು ಸ್ವತಃ ದಾಖಲಿಸಿದ್ದಾನೆ.

1918ರಲ್ಲಿ ಯೂರೋಪಿನಿಂದ ಹಬ್ಬಿದ ಫ್ಲೂ (ಸಾಂಕ್ರಾಮಿಕ) ಒಂದು ರೋಗದಿಂದಲೇ, ವಿಶ್ವದಾದ್ಯಂತ ಎರಡು ಕೋಟಿಗಿಂತಲೂ ಹೆಚ್ಚು ಜನರು ಸತ್ತುಹೋದರೆಂದು ದಾಖಲೆಗಳು ಹೇಳುತ್ತವೆ. ಈ ಪ್ಲೇಗ್, ಸಿಡುಬು, ಫ್ಲೂನಂತಹ ಭಯಾನಕ ರೋಗಗಳ ಪರಿಚಯವೇ ಇಲ್ಲದ ಆ ದ್ವೀಪಗಳ ಮೂಲನಿವಾಸಿಗಳು 15-16-17ನೆಯ ಶತಮಾನಗಳಲ್ಲಿ, ತುಂಬ ದೊಡ್ಡ ಸಂಖ್ಯೆಯಲ್ಲಿ ಸಾಯಲು ಈ ರೋಗಗಳೇ ಕಾರಣವೆಂದು ಸ್ಪೇನ್ ದೇಶದ ವೈದ್ಯಕೀಯ ಶಾಸ್ತ್ರದ ಇತಿಹಾಸಕಾರ ಡಾ|| ಫ್ರಾನ್ಸಿಸ್ಕೋ ಗರ‍್ರಾ ಅಭಿಪ್ರಾಯಪಡುತ್ತಾರೆ. ಸರಿಯಾದ ಆಯುಧಗಳ ಪರಿಚಯವಿಲ್ಲದ, ರೋಗಗಳೇ ಗೊತ್ತಿರದ ಮುಗ್ಧರಾದ ಆ ಮೂಲನಿವಾಸಿಗಳು, ಈ ಸ್ಪಾನಿಶ್ ಸೈನಿಕರನ್ನು ಎದುರಿಸಲಾಗಲೇ ಇಲ್ಲ. ಕೊಲ್ಲಲ್ಪಟ್ಟವರು ಲಕ್ಷ ಲಕ್ಷ ಜನ. ಭಯಾನಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸತ್ತವರು ಇನ್ನೆಷ್ಟೋ ಜನ.

1492ರಲ್ಲಿ ಕೊಲಂಬಸ್‌ನು ಹಿಸ್ಪಾನಿಯೋಲ ದ್ವೀಪಕ್ಕೆ ಕಾಲಿಡುವಾಗ ಅಲ್ಲಿದ್ದ ಮೂಲನಿವಾಸಿಗಳ ಸಂಖ್ಯೆ ಸುಮಾರು ಎಂಬತ್ತು ಲಕ್ಷ. 1496ರ ಹೊತ್ತಿಗೆ ಅರ್ಧಕ್ಕರ್ಧ ಜನರು ಸತ್ತು ಹೋಗಿದ್ದರು. ಹತ್ಯಾಕಾಂಡದ ಜೊತೆಗೆ, ಈ ಕಡಲ್ಗಳ್ಳರು– ಆಕ್ರಮಣಕಾರಿಗಳು ತಮ್ಮೊಂದಿಗೆ ತಂದಿದ್ದ ಭಯಾನಕ ಅಂಟುಜಾಡ್ಯಗಳಿಂದ ಸತ್ತವರಿಗೂ ಲೆಕ್ಕವೇ ಇಲ್ಲ. ಅಂತಹ ರೋಗಗಳನ್ನೇ ಕೇಳಿರದ ರೋಗ-ಪ್ರತಿರೋಧ ಶಕ್ತಿಯೂ ಇಲ್ಲದಿದ್ದ, ಆ ಮೂಲನಿವಾಸಿಗಳು ತದನಂತರವೂ ತುಂಬತುಂಬ ದಾರುಣವಾದ ನೋವು ಅನುಭವಿಸಿದರು, ಸಾಮೂಹಿಕವಾಗಿಯೇ ಸತ್ತುಹೋದರು.

ಸಾವಿರಾರು ವರ್ಷಗಳಿಂದ ಸಮೃದ್ಧವಾಗಿದ್ದ, ಫಲಭರಿತವಾಗಿದ್ದ, ನೆಮ್ಮದಿಯಿಂದಿದ್ದ ಈ ದ್ವೀಪಗಳ ಅನೇಕ ಮೂಲನಿವಾಸಿಗಳು ಲಕ್ಷಲಕ್ಷ ಸಂಖ್ಯೆಯಲ್ಲಿದ್ದವರು ಕೆಲವೇ ವರ್ಷಗಳಲ್ಲಿ ದಾರುಣವಾದ ಹಿಂಸೆಗೆ ಒಳಗಾದರು, ಸತ್ತುಹೋದರು, ನಾಮಾವಶೇಷವಾಗಿಬಿಟ್ಟರು. 1508ರ ಹೊತ್ತಿಗೆ ಒಟ್ಟು ಪ್ರಜಾಸಂಖ್ಯೆಯು ಒಂದು ಲಕ್ಷಕ್ಕಿಂತ ಕೆಳಗಿಳಿಯಿತು. 1518ರ ಹೊತ್ತಿಗೆ, ಇಪ್ಪತ್ತು ಸಾವಿರಕ್ಕೂ ಕಡಿಮೆಯಾಗಿಹೋಯಿತು. ಸಂಶೋಧಕರು, ವಿದ್ವಾಂಸರು ದಾಖಲಿಸಿರುವಂತೆ, 1535ರ ಕಾಲಕ್ಕೆ ಎಲ್ಲ ಎಲ್ಲ ಮೂಲನಿವಾಸಿಗಳೂ ನಿರ್ಮೂಲವಾಗಿಹೋದರು (ಕುಕ್ ಮತ್ತು ಬೋರಾ ಅವರ “ಅಬಾರಿಜಿನಲ್ ಪಾಪ್ಯುಲೇಶನ್ ಆಫ್ ಹಿಸ್ಪಾನಿಯೋಲಾ”, ಪುಟ 401).

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಅತ್ಯಪರೂಪದ ರಾಜಕಾರಣಿ ಹಮೀದ್ ದಲವಾಯಿ

ಜಗತ್ತಿನ ಎಷ್ಟೋ ಆದಿವಾಸಿಗಳಲ್ಲಿ, ಮೂಲನಿವಾಸಿಗಳಲ್ಲಿ ಪ್ರಕೃತಿ ಆರಾಧನೆಯ ಅನೇಕ ಪದ್ಧತಿಗಳಿವೆ. ವಿಶಿಷ್ಟವಾದ ಸೂರ್ಯಾರಾಧನೆಯೂ ಇದೆ. ಕೆಲವರಲ್ಲಿ ಬೆತ್ತಲೆ ನೃತ್ಯದಂತಹ ಆಚರಣೆಗಳೂ ಇವೆ. ಇಂದಿಗೂ ಕೆನಡಾದಲ್ಲಿ, ಅಮೆರಿಕಾ ಮತ್ತಿತರ ಕೆಲವು ದೇಶಗಳಲ್ಲಿ ಮೂಲನಿವಾಸಿಗಳ ಪೂಜೆ, ನೃತ್ಯ, ಉತ್ಸವಗಳಿಗೆ ಈ ಶ್ವೇತವರ್ಣೀಯ ಧೂರ್ತ ಅತಿಕ್ರಮಣಕಾರರು ಅನುಮತಿ ನೀಡಿಲ್ಲ, ಸ್ವಾತಂತ್ರ್ಯ' ನೀಡಿಲ್ಲ. ಅವರ ದೇಶಗಳಿಗೇ ಹೋಗಿ, ನುಗ್ಗಿ ಆಕ್ರಮಿಸಿಕೊಂಡು ಅವರಲ್ಲಿ ಅಳಿದುಳಿದ ಕೆಲವರಿಗೆ ನಗ್ನನೃತ್ಯ-ನರಬಲಿಗಳ ಹೆಸರಿನಲ್ಲಿ ಇವರುಸ್ವಾತಂತ್ರ್ಯ’ ನೀಡಿಲ್ಲ, ಎಂಬುದು ಎಷ್ಟು ಹಾಸ್ಯಾಸ್ಪದ ನೋಡಿ. ಸಮುದ್ರತೀರಗಳಲ್ಲಿ ಬೆತ್ತಲೆ ಮಲಗುವ, ಜನಭರಿತ ಪ್ರದೇಶಗಳಲ್ಲಿ ಬೆತ್ತಲೆ ಓಡಿ ಪ್ರಚಾರ ಪಡೆಯುವ ಈ ಯೂರೋಪಿಯನ್ ಮೂಲದ ಶ್ವೇತವರ್ಣೀಯರಿಗೆ, ಮೂಲನಿವಾಸಿಗಳನ್ನು ಎಳ್ಳಷ್ಟಾದರೂ ಆಕ್ಷೇಪಿಸುವ ಯೋಗ್ಯತೆಯಿದೆಯೇ?

ಅನೇಕ ದಶಕಗಳಿಂದ ಚಲನಚಿತ್ರಗಳಲ್ಲಿ, ಕಾರ್ಟೂನುಗಳಲ್ಲಿ ಕಾಡುಮನುಷ್ಯರೆಂದರೆ, ಮೂಲನಿವಾಸಿಗಳೆಂದರೆ ಅವರು ಅಪರಿಚಿತನೊಬ್ಬನನ್ನು-ಆಗಂತುಕನೊಬ್ಬನನ್ನು ಹಿಡಿದು ಬೇಯಿಸಿ ತಿನ್ನುವ ನರಭಕ್ಷಕರೆಂದು ಅಭಿಪ್ರಾಯ ಮೂಡುವಂತೆ ಚಿತ್ರಿಸಲಾಗಿದೆ. ಕೆಲವೆಡೆ ನರಭಕ್ಷಣೆಯಿದ್ದಿರಬಹುದು, ಆದರೆ ಎಲ್ಲ ಮೂಲನಿವಾಸಿಗಳ ಮೇಲೆ – ಎಲ್ಲ ಆದಿವಾಸಿಗಳ ಮೇಲೆ ಹಾಗೆ ಆಪಾದಿಸುವುದು, ವ್ಯಂಗ್ಯಚಿತ್ರ ಬರೆಯುವುದು, ದುರಭಿಪ್ರಾಯ ಮೂಡಿಸುವುದು ದುಷ್ಟತನವಾಗುತ್ತದೆ. ಸಾವಿರಗಳಲ್ಲಿ, ಲಕ್ಷಗಳಲ್ಲಿ ಅಲ್ಲ, ಕೋಟಿಕೋಟಿ ಸಂಖ್ಯೆಯಲ್ಲಿ ನರಹತ್ಯೆ ಮಾಡಿದ, ಜನಾಂಗಹತ್ಯೆ ಮಾಡಿದ ಈ ಶ್ವೇತವರ್ಣೀಯರಿಗೆ ಬೇರೆಯವರನ್ನು ಆಕ್ಷೇಪಿಸುವ ನೈತಿಕತೆಯಿದೆಯೇ? ಇದೇ ರೀತಿಯಲ್ಲಿ ಮರಣ-ಮೃದಂಗ ಬಾರಿಸಿ, ಕೋಟಿಕೋಟಿ ಪರಮತೀಯರನ್ನು ಕೊಂದುಹಾಕಿದ, ಇಂದಿಗೂ ಕೊಂದುಹಾಕುತ್ತಿರುವ ತೈಮೂರ್, ತುಘಲಕ್, ಖಿಲ್ಜಿ, ಔರಂಗಜೇಬನ ಸಂತತಿಯವರಿಗೆ ಬೇರೆಯವರ ಮೇಲೆ ಬೆರಳು ತೋರಿಸುವ ಕನಿಷ್ಠ ನೈತಿಕತೆಯಾದರೂ ಇದೆಯೇ?

ಅಮೆರಿಕೆಗೆ ವಲಸೆ (ಇಂಗ್ಲಿಷಿನಲ್ಲಿ ಇಮ್ಮಿಗ್ರೇಷನ್ ಎನ್ನುತ್ತಾರೆ) ಹೋಗಲು, ಅಲ್ಲಿನ ಪೌರತ್ವ ಪಡೆಯಲು ತುಂಬ ಜನರಿಗೆ ಆಸೆ. 2013ರಲ್ಲಿ ಹೀಗೆ ಅಮೆರಿಕೆಗೆ ಬರುವ ವಿದೇಶೀಯರ ಮೇಲೆ, ಅಲ್ಲಿನ ಸರ್ಕಾರವು ನಿರ್ಬಂಧಗಳನ್ನು ವಿಧಿಸಿತು, ಅಧಿಕಗೊಳಿಸಿತು. ತುಂಬ ಅರ್ಥಪೂರ್ಣವಾದ ಅಣಕುಚಿತ್ರವೊಂದನ್ನು ಅಂತರಜಾಲದಲ್ಲಿ ಯಾರೋ ತೇಲಿಬಿಟ್ಟಿದ್ದರು. ಇಂಡಿಯನ್ ಅಥವಾ ರೆಡ್ ಇಂಡಿಯನ್ ಎಂದು ಸಾಮಾನ್ಯವಾಗಿ ಇಂಗ್ಲಿಷಿನಲ್ಲಿ ಸಂಬೋಧಿಸುವ ಓರ್ವ ಮೂಲನಿವಾಸಿಯು “So, you are against Immigration? Splendid! When do you leave?” ಎಂದು ಹೇಳುತ್ತಿರುವ ಒಕ್ಕಣೆಯ ಚಿತ್ರವಿದು. ಈ ಲೇಖನದೊಂದಿಗೆ ನಾನೂ ಆ ಚಿತ್ರವನ್ನೂ ನೀಡಿದ್ದೇನೆ. ವಿದೇಶೀಯರ ವಲಸೆಯನ್ನು ಪ್ರತಿಬಂಧಿಸುವ ಈ ಶ್ವೇತವರ್ಣೀಯ ದುರಹಂಕಾರಿ ಆಡಳಿತವರ್ಗಕ್ಕೆ ಹಾಗೆ ಹೇಳುವ ನೈತಿಕತೆಯು ಸ್ವಲ್ಪವಾದರೂ ಇದೆಯೇ, ಎಂದು ಪ್ರಶ್ನಿಸುವ ವಿಶಿಷ್ಟ ಅಣಕುಚಿತ್ರವಿದು.

ನಿಜವಾಗಿ ಈ ಯೂರೋಪಿಯನ್ ಶ್ವೇತವರ್ಣೀಯರೇ ಅಲ್ಲಿ ಅಕ್ರಮ ವಲಸೆಗಾರರಲ್ಲವೇ?

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಪ್ರಾಚೀನ ಭಾರತದ ವಿಶಿಷ್ಟ ಸಾಂಸ್ಕೃತಿಕ ಲೋಕ 

Exit mobile version